ಪೋಷಕರ ಸಭೆ

ಡಿಗ್ರಿಗಳ ಸುಳಿಯಲ್ಲಿ ಸುತ್ತುವವರು

ಹೀಗೆ ಯೋಚಿಸಿದ ಪೋಷಕರೊಬ್ಬರು ಗುಂಪಿನ ಮಧ್ಯದಿಂದ ಪ್ರಶ್ನಿಸಿದರು. ‘ನಿಮ್ಮ ಹಾಗೆ ಎಲ್ಲಾ ತಂದೆತಾಯಿಗಳಿಗೆ ಡಿಗ್ರಿ ಆಗಿರುತ್ತದೆಯೇ? ಅವರಿಗೆ ತಮ್ಮ ಮಕ್ಕಳಿಗೆ ಹೇಳಿಕೊಡಲು ಹೇಗೆ ಸಾಧ್ಯ? ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಿದರೆ ಹೇಗೆ?’ ‘ಹೌದು ಎಲ್ಲಾ ತಂದೆತಾಯಿಗಳನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಖಂಡಿತಾ ತಪ್ಪು. ಹಾಗೇ ಅಂತಹದೇ ಒಂದು ತಕ್ಕಡಿಯಿಂದ ಎಲ್ಲಾ ಮಕ್ಕಳನ್ನು ತೂಗುವುದೂ ತಪ್ಪಲ್ಲವೇ?’ ಪ್ರಶ್ನೆ ಕೇಳಿದ ಪೋಷಕರಿಗೆ ಅಲ್ಪಸ್ವಲ್ಪ ಅರ್ಥವಾದಂತೆ ಕಂಡಿತು. ಅದರೆ ಪೂರ್ತಿ ತೃಪ್ತರಾದಂತೆ ಕಾಣಲಿಲ್ಲ. ‘ಯಾರೋ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಏನೇನೋ ಮಾಡುತ್ತಾರೆಂದು ತಾನೂ ಮಾಡಲು ಹೊರಟರೆ ಆ ಮಗುವಿನ ಸ್ಥಿತಿ ಏನಾಗಬಹುದು? ಅದರ ಬದಲು ಯಾವ ಡಿಗ್ರಿಯನ್ನೂ ಪಡೆಯದೇ 5ನೇ ತರಗತಿ ಪೂರೈಸಿದ ನಿಮಗೆ ಈ ಪೋಷಕರ ಸಭೆಗೆ ಬರಬೇಕೆಂದು ಅನಿಸಿದ್ದಾದರೂ ಹೇಗೆ? ನಿಮ್ಮ ಹಾಗೆ 80 ಜನರಿಗೆ ಬರಹೇಳಿದ್ದಾರೆ. ಅವರಲ್ಲಿ ಡಿಗ್ರಿ ಆದವರ ಸಂಖ್ಯೆಯೇ ಹೆಚ್ಚು. ಆದರೆ ಈಗ ಇಲ್ಲಿ 30 ಜನ ಇದ್ದೀರಿ. ನಿಮ್ಮ ಮಗುವಿನ ಸಕಾರಾತ್ಮಕ ಕಲಿಕೆಗೆ ಏನಾದರೊಂದು ದಾರಿ ಹುಡುಕಬೇಕೆಂದು ಬಯಸಿ ಬಂದ ನಿಮಗೆ ಇಲ್ಲಿ ಕುಳಿತ ನಂತರ ಡಿಗ್ರಿ ಇಲ್ಲದೇ ಇರುವುದು ಅಡ್ಡಿ ಎಂದೆನಿಸಿದೆಯೇ?’ ಈ ಮರು ಪ್ರಶ್ನೆಗೆ ಇಲ್ಲವೆಂಬಂತೆ ತಲೆಯಾಡಿಸಿದ ಆ ಪೋಷಕ ಬಹಳ ಹೊತ್ತು ಸುಮ್ಮನಿದ್ದರು. ಆದರೆ ಕಾರ್ಯಾಗಾರ ಮುಗಿಸಿ ಹೋಗುವ ಮುನ್ನ ಅದೇ ಪೋಷಕ ಕೈಕುಲುಕಿ ಹೋದರು.

