ಡಿ.ವಿ.ಸದಾನಂದ ಗೌಡರು

ಕುಲುಮೆಯಲ್ಲಿ ಬೆಂದ ವ್ಯಕ್ತಿತ್ವ

ಆಗಿನ್ನೂ ನಾನು ಅಕ್ಷರ ಜೋಡಿಸಿ ಓದಲು ಆರಂಭಿಸಿದ ಮತ್ತು ಇಂದಿನ ದಿನಪ್ರತಿಕೆ ಮರುದಿನ ಸಿಗುತ್ತಿದ್ದ ಕಾಲ, ಹಾಗೆಂದು ಅದು ನೂರಾರು ವರ್ಷಗಳ ಹಿಂದಿನ ಕಾಲವೇನೂ ಅಲ್ಲ. ಬರೀ ಮೂವತ್ತೈದು ವರ್ಷಗಳ ಹಿಂದೆ, ಆದರೆ ನನ್ನ ಗ್ರಾಮಕ್ಕೆ ಅದು ಕನಿಷ್ಟವೆಂದರೂ ನೂರು ವರ್ಷಗಳ ಹಿಂದಿನ ಕಾಲವೆಂದೇ ಹೇಳಬಹುದು. ಗ್ರಾಮಕ್ಕೆ ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ಬಸ್ಸ್‍ಗಳು, ಮಳೆಗಾಲದ ಆರು ತಿಂಗಳು ಸಂಪರ್ಕವೇ ಇಲ್ಲದ ಮತ್ತು ಬೇಸಿಗೆಯ ತುಂಬೆಲ್ಲಾ ಧೂಳಿನಿಂದ ಕೂಡಿದ್ದ ರಸ್ತೆಗಳು, ಒಂದು ವ್ಯವಸಾಯ ಸಹಕಾರಿ ಸಂಘ, ಒಂದು ಹೋಟೇಲು, ಒಂದು ಶಾಲೆ, ಒಂದು ಪೋಸ್ಟಾಫೀಸು, ಒಂದು ಭಜನಾ ಮಂದಿರ ಇವೇ ಸರ್ವಸ್ವವಾಗಿದ್ದ ಕಾಲ. ಆಗ ಪತ್ರಿಕೆಯೊಂದು ಈ ಗ್ರಾಮವನ್ನು ಕುಗ್ರಾಮವೆಂದು ಗುರುತಿಸಿತು. (ಇಂದು ಇದೇ ಗ್ರಾಮದ ಚಿತ್ರಣ ಬಹಳಷ್ಟು ಬದಲಾಗಿದೆ. ತಾಲೂಕಿನ ಮುಂದುವರಿದ ಗ್ರಾಮಗಳಲ್ಲಿ ಮುಂಚೂಣಿಯಲ್ಲೂ ಇದೆ.) ಆಗ ನಮ್ಮೂರಿಗೆ ಬರುತ್ತಿದ್ದ ಪತ್ರಿಕೆಗಳಲ್ಲಿ ಸಾಮಾನ್ಯವಾಗಿ ಬರುತ್ತಿದ್ದ ಹೆಸರುಗಳು ಇಬ್ಬರದು. ಒಬ್ಬರು ಶಿಕ್ಷಣ ಸಂಸ್ಥೆಗಳನ್ನು ಕಟ್ಟುತ್ತಾ ಅಕ್ಷರದ ಮಹತ್ವವನ್ನು ತಿಳಿಸುತ್ತಾ ಮಾತು ಮತ್ತು ಕೃತಿಗಳಲ್ಲಿ ತೋರಿಸುತ್ತಾ ಇದ್ದವರು, ಇನ್ನೊಬ್ಬರು ಕೃಷಿಕರ, ಕಾರ್ಮಿಕರ, ಸಹಕಾರಿಗಳ ಮತ್ತು ಅಶÀಕ್ತರ ಪರವಾಗಿ ಹೋರಾಟ, ಪ್ರತಿಭಟನೆ, ಧರಣಿ, ಬಂಧನ, ಜಾಮೀನು, ರಾಜಿ ಪಂಚಾತಿಕೆ ಇತ್ಯಾದಿಗಳನ್ನು ಮಾಡುತ್ತಾ ಜನರ ಮಧ್ಯೇ ಇದ್ದವರು. ಈ ಇಬ್ಬರಲ್ಲಿ ಎರಡನೆಯವರೇ ಡಿ.