ವಿದ್ವಾನ್ ಟಿ.ಜಿ.ಮುಡೂರು

ವಿದ್ವಾನ್ ಟಿ.ಜಿ.ಮುಡೂರು

ವಿದ್ವಾನ್ ಟಿ.ಜಿ ಮುಡೂರು ಎಂದೇ ಖ್ಯಾತರಾಗಿರುವ ವಿದ್ವಾನ್ ತಮ್ಮಯ್ಯ ಗೌಡ ಮುಡೂರು ಸುಳ್ಯ ತಾಲೂಕಿನ ಅತ್ಯಂತ ಹಿರಿಯ ಸಾಹಿತಿ. ಸುಮಾರು 40 ವರ್ಷಗಳ ಕಾಲ ಅಧ್ಯಾಪಕರಾಗಿ ನಂತರ ಕೃಷಿಕ ಮತ್ತು ಸಂಘಟಕರಾಗಿ ತಾಲೂಕಿನಾದ್ಯಂತ ಗುರುತಿಸಲ್ಪಟ್ಟವರು. ಕನ್ನಡ ಸಾರಸ್ವತ ಲೋಕದ ಪ್ರಗತಿಶೀಲ ಕಾಲಘಟ್ಟದಲ್ಲಿ ಬರವಣಿಗೆಯ ಕೈಂಕರ್ಯಕ್ಕೆ ತೊಡಗಿದ ಟಿ.ಜಿ. ಮುಡೂರರ ಬರವಣಿಗೆಯಲ್ಲಿ ನವೋದಯದ ದಟ್ಟ ಪ್ರಭಾವ ಹಾಗೂ ಬಂಡಾಯದ ಛಾಯೆಯೂ ಎದ್ದು ಕಾಣುತ್ತದೆ. ಅಂದರೆ ಸಮಕಾಲೀನ ಸಾಹಿತ್ಯದ ಹರಿವನ್ನು ಗ್ರಾಮೀಣ ಪ್ರದೇಶವೊಂದರಲ್ಲಿ ಕುಳಿತು ಗಮನಿಸುತ್ತಾ ಅದಕ್ಕೆ ಪ್ರತಿಸ್ಪಂದಿಸುವ ಪ್ರೌಢಿಮೆಯನ್ನು ಬೆಳೆಸಿಕೊಂಡವರು. ತನ್ನ 87ರ ಹರೆಯದಲ್ಲೂ ಪ್ರಗತಿಪರ ದೋರಣೆಯನ್ನು ಜೀವಂತವಾಗಿರಿಸಿ ಗೊಂಡಿರುವ ಮುಡೂರು ಸೈದ್ಧಾಂತಿಕ ನಿಲುವಿನಿಂದ ಹೊರಗೆ ಎಂದಿಗೂ ರಾಜಿ ಮಾಡಿಕೊಂಡವರೇ ಅಲ್ಲ. ಯಾವುದೇ ಸಂದರ್ಭದಲ್ಲಾದರೂ ಹೇಳಬೇಕಾದುದನ್ನು ದಿಟ್ಟ ಮತ್ತು ನೇರವಾಗಿ ಹೇಳುವ ಗುಣವನ್ನು ಮೈಗೂಡಿಸಿಕೊಂಡವರು. ಸುಳ್ಯದಲ್ಲಿ ನಡೆದ ಹಲವಾರು ಸೈದ್ಧಾಂತಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಲ್ಪಟ್ಟವರು.

