ತುಳು ಜೀವನಕ್ರಮ ಮತ್ತು ಬದಲಾವಣೆ

ತುಳು ಜೀವನಕ್ರಮ ಮತ್ತು ಬದಲಾವಣೆ

ತುಳು ಎನ್ನುವುದನ್ನು ಕೇವಲ ಒಂದು ಭಾಷೆ ಮಾತ್ರವಲ್ಲ, ಅದೊಂದು ಜೀವನಕ್ರಮ ಕೂಡ. ಒಂದು ಭಾಗದಿಂದ ಬೆಟ್ಟಗಳಿಂದ ಆವೃತ್ತವಾದ ಕಾಡು, ಇನ್ನೊಂದು ಭಾಗದಿಂದ ನೀರಿನಿಂದಾವೃತವಾದ ಕಡಲು ಇವೆರಡರ ಮಧ್ಯೆ ಇರುವ ಜೀವನಕ್ರಮ. ಈ ಭೌಗೋಳಿಕ ವ್ಯಾಪ್ತಿಯ ಭಾಷೆ ತುಳು. ಇದಕ್ಕೆ ಪುರಾತನ ಇತಿಹಾಸವೂ ಇದೆ. ಪಂಚದ್ರಾವಿಡ ಭಾಷೆಗಳಲ್ಲಿ ಒಂದಾಗಿ, ಪ್ರತ್ಯೇಕಗೊಂಡದ್ದರಲ್ಲಿ ತುಳು ಎರಡೇ ಭಾಷೆ. ಇದರ ಭೌಗೋಳಿಕ ವ್ಯಾಪ್ತಿಯನ್ನು ಇಂದಿನ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡಿಗೆ ಸೀಮಿತಗೊಳಿಸಬಹುದು, ಆದರೆ ಅದಕ್ಕೂ ಮೀರಿದ ವ್ಯಾಪ್ತಿ ಇದೆ. ಈ ಪ್ರದೇಶಗಳಲ್ಲಿನ ಪ್ರಾಕೃತಿಕ ಹಿನ್ನಲೆಯನ್ನಾಧರಿಸಿದ ಜೀವನಕ್ರಮ ತುಳುನಾಡಿನದ್ದು. ಕಾಡು ಮತ್ತು ಕಡಲಿನ ಜೊತೆಗಿನ ಸಂಬಂಧದ ಮೂಲಕ ಬೆಳೆದು ಬಂದ ಜೀವನಕ್ರಮ. ಇದೇ ನಾವಿಂದು ಕರೆಯುವ ತುಳು ಸಂಸ್ಕøತಿ. ಇದು ಪ್ರಕೃತಿ ಮತ್ತು ಪರಂಪರೆಯ ಜೊತೆಗೆ ಹೊಂದಾಣಿಕೆ ಮಾಡುತ್ತಾ ವ್ಯವಸ್ಥೆಯನ್ನು ಸರಿದೂಗಿಸುತ್ತಾ ಸಾಗಿ ಬಂದ ಜೀವನಕ್ರಮ. ಇದನ್ನು ತುಳು ಜಾನಪದ ಬದುಕು ಎಂದೂ ಕರೆಯುತ್ತೇವೆ.

ಆಧುನಿಕ ಸಂದರ್ಭವನ್ನು ಗಮನದಲ್ಲಿರಿಸಿ ನೋಡಿದಾಗ ಜಾನಪದ ಬದುಕಿನಲ್ಲಿ ಒಂದು ನಿರ್ದಿಷ್ಟವಾದ ಜೀವನ ಪದ್ಧತಿ ಇದೆ. ಆಂದರೆ ಇಲ್ಲಿಯ ಪ್ರಕೃತಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಗುವ ವ್ಯವಸ್ಥೆ. ಬದುಕನ್ನು ಸವಾಲಾಗಿ ಸ್ವೀಕರಿಸುವ ಮತ್ತು ಮಿತಿಯಲ್ಲಿ ಇಟ್ಟುಕೊಳ್ಳುವ ಪಾರಂಪರಿಕ ನಂಬಿಕೆ. ಆರ್ಥಿಕ ಹಿನ್ನಲೆಯಲ್ಲಿನ ತೀರ್ಮಾನಗಳಿಗೆ ನೀಡುವ ಪ್ರಾಮುಖ್ಯಗಳಿಗಿಂತ, ಸಾಮುದಾಯಿಕ ನೆಲೆಯ ತೀರ್ಮಾನಗಳಿಗೆ ಅವಕಾಶ ನೀಡುವ ಕ್ರಮ. ಈ ಕಾರಣದಿಂದಲೇ ಕಠಿಣ ಪ್ರಾಕೃತಿಕ ಸಂದರ್ಭದಲ್ಲೂ ಕರಾವಳಿಯ ಜನಜೀವನ ಮತ್ತು ಬೆಳವಣಿಗೆ ಮುಂದುವರಿದುದು. ಅನಾದಿಕಾಲದಿಂದಲೂ ಈ ಭಾಗದಲ್ಲಿ ಬೀಸುವ ಗಾಳಿ, ಬೀಳುವ ಮಳೆ, ಜರಿಯುವ ಬೆಟ್ಟ ಮತ್ತು ಹರಿಯುವ ನದಿಗಳಿಗೆ ಕೊರತೆ ಇರಲಿಲ್ಲ. ಆದರೆ ಈ ಪ್ರಕೃತಿಯ ತೀರ್ಮಾನಗಳಿಗೆ ತಲೆಬಾಗಿ, ಅದರ ತೀವೃತೆಯನ್ನು ಕುಗ್ಗಿಸುವಂತಹಾ ಜಾಣ್ಮೆಯನ್ನು ಕಾಣುತ್ತೇವೆ. ಆದ್ದರಿಂದ ತುಳು ಜನಪದರ ಜಾನಪದ ಬದುಕು ಬಹಳ ಸಂಮೃದ್ಧವಾದುದು. ಇದಕ್ಕಾಗಿ ಅವರು ತಮ್ಮ ಆರ್ಥಿಕ ಮೂಲದ ವೃತ್ತಿ ಬದುಕು, ನಂಬಿಕೆ ಮೂಲದ ಆರಾಧನಾ ಬದುಕು ಮತ್ತು ನೆಮ್ಮದಿಯ ಮೂಲದ ಆಚರಣೆ ಹಾಗೂ ಸಾಂಸ್ಕøತಿಕ ಬದುಕನ್ನು ಹೊಂದಾಣಿಕೆ ಮಾಡಿಕೊಂಡಿದ್ದರು.

ಕೃಷಿ(ವೃತ್ತಿ) ಬದುಕು: ಪ್ರತೀ ಪ್ರದೇಶದ ಜನರಿಗೂ ಒಂದು ವೃತ್ತಿ ಇದ್ದೇ ಇರುತ್ತದೆ. ತುಳು ಪ್ರದೇಶದ ಜನರಿಗೆ ಆಹಾರದ ಬೆಳೆಯನ್ನು ಬೆಳೆಯುವುದೇ ವೃತ್ತಿ. ಅನಾದಿಕಾಲದಿಂದಲೂ ಮುಖ್ಯವಾಗಿ ಆಹಾರದ ಬೆಳೆಯಾದ ಭತ್ತವನ್ನು ಇಲ್ಲಿಯ ಜನಪದರು ಬೆಳೆಯುತ್ತಿದ್ದರು. ನಮ್ಮ ಅನೇಕ ಪಾಡ್ದನ, ಕಬಿತೆ, ಕತೆ ಹಾಗೂ ಇತರ ಜಾನಪದ ಸಾಹಿತ್ಯಗಳಲ್ಲಿ ಭತ್ತದ ನಾಡೆಂಬ ಪ್ರಸ್ತಾಪವಿದೆ. ತುಳುನಾಡಿನಲ್ಲಿ ದೊರೆತ ಪ್ರಾಚೀನ ಐತಿಹಾಸಿಕ ದಾಖಲೆಗಳೂ ಇದನ್ನು ಭತ್ತದ ನಾಡೆಂದು ಉಲ್ಲೇಖಿಸಿದೆ. ಇದಕ್ಕೆ ಪೂರಕ ಎಂಬಂತೆ ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ತುಳುನಾಡಿನ ಕೃಷಿ ಭೂಮಿಯ ವಿಸ್ತøತ ಪ್ರದೇಶಗಳಲ್ಲಿ ಭತ್ತ ಬೆಳೆಯುತ್ತಿದ್ದುದನ್ನು ಕಂಡಿದ್ದೇವೆ.

