ಕೋಟಿ ಚೆನ್ನಯ ದಾಖಲೀಕರಣ
ಇವರು ಕೋಟಿ-ಚೆನ್ನಯರು, ತುಳುನಾಡಿನಲ್ಲಿ ಆರಾಧನೆಗೊಳ್ಳುತ್ತಿರುವವರು. ಒಂದು ಕಾಲದಲ್ಲಿ ಲೌಕಿಕÀವಾಗಿ ಮತ್ತು ಮಾನವರಾಗಿ ಬದುಕಿ ಇತಿಹಾಸ ನಿರ್ಮಿಸಿದವರು. ಮುಂದೆ ದೈವತ್ವದಿಂದ ಅಲೌಕಿಕವಾಗಿ ಆರಾಧನೆಗೆ ಒಳಗಾದವರು. ಇವರು ಹುಟ್ಟಿದ್ದು ದಕ್ಷಿಣಕನ್ನಡ ಜಿಲ್ಲೆಯ ಪಡುಮಲೆಯ ಬಲ್ಲಾಳನ ಬೀಡಿನಲ್ಲಿ ಸತ್ತದ್ದು ಅದೇ ಜಿಲ್ಲೆಯ ಸುಳ್ಯ ತಾಲೂಕಿನ ಎಣ್ಮೂರು ಪ್ರದೇಶದ ಯುದ್ಧ ಭೂಮಿಯಲ್ಲಿ ಇದು ಸುಮಾರು 450 ವರ್ಷಗಳ ಹಿಂದಿನ ಘಟನಾವಳಿಯ ಕತೆ. ಇಂದು ಅವರು ಐತಿಹ್ಯರೂಪದಲ್ಲಿ ಕರಾವಳಿಯಾದ್ಯಂತ ಆರಾಧನೆಗೆ ಒಳಗಾಗುತ್ತಿದ್ದಾರೆ ಪಡುಮಲೆ ಬಲ್ಲಾಳ ಒಂದು ಕಾಲದ ತುಂಡರಸ. ಈ ಪುರಾತ ಕಾಲದ ಕತೆಯನ್ನು ನಮಗಿಂದೂ ಕಣ್ಣಿಗೆ ಕಟ್ಟಿದಂತೆ ಹೇಳುವುದೇ ತುಳುನಾಡಿನ ಪಾಡ್ದನ. ಸುದೀರ್ಘ ಕಾಲ ಹಾಡಬಹುದಾದ ಈ ಪಾಡ್ದನವು ಒಂದು ಕಾಲದ ಘಟನಾವಳಿಯನ್ನು ತಲತಲಾಂತರದಿಂದ ವರ್ಗಾಯಿಸುತ್ತಾ ಬಂದಿದೆ. ಅದಕ್ಕೆ ಪೂರಕವಾಗಿ ಹುಟ್ಟಿಕೊಂಡ ಐತಿಹ್ಯಗಳನ್ನು ಸಾಕ್ಷೀಕರಿಸುವ ಸ್ಥಳಗಳನ್ನೂ ಪವಿತ್ರವಾಗಿ ನೋಡುತ್ತಾ ಒಂದು ಚರಿತ್ರೆಯನ್ನು ಇಲ್ಲಿ ಕಟ್ಟಲಾಗಿದೆ. ಇದು ಪೆರುಮಲೆ ಬಲ್ಲಾಳನ ಅನಾದಿಕಾಲದ ಅರಮನೆಯ ಕರುಹು. ಇಲ್ಲಿ ಹುಟ್ಟಿದವರೇ ಈ ಕೋಟಿಚೆನ್ನಯರು. ದೇಯಿ ಬೈದೆತಿ ಇವರ ತಾಯಿ ಈ ಕೊಳದಲ್ಲೇ ದೇಯಿ ಮಡಿದದಳೆಂಬ ಐತಿಹ್ಯ ಇದೆ. ಪಾಡ್ದನದಲ್ಲಿ ಪ್ರಸ್ತಾಪವಾಗಿದ್ದ ಈ ಕೊಳ ಪತ್ತೆಯಾದದ್ದು ಇತ್ತೀಚೆಗೆ.