ಇಂದು ಡಿಗ್ರಿಯಾದ ಬಹುತೇಕ ತಂದೆ ತಾಯಿಗಳಿಂದಲೇ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ ಎನ್ನುವ ಸತ್ಯ ಇಂತಹ ಅನೇಕ ಮುಗ್ಧ ಪೋಷಕರಿಗೆ ಗೊತ್ತಿರಲಾರದು. ಮಗುವಿನ ಕಲಿಕೆಗೆ ಸಂಬಂಧಿಸಿ ಡಿಗ್ರಿಯಾದ ತಂದೆ ತಾಯಿಗಳು ಮಾಡುತ್ತಿರುವುದೇ ಸರಿ ಎಂದು ತೀರ್ಮಾನಿಸುವ, ಅದನ್ನೇ ಅನುಕಣೆ ಮಾಡಲು ಹೋಗಿ ಸೋಲುವ, ಕೊನೆಗೆ ತಮಗೆ ಡಿಗ್ರಿ ಇಲ್ಲದೇ ಇರುವುದೇ ಸೋಲಿಗೆ ಕಾರಣವೆಂದು ಹಲುಬುತ್ತಿರುವ ಪೋಷಕರ ಸಂಖ್ಯೆ ಗ್ರಾಮೀಣ ಪ್ರದೇಶಗಳಲ್ಲಂತೂ ಹೆಚ್ಚಾಗುತ್ತಿದೆ. ಆದರೆ ಅದೇ ಪೋಷಕರು, ಪ್ರತಿಷ್ಟಿತ ವ್ಯಕ್ತಿಗಳನ್ನು ನೀಡಿರುವ ಅಥವಾ ತಮ್ಮ ಸುತ್ತಮುತ್ತಲೇ ಯಶಸ್ವಿಯಾಗಿ ಬದುಕುತ್ತಿರುವ ಅಥವಾ ಪ್ರಸ್ತುತ ತಾನೇ ಸುಖವಾಗಿರುವ ಸ್ಥಿತಿಗೆ ತಂದೆತಾಯಿಗಳ ಯಾವ ಡಿಗ್ರಿಯೂ ಕಾರಣವಲ್ಲ ಎಂಬ ವಿಚಾರ ಗೊತ್ತಿದ್ದರೂ ಒಪ್ಪಿಕೊಳ್ಳುವುದಿಲ್ಲ. ಬದುಕಿನ ಹಾವು-ಏಣಿ ಆಟದಲ್ಲಿ ಮಗುವನ್ನು ಹಾವಿನ ಬಾಯಿಯಿಂದ ತಪ್ಪಿಸಿ ಏಣಿಯಲ್ಲಿ ಹತ್ತುವಂತೆ ಕವಡೆ ಹಾಕಿಸಲು ಡಿಗ್ರಿಯ ಅಗತ್ಯವಿಲ್ಲ. ಇದನ್ನು ನಮ್ಮ ಜನಪದ ಪರಂಪರೆ ಯಾವತ್ತೂ ಸಾಬೀತು ಪಡಿಸುತ್ತದೆ. ಇಂದು ಪ್ರಜ್ಞಾವಂತರು ಹೇಳುತ್ತಿರುವ ಸಹಜ ಕಲಿಕೆಯ ಅರ್ಥವನ್ನು ಯಾವ ಡಿಗ್ರಿಯೂ ಹೊಂದಿರದ ಜನಪದರು ಎಂದೋ ತಿಳಿದಿದ್ದರು. ಆದರೆ ಈ ಪರಂಪರೆಯನ್ನು ಸಂಪೂರ್ಣ ತಿರಸ್ಕರಿಸಿ ತನ್ನ ಮಗುವೊಂದೇ ಅತಿಬೇಗ ಏಣಿ ಹತ್ತಬೇಕೆಂದು ಬಯಸುವ ಪೋಷಕರಿಗೆ ಮಾತ್ರ ಇಂದು ವಿಶಿಷ್ಟ ಡಿಗ್ರಿಗಳ ಅಗತ್ಯವಿದೆ. ಅಂತಹಾ ಡಿಗ್ರಿಗಳನ್ನು ತಂದೆತಾಯಿ ಯಾವ ಶಾಲೆಯಿಂದಲೂ ಪಡೆಯಬೇಕಾಗಿಲ್ಲ, ತನ್ನಂತೇ ಇರುವ ಇನ್ನೊಬ್ಬ ಡಿಗ್ರಿಯವನನ್ನು ನೋಡಿ ಕಲಿಯಬಹುದು. ಆದರೆ ಇದೇ ಕಲಿಕೆಯನ್ನು ಮಗುವಿನ ಆರೋಗ್ಯ ಪೂರ್ಣ ಬೆಳವಣಿಗೆಯಲ್ಲಿ ಮಾತ್ರ ಯಾಕೆ ನಡೆಸಬಾರದು ಎನ್ನುವುದೇ ಪ್ರಶ್ನೆ.

