‘ತೋಟದೊಳಗಿನ ಜೀವಿಗಳು, ಜ್ಞಾನಶಾಖೆಯ ವಿಸ್ತರಣೆ
ಕನ್ನಡದಲ್ಲಿ ವಿಜ್ಞಾನ ಬರಹಗಳನ್ನು ಬರೆಯುವ ಅಪರೂಪದ ಬರಹಗಾರರ ಸಾಲಿಗೆ ಡಾ.ರೇವತಿನಂದನ್‍ರವರ ಸೇರ್ಪಡೆ ಕೆಲವು ವರ್ಷಗಳದ್ದು. ಮೂಲತಃ ಜೀವಶಾಸ್ತ್ರದ ಬೋಧಕರಾದ ಇವರು ಕನ್ನಡ ಸಾಹಿತ್ಯದ ಅಭಿರುಚಿಯನ್ನೂ ಹೊಂದಿದವರು. ಇವರು ಕೆಲವು ವರ್ಷಗಳ ಹಿಂದೆ ಪ್ರಕಟಿಸಿದ ‘ಇರುವೆ ಎಲ್ಲೆಲ್ಲೂ ಇರುವೆ’ ಎನ್ನುವ ಅಧ್ಯಯನಾಧಾರಿತ ಕೃತಿ ಕೆಲವೊಂದು ಕಾರಣದಿಂದ ಮೆಚ್ಚುಗೆ ಪಡೆದಿದೆ. ಆ ಕಾರಣದಿಂದಲೇ ಕರ್ನಾಟಕ ವಿಜ್ಞಾನ ಪರಿಷತ್ತಿನಂತಹ ಪ್ರತಿಷ್ಟಿತ ಸಂಸ್ಥೆ ಈ ಕೃತಿಯನ್ನು ಪ್ರಕಾಶಿಸಿದ್ದಾಗಿದೆ. ‘ತೋಟದೊಳಗಿನ ಜೀವಿಗಳು’ ಅವರ ಎರಡನೇ ಕೃತಿ, ಇದನ್ನೂ ಇದೇ ಪ್ರಕಾಶನ ಪ್ರಟಿಸಲು ಮುಂದೆ ಬಂದಿರುವುದು ಕೃತಿಯ ಮಹತ್ವಕ್ಕೆ ಹಿಡಿದ ಕನ್ನಡಿಯಾಗಿದೆ.
ಈ ಕೃತಿ ನಮ್ಮ ಸುತ್ತಮುತ್ತ ಇರುವ ನಾವು ನಿತ್ಯ ನೋಡುತ್ತಿದ್ದ ಆದರೆ ಇತ್ತೀಚೆಗೆ ನೋಡಲು ಅಪರೂಪವಾಗುತ್ತಿರುವ ಜೀವಿಗಳ ಬಗ್ಗೆ ಬರೆದ ಲೇಖನಗಳ ಸಂಗ್ರಹ. ಇಲ್ಲಿರುವ ಸುಮಾರು ಮೂವತ್ತು ಜೀವಿಗಳಲ್ಲಿ ಕೆಲವೊಂದು ಸಾಕುಪ್ರಾಣಿಗಳು. ಉಳಿದವುಗಳನ್ನು ಕಾಡುಜೀವಿಗಳೆಂದು ಕರೆಯೋಣವೇ ಎಂದರೆ, ಅದಕ್ಕೂ ಮೀರಿದ ಪರಿಚಯ ಮತ್ತು ಸಂಬಂಧ ಈ ಜೀವಿಗಳ ಮೇಲೆ ಮನುಷ್ಯನಿಗಿದೆ. ಈ ಕೃತಿ ಓದಿದಾಗ ಇದರ ಅರಿವಿವು ಸ್ಪಷ್ಟವಾಗುತ್ತದೆ. ಅಂದರೆ ನಮ್ಮ ಸುತ್ತಮುತ್ತ ನೋಡುತ್ತಿದ್ದ ಮತ್ತು ನೋಡುತ್ತಿರುವ ಅನೇಕ ಜೀವಿಗಳು ನಮ್ಮ ಸಾಕುಪ್ರಾಣಿಗಳಂತೆ ಆತ್ಮೀಯ ಸಂಬಂಧಗಳನ್ನು ಹೊಂದಿದ್ದವು ಎನ್ನುವುದು ಸತ್ಯ. ಈ ಜೀವಿಗಳು ಪ್ರಕೃತಿಯ ಜೊತೆಗೆ ಇರಿಸಿಕೊಂಡಿರುವ ಸಂಬಂಧ, ಆ ಮೂಲಕ ಮನುಷ್ಯ ಬದುಕಿಗೆ ನೆರವಾಗುವ ರೀತಿಯನ್ನು ಈ ಕೃತಿ ಪರಿಚಯಿಸುತ್ತದೆ. ಅತ್ತ ಕತೆಯೂ ಅಲ್ಲದ ಇತ್ತ ಪೂರ್ಣ ವೈಜ್ಞಾನಿಕ ವಿಶ್ಲೇಷಣೆಯೂ ಅಲ್ಲದ ಆದರೆ ಇವೆರಡನ್ನೂ ಒಳಗೊಂಡ ವಿಧಾನವೇ ಈ ಕೃತಿಯ ವಿಶೇಷತೆ. ಆದ್ದರಿಂದ ಈ ಕೃತಿಗೆ ಎಲ್ಲಾ ವರ್ಗವನ್ನು ತಲುಪಬಹುದಾದ ಸಾಮಥ್ರ್ಯ ಇದೆ. ಆಸಕ್ತ ಮಕ್ಕಳಿಗಂತೂ ಅನೇಕ ಹೊಸ ವಿಷಯಗಳನ್ನು ಈ ಕೃತಿ ನೀಡುತ್ತದೆ.
ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಈ ನಿಸರ್ಗದಲ್ಲಿ ಹುಟ್ಟಿದ ಎಲ್ಲಾ ಜೀವಿಗಳು ಸ್ವತಂತ್ರವಾಗಿದ್ದವು. ಸಾಕು ಪ್ರಾಣಿಗಳನ್ನು ಹೊರತು ಕಾಡುಪ್ರಾಣಿಗಳಂತೂ ಸ್ವಚ್ಛಂದವಾಗಿ ಕಾಡುಗುಡ್ಡಗಳಲ್ಲಿ ಓಡಾಡುತ್ತಿದ್ದವು. ಸಮೃದ್ಧ ಕಾಡಿನ ಪರಿಣಾಮದಿಂದ ಅವುಗಳು ಊರನ್ನು ಕಾಣಲು ಬರುವ ಸ್ಥಿತಿ ಇರಲಿಲ್ಲ. ಯಾವಾಗ ಮನುಷ್ಯನ ಸ್ವಾತಂತ್ರ್ಯದ ಪರಿಭಾಷೆ ಬದಲಾಯಿತೋ ಆಗ ಪ್ರಾಣಿಗಳ ಸ್ವಾತಂತ್ರ್ಯ ಕಡಿತಗೊಳ್ಳಲು ಆರಂಭವಾಯಿತು. ಈ ಸ್ವಾತಂತ್ರ್ಯಹರಣದ ಪರಿಣಾಮವಾಗಿ ಅವುಗಳ ಸಂಖ್ಯೆಗಳು ಕ್ಷೀಣಿಸಲು ಆರಂಭಿಸಿತು. ಈ ಕ್ಷೀಣವಾಗುವ ಸ್ಥಿತಿ ಕಳೆದ ಇಪ್ಪತ್ತೈದು ವರ್ಷಗಳಿಂದ ಬಹಳ ತೀವೃವಾಗುತ್ತಿರುವುದನ್ನು ಕಾಣುತ್ತೇವೆ. ಅನೇಕ ಜೀವಿಗಳು ಇವತ್ತು ನಮ್ಮ ಕಣ್ಣಮುಂದೆ ಇಲ್ಲ ಮತ್ತು ಹಲವು ಅಳಿವಿನಂಚಿನಲ್ಲಿ ಇವೆ ಎನ್ನುವುದನ್ನು ಜೀವವಿಜ್ಞಾನಿಗಳು ಎಚ್ಚರಿಸುತ್ತಲೂ ಬರುತ್ತಿದ್ದಾರೆ. ಈ ಎಚ್ಚರಿಕೆಯ ಹಿಂದೆ ಮನುಷ್ಯ ಬದುಕಿನ ಸಹ್ಯ ನಿರ್ವಹಣೆಯ ಅಗತ್ಯ ಅಡಗಿದೆ ಎನ್ನುವುದನ್ನು ತಿಳಿದುಕೊಳ್ಳಬೇಕಾಗಿದೆ. ಅತ್ಯಂತ ಸೂಕ್ಷ್ಮ ಮತ್ತು ಜೀವವೈವಿಧ್ಯತೆಯಿಂದ ಕೂಡಿದ ಕರಾವಳಿ ಭಾಗದಲ್ಲಿ ಜೀವವಿಜ್ಞಾನದಲ್ಲಿ ಒಂದಷ್ಟು ಗುರುತರ ಕೆಲಸ ಮಾಡಿದವರು ಡಾ.ರೇವತಿನಂದನ್. ಜೀವಪರಿಸರದ ಮೇಲೆ ಆಗುತ್ತಿರುವ ಮನುಷ್ಯ ಪ್ರಹಾರವನ್ನು ಮಕ್ಕಳಿಗೆ ಹೇಳುತ್ತಾ ಬಂದವರು. ಈ ಕೃತಿಯ ಮೂಲಕ ಮತ್ತೆ ಇವರು ಅಳಿವಿನಂಚಿನ ಜೀವಿಗಳನ್ನು ನೆನಪಿಸುತ್ತಾರೆ. ಜೊತೆಗೆ ಅವುಗಳು ಉಳಿಯಬೇಕಾದ ಅನಿವಾರ್ಯ ಮತ್ತು ಕಳಕಳಿಯ ಎಚ್ಚರಿಕೆಯನ್ನು ನೀಡುತ್ತಾರೆ.