ಮುಂದೆ ಕೋಟಿಚೆನ್ನಯರು ಬಲ್ಲಾಳನ ಅಧೀನದಲ್ಲಿ ಬೆಳೆದರು. ಬೆಳೆದ ಕೋಟಿ-ಚೆನ್ನಯರಿಗೆ ಬಲ್ಲಾಳ ಈ ಗದ್ದೆಗಳನ್ನು ಬೇಸಾಯಕ್ಕಾಗಿ ನೀಡಿದ. ಆದರೆ ಇದೇ ಗದ್ದೆಯ ಮೇಲ್ಭಾಗದ ಈ ಗದ್ದೆ ಬಲ್ಲಾಳನ ಮಂತ್ರಿ ಮಲ್ಲಯ್ಯ ಬುದ್ಧಿವಂತನದ್ದಾಗಿತ್ತು. ಸುಗ್ಗಿ ಗದ್ದೆಗೆ ಬಿಡುವ ನೀರಿನ ವ್ಯಾಜ್ಯದಿಂದ ಕೋಟಿ-ಚೆನ್ನಯರು ಈ ಪ್ರದೇಶದಲ್ಲಿ ಬುದ್ಧಿವಂತನನ್ನು ಕೊಂದರು. ಮುಂದೆ ಈ ಧರ್ಮ ಚಾವಡಿಯಲ್ಲಿ ಬಲ್ಲಾಳ ಅವರ ವಿಚಾರಣೆಯನ್ನೂ ನಡೆಸಿದ. ಬಲ್ಲಾಳ ಇವರನ್ನು ತಪ್ಪಿತಸ್ಥರೆಂದು ಘೋಷಿಸಿದಾಗ ಅದನ್ನು ಧಿಕ್ಕರಿಸಿ ಪಡುಮಲೆ ಬಿಟ್ಟು ದಕ್ಷಿಣದ ಕಡೆಗೆ ಬಂದರು. ಇದು ಆ ಕಾಲದ ಎಣ್ಮೂರು-ಪಂಜ ಮಾಗಣೆ. ಅಲ್ಲಿ ಎಣ್ಮೂರು ಬಲ್ಲಾಳನ ಆಶ್ರಿತರಾದರು. ಬರುವಾಗ ತನ್ನ ಅಕ್ಕ ಕಿನ್ನಿದಾರುವಿನ ಈ ಮನೆಗೆ ಭೇಟಿ ನೀಡುತ್ತಾರೆ. ಇದು ಆ ಕಾಲದಲ್ಲಿ ಅವರು ಆರಾಧನೆ ಮಾಡಿದ ದೈವ ಕೆಮ್ಮಲೆ ನಾಗಬ್ರಹ್ಮ(ನಾಗಬ್ರಹ್ಮನ ಗುಡಿ). ಮುಂದೆ ಎಣ್ಮೂರು ಬಲ್ಲಾಳನಿಗೂ ಪಂಜದ ಬಲ್ಲಾಳನಿಗೂ ಯುದ್ಧ ನಡೆಯಿತು. ಆ ಯುದ್ಧದಲ್ಲಿ ಮೋಸದಿಂದ ಕೋಟಿಯ ಕೊಲೆಯಾಗುತ್ತದೆ, ಚೆನ್ನಯ ಈ ಕಲ್ಲಿಗೆ ತಲೆ ಹೊಡೆದು ಆತ್ಮಹತ್ಯೆಯನ್ನೂ ಮಾಡಿಕೊಳ್ಳುತ್ತಾನೆ. ಅವರಿಗಾಗಿ ಬಲ್ಲಾಳನಿಂದ ಸಮಾಧಿಯೂ ನಿರ್ಮಾಣವಾಗುತ್ತದೆ. ಇದುವೇ ಎಣ್ಮೂರಿನ ಆದಿ ಗರೋಡಿ.
