ಸಿರಿಬಾರಿ ಲೋಕ ತುಳುನಾಡು
ಹೆಣ್ಣಿನ ಫಲವಂತಿಕೆ ಹಾಗೂ ಮಣ್ಣಿನ ಫಲವಂತಿಕೆ ಡಾ.ಸುಂದರ ಕೇನಾಜೆ
ಹೆಣ್ಣಿನ ಫಲವಂತಿಕೆ ಹಾಗೂ ಮಣ್ಣಿನ ಫಲವಂತಿಕೆ ಡಾ.ಸುಂದರ ಕೇನಾಜೆ
ಪೀಠಿಕೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿದ ಡಾ.ಇಂದಿರಾ ಹೆಗ್ಗಡೆಯವರ ಕೃತಿ, ‘ಸಿರಿಬಾರಿಲೋಕ ತುಳುನಾಡು ಒಂದು ಅಧ್ಯಯನ’ ತುಳು ಸಂಶೋಧನಾ ಕ್ಷೇತ್ರದ ಮಹತ್ವದ ಹಾಗೂ ಇತ್ತೀಚಿನ ದಿನಗಳಲ್ಲಿ ಪ್ರಕಟಗೊಂಡ ಮೌಲ್ಯಯುತ ಕೃತಿ.ನಾನಾ ಕಾರಣಗಳಿಗಾಗಿ ಈ ಕೃತಿಯನ್ನು ಮೆಚ್ಚಬೇಕಾದ ಹಾಗೂ ಅಧ್ಯಯನಾಸಕ್ತರು ಓದಬೇಕಾದ ಅನಿವಾರ್ಯವಿದೆ. ಭೌಗೋಳಿಕ ವ್ಯಾಪ್ತಿಯಲ್ಲಿ ತುಳುನಾಡು ಬಹಳ ವಿಸ್ತøತವಲ್ಲದಿದ್ದರೂ ತುಳು ಸಂಸ್ಕøತಿ ಮತ್ತು ಅದರೊಳಗಿರುವ ಜಾನಪದ ಸಂಪತ್ತು ಅಗಾಧವಾದುದು. ಈ ಸಂಪತ್ತನ್ನು ಕಳೆದ ಒಂದು ಶತಮಾನಗಳಿಂದ ಅನೇಕ ವಿದ್ವಾಂಸರು, ಅಧ್ಯಯನಾಸಕ್ತರು, ತಜ್ಞರು, ಹೊರಗೆಳೆಯುತ್ತಾ ವಿಶ್ಲೇಷಿಸುತ್ತಾ ಅಕ್ಷರಲೋಕಕ್ಕೆ ಪರಿಚಯಿಸುವ ಕಾರ್ಯ ಮಾಡಿದ್ದಾರೆ. ತುಳು ಜಾನಪದ ಸಾಹಿತ್ಯದ ಬಹುತೇಕ ಆಕರಗಳನ್ನು ಹೊರಗೆಳೆಯುವಲ್ಲಿ ನಮ್ಮ ಬರಹಗಾರ ಬಳಗ ಸಫಲವಾಗಿದೆ ಎನ್ನುವುದೇ ಹೆಮ್ಮೆಯ ಸಂಗತಿ. ತುಳು ಜಾನಪದ ಸಂಸ್ಕøತಿಯ ವ್ಯಾಪ್ತಿ ಮತ್ತು ಮೌಲ್ಯ ಹಿರಿದಾಗಿರುವುದರಿಂದ ಈ ಕಾರ್ಯಗಳಲ್ಲಿ ಆಸಕ್ತರ ಸಂಖ್ಯೆ ಹೆಚ್ಚಾಗಿರುವ ಸಾಧ್ಯತೆ ಇದೆ. ಹಾಗೆ ನೋಡಿದರೆ ಒಂದೇ ವಿಷಯದ ಬಗ್ಗೆ ಹಲವರು ಸಂಗ್ರಹ ಮಾಡಿದ ಮತ್ತು ಅಧ್ಯಯನ ಮಾಡಿದ ಉದಾಹರಣೆಗಳು ನಮ್ಮಲ್ಲಿ ಬೇಕಾದಷ್ಟಿದೆ. ಅಂತಹ ಒಂದು ವಿಷಯ ಹಾಗೂ ಹಲವರಿಂದ ಅಧ್ಯಯನಕ್ಕೊಳಪಟ್ಟವಸ್ತುವೇ ತುಳುನಾಡಿನ ಸಿರಿ. ಜಗತ್ತಿನ ಶ್ರೇಷ್ಠ ಜನಪದ ಕಾವ್ಯಗಳಲ್ಲಿ ಒಂದಾದ ಸಿರಿ ಮಹಾಕಾವ್ಯ, ಒಬ್ಬ ಅಧ್ಯಯನಾಸಕ್ತನಿಗೆ ವಿಭಿನ್ನ ಆಲೋಚನೆಗಳನ್ನೂ ಹಲವಾರು ಸಾಧ್ಯತೆಗಳನ್ನೂ ತೆರೆದಿಡುತ್ತದೆ. ಇದಕ್ಕೆಈ ಹಿಂದೆ ಸಿರಿಯ ಬಗ್ಗೆ ಬಂದ ಅಧ್ಯಯನಗಳೇ ಸಾಕ್ಷಿ. ಈ ಸಿರಿ ಅಧ್ಯಯನವನ್ನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶೋಧಿಸಿರುವುದೇ ಡಾ.ಇಂದಿರಾ ಹೆಗ್ಗಡೆಯವರ ‘ಸಿರಿಬಾರಿ ಲೋಕ ತುಳುನಾಡು’. ಇಲ್ಲಿ ಸಿರಿ ಕಥಾನಕದ ಪಠ್ಯವನ್ನು ಮೀರಿದ ಸಿರಿಗಳ ಜಗತ್ತನ್ನು ಪರಿಚಯಿಸಲಾಗಿದೆ.
ಹೆಣ್ಣು ಮತ್ತು ಮಣ್ಣಿನ ಸಮೀಕರಣ: ಈ ಗೋಷ್ಠಿಯಲ್ಲಿ ಬೇರೆಬೇರೆ ವಿದ್ವಾಂಸರು ಈ ಕೃತಿಯನ್ನು ವಿಭಿನ್ನ ನೆಲೆಗಳಲ್ಲಿ ಪರಿಚಯಿಸುವ ಕಾರಣ ನನಗೆ ನೀಡಿದ ವಿಷಯದ ಬಗ್ಗೆ ನಾನಿಲ್ಲಿ ಒಂದಷ್ಟು ವಿಶ್ಲೇಸಿಸಲು ಬಯಸುತ್ತೇನೆ.“ಹೆಣ್ಣಿÂನ ಫಲವಂತಿಕೆ ಹಾಗೂ ಮಣ್ಣಿನ ಫಲವಂತಿಕೆ”ಯನ್ನು ಜನಪದರು ಹೇಗೆ ಸಮೀಕರಿಸಿದ್ದಾರೆ? ಇದನ್ನು ಪ್ರಸ್ತುತ ಕೃತಿ ಹೇಗೆ ಸಮರ್ಥಿಸಿದೆಎನ್ನುವುದನ್ನು ನಾನಿಲ್ಲಿ ಚರ್ಚಿಸಿದ್ದೇನೆ. ಇದರಲ್ಲಿ “ಹೆಣ್ಣು, ಮಣ್ಣು ಮತ್ತು ಕ್ಷೇತ್ರ”, “ಗಂಡು ಮತ್ತು ಬೀಜ ಅಥವಾ ನೀರು” ಇವೆರಡನ್ನು ಜನಪದರು ಯಾವ ದೃಷ್ಟಿಕೋನದಿಂದ ನೋಡಿದ್ದಾರೆ ಮತ್ತು ಹೇಗೆ ಸಮೀಕರಿಸಿದ್ದಾರೆ ಎನ್ನುವುದು ಮುಖ್ಯ. ಇದು ತುಳು ಸಂಸ್ಕøತಿಯನ್ನು ಪ್ರಭಾವಿಸಿದ ಸಾಂದರ್ಭಿಕತೆಯನ್ನು ಈ ಕೃತಿ ಹೇಗೆ ಸಾಕ್ಷೀಕರಿಸುತ್ತದೆ ಎನ್ನುವ ಚರ್ಚೆ ಇಲ್ಲಿಯದು. ಈ ಚರ್ಚೆಗೆ ತುಳುನಾಡಿನ ಭತ್ತ ಬೇಸಾಯ ಹೇಗಿತ್ತು? ಅದರ ಹಿಂದಿನ ಅಗಾಧ ನಂಬಿಕೆ, ಆಚರಣೆ, ಆರಾಧನೆ ಮತ್ತು ಕ್ರಿಯಾ ಹಿನ್ನಲೆಗಳನ್ನು ಆಧಾರÀವಾಗಿ ಇಟ್ಟುಕೊಳ್ಳಲಾಗಿದೆ.