ಬೇಸಾಯ ವೃತ್ತಿ: ತುಳುವಿನಲ್ಲಿ ‘ಬೆನ್ನಿ’ ಎನ್ನುವ ಪದಕ್ಕೆ ಒಂದೇ ಅರ್ಥ ಇರುವುದನ್ನು ಗಮನಿಸಿದಾಗ, ಒಟ್ಟು ವೃತ್ತಿಗೆ ಒಂದೇ ಹೆಸರು ಇದ್ದುದು ವೇದ್ಯವಾಗುತ್ತದೆ. ಅಂದರೆ ಇಲ್ಲಿ ಬೆನ್ನಿ ಎನ್ನುವುದು ಕೇವಲ ಭತ್ತದ ಬೇಸಾಯಕ್ಕೆ ಮಾತ್ರ ಬಳಸುವ ಪದ. ಉಳಿದಂತೆ ಕನ್ನಡದ ಬೇಸಾಯ ಎನ್ನುವ ಪದ ಇತರ ಕೃಷಿ ಚಟುವಟಿಕೆಗೂ ಬಳಸುತ್ತದೆ. ಆದರೆ ಬಾರ್‍ತ ಬೆನ್ನಿ(ಭತ್ತದ ಬೇಸಾಯ) ಎಂಬ ಸಂಯುಕ್ತ ಪದಪ್ರಯೋಗ ತುಳುವಿನಲ್ಲಿ ಇಲ್ಲ. ಆದ್ದÀರಿಂದ ಬೇಸಾಯ ಎಂದರೆ, ಭತ್ತ ಮಾತ್ರ ಎನ್ನುವುದು ತಿಳಿಯುತ್ತದೆ. ಭತ್ತದ ಜೊತೆಗೆ ಬೆಳೆಯುತ್ತಿದ್ದ ಇತರ ಆಹಾರ ಬೆಳೆಗಳಾದ ರಾಗಿ, ಜೋಳ, ಕಬ್ಬು, ತರಕಾರಿ ಇತ್ಯಾದಿ ಬೆಳೆಗಳಿಗೆ ಬೆನ್ನಿ ಎನ್ನುವ ಪದ ಪ್ರಯೋಗ ತುಳು ಜನಪದ ವೃತ್ತಿ ಬದುಕಿನಲ್ಲಿಲ್ಲ. ಅದೇ ರೀತಿ ತುಳುವಿನಲ್ಲಿ ಭತ್ತ ಬೇಸಾಯಕ್ಕೆ ‘ಬುಳೆ’(ಬೆಳೆ) ಎನ್ನುವ ಪದವೊಂದರ ಬಳಕೆಯೂ ಇತ್ತು. ಈ ಬುಳೆ ಎನ್ನುವ ಪದದ ಜೊತೆಗೆ ‘ಭತ’್ತ ಎಂದು ಪ್ರತ್ಯೇಕ ಸೇರಿಸುವ ಪದ್ದತಿ ಇಲ್ಲ. ಯಾಕೆಂದರೆ ತುಳು ಜನಪದರು ಬಳಸುವ ಬುಳೆ(ಬೆಳೆ) ಅಂದರೆ ಅದು ಕೇವಲ ಭತ್ತದ ಬೆಳೆ ಮಾತ್ರ ಎಂದರ್ಥ. ಹೀಗೆ ವೃತ್ತಿಯ ಪರಿಪೂರ್ಣತೆ ಇರುವುದೇ ಭತ್ತ ಬೇಸಾಯದಲ್ಲಿ ಎನ್ನುವುದು ಸತ್ಯ ಸಂಗತಿ. ಇಡೀ ವಾರ್ಷಿಕ ಆವರ್ತನದ ಪೂರ್ಣ ಕಾಲ ಈ ವೃತ್ತಿ ಬದುಕಿನಲ್ಲಿ ಕಳೆಯುತ್ತಿದ್ದ ತುಳುವರು, ಬೇಸಾಯದ ಬಿಡುವಿನ ಕಾಲದಲ್ಲಿ ಮಾತ್ರ ಅದರ ಹೊರತಾದ ಯೋಚನೆಗಳಿಗೆ ಅವಕಾಶ ನೀಡುತ್ತಿದ್ದರು.

ಸಾಮಾನ್ಯವಾಗಿ ವಾರ್ಷಿಕ ಆವರ್ತನದ ಮೂರೂ ಕಾಲಗಳಲ್ಲಿ ಹೆಚ್ಚು ಕಡಿಮೆ ಮೂರು ಬೆಳೆಗಳನ್ನು ಬೆಳೆಯುತ್ತಿದ್ದರು. ಅವುಗಳು ಕ್ರಮವಾಗಿ ಏಣೆಲು, ಸುಗ್ಗಿ, ಕೊಳಕೆ. ಮಳೆಗಾಲದಲ್ಲಿ ಏಣೆಲು, ಹರಿದು ಬರುವ ನೀರಿರುವ ಕಾಲದಲ್ಲಿ ಸುಗ್ಗಿ, ಸದಾ ನೀರಿರುವ ತಗ್ಗಿನಲ್ಲಿ ಕೊಳಕೆ. ಇದು ತುಳು ಜನಪದರ ಬೆಳೆ ಸಂಪ್ರದಾಯ. ಇದಕ್ಕೆ ಬೇಕಾದ ಪೂರ್ವ ತಯಾರಿಯಲ್ಲಿ ಒಟ್ಟು ಪ್ರದೇಶವೇ ಒಳಗಾಗುವುದನ್ನು ಇತ್ತೀಚಿನವರೆಗೂ ತುಳುನಾಡಿನಲ್ಲಿ ಕಾಣಬಹುದಾಗಿತ್ತು. ಸಾಮುದಾಯಿಕ ಅನುಸಂಧಾನದ ಪ್ರತಿಫಲವನ್ನು ಒಟ್ಟು ಜನಪದ ವ್ಯವಸ್ಥೆ ಪಡೆಯುತ್ತಿತ್ತು. ಅಂದರೆ ಕೆಲವರು ಸಾಗುವಳಿ ನಡೆಸುವ ಕೃಷಿಕ ವರ್ಗವಾಗಿ ಅನುಕೂಲ ಪಡೆದರೆ, ಹಲವರು ಶ್ರಮಿಕ ವರ್ಗವಾಗಿಯೂ ಅನುಕೂಲ ಪಡೆಯುತ್ತಿದ್ದರು. ಈ ಎರಡೂ ವಿಭಾಗಕ್ಕೂ ಸೇರದವರೂ ಇನ್ನಿತರ ಚಟುವಟಿಕೆಯ ಮೂಲಕ ಭತ್ತ ಸಂಗ್ರಹಿಸುವ ಕಾರ್ಯವನ್ನು ಮಾಡುತ್ತಿದ್ದರು. ಉದಾಹರಣೆಗೆ ಇಲ್ಲಿ ಭೂತ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡ ಕೆಲವು ಜನಾಂಗಗಳು ಮೂಲತಾ ಕೃಷಿಕರೂ ಅಲ್ಲ, ಕೃಷಿ ಕಾರ್ಮಿಕರೂ ಅಲ್ಲ. ಆದರೆ ಭತ್ತ ಕೊಯಿಲಿನ ಸಂದರ್ಭದಲ್ಲಿ ಅವರೂ ತಮ್ಮ ವಿಭಿನ್ನ ಕುಣಿತಗಳ ಮೂಲಕ ಮನೆಮನೆ ತೆರಳಿ ಭತ್ತ ಸಂಗ್ರಹಿಸುತ್ತಿದ್ದರು. ಇದೇ ರೀತಿ ಮೇಲ್ವರ್ಗದ ಬೇರೆ ಕಾರ್ಯ ಚಟುವಟಿಕೆಯಲ್ಲಿ ಸಹಕರಿಸುತ್ತಿದ್ದ ತುಳುನಾಡಿನ ಬೇಸಾಯೇತರ ಜನರು ವಾರ್ಷಿಕ ಕೂಲಿ ರೂಪದಲ್ಲಿ ಭತ್ತ ಸಂಗ್ರಹಿಸುವ ಕಾರ್ಯವನ್ನು ಮಾಡುತ್ತಿದ್ದರು.