ವಿ.ಸದಾನಂದ ಗೌಡರು(ಮೊದಲಿನವರು ಡಾ.ಕುರುಂಜಿ ವೆಂಕಟ್ರಮಣ ಗೌಡರು). ಬಹುಶಃ ಆ ಕಾಲದಲ್ಲಿ ಜನಪರ ಹೋರಾಟಕ್ಕಾಗಿ ಡಿ.ವಿಯವರ ಮೇಲೆ ಎಷ್ಟು ಮೊಕದ್ದಮೆ, ಬಂಧನ, ಜಾಮಿನು ಪ್ರಕ್ರಿಯೆಗಳು ನಡೆದಿದ್ದವೋ ಆ ಲೆಕ್ಕ ಅವರಿಗೇ ಇದ್ದಿರಲಾರದು. (ನಮ್ಮಲ್ಲಿ ಇಂದಿಗೂ ಅವರನ್ನು ಡಿ.ವಿ ಎಂಬ ಎರಡಕ್ಷರದಿಂದ ಮಾತ್ರ ಕರೆಯುತ್ತಾರೆ ಮತ್ತು ಈ ಹೆಸರು ಪಕ್ಷಬೇಧ ಮರೆತು ಎಲ್ಲರಿಗೂ ಆಪ್ಯಾಯಮಾನವೇ.) ಡಿ.ವಿ.ಎಸ್‍ರವರ ಮನೆಗೂ ನಮ್ಮ ಮನೆಗೂ ಇರುವ ಅಂತರ ಕೇವಲ ಮುಕ್ಕಾಲು ಕಿ.ಮೀ, ಆದರೆ ಆರು ತಿಂಗಳು ನಮ್ಮೆಲ್ಲರನ್ನು ಅಪರಿಚಿತರನ್ನಾಗಿಸುತ್ತಿದ್ದ ಪಯಸ್ವಿನಿ ನದಿ ಗ್ರಾಮವನ್ನು ಇಬ್ಭಾಗವಾಗಿಸಿತ್ತು. (ಅದೇ ನದಿಗೆ ಡಿ.ವಿ.ಎಸ್‍ರವರು ಮುಖ್ಯಮಂತ್ರಿಗಳಾಗಿದ್ದಾಗ ಒಂದು ತೂಗುಸೇತುವೆ ಮತ್ತು ಸುಮಾರು ಏಳು ಕೋಟಿ ರೂ ವೆಚ್ಚದ ಸೇತುವೆ ನಿರ್ಮಾಣ ಮಾಡಿ ಸೇತುಬಂಧಕ್ಕೆ ಕಾರಣರಾದರು.) ಆ ಕಾಲದಲ್ಲಿ ಗ್ರಾಮದ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದ ಡಿ.ವಿ.ಎಸ್‍ರವರು ದೋಣಿ ದಾಟಿ ಕಾಲ್ನಡಿಗೆಯಲ್ಲಿ ಅಥವಾ ಸುಮಾರು ಇಪ್ಪತ್ತೈದು ಕಿ.ಮೀ ಸುತ್ತುಬಳಸಿ ತನ್ನ ಲ್ಯಾಂಬಿ ಸ್ಕೂಟರ್‍ನಲ್ಲಿ ದ್ವೀಪದಂತಿದ್ದ ಮಂಡೆಕೋಲಿಗೆ ಬರುತ್ತಿದ್ದರು. ಹಾಗೇ ಸಮಸ್ಯೆ ತೋಡಿಕೊಂಡು ಬರುವ ಜನರಿಗಾಗಿ ಮಧ್ಯರಾತ್ರಿಗಾದರೂ ಅರ್ಧ ನಿದ್ದೆಯಿಂದ ಎದ್ದು ಅದೇ ಲ್ಯಾಂಬಿ ಸ್ಕೂಟರ್ ಹತ್ತಿ ಹೋಗುತ್ತಿದ್ದರು.

