ಜನಪದ ಮಹಾಕಾವ್ಯ
ಮಹಾಕಾವ್ಯ ಎನ್ನುವುದು ವಿದ್ವಾಂಸರು ಹುಟ್ಟುಹಾಕಿದ ಪದ. ಜನಪದರು ಅದನ್ನು ಕಥೆ, ಪದ, ಪಾಡ್ದನ ಸಂದಿ ಎಂದು ಕರೆದರು. ಅದರ ಲಕ್ಷಣ; ವಿದೇಶಿ ವಿದ್ವಾಂಸರು ದೀರ್ಘತೆ ಮತ್ತು ರಾಷ್ಟ್ರೀಯತೆ ಅಂತ ಕರೆದರು. ಸಮಷ್ಠಿ ಪ್ರಜ್ಞೆ, ವೈಯಕ್ತಿಕತೆ ಮೀರಿ ಇಡೀ ಜನಾಂಗದ ಪ್ರತಿನಿಧಿ, ವೀರತ್ವ ಇರಬೇಕು, ಇದಕ್ಕೆ ಕಲೆವಾಲ ಕಾರಣ ಆದರೆ ಕಲೆವಲ ಎಲಿಯನ್ ಲೂನಾರ್ಟ್‍ನ ಜೋಡಣೆ. ಆದರೆ ಮಂಟೇಸ್ವಾಮಿ, ಮಾದೇಶ್ವರ, ಮೈಲಾರಲಿಂಗ, ಜುಂಜಪ್ಪ, ಎಲ್ಲಮ್ಮ, ಸಿರಿ, ಕೋಟಿಚೆನ್ನಯ, ಕುಮಾರರಾಮ ಇತ್ಯಾದಿಯನ್ನು ಸಮಗ್ರವಾಗಿ ಹಾಡುವ ಸಂಪ್ರದಾಯವಿದೆ. ಶಿಷ್ಟ ಕಾವ್ಯಗಳಂತೆ( ರಾಮಾಯಣ, ಮಹಾಭಾರತ, ಪಂಪಭಾರತ, ಕುಮಾರವ್ಯಾಸಭಾರತ ಇತ್ಯಾದಿ) ಸಿದ್ಧ ಪಠ್ಯಗಳೂ ಇಲ್ಲ.
ಕಲೆವಲ(ಫಿನ್ಲೇಡ್ ಜನಪದ ಮಹಾಕಾವ್ಯ)
ಕಲೆವಲ ಒಂದು ರಾಷ್ಟ್ರೀಯ ಮಹಾಕಾವ್ಯ(ಫಿನ್ಲೇಡ್), ಕಲೆವಾ ಎಂಬುದು ಒಂದು ದೇಶ ಅಥವಾ ಊರು, ಅತ್ಯಂತ ಶಕ್ತಿ ಶಾಲಿಯಾದ ವೀರ ಅಥವಾ ದೈತ್ಯ ಎನ್ನುವ ಅರ್ಥವೂ ಇದೆ. 1849ರಲ್ಲಿ ಎಲಿಯಾನ್ ಲೂನಾರ್ಟ್ ಮೂಲ ಫಿನಿಶ್ ಭಾಷೆಯಲ್ಲಿ ಕಲೆವಲವನ್ನು ಸಂಗ್ರಹಿಸಿದ. 22,795 ಸಾಲುಗಳ ಸಂಗ್ರಹ. ಇದು ಹಳೆಯ ಶೈಲಿಯ ಸಂಗ್ರಹ. ಆದರೆ ಇದು ಕೂಡ ಸ್ಪಲ್ಪ ಭಾಗ ಮಾತ್ರ. ಫಿನಿಶ್ ಸಾಹಿತ್ಯ ಸಂಘದ ಪತ್ರಾಗಾರದಲ್ಲಿ ಸಂಗ್ರಹಗೊಂಡಿದ್ದ ಕಲೆವಲ ಕಾವ್ಯ 12,70,000 ಸಾಲು 33 ಸಂಪುಟ(1908-48). ಇಲ್ಲಿ ಇನ್ನೂ ಅರ್ಧದಷ್ಟು ಅಪ್ರಕಟಿತ.( ಹೋಮರನ ಇಲಿಯಡ್ 15000 ಒಡಸ್ಸಿ 17000 ಸಾಲುಗಳು) ಎರಡುವರೆ ಸಾವಿರ ವರ್ಷಗಳ ಹಿಂದಿನ ಪ್ರಾಚೀನತೆ ಈ ಕಾವ್ಯದ್ದು ಎನ್ನುವ ಅಭಿಪ್ರಾಯವಿದೆ. 1888ರಲ್ಲಿ ಮಾರ್ಟಿನ್ ಗ್ರಾಫರ್ಡ್ ಮೊದಲು ಇಂಗ್ಷೀಷ್‍ಗೆ ಅನುವಾದಿಸಿದ. ವಿಲಿಯಂ ಫರ್ಸೆಲ್ ಕಿರ್ಬಿ(1844-1913) 1895ರಲ್ಲಿ 2ಸಂಪುಟದಲ್ಲಿ ಕಲೆವಲ ಪ್ರಕಟಿಸಿದ. 1907ರಲ್ಲಿ ಅದನ್ನು ಇಂಗ್ಲೀಷ್‍ಗೆ ಅನುವಾದಿಸಿದ. ಇದರಲ್ಲಿ 50 ಅಧ್ಯಾಯ(ರುನೋ)ಗಳಿವೆ. ಒಟ್ಟು 648 ಪುಟಗಳಿವೆ. ಕಿರ್ಬಿಯ ಇಂಗ್ಲೀಷ್ ಪಠ್ಯ ಕನ್ನಡಕ್ಕೆ ಅನುವಾದವಾಯಿತು.(ಡಾ.ಕೆ.ಆರ್. ಸಂಧ್ಯಾರೆಡ್ಡಿ) 33 ಅಧ್ಯಾಯ(ರುನೋ)ಗಳಿವೆ. ಕಲೆವಲ ಬಹಳ ಸುಂದರ ಕಾವ್ಯ. ಭಾರತೀಯ ಸಂಸ್ಕøತಿಯೊಂದಿಗೆ ಬಹಳ ಸಾಮ್ಯ ಇದೆ. 30ಕ್ಕೂ ಹೆಚ್ಚು ಭಾಷೆಯಲ್ಲಿ ಅದು ಅನುವಾದಗೊಂಡಿದೆ. 170 ವರ್ಷಗಳ ನಂತರವೂ ಫಿನಿಶ್‍ನ ಅತ್ಯುತ್ತಮ ಕೃತಿ. ಫಿನಿಶ್ ಸಂಸ್ಕøತಿಯ ಸಾರ ಜಗತ್ತಿಗೆ ಗೊತ್ತಾದದ್ದು ಈ ಕೃತಿಯ ಮೂಲಕ. ಇದರ ಛಂದಸ್ಸು ಮತ್ತು ರಾಚನಿಕ ರೂಪ ಇತರ ಕಾವ್ಯಗಳಿಗಿಂತ ತುಂಬಾ ಭಿನ್ನ ಮತ್ತು ಅತ್ಯಂತ ಪ್ರಾಚೀನ. ಇಬ್ಬರು ಹಾಡುತ್ತಿದ್ದರು, ಹಾಡಿನೊಂದಿಗೆ ನೃತ್ಯವೂ ಇರುತ್ತಿತ್ತು, ಕಾಂಟಿಲ ಎಂಬ ಐದು ತಂತಿಗಳ ವಾದ್ಯವೂ ಇರುತ್ತಿತ್ತು, ಈ ಕಾವ್ಯ ಫಿನ್ಲೇಡಿನ ಎಲ್ಲಾ ಕಡೆ ಒಂದೇ ರೀತಿ ಸಿಗುತ್ತದೆ. ಈಗ ಬಹುತೇಕ ಪಠ್ಯಗಳು ಮನರಂಜನೆಯಾಗಿ ಮತ್ತು ಕಲೆಯಾಗಿ ಉಳಿದುಕೊಂಡಿದೆ. ಗಂಡಸರು ಹೆಂಗಸರು ಈ ಹಾಡುಗಳನ್ನು ಹೊಲದಲ್ಲಿ ಕೆಲಸ ಮಾಡುವಾಗ, ನೂಲುವಾಗ ಇಲ್ಲ ಬೇಟೆ/ಮೀನು ಹಿಡಿಯುವ ಸಂದರ್ಭದಲ್ಲಿ ಹಾಡುವುದುಂಟು. ಮದುವೆ,ಹಬ್ಬದಲ್ಲೂ ಬಳಕೆ ಇತ್ತು. ಈ ಹಾಡು ಹಾಡುವಲ್ಲಿ ಸ್ಪರ್ಧೆಗಳೂ ನಡೆಯುತ್ತಿದ್ದವು. 4 ಭಾಗ ಮಾಡಬಹುದು
