ಅಂತಿಮ ಆಯ್ಕೆ.
ಇತ್ತೀಚೆಗೆ ಕೆಲವು ಶಾಲೆಗಳ ಶಿಕ್ಷಕರನ್ನು ಹಾಗು ಕೆಲವು ಪೋಷಕರನ್ನು ಮಾತನಾಡಿಸಿದ್ದೆ. ಆ ಸಂದರ್ಭದಲ್ಲಿ ಶಿಕ್ಷಕರು ಹೇಳಿದ್ದು ‘ಕಳೆದ ಆರೇಳು ವರ್ಷಗಳಿಂದ ನಾನು ಈ ವಿದ್ಯಾರ್ಥಿಗೆ ಕಲಿಸುತ್ತಾ ಬಂದಿದ್ದೇನೆ. ಆದರೆ ಅವನಿಗೆ/ಅವಳಿಗೆ ಕನ್ನಡ ಅಕ್ಷರವೇ ಬರುತ್ತಿಲ್ಲ. ಸ್ವಲ್ಪ ಗದರಿಸಿದರೆ ಮರುದಿನ ಶಾಲೆಗೇ ಬರುವುದಿಲ್ಲ, ಒಂದು ಪಟ್ಟಂತೂ ಕೊಟ್ಟರೆ ಕತೆಯೇ ಮುಗಿಯಿತು, ಮನೆಯವರಿಗೆ ಒಂದು ಚೂರು ಆಸಕ್ತಿ ಇಲ್ಲ. ಏನು ಮಾಡಬೇಕೆಂದೇ ಗೊತ್ತಾಗುತ್ತಿಲ್ಲ್ಲ’. ಅದೇ ಮಕ್ಕಳ ಪೋಷಕರಲ್ಲಿ ಮಾತನಾಡಿದಾಗ ‘ಏಳನೇ ಕ್ಲಾಸಿನಲ್ಲಿ ಇದ್ದಾನೆ/ಳೆ, ಅ,ಆ,ಇ,ಈ ಬರೆಯುದಕ್ಕೂ ಸರಿಯಾಗಿ ಕಲಿಸಿ ಕೊಡಲಿಲ್ಲ. ಮತ್ಯಾಕೆ ಮುಂದಕ್ಕೆ ಕಳುಹಿಸಬೇಕು? ಹಾಗಾಗಿ ಶಾಲೆ ಬಿಡಿಸಿ ಕೆಲಸಕ್ಕೆ ಕಳುಹಿಸುವುದು ಒಳ್ಳೆಯದು ಅಂತ ಕಾಣುತ್ತದೆ’.ಎಂದು ಹೇಳುತ್ತಾರೆ. ಈ ರೀತಿಯ ಪರಸ್ಪರ ದೋಷಾರೋಪಗಳಿಗೇನೂ ಕೊರತೆ ಇಲ್ಲ. ಆದರೆ ಶಿಕ್ಷಣ ಮೂಲಭೂತ ಹಕ್ಕಾದ ನಂತರವಂತೂ ಶಿಕ್ಷಕ ಮತ್ತು ಪೋಷಕ ಇಬ್ಬರು ತಮ್ಮ ತಮ್ಮ ಮಾತುಗಳಿಗೆ ಉತ್ತರ ಕಂಡುಹಿಡಿಯಲೇ ಬೇಕಾದ ಅನಿವಾರ್ಯವೊಂದು ನಿರ್ಮಾಣವಾಗಿದೆ. ಆರ್.ಟಿ.ಇ ಸೂಚಿಸುವ ಎರಡು ಪ್ರಧಾನ ಅಂಶಗಳೆಂದರೆ, ಕಡ್ಡಾಯ ದಾಖಲಾತಿ, ಆ ದಾಖಲಾತಿಯಷ್ಟೇ ಕಡ್ಡಾಯ ಹಾಜರಾತಿ. ಆ ಹಾಜರಾದ ಮಗುವಿನ ಗುಣಾತ್ಮಕ ಕಲಿಕೆ. ಮಗುವಿನಲ್ಲಿ ಈ ಪ್ರಕ್ರಿಯೆ ನಡೆಯಲು ಪೋಷಕ ಮತ್ತು ಶಿಕ್ಷಕನ ಉಪಸ್ಥಿತಿ ಅನಿವಾರ್ಯ.