ಕಳೆದ ಇಪ್ಪತ್ತೈದು ವರ್ಷಗಳಿಂದ ತುಳುನಾಡಿನ ಈ ವೃತ್ತಿ ಬದುಕಿನಲ್ಲಿ ಗುರುತರ ಬದಲಾಣೆಯಾಗಿದೆ. ಅದೆಷ್ಟೋ ತಲೆಮಾರುಗಳ ಭತ್ತ ಬೇಸಾಯ ವೃತ್ತಿ ಸಂಪೂರ್ಣ ಬದಲಾಗಿದೆ. ವಾಣಿಜ್ಯ ಬೆಳೆಗಳಾದ ಅಡಿಕೆ, ರಬ್ಬರ್, ತೆಂಕು ಹಾಗೂ ಇನ್ನಿತರ ಬೆಳೆಗಳು ವ್ಯಾಪಕವಾಗಿವೆ. ಭತ್ತ ಬೆಳೆಯುತ್ತಿರುವ ಜಾಗದಲ್ಲಿ ಪೂರ್ಣ ಪ್ರಮಾಣದ ವಾಣಿಜ್ಯ ಬೆಳೆಗಳು ಬೆಳೆಯುತ್ತಿವೆ. ಗದ್ದೆಗಾಗಿ ಬಳಸುತ್ತಿದ್ದ ನೈಸರ್ಗಿಕ ನೀರಾವರಿ ವ್ಯವಸ್ಥೆ ಸಂಪೂರ್ಣ ಬದಲಾಗಿದೆ. ಯಾಂತ್ರಿಕೃತ ವ್ಯವಸ್ಥೆ ಬಹಳ ಆಳದಿಂದ ನೀರೆತ್ತುತ್ತಿದೆ. ಆ ಮೂಲಕ ಈ ಬೆಳೆಗಳಿಗೆ ಹೆಚ್ಚಿನ ಪ್ರಮಾಣದ ನೀರನ್ನು ಕೊಡುತ್ತಿವೆ. ಭತ್ತಕ್ಕಿಂತ ಮೂರು ಪಟ್ಟು ಹೆಚ್ಚು ಲಾಭದಾಯಕ ಕೃಷಿ ಇದಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರಾಕೃತಿಕ ಸಂಪತ್ತು, ರಾಸಾಯನಿಕ ಬಳಕೆ ಮತ್ತು ಯಂತ್ರೋಪಕರಣಗಳ ಬಳಕೆ ನಡೆಯುತ್ತಿದೆ. ಇದರಿಂದ ಕೃಷಿಕನಿಗೆ ಲಾಭ ಹೆಚ್ಚಾದದ್ದು ಸತ್ಯ. ಆದರೆ ವ್ಯವಸ್ಥೆಗೆ ತೀವೃತರದ ದೋಷವಾಗಿರುವುದನ್ನು ಒಪ್ಪಿಕೊಳ್ಳಬೇಕು. ವಾಣಿಜ್ಯ ಬೆಳೆಗಳಿಗೆ ವಿಪರೀತ ನೀರು ಬಳಸುವುದರಿಂದ ನಮ್ಮ ನೀರಾವರಿ ಮೂಲಗಳು ಬಹಳ ಬೇಗ ಬತ್ತಿ ಹೋಗುತ್ತಿವೆ. ಮಣ್ಣಿಗೆ ಹೆಚ್ಚುವರಿ ಗೊಬ್ಬರ ಸುರಿಯುವುದರಿಂದ ಮಣ್ಣೂ ಬರಡಾಗುತ್ತಿದೆ. ಕ್ರಿಮಿನಾಶಕಗಳ ಬಳಕೆಯಿಂದ ವಾತಾವರಣದ ಶುದ್ಧ ಗಾಳಿಗೆ ಸಮಸ್ಯೆಯಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಿಗೆ ಅಗತ್ಯಕ್ಕಿಂತ ಹೆಚ್ಚಿನ ಹಣ ಜನರ ಕೈಯಲ್ಲಿ ಓಡಾಡುವುದರಿಂದ ಮನುಷ್ಯನಲ್ಲಿ ಸ್ವಾರ್ಥ, ದುರಾಸೆಯ ಜೊತೆಗೆ ಅಪರಾಧಿ ಪ್ರವೃತ್ತಿ ಹೆಚ್ಚಾಗುತ್ತಿದೆ. ಇನ್ನೊಂದು ಮುಖ್ಯವಾದ ಸಂಗತಿ, ಇತ್ತೀಚೆಗೆ ನಮ್ಮಲ್ಲರ ಅನುಭವಕ್ಕೆ ಬಂದಿರುವಂತದ್ದು, ಆಹಾರ ಬೆಳೆಯಾಗಿ ಯಾವುದನ್ನೂ ಬೆಳೆಯದ ನಾವು ಇತ್ತೀಚೆಗೆ ಸರಿದ ಮಳೆಯಿಂದ ತತ್ತರಿಸಿದೆವು. ನಮಗೆ ಅಕ್ಕಿಯನ್ನು ತಂದು ಕೊಡುವ ರಸ್ತೆ ವ್ಯವಸ್ಥೆ ಕುಸಿದು ಆತಂಕಕ್ಕೊಳಗಾದೆವು. ಇಲ್ಲಿಗೆ ಅಕ್ಕಿ ತರುವ ನಾಲ್ಕು ಭಾಗದ ರಸ್ತೆಗಳಲ್ಲಿ ಏಕಕಾಲದಲ್ಲಿ ಮೂರು ಮುಚ್ಚಿಹೋದುವು. ಒಂದು ವೇಳೆ ನಾಲ್ಕು ರಸ್ತೆಗಳು ಒಂದಷ್ಟು ಕಾಲ ಮುಚ್ಚಿಹೋಗುತ್ತಿದ್ದರೆ ಕರಾವಳಿ ಜನರ ಸ್ಥಿತಿ ಏನಾಗುತ್ತಿತ್ತು. ಯಾಕೆಂದರೆ ಕಳೆದ ಇಪ್ಪತ್ತು ವರ್ಷಗಳಿಂದ ಕರಾವಳಿ ಜನರು ಆಹಾರದಲ್ಲಿ ಪರಾವಲಂಬಿಗಳು. ಈ ಬದಲಾವಣೆಗೆ ಮೂಲ ಕಾರಣ ತುಳು ಜನಪದ ಬದುಕಿನಲ್ಲಾದ ಬದಲಾವಣೆ.

ಆರಾಧನಾ ಬದುಕು: ಸಾಮಾನ್ಯವಾಗಿ ಒಂದೇ ಪರಿಕಲ್ಪನೆಯನ್ನು ಎರಡು ವಿಧಾನದಲ್ಲಿ ಪ್ರತೇಕವಾಗಿ ಆರಾಧನೆ ಮಾಡುವ ಕಾರ್ಯ ಪುರಾತನವಾದುದು. ಅದೆಂದರೆ ಒಂದು ಜಾನಪದ ಆರಾಧನೆ, ಇನ್ನೊಂದು ಶಿಷ್ಟ ಆರಾಧನೆ. ಅನಾದಿಕಾಲದಲ್ಲಿ ಇವು ಒಂದರ ಮೇಲೆ ಒಂದು ಹೇರಿಕೆಯಾದ ಪ್ರಮಾಣ ಕಡಿಮೆ. ಜನಪದ ಸಂಪ್ರದಾಯ ಜನರ ಮಧ್ಯದಿಂದ ಹಾದು ಬಂದ ವ್ಯವಸ್ಥೆ ಮತ್ತು ಅದಕ್ಕೊಂದು ನಿರ್ದಿಷ್ಟವಾದ ಚೌಕಟ್ಟೆಂಬುದಿಲ್ಲ. ಜನರು ಬದಲಾದಂತೆ ಈ ಸಂಪ್ರದಾಯದಲ್ಲೂ ಬದಲಾವಣೆ, ತಿದ್ದುಪಡಿ, ಹೊಸ ಸೇರ್ಪಡೆ, ಹಳೆಯುದನ್ನು ಕಳೆಯುವ ಕೆಲಸಗಳು ನಡೆಯುತ್ತಾ ಬಂದಿದೆ. ಆದರೆ ಯಾರ ಹಿಡಿತದಿಂದ ಇವು ನಡೆದದ್ದಲ್ಲ. ಭೂತಾರಾಧನೆ ಮತ್ತು ಪುರಾತನ ನಾಗಾರಾಧನೆ ಇದಕ್ಕೆ ಉತ್ತಮ ಉದಾಹರಣೆಗಳು.

ಭೂತಾರಾಧನೆ: ಹಿಂದಿನ ಕಾಲದಲ್ಲಿ ತುಳುನಾಡಿನಲ್ಲಿ ನೂರೊಂದು ಭೂತಗಳು, ನೂರೊಂದು ಬತ್ತದ ಬೀಜ ಎನ್ನುವ ಗಾದೆಯೊಂದು ಜಾಲ್ತಿಯಲ್ಲಿತ್ತು. ಅದೇ ಈಗ ಸಾವಿರದೊಂದು ಭೂತಗಳು ಮತ್ತು ಸಾವಿರಕ್ಕೂ ಹೆಚ್ಚಿನ ಬತ್ತದ ಬೀಜಗಳು ಎಂದು ಮಾರ್ಪಾಟಾಗಿದೆ. ಭೂತಾರಾಧನೆ ಪುರಾತನ ಸಂಪ್ರದಾಯಗಳಲ್ಲಿ ಒಂದು. ದೈವಗಳನ್ನು ಕೋಲ ರೂಪದಲ್ಲಿ ಇಲ್ಲಾ ತಂಬಿಲ ರೂಪದಲ್ಲಿ ಆರಾಧಿಸುವ ಪರಿಕಲ್ಪನೆ ಹಳೆಯದು. ತುಳು ಧಾರ್ಮಿಕ ನಂಬಿಕೆಗಳಲ್ಲೇ ಭೂತಾರಾಧನೆ ವಿಸ್ತಾರವಾದುದು ಮತ್ತು ಪುರಾತನವಾದುದು.

