ನೀಲಗಾರರು
ಕನ್ನಡ ಮೌಖಿಕ ಪರಂಪರೆಯ ಎರಡು ಮಹಾಕಾವ್ಯಗಳು ಮಲೆಮಾದೇಶ್ವರ ಮತ್ತು ಮಂಟೆಸ್ವಾಮಿ. ದಕ್ಷಿಣ ಕರ್ನಾಟಕದ ಈ ಕಾವ್ಯದ ಇಬ್ಬರು ಸಾಂಸ್ಕøತಿಕ ನಾಯಕರು ಹನ್ನೆರಡರಿಂದ ಹದಿನೈದನೆ ಶತಮಾನದ ಮಧ್ಯಭಾಗದಲ್ಲಿದ್ದವರು ಎನ್ನಲಾಗಿದೆ. ತಮ್ಮ ಸರಳತೆ, ಸಾಧನೆ ಮತ್ತು ಪವಾಡಗಳ ಮೂಲಕ ಜನರಿಂದ ಆರಾಧನೆಗೆ ಒಳಗಾದವರು.
ಇವರು ಮುಖ್ಯವಾಗಿ ಕರ್ನಾಟಕದ ಎರಡು ಪ್ರದೇಶಗಳಲ್ಲಿ ನೆಲೆ ನಿಂತರು. ಅವುಗಳೆಂದರೆ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನ ಏಳುಮಲೆಗಳ ಮಧ್ಯೆ ಮಾದೇಶ್ವರ. ಅದೇ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೊಪ್ಪಗೌಡನಪುರದಲ್ಲಿ ಮಂಟೇಸ್ವಾಮಿ. ಇದನ್ನು ಮಂಟೆಸ್ವಾಮಿ ಮಠ ಎಂದೇ ಕರೆಯಲಾಗುತ್ತದೆ. ಇದಲ್ಲದೇ ಆತನ ಶಿಷ್ಯರಾದ ಸಿದ್ಧಪ್ಪಾಜಿ, ದೊಡ್ಡಮ್ಮತಾಯಿ, ರಾಚಪ್ಪಾಜಿ, ಚನ್ನಾಜಮ್ಮ, ಫಲಾರದಯ್ಯ, ಲಿಂಗಯ್ಯ ಚನ್ನಯ್ಯ, ಗುರುಬಾರ ಲಿಂಗಯ್ಯ ಇವರುಗಳ ಅನೇಕ ಗುರುಪೀಠಗಳು, ಗದ್ದುಗೆಗಳು ದಕ್ಷಿಣ ಕರ್ನಾಟಕದ ಅಲ್ಲಲ್ಲಿ ಕಂಡುಬರುತ್ತಿದೆ. ಈ ಇಬ್ಬರ ಬಗ್ಗೆ ಹಾಡು ಕಟ್ಟಿ ಹಾಡುವ ಸಂಪ್ರದಾಯವೇ ಈ ಜನಪದ ಮಹಾಕಾವ್ಯಗಳು. ಮಲೆಮಾದೇಶ್ವರನ ಬಗೆಗಿನ ಹಾಡುಗಳನ್ನು ಕಂಸಾಳೆ ಎನ್ನುತ್ತಾರೆ. ಇದನ್ನು ದೇವರಗುಡ್ಡರು ಹಾಡುತ್ತಾರೆ. ಮಂಟೆಸ್ವಾಮಿಯ ಬಗೆಗಿನ ಹಾಡುಗಳನ್ನು ನೀಲಗಾರ ಮೇಳವೆಂದು ಕರೆಯಲಾಗಿದೆ. ಇದನ್ನು ಗುಡ್ಡರು ಹಾಡುತ್ತಾರೆ. ಈ ಎರಡು ಕಾವ್ಯ ಮತ್ತು ಆರಾಧನಾ ನೆಲೆಗಳಲ್ಲಿ ಮಂಟೇಸ್ವಾಮಿಯ ಬಗೆಗಿನ ನೀಲಗಾರ ಪರಂಪರೆಯ ಪರಿಚಯ ಇಲ್ಲಿಯದು. ಹಾಗೆಂದು ಮಂಟೇಸ್ವಾಮಿ ಪರಂಪರೆಯ ಬಗ್ಗೆ ಹಾಡುವವರು ಕೇವಲ ನೀಲಗಾರರು ಮಾತ್ರವಲ್ಲ, ಮಾದೇಶ್ವರನ ಪರಂಪರೆಯ ದೇವರ ಗುಡ್ಡರು ಕೂಡ. ಈ ದೇವರ ಗುಡ್ಡರು ಮಂಟೇಸ್ವಾಮಿಯನ್ನೂ ನೀಲಗಾರರು ಮಲೆಮಾದೇಶ್ವರನ್ನೂ ಹಾಡಿನ ಮೂಲಕ ಸ್ತುತಿಸುವುದು ಈ ಎರಡು ಪರಂಪರೆಯ ಸಮನ್ವಯ ಸ್ವರೂಪ. ಕುತ್ತಿಗೆಗೆ ಹಾಕಿಕೊಳ್ಳುವ ರುದ್ರಾಕ್ಷಿ ಮಣಿಯ ಹೊರತಾಗಿ ಇನ್ನೇನು ದೊಡ್ಡ ವ್ಯತ್ಯಾಸ ಈ ಎರಡೂ ಪರಂಪರೆಯಲ್ಲಿ ಕಂಡುಬರುವುದಿಲ್ಲ.
ಕರ್ನಾಟಕ ರಾಜ್ಯದ ಚಾಮರಾಜನಗರ, ಮೈಸೂರು, ಮಂಡ್ಯ, ಬೆಂಗಳೂರು ಜಿಲ್ಲೆಗಳಲ್ಲಿ ಹೆಚ್ಚು ಪ್ರಚಲಿತವಿರುವ ನೀಲಗಾರರು ವೃತ್ತಿ ಗಾಯಕರಾಗಿ ಗುರುತಿಸಿಕೊಂಡವರು. ನೀಲಗಾರ ಎನ್ನುವುದು ಒಂದು ನಿರ್ದಿಷ್ಟ ಜಾತಿಯಲ್ಲ, ಹಲವು ಜಾತಿಗಳ ದೀಕ್ಷಾ ಪುರುಷರ ಸಮೂಹ. ಗುರುವಿನ ಲೀಲೆಯನ್ನು ಹಾಡುವ ಪರಂಪರೆಯವರು ಎಂಬರ್ಥ. ಆದ್ದರಿಂದ ಲೀಲೆಗಾರ ಎನ್ನುವುದೇ ನೀಲಗಾರ ಎಂದಾಗಿದೆ. ಹಾಗೆಂದು ಗುಡ್ಡರೆಲ್ಲಾ ನೀಲಗಾರರಲ್ಲ. ಆದರೆ ನೀಲಗಾರರೆಲ್ಲರೂ ಗುಡ್ಡರೇ ಆಗಿರುತ್ತಾರೆ. ಮಂಟೆಸ್ವಾಮಿ ಹಾಗೂ ಇತರ ಸಾಂಸ್ಕøತಿಕ ನಾಯಕರ ಬಗೆಗಿನ ಕಾವ್ಯಗಳೇ ಇವರ ಹಾಡಿನ ವಸ್ತು. ಈ ಮಹಾಕಾವ್ಯದಲ್ಲಿ ನಾಲ್ಕು ಭಾಗವಿದೆ. ಅದನ್ನು ಸಾಲುಗಳು ಎಂದು ಕರೆಯುತ್ತಾರೆ. ಅದರಲ್ಲಿ ಸಿದ್ಧಾಪ್ಪಾಜಿ ಸಾಲು ಒಂದು.
ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ ಚಿಕ್ಕಲ್ಲೂರು ನೀಲಗಾರರ ಪರಂಪರೆಯ ಪ್ರಮುಖ ಪ್ರಸರಣ ಕೇಂದ್ರ. ಸಿದ್ಧಪ್ಪಾಜಿ ನೆಲೆನಿಂತ ಪ್ರದೇಶ. ನೀಲಗಾರರ ಪರಂಪರೆಯ ಆದ್ಯಪುರುಷ ಈ ಸಿದ್ಧಪ್ಪಾಜಿ. ಈತನೇ ಪರಂಜ್ಯೋತಿ ಧರೆಗೆ ದೊಡ್ಡವರ ಲೀಲೆಗಳನ್ನು ಲೋಕಕ್ಕೆ ಮೆರೆದ ಮೊದಲ ಲೀಲೆಗಾರ. ಈತನ ಹೆಸರಿನಲ್ಲಿ ನಡೆಯುವ ಚಿಕ್ಕಲ್ಲೂರಿನ ವಾರ್ಷಿಕ ಜಾತ್ರೆ ವಿಶೇಷವಾದುದು. ನಾಡಿನ ನಾನಾ ಭಾಗದಿಂದ ತಂಡೋಪತಂಡವಾಗಿ ನೂರಾರು ನೀಲಗಾರರು, ದೇವರ ಗುಡ್ಡರು ಒಂದೆಡೆ ಸೇರುವ ಜಾತ್ರೆ ಇದು. ನೀಲಗಾರರು ತಮ್ಮನ್ನು ಸಿದ್ಧಪ್ಪಾಜಿ ಗುಡ್ಡರು ಎಂದೇ ಕರೆದುಕೊಳ್ಳುತ್ತಾರೆ. ಇವರನ್ನು ಎರಡು ತಂಡಗಳಲ್ಲಿ ಗುರುತಿಸುತ್ತಾರೆ. ಇದರಲ್ಲಿ ಒಂದು ಮಂಟೆಸ್ವಾಮಿಯ ಮನೆಸ್ಥನ ಎಂದು ಕರೆಸಿಕೊಳ್ಳುವವರು, ಇವರು ಅನೇಕ ಒಕ್ಕಲುಗಳಲ್ಲಿ ಸ್ವಾಮಿಯ ಕಥೆಯನ್ನು ಹಾಡದವರು ಮತ್ತು ಒಂಟಿ ರುದ್ರಾಕ್ಷಿ ಮಣಿಯನ್ನು ಧರಿಸುವವರು. ಹಾಗೆಂದು ಈ ಹಾಡುವ ಪದ್ಧತಿಯನ್ನು ಎಲ್ಲರೂ ಅನುಸರಿಸುವುದಿಲ್ಲ. ರಾಗ, ಕಾವ್ಯಪ್ರಜ್ಞೆ ಇದ್ದವರು ಮಾತ್ರ ಹಾಡುತ್ತಾರೆ. ಅವರು ಸ್ವಾಮಿಯ ವಾರದಂದು, ಗದ್ದುಗೆ ಪೂಜೆ ಮಾಡುವಾಗ, ಗುರುಮನೆಗೆ ಎಡೆಕಟ್ಟಿಗೆ ಹೋಗುವ ಮೂವತ್ತೊಂದು ಮಣಿಗಳ ರುದ್ರಾಕ್ಷೆ ಸರವನ್ನು ಧರಿಸಿ ಹಾಡುತ್ತಾನೆ.