ಆದಿಮ ಸಂಸ್ಕøತಿಯಲ್ಲಿ ಕಾಲದಿಂದ ಹೆಣ್ಣು ಮತ್ತು ಮಣ್ಣನ್ನು ಪರಸ್ಪರ ಸಮೀಕರಿಸುವ, ಅವೆರಡನ್ನೂ ಒಂದೇ ಎಂದು ಕಾಣುವ ಮನಸ್ಥಿತಿ ಇತ್ತು.ಹೆಣ್ಣಿನಲ್ಲಿರುವ ಹಲವಾರು ಗುಣಗಳು ಮಣ್ಣಿನಲ್ಲಿರುವುದೇ ಈ ಹೋಲಿಕೆಗೆ ಕಾರಣ.ಹೆಣ್ಣು ಹುಟ್ಟಿ ಬೆಳೆದು ಋತುಮತಿಯಾಗಿಮತ್ತೆ ಮಗುವಿಗೆ ಜನ್ಮನೀಡಿ ಪೋಷಿಸುವ ಒಂದು ಕಾಲಘಟ್ಟದ ಪ್ರಕ್ರಿಯೆಯನ್ನೇ ವಾರ್ಷಿಕಾವರ್ತನದಲ್ಲಿ ಮಣ್ಣೂ ಮಾಡುತ್ತದೆ, ಅಲ್ಲದೇ ಹೆಣ್ಣು ಮತ್ತು ಮಣ್ಣಿನ ಫಲವಂತಿಕೆಯ ಅವಧಿಯೂü ವಾರ್ಷಿಕವಾದುದು. ಮೊಳಕೆ ಬರುವುದಕ್ಕೆ ಮಣ್ಣು ಹದವಾಗಲೇಬೇಕು, ನೀರಿನ ಅಂಶ ಇರಲೇಬೇಕು. ಹೆಣ್ಣಿಗೆ ಕೂಡ ಹಾಗೇ. ಹೆಣ್ಣು ಮತ್ತು ಮಣ್ಣಿನಲ್ಲಿರುವ ಈ ಸಾಮ್ಯ ಗುಣದಿಂದಾಗಿಯೇ ಆದಿಮ ಸಂಸ್ಕøತಿಯಲ್ಲಿ ಹೆಣ್ಣಿಗೆ ಮಹತ್ವ ನೀಡುವ ಮತ್ತು ಮಣ್ಣನ್ನು ಉಪಾಸನೆಗೈಯುವ ಕ್ರಿಯೆಗಳು ಹುಟ್ಟಿಕೊಂಡಿರುವುದು. ಇದು ಕೇವಲ ತುಳುನಾಡಿಗೆ ಸೀಮಿತವಾದ ಮಾತಲ್ಲ, ಜಾಗತಿಕ ಜಾನಪದ ಸಂಸ್ಕøತಿಯ ಉಗಮ ಮತ್ತು ನಾಗರೀಕತೆಯ ಕಾಲದಿಂದ ಎಂದು ಇತಿಹಾಸ ತಿಳಿಸುತ್ತದೆ.
ಕ್ಷೇತ್ರದ ಉಪಾಸನೆ: ಸಂಸ್ಕøತಿ ಚಿಂತನೆಯ ಪ್ರಕಾರ, ಮಣ್ಣನ್ನು ಕ್ಷೇತ್ರವೆಂದು ಪರಿಭಾವಿಸಿದ ಕಾಲ ಬಹಳ ಪುರಾತನವಾದುದು. ಯಾವಾಗ ತುಳುನಾಡಿನಲ್ಲಿ ಭತ್ತ ಬೆಳೆ ಆರಂಭವಾಯಿತೋ ಆವಾಗ ಮಣ್ಣಿನ ಮಹತ್ವವೂ ಅರಿವಾಯಿತು. ಬಿತ್ತಿದ ಬೀಜ ಮೊಳಕೆಯೊಡೆಯಬೇಕಾದರೆ ಕ್ಷೇತ್ರ ಫಲವತ್ತಾಗಿರಬೇಕು. ಉತ್ತಮ ಫಸಲು ಬರುವುದೂ ಮಣ್ಣಿನ ಫಲವತ್ತತೆಯಿಂದಲೇ, ಹಾಗಾಗಿ ಮಣ್ಣಿನ ಗುಣವೇ ಫಸಲನ್ನು ತೀರ್ಮಾನಿಸುತ್ತದೆ ಎನ್ನುವ ನೆಲೆಯಲ್ಲಿ ಕ್ಷೇತ್ರಕ್ಕೆ ಪ್ರಾಧಾನ್ಯ ಸಿಗತೊಡಗಿತು. ಮಣ್ಣಿನ ಈ ಗುಣವೇ ಹೆಣ್ಣಿನಲ್ಲೂ ಇರುವ ಕಾರಣದಿಂದ ಹೆಣ್ಣಿಗೂ ಈ ಮಹತ್ವವನ್ನು ನೀಡಲಾಯಿತು. ಇದು ಒಂದು ವೃತ್ತಿ ಬದುಕಿನಿಂದ ನಿರ್ಮಾಣವಾದ ಸ್ಥಿತಿ.
ಕ್ಷೇತ್ರ ಹದವಾಗಿದ್ದಾಗ ಮತ್ತು ಅದು ಸಮರ್ಪಕವಾಗಿದ್ದಾಗ ಮಾತ್ರ ಫಲ ನಿರೀಕ್ಷಿಸಬಹುದು ಎನ್ನುವುದು ಜನಪದ ನಂಬಿಕೆ. ಇದು ಕ್ಷೇತ್ರವನ್ನು ಒಲಿಸಿಕೊಳ್ಳುವ ನಾನಾ ಕ್ರಿಯಾಚರಣೆಗಳಿಗೆ ಅವಕಾಶ ಮಾಡಿಕೊಟ್ಟಿತು. ಇದು ಮುಂದೆ ಕ್ಷೇತ್ರದ ಪ್ರತಿನಿಧಿಯಾದ ‘ತಾಯಿಯೇ ಮುಖ್ಯ’ ಎಂಬಲ್ಲಿಗೆ ಬಂದು ನಿಂತಿತು. ಎಲ್ಲಿ ವಾರ್ಷಿಕ ಆವರ್ತನ ಬೆಳೆಗಳನ್ನು ಮಣ್ಣಿನಲ್ಲಿ ಬಿತ್ತಿ ಫಲ ಪಡೆಯಲು ಆರಂಭಿಸಲಾಯಿತೋ ಅಲ್ಲೆಲ್ಲ ತಾಯಿಗೆ ಅಂದರೆ ಹೆಣ್ಣಿಗೆ ಮಹತ್ವ ಸಿಗಲು ಆರಂಭವಾಯಿತು. ಮುಂದೆ ಈ ಎರಡನ್ನೂ ಕ್ಷೇತ್ರಗಳೆಂದೂ ಇವೆರಡೂ ಬದುಕಿನ ನಿರ್ಧಾರಕ ನೆಲೆಗಳೆಂದು ಪರಿಭಾವಿಸಲಾಯಿತು. ಆರಂಭ ಕಾ¯ದಲ್ಲಿ ಜನರು ಆಹಾರದ ಬೆಳೆಯನ್ನೇ ವಾರ್ಷಿಕವಾಗಿ ಬೆಳೆಯುತ್ತಿದ್ದ ಕಾರಣ, ಜಗತ್ತಿನಾಧ್ಯಂತ ಈ ಕ್ಷೇತ್ರದ ಮಹತ್ವ ಜಾರಿಯಾಗಿರುವ ಸಾಧ್ಯತೆ ಇದೆ.
ತುಳುನಾಡಿನಲ್ಲಿ ಕ್ರಿ.ಪೂ1000 ವರ್ಷಗಳ ಹಿಂದೆಯೇ ಬತ್ತ ಬೆಳೆಯಲಾಗುತ್ತಿತ್ತು ಎನ್ನುವುದಕ್ಕೆ ದಾಖಲೆ ಇದೆ. ಬತ್ತ ಬೆಳೆಸಲುನಡೆಸುವ ಎಲ್ಲಾ ಕ್ರಿಯಾಚರಣೆಗಳಲ್ಲೂ ಭೂಮಿಯನ್ನು ಹೆಣ್ಣೆಂದೇ ತೀರ್ಮಾನಿಸಿದ ಅನೇಕ ನಿದರ್ಶನಗಳಿವೆ. ಆದ್ದರಿಂದ ಹೆಣ್ಣು ಮತ್ತು ಮಣ್ಣು ಪ್ರಧಾನವೆಂದು ತಿಳಿದು ಹುಟ್ಟಿಕೊಂಡ ಸಂಸ್ಕøತಿಗೆ ಅತ್ಯಂತ ಹಳೆಯ ಇತಹಾಸವಿದೆ.ಇದು ‘ಸಂಸ್ಕøತಿ’ ಎನ್ನುವ ಪರಿಕಲ್ಪನೆಯ ಮೊದಲ ಭಾಗ. ಇದನ್ನೇ ಮಾತೃಪ್ರಧಾನ ಎಂದು ಕರೆದಿರುವುದು.(ಲೋಹ ಯುಗದಲ್ಲಿ ಈ ಪ್ರದೇಶದ ಕಾಡುಗಳನ್ನು ಕಡಿದು ಭತ್ತ ಬೆಳೆಯಲಾಯಿತು ಎಂದು ಸಂಶೋಧನೆ ತಿಳಿಸುತ್ತದೆ.)
