ಬಿ.ಎಸ್. ಏತಡ್ಕರ ಕತೆಗಳ ಒಳಧ್ವನಿ

ವಸ್ತುವೊಂದು ಸಿಕ್ಕಾಗ ಅದನ್ನು ಕತೆಯಾಗಿಸುವ ತಂತ್ರವನ್ನು ಬಳಸಿಕೊಂಡವ ಕತೆಗಾರನಾಗುತ್ತಾನೆ. ಇಲ್ಲಾ ಅದೇ ವ್ಯಕ್ತಿ ವರದಿಗಾರನಾಗುತ್ತಾನೆ. ವರದಿಗಾರನೋರ್ವ ಕತೆಗಾರನಾಗಬೇಕಾದರೆ ಆತನಲ್ಲಿ ಇರಲೇಬೇಕಾದ ಸಂವೇದನಾಶೀಲ ಗುಣವಿರಬೇಕು ಮತ್ತು ಇರಲೇಬಾರದ ಸೃಜನಶೀಲ ಗುಣವೂ ಇರಬೇಕು. ಈ ಎರಡು ಗುಣಗಳಿರುವ ವರದಿಗಾರ ಕತೆಗಾರರಾಗುತ್ತಾರೆ ಎನ್ನುವುದಕ್ಕೆ ಬಿ.ಎಸ್. ಏತಡ್ಕ ಒಳ್ಳೆಯ ಉದಾಹರಣೆ. ಚೇತೋಹಾರಿಯಾದ ಒಂದಷ್ಟು ಕತೆಗಳ ಗುಂಪೊಂದನ್ನು ನಮ್ಮ ಕೈಗಿಡುತ್ತಿದ್ದಾರೆ. ‘ತಿರುವು’ಸಂಕಲನದ ಈ ಹದಿಮೂರು ಕತೆಗಳು ಒಂದಕ್ಕಿಂತ ಒಂದು ಓದಿಸಿಕೊಳ್ಳುವ ಗುಣವನ್ನು ಹೊಂದಿದವುಗಳು. ಜೊತೆಗೆ ಒಟ್ಟಿಗೆ ಓದಿದಾಗ ಏಕಸೂತ್ರವೊಂದರ ಪೋಣಿಕೆಗೆ ಒಳಗಾದವುಗಳು. ಆದ್ದರಿಂದ ಈ ಕೃತಿಯನ್ನು ಕೈಯಲ್ಲಿ ಹಿಡಿದರೆ ಕೊನೆಯ ಪುಟದವರೆಗೆ ಓದಿಯೇ ಕೆಳಗಿಡಬೇಕು. ಆಗ ಈ ಕತೆಗಳ ಒಳ ಧ್ವನಿ ಅರ್ಥವಾಗುತ್ತದೆ.
 
ಮಾಧ್ಯಮ ರಂಗದ ಮೂರನೇ ಕಣ್ಣು ಮತ್ತು ಸಾಮಾಜಿಕ ಸಂಬಂಧಗಳ ಮರುಸೃಷ್ಟಿ ಇಲ್ಲಿ ಕತೆಗಳ ರೂಪ ಪಡೆದಿವೆ.
ಇಲ್ಲಿಯ ಎಲ್ಲಾ ಕತೆಗಳ ಹಿಂದೆ ಕತೆಗಾರನೇ ಕಾಣಿಸಿಕೊಳ್ಳುವ ತಂತ್ರದಿಂದಾಗಿ ಇದೊಂದು ಅನುಭವದ ಕುಲುಮೆಯಲ್ಲೂ
ಬೇಯಲ್ಪಟ್ಟಿದೆ. ಕಲ್ಪನೆಗಳನ್ನು ವಾಸ್ತವಕ್ಕಿಳಿಸುವ ಸಂದರ್ಭದಲ್ಲಿ ಭಾಷೆಯ ಮೇಲಿನ ಹಿಡಿತ ಅನೇಕ ಬಾರಿ ವಾಚಾಳಿತನದಿಂದ ದೂರ ನಿಲ್ಲಿಸಿರುವುದೂ ಈ ಕತೆಗಳ ಹೆಗ್ಗಳಿಕೆ ಎಂದು ಮೊದಲು ತಿಳಿಸಲು ಬಯಸುತ್ತೇನೆ.