ಸುಳ್ಯವಾಗಿದ್ದ ತಮ್ಮ ಕಾರ್ಯಕ್ಷೇತ್ರವನ್ನು ತೊಂಬತ್ತರ ದಶಕದಲ್ಲಿ ಡಿ.ವಿ.ಎಸ್‍ರವರು ಪುತ್ತೂರಿಗೆ ಬದಲಾಯಿಸಿಕೊಂಡರು. ಆದರೆ ಮೀಸಲು ಕ್ಷೇತ್ರವಾದ ಸುಳ್ಯಕ್ಕೆ ಬೇರೆಬೇರೆ ನೆಲೆಯಲ್ಲಿ ನಾಯಕತ್ವವನ್ನು ನೀಡುತ್ತಲೇ ಬಂದಿದ್ದರು. ಸುಳ್ಯದ ಬಹುತೇಕ ಸಮಸ್ಯೆ, ಸವಾಲು, ಹೋರಾಟಗಳಲ್ಲಿ ಮುಂಚೂಣಿಯಲ್ಲೇ ಇರುತ್ತಿದ್ದರು. ಒಂದರ್ಥದಲ್ಲಿ ಸುಳ್ಯದಂತಹಾ ಹಿಂದುಳಿದ ಪ್ರದೇಶಕ್ಕೆ ಜನಸಂಘಟಿಸಿ ಹೋರಾಟ ಮಾಡುವ ವಿಧಾನವೊಂದನ್ನು ಪರಿಣಾಮಕಾರಿಯಾಗಿ ಪರಿಚಯಿಸಿದ್ದೇ ಡಿ.ವಿ.ಎಸ್, ಅದೂ ಜನಪ್ರತಿನಿಧಿಯಾಗಿರದೇ ರಿಕ್ಷಾ ಚಾಲಕ ಸಂಘದ ಅಧ್ಯಕ್ಷನಂತಹಾ ತುಂಬಾ ಸೀಮಿತ ಹುದ್ದೆಗಳನ್ನು ಇಟ್ಟುಕೊಂಡು. (ಅದೇ ಹೋರಾಟಗಳು ಮುಂದೆ ಕರಾವಳಿಯ ಬೇರೆಬೇರೆ ಪ್ರದೇಶಗಳಿಗೆ ಹರಡಿಕೊಂಡಿತು. ಡಿ.ವಿ.ಎಸ್ ಕರಾವಳಿ ಬಿಟ್ಟ ನಂತರ ಅದರ ತೀವೃತೆ ಕಡಿಮೆಯಾದದ್ದೂ ಇದೆ.) ಪುತ್ತೂರು ಪ್ರವೇಶದ ನಂತರ ಇವರ ಬೆಳವಣಿಗೆ ಅತ್ಯಂತ ಕ್ಷಿಪ್ರ ಮತ್ತು ಮಹತ್ವದ್ದು, ಆದರೂ ಸುಳ್ಯ ಮತ್ತು ತನ್ನ ಊರಿನ ಜೊತೆಗಿನ ಭಾವನಾತ್ಮಕ ಸಂಬಂಧವನ್ನು ಇವರೆಂದೂ ಕಡಿದುಕೊಳ್ಳಲಿಲ್ಲ. ಇವರು ಮುಖ್ಯಮಂತ್ರಿಯಾಗಿದ್ದಾಗ ಊರಿಂದ ಇವರನ್ನು ಕಾಣಲು ಹೋದವರನ್ನು ಪ್ರಶ್ನಿಸದೇ ಒಳಬಿಡಬೇಕೆಂದು ತನ್ನ ಸಹಾಯಕರಿಗೆ ಸೂಚಿಸಿದ್ದರಂತೆ ಮತ್ತು ಅದು ಜಾರಿಯಲ್ಲಿದ್ದ ಅನುಭವ ಅನೇಕರಿಗೆ ಆಗಿದೆ. ಕಷ್ಟ, ನೋವು, ದುಃಖ ಇತ್ಯಾದಿ ಅನುಭವಗಳ ಪರಮಾವಧಿಯನ್ನು ಕಂಡಿದ್ದ ಡಿ.ವಿ.