1.ಸೃಷ್ಟಿ ಕ್ರಿಯೆ:- ವಿಶ್ವದ ಸೃಷ್ಟಿ, ಮಾನವ, ಪ್ರಾಣಿ, ಸಸ್ಯಗಳ ಸೃಷ್ಟಿ- ಇದು ಕಾವ್ಯದ ಅತ್ಯಂತ ಪ್ರಾಚೀನ ಹಂತ(ವೆಯ್ನಾಮೊಯ್ನನ್ ಹುಟ್ಟು ಮತ್ತು ವಿಶ್ವ ನಿರ್ಮಿಸುವ ಕಾಲ, ಇಲ್ಮಾರಿನೆನ್-ಸ್ವರ್ಗ ನಿರ್ಮಿಸುವ ಕಮ್ಮಾರ)
2.ಯಕ್ಷಿಣಿ ಮತ್ತು ಮಾಂತ್ರಿಕ ಪುರೋಹಿತರಿಗೆ ಸಂಬಂಧಿಸಿದ್ದಾಗಿದೆ. ರಚನೆಯ ಕಾಲ ಸುಮಾರು ಕ್ರಿ.ಪೂ 500-600 ಕಾಲ. (ವೆಯ್ನಾಮೊಯ್ನನ್, ಇಲ್ಮಾರಿನೆಸ್-ಮಾಂತ್ರಿಕ ಪುರೋಹಿತರು ಮತ್ತು ಬುಡಕಟ್ಟು ನಾಯಕರು
)3.ಸಾಹಸಗಳ ಕಾವ್ಯ ಭಾಗ ರಚನೆಯ ಕಾಲ ಕ್ರಿ.ಶ.600-1000 (ಹಿಂದಿನ ಪಾತ್ರಗಳು ಇಲ್ಲಿ ಸಾಹಸಿಗಳಾಗುತ್ತವೆ)
4.ಕ್ರಿಶ್ಚಿಯನ್ ಕಾವಾವಧಿಯ ಕಾವ್ಯ ಭಾಗ ಇದರ ಕಾಲ ಸುಮಾರು ಕ್ರಿ.ಶ. 900-1450 ಮತಪ್ರಚಾರ ಮತ್ತು ಪಾದ್ರಿ ಸಿದ್ಧಾಂತದ ಪ್ರಭಾವ- ಕ್ರಿಸ್ತ ಧರ್ಮಕ್ಕೆ ಬೇಕಾದಂತಹಾ ಕಾವ್ಯ ರಚನೆ. ವೆಯ್ನಾಮೊಯ್ನನ್ ಕ್ರಿಶ್ಚನ್ನರ ಪ್ರಬಲ ಟೀಕೆಗೆ ಗುರಿಯಾಗುತ್ತಾನೆ. ಆತನನ್ನು ತಾಮ್ರದ ತಳವಿರುವ ದೋಣಿಯಲ್ಲಿ ಹಿಂತಿರುಗಿಬಾರದ ಹಾಗೆ ಯಾನ ಮಾಡಿಸುತ್ತಾರೆ. ಆತ ಸಮುದ್ರ ಪಾಲಾಗುತ್ತಾನೆ. ಆ ಮೂಲಕ ಕಲೆವಲ ಸೃಜನಶೀಲ ಕಾವ್ಯ ತನ್ನ ಸತ್ವವನ್ನು ಕಳೆದುಕೊಳ್ಳುತ್ತದೆ. ತನ್ನ ಹರಿವನ್ನು ನಿಲ್ಲಿಸುತ್ತದೆ.
ಕೋಟಿ ಚೆನ್ನಯ
ಇಂದಿನ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಸುಳ್ಯ ತಾಲೂಕಿನ ಗಡಿಭಾಗಗಳಲ್ಲಿ ಸುಮಾರು 450 ವರ್ಷಗಳ ಹಿಂದೆ ನಡೆದಿದೆ ಎನ್ನಲಾಗುತ್ತಿರುವÀ ಕಥೆಯೇ ಈ ಕೋಟಿ ಚೆನ್ನಯ. ತುಳು ಪಾಡ್ದನಗಳೆಂಬ ಜನಪದ ಕಾವ್ಯರೂಪದಲ್ಲಿ ಜನಜನಿತವಾಗಿರುವ ಈ ಕಥೆ ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಗೊಳ್ಳುತ್ತಾ ಬಂದಿದೆ. ಅಲ್ಲದೆ ಇದಕ್ಕೆ ನಿದರ್ಶನವೆಂಬಂತೆ ಅನೇಕ ಪ್ರದೇಶಗಳು, ಸ್ಮಾರಕಗಳು, ಐತಿಹ್ಯಗಳು ಇಂದಿಗೂ ತುಳುನಾಡಿನಲ್ಲಿ ಕಾಣಸಿಗುತ್ತವೆ. ಈ ಕೋಟಿಚೆನ್ನಯರು ಹುಟ್ಟಿದ್ದು ಒಂದು ಕಾಲದ ಪುಟ್ಟ ರಾಜ್ಯವಾಗಿದ್ದ ‘ಪಡುಮಲೆ’ ಎಂಬ ಪ್ರದೇಶದಲ್ಲಿ. ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗಡಿಭಾಗದಲ್ಲಿದೆ. ಈ ರಾಜ್ಯವನ್ನು ಪೆರುಮಲೆ ಬಲ್ಲಾಳ ಎಂಬ ರಾಜ ಆಳುತ್ತಿದ್ದನು.
ಈ ಕತೆಯಲ್ಲಿ ಅನೇಕ ವಾಸ್ತವಗಳಿವೆ ಎನ್ನುದಕ್ಕೆ ಇಲ್ಲಿ ಕಾಣುವ ಪ್ರದೇಶಗಳೇ ಸಾಕ್ಷಿ. ಈ ಅರಮನೆಯ ಕುರುಹು, ಕುವೆತೋಟ ಮನೆ, ಸಂಕಮಲೆ ಗುಡ್ಡ, ನಂದನ ಪಿತ್ತ್‍ಲ್ ಮನೆ, ದೇಯಿ ಮಡಿದ ಕೊಳ, ಆಕೆಯ ಸಮಾಧಿ ಎನ್ನಲಾದ ಸ್ಥಳ ಇವೆಲ್ಲವೂ ಇಂದಿಗೂ ನಮ್ಮ ಮುಂದಿವೆ. ಜನಪದ ಮಹಾಕಾವ್ಯದ ಕಥಾ ರೂಪದಲ್ಲಿ ಮಾನ್ಯತೆ ಪಡೆದಿರುವ ಕೋಟಿಚೆನ್ನಯರು ಜನರ ಮಧ್ಯೆ ಆರಾಧನಾ ರೂಪದಲ್ಲೂ ಪ್ರಸಿದ್ಧಿಯನ್ನು ಪಡೆದವರು. ಕರಾವಳಿಯುದ್ದಕ್ಕೂ ಸುಮಾರು 240 ಕ್ಕೂ ಹೆಚ್ಚಿನ ಗರಡಿಗಳಲ್ಲಿ ಪೂಜೆ, ನೇಮ, ಜಾತ್ರೆಗಳ ಮೂಲಕ ಇವರ ಆರಾಧನೆ ನಡೆಯುತ್ತಿದೆ.