ಸಂಕಲನದ ಮೊದಲ ಕತೆ ‘ವಾಸ್ತವ’, ಸಮಾಜದಲ್ಲಿ ಅವಾಸ್ತವವಾಗಿ ಕಾಣುವ ಗುಣವೊಂದನ್ನು ಮೀರಿರುವ ಆದರ್ಶವಾದಿ
ನೆಲೆಯದ್ದಾಗಿದೆ. ಅಂದರೆ ಹೇಳುವ ಮತ್ತು ಮಾಡುವ ಕ್ರಿಯೆಯ ವಿರೋಧಾಭಾಸವನ್ನು ಮೆಟ್ಟಿನಿಂತು, ಹೇಳಿದಂತೇ ಮಾಡಲು ಸಿದ್ದವಾಗಿರುವ ಸಂದರ್ಭವನ್ನು ವಿವರಿಸುತ್ತದೆ. ಇಂತಹಾ ಸಂದರ್ಭಗಳು ಹೆಚ್ಚು ಬಾಧಿಸುವುದು, ವ್ಯಕ್ತಿಯ ತೀರಾ ವೈಯಕ್ತಿಕ ವಿಚಾರಗಳಿಗೆ ಬಂದಾಗ ಮಾತ್ರ. ಆ ಸಂದರ್ಭ ಅನೇಕ ಬಾರಿ ತನ್ನ ಸತ್ವ ಪರೀಕ್ಷೆಯೂ ಆಗಿರುತ್ತದೆ. ಆ ಸಂದರ್ಭದ ತೀರ್ಮಾನವು ಒಬ್ಬ ವ್ಯಕ್ತಿಯ ಒಳಗಿನ ಶಕ್ತಿಯ ಪ್ರದರ್ಶನವಾಗಿಯೂ ಹೊರಹೊಮ್ಮುತ್ತದೆ. ಅಂತಹಾ ಶಕ್ತಿ ಈ ಕಥಾ ನಾಯಕನದ್ದಾಗಿದೆ, ಇದು ಈ ಕತೆಯ ಗೆಲುವು ಕೂಡ. ‘ತಿರುವು’ತಂತ್ರದ ನೆಲೆಯಲ್ಲಿ ಈ ಸಂಕಲನದ ಉತ್ತಮ ಕತೆಗಳಲ್ಲಿ ಒಂದೂ ಹೌದು. ಪ್ರತೀ ಹಂತದಲ್ಲೂ ಕುತೂಹಲ ಮೂಡಿಸುತ್ತಾ ಸಾಗುವ ಇಲ್ಲಿಯ ನಿರೂಪಣೆ ಹೀಗೆ ಆಗಬಹುದೆಂಬ ಸಾಧ್ಯತೆಯನ್ನು ಮುಚ್ಚಿಡುತ್ತಾ ಸಾಗುವುದೇ ಇದರ ವಿಶೇಷ.

‘ಸಮನಾಂತರ’ಹಲವು ದಾಂಪತ್ಯದಲ್ಲಿನ ನೈಜತೆಯನ್ನು ಚಿತ್ರಿಸುವ ವಸ್ತು. ಇಲ್ಲಿ ಕತೆಗಾರ ಬಹಳ ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಾ ಅಳೆದು ತೂಗಿ ಕತೆ ಬೆಳೆಸುತ್ತಾರೆ. ಇದು ಕತೆ ಹೇಳುವಲ್ಲಿ ಇವರಿಗಿರುವ ಹಿಡಿತಕ್ಕೆಸಾಕ್ಷಿಯಾಗಿದೆ. ಅಭಿಪ್ರಾಯ ಬೇಧ ಮತ್ತು ತಾನು ಹುಟ್ಟಿ ಬೆಳೆದ ಪರಿಸರದ ಭಿನ್ನತೆ ಅನೇಕ ಬಾರಿ ಹೊಂದಾಣಿಕೆಗೆ ಅಡ್ಡಿಯಾದರೂ ಅಲ್ಲೊಂದು ಹೊಂದಾಣಿಕೆ ಇರುತ್ತದೆ. ಇದು ಸಮಾಜದ ಎಲ್ಲ ಸ್ತರಗಳಲ್ಲೂ ಕಾಣುವುದು ಸಾಮಾನ್ಯ. ಯಾವುದೋ ಒಂದು ಹಿನ್ನಲೆಯ ಆಯ್ಕೆ ಇನ್ನೊಂದಕ್ಕೆ ಧಕ್ಕೆಯಾಗುತ್ತದೆ ಎನ್ನುವುದು ಈ ಕತೆಯಿಂದ ತಿಳಿದುಕೊಳ್ಳಬಹುದು. ‘ಗುಬ್ಬಿಗಳು’ಜನಪ್ರಿಯ ಶೈಲಿಯ ಕತೆ. ಭಗ್ನಪ್ರೇಮಕ್ಕೆ ಗುಬ್ಬಿಗೂಡು ಒಂದು ರೂಪಕವಾಗಿ ಇಲ್ಲಿದೆ.