ಸಿರಿಬಾರಿ ಲೋಕದ ಹೆಣ್ಣು ಮತ್ತು ಮಣ್ಣು: ಹೆಸರೇ ಸೂಚಿಸುವಂತೆಸಿರಿ ಬಾರಿ ಲೋಕವೆಂದರೆ, ಸಿರಿ ಆಳಿದ ಲೋಕ, ಇಲ್ಲಿ ಎರಡು ಸಿರಿಗಳ ಪ್ರಸ್ತಾಪ ಮಾಡಲಾಗಿದೆ. ಒಂದು ಜೋಡಿ ಸಿರಿ, ಇನ್ನೊಂದು ಇಂದು ಆರಾಧನೆಗೊಳ್ಳುತ್ತಿರುವ ಪಾಡ್ದನ ಸಿರಿ ಇವೆರಡರ ಕಾಲವೂ ಬೇರೆಬೇರೆ. ಮೊದಲನೆಯದು ಆದಿಮ ಸಂಸ್ಕøತಿಯ ಕಾಲ,ಕುಂಭಗಳ ಮೂಲಕ ಅಥವ ಶಿಲ್ಪಗಳ ಮೂಲಕ ಮತ್ತು ಉಪಾಸನೆಗಳ ಮೂಲಕ ಇಲ್ಲಾ ಕುಣಿತಗಳ ಮೂಲಕ ಇವು ತುಳುನಾಡಿನ ಅಲ್ಲಲ್ಲಿ ಕಾಣಿಸಿಕೊಂಡವುಗಳು. ಇಲ್ಲಿ ಕನ್ಯತ್ವವನ್ನು ಪ್ರತಿನಿಧಿಸುವ ನಾಗಕನ್ನಿಕೆಯರು, ಬೇರೆಬೇರೆ ಹೆಸರಿನಿಂದ ಕರೆಯಲ್ಪಡುವ ಕನ್ಯಾಶಕ್ತಿಗಳು, ಪಂಚ ನಾಗಕನ್ನಿಕೆಯರು, ಪಂಚ ಉಳ್ಳಾಲ್ತಿಗಳು, ಪಂಚಭಗವತಿಗಳು, ಏಳ್ವೆರ್ ಸಿರಿಗಳು ಹೀಗೆ ಸ್ತ್ರೀಶಕ್ತಿಯ ಅಗಾಧ ನೆಲೆಗಳೇ ಪ್ರಕಟಗೊಂಡಿವೆ. ಈ ಎಲ್ಲಾ ಕನ್ನಿಕೆಯರೂ ಪುರುಷ ವ್ಯವಸ್ಥೆಯನ್ನು ಮೀರಿ ಬೆಳೆದು ನಿಂತವುಗಳು ಹಾಗೂ ಮಾತೃತ್ವದ ಸಮರ್ಥ ಪ್ರತಿನಿಧಿಗಳು ಮತ್ತು ಅತ್ಯಂತ ಪುರಾತನವಾದುವುಗಳು. ಇದನ್ನು ಈ ಕೃತಿಯಲ್ಲಿ ಹೇಳಿರುವ ಕುಂಭ ಅಥವಾ ಕೊಡಗಳ ವಿಶ್ಲೇಷಣೆಯಿಂದ ಅರ್ಥೈಸಬಹುದು.
ಈ ಕೃತಿಯಲ್ಲಿ ಬರುವ ಮೂಲ ಅಥವಾ ಕುಂಭ ಸಿರಿಗಳೆನ್ನುವ ವಿಶ್ಲೇಷಣೆಯು ಸಿರಿಗಳ ಬಗ್ಗೆ ಇರುವ ಕುತೂಹಲ ಮತ್ತು ಜಿಜ್ಞಾಸೆಯನ್ನು ಇನ್ನೂ ಹೆಚ್ಚಿಸುತ್ತದೆ. ಪ್ರಾಯಶಃ ಈ ಮೂಲ ಸಿರಿಗಳೇ ಮಾತೃಸಿರಿಗಳು ಮತ್ತು ಭತ್ತ ಬೇಸಾಯ ಪರಂಪರೆಯ ಜೊತೆಗೆ ಮಣ್ಣಿನ ಫಲವಂತಿಕೆಯ ಆಶಯವನ್ನು ಪ್ರಕಟಗೊಳ್ಳುತ್ತಾ ಬಂದ ಸಿರಿಗಳು ಎನ್ನಬಹುದು. ಈ ಸಿರಿಗಳು ಗಂಡಿನ ಅಸ್ಥಿತ್ವವನ್ನು ತೀರಾ ಅಲ್ಲಗಳೆಯುವುದೂ ಇಲ್ಲ, ಒಪ್ಪಿಕೊಳ್ಳುವುದೂ ಇಲ್ಲ. ಬದಲಾಗಿ ಸಂಕೇತಗಳ ಮೂಲಕ ಜೊತೆಗಿರಿಸಿಕೊಂಡಿದ್ದವು.ಇದನ್ನು ಸುಗ್ಗಿ ಬೇಸಾಯದ ಆಚರಣೆಗಳಾದ ಪೂಕರೆ, ಬಾಳೆ, ಮುಂಡೇವು ಇತ್ಯಾದಿ ಕ್ರಿಯಾಚರಣೆ ಹಾಗೂ ಬಿರ್ಮೆರ್ ಮತ್ತು ನಾಗಸಂಬಂಧೀ ಆಚರಣೆಗಳ ಮೂಲಕ ಸ್ಪಷ್ಟಪಡಿಸಬಹುದು.
ಸಿರಿಬಾರಿ ಲೋಕದಲ್ಲಿ ಫಲವಂತಿಕೆಯ ಉಪಾಸನೆ: ಡಾ.ಇಂದಿರಾ ಹೆಗ್ಗಡೆಯವರು ಈ ಕೃತಿಯಲ್ಲಿ ಪಾಡ್ದನ ಸಿರಿ ಬಾಳಿದ ಮತ್ತು ಅವಳ ಕಥಾನಕ ಹುಟ್ಟುವ ಮೊದಲೇ ‘ತುಳುನಾಡು ಸಿರಿಬಾರಿ ಲೋಕ’ ಎಂದಿದ್ದಾರೆ. ಹೆಣ್ಣಿನ ಹಾಗೂ ಮಣ್ಣಿನ ಫಲವಂತಿಕೆಯನ್ನು ಸಮಾನವಾಗಿ ನೋಡುತ್ತಿದ್ದ ಕಾಲವೆಂದು ಹಲವು ನಿದರ್ಶನಗಳ ಮೂಲಕ ಸಮರ್ಥಿಸಿದ್ದಾರೆ. ಕೃತಿಯ ಎಲ್ಲಾ ಅಧ್ಯಾಯಗಳಲ್ಲಿ ಚದುರಿರುವ ಈ ವಿವರಣೆಗಳನ್ನು ಒಂದೆಡೆಗೆ ತಂದರೆ, ಜೋಡು ಸಿರಿಗಳ ಆರಾಧನೆ, ಪೂಕರೆ ಮತ್ತು ಕಂಬುಲದ ಆಚರಣೆ, ಪಾಣರಾಟ ಅಥವಾ ಸ್ವಾಮಿಕೋಲ ಮತ್ತು ಕನ್ಯಾ ಪೂಜೆ, ದೆಯ್ಯೊಲೆ ನಲಿಕೆ, ಕಾಡ್ಯನಾಟ, ಮೂರ್ಲೆ ಕುಣಿತ, ಜಾಲಾಟದ ಮೂರಿ ಗಿಂಡ್ಯೆ ಇತ್ಯಾದಿ ಕ್ರಿಯಾಚರಣೆಗಳ ಹಿಂದಿರುವ ಪ್ರಧಾನ ಆಶಯ ಫಲವಂತಿಕೆ. ಇದನ್ನು ಈ ವಿಷಯಗಳ ವೈಯಕ್ತಿಕ ಅಧ್ಯಯನಗಳಿಂದಲೂ ಕಂಡುಕೊಳ್ಳಲಾಗಿದೆ. ಇದನ್ನು ಸಿರಿಗಳ ಪ್ರತಿನಿಧೀಕರಣ ಎಂದು ಈ ಕೃತಿಯಲ್ಲಿ ಸಮರ್ಥಿಸಲಾಗಿದೆ. ಇದು ಮಾತೃ ಸಂಸ್ಕøತಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ ಎನ್ನಬಹುದು. ಪ್ರಾಯಶಃ ಪಾಡ್ದನ ಸಿರಿ ಬದುಕಿದ ವ್ಯವಸ್ಥೆಗಿಂತ ಪೂರ್ವದ ಸಂಸ್ಕøತಿ ಇದಾಗಿರಬೇಕು, ಇದನ್ನು ನಾನಿಲ್ಲಿ ಬೀಜ ಮತ್ತು ಕ್ಷೇತ್ರದ ಸಮನ್ವಯದ ಕಾಲ ಎಂದು ಕರೆಯುತ್ತೇನೆ.
