ಫಲೋತ್ಪಾದನೆಯ ತುಡಿತದಲ್ಲಿ ತುಳುವರ ಕೆಡ್ಡಸ
ತುಳು ಜಾನಪದ ಆಚರಣೆಯಲ್ಲಿ ಕೆಡ್ಡಸಕ್ಕೆ ವಿಶೇಷ ಮಹತ್ವ ಇದೆ. ಹೆಣ್ಣಿನಲ್ಲಿ ಮಾಸಿಕವಾಗಿ ನಡೆಯುವ ಜೈವಿಕ ಕ್ರಿಯೆಯನ್ನು ಭೂಮಿಗೆ ಸಮೀಕರಿಸಿ ವಾರ್ಷಿಕವಾಗಿ ಮೂರು ದಿನ ಆಚರಿಸುವ ಆಚರಣೆಯೇ ಈ ಕೆಡ್ಡಸ. ತುಳುನಾಡಿನ ಅನೇಕ ಜಾನಪದ ವಿದ್ವಾಂಸರು ಈ ಆಚರಣೆಯನ್ನು ಬೇರೆಬೇರೆ ದೃಷ್ಟಿಕೋನಗಳಿಂದ ಬಹಳ ಹಿಂದೆಯೇ ವಿಶ್ಲೇಷಿಸಿದ್ದಾರೆ. ಸಾಮಾನ್ಯವಾಗಿ ‘ಕೆಡ್ಡ’ ಎಂದರೆ ಬೇಟೆ, ಕೆಡ್ಡಸದ ದಿನ ನಡೆಯುವ ಬೇಟೆಯ ಹಿನ್ನಲೆಯಿಂದ ಈ ಆಚರಣೆಗೆ ಈ ಹೆಸರು ಬಂದಿದೆ ಎಂದು ಅನೇಕರು ಸಮರ್ಥಿಸಿದ್ದಾರೆ. ಆದರೆ ಕೆಡ್ಡಸದ ಕ್ರಿಯಾಚರಣೆಯಲ್ಲಿ ಎರಡು ಮುಖ್ಯ ಭಾಗಗಳಿವೆ; ಒಂದು ಹೆಣ್ಣಿನಿಂದ ನಡೆಯುವ ಆಚರಣೆ, ಇನ್ನೊಂದು ಗಂಡಿನಿಂದ ನಡೆಯುವ ಕ್ರಿಯೆ. ಇಲ್ಲಿ ಗಂಡಿನಿಂದ ನಡೆಯುವ ಬೇಟೆ ಒಂದು ಕ್ರಿಯೆಯೇ ಹೊರತು ಆಚರಣೆಯಲ್ಲ. ಆದರೆ ಮನೆಯ ಹೆಣ್ಣು ತಾನು ಮುಟ್ಟಾದಾಗ ಅನುಭವಿಸುವ ನೋವು, ಸಂಕಟ, ಸಾಂತ್ವಾನದ ಹಿನ್ನಲೆಯನ್ನು ಭೂಮಿಯೂ ಹೆಣ್ಣೆಂದು ತಿಳಿದು ಆಚರಣೆಗಳ ರೂಪದಲ್ಲಿ ನಡೆಸುವ ಸಹಜ ಕ್ರಿಯೆಗಳೇ ಹೆಣ್ಣಿನಿಂದ ನಡೆಯುವ ಆಚರಣೆ. ಆದ್ದರಿಂದ ಇಲ್ಲಿ ಭೂಮಿಯ(ಹೆಣ್ಣಿನ) ಮುಟ್ಟಿನ ಸಂಗತಿ ಪ್ರಧಾನವೇ ಹೊರತು ಆ ಸಂದರ್ಭವನ್ನು ತನ್ನ ಸಾಮಥ್ರ್ಯ ಪ್ರದರ್ಶನಕ್ಕಾಗಿ ಬಳಸುವ ಗಂಡಿನ ಬೇಟೆಯಲ್ಲ ಎನ್ನುವುದನ್ನೂ ಸಮರ್ಥಿಸಬಹುದು. ಇದಕ್ಕೆ ಪೂರಕವಾಗಿ ಜಾನಪದ ವಿದ್ವಾಂಸರಾದ ಡಾ.ಕೆ ಕಮಲಾಕ್ಷರವರು ಇದನ್ನು ‘ಕೆಡು ದಿವಸ’, ಅಂದರೆ ಭೂಮಿಯ ಮೂರು ದಿನಗಳ ಕೆಟ್ಟ ದಿವಸ ಎಂದು ಋತುಮತಿಯಾದ ಹೆಣ್ಣಿನ ಬಗೆಗಿನ ಸಾಮಾಜಿಕ ಹಿನ್ನಲೆಯ ಆಧಾರದಲ್ಲಿ ವಿಶ್ಲೇಷಿಸಿದ್ದಾರೆ. ಅದೇನೇ ಇದ್ದರೂ ಈ ಆಚರಣೆಯ ಹೆಸರಿನ ಹಿನ್ನಲೆಗಿಂತಲೂ ಇದರಲ್ಲಿ ನಡೆಯುವ ಆಚರಣೆಗಳ ತಾತ್ವಿಕ ಅರ್ಥಗಳೇ ಮುಖ್ಯವೆಂದು ಹೇಳಬಹುದು.
