ಮುನ್ನುಡಿ
ನಾನು ಮತ್ತು ಇವರು ಬೆಳೆದ ಮಣ್ಣು ಒಂದೇ. ನಾವು ಸವಿದ ಆ ಮಣ್ಣಿನ ಘಮವೂ ಒಂದೇ. ಅಂದು ಹಿನ್ನೆಲೆಯಲ್ಲಿ ಏನೂ ಇಲ್ಲದ ನಮ್ಮಲ್ಲಿ ರೊಚ್ಚಿತ್ತು, ಕೆಚ್ಚಿತ್ತು. ಮುಂದೆ ಏನೇನೋ ಆಗಬೇಕು ಎಂಬ ಪರಮ ಗುರಿಯೂ ಇತ್ತು. ಹಾಗೆ ನಾವು ಜತೆಯಲ್ಲಿ ಓದಿದ್ದೇವೆ, ಆಡಿದ್ದೇವೆ, ಕುಣಿದಿದ್ದೇವೆ, ಗುಡ್ಡ ಹತ್ತಿದ್ದೇವೆ, ಕೋಲ ನೇಮ, ಆಟ ನೋಡಿದ್ದೇವೆ. ಸಂಸ್ಕೃತಿ, ಸಮಾವೇಶ, ಕೂಟ ಎಂದೆಲ್ಲ ಓಡಾಡಿದ್ದೇವೆ.
ತೀರಾ ಹಳ್ಳಿ ಪರಿಸರದಲ್ಲಿ ಹುಟ್ಟಿ ಬೆಳೆದ ನನಗೆ ಆಗಲೇ ಸುಂದರ ಕೇನಾಜೆ ಒಂದು ಅಚ್ಚರಿ. ನಾನು ಬದುಕಿನಲ್ಲಿ ಮೊದಲು ಕಂಡ ಸಾಹಿತಿ, ಮೊದಲು ಕಂಡ ಸಾಧಕ, ಸಂಶೋಧಕ ಅಂದರೆ ಅವರೇ. ಅವರು ಬರೆಯುವುದನ್ನು ಕಂಡು, ಅದು ನಮ್ಮೂರಿನ ಪತ್ರಿಕೆಯಲ್ಲಿ ಪ್ರಕಟವಾಗುವುದನ್ನು ಕಂಡು, ಊರಿನ ಜನರೆಲ್ಲಾ ಅದನ್ನು ಓದುವುದನ್ನು ಕಂಡೇ ನನಗೂ ಲೇಖಕನಾಗಬೇಕೆಂಬ ಭ್ರಮೆ ಹುಟ್ಟಿದ್ದು. ಏನೂ ಅಲ್ಲದ ಕುಟುಂಬದ ಹುಡುಗನಾಗಿ ಗುರುತಿಸುವಿಕೆಯ ಹಂಬಲಕ್ಕೆ ಬರೆಯಲು ಹೊರಟಿದ್ದು. ಅಂದು ನನ್ನೆದುರಿದ್ದುದು ಕೇನಾಜೆಯವರ ತರಹ ನಾನೂ ಬರೆಯಬೇಕು, ಓದಬೇಕು, ಸಂಶೋಧಿಸಬೇಕು ಎಂಬ ಹುಚ್ಚು ಕನಸು. ನನ್ನ ಜೊತೆ ಇನ್ನೂ ಒಂದಷ್ಟು ಹುಡುಗರು... ಹೀಗೆ ಕೇನಾಜೆ ಆ ಊರಿನ ಒಂದು ಕಾಲದ ಯುವ ಸಮೂಹವನ್ನು ತನ್ನ ಜತೆ ಬೆಳೆಸಿದವರು.