ಬೀಜ ಮಹತ್ವ: ಆದಿಮ ಕಾಲದಿಂದ ಮಹತ್ವ ಪಡೆದ ಮತ್ತು ಉಪಾಸನೆಗೆ ಒಳಗಾದ ಕ್ಷೇತ್ರ ಪರಿಕಲ್ಪನೆಗೆ ವ್ಯತಿರಿಕ್ತವಾಗಿ ಹುಟ್ಟಿಕೊಂಡ ಇನ್ನೊಂದು ವಾದವೇ ಬೀಜ. ಕ್ಷೇತ್ರದಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಿನದು ಎನ್ನುವ ವಾದದೊಂದಿಗೆ ಹುಟ್ಟಿಕೊಂಡ ಪ್ರತಿಸಂಸ್ಕøತಿ ಇದು. ಇಲ್ಲಿಂದ ಮಣ್ಣು ಮತ್ತು ಹೆಣ್ಣಿನ ಮಹತ್ವ ಕಡಿಮೆಯಾಗಲು ಆರಂಭವಾಯಿತು. ಅಲ್ಲದೇ ಇವುಗಳು ಗಂಡಿನ ಅಡಿಯಾಳು, ಇವೆರಡೂ ಭೋಗಕ್ಕಾಗಿ ಇರುವ ವಸ್ತುಗಳು ಎನ್ನುವವರೆಗೆ ಮೂಲ ಸಂಸ್ಕøತಿಯಲ್ಲಿ ಬದಲಾವಣೆ ಉಂಟಾಯಿತು. ಇದನ್ನೇ ನಾವು ಪಿತೃಪ್ರಧಾನ ಅಥವಾ ವೈದಿಕಶಾಹಿ ಸಂಸ್ಕøತಿ ಎಂದು ಕರೆಯುವುದು. ತುಳುನಾಡಿಗೆ ಬ್ರಾಹ್ಮಣರ ಪ್ರವೇಶವಾದ ನಂತರ ಇದು ಹೆಚ್ಚು ಗಟ್ಟಿಯಾಯಿತು. ಪ್ರಾಯಶಃ ಇದು ಸರಿ ಸುಮಾರು ಕ್ರಿ.ಶ ಮೂರನೇ ಶತಮಾನದ ನಂತರದ ಬದಲಾವಣೆ. ಅಂದರೆ ತುಳುನಾಡಿಗೆ ಬ್ರಾಹ್ಮಣರ ಮೊದಲನೇ ವಲಸೆಯ ನಂತರದ ಕಾಲ ಎನ್ನಬಹುದು. ಇಲ್ಲಿಂದ ಮಾತೃ ಮತ್ತು ಪಿತೃ ವ್ಯವಸ್ಥೆಗಳ ತಾಕಲಾಟ, ಆಚರಣೆಗಳ ಮೂಲಕ ಪರಸ್ಪರ ಪ್ರಭಾವ ಹಾಗೂ ಒಡೆತನಗಳ ಒಳಗಿನ ಭಿನ್ನಾಭಿಪ್ರಾಯ ಆರಂಭವಾಯಿತು. ಇದು ಸುಮಾರು 7ನೇ ಶತಮಾನಗಳ ಕಾಲಕ್ಕೆ ಹೆಚ್ಚು ಪ್ರಭಾವಶಾಲಿಯಾಗಿರಬೇಕು. (ತುಳುನಾಡಿಗೆ ಬ್ರಾಹ್ಮಣರು 4 ಬಾರಿ ವಲಸೆ ಬಂದಿದ್ದಾರೆ ಎನ್ನುವ ದಾಖಲೆ ಇದೆ. 1) 3ನೇ ಶತಮಾನ- ಶಾತಾವಾಹನರ ಕಾಲ, 2) 5ನೇ ಶತಮಾನ- ಕದಂಬರ ಕಾಲ, 3) 11-12ನೇ ಶತಮಾನ- ಹಂಗಳ ಕದಂಬರ ಕಾಲ 4) 14ನೇ ಶತಮಾನ- ಹವ್ಯಕರ ಕಾಲ)
ಮಧ್ಯಂತರ ವ್ಯವಸ್ಥೆಯ ಪಾಡ್ದನ ಸಿರಿ: ಅಂದರೆ ತುಳುನಾಡಿನಲ್ಲಿ ಪುರುಷ ಪ್ರಾಧಾನ್ಯವನ್ನು ಪ್ರತಿಷ್ಠಾಪಿಸಲು ವೈದಿಕಶಾಹಿ ವ್ಯವಸ್ಥೆ ತೊಡಗಿಸಿಕೊಂಡಿದ್ದ ಕಾಲ. ಮೇಲಿನ ವಲಸೆಗಳ ಆಧಾರದಲ್ಲಿ ಪ್ರಾಯಶಃ ಇದು ಹೆಚ್ಚು ಕಡಿಮೆ 7 ರಿಂದ 10ನೇ ಶತಮಾನದ ಮಧ್ಯಗಿನ ಕಾಲ ಎಂದು ಹೇಳಬಹುದೋ ಏನೋ? ಆ ಕಾಲದಲ್ಲಿ ಮಾತೃ ಹಾಗೂ ಮಣ್ಣಿನ ಅನನ್ಯತೆಯನ್ನು ಕಾಯ್ದುಕೊಳ್ಳಲು ಕಾಣಿಸಿಕೊಂಡವಳೇ ಪಾಡ್ದನ ಸಿರಿ ಅಥವಾ ಆಲಡೆಯಲ್ಲಿ ಆರಾಧನೆಗೊಳ್ಳುವ ಸಿರಿ ಬಳಗ. ಇಲ್ಲಿ ಬಿರ್ಮಾಳುವರಿಗೆ ಪ್ರಕಟಗೊಂಡ ಹೆಣ್ಣು ಮಗು ಸಿರಿ, ಆಕೆಯ ಮಗ ಕಮಾರ, ಮಕ್ಕಳು ಸೊನ್ನೆ-ಗಿಂಡೆ, ಮೊಮ್ಮಕ್ಕಳು ಅಬ್ಬಗ-ದಾರಗ ಎನ್ನುವ ಒಂದು ಬಳಗವಿದೆ. ಈ ಬಳಗ ಮಾತೃವ್ಯವಸ್ಥೆಯ ಉಳಿವಿಗೆ ಹೋರಾಟ ನಡೆಸುತ್ತದೆ, ಪ್ರವರ್ದಮಾನಕ್ಕೆ ಬರುತ್ತಿದ್ದ ಪಿತೃವ್ಯವಸ್ಥೆಯ ವಿರುದ್ಧ ನಿಲ್ಲತ್ತದೆ. ಹೇಗೆಂದರೆ.....
ಅಯೋನಿಜೆಯಾಗಿ ತನ್ನ ಅಲೌಕಿಕವಾದ ನೆಲೆಯನ್ನೇ ಪ್ರಕಟಿಸಬಹುದಾದ ಈ ಸಿರಿ, ಸಾಮಾಜಿಕ ವ್ಯವಸ್ಥೆಯನ್ನು ಒಪ್ಪಿಕೊಂಡು ಮದುವೆಯಾಗುತ್ತಾಳೆ. ಈ ರೀತಿಯ ಮದುವೆಯ ಪರಿಕಲ್ಪನೆ ಜೋಡಿ ಸಿರಿಗಳ ಕಾಲದಲ್ಲಿ ಕಂಡುಬರುವುದಿಲ್ಲ. ಆದ್ದರಿಂದ ಇಲ್ಲಿ ಮದುವೆ ಎನ್ನುವುದು ಸಮನ್ವಯತೆಯ ಅಥವಾ ಫಲವಂತಿಕೆಯ ಸಂಕೇತ ಮಾತ್ರ. ಆದರೆ ಅದು ಅಸಾಧ್ಯವಾದಾಗ ತನ್ನ ಅಲೌಕಿಕ ಶಕ್ತಿಯಿಂದಲೇ ಫಲವಂತಿಕೆಯನ್ನು ಪಡೆಯುವ ಪಾಡ್ದನ ಸಿರಿ, ಗಂಡನ್ನು ಮದುವೆಯಾಗಲು ಬಯಸುವುದು ಪುರುಷ ಪ್ರಧಾನವಾದ ನೆಲೆಗಳನ್ನು ಪ್ರಶ್ನಿಸುವ ಹಿನ್ನಲೆಯಿಂದ ಎಂದೂ ಗ್ರಹಿಸಬಹುದು. ಇಲ್ಲಾ ನೀತಿಬಾಹಿರನಾದ ಅಥವಾ ಪರಿಶುದ್ದನಲ್ಲದ ಗಂಡನಿದ್ದರೆ ಪ್ರಕೃತಿಯ ನಿಯಮವನ್ನು ಮೀರಿ ಅಲೌಕಿಕವಾಗಿ ಹೆಣ್ಣು ಸಂತಾನವನ್ನು ಪಡೆಯಬಲ್ಲಳು ಎನ್ನುವುದನ್ನು ಹೇಳುವ ಹಿನ್ನಲೆಯಿಂದ ಎಂದೂ ಹೇಳಬಹುದು. ವಾಸ್ತವಿಕವಾಗಿ ಇದು ಮಣ್ಣಿನ ಫಲವಂತಿಕೆಯ ನಿಯಮಕ್ಕೆ ವಿರುದ್ಧವಾದುದು. ಆದರೆ ಜನಪದ ನಂಬಿಕೆಗೆ ಪೂರಕವಾದುದು. ಅಂದರೆ ಗದ್ದೆಯ ಸಂದರ್ಭದಲ್ಲಿ ನಡೆಯುವ ಪೂಕರೆಯನ್ನು ‘ಗದ್ದೆಯ ಮದುವೆ’ ಎಂದು ಕರೆದರೆ, ಅಲ್ಲಿ ನಡೆಯುವ ನಾಗನಅಥವಾ ನೀರಿನ ಮತ್ತು ಬಿರ್ಮೆರ ಉಪಾಸನೆ ಹಾಗೂ ರಾತ್ರಿಯ ಚಟುವಟಿಕೆ(ನೋಡಿ: ಕರಾವಳಿ ಜಾನಪದ ಡಾ.ಪುರುಷೋತ್ತಮ ಬಿಳಿಮಲೆಯ)ಯನ್ನು ಫಲವಂತಿಕೆಗಾಗಿ ಪುರುಷ ಶಕ್ತಿಯನ್ನು ಆವಾಹಿಸಿಕೊಳ್ಳುವ ನೆÀಲೆ ಎನ್ನಲಾಗಿದೆ. ಗದ್ದೆಯ ಮದುವೆ ಎನ್ನುವಲ್ಲಿ ಸ್ತ್ರೀ ಕಲ್ಪಿತ ಶಕ್ತಿ ಅಥವ ಕ್ಷೇತ್ರದ ರಕ್ಷಣೆ ಎಂದರ್ಥವಿದ್ದರೆ, ಅಲ್ಲಿನ ನಾಗ ಮತ್ತು ಬಿರ್ಮೆರ ಆರಾಧನೆÉಯಲ್ಲಿ ಪುರುಷ ಅಥವಾ ಬೀಜದ ಮಹತ್ವ ಎಂದರ್ಥವಿದೆ. ಕ್ಷೇತ್ರ ಮತ್ತು ಬೀಜಕ್ಕೆ ಸಮಾನವಾದ ಸ್ಥಾನಗಳನ್ನು ನೀಡುತ್ತಾ ಬಂದಿರುವುದನ್ನು ಬೇಸಾಯದ ಬಹುತೇಕ ಎಲ್ಲ ಕ್ರಿಯಾಚರಣೆಗಳಲ್ಲಿಯೂ ಕಾಣಲು ಸಾಧ್ಯ. ಬೇಸಾಯದ ಈ ಪ್ರಕ್ರಿಯೆಗಳು, ಮಣ್ಣಿನ ಫಲವಂತಿಕೆಯಲ್ಲಿ ಹೆಣ್ಣಗೆ ಸ್ಥಾನ ನೀಡಿದ್ದಾದರೂ ಗಂಡಿನ ನಿರಾಕರಣೆಯನ್ನು ಮಾಡುವುದಿಲ್ಲ. ಇದೇ ಈ ಕೃತಿ ಹೇಳುವ ಜೋಡಿ ಸಿರಿಗಳ ಕಾಲ. ಆದರೆ ಪಾಡ್ದನ ಸಿರಿಯ ಕಾಲದಲ್ಲಿ ಮಾನುಷ್ಯಾವಸ್ಥೆ ಗಂಡಿನ ಸಂಪರ್ಕ ಮತ್ತು ಸಂಕೇತಗಳಿಲ್ಲದೆಯೂ ಸಂತಾನ ಪಡೆಯಬಹುದು ಎನ್ನುವುದನ್ನು ಸಿರಿ ಮತ್ತವಳ ಬಳಗದ ಹುಟ್ಟಿನ ಮೂಲಕ ಕಾಣತ್ತದೆ. ಇದಕ್ಕೆ ನಮ್ಮ ಆರಾಧನೆಗೊಳಗಾದ ಅನೇಕ ದೈವಗಳೂ ಉದಾಹರಣೆಯಾಗಿವೆ. ಅಲ್ಲದೇ ಪಾಡ್ದನ ಸಿರಿಯ ಹುಟ್ಟಿನ ಬಗೆಗಿರುವ ನಂಬಿಕೆಯೂ ನಿದರ್ಶನವಾಗಿದೆ.
ಸಿರಿಯ ಸಸ್ಯ ಮೂಲದ ಹುಟ್ಟು: ಸಿರಿ, ಪುರುಷ ಸಂಪರ್ಕವಿಲ್ಲದೇ ಪಿಂಗಾರದಲ್ಲಿ ಹುಟ್ಟಿದವಳು. ಇದು ಮಾನವಾತೀತವಾದ ಸಸ್ಯಜನ್ಯ ಕ್ರಿಯೆ. ಪಿಂಗಾರ, ಸಂಸ್ಕøತಿಯಲ್ಲಿ ವೃದ್ಧಿಯನ್ನೇ ಸಂಕೇತಿಸುತ್ತಾ ಬಂದಿದೆ. ಪಿಂಗಾರ ಮತ್ತದರಲ್ಲಿರುವ ಅಸಂಖ್ಯಾತ ಉರುವೆಗಳು ಗರ್ಭ, ಸಂತಾನ ಮತ್ತು ಸಮೃದ್ಧಿಯ ಸಂಕೇತವಾಗಿವೆ ಎನ್ನುವ ವಿಶ್ಲೇಷಣೆಯನ್ನು ಹಲವು ವಿದ್ವಾಂಸರು ಮಾಡಿದ್ದಾರೆ. ‘ಸಿರಿ’ ಎನ್ನುವುದಕ್ಕೆ ಚಿಗುರು, ಐಶ್ವರ್ಯ, ವೃದ್ಧಿ, ಫಲ ಎನ್ನುವ ಅರ್ಥವೇ ಇರುವಂತೆ ಪಿಂಗಾರದ ಹಾಳೆÀಗೂ ‘ಸಿರಿ ಪಾಲೆ’ ಎಂಬ ಅರ್ಥವಿದೆ ಎಂದು ಈ ಕೃತಿ ಗುರುತಿಸಿದೆ. ಈ ಎರಡು ಅರ್ಥವನ್ನು ಕೊಡುವ ಮೂಲಕ ಪಿಂಗಾರ ಮತ್ತು ಸಿರಿಗೆ ಒಂದೇ ಅರ್ಥವಿದೆಯೋ?ಎನ್ನುವ ಪ್ರಶ್ನೆ ಏಳುತ್ತದೆ.
ವಾಸ್ತವಿಕವಾಗಿ ಪಿಂಗಾರದ ಪಾವಿತ್ರ್ಯಕ್ಕೆ ತುಳುನಾಡಿನಲ್ಲಿ ಬಹಳ ದೀರ್ಘಕಾಲದ ಇತಿಹಾಸವೇನೂ ಇಲ್ಲ ಎಂದೆನಿಸುತ್ತದೆ. ಸುಮಾರು ಇನ್ನೂರು ವಷರ್Àಗಳ ಹಿಂದೆ ತುಳುನಾಡಿನಲ್ಲಿ ಪಿಂಗಾರದ ಬಳಕೆ ವ್ಯಾಪಕವಾಗಿದ್ದ ಬಗ್ಗೆ ಸಂಶಯವಿದೆ(ಆದರೆ ಪಾಡ್ದನಗಳ ಅಲ್ಲಲ್ಲಿ ಬರುತ್ತದೆ) ಭತ್ತ ಬೇಸಾಯದ ಹಿನ್ನಡೆ ಹಾಗೂ ವಾಣಿಜ್ಯ ಬೇಸಾಯದ ಮುಂದಡಿಯ ಕಾಲ, ಕೆಳವರ್ಗದ(ಜನಪದ) ಆಚರಣೆಗಳು ಮೇಲ್ವರ್ಗದ(ವೈದಿಕ) ಆಚರಣೆಗಳಾಗಿ ಬದಲಾದ ಕಾಲ ಮತ್ತು ಮಾತೃಪ್ರಧಾನವಾದ ವ್ಯವಸ್ಥೆ ಪಿತೃಪ್ರಧಾನ ವ್ಯವಸ್ಥೆಯೆಡೆಗೆ ವಾಲತೊಡಗಿದ ಕಾಲದಲ್ಲಿ ಪಿಂಗಾರ ಮಹತ್ವ ಪಡೆದಿರಬೇಕು. ಹಾಗಾಗಿಯೇ ಬೇಸಾಯದ ಕ್ರಿಯಾಚರಣೆಗಳಲ್ಲಿ ಪಿಂಗಾರಕ್ಕೆ ಅಂತಹಾ ಮಹತ್ವವೇನೂ ಇಲ್ಲದಿರುವುದು. ಇದಕ್ಕೆ ಬೇಸಾಯದ ಬಹುತೇಕ ಕ್ರಿಯಾಚರಣೆಗಳಲ್ಲಿ ಕೆಳವರ್ಗವೇ ಹೆಚ್ಚು ತೊಡಗಿಕೊಂಡಿದ್ದುದು ಕಾರಣವಾಗಿರಬಹುದು. (ನೋಡಿ: ಡಾ.ಸುಂದರ ಕೇನಾಜೆ, ಬತ್ತದ ಲೋಕ 2010) ಆದರೆ ಮೇಲ್ವರ್ಗಗಳು ನಡೆಸುವ ಬಹುತೇಕ ಆಚರಣೆಗಳಲ್ಲಿ ಪಿಂಗಾರಕ್ಕೆ ಮಹತ್ವವಿದೆ ಎನ್ನುವುದನ್ನು ಈ ಕೃತಿಯ ಮೂಲಕ ಗಮನಿಸಬಹುದು. ಆದ್ದರಿಂದ ಪಿಂಗಾರ ಮೇಲ್ಮೆಯ ಪ್ರತಿನಿಧಿ. ಪಿತೃತ್ವದ ಮಧ್ಯೆ ತನ್ನ ಮೇಲ್ಮೆಯನ್ನು ಉಳಿಸಿಕೊಳ್ಳಲು ಸಿರಿ ಪಿಂಗಾರದಲ್ಲಿ ಹುಟ್ಟುತ್ತಾಳೆ. (ಬೇಸಾಯದಲ್ಲಿ ಪಿಂಗಾರಕ್ಕಿಂತ ಪಿಳ್ಳೆ ಬರುವ ಅಥವಾ ಹಾಲು ಬರುವ ಗಿಡಗಳಿಗೆ ಮಹತ್ವವಿದೆ. ಅಂದರೆ ಬಿದಿರು, ಬಾಳೆ, ಅತ್ತಿ, ಇತ್ತಿ, ಮಾವು, ಹಲಸು ಇತ್ಯಾದಿಗಳಿಗೆ, ಕೆಳವರ್ಗಗಳಲ್ಲಿ ಪಿಂಗಾರಕ್ಕೆ ಹೆಚ್ಚಿನ ಮಹತ್ವವಿದ್ದುದು ಕಡಿಮೆ)