ತುಳುನಾಡಿನ ಪರವ ಜನಾಂಗದವರು ನಡೆಸುವ ಈ ದೈವ ನರ್ತನವನ್ನು “ಬೈದ್ಯರ ನೇಮ” ಎಂದು ಕರೆಯುತ್ತಾರೆ. ಇಲ್ಲಿ ಕೋಟಿ, ಆತನ ತಮ್ಮ ಚೆನ್ನಯ, ಅವರ ಭಾವನಾದ ಪಯ್ಯ ಬೈದ್ಯ, ಅಕ್ಕ ಕಿನ್ನಿದಾರು ಹಾಗೂ ಅವರ ಕುಲದೇವರಾದ ಬಿರ್ಮೆರ ಆರಾಧನೆ ನಡೆಯುತ್ತದೆ. ತುಳುನಾಡಿನ ಬಹುತೇಕ ಗರಡಿಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ ಈ ಉತ್ಸವಗಳಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಇವುಗಳಲ್ಲಿ ಸುಳ್ಯ ತಾಲೂಕಿನ ಎಣ್ಮೂರು ಆದಿ ಗರಡಿಯಲ್ಲಿ ನಡೆಯುವ ಜಾತ್ರೋತ್ಸವಕ್ಕೆ ವಿಶೇಷ ಮಹತ್ವವಿದೆ. ಕೋಟಿಚೆನ್ನಯರು ಶೋಷಿತರ ಪರವಾಗಿದ್ದÀ ವೀರರು ಎನ್ನುವ ನಿಲುವುಗಳು ಇವರ ಈ ಆರಾಧನೆಗೆ ಪ್ರೇರಣೆಯಾಯಿತು. ಇದಕ್ಕೂ ಮುನ್ನ, ಪಡುಮಲೆಯ ಪೆರುಮಲೆ ಬಲ್ಲಾಳನ ಆಶ್ರಯದಲ್ಲಿ ಯಾರಿಗೂ ಎಣೆ ಇಲ್ಲವೆಂಬಂತೆ ಬೆಳೆದವರು ಇವರು. ಅನ್ಯಾಯದ ವಿರುದ್ಧ ಸೆಟೆದು ನಿಲ್ಲುತ್ತಾ ಕುಲವೃತಿಯ ಜೊತೆಗೆ ಬೇಸಾಯವನ್ನೂ ಮಾಡುತ್ತಿದ್ದವರು. ಅಹಂಕಾರಿಯೂ ಪ್ರಜಾ ವಿರೋಧಿಯೂ ಆಗಿದ್ದ ಮಂತ್ರಿಗೆ ಸರಿಯಾದ ಶಿಕ್ಷೆಯೇ ಸಿಕ್ಕಿತ್ತೆಂದು ಪ್ರಜಾಜನ ಒಪ್ಪಿಕೊಂಡಿದ್ದರು. ಆದರೆ ನ್ಯಾಯ ನಿರ್ಣಯದ ಪ್ರಕಾರ ಈ ಕೊಲೆಯನ್ನು ಬಲ್ಲಾಳ ತಪ್ಪೆಂದು ಘೋಷಿಸಿದ. ಆಗ ಪೆರುಮಲೆ ಬಲ್ಲಾಳನ ವಿರುದ್ಧ ಈ ವೀರರು ಸವಾಲು ಹಾಕುತ್ತಾರೆ. ಈ ಇಬ್ಬರ ಮರಣ ಪರಸ್ಪರ ಹಗೆಗಳಾಗಿದ್ದ ಬಲ್ಲಾಳರುಗಳಿಗೆ ದುಃಖ ತರುತ್ತದೆ. ಅವರೆಲ್ಲ ಯುದ್ಧ ನಿಲ್ಲಿಸಿ ಸತ್ತ ಸಹೋದರರರನ್ನು ಹಾಸು ಕಲ್ಲೊಂದರ ಮೇಲೆ ಜೊತೆಯಾಗಿ ಮಲಗಿಸುತ್ತಾರೆ. ಆಗ ಈ ಕಲ್ಲು ಇಬ್ಭಾಗವಾಯಿತು ಎನ್ನುವ ಪ್ರತೀತಿ ಇದೆ. ಹಾಗಾಗಿ ಇಬ್ಬರನ್ನೂ ಪ್ರತ್ಯೇಕ ಸಮಾಧಿ ಮಾಡಲಾಯಿತು. ಮುಂದೆ ದೇವಣ್ಣ ಬಲ್ಲಾಳನ ಕನಸಿನಲ್ಲಿ ಕಾಣಿಸಿಕೊಂಡ ಕೋಟಿಚೆನ್ನಯರು, “ನಾವು ವೀರರಾಗಿ ಮೆರೆದವರು ಮತ್ತು ಅನ್ಯಾಯದ ವಿರುದ್ಧ ಹೋರಾಡಿದವರು. ನಮ್ಮಂತೆ ತುಳುನಾಡಿನ ಅಲ್ಲಲ್ಲಿ ವೀರರು ಹುಟ್ಟಿಕೊಳ್ಳಬೇಕು, ಈ ವೀರತ್ವದ ಸಂಕೇತವಾಗಿ ಗರಡಿಗಳನ್ನು ಕಟ್ಟಬೇಕು" ಎಂದರು. ಆ ಪ್ರಕಾರ ಬಲ್ಲಾಳ ಎಣ್ಮೂರಿನಲ್ಲಿ ಮೊದಲ ಗರಡಿಯನ್ನು ಕಟ್ಟಿಸಿದ. ಇದರ ಮುಂದುವರಿದ ರೂಪವಾಗಿ ಇಂದು ತುಳುನಾಡಿನಾದ್ಯಂತ ನೂರಾರು ಗರಡಿಗಳು ನಿರ್ಮಾಣಗೊಂಡಿವೆ ಮತ್ತು ಈಗಲೂ ನಿರ್ಮಾಣಗೊಳ್ಳುತ್ತಲೇ ಇವೆ.
ಕೋಟಿಚೆನ್ನಯರ ಆರಾಧನೆಯೊಂದಿಗೆ ಅವರ ಬಗ್ಗೆ ಅನೇಕ ಅಧ್ಯಯನ ಗ್ರಂಥಗಳು, ಪಾಡ್ದನ ಸಂಗ್ರಹಗಳು, ಯಕ್ಷಗಾನ, ಸಿನಿಮಾ, ನಾಟಕ, ದಾರಾವಾಹಿ ಮತ್ತು ಅಭಿವೃದ್ಧಿ ಕೆಲಸಗಳು ನಡೆದಿವೆ. ಆದರೆ "ಸತ್ಯ, ನ್ಯಾಯ, ನೀತಿಗಾಗಿ ತಮ್ಮ ಎದೆಯ ಮೇಲೆ ದಾರಿ ಕೊಟ್ಟೇವು" ಎಂದು ಹೇಳಿದ ಕೋಟಿಚೆನ್ನಯರನ್ನು ಇಂದು ನೋಡುವ ದೃಷ್ಟಿ ಬದಲಾಗುತ್ತಿದೆ. ಅವರ ಕತೆ ಮತ್ತು ಅರಾಧನೆಯ ಸ್ವರೂಪವೂ ಬದಲಾಗುತ್ತಿದೆ. ಅಕ್ರಮ, ಅನ್ಯಾಯ, ಅನೀತಿಗಳನ್ನು ಪ್ರತಿಭಟಿಸುತ್ತಲೇ ಅಮರರಾದ ಈ ವೀರರ ಮೇಲಿನ ನಂಬಿಕೆ ಈ ಎಲ್ಲಾ ದೌರ್ಬಲ್ಯವನ್ನು ಮೀರಿ ನಿಲ್ಲಬೇಕಾಗಿದೆ. ಅದು ಮುಂದಿನ ತಲೆಮಾರಿಗೆ ಪಾಠವಾಗಬೇಕು. ಇದೇ ಕೋಟಿಚೆನ್ನಯರಿಗೆ ಸಲ್ಲುವ ಭಕ್ತಿ ಮತ್ತು ಗೌರವ.
ಸಿರಿ
ತುಳುನಾಡಿನ ನೆಲದಲ್ಲಿ ಬದುಕಿ ಹೋದ ವ್ಯಕ್ತಿಗಳ, ಪ್ರತಿಷ್ಟಿತ ಮನೆತನಗಳ,ಏಳುಬೀಳುಗಳ ಹಾಗೂ ಸ್ಥಳಿಯ ದೈವಭೂತಗಳ ಹುಟ್ಟು, ಸಾಧನೆ, ಸಂಚಾರದ ಕುರಿತ ಆಕರ್ಷಕ ಕತೆಯ ಕಾವ್ಯರೂಪವೇ ಪಾಡ್ದನ. ಸಿರಿ, ಕೋಟಿಚೆನ್ನಯ ವ್ಯಾಪ್ತಿಯಲ್ಲಿ ದೊಡ್ಡದು ಹಾಗಾಗಿ ಇವು ಜನಪದ ವiಹಾಕಾವ್ಯಗಳು. ಬಹುತೇಕ ಪಾಡ್ದನಗಳು ದುರಂತ ಸನ್ನಿವೇಶದಿಂದಲೇ ಕೂಡಿರುತ್ತದೆ. ಭೂತದ ಸಂದರ್ಭ, ಸಿರಿ ಜಾತ್ರೆ ಸಂದರ್ಭ ಮತ್ತು ನೇಜಿ ತೆಗೆಯುವ ಸಂದರ್ಭದಲ್ಲಿ ಪಾಡ್ದನ ಹಾಡುವುದು ಪದ್ದತಿ.