‘ಭೇಟಿ’ತನ್ನ ಕೊನೆಯ ಅನಿರೀಕ್ಷಿತ ತಿರುವಿನಿಂದ ಒಂದು ಕ್ಷಣ ಓದುಗನನ್ನೂ ನಿಟ್ಟುಸಿರು ಬಿಡುವಂತೆ ಮಾಡುವ ಕತೆ. ತನ್ನ
ಕೌಟುಂಬಿಕ ಬದುಕಿನ ಕಹಿ ಹಿನ್ನಲೆಗಳು ಒಬ್ಬ ಯುವಕನ ಬದುಕನ್ನು ಹೇಗೆ ಘಾತುಕವಾಗಿಸುತ್ತದೆ ಎನ್ನುವ ಸೂಕ್ಷ್ಮ ವಿಶ್ಲೇಷಣೆ ಇಲ್ಲಿಯದು. ಆದರೆ ಮೇಲ್ನೋಟಕ್ಕೆ ಕತೆ ಸಾದ ಸೀದಾವಾಗಿಯೇ ಇದೆ. ಆದರೆ ಒಳಗೊಂದು ಕ್ರೌರ್ಯದ ಮುಖ ಸುರುಳಿಸುತ್ತಿ ಕುಳಿತಿರುತ್ತದೆ. ಅದಕ್ಕೆ ಯುವಕ ಮಾಧ್ಯಮವಾದರೆ, ಆತನ ತಂದೆ ತಾಯಿ ಪ್ರೇರಕರಾಗಿರುತ್ತಾರೆ ಎನ್ನುವುದು ಸತ್ಯ. ‘ನಾಯ್ಯ’ಈ ಸಂಕಲನದ ಅತ್ಯುತ್ತಮ ಕತೆಯಾಗುವ ಎಲ್ಲಾ ಲಕ್ಷಣವನ್ನೂ ಹೊಂದಿದ್ದ ಕತೆ. ಆದರೆ ಕತೆಗಾರ ಇದನ್ನು ಅಪೂರ್ಣಗೊಳಿಸಿ ಓದುಗರ ತೀರ್ಮಾನಕ್ಕೆ ಬಿಟ್ಟದ್ದು ಕುತೂಹಲಕ್ಕೆ ವಿಘ್ನ ತಂದಂತೆ ಆಗಿದೆ. ಹಾಗೆಂದು ಎಲ್ಲವನ್ನೂ ಕತೆಗಾರನೇ ಹೇಳಿಬಿಡಬೇಕೆಂದೇನೂ ಇಲ್ಲ. ಆದರೆ ಪೂರ್ಣಗೊಳಿಸುವ ಜವಾಬ್ದಾರಿಯಂತೂ ಇದ್ದೇ ಇದೆ. ಮುಂದಿನ ವಾರಕ್ಕೆ ಸಶೇಷವಾಗುವ ಮೂಲಕ ಜಯಂತಿಗೆ ನಾಯ್ಯ ಸಿಗೂದಿಲ್ಲವೆಂದೂ ಅರ್ಥೈಸಬಹುದು. ಆದರೆ ಅದು ಖಚಿತವೆನ್ನುವಂತಿಲ್ಲ. ಆದರೆ ನ್ಯಾಯ ತಪ್ಪಾದರೂ ಸರಿಯಾದರೂ ಖಚಿತವೇ ಆಗಿರುತ್ತದೆ.