ಮುಂದೆ ತುಳುನಾಡಿನಲ್ಲಿ ಈ ಕೋಟಿ-ಚೆನ್ನಯರೆಂಬ ಅವಳಿವೀರರನ್ನು ಮಾನವತ್ವದಿಂದ ದೈವತ್ವಕ್ಕೆ ಏರಿಸಲಾಗುತ್ತದೆ, ಶೋಷಿತ ವರ್ಗದ ಪ್ರತಿನಿಧಿಗಳು ಇವರು ಎಂಬ ನೆಲೆಯಲ್ಲಿ ನಾಗಬ್ರಹ್ಮನ ಎಡಬಲಗಳಲ್ಲಿ ಬಿಂಬರೂಪದಲ್ಲಿ ಮತ್ತು ವರ್ಷಕ್ಕೊಂದು ಬಾರಿ ನೇಮ, ಜಾತ್ರೆ ರೂಪದಲ್ಲಿ ಆರಾಧಿಸುತ್ತಾರೆ. ತುಳುನಾಡಿನಾದ್ಯಂತ 240ಕ್ಕೂ ಹೆಚ್ಚಿನ ಗರೋಡಿಗಳ ನಿರ್ಮಾಣವೂ ನಡೆಯುತ್ತದೆ. ಈಗಲೂ ಅಲ್ಲಲ್ಲಿ ಗರೋಡಿ ನಿರ್ಮಾಣ, ಅಭಿವೃದ್ಧಿ ನಡೆಯುತ್ತಲೇ ಇದೆ. ಅದೇರೀತಿ ಆರಾಧನೆ ಮಾಡುವವರ ಸಂಖ್ಯೆ ಹೆಚ್ಚುತ್ತಲಿದೆ.
ಕೋಟಿ-ಚೆನ್ನಯರ ಬಗ್ಗೆ ಅನೇಕ ಯಕ್ಷಗಾನ, ನಾಟಕ, ಸಿನಿಮಾ, ಧಾರಾವಾಹಿ, ಅಧ್ಯಯನ, ಬರಹಗಳು ರಚನೆಗೊಂಡಿವೆ. ಆದರೆ ಇಂದು ಕೋಟಿ-ಚೆನ್ನಯರ ಐತಿಹಾಸಿಕ ವ್ಯಕ್ತಿತ್ವ ಮರೆಯಾಗುತ್ತಾ ನಂಬಿಕೆಗಳÀ ಭಾಗ ಹೆಚ್ಚಾಗುತ್ತಾ ಸಾಗುತ್ತಿದೆ. ಅತಿರಂಜನೆಯ ಆರಾಧನೆಯಿಂದಾಗಿ ಅವರ ಬದುಕಿನ ಸತ್ಯಗಳು ಮರೆಯಾಗುತ್ತಿವೆ. ಹಣ ಮತ್ತು ಜಾತಿ ಪ್ರಭಾವಬೀರುತ್ತಿದೆ. ಆದ್ದರಿಂದ ಕೋಟಿ-ಚೆನ್ನಯರ ಇತಿಹಾಸವನ್ನು ಅರಿಯುವ ಕೆಲಸ ಈ ವೈಜ್ಞಾನಿಕ ಯುಗದಲ್ಲಿ ಹೆಚ್ಚಿಗೆ ನಡೆಯಬೇಕಾಗಿದೆ. ಆ ಮೂಲಕ ಕೋಟಿ-ಚೆನ್ನಯರ ಆರಾಧನೆಗೆ ಅರ್ಥ ಕಲ್ಪಿಸಿಕೊಳ್ಳಬೇಕಾಗಿದೆ.
