ಬದುಕಿನ ಭಾಗವಾಗಿದ್ದ ತುಳುವರ ಬಿಸು
ತುಳುವರ ಆಚರಿಸುವ ಹಬ್ಬಗಳಿಗೂ ಒಂದು ನಿರ್ದಿಷ್ಟ ಅರ್ಥ ಮತ್ತು ಸಂಬಂಧವಿರುವುದನ್ನು ಗುರುತಿಸಬಹುದು. ತುಳು ಸಂಸ್ಕøತಿಯ ನೇರ ಪ್ರಭಾವಕ್ಕೆ ಒಳಗಾದ ಇಲ್ಲಿಯ ಹಬ್ಬಗಳಾದ ಬಿಸು, ಪತ್ತಾನಾಜೆ, ಆಟಿ ಅಮವಾಸ್ಯೆ, ಕಾವೇರಿ ಸಂಕ್ರಮಣ, ಪರ್ಬ(ದೀಪಾವಳಿ) ಕೆಡ್ಡಸ ಇತ್ಯಾದಿಗಳು ಬೇಸಾಯದ ಮೂಲಕ ಪರಿಚಿತವಾದವುಗಳು. ಈ ಹಬ್ಬಗಳ ಆಚರಣೆಯ ಕಾಲ ಮತ್ತು ಕ್ರಿಯಾಸ್ವರೂಪವನ್ನು ಗಮನಿಸಿದಾಗ ಬೇಸಾಯದ ಜೊತೆಗೆ ಇವುಗಳಿಗಿರುವ ಅವಿನಾಭಾವ ಸಂಬಂಧಗಳು ವ್ಯಕ್ತವಾಗುತ್ತದೆ. ಆದ್ದರಿಂದಲೇ ಇರಬೇಕು ತುಳುನಾಡಿನಲ್ಲಿ ಬೇಸಾಯದ ಅವನತ್ಯದೊಂದಿಗೆ ಈ ಹಬ್ಬಗಳ ಅಸ್ಥಿತ್ವವೂ ಕಣ್ಮರೆಯಾಗುತ್ತಿರುವುದು. ಆದರೆ ಸ್ವರೂಪವನ್ನು ಕಳೆದುಕೊಂಡೋ ಇಲ್ಲಾ ಸಾರ್ವತ್ರೀಕರಣಗೊಂಡೋ ಕೆಲವೊಂದು ಹಬ್ಬಗಳು ಇಂದೂ ತುಳುನಾಡಿನ ಬೇರೆಬೇರೆ ಭಾಗಗಳಲ್ಲಿ ಕಂಡು ಬರುತ್ತದೆ. ಅವುಗಳಲ್ಲಿ ತುಳುವರು ಆಚರಿಸುತ್ತಾ ಬಂದಿರುವ “ಬಿಸು” (ವಿಷು- ಪಗ್ಗು1, ಏಪ್ರೀಲ್ 15) ಆಚರಣೆಯೂ ಒಂದು.
ಸೌರಮಾನ ಕಾಲಗಣನೆಯ ಹೊಸ ವರ್ಷ ಈ ಬಿಸು. ತುಳು ಬೇಸಾಯ ಸಂಸ್ಕøತಿಯ ಮೊದಲ ಹಬ್ಬವೂ ಹೌದು. ತುಳುವರು ಬೇಸಾಯವನ್ನು ಆರ್ಥಿಕ ಭಾಗವೆಂದು ಮಾತ್ರ ಪರಿಗಣಿಸದೇ ಅದು ಬದುಕಿನ ಭಾಗವೆಂದೂ ಆರಾಧನೆಯ ಭಾಗವೆಂದು ಪರಿಗಣಿಸಿದವರು. ಆ ಕಾರಣದಿಂದಲೇ ಬಿಸುವಿನ ದಿನ ಬೆಳಗ್ಗೆ ಎದ್ದ ಕಣ್ಣು ಬಿಡಬೇಕಾದುದೇ ಫಲವಸ್ತುಗಳ ಮುಂದೆ ಎನ್ನುವ ನಂಬಿಕೆ ಹುಟ್ಟಿಕೊಂಡಿರುವುದು. ‘ಬಿಸುಕಣಿ’ (ತಾವೇ ಬೆಳೆದ ವಸ್ತುಗಳು)ಎನ್ನುವುದು ಫಲವಸ್ತುಗಳ ಆರಾಧನೆ. ಮನೆಯ ಒಳಗೆ ಜೋಡಿಸಿಟ್ಟ ನಾನಾ ಫಲವಸ್ತುಗಳು ಸಂಮೃದ್ಧಿಯ ಸಂಕೇತವಾಗಿರುತ್ತದೆ. ಅದನ್ನು ಹೊಸ ವರ್ಷದ ಮೊದಲ ಕ್ಷಣ ನೋಡುವುದೆಂದರೆ, ವರ್ಷಪೂರ್ತಿ ಅದನ್ನೇ ನೋಡುವುದು ಎಂದರ್ಥ. ಹೀಗೆ ಫಲವಸ್ತುಗಳ ಜೊತೆಗಿರುವುದು ಅನಾದಿಕಾಲದಿಂದ ಸಾಗಿ ಬಂದ ತುಳುವರ ಬದುಕು. ಕಣಿ ಎನ್ನುವುದಕ್ಕೆ ಭವಿಶ್ಯ ಎನ್ನುವ ಅರ್ಥವೂ ಇದೆ. ಭವಿಶ್ಯ ಎನ್ನುವುದು ಒಳ್ಳೆಯದು ಎನ್ನುವುದನ್ನೂ ಸಂಕೇತಿಸುತ್ತದೆ. ಆದ್ದರಿಂದ ಮನೆಯ ಒಳಗೆ ಕಣಿ ಇಡಲಾಗಿದೆ ಎಂದರೆ ಭವಿಷ್ಯ ಇದೆ ಎಂದರ್ಥ.