ಸಾಹಿತಿಯಾಗಿ ಮುಡೂರರ ಕೊಡುಗೆ ಶ್ರೇಷ್ಠವಾದುದು, ಗದ್ಯ, ಪದ್ಯ, ನಾಟಕ, ಕಾವ್ಯ ಕ್ಷೇತ್ರಗಳಲ್ಲಿ ಮುಡೂರರ ಸಾಧನೆ ಅಮೊಘವಾದುದು. ಕಾಡಮಲ್ಲಿಗೆ, ಹೊಸತು ಕಟ್ಟು, ಬಾನಂಚು, ಕುಡಿಮಿಂಚು ಇವೇ ಮೊದಲಾದ ಕವನ ಸಂಕಲನ,ಅಬ್ಬಿಯ ಮಡಿಲು, ಹೋಗ್ಬರ್ತೀನ್ರಾಜಾ,ಲೊಚಗುಟ್ಟಿತು ಹಲ್ಲಿ,ಜೀವ ದಯಾಷ್ಟಮಿ, ಧಾರಾ ಪಯಸ್ವಿನಿ, ಸಹಕಾರಿ ಪಿತಾಮಹ ಮೊಳಹಳ್ಳಿ, ಅಚ್ಚಗನ್ನಡ ಕವಿ ಕೊಳಂಬೆ, ಸಂಗಮದ ರಾಮಚಂದ,್ರ ಸಾಹಿತ್ಯ ಏನನ್ನು ಸಾಧಿಸಿದೆ?ಸಾಧಿಸುತ್ತಿದೆ- ಇವೇ ಮೊದಲಾದ ಗದ್ಯ ಬರಹ, 15 ಕ್ಕೂ ಹೆಚ್ಚಿನ ಪೌರಾಣಿಕ, ಸಾಮಾಜಿಕ,ಐತಿಹಾಸಿಕ ನಾಟಕ ಮತ್ತು ಪ್ರಹಸನ, ಐತಿಹಾಸಿಕ ಯಕ್ಷಗಾನ ಮತ್ತು ತುಳುಭಾಷೆಯಲ್ಲೂ ಪ್ರಹಸನ ರಚಿಸಿದ್ದಾರೆ. ಕನ್ನಡದ ಲಿಪಿಗಳನ್ನು ಸಂಕ್ಷೇಪಿಸಿ ಸರಳಗನ್ನಡದ ಪರಿಚಯವನ್ನು ಮಾಡಿದ್ದಾರೆ. ಸೃಜನಶೀಲ ಸಾಹಿತ್ಯದ ರಚನೆಯ ಜೊತೆಗೆ ಸಮಕಾಲೀನ ಸಂವೇದನೆಗಳಿಗೆ ಸದಾ ಸ್ಪಂದಿಸುತ್ತಾ ಬಂದಿರುವ ಮುಡೂರು ಸುಳ್ಯದ ಸಾಹಿತ್ಯ ಕ್ಷೇತ್ರವನ್ನು ಪರಿಶುದ್ಧವಾಗಿರಿಸುವಲ್ಲಿ ಶ್ರಮಿಸುತ್ತಾ ಬಂದವರು. ಸರಳ ಜೀವನ,ಉನ್ನತ ಚಿಂತನೆ ಇದು ಮುಡೂರರ ಬದುಕಿನ ಧ್ಯೇಯ.

ಅಧ್ಯಾಪನ ಟಿ.ಜಿ.ಮುಡೂರರ ನಿಡುಗಾಲದ ವೃತ್ತಿ, ಸುಮಾರು 40 ವರ್ಷಗಳ ಸುದೀರ್ಘ ಅಧ್ಯಾಪಕ ವೃತ್ತಿಯಲ್ಲಿ ಸಾವಿರಾರು ಶಿಷ್ಯವೃಂದವನ್ನು ರೂಪಿಸಿದ್ದಾರೆ. ಕೇವಲ ಒಬ್ಬ ಶಿಕ್ಷಕನಾಗಿ ಮಾತ್ರ ವೃತ್ತಿಯನ್ನು ನಿರ್ವಹಿಸದೆ, ವಿಧ್ಯಾರ್ಥಿಗಳಲ್ಲಿ ಕಲೆ, ಸಾಹಿತ್ಯ, ಸಂಸ್ಕøತಿಯನ್ನು ಉದ್ದೀಪನಗೊಳಿಸುವ ಮಾರ್ಗದರ್ಶಕರಾಗಿಯೂ ಗುರುತಿಸಲ್ಪಟ್ಟಿದ್ದಾರೆ. ಅವರ ಅನೇಕ ಶಿಷ್ಯರು ಅಂತರಾಷ್ಟ್ರೀಯ ತಜ್ಞರಾಗಿ ಬೆಳೆದಿರುವುದೇ ಇದಕ್ಕೆ ನಿದರ್ಶನ. ಶಿಷ್ಯರಿಗೆ ವಜ್ರದ ಹಾಗೆ ಕಠಿಣವೂ ಹೂವಿನ ಹಾಗೆ ಮೃದುವೂ ಅಗಿದ್ದ ಮುಡೂರರು ಶಿಷ್ಯರ ಬೌದ್ಧಿಕ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಿದವರು.