ಭೂಮಿ ಹೆಣ್ಣೆಂದು ತಿಳಿದ ಮಾತೃ ಹೆಣ್ಣು: ತುಳುನಾಡಿನ ಕೆಡ್ಡಸ ಆಚರಣೆಗೆ ಬಹಳ ಹಳೆಯ ಚರಿತ್ರೆ ಇರುವ ಸಾಧ್ಯತೆ ಇದೆ. ಅಂದರೆ ತುಳುನಾಡಿನ ಮಾತೃಪ್ರಧಾನ ವ್ಯವಸ್ಥೆಯಲ್ಲಿ ಭೂಮಿಯನ್ನು ಹೆಣ್ಣಿಗೆ ಹೋಲಿಸಿ ಆರಾಧಿಸುವ ಪರಿಕಲ್ಪನೆ ಇಲ್ಲಿಯ ಭತ್ತ ಬೇಸಾಯದ ಚರಿತ್ರೆಯಷ್ಟೇ ಪುರಾತನವಾದುದು. ಭೂಮಿಯನ್ನು ಹೆಣ್ಣೆಂದು ತಿಳಿದು ಆಕೆಯೂ ಹೆಣ್ಣಿನಂತೆ ಋತುಮತಿಯಾಗುತ್ತಾಳೆ, ಋತುಸ್ನಾನದ ನಂತರ ಫಲೋತ್ಪಾದನೆಗೆ ಸಿದ್ದಳಾಗುತ್ತಾಳೆ, ಆ ನಂತರ ಫಲ ನೀಡುತ್ತಾಳೆ. ಆದ್ದರಿಂದ ಆ ಮೂರು ದಿನ ಭೂಮಿಯನ್ನು ಅಗೆಯಬಾರದು, ಉಳಬಾರದು, ಅದರ ಮೇಲೆ ಬಿತ್ತನೆ ನಡೆಸಬಾರದು ಇತ್ಯಾದಿ ವಿಧಿನಿಷೇಧಗಳನ್ನು ಜನಪದರು ಅದರಲ್ಲೂ ತುಳುನಾಡಿನ ಹೆಣ್ಣು ಜಾರಿಗೆ ತಂದದ್ದು ಮಾತೃಪ್ರಧಾನ ವ್ಯವಸ್ಥೆ ಜಾರಿಗೆ ಬಂದ ಆ ಕಾಲದಲೇ ಆಗಿರಬೇಕು. ಆ ಕಾಲಘಟ್ಟದಲ್ಲಿ ಮುಟ್ಟಾದ ಹೆಣ್ಣನ್ನು ಮೂರು ದಿನಗಳ ಕಾಲ ನಿಕೃಷ್ಟವಾಗಿ ನೋಡದೆ ಭೂಮಿಯನ್ನು ನೋಡುತ್ತಿರುವ ಹಾಗೇ ಸಂಭ್ರಮಿಸುವ ಆಚರಣೆಯಾಗಿ ಕಾಣುತ್ತಿದ್ದರಬೇಕು. ಹೆಣ್ಣಿನ ಮುಟ್ಟಿನ ಆಚರಣೆ ಮಾಸಿಕವಾದರೆ ಭೂಮಿಯದ್ದು ವಾರ್ಷಿಕ ಎನ್ನುವ ಪರಿಕಲ್ಪನೆಯೊಂದನ್ನು ಹೊರತುಪಡಿಸಿದರೆ, ಪ್ರಾಯಶಃ ಮಾತೃಪ್ರಧಾನ ವ್ಯವಸ್ಥೆಯ ಕಾಲಘಟ್ಟದಲ್ಲಿ ಮಾನವ ಹೆಣ್ಣಿನ ಮುಟ್ಟಿನ ಆಚರಣೆಯೂ ಕೆಡ್ಡಸದ ಆಚರಣೆಯೂ ಒಂದೇ ಸ್ವರೂಪದಲ್ಲೇ ನಡೆಯುತ್ತಿದ್ದ ಸಾಧ್ಯತೆಗಳಿವೆ. ಆದ್ದರಿಂದ ಭೂಮಿಯನ್ನು ಹೆಣ್ಣೆಂದು ತಿಳಿದವಳಲ್ಲಿ ಹೆಣ್ಣೇ ಮೊದಲಿಗಳು ಮತ್ತು ಮುಖ್ಯಳು ಎಂದು ಈ ಆಚರಣೆಯ ಮೂಲಕ ತಿಳಿಯಬಹುದು. ಇಂದಿಗೂ ಭೂಮಿಯನ್ನು ಕಾಲ್ಪನಿಕ ಋತುಸ್ನಾನಕ್ಕೆ ಕಳುಹಿಸುವ ಮೂರನೇ ದಿನ ಆಕೆಗೆ ಬೇಕಾದ ಸ್ನಾನ ಪರಿಕರಗಳನ್ನು ನೀಡುವವಳು ಮನೆಯ ಹೆಣ್ಣೇ ಆಗಿರುತ್ತಾಳೆ. ಅಲ್ಲದೇ ಮೂರು ದಿನ ಭೂಮಿಗೆ ನಾನಾ ತರದ ಅಡುಗೆ ತಯಾರಿಸಿ ಬಡಿಸುವವಳೂ ಇವಳೇ. ಆದ್ದರಿಂದ ಕೆಡ್ಡಸದ ಆಚರಣೆ ಒಂದು ಹೆಣ್ಣು ಇನ್ನೊಂದು ಹೆಣ್ಣನ್ನು ಗೌರವಿಸುವ, ಸಂತಾನೋತ್ಪತ್ತಿಗೆ ತಯಾರಾಗುವಂತೆ ಮಾಡುವ ಮತ್ತು ಆ ಮೂರು ದಿನ ಹೆಣ್ಣಿಗಿರುವ ಕಷ್ಟ-ನೋವು ಮತ್ತು ಸಂರಕ್ಷಣೆಯ ನೆಲೆಯನ್ನು ಹುಡುಕುವ ಪುನಃರಭಿನಯ ಎಂದು ಕರೆಯಬಹುದು.