ಎಸ್ ಅದೃಷ್ಟಕ್ಕಿಂತಲೂ ಕೆಲಸ ಮತ್ತು ಬದ್ದತೆಯ ಮೇಲೆ ಮೊದಲಿನಿಂದಲೂ ನಂಬಿಕೆ ಇರಿಸಿಕೊಂಡವರು, ಇದು ಇವರನ್ನು ಹತ್ತಿರದಿಂದ ಬಲ್ಲ ಬಹುತೇಕರಿಗೆ ಗೊತ್ತಿದೆ. ಬಹಳ ಹಿಂದೆ ಹೀಗೆ ಒಮ್ಮೆ ಆಪ್ತವಾಗಿ ಮಾತನಾಡುತ್ತಿರುವಾಗ ಅದನ್ನವರು ಹೇಳಿದ್ದರು ಕೂಡ, “ಯಾರು ಏನು ಬೇಕಾದರೂ ಹೇಳ್ತಾ ಇರ್ಲಿ, ನಾನು ಮಾತ್ರ ನನ್ನ ಕೆÀಲಸವನ್ನು ಮಾಡುತ್ತಾ ಹೋಗುವುದು, ಪ್ರಾಮಾಣಿಕತೆಗೆ ಖಂಡಿತಾ ಬೆಲೆ ಇದೆ ಅಂತ ತಿಳಿದವರಲ್ಲಿ ನಾನೂ ಒಬ್ಬ” ಎಂದು. ಇದೇ ಮಾತನ್ನು ಇತ್ತೀಚೆಗೆ ಓರ್ವ ಸುಪ್ರಸಿದ್ಧ ಕಲಾವಿದರು ತಮ್ಮ ಸಂದರ್ಶನದ ಅವಧಿಯಲ್ಲಿ ಹೇಳಿದ್ದರು. ಅನೇಕರು ಇವರ ಪ್ರಗತಿಯನ್ನು ಅದೃಷ್ಟವೆಂದು ಬಣ್ಣಿಸುತ್ತಾರೆ. ಹಾಗೆಂದು ಅದೃಷ್ಟ ಕುಳಿತಲ್ಲಿಗೆ ಬರಲು ಸಾಧ್ಯವಿಲ್ಲ. ಬದಲಾಗಿ ಪ್ರಜ್ಞಾವಂತ ನಡಿಗೆ, ಸವಾಲನ್ನು ಅವಕಾಶವಾಗಿ ಬದಲಾಯಿಸಿಕೊಳ್ಳುವ ಛಾತಿ, ಪರಿಶ್ರಮ ಮತ್ತು ಮಹತ್ವದ ತ್ಯಾಗಗಳಿಂದ ಮಾತ್ರ ಬರುತ್ತದೆ. ಅದು ಸ್ವಾರ್ಜಿತ ಫಲ. ಆ ಪ್ರಜ್ಞಾವಂತ ತೀರ್ಮಾನಗಳೇ ಡಿ.ವಿ.ಎಸ್‍ರವರ ಸಾಧನೆಯ ಗುಟ್ಟು ಮತ್ತು ಇವರನ್ನು ಈ ಹಂತಕ್ಕೆ ತಂದು ನಿಲ್ಲಿಸಿದ ಮರ್ಮ. ಬಲಿಷ್ಟ ಸಂಘಟಿತ ಪಕ್ಷವಲ್ಲದ(ಇವರ ರಾಜಕೀಯ ಜೀವನ ಆರಂಭವಾಗುವ ಕಾಲದಲ್ಲಿ ಬಿ.ಜೆ.ಪಿ ಮೊಳಕೆಯೊಡೆಯುತ್ತಿದ್ದ ಪಕ್ಷ), ಸುಭದ್ರ ಆರ್ಥಿಕ ಸ್ಥಿತಿವಂತಿಕೆ ಇಲ್ಲದ, ನಿರ್ದಿಷ್ಟ ಗಾಡ್‍ಫಾದರ್ ಮತ್ತು ರಾಯಲ್ ರಾಜಕೀಯ ಹಿನ್ನಲೆ ಇಲ್ಲದ ವ್ಯಕ್ತಿತ್ವವೊಂದು ಈ ರೀತಿ ಬೆಳೆಯುವುದಕ್ಕೆ ಪ್ರಾಮಾಣಿಕ ಹೋರಾಟ ಪ್ರವೃತ್ತಿ, ಸಹಜ ಒಡನಾಟ ಮತ್ತು ರಾಜಕಾರಣಿಗಳಲ್ಲಿ ಅಪರೂಪವಾಗಿ ಕಾಣುವ ವಿನಮ್ರತೆಯೇ ಕಾರಣ.

ಕುಗ್ರಾಮವೊಂದರ ಶ್ರಮಿಕ ವರ್ಗದಿಂದ ಬಂದುದರಿಂದಲೇ ಇರಬೇಕು ಡಿ.ವಿ.ಎಸ್ ಎಷ್ಟೇ ಎತ್ತರಕ್ಕೆ ಏರಿದರೂ ತಾನು ಬೆಳೆದ ನೆಲೆದ ಸಂವೇದನೆಯನ್ನು ಬಿಡದೇ ಇರುವುದು. ಇವತ್ತಿಗೂ ತನ್ನ ಬಾಲ್ಯದಲ್ಲಿ ಕಂಡು ಮಾತನಾಡಿದ ಪರಿಚಿತ ವ್ಯಕ್ತಿಗಳ ಹೆಸರೆತ್ತಿ ಕರೆದು ಎದುರಿನ ವ್ಯಕ್ತಿಯನ್ನು ಚಕಿತಗೊಳಿಸಬಲ್ಲರು, ಇವರ ನೆನಪು ಶಕ್ತಿ ಅಗಾಧ. ಗ್ರಾಮ್ಯ ಬದುಕಿನ ಎಲ್ಲಾ ಸೂಕ್ಷ್ಮತೆಗಳನ್ನೂ ಇಂದೂ ಅನುಭವಿಸುತ್ತಿರುವಂತೆ ಕರಾರುವಕ್ಕಾಗಿ ಹೇಳಬಲ್ಲರು. ಸರಳತೆ ಹಾಗೂ ಸಜ್ಜನಿಕೆ ಇವರ ವ್ಯಕ್ತಿತ್ವದ ಬಹುಮುಖ್ಯ ಭಾಗ, ಆದ್ದರಿಂದಲೇ ಇರಬೇಕು ರಾಜ್ಯದ ಯಾವುದೇ ಭಾಗಕ್ಕೆ ಹೋದರೂ ಜನಮನ್ನಣೆಯನ್ನು ಗಳಿಸುತ್ತಾ ಬಂದಿರುವುದು. ಇವರು ಒಂದೆರಡು ಬಾರಿ ಹೇಳಿದ ನೆನಪು, “ಸಾಧ್ಯವಾದರೆ ಏನಾದರೂ ಒಳ್ಳೆಯದನ್ನೇ ಮಾಡಬೇಕು, ಇಲ್ಲದಿದ್ದರೆ ಸುಮ್ಮನಿರಬೇಕು. ಉದ್ದೇಶ ಪೂರ್ವಕವಾಗಿ ತೊಂದರೆಯಂತೂ ಮಾಡಬಾರದು, ಪ್ರೀತಿ ವಿಶ್ವಾಸ ನಮ್ಮನ್ನು ಉಳಿಸುತ್ತದೆ. ಅದÀಕ್ಕಿಂತ ಬೇರೆ, ಯಾರಿಗೆ ಏನು ಕೊಟ್ಟರೂ ಕಡಿಮೆಯೆ”. ಪ್ರಾಯಶಃ ಡಿ.ವಿ.