ಸಂಘಟನೆ ಟಿ.ಜಿ.ಮುಡೂರರ ಪ್ರವೃತ್ತಿ, ಕಲ್ಮಡ್ಕದ ಸಂಗಮ ಸಾಹಿತ್ಯ ವೇದಿಕೆಯಿಂದ ಹಿಡಿದು ಪಂಜದಲ್ಲಿ ಇಂದು ನಡೆಯುವ ಸಾರ್ವಜನಿಕ ಗಣೇಶೋತ್ಸವದ ವರೆಗೆ ಟಿ.ಜಿ.ಮುಡೂರು ಬೇಕು. ಸುಳ್ಯ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್‍ನ ಪ್ರಥಮ ಅಧ್ಯಕ್ಷರಾಗಿ ಸಾಹಿತ್ಯ ರಥಕ್ಕೆ ಸಮರ್ಥ ಹೆಗಲನ್ನೇ ಕೊಟ್ಟಿದ್ದಾರೆ. ಪ್ರತಿಮಾ ಪ್ರಕಾಶನ,ಬಾಪೂಜಿ ವಿದ್ಯಾ ಸಂಸ್ಥೆ, ಹೀಗೆ ಪಂಜ ಸೀಮೆಯಲ್ಲಿ ಅನೇಕ ಸಂಘಟನೆಗಳಿಗೆ ಅನಿವಾರ್ಯರಾಗಿದ್ದಾರೆ. ಇಂದಿಗೂ ಮುಂದೆ ನಿಂತು ಮಾಡುವ,ಮಾಡಿಸುವ ಮನೋಬಲ ಮುಡೂರರಲ್ಲಿ ಸುದೃಢವಾಗಿಯೇ ಇದೆ.

ಕೃಷಿ ಮುಡೂರರ ಉಪವೃತ್ತಿ, ನಿವೃತ್ತಿಯ ನಂತರ ಇದು ಪ್ರಧಾನ ವೃತ್ತಿಯೂ ಹೌದು. ಎಕರೆ ಭೂಮಿಯನ್ನು ಹಸನಾಗಿಸಿರುವ ಇವರು ತನ್ನ ಪಾರಂಪರಿಕ ಕಸುಬಿಗೆ ನ್ಯಾಯ ಒದಗಿಸಿದ್ದಾರೆ.

ಬಹುಮುಖ ಸಾಧಕ ಟಿ.ಜಿ.ಮುಡೂರಿಗೆ ನಿಜವಾಗಿಯೂ ದೊರೆತ ಮಾನ್ಯತೆ ಕಡಿಮೆಯೇ. ಅವರ ಕೆಲಸ ಮತ್ತು ವ್ಯಕ್ತಿತ್ವಕ್ಕೆ ಸರಿಯಾದ ಮನ್ನಣೆ ದೊರಕಿಲ್ಲವೆಂದೇ ಹೇಳಬಹುದು. ಪ್ರಶಸ್ತಿ,ಪರಸ್ಕಾರಗಳ ಹಿಂದೆ ಬೀಳುವ ಪ್ರವೃತ್ತಿ ಇಲ್ಲದಿರುವುದೇ ಇದಕ್ಕೆ ಮೂಲ ಕಾರಣ. ಈ ಮಧ್ಯೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 2004ರಲ್ಲಿ ಇವರ ಅಭಿಮಾನಿ ಮತ್ತು ಶಿಷ್ಯ ವೃಂದ ಇವರನ್ನು ಅಭಿನಂದಿಸಿ ‘ನಂದಾದೀಪ’ ಎನ್ನುವ ಅಭಿನಂದನಾ ಹಾಗೂ ಸಮಗ್ರ ಕೃತಿಯ ಸಂಪುಟ ಸಮರ್ಪಿಸಿದೆ. ಹೊಗಳಿಕೆಗೆ ಹಿಗ್ಗದ ತೆಗಳಿಕೆಗೆ ಕುಗ್ಗದ ಸಮಚಿತ್ತ ಭಾವ ಟಿ.ಜಿ. ಮುಡೂರರದ್ದು. ಹಾಗಾಗಿಯೇ 87 ವಸಂತವನ್ನು ಕಂಡರೂ ಆರೋಗ್ಯಪೂರ್ಣ ಬದುಕು ಸಾಗಿಸುತ್ತಿರುವುದು. ಪತ್ನಿ,ಮೂವರು ಹೆಣ್ಣು,ಓರ್ವ ಗಂಡು ಮಕ್ಕಳಲ್ಲದೇ ಇಂದು ಮುಡೂರರನ್ನು ಇಷ್ಟ ಪಡುವ ಜನಸಮುದಾಯ ಅಪಾರವಿದೆ. ಎಲ್ಲವನ್ನು ಮೀರಿನಿಲ್ಲುವ ವ್ಯಕ್ತಿತ್ವವೇ ಇದಕ್ಕೆ ಕಾರಣ.

ಡಾ.ಸುಂದರ ಕೇನಾಜೆ






Comments