‘ಮೋಹ’, ‘ಹುಚ್ಚಿ’ಈ ಕತೆಗಳ ವಸ್ತು ಜನಪ್ರಿಯ ಶೈಲಿಯದ್ದಾದರೂ ಓದುಗನನ್ನು ಹಿಡಿದಿಡುವ ಸಾಮಥ್ಯ ಹೊಂದಿದ್ದಾಗಿದೆ.
‘ಬೂದು ಕುಂಬಳ ಕಾಯಿ’, ಭ್ರಮಾತ್ಮಕವೆಂದು ಕಂಡರೂ ಇವತ್ತು ಅನೇಕ ಸಂದರ್ಭದಲ್ಲಿ ವಾಸ್ತವವಾಗಿ ಕಾಣುವುದೂ ಇದೆ. ಅನೇಕ ರೈತರು ಇಂತಹಾ ಭ್ರಮೆಗಳಿಂದಲೇ ಸಾಲದ ಪಾಶಕ್ಕೆ ಸಿಲುಕಿ ತಮ್ಮ ಅಂತ್ಯವನ್ನು ಕಾಣುವುದೂ ಇಂದಿನ ಸಾಮಾಜಿಕ ಸಮಸ್ಯೆಗಳಲ್ಲಿ ಒಂದಾಗುತ್ತಿದೆ. ವಂಚಕ ಸಮಾಜ ಪ್ರಕಾಶ ರಾಯರಂತಹ ಮುಗ್ಧ ಕನಸುಗಾರರ ಕನಸುಗಳಿಗೆ ದಾಳಿ ಇಟ್ಟು ಲೂಟಿ ಮಾಡುತ್ತಿರುವುದು ಭ್ರಮೆಯಲ್ಲ. ಆದ್ದರಿಂದ ಕನಸು ಕಾಣುವಾಗಲೂ ತನ್ನ ಹಸು ಬಳ್ಳಿಯನ್ನೇ ಕಿತ್ತು ತಿನ್ನುವಲ್ಲಿಯವರೆಗೆ ಮೈಮರೆಯಬಾರದುಎನ್ನುವುದು ಇಲ್ಲಿಯ ಸತ್ಯ.

ಕೇರಳ ಮತ್ತು ಕೊಡಗಿನ ದುರಂತವನ್ನು ನೆನಪಿಸುವ ಕತೆ ‘ಪ್ರಳಯ’, ತಾನು ಸಮಾಜದ ಜೊತೆಗೆ ಇಟ್ಟುಗೊಂಡ ಸಂಬಂಧಗಳು ಹೇಗೆ ಕೊನೆಗೊಂದು ಹುಲ್ಲು ಕಡ್ಡಿಯೂ ಹತ್ತಿರ ಬಾರದಂತೆ ಮಾಡುತ್ತದೆ, ಕೆಲವು ಬಾರಿ ಹತ್ತಿರ ಬಂದರೂ ಅದನ್ನು ಹೇಗೆ ತಿರಸ್ಕರಿಸಿ ತಮ್ಮ ಅಂತ್ಯಕ್ಕೆ ತಾವೇ ಕಾರಣರಾಗುತ್ತೇವೆ ಎನ್ನುವುದನ್ನು ಮನೋಜ್ಞವಾಗಿ ತಿಳಿಸುವ ಕತೆ ಈ ಪ್ರಳಯ. ಈ ಸಂಕಲನದ ಕೊನೆಗೆ ಒಂದೆರಡು ಮಿನಿಕತೆಗಳಿವೆ. ಅನಿರೀಕ್ಷಿತ ತಿರುವಿನ ಮುಕ್ತಾಯದಿಂದ ಈ ಕತೆಗಳು ನಮ್ಮನ್ನು ಹಿಡಿದಿಡುತ್ತವೆ.

