ಗೊರವರ ಒಳಗಿನ ಮೈಲಾರ
ಇವರು ಗೊರವರು. ಜಾತಿ, ಮತಗಳನ್ನು ಮೀರಿದ ಮೈಲಾರಲಿಂಗನ ಪ್ರಚಾರಕರು. ಹಾಡು, ಕುಣಿತ, ಆಚರಣೆ, ಪವಾಡಗಳ ಮೂಲಕ ಮೈಲಾರನನ್ನು ಜೀವಂತವಾಗಿರಿಸಿದವರು. ಕೋರಿಅಂಗಿ, ಕರಡಿ ಕೂದಲು, ಡಮರುಗ ಮೊದಲಾದ ವಿಭಿನ್ನ ವೇಷಭೂಷಣಗಳು, ಹೂಂಕಾರ, ಪ್ರಾಣಿವರ್ತನೆ, ಹಾಗೂ ಭಯಾನಕ ಹಾವ-ಭಾವಗಳು, ಭಿಕ್ಷೆ, ದೀಕ್ಷೆ, ಸಂಸಾರ ಇತ್ಯಾದಿ ಜೀವನಕ್ರಮಗಳು ಇವೆಲ್ಲನ್ನು ರೂಢಿಸಿಕೊಂಡವರು. ಇವರು ಕರ್ನಾಟಕದ ಭಕ್ತಿ ಪರಂಪರೆಯ ಪ್ರತಿನಿಧಿಗಳೂ ಹೌದು. ಮೈಲಾರ ಕ್ಷೇತ್ರಗಳ ಸುತ್ತಮುತ್ತ ನೆಲೆಸಿರುವ ಇವರು ಅಲೆಮಾರಿ ಭಕ್ತರೂ ಆಗಿದ್ದಾರೆ. ಸಾಂಸ್ಕøತಿಕ ಬದುಕಿನೊಂದಿಗೆ ಧಾರ್ಮಿಕ ಪ್ರಚಾರವನ್ನೂ ಸಂವೃದ್ಧಗೊಳಿಸುತ್ತಾ ಬಂದವರು.
ಮೈಲಾರಲಿಂಗ ದಖ್ಖನ್ ಪ್ರಾಂತ್ಯದ ಜನರೊಂದಿಗೆ ಅವಿನಾಭಾವ ಸಂಬಂಧ ಇರಿಸಿಕೊಂಡ ದೈವ. ಶಿವನ ಅಂಶವೆಂದು ತಿಳಿದ ಈತನ ಬಗ್ಗೆ ಪೌರಾಣಿಕ ಕತೆಗಳಿವೆ, ಅಷ್ಟೇ ಪರಿಣಾಮಕಾರಿಯಾದ ಜಾನಪದ ಕತೆಗಳೂ ಇವೆ. ಶಿಷ್ಟರ ಪ್ರಕಾರ ಲಿಂಗರೂಪಿಯಾಗಿ ಉದ್ಭವಿಸಿದ. ಅದೇ ಜನಪದರ ಪ್ರಕಾರ ಗೊರವರೂಪಿಯಾಗಿ ಅವತರಿಸಿದ. ಮಧ್ಯ ಕರ್ನಾಟಕ ಭಾಗದಲ್ಲಿದ್ದ ಅಸುರರನ್ನು ಸಂಹರಿಸಿದ. ಭೂಲೋಕದ ಮೂವರು ಹೆಣ್ಣನ್ನು ಸಾಹಸದಿಂದ ವರಿಸಿದ. ಆ ಮೂಲಕ ಸಾವಿರ ವರ್ಷಗಳ ಹಿಂದೆಯೇ ಜಾತೀಯತೆಯನ್ನು ದಿಕ್ಕರಿಸಿದ. ತನ್ನ ಅಕ್ಕಪಕ್ಕಗಳಲ್ಲೇ ಇವರನ್ನೂ ಆರಾಧನೆಗೆ ಒಳಪಡಿಸಿದ. ಈ ಎಲ್ಲಾ ಘಟನೆಗಳನ್ನು ತಲತಲಾಂತರದಿಂದ ವರ್ಗಾಯಿತ್ತಾ ಬಂದವರೇ ನಮ್ಮ ಮುಂದಿರುವ ಗೊರವರು.