ಎಸ್‍ರವರ ರಾಜಕೀಯ ಬದುಕಿನಿಂದ ಕೆಡುಕಾಗಿದೆ ಎಂದು ಹೇಳುವ ನಿದರ್ಶನಗಳು ಇಲ್ಲವೇ ಇಲ್ಲ ಎನ್ನುವಷ್ಟು ಇವರು ಸಜ್ಜನರು. ಇವರು ಪ್ರಥಮ ಲೋಕಸಭಾ ಸದಸ್ಯರಾದಾಗ ಊರಿನವರೆಲ್ಲಾ ಒಟ್ಟು ಸೇರಿ ಅದ್ದೂರಿಯ ಅಭಿನಂದನಾ ಸಮಾರಂಭಕ್ಕೆ ಪೂರ್ಣ ಸಿದ್ಧತೆ ಮಾಡಲಾಗಿತ್ತು, ಮುಜುಗರದಿಂದಲೇ ಒಪ್ಪಿಕೊಂಡವರಿಗೆ ತೀವೃ ಸಮಸ್ಯೆಯಾಗಿ ಕಾರ್ಯಕ್ರಮ ರದ್ದು ಮಾಡಬೇಕಾಯಿತು. ಹಾಗೆಂದು ಪ್ರಾಮಾಣಿಕವಾಗಿ ಆಹ್ವಾನಿಸಿದ ಊರಿನ ಯಾವುದೇ ಸಾರ್ವಜನಿಕ ಕಾರ್ಯಕ್ರಮಕ್ಕೆ ಇವರು ತಪ್ಪಿಸಿದ ನೆನಪು ನನಗಿಲ್ಲ. ಅನೇಕ ಬಾರಿ ಒಂದು ಸಣ್ಣ ಕಾರ್ಯಕ್ರಮಕ್ಕಾಗಿ ಬೆಂಗಳೂರಿನಿಂದ ಅಥವ ಹೊರರಾಜ್ಯದ ಪ್ರವಾಸದಿಂದ ಊರಿಗೆ ಬಂದು ಮತ್ತೆ ಅಲ್ಲಿಗೇ ಹೋದ ನಿದರ್ಶನಗಳೂ ಇವೆ. ಅದೇ ರೀತಿ ಇವರು ಉನ್ನತ ಸ್ಥಾನದಲ್ಲಿದ್ದಾಗ ಮತ್ತು ಇರುವಾಗ ನೇರ ಫೋನಿನಲ್ಲಿ ಮಾತನಾಡುವ ಮತ್ತು ಕೆಲವು ಬಾರಿ ಇವರೇ ತಿರುಗಿ ಕರೆ ಮಾಡಿರುವ ಉದಾಹರಣೆಗಳೂ ಇವೆ. ಪರಿಚಿತ ವ್ಯಕ್ತಿ ಯಾರೇ ಆದರೂ ಮಾತನಾಡಿಸದೇ ಅಥವ ನಿಷ್ಕಾಮ ನಗುವನ್ನು ವ್ಯಕ್ತಪಡಿಸದೇ ಮುಂದೆ ಹೋದದ್ದೇ ಇರಲಾರದು. ಯಾವತ್ತೂ ಪ್ರೀತಿ ಮತ್ತು ಸಂತೋಷ ಇಲ್ಲದ ಮುಖದಲ್ಲಿ ಸಹಜ ನಗು ಮೂಡಲು ಸಾಧ್ಯವಿಲ್ಲ. ಆದ್ದರಿಂದ ಈ ನಗುವಿಗೆ ಮಾನವಪ್ರೀತಿ ಮತ್ತು ಜೀವನೋತ್ಸಾಹದ ಅರ್ಥವನ್ನಲ್ಲದೇ ಬೇರಾವುದನ್ನೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.