ಭೂಮಿ ತನ್ನದೆಂದು ತಿಳಿದ ಪಿತೃ ಗಂಡು: ಭೂಮಿಯ ಮೂಲಕ ಹೆಣ್ಣು ತನ್ನನ್ನು ಗುರುತಿಸಿಕೊಳ್ಳಲು ಆರಂಭಿಸಿದ ಒಂದಷ್ಟು ಕಾಲಗಳ ನಂತರ ಪಿತೃಪ್ರಧಾನದ ಹೆಜ್ಜೆಗಳು ತುಳುನಾಡಿನಲ್ಲಿ ಗೋಚರಿಸಿಕೊಂಡಿವೆ. ಆಗ ಕೆಡ್ಡಸದ ಆಚರಣೆಗೆ ಸೇರ್ಪಡೆಯಾದ ಇನ್ನೆರಡು ಪ್ರಮುಖ ಅಂಶಗಳೆಂದರೆ ಒಂದು ‘ಬೇಟೆ’, ಮತ್ತೊಂದು ‘ನುಗ್ಗೆ’ಯ ಬಳಕೆ. ಇವೆರಡೂ ಹೆಣ್ಣನ್ನು ಗೆಲ್ಲುವುದಕ್ಕೆ ಅಥವಾ ಭೂಮಿ ತನ್ನದೆಂದು ಹೇಳಿಕೊಳ್ಳುವುದಕ್ಕೆ ಪುರುಷ ಬಳಸಿಕೊಂಡ ಸಾಧನಗಳು. ಬೇಟೆಯನ್ನು ನಮ್ಮ ಹಳೆಯ ಕಾವ್ಯ, ಪುರಾಣ ಮತ್ತು ಜನಪದ ಸಾಹಿತ್ಯಗಳು ಕಾಮದ ಪರ್ಯಾಯ ರೂಪವೆಂದೂ ನುಗ್ಗೆಯನ್ನು ಜನಪದರು ಕಾಮವರ್ಧಕ ಸಸ್ಯವೆಂದೂ ಬಣ್ಣಿಸಿದ್ದಾರೆ. ಹೆಣ್ಣನ್ನು ಒಲಿಸಿಕೊಳ್ಳಲು ಪಣವನ್ನು ಗೆಲ್ಲುವುದು ಅಥವಾ ಸಾಮಥ್ರ್ಯದ ಮೂಲಕ ಬೇಟೆಯನ್ನು ಜಯಿಸುವುದು ಆದಿಮ ಸಂಸ್ಕøತಿಯ ಒಂದು ಪ್ರಮುಖ ಭಾಗ. ಆದ್ದರಿಂದ ಸಂತಾನೋತ್ಪತ್ತಿಗೆ ಸಿದ್ಧಳಾಗುತ್ತಿರುವ ಮಾತೃವ್ಯವಸ್ಥೆಯ ಹೆಣ್ಣನ್ನು ಒಲಿಸಿಕೊಳ್ಳುವ ನೆಲೆಯಲ್ಲಿ ತುಳುನಾಡಿನ ಕೆಡ್ಡಸದ ಬೇಟೆ ನಡೆಯುತ್ತಿತ್ತು. ಈ ಒಲಿಸಿಕೊಳ್ಳುವ ಪ್ರಕ್ರಿಯೆಯಲ್ಲೂ ಜನಪದರು ಪ್ರಕೃತಿ ಸಹಜವಾದ ಕಾಲ ನಿರ್ಣಯವೊಂದನ್ನು ಮಾಡಿಕೊಂಡಿದ್ದರು. ಅಂದರೆ ವಸಂತ ಋತುವಿನ ಆಗಮನಕ್ಕೆ ಪೂರ್ವದಲ್ಲಿ ತುಳುನಾಡಿನಲ್ಲಿ ಬೀಸುವ ಗಾಳಿಗೆ ‘ಕೆಡ್ಡಸದ ಗಾಳಿ’ ಎಂದು ಕರೆಯುತ್ತಾರೆ. ಅತ್ತ ಚಳಿಯೂ ಅಲ್ಲದ ಇತ್ತ ಸೆಕೆಯೂ ಅಲ್ಲದ ಅಹ್ಲಾದಕರ ವಾತಾವರಣ ಇದಾಗಿದೆ. ಜನಪದರು ಇದನ್ನು ಗಿಡಮರಗಳಿಗೆ ಹೊಟ್ಟೆ(ಗರ್ಭ) ಬರಿಸುವ ಗಾಳಿ ಎಂದು ಕರೆಯುತ್ತಾರೆ. ಗಿಡಮರಗಳ ಜೊತೆಗೆ ‘ಮನುಷ್ಯನಿಗೂ ಕೂಡ’ ಎನ್ನುವ ನೆಲೆಯಲ್ಲಿ ಪುರುಷ ತನ್ನ ಅಸ್ಥಿತ್ವಕ್ಕಾಗಿ ಕೆಡ್ಡಸವನ್ನು ಬಳಸಿಕೊಳ್ಳುತ್ತಾನೆ. ಆದ್ದರಿಂದ ತುಳುವ ಹೆಣ್ಣು ಭೂಮಿಯ ಮೂಲಕ ತನ್ನ ಜೈವಿಕ ಕ್ರಿಯೆಯ ವರ್ಗಾವಣೆಯನ್ನು ಆಚರಣೆಯಾಗಿ ಕಂಡುಕೊಂಡರೆ, ಗಂಡು ಹೆಣ್ಣನ್ನು ಒಲಿಸಿಕೊಳ್ಳುವ ನೆಲೆಯಲ್ಲಿ ಇದನ್ನು ಬಳಸಿಕೊಳ್ಳುತ್ತಾನೆ. ಇದು ಮಾತೃಪ್ರಧಾನ ವ್ಯವಸ್ಥೆಯ ಶಿಥಿಲೀಕರಣಕ್ಕೆ ಪಿತೃಪ್ರಧಾನ ವ್ಯವಸ್ಥೆ ರೂಪಿಸಿದ ತಂತ್ರವೂ ಆಗಿರುತ್ತದೆ.