ತುಳು ಭೂತಾರಾಧನೆ ಸಂಪ್ರದಾಯಕ್ಕೆ ಸುಮಾರು ಆರು ನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸ ಇದೆ. ಈ ಸಂಪ್ರದಾಯದಲ್ಲಿ ಎಷ್ಟೇ ಬದಲಾವಣೆ ಆದರೂ ಮೂಲ ಆಶಯ ಪ್ರಕೃತಿ ಪರವಾದುದೇ ಆಗಿತ್ತು. ಭೂತಾರಾಧನೆಗೆ ಒಂದು ನಿರ್ದಿಷ್ಟವಾದ ಚೌಕಟ್ಟಿದೆ. ಜನಪದರು ಈ ಚೌಕಟ್ಟಿನ ಒಳಗೆ ಅದನ್ನು ಉಳಿಸಿದ್ದರು. ಈ ಚೌಕಟ್ಟಿನಲ್ಲಿ ವ್ಯತ್ಯಯವಾಗದಂತೆ ಅದನ್ನು ಸಂರಕ್ಷಿಸುವ ಕಾರ್ಯವನ್ನು ಇಡೀ ವ್ಯವಸ್ಥೆ ಮಾಡುತ್ತಿತ್ತು. ಇದನ್ನು ಉಳಿಸಲು ಪೂರಕವಾದ ಪಾಡ್ದನ, ನುಡಿಕಟ್ಟು ಮತ್ತು ಭೂತಗಳ ಬಗ್ಗೆ ಇರುವ ನಂಬಿಕೆಯನ್ನು ಮಾನವ ಪರವಾಗಿ ಗಟ್ಟಿಗೊಳಿಸಿದ್ದರು. ಪಾಡ್ದನ ಇಲ್ಲಿಯ ಭೂತಗಳ ಚರಿತ್ರೆ. ಅವು ಹುಟ್ಟಿ ಬೆಳೆದ ಪ್ರದೇಶ, ಪ್ರಭಾವ ಮತ್ತು ಸಂಚರಿಸಿದ ಊರು ಇತ್ಯಾದಿಗಳನ್ನು ವಿವರಿಸುತ್ತದೆ. ನಮ್ಮನ್ನು ಕಾಯುವ ಅಗಾಧ ಶಕ್ತಿಯೊಂದು ಈ ಪರಿಸರದ ಮಧ್ಯೆ ಅಗೋಚರವಾಗಿದ್ದು ಅವನ್ನು ನಂಬಬೇಕೆಂಬ ತಿಳುವಳಿಕೆ ಜನಪದರದ್ದು.

ಭೂತಾರಾಧನೆಗೂ ಒಂದು ಕಾಲ, ಪ್ರದೇಶ, ಆರಾಧನೆಗೊಳ್ಳುವ ಸಮುದಾಯದ ಪ್ರಭಾವ ಇದ್ದೇ ಇರುತ್ತದೆ. ವ್ಯತ್ಯಾಸಗಳೂ ಇರುತ್ತವೆ. ಹಾಗಾಗಿ ತುಳುನಾಡಿನಾದ್ಯಂತ ಒಂದೇ ಹೆಸರಿನ ದೈವಗಳಲ್ಲೂ ಭಿನ್ನ ಅರಾಧನಾ ಸಂಪ್ರದಾಯಗಳಿದ್ದವು. ಸಾಮಾನ್ಯವಾಗಿ ತುಳುವರ ಮನಸ್ಥಿತಿಗೆ ಹೊಂದಿಕೆಯಾಗುವಂತೆ ಭೂತಾರಾಧನಾ ಪ್ರಕ್ರಿಯೆ ನಡೆಯುತ್ತಿತ್ತು. ಅಂದರೆ ಅವgವರÀ ಜಾತಿ, ಧರ್ಮ, ಆಹಾರ-ವಿಹಾರ ಮತ್ತು ಪ್ರಾಕೃತಿಕ ಸನ್ನಿವೇಶಗಳು ಆರಾಧನೆಯ ಮೇಲೆ ಪ್ರಭಾವ ಬೀರುತ್ತಿದ್ದವು. ಆದ್ದರಿಂದ ಒಂದು ಜಾತಿ, ಧರ್ಮ, ಸಂಪ್ರದಾಯಕ್ಕೆ ಸರಿಯಾಗಿ ಆರಾಧನಾ ಸಂಪ್ರದಾಯ ಯಾವ ತಕರಾರೂ ಇಲ್ಲದೇ ನಿಂತಿತ್ತು. ಉದಾಹರಣೆ ಜೈನರು ದೇವಕ್ರಿಯೆಯಲ್ಲಿ ಭೂತಾರಾಧನೆ ನಡೆಸಿದರೆ, ಅವರಿಂದ ಪ್ರಭಾವಗೊಂಡ ಬಂಟರು ಅಸುರಕ್ರಿಯೆಯಿಂದ ಆರಾಧಿಸುತ್ತಿದ್ದರು. ಇಲ್ಲಿ ಜೈನರ ಸಸ್ಯಾಹಾರವೂ ಬಂಟರ ಮಾಂಸಾಹಾರವೂ ನಮ್ಮ ನಂಬಿಕೆಯ ಮೇಲೆ ಯಾವ ವ್ಯತಿರೀಕ್ತ ಪ್ರಭಾವವನ್ನೂ ಬಿರಿರಲಿಲ್ಲ.

ಆದರೆ ಇಂದು ಭೂತಾರಾಧನೆಯಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಭೂತಾರಾಧನೆಯ ಮೇಲೆ ಶಿಷ್ಟ ವ್ಯವಸ್ಥೆಯ ಆರಾಧನೆಗಳು ಪ್ರಭಾವ ಬೀರುತ್ತಿವೆ. ಆಹಾರ ವ್ಯವಸ್ಥೆಯಲ್ಲಿ ಕಟ್ಟುನಿಟ್ಟು ಕಾಣುತ್ತಿದೆ. ಭೂತ ಚರಿತ್ರೆಯನ್ನು ಹೇಳುವ ಪಾಡ್ದನಗಳು ತಮ್ಮ ಅಸ್ಥಿತ್ವಗಳನ್ನು ಕಳೆದುಕೊಳ್ಳುತ್ತಿವೆ. ಭೂತದ ನುಡಿಕಟ್ಟುಗಳು ಉಪನ್ಯಾಸಗಳಾಗುತ್ತಿವೆ. ಆರಾಧನೆಯಲ್ಲಿ ವೈಭವ ಅಬ್ಬರ ಹೆಚ್ಚಾಗುತ್ತಿದೆ. ಆರಾಧನೆ ಒಂದು ಪ್ಯಾಶನ್ ಆಗುತ್ತಿದೆ. ಹೊಸ ವೇಷಭೂಷಣ, ಕುಣಿತ, ಅಲಂಕಾರ, ನುಡಿಗಟ್ಟುಗಳು ಮೂಲಕ ಭೂತಗಳು ಅಧುನಿಕಗೊಳ್ಳುತ್ತಿವೆ. ನಂಬಿಕೆಯ ಭಾಗವಾಗಿದ್ದ ಭೂತಾರಾಧನೆ ಪ್ರತಿಷ್ಟೆಯ ಭಾಗವಾಗುತ್ತಿದೆ.

ನಾಗಾರಾಧನೆ: ತುಳುವ ಭೂತಾರಾಧನೆಗಳಿಗಿಂತ ಹೆಚ್ಚು ಪುರಾತನವಾದುದು ನಾಗಾರಾಧನೆ. ಬೇಸಾಯ ಸಂಸ್ಕøತಿ ಹುಟ್ಟಿಕೊಂಡ ಕಾಲದಿಂದಲೂ ನಾಗಾರಾಧನೆ ಇಲ್ಲಿ ನೆಲೆಯಾಗಿತ್ತು. ನಾಗ ನೀರು ಮತ್ತು ಫಲವಂತಿಕೆ ನೀಡುವ ಶಕ್ತಿ ಎಂದು ಆರಾಧನೆ ಮಾಡುವುದು ಸಂಪ್ರದಾಯ. ಸಾಮಾನ್ಯವಾಗಿ ಸುಗ್ಗಿ ಗದ್ದೆಯ ಬದುವಿನಲ್ಲಿ ಹರಿದಾಡುವ ನಾಗ, ನಿತ್ಯವೂ ನಿರ್ದಿಷ್ಟವಾದ ಜಾಗದಲ್ಲಿ ಇರುವುದು ಸ್ವಭಾವ. ಆ ಸ್ಥಳದ ಸುತ್ತಮುತ್ತ ಕಾಢುಗಳನ್ನು ಬೆಳೆಸುವುದು, ವರ್ಷಕ್ಕೆ ಒಂದೋ ಎರಡೋ ಬಾರಿ ಅಲ್ಲಿಗೆ ಭೇಟಿ ನೀಡಿ ನಮ್ಮದೇ ವಿಧಾನದಿಂದ ಪೂಜೆಗಳನ್ನು ನಡೆಸುವುದು ಅನಾದಿಕಾಲದಿಂದ ನಡೆದು ಬಂದ ಪದ್ದತಿ. ಇದಲ್ಲದೇ ನಾಗನನ್ನು ಕೋಲರೂಪದಲ್ಲಿ ಆರಾಧಿಸುವುದು, ಪೂಕರೆ, ಬಾಳೆಗದ್ದೆಗಳಲ್ಲೂ ಗೌರವ ಸಲ್ಲಿಸುವುದು ಪುರಾತನ ವಿಧಾ£.À ತುಳುನಾಡಿನಂತಹಾ ತಂಪು ಪ್ರದೇಶದಲ್ಲಿ ಎತೇಚ್ಚವಾಗಿ ಕಾಣಸಿಗುವ ನಾಗ ಸಂತಾನ ವೃದ್ಧಿ, ಚರ್ಮ ವ್ಯಾಧಿ, ಫಲವಂತಿಕೆ, ನೀರಿನ ಸಂರಕ್ಷಕ ಇತ್ಯಾದಿಗಳ ದೇವತೆಯಾಗಿ ಆರಾಧನೆಗೊಳ್ಳುತ್ತಾ ಬಂದಿದೆ.