ಅಲೌಕಿಕ ಮತ್ತು ಲೌಕಿಕ ಪಾಡ್ದನ ಅಲೌಕಿಕ:- ಭೂತದ ಪಾಡ್ದನ, (ಜುಮಾತಿ, ಕಲ್ಕುಡ ಕಲ್ಲುರ್ಟಿ), ಸಾಂಸ್ಕøತಿಕ ವೀರರ ಪಾಡ್ದನ(ಕೋಟಿ ಚೆನ್ನಯ,ಸಿರಿ)ಪೌರಾಣಿಕ ವಸ್ತುಗಳ(ಶಿಷ್ಟ ದೇವರು) ಸಂದಿ(ಶಿವ, ನಾರಾಯಣ, ಬಲೀದ್ರ ಅಸುರೆತಿ ಬಂಗಾರ್, ಸಿರಿ ಕಿಷ್ಣ ದೇವೆರ್ ಇತ್ಯಾದಿ) ಲೌಕಿಕ:- ಪರತಿ ಮಂಗಣೆ, ಮಾಲಿಂಗ ಶೆಟ್ಟಿ,ಜೇವು ಕೇದಕೆ, ಅಬ್ಬಗದಾರಗ ಪ್ರಸಂಗವನ್ನು ನೇಜಿ ಗದ್ದೆಯಲ್ಲಿ ಹಾಡುತ್ತಾರೆ.
ಎರಡು ಸಾವಿರ ವರ್ಷಗಳಿಂದ ತುಳುನಾಡು ಅಥವಾ ತುಳುವ ರಾಜ್ಯ, 15ನೇ ಶತಮಾನಕ್ಕೆ ಸೇರಿದ 2 ಶಾಸನ ಮತು ತಮೂರು ಶಿಷ್ಟ ಮಹಾಕಾವ್ಯ ದೀರ್ಘ ವ್ಯಾಪ್ತಿ ಇರುವ ಸಿರಿ, ಕೋಟಿ ಚೆನ್ನಯ ಜನಪದ ಮಹಾಕಾವ್ಯ ಎಂದು ಕರೆಯಲಾಗಇದೆ. ಸಿರಿ ಆರಾಧನಾ ಕೇಂದ್ರಗಳು ಹಿರಿಯಡ್ಕ, ಪಾಂಗಾಳ, ಬೊಳ್ಯೋಟ್ಟು, ಕವತ್ತಾರು, ಕಂಡೇವು, ನಂದಳಿಕೆ, ಜರೆಗುಡ್ಡೆ, ಮಜಲೊಟ್ಟು, ಅತ್ರಿಜಾಲ್, ಕುತ್ರೊಟ್ಟು, ಉರ್ಕಿತೋಟ, ನಿಡಿಗಲ್(ಉಡುಪಿ, ಕಾರ್ಕಳ, ಬೆಳ್ತಂಗಡಿ, ಮಂಗಳೂರು
ಇದು ಕರಾವಳಿಯ ಮಾತೃರೂಪಿ ಕುಟುಂಬ ರಚನೆಯ ಉತ್ಪನ್ನ
ಮೊದಲ ಸಂಗ್ರಹ 1997 ಅಮೃತ ಸೋಮೇಶ್ವರ 3501 ಸಾಲುಗಳು ಮೊದಲ ಅಧ್ಯಯನ ಡಾ.ಪೀಟರ್ ಜೆ.ಕ್ಲಾಸ್(1975). ಯಾವುದೇ ಜಾತಿ ಮತ್ತು ಜನವರ್ಗದ ಆಶೋತ್ತರವನ್ನು ಬಿಂಬಿಸುವ ಕಾವ್ಯವಲ್ಲ. ತುಳುನಾಡಿನ ಮಾತೃರೂಪಿ ಸಂಸ್ಕøತಿ ಸಮುದಾಯದ ಆಪ್ತ,ಶ್ರದ್ಧಾಭಕ್ತಿಯ ಮೌಖಿಕ ಕಾವ್ಯ. ಕೃಷಿ ನಿರತ, ಬಂಟ ಜನಾಂಗದÉೂಂದು ಕುಟುಂಬದ ಮೂರು ತಲೆಮಾರಿನ ಕತೆ. ಸಿರಿ-ಕುಮಾರ, ಸೊನ್ನೆ-ಗಿಂಡೆ, ಅಬ್ಬಗ-ದಾರಗೆ ಇದೀಗ ದೈವಗಳು. ಸಿರಿ ಈ ಸಮುದಾಯದ ಮೂಲಸ್ತ್ರ ಎಂದು ನಂಬಲ್ಪಡುತ್ತಾಳೆ. ಸಿರಿಯ ಕೃಪೆಗೆ ಒಳಗಾದರೆ ಸ್ಥಾನಮಾನ ಗೌರವ ಸಿಗುತ್ತದೆ ಎಂದು ನಂಬುತ್ತಾರೆ. ಮಾತೃಮೂಲಿಕೆಯಲ್ಲಿ ಹೆಣ್ಣಿನ ಮೂಲಕ ಮುಂದುವರಿಯುವ ಸಂತಾನ, ಒಲ್ಲದ ಗಂಡನ ವಿಚ್ಚೇದನೆ, ಮರುಮದುವೆ, ಸಿಮಂತದ ಮಹತ್ವವನ್ನು ತಿಳಿಸುತ್ತದೆ. ಹುಟ್ಟಿದ ಮನೆ ಸತ್ಯನಾಪುರ, ಗಂಡನ ಮನೆ ಬಲಸೂರು ಎರಡನ್ನೂ ದಿಕ್ಕರಿಸಿದ್ದು ವ್ಯವಸ್ಥೆಯಲ್ಲಿನ ಪ್ರತಿಭಟನೆ. ಗಂಡ ಕಾಂತಣ್ಣ ಪೂಂಜನ ನಡವಳಿಕೆ ನೈತಿಕತೆಯ ಉಲಂಘನೆ ಮತ್ತುಹೆಣ್ಣಿಗೆ ಮಾಡಿದ ಅಪಚಾರ ಎಂದು ತಿಳಿಯಲಾಗಿದೆ. ಮಗ ಕುಮಾರನ ಪ್ರತಿರೋಧದ ಮಧ್ಯೆ ಸಿರಿ ಕೊಡ್ಸರಾಳ್ವರನ್ನು ಮರುಮದುವೆ ಆಗುತ್ತಾಳೆ. ಸಿರಿ ಅಲೌಕಿಕ ಜನನದಿಂದ ಪೂಜಾರ್ಹ ಗೌರವ ಪಡೆದವಳಲ್ಲ ಬದಲಾಗಿ ಅನ್ಯಾಯ, ಅಸತ್ಯವನ್ನು ಪ್ರತಿಭಟಿಸುವಲ್ಲಿ ತೋರಿದ ಎದೆಗಾರಿಕೆ ಮತ್ತು ಸತ್ಯದ ಸ್ಥಾಪನೆಗೆ ನಡೆಸಿದ ಕಾರ್ಯಕ್ಕಾಗಿ.