ಇದೇ ನಂಬಿಕೆಯ ಭಾಗವಾಗಿ ‘ನಾಲೆರುಮಾದಾಪುನೆ’ ನಡೆಯುತ್ತದೆ. ನಾಲೆರುಮಾದಾಪುನೆ ಅಂದರೆ ಗದ್ದೆಗೆ ಪ್ರಥಮವಾಗಿ ಬರೆ(ಉಳುಮೆ) ಮಾಡುವುದು ಎಂದರ್ಥ. ಸಾಮಾನ್ಯವಾಗಿ ಹಬ್ಬವೆಂದರೆ ಎಲ್ಲಾ ಕೆಲಸಗಳಿಗೂ ವಿಶ್ರಾಂತಿ ಮತ್ತು ಕೃಷಿ ಚಟುವಟಿಕೆ ನಡೆಯಬಾರದೆಂಬ ನಿಷಿದ್ಧ ದಿನ. ಆದರೆ ತುಳುವರು ಈ ಹಬ್ಬದ ಅದರಲ್ಲೂ ಹೊಸವರ್ಷದ ಮೊದಲ ದಿನವೇ ಕೆಲಸದ ಆರಂಭವನ್ನು ಸಂಕೇತಿಸುವ ಚಟುವಟಿಕೆಗಳನ್ನು ಮಾಡುತ್ತಾರೆ. ಇದು ಕೃಷಿಯನ್ನು ಬಿಟ್ಟು ಬದುಕಿಲ್ಲ ಮತ್ತು ಹೊಸ ವರ್ಷದ ಸೂರ್ಯೋದಯವೂ ಕೃಷಿ ಚಟುವಟಿಕೆಯೊಂದಿಗೆ ಆರಂಭವಾಗುತ್ತದೆ ಎನ್ನುವುದನ್ನು ಸೂಚಿಸುತ್ತದೆ. (ಹೀಗೆ ಆರಂಭವಾದ ಬೇಸಾಯ ಪ್ರಕ್ರಿಯೆ ಮತ್ತೆ ಮುಕ್ತಾಯವಾಗುವುದು ಆ ವರ್ಷದ ಕೊನೆಯ ಸುಗ್ಗಿ 31ರ ದಿನ). ಇದರ ಮುಂದುವರಿದ ಭಾಗವಾಗಿ ಗೊಬ್ಬರ ಹಾಕುವ, ಕೈಬಿತ್ತು ಹಾಕುವ ಆಚರಣೆಯೂ ನಡೆಯುತ್ತದೆ. ತುಳುವಿನಲ್ಲಿ ‘ಬಿಸ್’ ಅಂದರೆ ಬಿತ್ತು ಹಾಕು ಎನ್ನುವ ಅರ್ಥವೂ ಇದೆ. ಆದ್ದರಿಂದ ಬಿಸು ಆಚರಣೆ ಬೇಸಾಯ ಸಂಸ್ಕøತಿಯನ್ನು ಪ್ರತಿನಿತಿಸುವ ಹಬ್ಬವಾಗಿ ತುಳುನಾಡಿನಲ್ಲಿ ಆಚರಣೆಗೊಳ್ಳುತ್ತಾ ಬಂದಿದೆ.