ಲೇಖಕಿ ತನ್ನ ಬಾಲ್ಯದ ನೆನಪಿನಾಳವನ್ನು ಕೆದಕುತ್ತಾ ಗ್ರಾಮೀಣ ಪ್ರದೇಶಗಳ ಜನಪದರ ಪ್ರಾಣಿ ನಂಬಿಕೆಗಳನ್ನು ಸಂದರ್ಭಾನುಸಾರ ಬಳಸಿಕೊಂಡಿದ್ದಾರೆ. ತೇಜಸ್ವಿಯವರ ಪರಿಸರ ಕತೆಗಳನ್ನು ನೆನಪಿಸುವ ಈ ಘಟನಾವಳಿಗಳು ಪ್ರತಿ ಲೇಖನದಲ್ಲಿ ಕುತೂಹಲವನ್ನು ಮೂಡಿಸುತ್ತದೆ. ಇಲ್ಲಿ ಬರುವ ಕರಿಯಪ್ಪ ಒಂದು ಕಾಲದ ಪ್ರತಿನಿಧಿ ಮಾತ್ರವಲ್ಲದೇ ಒಬ್ಬ ಪರಿಸರವಿಜ್ಞಾನಿಯೂ ಹೌದು. ಸಮೃದ್ಧವಾಗಿ ಕಾಣಸಿಗುತ್ತಿದ್ದ ಜೀವಿಗಳ ಬಗ್ಗೆ ಕೆಲವೊಮ್ಮೆ ಕರಾರುವಕ್ಕಾದ ತೀರ್ಮಾನಗಳನ್ನು ಹೇಳುತ್ತಾನೆ. ಈ ತೀರ್ಮಾನದ ಹಿಂದೆ ತಲತಲಾಂತರದಿಂದ ಆ ಜೀವಿಯ ಬಗ್ಗೆ ಇದ್ದ ನಂಬಿಕೆ ಏನು ಎನ್ನುವುದು ಅರ್ಥವಾಗುತ್ತದೆ. ಇದನ್ನು ಹೊಸ ತಲೆಮಾರಿಗೆ ಪರಿಚಯಿಸುವ ಕಾರ್ಯವನ್ನು ಈತ ಮಾಡುತ್ತಾನೆ. ಆದರೆ ಇತ್ತೀಚೆಗೆ ಈ ರೀತಿ ವರ್ಗಾಯಿಸುವ ಮೌಖಿಕ ಪರಂಪರೆಯೇ ನಿಂತುಹೋಗಿದೆ. ಇದಕ್ಕೆ ಜ್ಞಾನಶಾಖೆಯ ವಿಸ್ತರಣೆಯ ಪ್ರಭಾವವೂ ಇರಬಹುದು. ಆದರೆ ನಿಂತುಹೋದ ಈ ಮೌಖಿಕ ಪರಂಪರೆಯನ್ನು ಲಿಖಿತವಾಗಿ ವರ್ಗಾಯಿಸುವ ಕಾರ್ಯ ನಡೆಯಲೇಬೇಕು. ಆ ಕೆಲಸವನ್ನು ತನ್ನ ಮಿತಿಯಲ್ಲಿ ಡಾ.ರೇವತಿನಂದನ್ ಮಾಡುತ್ತಿದ್ದಾರೆ ಎನ್ನುವುದೇ ಸಂತೋಷದ ವಿಚಾರ.
ಇಲ್ಲಿ ಬಳಸಿರುವ ರೇಖಾಚಿತ್ರ, ಛಾಯಾಚಿತ್ರ, ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ಸರಳ ಬರಹವನ್ನು ಇನ್ನೂ ಹತ್ತಿರಕ್ಕೆ ಕೊಂಡು ಹೋಗಲು ಇವು ಸಹಕರಿಸುತ್ತವೆ. ವಿಜ್ಷಾನ ಶಿಕ್ಷಕಿಯಾದ್ದರಿಂದ ಸಹಜವಾಗಿಯೇ ಭಾಷೆ, ಪದಬಳಕೆ, ಸಾಹಿತ್ಯದಲ್ಲಿ ಸಣ್ಣಪುಟ್ಟ ಕೊರತೆ ಇದೆ. ಆದರೆ ವಸ್ತುವಿನ ಹಿನ್ನಲೆಯಿಂದ ಅದು ಗೌಣವಾಗಿರುವುದನ್ನೂ ಗುರುತಿಸಬೇಕು. ವೃತ್ತಿಯ ನಿವೃತ್ತಿಯ ನಂತರವೂ ತಾನು ಕಲಿತ ವಿಷಯವನ್ನು ಹಂಚಬೇಕೆನ್ನುವ ಪ್ರಾಮಾಣಿಕ ಕೆಲಸವನ್ನು ನಾವು ಶ್ಲಾಘಿಸಲೇಬೇಕು.
ಡಾ.ಸುಂದರ ಕೇನಾಜೆ
Comments
Post a Comment