ಸಿರಿ ಪಾಡ್ದನ ಮತ್ತು ಆರಾಧನೆ: ಭೂತಾರಾಧನೆ, ನಾಗಾರಾಧನೆ, ಸಿರಿಆರಾಧನೆ ಇದರಲ್ಲಿ ಮಹಿಳೆಯರೇ ಹೆಚ್ಚು. ಸಾಮೂಹಿಕ ಆವೇಶಕ್ಕೆ ಒಳಗಾಗುತ್ತಾರೆ. ಸಾಮಾಜಿಕ ಗೌರವಕ್ಕೆ ಪಾತ್ರಳಾಗುತ್ತಾಳೆ. ದಲಿಯ ಸೇವೆ. ಸತ್ಯನಾಪುರದ ಅರಮನೆ ಅಜ್ಜ ಅರಿಯ ಬನ್ನಾರ ಬೆರ್ಮುಮಾಲವ. ಲಂಕೆಲೋಕನಾಡಿನ ಬೆರ್ಮೆರು ಬ್ರಹ್ಮಕಲಶದಂದು ಸಿರಿಯ ಜನನ. ಬಸರೂರಿನ ಸಂಕರು ಪೂಂಜೆದಿ, ಈಕೆಯ ಮಗ ಕಾಂತಣ್ಣ ಆಳ್ವ. ಸಿರಿಗೆ ಪಟ್ಟ ನಿಡುವ ಶರ್ತದೊಂದಿಗೆ ಮದುವೆಗೆ ಒಪ್ಪಿಗೆ. ಮದುವೆ ವಿವರ, ಸೀಮಂತ, ಕಾರ್ಲಪೇಟೆಯಲ್ಲಿ ಸೀರೆ ಖರೀದಿ, ಕೊಡಿಕುಂಬಳೆಯ ಸೂಳೆಸಿದ್ದುವಿನ ಮನೆ, ಸಿರಿಯ ಮಗ ಕುಮಾರ ಕೋಟಿ ಪೂಂಜನ ಜನನ ಮಂಗಳವಾರ ಅಮವಾಸ್ಯೆಯ ದಿನ, ಅಜ್ಜರ ಸಾವು ತಾನೇ ಅಂತ್ಯ ಸಂಸ್ಕಾರ, ಕೂಟದ ಕಳ, ದೇಶಾಂತರ, ಸತ್ಯನಾಪುರಕ್ಕೆ ಶಾಪ ಗಂಡನಿಗೆ ವಿಚ್ಚೇದನ, ಬಸರೂರಿಗೆ ಶಾಪ, ಕುಮಾರನ ಮಾಯಕ, ಕೊಟ್ಟಾಡಿಯ ಕೊಡ್ಸರಾಳ್ವನೊಂದಿಗೆ ಮರು ಮದುವೆ.
ಮಂಟೆಸ್ವಾಮಿ
ಸಾಂಸ್ಕøತಿಕ ನಾಯಕ ಮಂಟೆಸ್ವಾಮಿಯವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೊಪ್ಪೇಗೌಡನಪುರದಲ್ಲಿ ಬಂದು ನೆಲೆಯಾದರು. ಜನಪದ ಕಾವ್ಯಗಳಲ್ಲಿ ಮಲೆಮಾದೇಶ್ವರನ ಬಗ್ಗೆ ಇರುವ ಹಾಡುಗಳನ್ನು ಕಂಸಾಳೆ ಎನ್ನುತ್ತಾರೆ. ಅದೇ ರೀತಿ ಮಂಟೆಸ್ವಾಮಿಯವರ ಬಗ್ಗೆ ಇರುವ ಹಾಡುಗಳನ್ನು ನೀಲಗಾರರ ಮೇಳ ಎನ್ನುತ್ತಾರೆ. ಕರ್ನಾಟಕ ರಾಜ್ಯದ ಚಾಮರಾಜನಗರ, ಮಂಡ್ಯ, ಮೈಸೂರು, ಬೆಂಗಳೂರು ಜಿಲ್ಲೆಗಳಲ್ಲಿ ಈ ನೀಲಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ ಕೆಲವರು ಮಾತ್ರ ವೃತ್ತಿ ಗಾಯಕರಾಗಿರುತ್ತಾರೆ. ಮಂಟೇಸ್ವಾಮಿಯವರ ಶಿಷ್ಯರಲ್ಲಿ ಸಿದ್ದಪ್ಪಾಜಿ (ಚಿಕ್ಕಲ್ಲೂರು), ರಾಚಪ್ಪಾಜಿ (ಕಪ್ಪಡಿ), ದೊಡ್ಡಮ್ಮತಾಯಿ ನೀಲಗಾರರಾಗಬೇಕಾದರೆ ಅದಕ್ಕೆ ಭಕ್ತಿ ಮತ್ತು ಸಮರ್ಪಣಾ ಭಾವವೂ ಅಗತ್ಯವಿದೆ. ಮಂಟೆಸ್ವಾಮಿ ಮತ್ತು ಅವರ ಶಿಷ್ಯರು ನೆಲೆ ನಿಂತು ಐಕ್ಯರಾದ ಈ ಸ್ಥಳಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗಳಲ್ಲಿ ನೀಲಗಾರರೆಲ್ಲಾ ಸೇರಿ ತಮ್ಮ ಹಾಡಿನ ಮೂಲಕ ಸ್ವಾಮಿಯನ್ನು ಆರಾಧಿಸುತ್ತಾರೆ. ಈ ಮೂಲಕ ಪರಸ್ಪರ ಒಂದಾಗುತ್ತಾರೆ. ಮಂಟೇಸ್ವಾಮಿ ಪರಂಪರೆಯ ಪ್ರಚಾರಕರಾದ ಇವರಲ್ಲಿ ರಾಗ, ಕಾವ್ಯ ಪ್ರಜ್ಞೆ ಹಾಗೂ ಆಸಕ್ತಿ ಇರುವವರು ಮಾತ್ರ ವೃತ್ತಿಗಾಯಕರಾಗುತ್ತಾರೆ. ದೀಕ್ಷೆ ತೆಗೆದುಕೊಂಡರು ನೀಲಗಾರರು ತಾವು ಮಾಡುತ್ತಿರುವ ವೃತ್ತಿಯನ್ನು ಮುಂದುವರಿಸಿಕೊಂಡು ಕೌಟುಂಬಿಕ ಬದುಕನ್ನೂ ನಡೆಸುತ್ತಾರೆ. ತಮ್ಮ ನಂಬಿಕೆಯನ್ನು ಮುಂದುವರಿಸಿಕೊಂಡು ಹೋಗಲು ಏಳು ವರ್ಷ ದಾಟಿದ ಹಿರಿಯ ಮಗನಿಗೆ ದೀಕ್ಷೆ ನೀಡುವ ದಿನ ಸ್ನಾನ ಮಡಿ ಮಾಡಿಸಿ ಸ್ವಾಮಿಗೆ ತಲೆಗೂದಲ ಮುಡಿ ಅರ್ಪಸಿ ಜೋಳಿಗೆಯನ್ನು ಹೆಗಲಿಗೆ ಏರಿಸಿ ಭಿಕ್ಷೆ ಮಾಡಲು ಕಳುಹಿಸುತ್ತಾರೆ. ಭಿಕ್ಷೆಯ ಮೂಲಕ ತನ್ನೊಳಗಿನ ಅಹಂಕಾರವನ್ನು ತನಗೇ ತಿಳಿಯದಂತೆ ಕಳೆದುಕೊಳ್ಳುತ್ತಾರೆ.
ನೀಲಗಾರರ ಹಾವಿನ ಹೆಡೆಯ ತಂಬೂರಿ ಒಂದು ವಿಶಿಷ್ಠವಾದ ಮತ್ತು ಪ್ರಧಾನವಾದ ಜನಪದ ವಾದ್ಯ. ಇದನ್ನು ಮಂಟೇದವರ ಸರಸ್ವತಿ ಎಂದು ಕರೆಯುತ್ತಾರೆ. ವೃತ್ತಿಪರ ಗಾಯಕನಾಗಬೇಕೆಂಬ ಹಸಿವಿರುವವನು ಗುರುವನ್ನು ಹುಡುಕಿಕೊಂಡು ಹತ್ತಾರು ವರ್ಷ ಅವರಲ್ಲಿ ಶಿಷ್ಯ ವೃತ್ತಿ ಮಾಡಿ ತನ್ನೊಳಗಿನ ಗಾಯಕನನ್ನು ಜೀವಂತವಾಗಿರಿಸಿಕೊಳ್ಳುತ್ತಾನೆ. ಆ ಮೂಕಲ ಮಂಟೆಸ್ವಾಮಿ ಪರಂಪರೆಯನ್ನು ಮುಂದುವರಿಸುವ ಕೊಂಡಿಯಾಗುತ್ತಾನೆ. ಇಂದಿಗೂ ನೀಲಗಾರರ ಬದುಕು ಸುಖದ ಸೋಪಾನವೇನೂ ಅಲ್ಲ. ಹಾಗೆಂದು ಪ್ರಾಮಾಣಿಕವಾಗಿ ಈ ಪರಂಪರೆಯನ್ನು ಮನ್ನಡೆಸುತ್ತಾ ಬಂದವರಿಗೆ ಅನ್ಯಾಯವೂ ಆಗಿಲ್ಲ. ಸಾಮಾಜಿಕವಾಗಿ ಹಿಂದುಳಿದ ಈ ವರ್ಗಕ್ಕೆ ಗಾಯಕ ವೃತ್ತಿಯಿಂದಲೇ ಆದಾಯ ದೊರಕಿದರೂ ಇಲ್ಲಿರುವ ಸಮಸ್ಯೆಯೇ ಬೇರೆ.