ದೀಕ್ಷೆ ಈ ಗೊರವ ಪಂಥವನ್ನು ಬೆಂಬಬಲಿಸುವ ಮೊದಲ ಹೆಜ್ಜೆ. ದೀಕ್ಷೆ ಇಲ್ಲದ ಹುಟ್ಟು ಪಡೆದ ಗೊರವರೂ ಈ ಪಂಥದಲ್ಲಿದ್ದಾರೆ. ಲಿಂಗಬೇಧವಿಲ್ಲದೇ ಗೊರವಿಯರಿಗೂ ಇಲ್ಲಿ ಅವಕಾಶವಿದೆ. ಈ ಗೊರವರಲ್ಲದೇ ಮನೆದೇವರೆಂದು ಮೈಲಾರನ್ನು ಆರಾಧಿಸುವ ದೊಡ್ಡ ಜನ ಸಮುದಾಯವಿದೆ. ಸಮಾಜದ ಎಲ್ಲ ವರ್ಗದ ಜನರೂ ಇಲ್ಲಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಆಂದ್ರ, ಗೋವಾ ಈ ವ್ಯಾಪ್ತಿ ಮೈಲಾರನದ್ದಾಗಿದೆ. ಕರ್ನಾಟಕದಲ್ಲಿ ಈತ ಮೈಲಾರ, ಮಾಲತೇಶ, ಮಲ್ಲಿಕಾರ್ಜುನ ಹೀಗೆ ನಾನಾ ಹೆಸರಿನವನಾದರೆ, ಮಹಾರಾಷ್ಟ್ರದಲ್ಲಿ ಖಂಡೋಬ, ಅದೇ ಆಂದ್ರ ತೆಲಂಗಾಣಗಳಲ್ಲಿ ಮಲ್ಲಣ್ಣ. ಸುಮಾರು 9ನೇ ಶತಮಾನದ ಪಶುಪಾಲಕ ವಲಸೆ ಸಂಸ್ಕøತಿಯ ನೆಲೆಗೊಂಡ ಸ್ವರೂಪವೇ ಈ ಮೈಲಾರ ಪಂಥ. ಈತ ಪಶುಪಾಲಕ ದೈವ. ವಲಸೆಯ ಪಥಗಳಲ್ಲೇ ಆರಾಧನಾ ಪರಂಪರೆಯನ್ನು ರೂಪಿಸಿದುದೇ ಇವನ ವೈಶಿಷ್ಟ್ಯ. ಆದರೆ ಈ ಪರಂಪರೆಗೆ ಬಹುದೊಡ್ಡ ಕೊಡುಗೆ ಕೊಟ್ಟವರೇ ಈ ಗೊರವರು.
ಮೈಲಾರನ ಪ್ರಚಾರದಲ್ಲಿ ಗೊರವರು ಬಳಸಿಕೊಂಡ ಪ್ರಧಾನ ಮಾಧ್ಯಮ ಗೊರವರ ಕುಣಿತ. ವಿಶಿಷ್ಟ ವೇಷಭೂಷಣ, ಲಯಬದ್ಧ ಬಡಿತ ಹಾಗೂ ಗಂಭೀರ ಹೆಜ್ಜೆ ಈ ಕುಣಿತದ ಆಕರ್ಷಣೆ. ಇಲ್ಲಿ ನಡೆಯುವ ಆಚರಣೆ ಇದಕ್ಕಿರುವ ಧಾರ್ಮಿಕ ಮಹತ್ವವನ್ನು ಸಾರುತ್ತದೆ. ಆಚರಣೆ ಮತ್ತು ಮನರಂಜನೆಯನ್ನು ಜೊತೆಜೊತೆಯಾಗಿ ನಡೆಸುವ ಈ ಕುಣಿತ ಮೈಲಾರನ ಐತಿಹ್ಯವನ್ನು ಸಾರುತ್ತದೆ. ಮೈಲಾರನ ಆರಾಧನೆಯಲ್ಲಿ ವಿಭಿನ್ನ ಸೇವೆಗಳ ಪ್ರತಿನಿಧಿಗಳೂ ಈ ಗೊರವರು. ಇವರ ಸೇವೆಗೆ ಅನುಗುಣವಾಗಿ ಹಲವು ಹೆಸರುಗಳೂ ಇವರಿಗಿದೆ. ನಾಯಿಗೊರವ, ಕರಡಿಗೊರವ, ಪಾರಿಗೊರವ, ಕುದುರೆಗೊರವ, ಕಂಚಾವೀರ, ಕಾರ್ಣಿಕದವ ಇತ್ಯಾದಿ ಹೆಸರುಗಳೆಲ್ಲ ಗಂಡಸರಿಗಾದರೆ, ಚವುರದಗೊರವಿ, ಎಲಿಚೆಂಚಿಗೊರವಿ, ವಾಲಿಗೊರವಿ ಇವೆಲ್ಲವೂ ಹೆಂಗಸರಿಗೆ. ಇವರೆಲ್ಲರೂ ತಮ್ಮ ಹೆಸರಿಗೆ ಅನ್ವರ್ಥವಾಗಿ ಮಾಡುವ ಸೇವೆಗಳೇ ಇಲ್ಲಿಯ ವಿಶೇಷತೆ. ಯಾವ ಹೆಸರಾದರೂ ಭೀಕ್ಷಾಟನೆ ಗೊರವರ ಪ್ರಧಾನ ವೃತ್ತಿ. ಜಾತ್ರೆ ಹಾಗೂ ಇತರ ವಿಶೇಷ ದಿನಗಳಲ್ಲಿ ಈ ಕಾಯಕವನ್ನು ಸಾರ್ವತ್ರಿಕವಾಗಿ ನಡೆಸುತ್ತಾರೆ. ಗೊರವರು ತಮ್ಮ ವೇಷಭೂಷಣಗಳೊಂದಿಗೆ ಹೆಚ್ಚು ಮೈಲಾರ ಕ್ಷೇತ್ರದಲ್ಲಿ ಹಾಗೂ ಭಕ್ತರ ಮನೆಗಳಲ್ಲಿ ಈ ಬಿಕ್ಷಾಟನೆ ನಡೆಸುತ್ತಾರೆ. ಜೀವನ ನಿರ್ವಹಣೆ ಮತ್ತು ಸಂವೃದ್ಧಿಯ ಆಶಯ ಈ ಬಿಕ್ಷಾಟನೆಯಲ್ಲಿ ಪ್ರಮುಖವಾಗಿ ಕಾಣುತ್ತದೆ.