ಆದರೆ ಇಂದು ನಾಗಾರಾಧನೆ ಬದಲಾಗಿದೆ. ಒಂದು ಭಾಗದ ಗದ್ದೆ ಹುಣಿಯ ತುಂಬು ಕಾಡಿನ ಬನದಲ್ಲಿ ನೆಲೆಸುತ್ತಿದ್ದ ನಾಗ, ಇಂದು ಸಿಮೆಂಟ್ ಕಟ್ಟೆಗಳಿಗೆ ವರ್ಗಾವಣೆಗೊಂಡಿದೆ. ಸುತ್ತಮುತ್ತ ಇದ್ದ ಸಂಮೃದ್ಧ ಕಾಡು ನಾಶವಾಗಿದೆ. ನೀರಿನ ಆಶ್ರಯವನ್ನು ಬತ್ತಿಸಲಾಗಿದೆ. ಜನಪದ ವಿಧಾನದ ಬದಲು ಶಿಷ್ಟ ವಿಧಾನದಿಂದ ಆರಾಧನೆಗೊಳ್ಳುತ್ತಿದೆ. ನಾಗಮಂಡಲ, ಡಕ್ಕೆಬಲಿಯಂತಹ ಕೋಟ್ಯಾಂತರ ಹಣ ಖರ್ಚು ಮಾಡಿಸುವ ಅದ್ಧೂರಿಯ ಆರಾಧನಾ ವಿಧಾನ ಹೆಚ್ಚಾಗುತ್ತಿದೆ. ಇಲ್ಲಿಯೂ ಪ್ರತಿಷ್ಟೆಯೇ ಮುಖ್ಯ ಎಂದಾಗಿದೆ.

ತುಳುನಾಡಿನ ಆರಾಧನೆಗಳಲ್ಲಿ ಬಹುದೊಡ್ಡ ಬದಲಾವಣೆ ಕೆಲವು ವರ್ಷಗಳಿಂದ ನಡೆದಿದೆ. ಜನಪದ ಆರಾಧನೆಯ ಮಹತ್ವ ಕಳೆದುಕೊಂಡು ಶಿಷ್ಟ ಆರಾಧನೆಯ ಸ್ಥಾನ ಹೆಚ್ಚುತ್ತಿದೆ. ಕೋಲ ಹೋಗಿ ಕೋಲೋತ್ಸವ ಆಗಿದೆ. ಸಾಮಾನ್ಯ ಕಲ್ಲನ್ನೂ ಆರಾಧಿಸುತ್ತಿದ್ದ ಜನಪದರು ಇಂದು ಅದಕ್ಕೊಂದು ರೂಪ ಕೊಟ್ಟು ಅದನ್ನು ಶಿಲ್ಪವಾಗಿ ಪೂಜಿಸಿದರೇ ಸರಿ ಎನ್ನುವ ತೀರ್ಮಾನಕ್ಕೆ ಬಂದಂತಿದೆ. ಗಾಳಿ, ನೀರು, ಕಾಡು, ನದಿ, ಮಣ್ಣು ಇತ್ಯಾದಿಗಳನ್ನು ಇದ್ದ ಹಾಗೇ ಪೂಜಿಸುವ ಕಾಲ ಬದಲಾಗಿದೆ. ಅವುಗಳ ನೈಜರೂಪವನ್ನು ಮರೆಮಾಚುವ ಆಲಂಕಾರಿಕ ಸಂಪತ್ತುಗಳಿಗೆ ಹೆಚ್ಚು ಆದ್ಯತೆ ಬಂದಿದೆ. ಹಿರಿಯರನ್ನು ಹದಿನಾರು ತಲೆಮಾರುಗಳ ವರೆಗೆ ಆರಾಧಿಸುವ, ಪ್ರಕೃತಿಯೇ ದೇವರೆಂದು ಬಗೆದಿರುವ ಕಾಲ ಬದಲಾಗಿದೆ. ಜನಪದರ ಆರಾಧನೆಯಲ್ಲಿದ್ದ ಸಮಸ್ತ ಜನರ ಒಳಿತು, ಸ್ವಾರ್ಥ ಪರವಾಗುತ್ತಿದೆ. ಜನರ ಸಮಸ್ಯೆಗಳೂ ಹೆಚ್ಚಾಗುತ್ತಿದೆ.

ಆಚರಣಾತ್ಮಕ ಬದುಕು: ತುಳುವರು ತಮ್ಮ ಹುಟ್ಟಿನಿಂದ ಹಿಡಿದು ಸಾವಿನ ವರೆಗೂ ಅನೇಕ ಆಚರಣೆಗಳನ್ನು ರೂಢಿಸಿಕೊಳ್ಳುತ್ತಾ ಬಂದವರು. ಮಗು ಹುಟ್ಟಿದಾಗ ಅದನ್ನು ತೊಟ್ಟಿಲು ತೂಗುವವರೆಗೆ ಸೂತಕ ಕಳೆಯುವ ಆಚರಣೆ, ಹೆಣ್ಣು ಮಗುವಾದರೆ ಅದು ಬೆಳೆದು ಪ್ರಾಯಕ್ಕೆ ಬಂದಾಗ ಫಲವತಿಯಾಗುತ್ತಾಳೆ ಎನ್ನುವ ಆಚರಣೆ, ಮದುವೆ ಮಾಡುವ ಸಂದರ್ಭದಲ್ಲಿ ಸಂಸಾರದ ಸಹವರ್ತಿಯಾಗುವ ಆಚರಣೆ, ಅದೇ ಹೆಣ್ಣು ಗರ್ಭವತಿಯಾದಾಗ ವಂಶಾಭಿವೃದ್ಧಿಯ ನೆಲೆಯ ಆಚರಣೆ, ವ್ಯಕ್ತಿಯ ಸಾವಿನ ಸಂದರ್ಭದಲ್ಲೂ ವಿಭಿನ್ನ ಆಚರಣೆ, ಇವು ವ್ಯಕ್ತಿಯ ಬದುಕಿನ ಕಾಲ ಘಟ್ಟಕ್ಕನುಗುಣವಾಗಿ ನಡೆಯುವ ಮತ್ತು ವ್ಯಕ್ತಿಯನ್ನೇ ಕೇಂದ್ರೀಕರಿಸಿ ನಡೆಯುವ ಆಚರಣೆಗಳು. ಈ ಎಲ್ಲ ಆಚರಣೆಗಳು ಒಂದು ನಿರ್ದಿಷ್ಟವಾದ ನಿಯಮದ ಒಳಗೆ ಆಯಾ ಜಾತಿ, ಜನಾಂಗಕ್ಕೆ ಅನುಸಾರವಾಗಿ ನಡೆಯುತ್ತಾ ಬಂದಿರುತ್ತದೆ.