ಕೋಟಿ ಚೆನ್ನಯರು ಪಡುಮಲೆಯಲ್ಲಿ ಬದುಕಿದ ಪ್ರಮುಖ ಸ್ಥಳ ಮತ್ತು ಘಟನೆಗಳು
1. ತುಳುನಾಡಿನಲ್ಲಿ ಪೆರುಮಲೆ ಬಲ್ಲಾಳನ ರಾಜ್ಯ
2. ಕೂವೆತೋಟ- ಅಲ್ಲಿಯ ಬ್ರಾಹ್ಮಣ ಕುಟುಂಬ, ದೇಯಿಯ ಜನನ.
3. ದೇಯಿಯ ಬೆಳವಣಿಗೆ- ಋತುಮತಿ ಕಾಡಿಗೆ ಕಳುಹಿಸುವುದು.
4. ಸಂಕಮಲೆ ಕಾಡು- ಕಣ್ಣಿಗೆ ಬಟ್ಟೆ
5. ಸಂಕಮಲೆಯಲ್ಲಿ ಮೂರ್ತೆ ಮಾಡುವ ಸಾಯನ ಬೈದ್ಯ
6. ಸಾಯನ ಬೈದ್ಯನ ತಂಗಿಯಾಗಿ ಜೊತೆಗೆ ಗೆಜ್ಜೆಗಿರಿಗೆ
7. ಅಲ್ಲಿ ಕಾಂತಣ್ಣ ಬೈದ್ಯನೊಂದಿಗೆ ಮದುವೆ, ಗರ್ಭಿಣಿ
8. ಪೆರುಮಲೆ ಬಲ್ಲಾಳನ ಬೇಟೆ, ಕಾಲಿಗೆ ಮುಳ್ಳು.
9. ಹಲವರಿಂದ ಔಷಧ ಕೊನೆಗೆ ದೇಯಿಗೆ ಹೇಳಿಕೆ
10. ದೇಯಿ ಬಲ್ಲಾಳನ ಅರಮನೆಗೆ ಭೇಟಿ
11. ಔಷದೋಪಚಾರ ಕಾಲಿನ ಗಾಯ ಗುಣ ಮುಖ
12. ಬಲ್ಲಾಳನಿಗೆ ಸಂತೋಷ, ಕೆಲವು ಪ್ರದೇಶ ನೀಡುವ ವಾಗ್ದಾನ
13. ದೇಯಿ ತನ್ನ ಮನೆಗೆ ಪ್ರಯಾಣ
14. ತೆಂಗಿನ ಬದುವಿನಲ್ಲಿ ಹೆರಿಗೆ ನೋವು.
15. ಮತ್ತೆ ಅರಮನೆಗೆ ಅಲ್ಲಿ ಅವಳಿ ಮಕ್ಕಳಿಗೆ ಜನ್ಮ.
16. ಬಲ್ಲಾಳನಿಂದ ಕೋಟಿ ಮತ್ತು ಚೆನ್ನಯ ಎಂಬ ನಾಮಕರಣ.
17. 16ರ ಸೂತಕ ಕಳೆಯುವ ಸ್ನಾನಕ್ಕೆ ಹೋಗಿದ್ದಾಗ ತೆಂಗಿನ ಮಡಲು ಬಿದ್ದು ದೇಯಿಯ ಸಾವು.
18. ಮುಂದೆ ಬಲ್ಲಾಳರಲ್ಲಿ ಮಕ್ಕಳ ಬೆಳವಣಿಗೆ.
19. ಗರೋಡಿ ವಿದ್ಯೆಯಲ್ಲಿ ಪಾರಂಗತಿ.
20. ಮೂರ್ತೆ ಕೆಲಸ ಜೊತೆಗೆ ಬೇಸಾಯಕ್ಕೆ ಬೇಡಿಕೆ
21. ಮಂತ್ರಿ ಬುದ್ಯಂತನ ಗದ್ದೆಯ ಕೆಳಗಿನ ಗದ್ದೆ ಬೇಸಾಯದ ಕೊಡುಗೆ.
22. ಮಂತ್ರಿ ಬುದ್ಯಂತನೊಂದಿಗೆ ಮನಸ್ತಾಪ.
ಡಾ.ಸುಂದರಕೇನಾಜೆ
Comments
Post a Comment