ಆಧುನಿಕ ಸಂಗೀತದ ಭರಾಟೆಯ ಮಧ್ಯೆ ಇದರ ಸಾಂಪ್ರದಾಯಿಕ ಹಾಡುಗಳು ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುತ್ತದೆ. ವರ್ಷದಿಂದ ವರ್ಷಕ್ಕೆ ಈ ಪರಂಪರೆ ತನ್ನ ಅಮತ್ಯದ ಕಡೆಗೂ ಹೆಜ್ಜೆ ಇಡುತ್ತಿದೆ. ಹೊಸ ತಲೆಮಾರಿನ ಜನರು ಈ ಪರಂಪರೆಯನ್ನು ಮುಂದುವರಿದುಕೊಂಡು ಹೋಗುವ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಆಧುನಿಕ ಸ್ವರೂಪದ ಕಲಿಕಾ ವಿಧಾನವನ್ನು ಆಳವಡಿಸಲಾಗುತ್ತಿದೆ. ವಿಶಿಷ್ಟ ವಸ್ತುವಿನ ಅಷ್ಟೇ ಮಾಧುರ್ಯದ ಕಾವ್ಯ ಧಾರ್ಮಿಕ ನೆಲೆಯಲ್ಲೂ ಕಂಠಸ್ಥವಾಗಿ ಉಳಿಯುವ ಯಾವ ಲಕ್ಷಣವೂ ಕಾಣುತ್ತಿಲ್ಲ ಎನ್ನುವುದೇ ವಿಷಾದ. ಅದರ ಜೊತೆಗೆ ನೀಲಗಾರರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಉನ್ನತಿಯ ಕಡೆಗೂ ಪ್ರಜ್ಞಾವಂತ ಸಮಾಜ ಕಾರ್ಯ ಪ್ರವೃತ್ತಿಗೊಳ್ಳುವ ಅಗತ್ಯವೂ ಇದೆ. ನಿಸರ್ಗದಷ್ಟೇ ಪರಿಶುದ್ಧವಾದ ಈ ಸಂಗೀತ ಪರಂಪರೆಯನ್ನು ಉಳಿಸಿಬೆಳೆಸಬೇಕಾದ ಅಗತ್ಯ ಖಂಡಿತಾ ಇದೆ. ಅದು ಈ ನಾಡಿನ ಸಮಸ್ತರ ಜವಾಬ್ದಾರಿಯೂ ಆಗಿದೆ.
ಜನಪರ ಮೈಲಾರ
ತನ್ನ ಬಗೆಗಿನ ಕತೆ, ಹಾಡು, ಕುಣಿತ, ಆಚರಣೆ ಇವುಗಳ ಮೂಲಕ ಲಕ್ಷಾಂತರ ಜನರನ್ನು ಇಂದಿಗೂ ತನ್ನತ್ತ ಸೆಳೆದು ನಿಲ್ಲಿಸಿರುವ ಕರ್ನಾಟಕದ ದೈವ ಮೈಲಾರಲಿಂಗ.(ಕುರುಬರ ದೈವ) ಮೈಲಾರನ ವ್ಯಾಪ್ತಿ ಬಹಳ ದೊಡ್ಡದು. ಇಂದಿನ ಮಹಾರಾಷ್ಟ್ರ, ಆಂದ್ರಪ್ರದೇಶ, ಗೋವಾ, ತಮಿಳುನಾಡು ಹೀಗೆ ವಿಸ್ತøತ ದಖನ್ ಪ್ರಾಂತ್ಯಗಳೇ ಮೈಲಾರನ ನೆಲೆಗಳು. ಮೈಲಾರನ ಬಗ್ಗೆ ಜನಪದವಾಗಿ ಹರಿದು ಬಂದಿರುವ ವಿಭಿನ್ನ ವರ್ಣರಂಜಿತ ಕತೆಗಳು ಆತನ ಅಗಾಧ ವ್ಯಾಪ್ತಿಗೆ ಒಂದು ಕಾರಣ ಎನ್ನಬಹುದು. ಪಶುಪಾಲನೆ ಮತ್ತು ಬೇಸಾಯದ ಆಶಯ. ತನ್ನ ಮೂರು ಮದುವೆಗಳ ಮೂಲಕ ಜನಪದರಲ್ಲಿ ಕುತೂಹಲಕ್ಕೆ ಕಾರಣನಾದವನು ಈ ಮೈಲಾರ. ಕನ್ನಡದಲ್ಲಿ ಅತ್ಯಂತ ವಿಸ್ತøತವಾಗಿರುವ ಜನಪದ ಕಾವ್ಯಗಳು ಮೈಲಾರನಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿವೆ. ಕನಿಷ್ಟ ಐದು ರಾತ್ರಿಗಳಲ್ಲಿ ಹಾಡಬಹುದಾದ ಈ ಹಾಡುಗಳಲ್ಲಿ ಸುಮಾರು 25ರಷ್ಟು ವೈವಿಧ್ಯಮಯ ಸೊಲ್ಲುಗಳಿವೆ. 500 ಕ್ಷೇತ್ರ ಕರ್ನಾಟಕದಲ್ಲಿದೆ. ಮೈಲಾರಲಿಂಗನ ಪ್ರಚಾರದಲ್ಲಿ ಜನಪದ ಕುಣಿತದ ಪಾಲು ಗಮನಾರ್ಹವಾಗಿದೆ. ಅದೇ ರೀತಿ ಮೈಲಾರನ ಪ್ರಸಿದ್ಧಿಯ ಹಿಂದಿರುವ ಪ್ರಚಾರಕರಲ್ಲಿ ಗೊರವ-ಗೊರವಿಯರ ಪಾತ್ರವೂ ಹಿರಿದಾದುದು. ಹುಟ್ಟಿನಿಂದ ಅಥವಾ ದೀಕ್ಷೆಯಿಂದ ಗೊರವ ಮತ್ತು ಗೊರವಿಯರಾಗುವ ಇವರ ಪ್ರಧಾನ ಕಸುಬು ಭಿಕ್ಷೆ. ಈ ಭಿಕ್ಷೆಯನ್ನು ಒಂದು ಆಚರಣಾತ್ಮಕವಾಗಿಯೂ ನಡೆಸುತ್ತಾರೆ. ಸಾಸ್ಕøತಿಕವಾಗಿ ಸಂಪನ್ನರಾದ ಇವರು ತಮ್ಮ ಪ್ರಧಾನ ವಾದ್ಯವಾದ ಡಮರುಗವನ್ನು ನುಡಿಸುತ್ತಾ ಹಾಡುವ, ಕುಣಿಯುವ ಪ್ರಕ್ರಿಯೆಗೆ ತೊಡಗುತ್ತಾರೆ. ಸಾಂಪ್ರದಾಯಿಕ ವೇಷಗಳೊಂದಿಗೆ ನಡೆಯುವ ಇವರ ಕುಣಿತವು ಡಮರುಗದ ನಾದಕ್ಕನುಗುಣವಾಗಿ ನಡೆಯುತ್ತದೆ. ಮೈಲಾರನ ಮಹಿಮೆಯ ಹಾಡುಗಳನ್ನು ಕಟ್ಟಿ ಹಾಡುವ ಇವರ ಜಾಣ್ಮೆಯೂ ಮಹತ್ವವಾದುದು. ಈ ಗೊರವರು ಮೈಲಾರನ ಜಾತ್ರೆಗಳಲ್ಲಿ ನಡೆಸುವ ಪವಾಡ ಮತ್ತು ಆಚರಣೆ ವೈಶಿಷ್ಟ್ಯಪೂರ್ಣವಾದುದು. ಇಡೀ ಮೈಲಾರನ ಜಾತ್ರೆಯಲ್ಲಿ ಕಾರ್ಣಿಕದ ನುಡಿ ಅತ್ಯಂತ ಪ್ರಸಿದ್ಧವಾದ ಮತ್ತು ಕುತೂಹಲಕರವಾದ ಸಂಗತಿಯಾಗಿದೆ. ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಮೈಲಾರದಲ್ಲಿರುವವನೇ ಹಿರೇಮೈಲಾರ ಅಥವಾ ಮಣ್ಣು ಮೈಲಾರ, ಈತ ಆದಿ ಮೈಲಾರನೂ ಹೌದು. ವಿಭಿನ್ನ ಆಚರಣೆ ಮತ್ತು ನಂಬಿಕೆಗಳ ಮೂಲಕ ಲಕ್ಷಾಂತರ ಭಕ್ತರನ್ನು ತನ್ನತ್ತ ಸೆಳೆಯುತ್ತಿರುವವ ಈ ಮೈಲಾರಲಿಂಗ. ಇದಲ್ಲದೇ ಗುಡ್ಡದ ಮಾಲತೇಶ, ಮುಡುಕುತೊರೆಯ ಮಲ್ಲಿಕಾರ್ಜುನ, ಮಹಾರಾಷ್ಟ್ರದಲ್ಲಿರುವ ಖಂಡೋಬ, ಆಂದ್ರದ ಮಲ್ಲಯ್ಯ ಹೀಗೆ ಬೇರೆಬೇರೆ ಹೆಸರಿನಿಂದ ನೂರಾರು ಗುಡಿಗಳು, ದೇವಸ್ಥಾನಗಳು ದಖನ್ ಪ್ರಾಂತ್ಯದಾದ್ಯಂತ ಕಂಡುಬರುತ್ತದೆ. ತನ್ನ ಸಂಘರ್ಷಾತ್ಮಕ ವ್ಯಕ್ತಿತ್ವದ ಮೂಲಕ ದಖನ್ ಪ್ರಾಂತ್ಯದ ಅಲ್ಲಲ್ಲಿ ನೆಲೆನಿಂತ ಮೈಲಾರ ಇಲ್ಲಿಯ ನಾನಾ ವೃತ್ತಿ ಬದುಕಿನ ಪೋಷಣೆಗೂ ಕಾರಣನಾದವ. ಈತನ ವಿಶಿಷ್ಟ ಹಿನ್ನಲೆಯಿಂದ ಸ್ತ್ರೀ ಪುರುಷರನ್ನು ಮತ್ತು ಎಲ್ಲ ಜಾತಿ ಮತಗಳನ್ನು ಸಮಾನವಾಗಿ ಕಾಣುವಂತೆ ಮಾಡಿರುವುದೇ ವಿಶೇಷ. ಇಂದಿನ ಕಾಲಘಟ್ಟದಲ್ಲಿ ಮೈಲಾರ, ಈತನ ಕಾವ್ಯಗಳು ಹಾಗೂ ಆಚರಣೆಗಳು ಜೀವಪರವಾದ ನಿಲುವುಗಳಿಂದ ಹೆಚ್ಚು ಪ್ರಚಾರಗೊಳ್ಳಬೇಕು ಹಾಗೂ ಹೊಸ ತಲೆಮಾರಿಗೆ ಪರಿಚಯಿಸಲ್ಪಡಬೇಕು. ಎಲ್ಲಾ ನಂಬಿಕೆಯು ಪರಸ್ಪರ ಪ್ರೀತಿ, ಮಾನವೀಯತೆ ಮತ್ತು ಸಹಬಾಳ್ವೆಗೆ ಪ್ರೇರಣೆಯಾಗಬೇಕು. ಆದ್ದರಿಂದ ಅಲೌಕಿಕ ಮೈಲಾರ ಮತ್ತು ಲೌಕಿಕ ಗೊರವರನ್ನು ನೋಡುವ ದೃಷ್ಟಿ ಉನ್ನತಿಯ ಪರವಾಗಿರಬೇಕು ಎನ್ನುವುದೇ ನಮ್ಮ ನಿಲುವು.
ಮಲೆಯ ಮಾದೇಶ್ವರ
ಮಲೆಯ ಮಾದೇಶ್ವರ ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಮಹಾಂತ. ಈತ ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ ದಟ್ಟಾರಣ್ಯ ಪ್ರದೇಶದಲ್ಲಿ ನೆಲೆಸಿದ್ದಾನೆ. ಮಾದೇಶ್ವರನು ಶೀಶೈಲದಿಂದ(ಕಲ್ಯಾಣ ದೇವರು ಮತ್ತು ಉತ್ತರೇಜಮ್ಮ ಎಂಬ ಬಡ ಮಾದಿಗರ ಮಗ) ಹೊರಟು ಭೀಮನಕೊಲ್ಲಿ, ಬೇಲದಕುಪ್ಪೆಗಳಲ್ಲಿ ಸಾಧನೆಗಳನ್ನು ಮಾಡುತ್ತಾ, ಸುತ್ತೂರು ಮಠಕ್ಕೆ ತೆರಳಿ ರಾಗಿ ಬೀಸುವ ಕಾಯಕ ನಿರ್ವಹಿಸುತ್ತಾನೆ. ನಂತರ ಕುಂತೂರು ಮಠದಲ್ಲಿ ದನಗಳನ್ನು ಮೇಯಿಸುತ್ತಾ, ಪೂಜೆಗಾಗಿ ಹೂಗಳನ್ನು ತರುತ್ತಾ, ಅಲ್ಲಿಯೇ ಪ್ರಭುಸ್ವಾಮಿಗಳಿಂದ ದೀಕ್ಷೆ ಪಡೆದನೆಂದು ಹೇಳಲಾಗುತ್ತದೆ. ಅಲ್ಲಿಂದ ಮುಂದೆ ಕೊಳ್ಳೇಗಾಲದ ಮರಡಿಗುಡ್ಡ, ಸಿಂಗಾನಲ್ಲೂರುಗಳನ್ನು ದಾಟಿ, ಏಳು ಮಲೆಗಳ ನಡುವೆ ನೆಲೆಸುತ್ತಾನೆ. ಶಿವನೇ ಮಾದೇಶ್ವರನ ರೂಪದಲ್ಲಿ ಬಂದಿರುವನೆಂದು ಅವನ ಭಕ್ತರು ನಂಬಿದ್ದರೂ ಆತ ಐತಿಹಾಸಿಕ ವ್ಯಕ್ತಿ ಎಂಬುದು ನಿರ್ವಿವಾದ. 15ನೇ ಶತಮಾನ ಕಾಲ.
ಕರ್ನಾಟಕ ಹಾಗೂ ತಮಿಳುನಾಡಿನ ಅಸಂಖ್ಯಾತ ಭಕ್ತರ ಆರಾಧ್ಯ ದೈವನಾದ ಮಾದಪ್ಪನು, ಜನಪದ ಸಮುದಾಯದ ಮೇಲೆ ಬೀರಿರುವ ಪ್ರಭಾವ ಅಗಾಧ. ಆತನ ಹಿರಿಮೆ ಹಾಗೂ ಮಹಿಮೆಯನ್ನು ಸಾರುವ ಅನೇಕ ಕಾವ್ಯ-ಕಥನಗಳನ್ನು ಜನಪದರು ಕಟ್ಟಿ ಹಾಡಿದ್ದಾರೆ. ಹೀಗೆ ಜನರ ಕಷ್ಟಗಳಿಗೆ ಒದಗಿಬರುವ ಮಲೆ ಮಹದೇಶ್ವರನನ್ನು ಕಾಣಲು ಅವನ ಭಕ್ತರು ಕಾಲ್ನಡಿಗೆ ಪರಿಶೆಯ ಮೂಲಕ ಭಕ್ತಿಪೂರ್ವಕವಾಗಿ ನಡೆದು ಬರುವುದನ್ನು ಇಂದಿಗೂ ಕಾಣಬಹುದು.