ನೀಲಗಾರರು ಕೌಂಟುಬಿಕ ಬದುಕನ್ನು ನಡೆಸುವವರು, ಮನೆಸ್ತನದಲ್ಲಿ ಹುಟ್ಟಿದ ಹಿರಿಯ ಮಗನನ್ನು ಏಳು ವರ್ಷಗಳಿಗೆ ಶ್ರೀಮಠಕ್ಕೆ ಕರೆದುಕೊಂಡು ಹೋಗಿ ದೀಕ್ಷೆ ಕೊಡಲಾಗುವುದು. ನೀಲಗಾರನಿಗೆ ಹಿರಿಯ ಮಗ ಗಂಡಾಗಿದ್ದರೆ ಆತನಿಗೇ ದೀಕ್ಷೆ. ಇಲ್ಲಾ ಯಾವ ಮಗನಿಗಾದರೂ ಕೊಡಬಹುದು. ಮಕ್ಕಳೇ ಇಲ್ಲದಿದ್ದರೆ ಯಾರನ್ನಾದರೂ ದತ್ತು ಪಡೆದಾದರೂ ದೀಕ್ಷೆ ಕೊಡಬಹುದು. ಈ ದೀಕ್ಷೆ ಬೊಪ್ಪನಗೌಡನಪುರದ ಮಠದಲ್ಲೋ ಮಳವಳ್ಳಿ ಮಠದಲ್ಲೋ ಕಪ್ಪಡಿ ಅಥವಾ ಚಿಕ್ಕಲ್ಲೂರು ಕ್ಷೇತ್ರದಲ್ಲೋ ನಡೆಯುತ್ತದೆ.
ದೀಕ್ಷೆ ಪಡೆದ ನೀಲಗಾರರು, ಕೊರಳಲ್ಲಿ ರುದ್ರಾಕ್ಷೆ, ತಲೆಗೆ ಕೆಂಪು ರುವಾಲು, ನಿಲುವಂಗಿ, ಪಂಚೆಯ ಕಚ್ಚೆ, ಜೋಳಿಗೆ ಇವುಗಳನ್ನು ಧರಿಸಿ ಸಂಚಾರ ಹೊರಡುತ್ತಾರೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಈ ವರ್ಗದವರು ತಮ್ಮ ಗಾಯನದ ಮೂಲಕ ಜೀವನ ನಿರ್ವಹಿಸುತ್ತಾರೆ. ಒಂದು ತಂಡವನ್ನು ರಚಿಸಿ ಆ ತಂಡದಲ್ಲೊಬ್ಬ ಮುಖ್ಯ ಹಾಡುಗಾರ ಇರುತ್ತಾನೆ. ಉಳಿದಂತೆ ಮೂರು ಅಥವಾ ನಾಲ್ಕು ಸಹಹಾಡುಗಾರರು ಇರುತ್ತಾರೆ. ನೀ¯ಗಾರರ ತಂಬೂರಿ ಒಂದು ವಿಶಿಷ್ಟವಾದ ಮತ್ತು ಪ್ರಧಾನವಾದ ಜನಪದ ವಾದ್ಯ. ಸಾಮಾನ್ಯವಾಗಿ ಒಂದು ಮಾರು ಉದ್ದದ ಇದನ್ನು ಹಲಸು ಅಥವಾ ಇತರ ಮರದಿಂದ ತಯಾರಿಸುತ್ತಾರೆ. ಇದನ್ನೆ ಮಂಟೇದವರ ‘ಸರಸ್ವತಿ’ ಎಂದೂ ಕರೆಯುತ್ತಾರೆ. ಚಿಕ್ಕಲ್ಲೂರಿನ ಮುತ್ತತ್ತಿರಾಯನಿಂದ ಸಿದ್ಧಪ್ಪಾಜಿಗೆ ಈ ತಂಬೂರಿ ಬಂತೆಂದು ಗಾಯಕರ ಅಭಿಪ್ರಾಯ. ಇದನ್ನು ಸಿದ್ಧಪ್ಪಾಜಿಯೇ ನುಡಿಸುತ್ತಿದ್ದನು ಎಂಬ ನಂಬಿಕೆ ನೀಲಗಾರರಲ್ಲಿದೆ. ಇದಲ್ಲದೇ ಗಗ್ಗರ ಮತ್ತು ಢಕ್ಕೆಯನ್ನೂ ನುಡಿಸುತ್ತಾರೆ. ಗಗ್ಗರವನ್ನು ಮುಖ್ಯ ಹಾಡುಗಾರನೂ ಢಕ್ಕೆಯನ್ನು ಇತರರೂ ನುಡಿಸುತ್ತಾರೆ. ತಾಳಗಳ ಬಳಕೆಯೂ ಇದೆ.