ಮಗುವಿನ ಕಲಿಕೆ ಮತ್ತು ಯಶಸ್ಸಿನ ಮಾನದಂಡ ಇಂದು ಹಣ ಮಾತ್ರವಾಗುತ್ತಿದೆ. ಪರಿಣಾಮ ಹಣ ಮಾಡುವ ತಂತ್ರವೇ ‘ಕಲಿಕೆ’ ಹಾಗೂ ಅದನ್ನು ಹೇಳಿಕೊಡುವ ಸಂಸ್ಥೆಗಳೇ ‘ಶಾಲೆ’ ಎಂಬಲ್ಲಿಗೆ ತಲುಪಿದೆ. ಕಲಿಕೆ ಮತ್ತು ಶಾಲೆಗಳ ವ್ಯಾಖ್ಯಾನವನ್ನು ಈ ರೀತಿ ಬದಲಾಯಿಸಿದ ಮುಖ್ಯ ಭೂಮಿಕೆಯಲ್ಲಿರುವವರೇ ಈ ಡಿಗ್ರಿ ಪಡೆದವರು. ‘ನಾವು ಸಾಮಾನ್ಯ ಡಿಗ್ರಿ ಪಡೆದಿರುವುದರಿಂದ ಒಂದಷ್ಟು ಸಂಪಾದನೆ ಮಾಡುತ್ತಿದ್ದೇವೆ. ನಮ್ಮ ಮಕ್ಕಳು ಅಸಾಮಾನ್ಯ ಡಿಗ್ರಿ ಪಡೆದರೆ ಅಸಾಮಾನ್ಯ ಸಂಪಾದನೆ ಸಾಧಿಸಬಹುದು, ಆಗ ಜೀವನ ಅತ್ಯಂತ ಸುಗಮವಾಗಬಹುದು’ ಈ ರೀತಿಯ ಅತಾರ್ಕಿಕ ನಿಲುವುಗಳೇ ಕಲಿಕೆ ಮತ್ತು ಶಾಲೆಗಳ ವ್ಯಾಖ್ಯಾನದ ಬದಲಾವಣೆಗೆ ಕಾರಣ. ಆದರೆ ಈ ನಿಲುವುಗಳಿಗೆ ಬಲಿಯಾಗುತ್ತಿರುವವರು ಯಾರು? ತಮ್ಮ ಮಗುವಿಗೆ ಅಸಾಮಾನ್ಯ ಡಿಗ್ರಿ ಕೊಡಿಸಲು ಹವಣಿಸುವ ತಂದೆತಾಯಿಗಳೆಲ್ಲ ತಮ್ಮ ಬಾಲ್ಯವನ್ನು ಎಂದೋ ಮರೆತಿರುತ್ತಾರೆ. ‘ತಾವು ಪಡೆದ ಬಾಲ್ಯ ತಮ್ಮನ್ನು ಇಷ್ಟಾದರೂ ಬೆಳೆಸಿದೆ, ಅದನ್ನು ಮೀರುವ ಬಾಲ್ಯವನ್ನು ಮಕ್ಕಳಿಗೆ ನೀಡದೇ ಇದ್ದರೆ ಅವರು ನಮ್ಮನ್ನೇ ಮೀರಲಾರರು’ ಎನ್ನುವುದನ್ನೂ ಮರೆತಿರುತ್ತಾರೆ. ‘ನಾವು ಬಾಲ್ಯದಲ್ಲಿ ಬಹಳಷ್ಟು ಕಷ್ಟ ಪಟ್ಟಿದ್ದೇವೆ, ಆ ಕಷ್ಟ ನಮ್ಮ ಮಕ್ಕಳಿಗೆ ಬಾರಲೇಬಾರದು’ ಎಂದು ಬಯಸುವ ಪೋಷಕರು ತಮ್ಮ ಮಕ್ಕಳಿಗೆ ನಿತ್ಯ ಚಿನ್ನದ ಚೂರಿಯಿಂದಲ್ಲೇ ಚುಚ್ಚುತ್ತಿರುತ್ತಾರೆ. ಇಂತಹಾ ಪೋಷಕರು, ಶಾಲೆಯ ನೆಪದಲ್ಲಿ ಮಗು ಮುಂದೆ ಕಷ್ಟ ಪಡುವುದಕ್ಕೂ ದು:ಖ ಪಡುವುದಕ್ಕೂ ವ್ಯವಸ್ಥಿತ ತರಬೇತು ನೀಡುತ್ತಿರುತ್ತಾರೆ. ಈ ರೀತಿಯ ತರಬೇತುದಾರರಲ್ಲಿ ಡಿಗ್ರಿ ಪಡೆದವರದ್ದೇ ಎತ್ತಿದ ಕೈ,