ಮೈಲಾರಲಿಂಗನ ಬಗ್ಗೆ ಜನಪದರು ಹಲವು ಸ್ವಾರಸ್ಯಕರ ಕತೆಗಳನ್ನು ಹೆಣೆದಿದ್ದಾರೆ. ಕಾವ್ಯ ರೂಪದಲ್ಲಿರುವ ಈ ಕತೆಗಳನ್ನು ಗೊರವರು ಮತ್ತು ಇತರ ಕಲಾವಿದರು ಹಾಡುತ್ತಾರೆ. ಸಾಮಾನ್ಯವಾಗಿ 7 ರಾತ್ರಿ ಹಾಡಬಹುದಾದ ಸುಮಾರು 25 ಸೊಲ್ಲುಗಳನ್ನು ಹೊಂದಿರುವ ಕಾವ್ಯ ಇದಾಗಿದೆ. ಮಣಿಕಾಸುರನ ನಿಗ್ರಹ, ಗಂಗೀಮಾಳಮ್ಮ, ಕುರುಬತ್ತೆವ್ವ ಮತ್ತು ಕೋಮಾಲಿ ಜೊತೆಗಿನ ಮದುವೆ ಈ ಕಾವ್ಯದ ಪ್ರಮುಖ ವಸ್ತು. ಈ ಸುದೀರ್ಘ ಕಾವ್ಯವಲ್ಲದೇ ಮೈಲಾರನ ಬಗ್ಗೆ ಇನ್ನೂ ಅನೇಕ ಬಿಡಿ ಕಾವ್ಯಗಳು ಪ್ರಚಲಿತವಾಗಿವೆ. ಆದರೆ ದೀರ್ಘ ಕಾವ್ಯ ಇಂದು ಅಳಿಯುತ್ತಿದೆ.
ಅಳಿಯುತ್ತಿರುವ ಕಾವ್ಯಗಳ ಮಧ್ಯೆ ಮೈಲಾರ ಉಳಿಯುತ್ತಿರುವುದು ಆಚರಣೆ ಆರಾಧನೆಗಳ ಮೂಲಕ. ಜಾತ್ರೆ ಹಾಗೂ ಇತರ ಹಲವು ಸಂದರ್ಭದಲ್ಲಿ ಮೈಲಾರ ಕ್ಷೇತ್ರಗಳಲ್ಲಿ ನಡೆಯುವ ವಿಭಿನ್ನ ಆಚರಣೆಗಳು ಭಕ್ತರನ್ನು ಹೆಚ್ಚುಹೆಚ್ಚು ಆಕರ್ಷಿಸುವಂತೆ ಮಾಡುತ್ತಿವೆ. ಈ ಎಲ್ಲ ಆಚರಣೆಗಳಲ್ಲಿ ಮೈಲಾರನ ಭಕ್ತರು ಅದರಲ್ಲೂ ಗೊರವರರು ಇಂದಿಗೂ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ದೇಹದಂಡಿಸುವ, ಸರಪಳಿ ತುಂಡರಿಸುವ, ವಿಭಿನ್ನವಾಗಿ ಅಭಿನಯಿಸುವ, ಹತ್ತುಹಲವು ಪವಾಡಗಳನ್ನು ಮಾಡುವ ದೃಶ್ಯಗಳು ಈ ಜಾತ್ರೆಗಳಲ್ಲಿ ಸಾಮಾನ್ಯವಾಗಿರುತ್ತದೆ. ಈ ಎಲ್ಲ ಆಚರಣೆಗಳ ಮಧ್ಯೆ ಜಾತ್ರೆಯ ಸಂಜೆ ಗೊರವಪ್ಪ ನುಡಿಯುವ ವಾರ್ಷಿಕ ಭವಿಶ್ಯ ಮಹತ್ವವಾದುದು. ಲಕ್ಷಾಂತರ ಜನರ ಸಮ್ಮುಖದಲ್ಲಿ ನಡೆಯುವ ಈ ಭವಿಶ್ಯ ನುಡಿಗೆ ಮೈಲಾರ ಪಂಥದಲ್ಲಿ ವಿಶೇಷವಾದ ಮಾನ್ಯತೆ ಇದೆ ಮತ್ತು ವಿಭಿನ್ನವಾದ ಅರ್ಥವೂ ಇದೆ. ಮೈಲಾರನ ಆಚರಣೆ ಮತ್ತು ಆರಾಧನೆಯ ಹಿಂದೆ ಇರುವ ಸಾಹಸ ಪ್ರದರ್ಶನಗಳು ಗತಕಾಲದ ಇತಿಹಾಸವನ್ನು ಪುನರಭಿನಯಿಸುವ ಪ್ರಕ್ರಿಯೆಗಳೇ ಆಗಿರುತ್ತವೆ. ಆದರೆ ಇಲ್ಲೆಲ್ಲ ಭಕ್ತಿ ಮತ್ತು ನಂಬಿಕೆ ಹರಿದಾಡುತ್ತದೆ.
ಮೈಲಾರನನ್ನೇ ನಂಬಿ ಶತಶತಮಾನಗಳಿಂದ ಬದುಕುತ್ತಿರುವ ಗೊರವರ ಜೀವನ ಸಂಮೃದ್ಧವಾದುದೇನೂ ಅಲ್ಲ. ಆರ್ಥಿಕ ಬಲದೊಂದಿಗೆ ಸಾಂಸ್ಕøತಿಕ ಬಲವನ್ನೂ ಕಳೆದುಕೊಳ್ಳುತ್ತಿರುವ ಇವರ ಮುಂದೆ ಸಮೂಹ ಮಾಧ್ಯಮಗಳು ಸವಾಲೆಸೆದಿವೆ. ಒಂದು ಕಾಲದಲ್ಲಿ ಗೊರವರ ಮೂಲಕವೇ ಹೆಚ್ಚು ಪ್ರಚಾರವನ್ನು ಪಡೆಯುತ್ತಿದ್ದ ಮೈಲಾರಲಿಂಗ ಇಂದು ದೃಶ್ಯ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಮೈಲಾರನ ಹೆಸರಲ್ಲಿ ಭಿಕ್ಷೆಗೆ ಕೈಚಾಚುತ್ತಿದ್ದ ಗೊರವರ ಕಾಯಕಕ್ಕೂ ಧಕ್ಕೆಯಾಗಿದೆ. ಬುದ್ಧಿ ಪ್ರೇರಕ ಕಾವ್ಯಗಳು ನಶಿಸುತ್ತಿದ್ದರೆ, ಮೌಢ್ಯ ಪ್ರಚೋದಕ ಆಚರಣೆಗಳು ಹೆಚ್ಚುತ್ತಿವೆ. ಹಾಡು, ಕುಣಿತ, ಜನಪರ ಆಚರಣೆ, ಆರಾಧನೆಗಳ ಮೂಲಕ ಒಂದು ಕಾಲದಲ್ಲಿ ಮೈಲಾರನಿಗೇ ಬೆಳಕನ್ನು ತೋರಿಸಿದ ಗೊರವರ ಸಾಂಸ್ಕøತಿಕ ಬೆಳಕು ಕ್ಷೀಣಿಸುತ್ತಿದೆ. ಅದರಂತೆ ನಾಡಿಗೆ ಭವಿಶ್ಯ ನುಡಿಯುವ ಇವರ ಭವಿಶ್ಯವೂ ಪ್ರಶ್ನಾರ್ಥಗೊಳ್ಳುತ್ತಿದೆ. ಇದು ದೀರ್ಘ ವ್ಯಾಪ್ತಿ ಮತ್ತು ಕೋಟ್ಯಾಂತರ ಭಕ್ತ ಸಮುದಾಯವನ್ನು ಹೊಂದಿದ ಮೈಲಾರಲಿಂಗನಿಗೇ ಅತೃಪ್ತಿ ತರಬಹುದಾದ ವಿಚಾರವಾಗಿದೆ.
ಡಾ.ಸುಂದರ ಕೇನಾಜೆ
Comments
Post a Comment