ಇಲ್ಲಿ ಧಾರ್ಮಿಕ ಮತ್ತು ಲೌಕಿಕ ಹಾಡುಗಳನ್ನು ಹಾಡಲಾಗುತ್ತದೆ. ಇದರಲ್ಲಿ ಮಂಟೇಸ್ವಾಮಿ ಕಾವ್ಯ ಧಾರ್ಮಿಕವಾಗಿರುತ್ತದೆ. ಇದಲ್ಲದೇ ಅಕ್ಕ ನಾಗಮ್ಮ, ಚೆಲುವರಾಯ, ಬಿಳಿಗಿರಿರಂಗ, ಕುಶ-ಲವರ ಕಾಳಗ, ಪಿರಿಯಾ ಪಟ್ಟಣ ಕಾಳಗ, ಬಂಜೆ ಹೊನ್ನಮ್ಮ ಹರಳಯ್ಯನವರ ಕಥೆ ಹೀಗೆ ಅನೇಕ ಲೌಕಿಕ ಕಾವ್ಯಗಳನ್ನೂ ಸುಶ್ರಾವ್ಯವಾಗಿ ಹಾಡುತ್ತಾರೆ. ಹಾಡುಗಳಲ್ಲಿ ಜನಪದ ನಾಯಕರ ಇತಿಹಾಸ, ಐತಿಹ್ಯ, ಜನರ ಧಾರ್ಮಿಕ ನಂಬಿಕೆ, ಹಾಸ್ಯ, ವಿಡಂಬನೆ, ನೀತಿ, ಲೋಕಾನುಭವ, ಇತ್ಯಾದಿಗಳು ಪ್ರಧಾನ. ಯಾವುದೇ ಲಿಖಿತ ಪಠ್ಯವಿಲ್ಲದೇ ತಲೆಮಾರಿನಿಂದ ತಲೆಮಾರಿಗೆ ಈ ಹಾಡುಗಳನ್ನು ದಾಟಿಸುತ್ತಾ ಬಂದಿದ್ದಾರೆ. ಹೀಗೆ ಹಾಡುವ ಅನೇಕ ಪ್ರಸಿದ್ಧ ಕಲಾವಿದರು ನಮ್ಮ ಮಧ್ಯೆ ಇದ್ದಾರೆ.
ನೀಲಗಾರರಲ್ಲಿ ಎರಡು ವಿಧ. ಸಾಧಾರಣ ನೀಲಗಾರರು ಮತ್ತು ತಂಬೂರಿ ನೀಲಗಾರರು. ಸಾಧಾರಣ ನೀಲಗಾರರು ಕಾವ್ಯಗಳನ್ನು ಹಾಡುವ ಸಂಪ್ರದಾಯದವರಲ್ಲ, ದೀಕ್ಷೆ ಪಡೆದು ನಿಗದಿತ ಕಾಲದಲ್ಲಿ ಭಿಕ್ಷೆ ಬೇಡಿ ಸ್ವಾಮಿ ನಿಷ್ಠೆಯನ್ನು ಪಾಲಿಸುತ್ತಾ ಬರುತ್ತಾರೆ. ಆದರೆ ತಂಬೂರಿ ನೀಲಗಾರರು ಕಾವ್ಯಗಳನ್ನು ಹಾಡುತ್ತಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಮಂಟೆಸ್ವಾಮಿಗಳ ಮಹಿಮೆಯ ಪ್ರಸಾರಕನಾದ ಸಿದ್ಧಪ್ಪಾಜಿ ಅನೇಕ ಮಂದಿ ಶಿಷ್ಯ ಪರಂಪರೆಯನ್ನು ಬೆಳೆಸಿದ ಹಾಗೂ ಆ ಶಿಷ್ಯರು ತಾಳ ತಂಬೂರಿಯನ್ನು ಹಿಡಿದು ಹಾಡುತ್ತಾ ಚಿಕ್ಕಲ್ಲೂರಿನಿಂದ ಕಪ್ಪಡಿಯವರೆಗೂ ಚಾಮರಾಜನಗರದಿಂದ ಬೆಂಗಳೂರಿನವರೆಗೂ ಭಕ್ತ ಪರಂಪರೆಯನ್ನು ಬೆಳೆಸಿದರು ಎನ್ನಲಾಗುತ್ತಿದೆ. ಈ ಪ್ರದೇಶಗಳ ಮಧ್ಯೆ ಇಂದಿಗೂ ನೂರಾರು ನೀಲಗಾರರು ವಾಸವಾಗಿದ್ದಾರೆ.