ನಾನು ಯುನಿವರ್ಸಿಟಿಯಲ್ಲಿದ್ದಾಗ ಒಂದು ಸಾರಿ ಕೆಲ ಗೆಳೆಯರನ್ನು ಕರೆದುಕೊಂಡು ಕೇನಾಜೆಯವರ ಮನೆಗೆ ಹೋಗಿದ್ದೆ. ಕುಂದಾಪುರದ ಆ ಗೆಳೆಯರನ್ನು ಸುಂದರ ಕೇನಾಜೆ ಗದ್ದೆ, ತೋಟ, ಕಾಡು ಸುತ್ತಾಡಿಸಿ ಆಗಷ್ಟೇ ಕಟ್ಟಿಸಿದ್ದ ಹೊಸ ಮನೆಯಲ್ಲಿ ಮಾತನಾಡಿಸಿ ಕಳುಹಿಸಿಕೊಟ್ಟಿದ್ದರು. ಅಂದು ಹಿಂದಿರುಗುವಾಗ ಗೆಳೆಯ ವಿನಯ ಹೇಳಿದ್ದ ಮಾತು ಕೇನಾಜೆಯವರ ಬಗ್ಗೆ ಬೇರೆಯೇ ನೋಟ ತೋರಿಸಿತ್ತು. ಆತ ಹೇಳಿದ್ದ- ನನಗೆ ಅವರು ಪೂರ್ಣಚಂದ್ರ ತೇಜಸ್ವಿ ತರಹ ಕಾಣಿಸಿದ್ದರು ಎಂದು. ಶಿವರಾಮ ಕಾರಂತರ ಮನೆಯಲ್ಲಿ ಹುಟ್ಟಿ ಬೆಳೆದವನು ಉಡುಪಿಯಲ್ಲಿ ಉಪನ್ಯಾಸಕನಾಗಿರುವ ಗೆಳೆಯ ವಿನಯ ಸುವರ್ಣ. (ವಿನಯ್ ತಂದೆ ಹಲವು ದಶಕಗಳ ಕಾಲ ಕಾರಂತರ ಕಾರು ಚಾಲಕರಾಗಿದ್ದರು) ಪ್ರತಿಯೊಂದನ್ನೂ ಹೊಸತಾಗಿ ಕಾಣುವ ವಿನಯ್ನ ಈ ಹೋಲಿಕೆ ಕಡೆಗಣಿಸುವಂತದಾಗಿರಲಿಲ್ಲ.
ಕೇನಾಜೆ ಕೃತಿಯ ಈ ಬರಹಗಳನ್ನು ಮಗದೊಮ್ಮೆ ಓದುತ್ತಿದ್ದಾಗ ಆ ಗೆಳೆಯನ ಮಾತು ಮತ್ತೆ ಮತ್ತೆ ನೆನಪಾಗುತ್ತಿತ್ತು. ತೇಜಸ್ವಿಯ ಒಳನೋಟ, ಚಿಂತನೆಯ ಧಾಟಿ ಅವರಲ್ಲಿದೆ. ಹಾಗಾಗಿಯೇ ವಿಜ್ಞಾನವನ್ನೂ ಮೀರಿದ ಒಂದು ಪ್ರಜ್ಞೆ ಜನಸಂಸ್ಕೃತಿಯಲ್ಲಿರುವುದನ್ನು ಗುರುತಿಸುತ್ತಾರೆ. ಕೇವಲ ಒಂದು ಬತ್ತದ ಕಾಳಿನ ಬೆಂಬತ್ತಿ ಅದರ ಹಿಂದಿರುವ, ಇಂದು ಕಳೆದುಹೋಗುತ್ತಿರುವ ಇಡೀ ಸಂಸ್ಕೃತಿಯ ಬಗ್ಗೆ ಪಿಹೆಚ್ಡಿ ಮಹಾಗ್ರಂಥ ಬರೆದವರು. ನೀರಿನಿಂದಾಗಿ ಕಾಡು, ಆ ಕಾಡಿನಿಂದಾಗಿ ನಾಗ ಅಥವಾ ನಾಗನಿಂದಾಗಿ ಕಾಡು, ಆ ಕಾಡಿನಿಂದಾಗಿ ನೀರು. ಈ ಮೂರರಿಂದಾಗಿ ಮಾನವ. ಹೀಗೆ ಜೀವ ಸರಪಳಿಯ ಒಂದು ಅಲಿಖಿತ ತತ್ತ್ವವನ್ನು ವಿಶ್ಲೇಷಿಸಿದವರು ಕೇನಾಜೆ. ಈ ಕೃತಿಯಲ್ಲೂ ಇಂಥ ಜೀವಪರ ಸಂಸ್ಕತಿಯ ಕುರಿತ ಬರಹಗಳೂ ಸಾಕಷ್ಟಿವೆ.
