ನದಿಯ ಒಡಲು

ಕಣ್ಣೀರಿಳಿಸಲೂ ನೀರಿಲ್ಲದ ನಮ್ಮ ನದಿಗಳು

ಇದು ಹೀಗೆ ಆದದ್ದನ್ನು ಶತಮಾನಗಳಿಂದ ನೋಡಿದವರಂತೂ ಇಲ್ಲ. ಒಡಲೇ ಬಗೆದು ಅಸ್ತಿಪಂಜರಗಳನ್ನು ರಾಶಿ ಹಾಕಿದಂತೆ ಕಾಣುತ್ತದೆ. ಜೀವವಿಲ್ಲದ ದೇಹ ತಿಂಗಳು ಕಳೆದರೆ ಹೇಗಿರುತ್ತದೋ ಹಾಗೆ ಈಗ ಈ ನಮ್ಮ ನದಿಗಳು. ಇದು ಕೇವಲ ಒಂದು ನದಿಯ ಕತೆಯಲ್ಲ, ಕರಾವಳಿಯ ಮತ್ತು ಬಹುತೇಕ ಎಲ್ಲ ನದಿಗಳ ಇಂದಿನ ಸ್ಥಿತಿ. ನೀರೇ ಜೀವ ತಳೆದು ಹರಿಯುತ್ತಿದ್ದ ಸ್ಥಿತಿ ಕಣ್ಮರೆಯಾಗಿ ನಿರ್ಜೀವ ಸರಿಸೃಪಗಳಂತೆ ಬಿದ್ದಿರುವ ಈ ಸ್ವರೂಪವನ್ನು ಸದ್ಯಕ್ಕಂತೂ ಬಹುತೇಕರು ಕಂಡಿರಲಿಕ್ಕಿಲ್ಲ. ಸುಮಾರು 32 ವರ್ಷಗಳ ಹಿಂದೆ ಈ ಭಾಗದಲ್ಲೊಂದು ಬರ ಬಂದ ನೆನಪು. ಆದರೆ ಅದು ನದಿಗಳ ವಿಚಾರಕ್ಕೆ ಇಷ್ಟು ನಿರ್ದಾಕ್ಷಿಣ್ಯವಾಗಿರಲಿಲ್ಲ. ಊರಿನ ಕೆರೆ-ಬಾವಿ ಬತ್ತಿದ್ದರೂ ನದಿಯ ಒಡಲೊಳಗಿನ ನೀರು ಯಥÉೀಚ್ಛವಾಗಿಯೇ ಇತ್ತು. ಆದರೆ ಈ ಬಾರಿ ಹಾಗಾಗಲಿಲ್ಲ, ಕೆರೆ-ಬಾವಿಗಳು ನೀರೆಂಬ ಪದವನ್ನು ಮರೆತು ತಿಂಗಳುಗಳÉೀ ಕಳೆದಿವೆ. ಅಲ್ಲಿ-ಇಲ್ಲಿಯ ಪಾತಾಳದ ಬೋರ್‍ವೆಲ್‍ಗಳಲ್ಲಿ ಒಂದಷ್ಟು ನೀರಿವೆ. ನದಿಗಳಲ್ಲಿ ಮಾತ್ರ ಹುಡುಕಿದರೂ ಕುಡಿಯಲು ಒಂದಿನಿತು ನೀರಿಲ್ಲ. ಯಾಕೆ ಹೀಗೆ ಎನ್ನುವುದಕ್ಕೆ ಉತ್ತರ ಬಹುತೇಕರಿಗೆ ಗೊತ್ತಿದೆ. ಈ ಬರಗಾಲದಲ್ಲೂ ಕರಾವಳಿಯ ನದಿಗಳಲ್ಲಿ ನೀರು ಕಾಣಿಸುವ ಸಾಮಥ್ರ್ಯ ನದಿಗಳಿಗಿವೆ ಎನ್ನುವುದೂ ಗೊತ್ತಿದೆ. ಆದರೆ ಇವರಾರೂ ಅಷ್ಟು ಸುಲಭವಾಗಿ ಎಂದೂ ನದಿಯನ್ನು ಹರಿಯಲು ಬಿಡರು.