ಈ ಚಿಕ್ಕಲ್ಲೂರು ಜಾತ್ರೆಯಲ್ಲದೇ ಮಂಟೆಸ್ವಾಮಿ ಪರಂಪರೆಯ ಇನ್ನೂ ಕೆಲವೆಡೆ ಜಾತ್ರೆಗಳು ವರ್ಷಾವಧಿ ನಡೆಯುತ್ತದೆ. ಕಪ್ಪಡಿ, ಬೊಪ್ಪಗೌಡನಪುರ, ಕುರುಬನ ಕಟ್ಟೆ ಇವೇ ಅವು. ಈ ಜಾತ್ರೆಗಳಲ್ಲಿ ಮೈಸೂರು, ಮಂಡ್ಯ ಜಿಲ್ಲೆಗಳಿಂದಲ್ಲದೇ ಅಕ್ಕಪಕ್ಕದ ಜಿಲ್ಲೆ ಮತ್ತು ರಾಜ್ಯಗಳಿಂದಲೂ ಜನ ಭಾಗವಹಿಸುತ್ತಾರೆ. ಅನೇಕ ಸಂಖ್ಯೆಯ ನೀಲಗಾರರೂ ಇಲ್ಲಿ ಭಾಗವಹಿಸುತ್ತಾರೆ. ತಮ್ಮ ಗುರು ಪರಂಪರೆಯ ಕ್ಷೇತ್ರ ದರ್ಶನವಲ್ಲದೇ ಸೇವೆಯ ನೆಪದಲ್ಲಿ ಕಲಾವಿದರ ಒಂದು ಗೋಷ್ಠಿಯೇ ನಡೆದಂತಾಗುತ್ತದೆ. ವಿವಿಧ ಪ್ರದೇಶಗಳಿಂದ ತಂಬೂರಿ ಹಿಡಿದು ನೂರಾರು ಕಲಾವಿದರು ಬರುವುದರಿಂದ ಈ ಸಾಹಿತ್ಯದ ಪರಸ್ಪರ ವಿನಿಮಯವೂ ನಡೆಯುತ್ತದೆ.