ಈ ಬರಹಗಳು ಓದುಗರನ್ನು ಚಕಿತಗೊಳಿಸುವಂಥವು. ಒಂದು ಪುಟ್ಟ ಬತ್ತದ ತಳಿಯನ್ನು ವಿವರಿಸುತ್ತ, ವಿಶ್ಲೇಷಿಸುತ್ತಲೇ ಒಂದು ಹಂತದಲ್ಲಿ, ಹುಟ್ಟುವ ಹೊಳಹು ಸದ್ಯದ ನಮ್ಮ ಬದುಕಿಗೂ ತಾಕಿ ಎದೆಯನ್ನು ಅಲುಗಾಡಿಸುತ್ತದೆ. ಅಪಾರ ಓದಿನ ಹಿನ್ನೆಲೆ, ಪರಿಸರ ಮತ್ತು ಬದುಕಿನ ಕುರಿತ ಅಮಿತ ಅನುಭವ ಹೊಂದಿರುವುದರಿಂದಲೇ ಪ್ರತಿ ಪ್ಯಾರಾದಲ್ಲೂ ಏನಾದರೊಂದು ಹೊಸತಿನ ಹೊಳಹು ಚಿಮ್ಮಿಸುತ್ತಾರೆ. ಸುಮ್ಮನೆ ಭ್ರಮೆ ಹುಟ್ಟಿಸಿ ನಮ್ಮನ್ನು ಎಸೆಯುವಂಥ ಬರಹಗಳು ಇವಲ್ಲ. ಕೇನಾಜೆ ಯಾವುದೋ ಒಂದು ಹಂತದಲ್ಲಿ ನಮ್ಮ ಈ ಹೊತ್ತಿನ ಬದುಕಿಗೂ ಬೇಕಾದ ಕಾಲಜ್ಞಾನವನ್ನು ನುಡಿಯುತ್ತಾರೆ. ‘ಅತಿಕರೆಯ’ ಎಂಬ ಪುಟ್ಟ ಭತ್ತದ ಕಾಳಿನ ಹಿಂದೆ ಒಂದು ಬಲುದೊಡ್ಡ ಸಂಸ್ಕೃತಿ ಬೆಳೆದುದನ್ನು ತೋರಿಸಿದವರು ಕೇನಾಜೆ. ಇದು ಅವರ ಅಧ್ಯಯನದ ತಾಕತ್ತು. ಕನ್ನಡ ಜಾನಪದ ಅಧ್ಯಯನ ವಲಯದಲ್ಲೇ ಕೇನಾಜೆ ಮನೋವಿಜ್ಞಾನ, ಶಿಕ್ಷಣ, ಇತಿಹಾಸ, ಪರಿಸರ ಅಧ್ಯಯನ ಹದವಾಗಿ ಬೆರೆತ ಅಪರೂಪದ ಸಂಶೋಧಕ.
ದಕ್ಷಿಣಕನ್ನಡದ ಯಾವುದೋ ಹಳ್ಳಿಮೂಲೆಯ ಕೃಷಿಕರ ಅನುಭವದ ನುಡಿಯನ್ನು ಉಲ್ಲೇಖಿಸುವ ಕೇನಾಜೆ ಇನ್ನೊಂದೆಡೆ ಪಾಶ್ಚಾತ್ಯ ಶಿಕ್ಷಣ ತಜ್ಞ ಡೇವಿಡ್ ಆರ್ರ್ನ ಮಾತುಗಳನ್ನು ಪ್ರಸ್ತಾವಿಸುತ್ತಾರೆ. ಕಾಳು ಮುಟ್ಟಿ ಸತ್ಯ ಪ್ರಮಾಣ ಮಾಡುವಂಥ ಅತಿಕರೆಯದ ಬಗ್ಗೆ ಹೇಳುವ ಕೇನಾಜೆ ಇಂದು ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟದ ಬಗ್ಗೆ ಮನೋಶಾಸ್ತ್ರೀಯ ನೋಟಗಳನ್ನು ಮುಂದಿಡುತ್ತಾರೆ. ವೃತ್ತಿಯಲ್ಲಿ ಶಿಕ್ಷಣ ಸಂಯೋಜಕರಾಗಿ, ಜಾನಪದ, ಮನೋವಿಜ್ಞಾನ, ಪರಿಸರ ಅಧ್ಯಯನ, ಸಂಯೋಜಕನಾಗಿ ಬಹುಶಿಸ್ತೀಯ ವಿದ್ವಾಂಸನ ನೋಟಗಳು ದಕ್ಕಿದ್ದೇ ಈ ಬರಹಗಳು ಕೇವಲ ಅಂದಂದಿನ ಪತ್ರಿಕೆಯ ಲೇಖನವಾಗದೆ ಚಿಂತನೆಗೆ ಹಚ್ಚುವ ನಿತ್ಯನೂತನತೆಯನ್ನು ಪಡೆಯುತ್ತವೆ.