ಮಾತೃಪಿತೃಗಳ ಸಮನ್ವಯ: ಭೂಮಿ ಕೊಡುವ ಫಲವಂತಿಕೆ ಮತ್ತು ಹೆಣ್ಣಿನ ಸಂತಾನೋತ್ಪತ್ತಿ ಎರಡರಲ್ಲೂ ಗಂಡುಹೆಣ್ಣಿನ ಪಾತ್ರ ಸಮಾನವಾದುದು ಎನ್ನುವ ನೆಲೆಯಲ್ಲಿ ಕೆಡ್ಡಸದ ಆಚರಣೆ ಮುಂದಕ್ಕೆ ಸಮನ್ವಯದ ಸೂತ್ರವನ್ನು ಅಳವಡಿಸಿಕೊಂಡಿದೆ. ಹೆಣ್ಣು ಬಯಸಿದಂತೆ ಈ ಮೂರು ದಿನ ಗಂಡು ಭೂಮಿಯನ್ನು ಉಳುವುದಿಲ್ಲ, ಅಗೆಯುವುದೂ ಇಲ್ಲ ಹಾಗೂ ಬೀಜ ಬಿತ್ತುವುದಿಲ್ಲ. ಅಂದರೆ ಮಾತೃಸಂಸ್ಕøತಿ ಪಿತೃವ್ಯವಸ್ಥೆಯೊಂದಿಗೆ ಅನುಸಂಧಾನಗೊಳ್ಳುವ ಕಾಲದಲ್ಲಿ ಫಲವಂತಿಕೆಯ ಆಚರಣೆ ಮತ್ತು ಬೇಟೆಯ ಪದ್ಧತಿ ಎರಡೂ ಪರಸ್ಪರ ಪೂರಕವಾಗಿ ಸಾಗಿ ಬಂದಿದೆ. ಇದನ್ನು ಮಾತೃ ಮತ್ತು ಪಿತೃವಿನ ಸಮನ್ವಯ ಎನ್ನಬಹುದು. ಈ ಸಮನ್ವಯ ತುಳುನಾಡಿನಲ್ಲಿ ಕಳೆದ ಇಪ್ಪತೈದು ವರ್ಷಗಳ ಹಿಂದೆ ಅಂದರೆ ಭತ್ತ ಬೇಸಾಯಕ್ಕಾಗಿ ಭೂಮಿಯನ್ನು ಬಳಸುವವರೆಗೂ ಕಂಡು ಬರುತ್ತಿತ್ತು. ಬೇಸಾಯ ವೃತ್ತಿಯ ಕಾಲಗಣನೆಯ ನೆಲೆಯಲ್ಲಿ ಏಣಿಲು ಮುಕ್ತಾಯಕ್ಕೆ ಹೊಂದಿಕೊಂಡು ಸಂತಾನ ಪಡೆಯುವ ಸೂತ್ರಗಳನ್ನು ಕೆಡ್ಡಸದ ಮೂಲಕ ತುಳುವರು ರೂಪಿಸಿರುವ ಸಾಧ್ಯತೆಯೂ ಇದೆ. ಹೀಗೆ ಸೃಷ್ಟಿ ಕ್ರಿಯೆಯಲ್ಲಿ ಹೆಣ್ಣುಗಂಡು ಸಮಾನವಾಗಿ ಯೋಚಿಸುವ ಅವಕಾಶವೊಂದನ್ನು ಈ ಕೆಡ್ಡಸ ನೀಡಿತ್ತು. ಆದ್ದರಿಂದಲೇ ಇರಬೇಕು, ಮಾತೃಮೂಲಿಯದ ಸಮರ್ಥ ಪ್ರತಿನಿಧಿ ತುಳುನಾಡ ಸಿರಿಯಂತಹಾ ದಿಟ್ಟ ಹೆಣ್ಣು ಕೂಡ ವ್ಯವಸ್ಥೆಯ ಜೊತೆಗೆ ರಾಜಿ ಮಾಡಿಕೊಂಡದ್ದು. ಆದರೆ ಪಿತೃತ್ವದ ಪ್ರಬಲ ಪ್ರತಿಪಾದನೆ ಈ ಸಮನ್ವಯಕ್ಕೆ ದಕ್ಕೆಯಾದದ್ದೂ ಹೌದು. ಮುಟ್ಟಾದ ಹೆಣ್ಣು ಅಸ್ಪøಶ್ಯೆಯಾಗಿ ಉಳಿಯುವಲ್ಲಿ ಈ ಪ್ರಬಲ ಪ್ರತಿಪಾದನೆ ಹೆಚ್ಚು ಕೆಲಸ ಮಾಡಿದೆ. ಇದರ ಪರಿಣಾಮವೇ ಇಂದಿನ ಲಿಂಗಾನುಪಾತದ ವ್ಯತ್ಯಾಸ. ಜನಪದ ಆಚರಣೆಗಳ ಮೂಲಕ ಹೆಣ್ಣಿಗೆ ಮಾನ್ಯತೆ ನೀಡಿ ಬೆಳೆಸಿದ ತುಳುನಾಡಿನ ವಾಣಿಜ್ಯ ಆಲೋಚನೆಗಳೂ ಗಂಡಿನ ಶ್ರೇಷ್ಟತೆಯನ್ನು ಪ್ರತಿಪಾದಿಸಿವೆ ಎನ್ನುವುದೂ ಸತ್ಯವೇ.
ತುಳುವರ ಕೆಡ್ಡಸ
ಮಕರ ಮಾಸದ ಇಪ್ಪತ್ತೇಳರಿಂದ ಅಥವಾ ತುಳು ಮಾಸ ಪೊನ್ನಿಯ ಇಪ್ಪತ್ತೊಂದರಿಂದ ಅಥವಾ ಇಂಗ್ಲೀಷ್ ಕ್ಯಾಲಂಡರಿನ ಫೆಬ್ರವರಿ ಹತ್ತರಿಂದ(ದಿನಾಂಕಗಳಲ್ಲಿ ಒಂದೆರಡು ದಿನ ವ್ಯತ್ಯಾಸ ಇರುತ್ತದೆ) ಮೂರು ದಿನ ತುಳುನಾಡಿನಾದ್ಯಂತ ಆಚರಿಸಲ್ಪಡುವ ಹಬ್ಬ ಕೆಡ್ಡಸ. ಕೆಡ್ಡಸದ ಆಚರಣೆಯಲ್ಲಿ ಸಾಮಾನ್ಯವಾಗಿ ಮನೆಯ ಹೆಂಗಸು, ಋತುಮತಿಯಾದ ಭೂಮಿಯನ್ನು ಉಪಚರಿಸುವ ಕ್ರಿಯಾಚರಣೆಗಳು ನಡೆಯುತ್ತವೆ. ಮೊದಲ ದಿನ ನವಧಾನ್ಯಗಳನ್ನು ಬೆರೆಸಿ ಕೊಡಿ ಬಾಳೆಲೆಯಲ್ಲಿ ಬಡಿಸುತ್ತಾರೆ. ಇದಕ್ಕೆ ‘ಕುಡು ಅರಿ’ (ಹುರುಳಿ ಅಕ್ಕಿ) ಎನ್ನುತ್ತಾರೆ. ಜೊತೆಗೆ ಅಕ್ಕಿ ಹುರಿದು ಹುಡಿ ಮಾಡಿ ಬೆಲ್ಲ ಹಾಕಿ ಬೇಯಿಸಿ ‘ನÀನ್ಯರಿ’ ತಯಾರಿಸಿ ಬಡಿಸುವುದೂ ಇದೆ.
ಎರಡನೇಯ ದಿನ ಬೇಟೆಯಿಂದ ತಂದ ಮಾಂಸದ ಅಡುಗೆ ತಯಾರಿಸುತ್ತಾರೆ. ಅದಲ್ಲದೇ ನುಗ್ಗೆ ಬದನೆ ಸಾಂಬರನ್ನು ಬಳಸುವುದು ಕಡ್ಡಾಯ. ಆ ದಿನದ ಬೇಟೆಯ ಬಗ್ಗೆ ತುಳು ಜನಪದರಲ್ಲಿ ಹಲವು ನಂಬಿಕೆಗಳಿವೆ. ಕಾಡು ಪ್ರಾಣಿಗಳಿಗೆ ಆ ದಿನ ಜ್ವರ ಬರುತ್ತದೆ. ಹಾಗಾಗಿ ಅವು ಬಹುಬೇಗ ಬೇಟೆಗಾರನ ಈಡಿಗೆ ಬಲಿಯಾಗುತ್ತವೆ, ಆ ದಿನ ಮಾಂಸ ತಿನ್ನದಿದ್ದರೆ ಮನುಷ್ಯನ ಎಲುಬು ಕುಂಬಾಗುತ್ತದೆ ಇತ್ಯಾದಿ. ಆದ್ದರಿಂದ ಕೆಡ್ಡಸದ ಬೇಟೆ ನಡೆಯಲೇಬೇಕು, ಮಾಂಸ ತಿನ್ನಲೇಬೇಕು ಎನ್ನುವ ನಂಬಿಕೆ ತುಳುವರದ್ದು.
ಕೆಡ್ಡಸದ ಮೂರನೇ ದಿನ ಭೂಮಿ ತಾಯಿ ಋತುಸ್ನಾನ ಮಾಡುವ ದಿನ. ಅಂದು ಬೆಳಿಗ್ಗೆ ಮನೆಯ ಹಿರಿಯಾಕೆ ಭೂಮಿಗೆ ಎಣ್ಣೆ ಹೊಯ್ಯಬೇಕು. ಸ್ನಾನಕ್ಕೆ ಉಪಯೋಗಿಸುವ ಸೀಗೆ, ಬಾಗೆ, ಹೆಸರು ಹುಡಿ ಸರೋಳಿ ಸೊಪ್ಪು(ಲೋಳೆ ಉಂಟು ಮಾಡುವ ಎಲೆ), ಅರಶಿನ, ಕುಂಕುಮ, ಮಸಿ, ಲೋಳೆ ಮರದ ತೊಗಟೆ, ಕನ್ನಡಿ ಮತ್ತು ಬಾಚಣಿಕೆಯನ್ನು ಇಡುತ್ತಾರೆ. ಹೀಗೆ ಮೂರು ದಿನ ಮುಟ್ಟಾದ ಹೆಣ್ಣಿನ ಆರೈಕೆಯ ಕಲ್ಪನೆಯಲ್ಲಿ ಭೂಮಿಗೆ ನಡೆಯುತ್ತದೆ. ಈ ಮೂರು ದಿನ ಭೂಮಿಯನ್ನು ಅಗೆಯುವ, ಉಳುವ, ಬಿತ್ತುವ ಪ್ರಕ್ರಿಯೆಗೆ ಒಳಪಡಿಸುವುದಿಲ್ಲ. ಒಂದು ವೇಳೆ ನಡೆದರೆ, ಭೂಮಿಯಿಂದ ರಕ್ತ ಒಸರುತ್ತದೆ ಎನ್ನುವ ನಂಬಿಕೆ ಜನಪದರದ್ದಾಗಿದೆ. ಈ ದಿನಗಳಲ್ಲಿ ನೊಗ ನೇಗಿಲುಗಳಿಗೆ ವಿರಾಮ.
ಡಾ.ಸುಂದರ ಕೇನಾಜೆ
Comments
Post a Comment