ಕೆಲವು ವರ್ಷಗಳ ಹಿಂದೆ ಕರಾವಳಿಯ ಪ್ರಮುಖ ನದಿಯೊಂದರ ಮೂಲವನ್ನು ಹುಡುಕುತ್ತಾ ಒಂದೈವತ್ತು ಕಿಲೋಮೀಟರ್ ನಡೆದಿದ್ದೆವು. ಅದು ದಟ್ಟ ಬೇಸಿಗೆ ಕಾಲ. ನದಿ ಹುಟ್ಟಿದಲ್ಲಿಂದ ಕೆಲವು ಮೈಲುಗಳ ವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಘಟ್ಟದ ಇಳಿಜಾರಿನ ಕಾಡುಗಳನ್ನು ದಾಟಿ ಕರಾವಳಿಯ ಸಮತಟ್ಟಾದ ಭಾಗಕ್ಕೆ ಎಲ್ಲಿ ಪ್ರವೇಶಿಸಿತೋ ಅಲ್ಲಿಂದ ಆರಂಭವಾಯಿತು, ರಾಕ್ಷಸ ಗಾತ್ರದ ಪಂಪ್‍ಸೆಟ್‍ಗಳ ಹಾವಳಿ. ಐದಾರು ಮೀಟರ್‍ಗಳಿಗೊಂದರಂತೆ ಸಾವಿರಾರು ಪಂಪುಗಳು ಈ ನದಿ ಪಾತ್ರದಿಂದ ನೀರೆತ್ತಿ ಹಾಕುತ್ತಿದ್ದವು. ನದಿಯ ನೀರನ್ನು ಬಳಸದೇ ಇರುವ ಜನರು ಈಗಲೂ ಹೇಳುವ ಮಾತಿದೆ, ಎರಡು ದಿನ ನದಿಯ ಇಕ್ಕೆಲಗಳ ಪಂಪುಗಳೆಲ್ಲ ನಿಂತದ್ದೇ ಆದರೆ ನದಿ ದಾಟಲು ದೋಣಿ ಬೇಕಾದೀತು ಎಂದು. ಆ ಪ್ರಮಾಣದಲ್ಲಿ ನೀರು ಹರಿಯಬಹುದು. ಈ ಮಾತು ಪೂರ್ಣ ಉತ್ಪ್ರೇಕ್ಷೆಯದ್ದಲ್ಲ. ಕರಾವಳಿ ನದಿಗಳ ದಡದಲ್ಲಿರುವ ಕೃಷಿಗಳಿಗೆ ನೀರುಣಿಸುವ ಸ್ಥಿತಿಯನ್ನು ನೋಡಿದರೆ ಒಂದಲ್ಲ ಇಂತಹಾ ಹತ್ತು ನದಿಗಳು ಜೊತೆಯಾಗಿ ಹರಿದರೂ ಸಾಲದು. ವಿದ್ಯುತ್ತಿನ ಕೊರತೆಯಿಂದ ಈ ಪಂಪ್‍ಸೆಟ್‍ಗಳು ನೀರೆಳೆಯುವುದನ್ನು ನಿಲ್ಲಿಸಬೇಕೇ ಹೊರತು ಇಲ್ಲದೇ ಹೋದಲ್ಲಿ ಹಾಕಿದ ನೀರು ಮತ್ತೆ ಅದೇ ನದಿಗೆ ಹರಿದು ಬರಬೇಕು, ಆ ವರೆಗೆ ನೀರು ಪೋಲಾಗುತ್ತಿರುತ್ತದೆ. ಈ ಬಾರಿಯಂತೂ ಬೇಕಾಬಿಟ್ಟಿ ನೀಡಿರುವ ಉಚಿತ ವಿದ್ಯುತ್ ಮತ್ತು ಸ್ವಯಂಚಾಲಿತ ಪಂಪ್‍ಸೆಟ್ ಇವು ನದಿ ಮೂಲಕ್ಕೆ ಕನ್ನ ಹಾಕಿವೆ.