ಮಾದೇಶ್ವರನ ಕಂಸಾಳೆ ವಾದ್ಯವು ಹಾಡುವುದಕ್ಕಷ್ಟೇ ಅಲ್ಲದೆ, ವಿಶಿಷ್ಟ ನೃತ್ಯ ಪ್ರಕಾರವಾಗಿಯೂ ಹೊಸ ಆಯಾಮಗಳನ್ನು ಪಡೆದಿದೆ. ಮಾದೇಶ್ವರನು ಕಥೆಯ ರೂಪದಲ್ಲಿ ಜನಪದರ ನಡುವೆ ಜೀವಂತವಾಗಿರುವಂತೆಯೇ, ಸಿನಿಮಾ ಹಾಗೂ ಸುಗಮ ಸಂಗೀತಗಳಲ್ಲಿಯೂ ಹೊಸ ಸ್ವರೂಪ ಪಡೆದಿದ್ದಾನೆ.
• ಮಲೆಮಾದೇಶ್ವರನ ಕಥೆಯನ್ನು ಹಾಡುವುದು, ಹಾಡಿಸುವುದು ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಗುಡ್ಡರ ಕೋರಣ್ಯ ಭಿಕ್ಷೆಗೂ, ಕಥೆ ಕಲಿಯುವುದಕ್ಕೂ ಇರುವ ಸಂಬಂಧವು ಅನೇಕ ಸವಾಲುಗಳನ್ನು ಹುಟ್ಟಿಸುತ್ತಿದೆ. ಗಾಯನ, ಕಾವ್ಯ, ನೃತ್ಯಗಳ ಮುದ್ದುಮಾದೇವನ ಪರಂಪರೆಯು ವಿಸ್ಮøತಿಗೆ ಹೋಗುತ್ತಿರುವಂತೆ ಕಂಡರೂ, ಆತನು ಮಾತ್ರ ಎಪ್ಪತ್ತೇಳು ಮಲೆಗಳ ನಡುವೆ ಕುಳಿತು ಲಕ್ಷಾಂತರ ಭಕ್ತರನ್ನು ತನ್ನೆಡೆಗೆ ಸೆಳೆವ ಶಿಷ್ಟ ದೇವನಾಗಿ ಬದಲಾಗಿದ್ದಾನೆ.
ಜುಂಜಪ್ಪ
ಕಾಡುಗೊಲ್ಲರ ಪ್ರಧಾನ ದೈವವಾದ ಜುಂಜಪ್ಪ ವಲಸೆಗಾರ ಪಶುಪಾಲಕ ವರ್ಗದ ಸಾಂಸ್ಕøತಿಕ ನಾಯಕ. ಕರ್ನಾಟಕ ಆಂದ್ರ ಭಾಗದಲ್ಲಿ ಹರಡಿಕೊಂಡಿದೆ. ಕಾವ್ಯದಲ್ಲಿ ಈತನ ತಂದೆ ಕೆಂಗುರಿ ಮಲ್ಲೇ ಗೌಡ, ತಾಯಿ ಸಿತ್ತಮ್ಮ, ಸೀತಮ್ಮನ ಬಲ ತೋಳನ್ನು ಸೀಳಿ ಬಂಗಾರದ ಹಲ್ಲಿಯಾಗಿ ಹುಟ್ಟಿದ. ಈತ ಭೂಲೋಕದಲ್ಲಿರುವುದು ಹದಿನಾರು ವರ್ಷ ಮಾತ್ರ. ಈ ಅವಧಿಯಲ್ಲಿ ಏಳು ಲಕ್ಷ ದನಗಳನ್ನು ಕಾಯುತ್ತಿದ್ದ. ಅದರಲ್ಲಿ ಏಳು ವರ್ಷ ಹಾವು ಚೇಳುಗಳ ಮಧ್ಯೆ ಇರುತ್ತಾನೆ. ತುಮಕೂರು ಚಿತ್ರದುರ್ಗ, ಬೆಂಗಳೂರು, ಹಾಸನ, ಬಳ್ಳಾರಿಗಳಲ್ಲಿ ಆರಾಧನೆ ಇದೆ. ಸಿರಾ ತಾಲೂಕಿನ ಬೇವಿನಹಳ್ಳಿ ಮತ್ತು ಗುಬ್ಬಿ ತಾಲೂಕಿನ ಹಾಗಲವಾಡಿ ಜುಂಜಪ್ಪನ ಪ್ರಮುಖ ನೆಲೆಗಳು. ಉತ್ತರ ಕರ್ನಾಟಕದ ಪ್ರಮುಖ ನೆಲೆಗಳಲ್ಲಿ ಇಂದಿಗೂಜುಂಜಪ್ಪನ ಆಚರಣೆ, ಜಾತ್ರೆ, ಹಬ್ಬದ ರೀತಿಯಲ್ಲಿ ನಡೆಯುತ್ತದೆ. ಈತನನ್ನು ಮೈಲಾರನ ದೊಡ್ಡಮಗನೆಂದೂ ಕರೆಯಲಾಗಿದೆ. ಶಿವನ ಮಗ ವೀರಭದ್ರನ ಅವತಾರವೆಂದೂ ಮಹಾಕಾವ್ಯದಲ್ಲಿ ಕರೆಯಲಾಗಿದೆ. ಮೈಲಾರನಂಮತೆ ಜುಂಜಪ್ಪನನ್ನೂ ಹುತ್ತದ ದೈವವೆಂದು ಕರೆಯಲಾಗಿದೆ. ಕಾಡುಗೊಲ್ಲರ ಹೊರತಾಗಿ ಇತರ ಜನರೂ ಪೂಜಿಸುತ್ತಾರೆ.
ಈತನ ಜೊತೆಗೆ ಎತ್ತಪ್ಪ, ಚಿತ್ತ ದೇವರು, ಕಾಟಯ್ಯ, ಪಾತೇ ದೇವರು, ಕೇತೇ ದೇವರು, ಗೌರಸಂದ್ರದ ಮಾರಮ್ಮ, ಬೇವಿನಹಳ್ಳಿಯ ಕರಿಯಮ್ಮ, ಭೂತಪ್ಪನ್ನು ಆರಾಧಿಸುತ್ತಾರೆ. ಜಾತ್ರೆಯಲ್ಲಿ ಚೇಳು, ಮಂಡರಗಪ್ಪೆ, ಹಾವುಗಳ ಕಚ್ಚಿ ಗುಣವಾದರೆ ಇವುಗಳದೇ ಪ್ರತಿರೂಪದ ಹರಕೆ ಹಾಕುತ್ತಾರೆ. ದನಗಳಿಗೆ ಬರುವ ಸಮಸ್ಯಗೆ ಪರಿಹಾರವಾಗಿ ಹರಕೆ ಹಾಕುತ್ತಾರೆ.
ಸಮಾನ ಆಶಯ
• ಅಯೋನಿಜತ್ವ (ಮೊಟ್ಟೆಯಿಂದ,(ದೇಯಿ), ಬಂಗಾರದ ಹೂ ಮಗುವಾಗುವುದು(ಸಿರಿ), ಬಲ ತೋಳಿನಿಂದ ಬಂಗಾರದ ಹಲ್ಲಿಯಾಗುವುದು(ಜುಂಜಪ್ಪ), ಇನಿಮಾವಿನ ಹಣ್ಣಾಗುವ ಮೂಲಕ ತಾಯಿ ಗರ್ಭ ಸೇರುವುದು(ಮಾದಪ್ಪ), ತಾವರೆಯ ಕಮಲದಂತೆ ಬೆನ್ನಮಚ್ಚೆಯಿಂದ(ಮಂಟೆಸ್ವಾಮಿ), ಪಶುಪಾಲನೆ ಮತ್ತು ಬೇಸಾಯದ ಆಶಯ,ಮಾತೃಮೂಲೀ ವ್ಯವಸ್ಥೆ. ವಿಸ್ತøತ ಜನಪದ ಕಾವ್ಯ ಇದೆ, ಆ ಜನಪದ ಕಾವ್ಯವನ್ನು ಪುನರ್‍ಸೃಷ್ಟಿಸುವ ಆಚರಣೆ(ಜಾತ್ರೆ) ಹಾಗೂ ಆರಾಧನೆ(ನೆಲೆ) ಇದೆ. ಕಾವ್ಯಗಳು ಚಾರಿತ್ರಿಕ ಸತ್ಯವನ್ನೂ ಹೇಳುತ್ತದೆ. ತುಳುವಿನ ವೀರರಲ್ಲಿ ನೇರಾನೇರ, ಕನ್ನಡದ ವೀರರಲ್ಲಿ ಪವಾಡ ಹೆಚ್ಚು.
ಡಾ.ಸುಂದರ ಕೇನಾಜೆ
Comments
Post a Comment