ವಾಸ್ತವಿಕವಾಗಿ ಡಿ.ವಿ.ಎಸ್‍ರವರಿಗೆ ರಾಜಕೀಯ ಒಂದು ಸಂಕೇತವೇ ಹೊರತು ಅದು ಸೇಡು ತೀರಿಸುವ, ಇನ್ನೊಬ್ಬನನ್ನು ಅಪಮಾನಿಸುವ, ದುರಹಂಕಾರದಿಂದ ಮೆರೆಯುವ ಕ್ಷೇತ್ರವಂತೂ ಖಂಡಿತಾ ಅಲ್ಲ. ಇವರ ವ್ಯಕ್ತಿತ್ವವೇ ಇವರನ್ನು ಮೇಲಕ್ಕೇರಿಸಿದೆ ಎನ್ನುವುದನ್ನು ಯಾವುದೇ ವಾಸ್ತವವಾದಿಯೂ ಒಪ್ಪಿಕೊಳ್ಳಬಲ್ಲ. ಪ್ರಾಯಶಃ ಇವರು ಬೆಳೆದುಬಂದ ಕೌಟುಂಬಿಕ ಹಿನ್ನಲೆಯೂ ಇದಕ್ಕೆ ಕಾರಣವಾಗಿರಬೇಕು. ಬದುಕಿನ ಮೂಲ ಸೆಲೆಯಾದ ಇಲ್ಲಿಯ ಬೇಸಾಯ, ಸ್ವತಾಃ ಸದಾನಂದ ಗೌಡರೇ ಗದ್ದೆ ಉತ್ತು ಬಿತ್ತಿದವರು, ಧೈರ್ಯ ಮತ್ತು ಸಹಕಾರಿ ಸಂಬಂಧಗಳನ್ನು ಸಾಕ್ಷೀಕರಿಸುವ ಕೂಡುಕುಟುಂಬ, ಇವರು ರಾಜಕೀಯ ಜೀವನದ ಮೊದಲ ಹಂತದಲ್ಲಿ ಸಹಕಾರಿ ಚಳುವಳಿಯಲ್ಲಿ ಹೆಚ್ಚು ಸಕ್ರಿಯರಾಗಿದ್ದವರು. ಶೋಷಿತ ವರ್ಗದ ಸಂರಕ್ಷಣಾ ಸಂವೇದನೆಯ ಭೂತಾರಾಧನೆ, ಇಂದಿಗೂ ಕುಟುಂಬದ ಭೂತಾರಾಧನೆಯಲ್ಲಿ ಶ್ರದ್ಧೆಯಿಂದಲೇ ಪಾಲ್ಗೊಳ್ಳುತ್ತಾರೆ. ಉನ್ನತ ಸಾಂಸ್ಕøತಿಕ ರಂಗಭೂಮಿಯಾದ ಯಕ್ಷಗಾನ ಹಾಗು ಇತರ ಜನಪದ ಹಿನ್ನಲೆ, ಇವರು ಯಕ್ಷಗಾನ ಪ್ರಿಯ, ವೇಷ ತೊಟ್ಟು ಕುಣಿದ ಮತ್ತು ನಿದ್ದೆ ಬಿಟ್ಟು ಯಕ್ಷಗಾನ ನೋಡುತ್ತಿದ್ದ ಹಲವು ಸಂದರ್ಭಗಳನ್ನು ಇವರು ನೆನಪಿಸಿಕೊಳ್ಳುತ್ತಾರೆ. ಜೀವಜಲಗಳ ತಾಣವಾದ ಸಂವೃದ್ಧ ಕಾಡು-ನದಿ ಮತ್ತು ಅವುಗಳೊಂದಿಗಿನ ಸವಾಲಿನ ಬದುಕು, ಇವರ ದೇವರಗುಂಡ ಮನೆಯ ಸುತ್ತ ಸಂವೃದ್ಧ ಕಾಡು, ತುಂಬಿ ಹರಿಯುವ ಪಯಸ್ವಿನಿ ನದಿ ಅದೇ ಗತಿಯಲ್ಲಿ ಇಂದೂ ಸಾಗುತ್ತಿದೆ. ಅನ್ಯಾಯವನ್ನು ಪ್ರತಿಭಟಿಸುವ ನ್ಯಾಯಿಕ ಹಿನ್ನಲೆ ಮತ್ತು ನಿಷ್ಠೆ, ಇವರ ಹೋರಾಟದ ಬದುಕು ಹಾಗೂ ಇಂದಿನ ರಾಜಕೀಯ ಕಾಲಘಟ್ಟದಲ್ಲಿ ಇವರ ಪಕ್ಷ ನಿಷ್ಠೆ ಮತ್ತು ಕುಟುಂಬ ರಾಜಕಾರಣದಿಂದ ಹೊರಗಿರುವ ವ್ಯಕ್ತಿತ್ವ ಇದು ಬಹುದೊಡ್ಡ ಸಾಧನೆ.  