ಬಿರಿದ ಹೆಣ್ಣುಪುಷ್ಪ ಗಂಡಿನ ನೇರ ಸಂಪರ್ಕವಿಲ್ಲದೇ ಕಾಯಿಯಾಗುವುದು ಸಸ್ಯಗಳ ಸಹಜ ಗುಣ. ಇದೇ ಸಹಜ ಗುಣವನ್ನು ಪಾಡ್ದನ ಸಿರಿಯ ಜನನದಲ್ಲೂ ಕಾಣಬಹುದು. ಕ್ಷೇತ್ರವಾಗಿರುವ ಪಿಂಗಾರಕ್ಕೆ ಬೀಜದ ಅಥವಾ ನೀರಿನ ಸಂಪರ್ಕವನ್ನು ಕಲ್ಪಿಸದೇ ಸಿರಿಯ ಜನನವಾಗುತ್ತದೆ. ಮನುಷ್ಯಾವಸ್ಥೆಯನ್ನು ಪ್ರಕೃತಿದತ್ತವಾದ ವ್ಯವಸ್ಥೆಯೊಂದಿಗೆ ಜೋಡಿಸುವುದು ಜನಪದರಿಗೆ ಸಾಮಾನ್ಯ. ಇದನ್ನು ಬತ್ತ ಬೇಸಾಯದ ಅಲ್ಲಲ್ಲಿ ಸಾಬೀತು ಪಡಿಸುತ್ತಾರೆ. ಆದರೆ ಸಿರಿ ಬಳಗದ ಹುಟ್ಟಿನಲ್ಲಿ ಇದರ ನಿರಾಕರಣೆ ಇದೆ(ಎಲ್ಲಾ ಬಳಗ ಅಲ್ಲ ಸೊನ್ನೆ, ಅಬ್ಬಗ ದಾರಗ ಇದೆ) ಆದ್ದರಿಂದ ಫಲವಂತಿಕೆಯನ್ನು ಪ್ರತಿನಿಧಿಸುವ ಕುಂಭ ಸಿರಿಗಳು ಮೂಲ ಬೇಸಾಯ ಸಂಸ್ಕøತಿಮಾತೃವ್ಯವಸ್ಥೆಯನ್ನು ಪೋಷಿಸುವ ಹಾಗೂ ಪಿಂಗಾರ ಮೂಲದಲ್ಲಿ ಹುಟ್ಟಿದಪಾಡ್ದನ ಸಿರಿ ಪಿತೃವ್ಯವಸ್ಥೆಯನ್ನು ದಿಕ್ಕರಿಸಿ ಮಾತೃವ್ಯವಸ್ಥೆಯನ್ನು ಮರುಸ್ಥಾಪಿಸುವ ಪ್ರತಿನಿಧಿಗಳಂತೆ ಕಾಣುತ್ತವೆ. ಇದೇ ಈ ಕೃತಿ ಹೇಳುವ ಕುಂಭ ಸಿರಿ ಮತ್ತು ಪಾಡ್ದನ ಸಿರಿಯ ಸ್ಪಷ್ಟ ವ್ಯತ್ಯಾಸ ಎನ್ನಬಹುದು. (ಪಾಡ್ದನ ಸಿರಿಯಿಂದಲೇ ಮಾತೃಮೂಲಿಕೆಯ ಸಂತಾನ ಬೆಳೆಯಿತು ಎಂಬ ನಂಬಿಕೆ ಬಂಟ ಸಮುದಾಯದಲ್ಲಿದೆ ಎಂದು ಪ್ರೊ.ಎ.ವಿ. ನಾವುಡರು ದಾಖಲಿಸಿದ್ದಾರೆ. ಆದರೆ ಪಾಡ್ದನ ಸಿರಿಗಿಂತಲೂ ಮೊದಲೇ ಮಾತೃಮೂಲಿಕೆ ಇತ್ತು ಎನ್ನುವುದನ್ನು ಕುಂಭ ಸಿರಿಗಳ ವಿಶ್ಲೇಷಣೆಯಿಂದ ತಿಳಿದುಕೊಳ್ಳಬಹುದು)ಸತ್ಯನಾಪುರದ ಸಿರಿಯಂತೆ ಆಕೆಯ ಮಗನೆನಿಸಿಕೊಂಡ ಕುಮಾರನೂ ಮಾನವ ಸಹಜ ಹುಟ್ಟಿನ ಹಿನ್ನಲೆಯುಳ್ಳವನಲ್ಲ.
ಕುಮಾರನ ಗಾಳಿ ಮೂಲದ ಹುಟ್ಟು: ಸಿರಿಯ ನಂತರದ ಎರಡನೇ ತಲೆಮಾರಿನ ಹುಟ್ಟುಕೂಡ ಇದೇ ಪ್ರಕೃತಿ ಮೂಲದಿಂದ ನಿರೂಪಿತವಾಗಿದೆ. ಕುಮಾರ, ಆತ ಗಾಳಿ ಕುಮಾರ.ಸಿರಿ, ತನ್ನ ಹುಟ್ಟು ಹಾಗೂ ತನ್ನ ಮೊದಲ ಮಗನ ಹುಟ್ಟಿಗೆ ಗಂಡಿನ ಅಗತ್ಯವೇ ಇಲ್ಲ ಎಂದು ಪ್ರತಿಪಾದಿಸುವುದರ ಮೂಲಕ ಗಂಡಿನ ಅಸ್ಥಿತ್ವÀ ಅಥವಾ ಬೀಜದ ನಿರಾಕರಣೆಯನ್ನು ಮಾಡುತ್ತಾಳೆ. ಈ ಎರಡು ಹುಟ್ಟು ಪಿತೃವ್ಯವಸ್ಥೆಯ ವಿರುದ್ದದ ಬಲವಾದ ಪ್ರತಿಭಟನೆ, ಆದರೆ ಪ್ರಕೃತಿ ನಿಯಮವೊಂದರ ಪ್ರತಿಪಾದನೆ. ಅಂದರೆ ತುಳುಬೇಸಾಯ ಸಂಸ್ಕøತಿಯಲ್ಲಿ ‘ಕೆಡ್ಡಸ’ದ ಬಗೆಗಿನ ನಂಬಿಕೆಯಂತೆ. ತುಳುನಾಡಿನಲ್ಲಿ ಕೆಡ್ಡಸದ ಆಚರಣೆ ಎಂದರೆ ಹೆಣ್ಣು ಋತುಮತಿಯಾಗುವಂತೆ ಮಣ್ಣಿಗೆ ಆರೋಪಿಸಿ ನಡೆಯುವ ಆಚರಣೆ. ಕ್ಷೇತ್ರ ಹದವಾಗಿಸಿ ಮುಂದೆ ಅಲ್ಲಿ ಬೀಜ ಬಿತ್ತಲು ಅಣಿಯಾಗಿಸುವ ಆಚರಣೆ. ಇದು ಮಾನವ ಸಹಜವಾದ ಸೃಷ್ಟಿಕ್ರಿಯೆಯ ಪರಿಕಲ್ಪನೆಯೂ ಹೌದು. ಆದರೆ ಕೆಡ್ಡಸ ಆಚರಿಸುವ ಹಿಂದುಮುಂದು ಅಂದರೆ ಮಾಯಿ(ಮಾಘ)ತಿಂಗಳಲ್ಲಿ ಬಿಳುವ ಗಾಳಿಗೆ ‘ಕೆಡ್ಡಸದ ಗಾಳಿ’ ಎನ್ನುತ್ತಾರೆ. ಇದು ಗಿಡ ಮರಗಳಿಗೆ ಹೊಟ್ಟೆ(ಪೊಟ್ಟೆ=ಗರ್ಭ) ಬರಿಸುವ ಗಾಳಿ ಎಂಬ ನಂಬಿಕೆ ಇದೆ. (ನೋಡಿ: ಬತ್ತದ ಲೋಕ- ಡಾ.ಸುಂದರ ಕೇನಾಜೆ 2010) ಆ ಕಾಲದಲ್ಲಿ ಗಿಡ ಮರಗಳು ಗಾಳಿಯಿಂದ ಗರ್ಭ ಧರಿಸುತ್ತವೆ ಮತ್ತು ಫಲ ನೀಡುತ್ತವೆ. ಇಲ್ಲಿ ಕೇವಲ ಬಿಸುವ ಗಾಳಿಯೊಂದು ಗಂಡಿನ ಕೆಲಸವನ್ನು ಮಾಡುತ್ತದೆ. ಆದ್ದರಿಂದ ಸಿರಿಯ ಮಗ ಕುಮಾರನ ಜನನದ ಹಿಂದೆಯೂ ತುಳು ಬೇಸಾಯದ ಕ್ರಿಯಾಚರಣೆಯ(ಈ ಗಾಳಿಯ) ಪ್ರಭಾವ ಇದೆ. ಈ ಕೃತಿ ಸಿರಿ ಮತ್ತು ಕುಮಾರನ ಹುಟ್ಟಿನ ಬಗ್ಗೆ ಹಲವು ಪಠ್ಯಗಳ ಆಧಾರವನ್ನು ನೀಡುತ್ತದೆ(ಸಸ್ಯಶಾಸ್ತ್ರದ ನೆಲೆಯಲ್ಲೂ ಈ ಗಾಳಿ ಪರಾಗಸ್ಪರ್ಶವನ್ನು ಏರ್ಪಡಿಸಿ ಗಿಡಮರಗಳು ಫಲ ಬಿರಿಯುವಂತೆ ಮಾಡುತ್ತದೆ.)