ಇದಲ್ಲದೇ ತಮ್ಮ ವೃತ್ತಿಯ ಹಿನ್ನಲೆಯಲ್ಲೂ ಅನೇಕ ಆಚರಣೆಗಳು ಆಚರಿಸಲ್ಪಡುತ್ತಿದ್ದವು. ತುಳುವರ ಹಬ್ಬ ಮತ್ತು ಆಚರಣೆಗಳಲ್ಲೂ ಒಂದು ರೀತಿಯ ನಿಯಮಾಧೀನತೆ ಇತ್ತು. ತಮ್ಮ ವೃತ್ತಿ ಬದುಕಿಗೆ ಪೂರಕವಾಗುವಂತೆ ಸಾಮೂಹಿಕವಾಗಿ ಇಲ್ಲಾ ವೈಯಕ್ತಿಕವಾಗಿ ಆಚರಣೆಗೊಳ್ಳುತ್ತಿತ್ತು. ಬೇಸಾಯ ವೃತ್ತಿಯೇ ಪ್ರಧಾನವಾದುದರಿಂದ ಅದಕ್ಕೆ ಸಹಸಂಬಂಧ ಕಲ್ಪಿಸುವ ಹಿನ್ನಲೆಯಲ್ಲಿ ಈ ಆಚರಣೆಗಳನ್ನು ಹೊಂದಾಣಿಕೆ ಮಾಡಲಾಗಿತ್ತು. ತುಳುವರ ವರ್ಷಾರಂಭವೇ ಹಬ್ಬಗಳ ಮೂಲಕ. ಬಿಸು ತುಳುವರ ಮೊದಲ ದಿನ. ಅಂದಿನಿಂದ ಮುಂದಿನ ವರ್ಷಕ್ಕೆ ಪೂರ್ಣ ಅನುಸರಿಸುವ ಪೂರ್ವಾಭಿನಯದ ನೆಲೆಯ ಆಚರಣೆಗಳನ್ನು ನಡೆಸುತ್ತಿದ್ದರು. ಇಲ್ಲಿಂದಲೇ ತಮ್ಮ ವೃತ್ತಿಯನ್ನು ಆರಂಭಿಸಬೇಕು ಎನ್ನುವ ಅಲಿಖಿತ ಪೂರ್ವ ಸೂಚನೆಯೊಂದಿತ್ತು. ಈ ಸೂಚನೆ ಒಂದು ತಿಂಗಳು ಕಳೆದು ಬರುವ ಪತ್ತನಾಜೆಯಿಂದ ಅಧಿಕೃತಗೊಳ್ಳುತ್ತಿತ್ತು. ಪತ್ತನಾಜೆ ಎಲ್ಲ ಸಾಂಸ್ಕøತಿಕ ವ್ಯವಸ್ಥೆಯ ಕೊನೆಯ ದಿನ. ಅಂದಿನಿಂದ ತುಳುವರು ಪೂರ್ಣಪ್ರಮಾಣದಲ್ಲಿ ಬೇಸಾಯಕ್ಕೆ ತೊಡಗುತ್ತಿದ್ದರು. ಬೇಸಾಯಕ್ಕೆ ಸಂಬಂಧಪಟ್ಟಂತೆ ಏಣಿಲು ಗದ್ದೆಗೋರಿಯಿಂದ ಈ ಆಚರಣೆ ಆರಂಭಗೊಳ್ಳುತ್ತಿತ್ತು. ಆಟಿ ಅಮವಾಸ್ಯೆ ಕಷ್ಟದ ನಡುವೆ ಮಾರಿಯನ್ನು ದೂರ ಮಾಡುವ ದಿನ. ಕಾವೇರಿ ಸಂಕ್ರಮಣ ಮಳೆ ಕಡಿಮೆಯಾದರೂ ನೀರಿಗೆ ಬರವಿಲ್ಲವೆಂದು ತಿಳಿಸುವ ದಿನ. ಬಹುನಿರೀಕ್ಷಿತ ಪರ್ಬ, ಅದರ ಮಧ್ಯೆ ಬರುವ ನವರಾತ್ರಿ, ಅದೇ ಕಾಲದಲ್ಲಿ ಮನೆಗಳಲ್ಲಿ ನಡೆಯುವ ಹೊಸಕ್ಕಿ ಊಟ, ಎಲ್ಲವೂ ಸಂಮೃದ್ಧಿಯ ಕಾಲದ ಸಾಲುಸಾಲು ಆಚರಣೆಗಳು. ಇದೇ ಕಾಲದಿಂದ ತಮ್ಮ ಮನೆಯ ಮತ್ತು ಊರಿನ ದೈವ ದೇವರ ಜಾತ್ರೆ, ಕೋಲ, ನೇಮ ಇತ್ಯಾದಿಗಳೆಲ್ಲವೂ ಆರಂಭಗೊಳ್ಳುತ್ತಿದ್ದವು. ಅದುವರೆಗೂ ಬೇಸಾಯದಲ್ಲಿ ತೊಡಿಗಿದ ಮತ್ತು ಬಳಲಿದ ಜನರಿಗೆ ರಂಜನೆಯ ಆಚರಣೆಗಳು ಎದುರು ಬಂದು ನಿಲ್ಲುತ್ತಿದ್ದವು. ದೀಪಾಳಿಯ ನಂತರ ಕೆಡ್ಡಸ ತುಳುನಾಡಿನ ಮಹತ್ವದ ಹಬ್ಬಗಳಲ್ಲಿ ಒಂದಾಗಿತ್ತು. ಚಳಿಗಾಲ ಮುಗಿದು ಇನ್ನೇನೋ ಬೇಸಿಗೆ ಆರಂಭವಾಗುವ ಕಾಲದಲ್ಲಿ ಈ ಹಬ್ಬ. ಈಗಾಗಲೇ ಗಿಡ ಮರಗಳೆಲ್ಲಾ ಚಿಗುರಿ ಹೂ ಬಿಟ್ಟು ಫಲ ನೀಡುಲು ತಯಾರಾಗುವ ಕಾಲದಲ್ಲಿ ತುಳುವರ ಕೆಡ್ಡಸ. ಫಲವಂತಿಕೆಗೆ ಮತ್ತೆ ತಯಾರಾಗುವ ಪ್ರಕೃತಿಗೆ ನಮಿಸುವ ಕಾರ್ಯಕ್ರಮಗಳು.

ಈ ಎಲ್ಲಾ ಆಚರಣೆಗಳೂ ಅತ್ಯಂತ ಸಹಜವಾಗಿ ಮತ್ತು ಪರಸ್ಪರ ಒಂದಾಗಿ ನಡೆಸುವ ಆಚರಣೆಗಳಾಗಿದ್ದವು. ಇಲ್ಲಿ ಆಡಂಬರದ ಪ್ರಮಾಣಕ್ಕಿಂತ ಸಂತೋಷದ ಪ್ರಮಾಣ ಹೆಚ್ಚಾಗಿತ್ತು. ಆದರೆ ಇಂದು ಈ ರೀತಿಯ ಆಚರಣೆಗಳನ್ನು ವೈಯಕ್ತಿಕವಾಗಿ ಆಚರಿಸುವ ಪದ್ಧತಿ ಕಡಿಮೆಯಾಗಿದೆ. ಯಾವುದೋ ಸಂಘ ಸಂಸ್ಥೆಗಳು ಸಾಮೂಹಿಕವಾಗಿ ಆಚರಿಸುವ, ಅಲ್ಲಿ ಒಂದಷ್ಟು ಜನ ಮಾತ್ರ ಪ್ರಾಮುಖ್ಯ ಪಡೆಯುವ ಹಂತಕ್ಕೆ ತಲುಪಿದೆ. ಜನಪದ ಆಚರಣೆಗಳ ಸಾಲಿಗೆ ಇತರ ಅನೇಕ ಹಬ್ಬಗಳು ಸೇರಿವೆ. ರಾಷ್ಟ್ರೀಯ ಹಬ್ಬಗಳು, ರಾಜ್ಯ ಹಬ್ಬಗಳು, ಲೆಕ್ಕವಿಲ್ಲದಷ್ಟು ಜನ್ಮದಿನಾಚರಣೆಗಳು ತುಳುವರ ಜನಪದ ಆವರಣೆಗಳ ಮಹತ್ವ ಕಳೆಯುವಂತೆ ಮಾಡಿವೆ.

ಸಾಹಿತ್ಯಕ ಬದುಕು: ತುಳು ಜನಪದ ಸಾಹಿತ್ಯ ಅತ್ಯಂತ ಮೌಲ್ಯಯುತವಾದುದು. ಇಲ್ಲಿಯ ಭೂತಾರಾಧನೆ, ಬೇಸಾಯ ಮತ್ತು ಇತರ ಸಂದರ್ಭಕ್ಕೆ ಹೊಂದಿಕೊಂಡು ಜನಪದ ಸಾಹಿತ್ಯ ರೂಪುಗೊಂಡಿದೆ. ಇದರಲ್ಲಿ ಬೇಸಾಯದ ಕೊಡುಗೆÉ ಬಹಳ ಮಹತ್ವÀವಾದುದು. ಬಹಳ ವಿಸ್ತøತವಾದ ಕಥನ ಕಾವ್ಯದಂತಿರುವ ಪಾಡ್ದನ ಇಲ್ಲಿಯ ಭೂತಾರಾಧನೆಯ ಕೊಡುಗೆ. ಇದೇ ಪಾಡ್ದನ ಬೇಸಾಯದ ಸಂದರ್ಭದಲ್ಲಿ ಬಳಕೆಯಾದರೂ ಇದರ ಮಹತ್ವವಿರುವುದು ಭೂತಾರಾಧನೆಯಲ್ಲಿ. ಬಹಳ ದೀರ್ಘವಾದ ಮತ್ತು ಅಷ್ಟೇ ಕಥಾ ಹಿನ್ನಲೆಯನ್ನು ಹೊಂದಿದ ಅನೇಕ ಪಾಡ್ದನಗಳಿವೆ. ಮಹಾಕಾವ್ಯಗಳ ಸಾಲಿನಲ್ಲಿ ನಿಲ್ಲಬಲ್ಲ ಅನೇಕ ಕಾವ್ಯಗಳು ಪಾಡ್ದನರೂಪದಲ್ಲಿದೆ. ಕೋಟಿಚೆನ್ನಯ, ಸಿರಿ, ಕಲ್ಲುರ್ಟಿ, ದೇವುಪೂಂಜ, ಬಬ್ಬರ್ಯ, ಅನೇಕ ಅವಳಿವೀರರ ಪಾಡ್ದನಗಳು ಅತೀ ದೀರ್ಘವಾದುವು. ಈ ಪಾಡ್ದನಗಳು ಭೂತದ ಚರಿತ್ರೆ, ಅವುಗಳ ಅತಿಮಾನುಷ ಶಕ್ತಿ ಹಾಗೂ ಕಾರ್ಣಿಕದ ಬಗ್ಗೆ ವಿವರಿಸುವ ಕಾರಣ ತುಳುನಾಡಿನ ಮಹತ್ವದ ಆಕರಗಳಿವು.