ಅಲ್ಲಿ-ಇಲ್ಲಿ ಕಾಣುವ ಸುರಕ್ಷಿತಾರಣ್ಯಗಳನ್ನು ಹೊರತು ಪಡಿಸಿದರೆ ನದಿಯ ಎರಡೂ ದಡಗಳಲ್ಲಿರುವುದು ವಾಣಿಜ್ಯಾತ್ಮಕ ಬೆಳೆಗಳು. ನೀರು ಹಾಕಿದಷ್ಟು ಇಳುವರಿ ಹೆಚ್ಚು ಎಂಬ ಭ್ರಮೆ ಬೇರೆ. ಹಾಗಾಗಿ ಈ ಭಾಗದ ಬಹುತೇಕ ರೈತರು ಹಗಲು ರಾತ್ರಿ ಎನ್ನದೇ ನೀರು ಎಳೆಯುವುದು ಸಾಮಾನ್ಯ. ಇದು ಈಗ ನದಿಯನ್ನು ಹುಡುಕುವಂತೆ ಮಾಡಿದೆ. ಒಂದು ಕಾಲದಲ್ಲಿ ಇಲ್ಲಿದ್ದ ಭತ್ತದ ಗದ್ದೆಗೆ ಈ ಪರಿಯ ನೀರಿನ ಅಗತ್ಯವಿರಲಿಲ್ಲ. ಇದ್ದರೂ ಎತ್ತಿ ಹಾಕುವ ವ್ಯವಸ್ಥೆ ಇರಲಿಲ್ಲ. ಹಾಗಾಗಿ ಊರೆಲ್ಲ ಬರವಿದ್ದರೂ ನದಿ ಪಾತ್ರ ಸಮೃದ್ಧವಾಗಿಯೇ ಇರುತ್ತಿತ್ತು. ಆದರೆ ಕಾಲ ಬದಲಾಗಿದೆ. ನದಿಯ ಬಳಕೆಗಿಂತ ದುರ್ಬಳಕೆಯೇ ಹೆಚ್ಚಾಗಿದೆ. ನದಿಯ ಒಳಗೇ ಬಾವಿ, ಬೋರ್‍ವೆಲ್ ಕೊರೆಯುವ ಹಂತಕ್ಕೂ ತಲುಪಿದೆ. ಮಳೆಗಾಲ ಇನ್ನಿಲ್ಲದಂತೆ ಹರಿಯುವ ಕರಾವಳಿಯ ನದಿಗಳು ಬೇಸಿಗೆಯಲ್ಲಿ ಗರಿ ಕಳಚಿದ ನವಿಲಿನಂತೆ ಮಲಗಿರುತ್ತದೆ. ಅದರೊಂದಿಗೆ ನದಿ ಪಾತ್ರದ ಬಹುದೂರದ ವರೆಗಿನ ನಾಗರಿಕರನ್ನೂ ಮಲಗಿಸುತ್ತಿದೆ.

ನದಿಗಳ ಈ ಸ್ಥಿತಿಗೆ ಇನ್ನೂ ಒಂದು ಕಾರಣವಿದೆ. ಅದು ನಿರಂತರ ನಡೆಯುವ ಮರಳುಗಾರಿಕೆ. ಮರಳು ಕಂಡಲ್ಲೆಲ್ಲಾ ನದಿಯನ್ನು ಹತ್ತಾರು ಅಡಿ ಆಳದ ವರೆಗೂ ಬಗೆದು ತೆಗೆಯುವ ಈ ದಂಧೆ ನದಿಯ ಹರಿವನ್ನೇ ಸ್ಥಗಿತಗೊಳಿಸುತ್ತಿದೆ. ತಾಂತ್ರಿಕ ವಿಧಾನದಲ್ಲಿ ಮರಳೆತ್ತುವ ಕಾರ್ಯವಂತೂ ಇನ್ನೂ ವಿಚಿತ್ರ. ನೀರೆಳೆಯುವಂತೆ ಮರಳನ್ನೂ ನೀರಿನೊಂದಿಗೆ ಎತ್ತಿ ಹಾಕುವುದರಿಂದ ಹರಿವು ಮಾಯವಾಗಿದೆ. ಒಂದೆಡೆಯಿಂದ ಕೃಷಿ, ಇನ್ನೊಂದೆಡೆಯಿಂದ ಮರಳು ಇವೆರಡು ನದಿಯ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿವೆ. ಇವೆರಡರ ಮಧ್ಯೆ ದೂರದ ಬಾಯಾರಿದ ವ್ಯಕ್ತಿ ಒಂದು ಕೊಡ ನೀರಿಗಾಗಿ ಹಾತೊರೆಯುತ್ತಿರುತ್ತಾನೆ. ಈ ಕೆಂಡವನ್ನು ಉಡಿಯಲ್ಲಿ ಇರಿಸಿಕೊಳ್ಳುತ್ತಲೇ ನದಿ ಮೂಲವನ್ನು ತಿರುಗಿಸುವ ಪ್ರಯತ್ನಗಳೂ ನಡೆಯುತ್ತಿರುತ್ತದೆÉ.