ಕಂಬುಲದ ಮೂಲಕ ಹೆಣ್ಣು ಮತ್ತು ಗಂಡು: ಮಣ್ಣಿನ ಫಲವಂತಿಕೆಯನ್ನು ಬಯಸಿ ನಡೆಸುತ್ತಿದ್ದ ಅನಾದಿಕಾಲದ ನಾನಾ ಕ್ರಿಯಾಚರಣೆಗಳು ಇಂದಿಗೂ ಮುಖ್ಯವಾಗಿವೆÉ. ಕಂಬುಲದ ಕ್ರಿಯಾಚರಣೆ ಮತ್ತು ನಾಗನನ್ನು ಪೂಕರೆ, ಬಾಳೆಗದ್ದೆಯಲ್ಲಿ ಉಪಾಸನೆಗೈಯುವ ಬೇಸಾಯ ಪ್ರಕ್ರಿಯೆ ಪುರುಷತ್ವವನ್ನು ಸೇರಿಸಿಕೊಳ್ಳುವ ಸಂಕೇತ. ಪುರುಷನನೇರ ಸಂಪರ್ಕವಿಲ್ಲದೇ ಈ ರೀತಿಯ ಸಂಕೇತಗಳ ಮೂಲಕ ಅನೇಕ ದೈವಗಳು ಹುಟ್ಟಿರುವ ಬಗ್ಗೆ ತುಳುನಾಡಿನಲ್ಲಿ ಬಹಳಷ್ಟು ಪಾಡ್ದನಗಳಿವೆ(ಈ ಕೃತಿಯಲ್ಲಿ ಅದನ್ನು ಹೇಳಲಾಗಿದೆ) ಇದನ್ನು ಮಣ್ಣಿನ ಫಲವಂತಿಕೆಯ ನಕಲು ಎನ್ನಬಹುದು. ಆದ್ದರಿಂದ ಇಲ್ಲಿ ತಿಳಿಸಿದ ಸಿರಿಯ ಹುಟ್ಟು ಮತ್ತು ತನ್ನ ಮೊದಲ ಮಗನನ್ನು ಪಡೆಯುವ ವಿಧಾನ (ಗಿಂಡೆ, ಸಾಮು, ದಾರು ಇವರೆಲ್ಲ ಕೂಡ) ಇವೆಲ್ಲ ಮಣ್ಣಿನ ಫಲಪ್ರಾಪ್ತಿಯ ನಕಲು ಎನ್ನುವುದರಲ್ಲಿ ಸಂಶಯವಿಲ್ಲ. ಈ ಕೃತಿಯಲ್ಲಿನ ಕಂಬುಲದ ವಿಶ್ಲೇಷಣೆಯನ್ನು ಇದೇ ಅರ್ಥದಿಂದ ನೋಡಬೇಕಾಗಿದೆ. ಕ್ಷೇತ್ರ ಮತ್ತು ಬೀಜದ ಮೂಲಕ ಸೃಷ್ಟಿಕ್ರಿಯೆಯನ್ನು ಸುಗಮಗೊಳಿಸುವ ಆಚರಣೆಗಳೇ ಕಂಬುಲ, ಹಾಗೆಂದು ಇದು ಜನಪದರ ಪ್ರಕಾರ, ಪುರುಷ ಮತ್ತು ಸ್ತ್ರೀ ಎನ್ನುವ ಅಧಿಕಾರದ ಅರ್ಥದಲ್ಲಲ್ಲ. ಬದಲಾಗಿ ‘ಗಂಡು’ ಮತ್ತು ‘ಹೆಣ್ಣು’ ಎನ್ನುವ ಸಮನ್ವಯದ ಅರ್ಥದಲ್ಲಿ.
ಬೀಜ ಮತ್ತು ಕ್ಷೇತ್ರದ ಸಮನ್ವಯವಾಗಿ ಅತಿಕಾರೆ ಮತ್ತು ಕಾಡ್ದೆರು: ಈಕೃತಿಯ ಅಲ್ಲಲ್ಲಿ ವಿವರಿಸಲ್ಪಟ್ಟ ಪ್ರಮುಖ ಮತ್ತು ಜಿಜ್ಞಾಸೆ ಹುಟ್ಟಿಸುವ ಒಂದೆರಡು ಮಾಧ್ಯಮಗಳೆಂದರೆ ಅತಿಕಾರೆ ಭತ್ತ ಮತ್ತು ಕಾಡ್ದೆರುಕುಲು. ಇವೆರಡು ಮಣ್ಣಿನ ಫಲವಂತಿಕೆಯಲ್ಲಿ ಕ್ಷೇತ್ರಕ್ಕೆ ಅನಿವಾರ್ಯವಾಗಿ ಬೇಕಾಗುವ ಬೀಜದ ಪ್ರತಿನಿಧಿಗಳು. ದೆಯ್ಯಂದಿ ಸಿರಿಗಳಲ್ಲಿ ಇವೆರಡೂ ಜೊತೆಯಾಗಿ ತುಳುನಾಡಿಗೆ ಬರುತ್ತವೆ. ಪಾಡ್ದನ ಸಿರಿಯಲ್ಲಿ ಕಾಡ್ದೆರು ಮತ್ತು ಕೋಟಿಪೂಂಜ(ಕುಮಾರ) ಪ್ರಕಟಗೊಳ್ಳುತ್ತಾನೆ ಎಂದೂ ಇದೆ. ಬೀಜದ ನಿರಾಕರಣೆಯನ್ನೇ ಮಾಡುತ್ತಾ ಬಂದ ಸಿರಿಯೊಂದಿಗೇ ಅತಿಕಾರೆ ಬೀಜ ಹಾಗೂ ಬೀಜವನ್ನೇ ಸಂಕೇತಿಸುವ ಹೋರಿ ಬರಲು ಸಾಧ್ಯವೇ ಎನ್ನುವ ಜಿಜ್ಞಾಸೆ ಇದೆ. ಆದರೆಇದು ‘ಜೋಡಿ ಸಿರಿಗಳ’ ಕಾಲದಲ್ಲಿ ಪ್ರಕಟಗೊಂಡದ್ದು ಎನ್ನುವುದೇ ಗಮನಿಸಬೇಕಾದ ಅಂಶ. ಯಾಕೆಂದರೆ ಫಲವಂತಿಕೆಯ ನೆಲೆಯಲ್ಲಿ ಇವುಗಳು ಅನಿವಾರ್ಯ ಎನ್ನುವುದನ್ನು ಮಾತೃವ್ಯವಸ್ಥೆ ಸ್ಪಷ್ಟವಾಗಿ ಒಪ್ಪುತ್ತದೆ. ಇದಕ್ಕೆ ಅನೇಕ ನಿದರ್ಶನಗಳು ಬೇಸಾಯ ಸಂಬಂಧೀ ಕ್ರಿಯಾಚರಣೆಯಲ್ಲೂ ಸಿಗುತ್ತವೆ. (ನೋಡಿ: ಬತ್ತದ ಲೋಕ- ಡಾ.ಸುಂದರ ಕೇನಾಜೆ 2010) ಅಲ್ಲದೇ ಶ್ರೇಷ್ಠ ಬೀಜದಿಂದಲೇ ಫಲ ನಿರೀಕ್ಷೆ ಮಾಡಬೇಕೆನ್ನುವ ನಂಬಿಕೆಯೂ ತುಳುನಾಡಿನಲ್ಲಿದೆ. ಅತಿಕಾರೆ ಭತ್ತದ ಬಗ್ಗೆ ತುಳುನಾಡಿನಲ್ಲಿದ್ದ ನಂಬಿಕೆ ಇದನ್ನು ಇನ್ನೂ ಪುಷ್ಠೀಕರಿಸುತ್ತದೆ. ಆ ದೃಷ್ಠಿಯಿಂದ ತುಳುನಾಡಿನಲ್ಲಿ ಕ್ಷೇತ್ರದ ಪ್ರತಿನಿಧಿಗಳಾದ ಸಿರಿಗಳು ಉಂಡಾಗುವಾಗಲೇ ಬೀಜದ ಪ್ರತಿನಿಧಿಗಳನ್ನೂ(ನಾಗ, ಬಿರ್ಮೆರ್, ನೀರು, ಅತಿಕಾರೆ, ಗಾಳಿ, ಕಾಡ್ದೆರು) ಆಯ್ಕೆ ಮಾಡಿಕೊಳ್ಳಲಾಗಿದೆ. ಇದು ಕೂಡ ಮಣ್ಣು ಮತ್ತು ಹೆಣ್ಣಿನ ಫಲವಂತಿಕೆಯ ರಾಜಿಸೂತ್ರವೆಂದೇ ಹೇಳಬಹುದು.