ಹಾಗೆಂದ ಮಾತ್ರಕ್ಕೆ ಮನುಷ್ಯ ಯಾವ ಡಿಗ್ರಿಗಳನ್ನೂ ಪಡೆಯಬಾರದೆಂಬುವುದು ಈ ಮಾತುಗಳ ತಾತ್ಪರ್ಯವಲ್ಲ. ಪಡೆದ ಡಿಗ್ರಿಗಳ ಬಳಕೆ ಹೇಗಿದೆ ಎನ್ನುವುದೇ ಮುಖ್ಯ. ಹೀಗೆ ಹೇಳಿದ ತಕ್ಷಣ ಅನೇಕರಿಗೆ, ‘ನಮ್ಮ ಮಕ್ಕಳನ್ನು ಹೇಗೆ ಬೇಕಾದರೂ ಬೆಳೆಸುತ್ತೇವೆ, ಅದನ್ನು ಹೇಳಲು ಇವನ್ಯಾರು’ ಎನ್ನುವ ಪ್ರಶ್ನೆಯೂ ಹುಟ್ಟಬಹುದು. ಇಂತಹಾ ಪ್ರಶ್ನೆಗಳು ಇಂದು ಡಿಗ್ರಿ ಪಡೆದವರ ಕಡೆಯಿಂದ ಬರುತ್ತಿರುವುದು ದುರಂತ. ಆದರೆ ಒಬ್ಬ ಪೋಷಕನಿಗೆ ತನ್ನ ಮಗುವನ್ನು ಹೇಗೂ ಬೆಳೆಸುವ ಸ್ವಾತಂತ್ರ್ಯ ಇಂದು ಕಡಿಮೆ ಎನ್ನುವುದನ್ನೂ ಒಪ್ಪಿಕೊಳ್ಳಬೇಕು. ಅಂದರೆ ಮಗುವಿನ ಸ್ವಾತಂತ್ರ್ಯವನ್ನು ಸ್ವತಾ: ಮಗುವೇ ಪ್ರಶ್ನಿಸುವ ಅವಕಾಶಗಳು ಇಂದು ಹೆಚ್ಚಾಗುತ್ತಿದೆ. ತಂದೆತಾಯಿ ಪ್ರಜ್ಞಾವಂತರಾಗಿ ಭವಿಷ್ಯ ರೂಪಿಸುವ ಮೊದಲೇ ಮಕ್ಕಳು ಪ್ರಶ್ನಿಸುವ ಸಾಮಥ್ರ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕವಾದ ಕಾನೂನು ಮತ್ತು ಸಂಘಟನೆಗಳು ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿವೆ. ಈ ಹಂತದಲ್ಲಿ ಮಗುವಿನ ಸಕಾರಾತ್ಮಕ ಕಲಿಕೆಯ ಬಗ್ಗೆ ಪೋಷಕರು ಯೋಚಿಸದೇ ಇದ್ದರೆ, ‘ನನ್ನಲ್ಲಿ ಡಿಗ್ರಿ ಇದೆ, ನಾನು ನನ್ನ ಮಕ್ಕಳನ್ನು ಹೇಗೂ ಬೆಳೆಸುತ್ತೇನೆ’ ಅಥವಾ ‘ನನ್ನಲ್ಲಿ ಯಾವ ಡಿಗ್ರಿಯೂ ಇಲ್ಲ, ಹಾಗಾಗಿ ನನ್ನ ಮಕ್ಕಳಿಗೆ ಕಲಿಸಲಾಗುತ್ತಿಲ್ಲ’ ಎಂದು ಯೋಚಿಸುತ್ತಾ ಇದ್ದಲ್ಲಿ ಭವಿಷ್ಯತ್ ತಲೆದಂಡವನ್ನು ಕೇಳಿಯೇ ಕೇಳುತ್ತದೆ. ಅದರ ಬದಲು ಡಿಗ್ರಿಗಳ ವಿಷಯವನ್ನು ಬದಿಗಿಟ್ಟು ವಾಸ್ತವದ ಕಡೆಗೆ ದೃಷ್ಟಿ ಹಾಯಿಸಲು ಆರಂಭಿಸಿದಾಗ ಮಗುವಿನೊಂದಿಗೆ ಪೋಷಕರ ಕಲಿಕೆಯೂ ಆರಂಭವಾಗುತ್ತದೆ. ಆಗ ಪೋಷಕರ ಸಭೆಗಳಿಗೂ ಮಹತ್ವ ಬರುತ್ತದೆ.

ಡಾ.ಸುಂದರ ಕೇನಾಜೆ




Comments