ಇಲ್ಲಿಯ ಬಹುತೇಕ ಕತೆಗಳ ವಸ್ತು ಪ್ರೀತಿ ಪ್ರೇಮದ ಸುತ್ತಲೇ ಇದೆ. ದುರಂತದಲ್ಲಿ ಅಂತ್ಯಗೊಳ್ಳುವ ಭಾವನೆಯಾದ ದುಃಖ, ಕೋಪ, ಭಯವನ್ನು ಸೂಚಿಸುತ್ತಲೂ ಇರುತ್ತದೆ. ಆದರೆ ಭಾವನೆಗಳ ನಾಲ್ಕು ಮುಖಗಳಲ್ಲಿ ಸಂತೋಷ ಒಂದನ್ನು ಹೊರತುಪಡಿಸಿ ಉಳಿದ ಮೂರೂ ಮುಖಗಳು ದುರಂತದ್ದೇ ಆಗಿರುವಾಗ ಅದರ ವ್ಯಾಪ್ತಿಯಲ್ಲಿ ಹಿರಿತನವಿರುವುದು ಸಹಜವೇ. ಸಮಾಜ ಸಂತೋಷದ ಮುಖವನ್ನು ಪಡೆಯಲು ಹೋಗಿ ತನ್ನ ಅರಿವಿನ ಕೊರತೆಯಿಂದ ದು:ಖದ ಇಲ್ಲಾ ಭಯ, ಕೋಪದ ಸ್ಥಿತಿಯನ್ನು ಕಾಣುತ್ತದೆ. ಇಲ್ಲಿ ಹೇಳುವ ಎಲ್ಲಾ ಕತೆಗಳೂ ವ್ಯಕ್ತಿಯ ಅರಿವಿನ ಕೊರತೆಯ ವಿಪರ್ಯಾಸಗಳನ್ನೇ ಹೇಳುವಂತವುಗಳು. ಆದರೆ ಈ ದುರಂತದ ಎಳೆಯೊಂದನ್ನು ಕತೆಗಾರ ಮೊದಲೇ ಸೂಕ್ಷ್ಮವಾಗಿ ತೆರೆದಿಡುವುದು ಮನೋವೈಜ್ಞಾನಿಕ ವಿಶ್ಲೇಷಣೆಯ ಸೂತ್ರ. ಈ ಸೂತ್ರ ಪ್ರತೀ ಕತೆಗಳಲ್ಲೂ ಗುರುತಿಸಲು ಸಾಧ್ಯವಿದೆ.
ತಾನು ಹೇಳಬೇಕಾದ ವಿಚಾರವನ್ನು ಹೇಗೆ ಹೇಳಬೇಕೆಂಬ ಅರಿವು ಮತ್ತು ಎಚ್ಚರ ಬಿ.ಎಸ್. ಏತಡ್ಕರಲ್ಲಿ ಸಮರ್ಥವಾಗಿಯೇ
ಇದೆ. ಅದನ್ನು ಇನ್ನೂ ಖಚಿತವಾಗಿ ಹೇಳುವ ಸಾಧ್ಯತೆಯೂ ಇದೆ. ಆಸಾಧ್ಯತೆ ಕತೆ ಬರೆದಂತೆ ಸಿದ್ದಿಸುವ ಕಲೆಯಾಗಿದೆ. ಆ
ಕಲೆಯೇ ಏತಡ್ಕರಿಗೆ ಸಿದ್ದಿಸಲಿ, ಆ ದೃಷ್ಟಿಯಿಂದ ಇವರಿಂದ ಇನ್ನೂ ಹೆಚ್ಚಿನ ಕತೆಗಳು ಮೂಡಿಬರಲಿ, ಅದು ಕನ್ನಡ ಕಥಾಲೋಕದ ಕೊರತೆಯನ್ನು ನೀಗಿಸುವ ಕೈದೀವಿಗೆಯಾಗಲಿ ಎಂದು ಪ್ರೀತಿಯಿಂದ ಆಶಿಸುತ್ತೇನೆ.

(ಮುನ್ನುಡಿಯಿಂದ, ದಿನಾಂಕ:23-02-2019) ಡಾ.ಸುಂದರ ಕೇನಾಜೆ.

Comments