ಬಿಸುವಿನ ಬೆಳಗ್ಗೆ ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಬೇಡುವ ಪ್ರಕ್ರಿಯೆಯೊಂದಿದೆ. ಇದು ಕಿರಿಯರಿಗೆ ಹಿರಿಯರಿಂದ ಸಿಗುವ ಅನುಮತಿಯೊಂದರ ಸಂಕೇತವೆಂದು ಭಾವಿಸಬಹುದು. ವರ್ಷಪೂರ್ತಿ ನಡೆಸಬೇಕಾದ ಚಟುವಟಿಕೆಗಳಿಗೆ ವರ್ಷಾರಂಭದ ದಿನವೇ ಒಪ್ಪಿಗೆ ಪಡೆಯುವ ಮೂಲಕ ಬದುಕನ್ನು ಸಂಮೃದ್ಧವಾಗಿರಿಸುವ ರೀತಿಯಲ್ಲಿ ಇದು ನಡೆಯುತ್ತದೆ. ವರ್ಷದ ಯಶಸ್ವಿ ಕಾರ್ಯಗಳಿಗೆ ಮತ್ತು ಸುಖ ಸಂತೋಷಗಳಿಗೆ ಅನುಮತಿ ಬೇಡುವ ಹಿನ್ನಲೆಯನ್ನು ಇಲ್ಲಿ ಕಾಣಬಹುದು. ಆದ್ದರಿಂದ ಹಿರಿಯರಿಗೆ “ಕಿರಿಯವ ಬಿಸುವಿನ ದಿನ ಅನುಮತಿ ಪಡೆಯದೇ ಇರಲಾರ” ಎನ್ನುವ ವಿಶ್ವಾಸ, ಕಿರಿಯರಿಗೆ “ಹಿರಿಯರು ಒಪ್ಪಿದರೇ ಒಳ್ಳೆಯದು” ಎನ್ನುವ ನಂಬಿಕೆ. ಈ ಅಲಿಖಿತ ಒಪ್ಪಂದ ಒಂದು ವರ್ಷದ ಕಾಲ ಪರಸ್ಪರ ಸಂಬಂಧವನ್ನು ಗಟ್ಟಿಗೊಳಿಸುವ ಆಶಯವಾಗಿಯೂ ನಡೆಯುತ್ತದೆ.
ಹಿಂದೆ ಬಿಸು ತುಳವರ ‘ಗಡು’ ಕೂಡ ಆಗಿತ್ತು. ಮುಖ್ಯವಾಗಿ ಗೇಣಿ ಒಕ್ಕಲಿನ ಕಾಲದಲ್ಲಿ ಗೇಣಿ ಅಥವಾ ಒಕ್ಕಲುತನದ ಮುಂದುವರಿಯುವಿಕೆ ಅಥವಾ ಅಂತ್ಯ ಈ ತೀರ್ಮಾನ ತೆಗೆದುಕೊಳ್ಳುವ ದಿನವೂ ಆಗಿತ್ತು. ಸುಗ್ಗಿಯ ಕೊನೆಯ ದಿನ ಅಂದರೆ ಮಳೆಗೂ ಸಂಬಂಧವಿರುವುದನ್ನೂ ಗುರುತಿಸಬಹುದು. ಸಾಮಾನ್ಯವಾಗಿ ಬಿಸುವಿನ ನಂತರ ಒಂದು ತಿಂಬಿಸುವಿನ ಹಿಂದಿನ ದಿನ ಹಳೆ ಬಾಕಿಯನ್ನು ಚುಕ್ತಗೊಳಿಸಿ ಮರುದಿನ ಹೊಸ ವ್ಯವಹಾರ ಆರಂಭವಾಗುವ ದಿನ. ಈ ಹೊಸ ವ್ಯವಹಾರವು ಗೇಣಿದಾರನ ಅಥವಾ ಒಕ್ಕಲುಗಾರನ ಪರವಾಗಿ ಇರಬೇಕು ಎನ್ನುವ ಕಾರಣಕ್ಕಾಗಿಯೇ ಧನಿಯ ಮನೆಗೆ ಬುಳೆ ಕಾಣಿಕೆ(ಬೆಳೆ ಕಾಣಿಕೆ) ಕೊಂಡು ಹೋಗಿ ಆತನ ಕಾಲಿಗೆ ನಮಸ್ಕರಿಸಿ ಬರುವ ಸಂಪ್ರದಾಯ ಬೆಳೆದಿರುವುದು. ಈ ಕಾಣಿPÂಯ ಪ್ರಮಾಣ ಮತ್ತು ಅದರ ಮೌಲ್ಯವನ್ನು ಗ್ರಹಿಸುವ ಧನಿಗೆ ಗೇಣಿ ತೀರ್ಮಾನ ಮಾಡುವ ಸೂಕ್ಷ್ಮತೆಗೂ ಇದು ಸಹಕಾರವಾಗುತ್ತಿತ್ತು. ಆದ್ದರಿಂದ ಬುಳೆ ಕಾಣಿಕೆ ಧನಿಯ ಮೇಲಿನ ವಿಧೇಯತೆಯ ಜೊತೆಗೆ ವ್ಯವಹಾರವನ್ನು ಕುದುರಿಸುವ ಸಾಧನವಾಗಿಯೂ ಬಳಕೆಯಾಗುತ್ತಿತ್ತು.