ಸಧ್ಯ ಐದನೇ ತರಗತಿಗಿಂತ ಮೇಲ್ಪಟ್ಟು ಈ ರೀತಿಯ ಮಕ್ಕಳಿದ್ದರೆ ಏನು ಮಾಡುವುದು? ಇಲ್ಲಿ ಶಿಕ್ಷಕ ಹೇಳುವ ಮಾತೂ ಸತ್ಯ ಹಾಗೇ ಪೋಷಕ ಹೇಳುವ ಮಾತೂ ಸರಿ ಎಂದೆಣಿಸಿ ಬಿಡುತ್ತದೆ. ಹಾಗೆಂದು ಇಬ್ಬರೂ ತಪ್ಪಿಸಿಕೊಳ್ಳುವಂತಿಲ್ಲ. ಏನಾದರೊಂದು ಪರಿಹಾರ ಕಂಡುಕೊಂಡು ಆ ಮಗುವನ್ನು ಶಾಲೆಯಲ್ಲಿ ಉಳಿಸಿಕೊಳ್ಳಬೇಕು ಹಾಗೇ ಅವನಿಗೆ/ಳಿಗೆ ಒಂದಷ್ಟು ಅಕ್ಷರ ಜ್ಞಾನ ಮತ್ತು ಗಣಿತ ಪರಿಚಯಿಸಲೇಬೇಕು. ಇಂತಹ ಪರಿಹಾರ ಹುಡುಕಿಕೊಳ್ಳುವಲ್ಲಿ ಶಿಕ್ಷಕರಿಗೂ ಹೆಚ್ಚಿನ ಅವಕಾಶವಿದೆ. ಇದುವರೆಗಿನ ಮಗುವಿನ ಸ್ಥಿತಿಯನ್ನು ಬಿಟ್ಟು ಮುಂದೇನು ಮಾಡಬಹುದು ಎಂದು ಕಂಡುಕೊಳ್ಳುವುದೇ ಅಂತಿಮ ಆಯ್ಕೆ.
ನಮ್ಮಲ್ಲಿ ಬಹುತೇಕ ಶಿಕ್ಷಕ/ಕಿಯರಿಗೆ ಪಾಠ ಮುಗಿಸುವುದೇ ಪ್ರಧಾನ ಗುರಿ. ಮುಗಿಸಿದ ಪಾಠದ ಪರಿಣಾಮ ಇಂಥವರಿಗೆ ಬೇಡ. ಪಾಠ ಮುಗಿಯಬೇಕು,ಎಲ್ಲರಿಗೂ ಒಂದೇ ರೀತಿಯ ಒಂದಷ್ಟು ಪ್ರಶ್ನೆ ಕೊಟ್ಟು ಉತ್ತರ ಬರೆಯಿಸಿ ಬಿಡಬೇಕು. ಬರೆದರೆ ತಾನು ಮಾಡಿದ ಪಾಠ ಪರಿಣಾಮ ಬೀರಿದೆ, ಬರೆಯದಿದ್ದರೆ ಮಗು ಮತ್ತು ಪೋಷಕರ ನಿರಾಸಕ್ತಿಯೇ ಕಾರಣವಾಗಿದೆ ಎಂದು ತೀರ್ಮಾನಿಸುವುದು ಸಾಮಾನ್ಯವಾಗಿದೆ. ಈ ರೀತಿ ಯೋಚಿಸುವ ಬದಲು ತರಗತಿ ಕೋಣೆಯಲ್ಲಿ ಬೋಧನಾ ವಿಧಾನದಲ್ಲಿ ಕೆಲವೊಂದು ಬದಲಾವಣೆ ತರಲು ಸಾಧ್ಯವೇ? ಅಂದರೆ, ಒಂದು ತರಗತಿಯಲ್ಲಿ ಒಂದು ಅವಧಿಯ ಸಾಮೂಹಿಕ ಬೋಧನಾ ಕ್ರಮವನ್ನು ಮೊದಲು ನಿಲ್ಲಿಸದರೆ ಹೇಗೆ? ಅದರ ಬದಲಿಗೆ ಒಂದು ತರಗತಿಯಲ್ಲಿ ಇಪ್ಪತ್ತು ವಿದ್ಯಾರ್ಥಿಗಳಿದ್ದರೆ ಇಪ್ಪತ್ತು ರೀತಿಯ ಬೋಧನಾ ತಂತ್ರವನ್ನು ಬಳಸಿಕೊಳ್ಳಲು ಸಾಧ್ಯವೇ? ಒಂದು ರೀತಿಯಿಂದಲೇ ಸಾಧ್ಯವಾಗುತ್ತಿಲ್ಲ,ಇನ್ನು ಇಪ್ಪತ್ತು ರೀತಿ! ಅದು ಹೇಗೆ ಸಾಧ್ಯ? ಎಂಬ ಪ್ರಶ್ನೆ ಹುಟ್ಟಿಕೊಂಡರೆ ನಾವು ಹುಡುಕಾಟದ ದಾರಿಯಲ್ಲಿದ್ದೇವೆ ಎಂದರ್ಥ.
ಡಾ.ಸುಂದರ ಕೇನಾಜೆ
Comments
Post a Comment