ಇಂದಿಗೂ ನೀಲಗಾರರ ಬದುಕು ಸುಖದ ಸೋಪಾನವೇನೂ ಅಲ್ಲ. ಹಾಗೆಂದು ಪ್ರಾಮಾಣಿಕವಾಗಿ ಈ ಪರಂಪರೆಯನ್ನು ಮುನ್ನಡೆಸುತ್ತಾ ಬಂದವರಿಗೆ ಅನ್ಯಾಯವೂ ಆಗಿಲ್ಲ. ಸಾಮಾಜಿಕವಾಗಿ ಹಿಂದುಳಿದ ಈ ವರ್ಗಕ್ಕೆ ಗಾಯಕ ವೃತ್ತಿಯಿಂದಲೇ ಆದಾಯ ದೊಕಿದರೂ ಇಲ್ಲಿರುವ ಸಮಸ್ಯೆ ಬೇರೆಯೇ ಆಗಿದೆ, ಆಧುನಿಕ ಸಂಗೀತಗಳ ಭರಾಟೆಯ ಮಧ್ಯೆ ಇವರ ಸಾಂಪ್ರದಾಯಿಕ ಹಾಡುಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ವರ್ಷದಿಂದ ವರ್ಷಕ್ಕೆ ಈ ಪರಂಪರೆ ಮುಕ್ತಾಯದ ಕಡೆಗೂ ಹೆಜ್ಜೆ ಇಡುತ್ತಿದೆ, ಹೊಸತಲೆಮಾರಿನ ಜನರು ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಆಧುನಿಕ ಸ್ವರೂಪದ ಕಲಿಕಾ ವಿಧಾನವನ್ನು ಅಳವಡಿಸಿದ್ದರೂ ಸದ್ಯದ ಹಿನ್ನೆಲೆಯಲ್ಲಿ ಈ ಪರಂಪರೆ ಉಳಿಯುವುದು ಕೆಲವೇ ವರ್ಷಗಳು. ವಿಶಿಷ್ಟ ವಸ್ತುವಿನ ಅಷ್ಟೇ ಮಾಧುರ್ಯದ ಕಾವ್ಯ ಧಾರ್ಮಿಕ ನೆಲೆಯಲ್ಲೂ ಕಂಠಸ್ಥವಾಗಿ ಉಳಿಯುವ ಯಾವ ಲಕ್ಷಣವೂ ಕಾಣುತ್ತಿಲ್ಲ ಎನ್ನುವುದೇ ವಿಷಾದ.
ನಿಸರ್ಗದಷ್ಟೇ ಪರಿಶುದ್ಧವಾದ ಈ ಸಂಗೀತ ಪರಂಪರೆಯನ್ನು ಉಳಿಸಿ ಬೆಳೆಸಬೇಕಾದ ಅಗತ್ಯ ಖಂಡಿತಾ ಇದೆ. ಅದರ ಜೊತೆ ನೀಲಗಾರರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಉನ್ನತಿಯ ಕಡೆಗೂ ಪ್ರಜ್ಞಾವಂತ ಸಮಾಜ ಕಾರ್ಯಪ್ರವೃತ್ತಗೊಳ್ಳುವ ಅಗತ್ಯವೂ ಇದೆ.
ಮಂಟೆಸ್ವಾಮಿ, 500 ವರ್ಷಗಳ ಹಿಂದೆಯೇ ಜಾತಿ ವಿನಾಶ ಮತ್ತು ಸಮಾನತೆಗೆ ಚಾಲನೆ ನೀಡಿ, ಜ್ವೋತಿ ಬೆಳಗಿಸಿದ ಕ್ರಾಂತಿಕಾರಿ.
ನೀಲಗಾರ ಎಂಬುವುದು ಒಂದು ನಿರ್ದಿಷ್ಠ ಜಾತಿಯಲ್ಲ. ಇದೊಂದು ವಿಶಿಷ್ಠ ಪಂಥ
ಸಾಮಾಜಿಕ ಮೌಲ್ಯ, ಸಮಾನತೆ, ನೈತಿಕ ಪ್ರಜ್ಞೆ ಮತ್ತು ಮನರಂಜನೆ ನೀಲಗಾರರ ಹಾಡು-ಕಥನಗಳಲ್ಲಿರುತ್ತದೆ
ನೀಲಗಾರ ಹಾಡುಗಾರರು, ನಿರಂತರವಾಗಿ 8 ಗಂಟೆಗಳಷ್ಟು ಹೊತ್ತು ಹಾಡುವ, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಹೊಂದಿದ್ದಾರೆ
ನೀಲಗಾರರಾಡುವ/ಹಾಡುವ ಭಾಷಾ ಶೈಲಿ ಕನ್ನಡದ ಪ್ರಾದೇಶಿಕ ಉಪಭಾಷೆಗೆ ಉದಾಹರಣೆಯಾಗಿದೆ
ಸಂಪೂರ್ಣ ಕತೆ/ಹಾಡು ತಿಳಿದಿರುವ ಬೆರಳೆಣೆಣಿಕೆಯಷ್ಟು ನೀಲಗಾರರು ಮಾತ್ರ ನಮ್ಮ ನಡುವೆ ಉಳಿದಿದ್ದಾರೆ.