ತುಳುವರ ವರ್ಷಾರಂಭಕ್ಕೂ ಇಲ್ಲಿಯ ಗಳಲ್ಲಿ ಮಳೆಗಾಲ ಆರಂಭವಾಗುತ್ತದೆ ಎನ್ನುವ ಸೂಚನೆಯೂ ಬೇಸಾಯ ಸಂಸ್ಕøತಿಯಲ್ಲಿ ಕಾಣುತ್ತೇವೆ. ಆದ್ದರಿಂದ ಬಿಸು ಕಳೆದ ತಕ್ಷಣ ಮಳೆಗಾಲದ ಬದುಕಿನ ಸಿದ್ಧತೆಯೇ ತುಳುನಾಡಿನಲ್ಲಿ ಹೆಚ್ಚು ನಡೆಯುತ್ತಿದುದು. ಆ ನಂತರ ಜಾತ್ರೆ, ಕೋಲ, ಮದುವೆ, ಆಚರಣೆಗಳು ನಿಧಾನಕ್ಕೆ ಇಳಿಮುಖವಾಗುತ್ತಿತ್ತು. ಮುಂದೆ ಪತ್ತನಾಜೆಯ(ಬೇಸ್ಯ 10, ಮೇ 25) ದಿನದಂದು ಸಂಪೂರ್ಣ ಮುಕ್ತಾಯ ಹಾಡಲಾಗುತ್ತಿತ್ತು. ಪತ್ತನಾಜೆಗೆ ಹತ್ತು ಹನಿ ಬಿದ್ದಲ್ಲಿಗೆ ಕೃಷಿ ಚಟುವಟಿಕೆ ಆರಂಭಗೊಂಡಿತು ಎಂದರ್ಥ, ಆದ್ದರಿಂದ ಉಳಿದ ಎಲ್ಲಾ ಸಾಂಸ್ಕøತಿಕ ಚಟುವಟಿಕೆಯನ್ನು ಮುಗಿಸಿ ಬೇಸಾಯದ ಕಡೆಗೆ ಹೋಗು ಎಂದು ಈ ಪತ್ತನಾಜೆಯು(ಪತ್ತೆನ ಆಜೆ - ಹತ್ತರ ಆಜ್ಞೆ) ಸಾಕೇತಿಕವಾಗಿ ಎಚ್ಚರಿಸುತ್ತದೆ. ಆದರೆ ಇದನ್ನು ತಕ್ಷಣಕ್ಕೆ ಜಾರಿಗೊಳಿಸದೇ ಒಂದು ತಿಂಗಳ ಮೊದಲೇ ಬಿಸುವಿನ ಮೂಲಕ ಪ್ರಥಮ ಕರೆ ನೀಡುವುದನ್ನು ಕಾಣಬಹುದು.
ಹೀಗೆ ತುಳುವರ ಬಿಸು ಕೇವಲ ಆಚರಣೆ ಮಾತ್ರವಾಗಿರಲಿಲ್ಲ, ವರ್ಷಪೂರ್ತಿ ಬದುಕನ್ನು ನಿರ್ವಹಿಸುವ ಪೂರ್ವ ಪ್ರದರ್ಶನವೂ ಆಗಿತ್ತು. ಆದರೆ ಇಂದು ಬಿಸು ಆಚರಣೆಯ ಹಿಂದಿನ ಆಶಯ ಭಿನ್ನವಾಗಿದೆ. ಬತ್ತ ಬೇಸಾಯವಿಲ್ಲದ ನೆಲದಲ್ಲಿ ಆ ಕಾರಣಕ್ಕಾಗಿಯೇ ಹುಟ್ಟಿಕೊಂಡ ಹಬ್ಬಗಳ ಸ್ವರೂಪದಲ್ಲಿ ವ್ಯತ್ಯಾಸವಾಗಿದೆ. ಮನೆಯಲ್ಲಿ ಅದರಲ್ಲೂ ಕೂಡುಕುಟುಂಬದ ಮಧ್ಯೆ ಆಚರಣೆಗೊಳ್ಳುತ್ತಿದ್ದ ಈ ಹಬ್ಬಗಳು ಇಂದು ಸಾರ್ವಜನಿಕ ವೇದಿಕೆಯ ಕಡೆಗೆ ಹೆಚ್ಚು ಬರುತ್ತಿವೆ. ಆದರೆ ಕೆಲವು ವರ್ಷ ಕಳೆದಾಗ ಅದು ವೇದಿಕೆಯಿಂದಲೂ ಇಳಿದು ಹೋಗುವ ಸಾಧ್ಯತೆ ಹೆಚ್ಚು ಕಾಣುತ್ತಿದೆ.
ಡಾ.ಸುಂದರ ಕೇನಾಜೆ
Comments
Post a Comment