ನಮ್ಮ ಇಂದಿನ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿ ಜಗತ್ತನ್ನು ಏಕಾಕೃತಿ ಮಾದರಿಯಲ್ಲಿಯೇ ಗ್ರಹಿಸಲು ಒತ್ತಾಯಿಸುತ್ತಿದೆ. ಇಂಥ ಸಂದರ್ಭದಲ್ಲಿ ಜಾನಪದದ ಮೂಲಕ ಸಂಸ್ಕೃತಿಯೊಂದರ ವಿಭಿನ್ನ ನೆಲೆಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಅಗತ್ಯ. ಈ ಹಿನ್ನೆಲೆಯಲ್ಲಿ ತುಳು ಸಂಸ್ಕೃತಿಯ ವಿಭಿನ್ನ ನೆಲೆಗಳು ಹಾಗೂ ಅವುಗಳ ಜನಪರತೆಯನ್ನು ಕೇನಾಜೆಯವರ ಈ ಬಿಡಿಬರಹಗಳಲ್ಲಿ ಕಾಣಬಹುದು. ‘ಚರಿತ್ರೆಯಲ್ಲಿನ ಸಂಘರ್ಷದ ಹಾದಿಗಿಂತ ಸಮನ್ವಯದ ಹಾದಿಯ ಅವಕಾಶವಾದಿತ್ವ ನನಗೆ ಎಂದೆಂದಿಗೂ ಬೇಕು. ಏಕೆಂದರೆ ಚರಿತ್ರೆ ನನಗೆ ಕಲಿಸಿದ ಬದುಕಿನ ಪಾಠವೇ ಅದು. ಅದನ್ನು ಬಿಟ್ಟು ಒಣ ಹೋರಾಟ ಮತ್ತು ದ್ವೇಷದ ಹಾದಿಯನ್ನು ಸರ್ವಕಾಲಕ್ಕೂ ಹೊಂದಿಸುವ ಚರಿತ್ರೆಯನ್ನು ನಾನು ಓದಿಲ್ಲ ಮತ್ತು ಓದುವುದೂ ಇಲ್ಲ’ ಎನ್ನುವ ಕೇನಾಜೆಯವರ ಮಾತುಗಳಲ್ಲೇ ಅವರು ಅರ್ಥೈಸುವ ತುಳು ಸಂಸ್ಕೃತಿಯ ವೈಶಾಲ್ಯವನ್ನು ಗುರುತಿಸಬಹುದು.
ದಿನಾಂಕ: 08.11.2017 ಚಂದ್ರಶೇಖರ ಮಂಡೆಕೋಲು
ಬೆನ್ನುಡಿ
ಡಾ. ಸುಂದರ ಕೇನಾಜೆಯವರ ಈ ಲೇಖನಗಳು, ಜನಪದ, ಶಿಕ್ಷಣ, ಭಾಷೆ, ಪರಿಸರ ಕ್ಷೇತ್ರಗಳಲ್ಲಿ ಅವರಿಗಿರುವ ಅನುಭವ, ಜ್ಞಾನ ಮತ್ತು ಪರಿಶ್ರಮವನ್ನು ತೋರಿಸುತ್ತವೆ. ಲೇಖನಗಳು ಬರೇ ಮಾಹಿತಿಗಷ್ಟೇ ಸೀಮಿತವಾಗದೆ, ಆಳವಾದ ಜ್ಞಾನ, ಅನುಭವವನ್ನು ನೀಡುತ್ತವೆ. ಅಂಕಣ ಲೇಖನಗಳಲ್ಲಿ ಸಾಮಾನ್ಯವಾಗಿ ಕಾಣುವ ಹಪಾಹಪಿಗಿಂತ ಭಿನ್ನವಾದ, ಧನಾತ್ಮಕ ಯೋಚನಾ ವಿಧಾನಾವೊಂದು ಇಲ್ಲಿದೆ. ನಾವು ಪ್ರತಿದಿನವೂ ನೋಡುವ, ಅನುಭವಿಸುವ, ಬದಲಾಯಿಸಲಾಗದೆಂದು ಭಾವಿಸುವ ಸಂಗತಿಗಳ ಬಗ್ಗೆ, ಡಾ.ಕೇನಾಜೆ ಹೊಸದಾಗಿ ಯೋಚಿಸುವಂತೆ ಬರೆದಿದ್ದಾರೆ.
ಡಾ. ಎಂ.ಸಿ. ಮನೋಹರ
ಮೈಸೂರು
Comments
Post a Comment