ಇವೆಲ್ಲವುಗಳ ಮಧ್ಯೆ ವೈಜ್ಞಾನಿಕ ಮತ್ತು ವೈಚಾರಿಕ ಮನೋಧರ್ಮ, ಮನೆಯ ಕಷ್ಟಗಳನ್ನು ಬದಿಗಿರಿಸಿ ಯಾವ ಮೂಲ ಸೌಕರ್ಯವಿಲ್ಲದಿದ್ದರೂ ಬಿ.ಎಸ್ಸಿ ಮತ್ತು ಕಾನೂನು ಪದವಿಯನ್ನು ಆ ಕಾಲದಲ್ಲಿ ಪಡೆದದ್ದು ಮತ್ತು ಸರಕಾರಿ ಕೆಲಸವೇ ಅಂತಿಮವೆಂದು ತಿಳಿದಿದ್ದ ಕಾಲದಲ್ಲಿ ಅದನ್ನು ತ್ಯಜಿಸಿ ಹೊರಬಂದದ್ದು ಸಣ್ಣ ಸಂಗತಿಯಲ್ಲ. ಅನುಭವವಾಗಿ ಪಡೆದುಕೊಂಡ ಹಲವು ವೈಯಕ್ತಿಕ ಕಷ್ಟ ಸುಖಗಳು, ಇಂದು ನಾವು ಕಾಣುವ ಡಿ.ವಿ.ಎಸ್ ಪಡೆದ ಉನ್ನತಿಯ ಹಿಂದೆ ಅಷ್ಟೇ ಬೃಹದಾಕಾರದ ನೋವಿನ ಅನುಭವವೂ ಇದೆ. ಎಲ್ಲಕ್ಕೂ ಮುಖ್ಯವಾಗಿ ಯಶಸ್ವೀ ಬದುಕಿನ ಪಾಠವನ್ನು ಅತ್ಯಂತ ಕರಾರುವಕ್ಕಾಗಿ ಹೇಳಿಕೊಟ್ಟ ಇವರ ಅಮ್ಮ ಮತ್ತು ಸಹೋದರರು, ಇಂದಿಗೂ ಇವರೆಲ್ಲರೂ ಪರಸ್ಪರ ಆಪ್ತವಾಗಿಯೇ ಇದ್ದಾರೆ ಮತ್ತು ಡಿ.ವಿ.ಎಸ್‍ರವರ ಸಾರ್ವಜನಿಕ ಬದುಕಿನೊಂದಿಗೆ ಅಂತರವನ್ನು ಕಾಯ್ದುಕೊಂಡೇ ಬಂದಿದ್ದಾರೆ ಮತ್ತು ಸವಾಲುಗಳು ಹತ್ತಿರವಾದಾಗಲ್ಲೆಲ್ಲ ಸಾಥ್ ನೀಡುತ್ತಿರುವ ವೀರರ ಮಣ್ಣು ಕೊಡಗಿನ ಹೆಣ್ಣುಮಗಳಾದ ಇವರ ಪತ್ನಿಯ ಆಪ್ತತೆ- ಇವೆಲ್ಲವೂ ಇವರನ್ನು ಪರಿಪಕ್ವಗೊಳಿಸಿದೆ. ಆದ್ದರಿಂದಲೇ ಅಂದು ಮತ್ತು ಇಂದು ಬಹುವಾದ ಹೊಗಳಿಕೆ ಮತ್ತು ತೆಗಳಿಕೆಗೆ ಇವರು ತಲೆಕೆಡಿಸಿಕೊಳ್ಳುವುದಿಲ್ಲ. ಕುಲುಮೆಯಲ್ಲೇ ಬೆಂದ ಲೋಹಕ್ಕೆ ಇನ್ನೂ ಬೇಯುವ ಭಯವಾಗಲಿ, ತಣ್ಣಗಿರುವ ತುಡಿತವಾಗಲಿ ಇರಲು ಹೇಗೆ ಸಾಧ್ಯ?
(ಸದಾಸ್ಮಿತ -ಅಭಿನಂದನಾ ಗ್ರಂಥಕ್ಕಾಗಿ ಬರೆದ ಬರಹ)
ಡಾ.ಸುಂದರ ಕೇನಾಜೆ


Comments