ಪಾಡ್ದನದಂತಹಾ ವ್ಯಾಪ್ತಿ ಅಲ್ಲದಿದ್ದರೂ ಕಾವ್ಯಗಳ ಮಟ್ಟದಲ್ಲಿ ವಿಸ್ತಾರ ಹರಹು ಇರುವ ಜನಪದ ಕಾವ್ಯ ಕಬಿತ. ಇದು ನೇಜಿಗದ್ದೆಯಲ್ಲಿ ನಾಟಿ ಮಾಡುವ ಸಂದರ್ಭದಲ್ಲಿ ಹಾಡುವ ಕಾವ್ಯ. ಕೆಲಸದ ಹಾಡುಗಳೆಂದು ಗುರುತಿಸಲ್ಪಟ್ಟ ಕಬಿತವನ್ನು ರಾಗ ಮತ್ತು ಲಯಬದ್ಧವಾಗಿ ಹಾಡುವುದು ಕ್ರಮ. ಸಾಮಾನ್ಯವಾಗಿ ಲೌಕಿಕ ವಸ್ತುಗಳನ್ನು ಒಳಗೊಂಡ ಕಬಿತಗಳನ್ನು ಹಾಡುವುದಕ್ಕೆ ಯಾವುದೇ ನಿಯಮಗಳಿಲ್ಲ. ಅದರಲ್ಲೂ ಓಬೇಲೆಯಂತಹಾ ಕಬಿತ ಬೇರೆಬೇರೆ ಕಾರಣಗಳಿಗಾಗಿ ಮಹತ್ವ ಪಡೆದಿದ್ದವು. ಕಬಿತದಂತೆ ವಿಸ್ತಾರ ಗಾದೆಯ ಲೋಕ ತುಳುವರದು. ಬೇರೆಬೇರೆ ಸಂದರ್ಭಕ್ಕೆ ಪೂರಕವಾದ ಸಹಸ್ರಾರು ಗಾದೆಗಳು ತುಳುನಾಡಿನಲ್ಲಿದ್ದವು. ಅದೇ ರೀತಿ ಒಗಟುಗಳಿಗೂ ತುಳುನಾಡಿನಲ್ಲಿ ಕೊರತೆ ಇಲ್ಲ. ಎದುರ್‍ಕತೆ ಎಂದು ಕರೆಯುವ ಈ ಒಗಟುಗಳು ತುಳುವರ ಜಾಣ್ಮೆಯನ್ನು ಅಳೆಯುವ ಮಾಪನವಾಗಿತ್ತು. ಇದರೊಂದಿಗೆ ತುಳು ಕತೆಗಳೂ ಇವೆ. ದೀರ್ಘ ಕಥನಕಾವ್ಯಗಳು ವ್ಯಾಪಿಸಿರುವುದರಿಂದ ತುಳು ಕತೆಗಳ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಇದರೊಂದಿಗೆ ಉರಲ್‍ಗಳೂ ಒಂದು ಕಾಲದಲ್ಲಿ ನಿತ್ಯ ಕೇಳುವ ಸಾಹಿತ್ಯವಾಗಿತ್ತು.

ಕನ್ನಡ ಹಾಗೂ ತುಳು ಶಿಷ್ಟ ಸಾಹಿತ್ಯ ಬೆಳವಣಿಗೆ ಕಾಣುತ್ತಿದ್ದಂತೆ ಹಾಗೂ ಅಕ್ಷರ ಪರಂಪರೆಗೆ ಜನ ಹತ್ತಿರವಾಗುತ್ತಿದ್ದಂತೆ ಜನಪದ ಕಾವ್ಯಗಳಲ್ಲಿ ಅಳಿವು ಕಾಣಲಾರಂಭಿಸಿತು. ಇಂದು ಪಾಡ್ದನ ಹಾಡುವವರ ಮತ್ತು ಕಲಿಯುವವರ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಅದರೊಂದಿಗೆ ಅದನ್ನು ಬಳಸುವ ಮತ್ತು ಕಲಿಯುವ ಸಂದರ್ಭವೂ ಕಡಿಮೆ. ತುಳು ಜಾನಪದ ಸಾಹಿತ್ಯಗಳ ಬಳಕೆಯ ಕೊರತೆಯೇ ಅದರ ಅಳಿವಿಗೆ ಕಾರಣ. ಹಿಂದೆ ಬಳಕೆÀಯಾಗುತ್ತಿದ್ದ ಅನೇಕ ಸಂದರ್ಭಗಳು ಇಂದು ಇಲ್ಲ. ಆದ್ದರಿಂದ ಈ ಸಾಹಿತ್ಯಗಳು ಇನ್ನು ಕೆಲವೇ ವರ್ಷಗಳಲ್ಲಿ ಅಳಿಯುವ ಸಾಧ್ಯತೆ ತುಂಬಾ ಹೆಚ್ಚು.

ಸಾಂಸ್ಕøತಿಕ ಬದುಕು: ತುಳುವರ ಸಾಂಸ್ಕøತಿಕ ಬದುಕಿನಲ್ಲಿ ಕುಣಿತಗಳಿಗೆ ಅತ್ಯಂತ ಮಹತ್ವವಿದೆ. ಆಚರಣಾತ್ಮಕ ಮತ್ತು ಮನರಂಜನೆಯ ಹಿನ್ನಲೆಯಲ್ಲಿ ಈ ಕುಣಿತಗಳು ನಡೆಯುತ್ತಿದ್ದವು. ಆಟಿ ಕಳಂಜ, ಕರಂಗೋಲು, ಕಂಗಿಲ, ಮೂರ್ಲೆ ಕುಣಿತ, ಭೂತಗಳ ಕುಣಿತ, ಮಾರಿಕುಣಿತ, ಸಿದ್ಧವೇಷ, ಬಾಲೆಸಾಂತು ಇತ್ಯಾದಿಗಳು ಆಚರಣಾತ್ಮಕ ಕುಣಿತಗಳು. ಈ ಕುಣಿತಕ್ಕೆ ಒಂದು ಉದೇಶವಿತ್ತು. ಸಾಮಾನ್ಯವಾಗಿ ಊರಿನ ಮಾರಿಕಳೆಯುವ, ಜನರಿಗೆ ಸಂಮೃದ್ಧಿಯನ್ನು ಹಾರೈಸುವ ಇತ್ಯಾದಿ. ಇದನ್ನು ನಡೆಸುದಕ್ಕೆ ನಿರ್ದಿಷ್ಟ ಅವಧಿಯೂ ಇತ್ತು, ಜನಾಂಗಗಳೂ ಇದ್ದವು. ಈ ಕುಣಿತಗಳನ್ನು ನಂಬಿಕೆಯ ನೆಲೆಯಲ್ಲಿ ನಡೆಸುತ್ತಿದ್ದ ತುಳುವರಿಗೆ ಅದರಿಂದ ಒಳ್ಳೆಯದಾಗುತ್ತದೆ ಎನ್ನುವ ಭರವಸೆಯೂ ಇತ್ತು.