-ಮಂಟೇ ಸ್ವಾಮಿ ಮತ್ತು ಆತನ ಶಿಷ್ಯರು ಸಮನ್ವಯ ಬದುಕಿನ ಸಮರ್ಥ ಪ್ರತಿನಿಧಿಗಳು.
-ಸಮಾನತೆ ಮತ್ತು ಸಹಜೀವನದ ಜ್ಯೋತಿ ಬೆಳಗಿಸಿದ ಸಾಂಸ್ಕøತಿಕ ವೀರರು.
-ನೀಲಗಾರ ಎನ್ನುವು ಒಂದು ನಿರ್ದಿಷ್ಟ ಜಾತಿಯಲ್ಲ, ಪರಂಪರೆಯನ್ನು ಪಾಲಿಸುತ್ತಾ ಬಂದ ಒಂದು ವಿಶಿಷ್ಟ ಪಂಥ.
-ಹಗಲು-ರಾತ್ರಿ ಎನ್ನದೇ ಹಾಡಬಲ್ಲ ನೀಲಗಾರರು, ಪ್ರಸ್ತುತ ಅಪರೂಪವಾಗಿ ಕಾಣಸಿಗುವ ಜನಪದ ವೃತ್ತಿ ಗಾಯಕರು.
-ಆಸಕ್ತಿ, ಕಾವ್ಯಪ್ರಜ್ಞೆ, ಪರಿಶ್ರಮ ಮತ್ತು ರಾಗ ಇವೇ ನೀಲಗಾರರ ಹಾಡಿನ ಮರ್ಮ.
-ಕಣ್ಣಿಗೆ ಕಟ್ಟುವ ಕಾವ್ಯಸಂಪತ್ತು ನೀಲಗಾರರ ಪ್ರತಿಭೆಗೆ ಹಿಡಿದ ಕನ್ನಡಿ.
-ಪ್ರಾದೇಶಿಕ ಸೊಗಡಿನ ನೀಲಗಾರರ ಭಾಷೆ ಕನ್ನಡ ಉಪಭಾಷಾ ಉತ್ಪನ್ನ.
-ಬದುಕು ಬದಲಿಸಬಲ್ಲ ನೀಲಗಾರರ ಕಂಠಸ್ಥ ಸಾಲು, ಮರೆಯಾಗುವ ದಾರಿಯಲ್ಲಿ ಹೆಜ್ಜೆ ಇಕ್ಕುತ್ತಿದೆ.
-ನೀಲಗಾರರ ವಿಷಯದಲ್ಲಿ ಪ್ರಾಮಾಣಿಕ ಹಿತಾಸಕ್ತಿಯ ಕಾರ್ಯ ಇಂದಿನ ಅನಿವಾರ್ಯ.
- ತಲೆಮಾರಿನಿಂದ ತಲೆಮಾರಿಗೆ ಹರಿಯುವ ನೀಲಗಾರ ಸಂಪ್ರದಾಯದ ಬಗ್ಗೆ ಪ್ರಜ್ಞಾವಂತ ತಲೆಗಳು ಕಾರ್ಯಪ್ರವೃತ್ತವಾಗಬೇಕು.
ಡಾ.ಸುಂದರ ಕೇನಾಜೆ
Comments
Post a Comment