ಹಾಗಾದರೆ ಕೃಷಿಗೆ ನೀರು, ಅಭಿವೃದ್ಧಿಗೆ ಮರಳು ಬೇಡವೇ ಎಂದು ಪ್ರಶ್ನಿಸಿದರೆ ಬೇಕೆನ್ನುವುದೇ ಉತ್ತರ. ನದಿಯಿಂದ ಕೃಷಿಗೆ ಎತ್ತಿ ಹಾಕುವ ನೀರು ಮತ್ತೆ ನದಿಗೇ ಹರಿದು ಹೋಗುವಷ್ಟು, ವಿದ್ಯುತ್ ಇದ್ದಾಗಲೆಲ್ಲಾ ನೀರು ಎಳೆಯುತ್ತಲೇ ಇರುವಷ್ಟು ಮುಕ್ತತೆ ಮತ್ತು ಉಚಿತತೆ ಇಲ್ಲದಿದ್ದರೆ ಎಂದೆಂದಿಗೂ ಒಳ್ಳೆಯದು. ಮಳೆ ನಿಂತ ಆರಂಭದಲ್ಲಿ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಒಂದಷ್ಟು ಹಿಡಿದಿಟ್ಟುಕೊಳ್ಳುವ ಕಿಂಡಿ ಅಣೆಕಟ್ಟುಗಳನ್ನು ಅಲ್ಲಲ್ಲಿ ಕಟ್ಟಲು ಸಾಧ್ಯವಾದರೆ ಇನ್ನೂ ಅನುಕೂಲ. ನದಿಯ ನೇರ ಫಲಾನುಭವಿಗಳಲ್ಲದೇ ಕನಿಷ್ಟ ಮೂರು-ನಾಲ್ಕು ಕೀಲೋಮೀಟರ್ ವರೆಗೂ ಅಂತರ್ ಜಲ ಸ್ಫುರಿ¸ಬಹುದು. ಪರಿಣಾಮ ಈ ಭಾಗದಲ್ಲಿ ಕೃಷಿ, ಜನಜೀವನ ಜೊತೆಗೆ ಕಾಡುಗಳ ಬೆಳವಣಿಗೆಯೂ ಆಗುತ್ತದೆ. ಕಿಂಡಿಅಣೆಕಟ್ಟಿನಲ್ಲಿ ನೀರಿನೊಂದಿಗೆ ಶೇಖರಣೆಯಾಗುವ ಮರಳನ್ನು ಎತ್ತುವುದರಿಂದ ಅಲ್ಲಲ್ಲಿ ಅಪಾಯಕಾರಿ ಹೊಂಡಗಳ ನಿರ್ಮಾಣವೂ ತಪ್ಪುತ್ತದೆ. ಇದು ಸರಕಾರದ ನೇರ ಅಧೀನದಲ್ಲಿದ್ದರೆ ಅಕ್ರಮದ ಪ್ರಮಾಣವೂ ನಿಯಂತ್ರಣಗೊಳ್ಳುತ್ತದೆ.

ಒಟ್ಟಿನಲ್ಲಿ ನದಿ, ಆ ನದಿಯ ನೀರು ಮತ್ತು ಇತರ ಸಂಪತ್ತು ಇವುಗಳ ಬಳಕೆಯ ಬಗ್ಗೆ ಉನ್ನತ ಮಟ್ಟದ ಯೋಚನೆ ಯೋಜನೆಯನ್ನು ಅತಿಜರೂರಾಗಿ ಕೈಗೊಳ್ಳಬೇಕಾದ ಅಗತ್ಯವಿದೆ. ಈ ಅಗತ್ಯವನ್ನು ನಮ್ಮ ಮುಂದಿರುವ ಎಲ್ಲಾ ನದಿಗಳೇ ಸಾರಿ ಹೇಳುತ್ತಿವೆ. ಆದರೆ ಇದನ್ನು ನೋಡಿಯೂ ನೋಡದಂತೆ ಭೂಮಿಯ ಆಳಕ್ಕೆಲ್ಲಾ ತೂತು ಕೊರೆಯುತ್ತಾ ಹೋಗುತ್ತೇವೆ ಎಂದಾದರೆ ಕೈಯಲ್ಲಿರುವುದನ್ನು ಬಿಟ್ಟು ಹಾರುವುದನ್ನು ಹಿಡಿಯಲು ಹವಣಿಸುತ್ತಿದ್ದೇವೆ ಎಂದೇ ಅರ್ಥ.

ಡಾ.ಸುಂದರ ಕೇನಾಜೆ






Comments