ಇದಲ್ಲದೇ ಅನೇಕ ಕುಣಿತಗಳು ಮನರಂಜನೆಯ ನೆಲೆಯಲ್ಲೂ ನಡೆಯುತ್ತಿದ್ದವು. ದುಡಿ ಕುಣಿತ, ಚೆನ್ನು ಕುಣಿತ, ಮದಿಮಳ್ ಕುಣಿತ, ಪಿಲಿಪಂಜಿ ಕುಣಿತ, ನವರಾತ್ರಿಯ ಹುಲಿಕುಣಿತ (ಇವುಗಳಲ್ಲಿ ಕೆಲವು ಆರಾಧನಾ ಕುಣಿತಗಳೂ ಹೌದು)ಇವೇ ಮೊದಲಾದವು. ಇವುಗಳಿಗೂ ನಿರ್ದಿಷ್ಟ ಕಾಲ ಮತ್ತು ಜನಾಂಗಗಳಿದ್ದರೂ ಈ ಕುಣಿತಗಳಿಗೆ ಯಾವುದೇ ಆಚರಣೆಯ ನಿರ್ಬಂಧಗಳಿರಲಿಲ್ಲ. ಸಾಮಾನ್ಯವಾಗಿ ಇಲ್ಲಿ ಜನಪದರು ನಮ್ಮ ಆರ್ಥಿಕ ಬದುಕನ್ನು ನಿಭಾಯಿಸುವ ಉದ್ದೇಶದಿಂz ಈ ಕುಣಿತದ ಮೊರೆಹೋಗುತ್ತಿದ್ದರು. ಇಂದು ಈ ಮೇಲಿನ ಕುಣಿತಗಳು ವೇದಿಕೆಗೆ ಸೀಮಿತವಾಗಿವೆ. ಹೆಸರನ್ನು ಮಾತ್ರ ಇಟ್ಟುಕೊಂಡು ಬೇರೆಯದೇ ಕುಣಿತಗಳು ಈ ವೇದಿಕೆಯಲ್ಲಿ ನಡೆಯುತ್ತವೆ. ಕುಣಿತದ ಆಶಯ ಸಂಪೂರ್ಣ ಬದಲಾಗಿದ್ದು ಹಣ, ಹೆಸರು, ಪ್ರಶಸ್ತಿ ಇತ್ಯಾದಿ ಸಂಪಾದಿಸುವುದೇ ಮುಖ್ಯ ಉದ್ದೇಶ.

ಭೌತಿಕ ಬದುಕು: ಭೌತಿಕ ವಸ್ತುಗಳೆಂದರೆ ನಿತ್ಯ ಬಳಸುವ ವಸ್ತುಗಳು ಎಂದರ್ಥ. ಅದು ಉಳುಮೆಯ ನೇಗಿಲಿನಿಂದ ಹಿಡಿದು ಕೈ ತೊಳೆಯಲು ಹಾಕುತ್ತಿದ್ದ ಗೆರಟೆಯವರೆಗೆ. ಇವೆಲ್ಲವೂ ಜನಪದರು ತಾವೇ ತಯಾರಿಸಿದ ವಸ್ತುಗಳಾಗಿದ್ದವು. ಕಬ್ಬಿಣದ ಬಳಕೆ ಕಡಿಮೆ ಇದ್ದುದರಿಂದ ಮರ, ಬಳ್ಳಿ, ಎಲೆ, ಕಲ್ಲು, ಮಣ್ಣು ಇತ್ಯಾದಿ ಮೂಲ ವಸ್ತುಗಳನ್ನು ಇಟ್ಟುಕೊಂಡು ತಮಗೆ ಬೇಕಾದ ವಸ್ತುಗಳನ್ನು ತಯಾರಿಸುತ್ತಿದ್ದರು. ಇಂತಹಾ ವಸ್ತುಗಳಲ್ಲಿ ಗೃಹೋಪಯೋಗಿ ವಸ್ತುಗಳಲ್ಲದೇ ಇತರ ಕೆಲಸಕಾರ್ಯಗಳಿಗೆ ಬಳಸುವ ವಸ್ತುಗಳೂ ಇದ್ದವು. ಇಲ್ಲಿರುವ ವಸ್ತುಗಳ ತಯಾರಿಗೆ ನುರಿತ ಕುಶಲಕರ್ಮಿಗಳು ತುಳುನಾಡಿನಲ್ಲಿದ್ದರು. ಇವರಿಗೆ ತುಳುನಾಡಿನ ಸಾಮಾಜಿಕ ನೆಲೆಯಲ್ಲಿ ಪ್ರತ್ಯೇಕ ಸ್ಥಾನಮಾನಗಳೂ ಇತ್ತು. ಆದರೆ ಯಂತ್ರಗಳ ಪ್ರವೇಶದಿಂದ ಅನೇಕ ಕುಶಲಕರ್ಮಿ ಕೆಲಸಗಳು ನಾಶವಾಗಿವೆ. ಇಂದು ಜನಪದೀಯ ವಸ್ತುಗಳು ಪೂರ್ಣವಾಗಿ ತನ್ನ ಅಸ್ಥಿತ್ವವನ್ನು ಕಳೆದುಕೊಂಡಿವೆ. ಯಾವುದೇ ವಸ್ತುಗಳು ಗುಡಿಕೈಗಾರಿಕೆಯಿಂದ ತಯಾರಾದರೂ ಅದರ ಬಳಕೆ ಕಡಿಮೆಯಾಗಿದೆ.

ತುಳುನಾಡಿನ ಈ ಮೇಲಿನ ಬದುಕು ಗತಕಾಲದ್ದು. ಆಧುನಿಕವಾದ ಮತ್ತು ತಾಂತ್ರಿಕವಾದ ಬೆಳವಣಿಗೆಯಿಂದ ತುಳುನಾಡಿನ ಜನಜೀವನ ಇಂದು ಬದಲಾಗಿದೆ. ಸಾರಿಗೆ ಸಂಪರ್ಕ ಬಹಳ ಮುಂದುರಿದಿದೆ. ಭೂಸಾರಿಗೆಯ ಜೊತೆಗೆ ಕರಾವಳಿಯ ಜಲಸಾರಿಗೆ ಅತ್ಯಂತ ಮಹತ್ವ ಪಡೆದಿದೆ. ಅಂತರಾಷ್ಟ್ರೀಯ ವಾಯುಸಾರಿಗೆಯೂ ಕರಾವಳಿಯಲ್ಲಿದೆ. ಇಡೀ ನಾಡಿಗೆ ಇಂಧನ ಹಂಚುವ ಕೇಂದ್ರ ತುಳುನಾಡಿನಲ್ಲಿದೆ. ಒಟ್ಟು ದೇಶದಲ್ಲೇ ದಾಖಲೆಯ ಬ್ಯಾಂಕಿಂಗ್ ವ್ಯವಸ್ಥೆ ಇಲ್ಲಿಯದು. ಅನೇಕ ಉನ್ನತ ಮಟ್ಟದ ಶಿಕ್ಷಣ ಸಂಸ್ಥೆಗಳಿಗೆ ತುಳುನಾಡು ಹೆಸರಾಗಿದೆ. ವಿಶ್ವದಲ್ಲೇ ಶ್ರೇಷ್ಟವೆನಿಸುವ ಶಿಕ್ಷಣ ಕೇಂದ್ರಗಳನ್ನು ಆಸ್ಪತ್ರೆಗಳನ್ನು ಇಲ್ಲಿ ತೆರೆಯಲಾಗಿದೆ. ಧಾರ್ಮಿಕ ಕೇಂದ್ರಗಳೂ ಬೃಹತ್ ಪ್ರಮಾಣದಲ್ಲಿ ಜನಾಕರ್ಷಣಾ ಕೇಂದ್ರಗಳಾಗಿವೆ. ಪರಿಸರಕ್ಕೆ ಮಾರಕವಾಗುವ ಅನೇಕ ಕೈಗಾರಿಕೆಗಳು ತಲೆ ಎತ್ತಿ ನಿಂತಿವೆ. ಇದರೊಂದಿಗೆ ಪ್ರಾಕೃತಿಕ ಸಂಪತ್ತುಗಳನ್ನು ಬೇಕಾಬಿಟ್ಟಿಯಾಗಿ ಬಳಸುವ ವ್ಯವಸ್ಥೆ ನಿರ್ಮಾಣವಾಗಿದೆ. ಇಲ್ಲಿಯ ಮರಗಳ ಜೊತೆಗೆ ಮರಳು, ಕಲ್ಲುಗಳಿಗೂ ಬಹುಬೇಡಿಕೆ ಇದೆ. ಅನೇಕ ವಾಣಿಜ್ಯಕೇಂದ್ರಗಳು ಕರಾವಳಿಯಾದ್ಯಂತ ತಲೆ ಎತ್ತಿವೆ. ಪ್ರವಾಸೋದ್ಯಮ, ಮತ್ಸೋದ್ಯಮ, ವಾಣಿಜ್ಯೋದ್ಯಮಗಳ ಭರಾಟೆಯಲ್ಲಿ ತುಳುನಾಡಿನ ಜಾನಪದ ಬದುಕು ಮಸುಕಾಗುತ್ತಿದೆ. ಆದ್ದರಿಂದ ಈ ಮೇಲಿನ ಎಲ್ಲ ಬದಲಾವಣೆಯ ತೀವ್ರತೆಯಿಂದ ಮೂಲ ಅಸ್ಥಿತ್ವಕ್ಕೆ ಸಂಚಕಾರವಾಗುವ ಲಕ್ಷಣಗಳನ್ನು ಕಳೆದ ತಿಂಗಳು ನಮ್ಮ ಸುತ್ತಮುತ್ತ ನಾವು ನೋಡಿದ್ದೇವೆಯೇ ಎನ್ನುವುದು ಇನ್ನೂ ಉತ್ತರ ಸಿಗದ ಪ್ರಶ್ನೆ.

ಡಾ.ಸುಂದರ ಕೇನಾಜೆ


Comments