ಮೊದಲನೆಯದು ಸೌಮ್ಯ ಸಿರಿಗಳು, ಎರಡನೆಯದು ಪ್ರತಿಭಟನಾ ಸಿರಿ. ಎರಡರ ಉದ್ದೇಶವೂ ಮಾತೃನೆಲೆಯನ್ನು ಭದ್ರಪಡಿಸುವುದು, ಆ ಮೂಲಕ ಫಲವಂತಿಕೆಯನ್ನು ನಿರಂತರ ಕಾಯ್ದುಕೊಳ್ಳುವುದು ಎಂದು ಈ ಕೃತಿ ವಿಶ್ಲೇಷಿಸುತ್ತದೆ. ಇದು ಸಹಜ ಸ್ಥಿತಿ ಕೂಡ. ಆದರೆ ಎರಡನೇಯ ಸಿರಿ, ಆರ್ಥಿಕ ಒಡೆತನ ಮತ್ತು ಸಾಮಾಜಿಕ ಸ್ಥಾನಮಾನದ ಹಿನ್ನಲೆಯಲ್ಲಿ ಹೆಣ್ಣಿನ ಫಲವಂತಿಕೆಗೆ ಆಧ್ಯತೆ ನೀಡುವ ಪ್ರಯತ್ನಗಳೆಂದು ಕರೆಯಬಹುದು. ಇಲ್ಲಿ ಅಲೌಕಿಕತೆಗೆ ಆಧ್ಯತೆ ನೀಡಲಾಗಿದೆ, ಇದನ್ನು ಸಿರಿ ಕಥಾನಕದಲ್ಲಿ ವಿವರಿಸಲಾದ ಹೋರಾಟ ಮತ್ತು ಸಿರಿ ಜಾತ್ರೆಯ ಕ್ರಿಯಾಚರಣೆಗಳ ಮೂಲಕ ತಿಳಿಯಬಹುದು. ಇದೇ ಅರ್ಥದಲ್ಲಿ ಜೋಡಿ ಸಿರಿಗಳ ಕಾಲದ ಗಂಡಿನ ಉಪಾಸನೆ ಮತ್ತು ಪಾಡ್ದನ ಸಿರಿಯ ಕಾಲದ ಗಂಡಿನ ವರ್ತನೆಯವನ್ನು ವಿಶ್ಲೇಷಿಸಬೇಕಾಗಿದೆ.
ಪಿತೃ ವ್ಯವಸ್ಥೆಯ ಪ್ರಮುಖ ಪ್ರತಿನಿಧಿಗಳು(ಸಿರಿ ಕಥಾನಕದ ಖಳನಾಯಕರು): ಈ ಕೃತಿ ಪಿತೃ ವ್ಯವಸ್ಥೆಯ ಪ್ರತಿನಿಧಿತ್ವದ ಬಗ್ಗೆ ಅಲ್ಲಿಲ್ಲಿ ಸೂಚ್ಯವಾದ ಅನೇಕ ಮಾಹಿತಿಯನ್ನು ನೀಡುತ್ತದೆ. ಅದು ಪಾಡ್ದನ ಸಿರಿಯ ಕಾಲಕ್ಕೆ ಪ್ರಕೃತಿ ನಿಯಮವನ್ನು ಮೀರಿ ನಿಲ್ಲುವುದನ್ನು ವಿವರಿಸುತ್ತದೆ.ಹೆಣ್ಣು ಮತ್ತು ಮಣ್ಣು ಎರಡನ್ನೂ ಕೀಳಾಗಿ ಕಾಣುವ ಖಳನಾಯಕತ್ವ ಈ ಕಾಲದ್ದಾಗಿದೆ. ಇದು ಸಿರಿ ಕಥಾನಕ ರೂಪುಗೊಳ್ಳುವ ಕಾಲಕ್ಕೆ ಇನ್ನೂ ವ್ಯಾಪಿಸಿರುವ ಸಾಧ್ಯತೆ ಇದೆ. ಹೆಣ್ಣು ಭೋಗದ ವಸ್ತು, ಹಾಗಾಗಿ ಹೆಂಡತಿ ನಗಣ್ಯ ಅಥವಾ ಆಕೆಯನ್ನು ಅವಮಾನಿಸುದು ಸರಿ ಎಂದು ಸೂಳೆಯ ಸಂಪರ್ಕದಲ್ಲಿರುವ ಕಾಂತಣ್ಣ ಆಳ್ವ ಪುರುಷ ಪ್ರಧಾನ ವ್ಯವಸ್ಥೆಯ ಪ್ರಮುಖ ಪ್ರತಿನಿಧಿ. ಅದೇ ರೀತಿ ಮಣ್ಣೂ ಕೂಡ ಭೋಗದ ವಸ್ತು,ಹಾಗಾಗಿ ಭೂಮಿ ಎಷ್ಟಿದ್ದರೂ ಕಡಿಮೆ ಎಂದು ಇನ್ನೊಂದರ ಅಧಿಕಾರಕ್ಕೆ ಹಾತೊರೆಯುವ ಸಂಕರಾಳ್ವ ಯಜಮಾನಶಾಹಿ ವ್ಯವಸ್ಥೆಯ ಪ್ರಮುಖ ಪ್ರತಿನಿಧಿ. ಭ್ರಷ್ಠತೆಯ ಮೂಲಕ ಮಾತೃತ್ವಕ್ಕೆ ಮತ್ತು ಮಣ್ಣಿನ ಸಹಜ ಒಡೆತನಕ್ಕೆ ಧಕ್ಕೆ ತರುವ ಪತ್ತೇರಿ ಕೂಟದ ಪಾಲವರು ಒಟ್ಟು ರಾಜಕೀಯವ್ಯವಸ್ಥೆಯ ಪ್ರತಿನಿಧಿಗಳು. ಅಂದರೆ ಹೆಣ್ಣಿನ ಒಡೆತನ, ಮಣ್ಣಿನ ಒಡೆತನ, ಮತ್ತು ರಾಜಕೀಯ ವ್ಯವಸ್ಥೆಯ ಒಡೆತನ ಗಂಡಿಗೆ ಸೇರಿದ್ದು ಎನ್ನುವ ನಿಯಮ ಅದುವರೆಗೂ ಇದ್ದ ಸಮನ್ವಯದ ನಿಯಮಕ್ಕೆ ವಿರುದ್ಧವಾದುದಾಗಿತ್ತು. ಈ ಮೂರೂ ಒಟ್ಟಾಗಿ ನಿಂತು, ಫಲವಂತಿಕೆಯ ಮೂಲ ಆಶಯಕ್ಕೆ ತೀವೃ ತೊಂದರೆಯುಂಟು ಮಾಡಿತು. ಆಗ ಸೆಟೆದು ನಿಂತ ಮಾತೃ ಪ್ರತಿನಿಧಿಯೇ ಸಿರಿ. ಮೂರು ಕಡೆಯಿಂದ ಅಧಿಕಾರ ಚಲಾಯಿಸುವ ಪ್ರತಿಗಾಮಿಗಳನ್ನು ದಿಕ್ಕರಿಸಿ, ಫಲದಾಯಿ ಮಣ್ಣನ್ನು, ಮಾತೃತ್ವದ ಹೆಣ್ಣನ್ನು ಮತ್ತು ಸತ್ಯವಂತ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಸೆಣಸುತ್ತಾಳೆ. ಇದರಲ್ಲಿ ಜಯ ಸಾಧ್ಯವಿಲ್ಲ ಎನ್ನುವ ಅರಿವು ಬಂದಾಗ ವಾಸ್ತವತೆಯನ್ನ ಬಿಟ್ಟು ಶಾಪದ ಅಥವಾ ತನ್ನ ಅಲೌಕಕ ಜನನದ ಮೊರೆಹೋಗಲಾಗುತ್ತದೆ. ಇದು ಪಾಡ್ದನ ರಚಿಸಿದ ಜನಪದರ ಆರಾಧನಾ ಪ್ರಕ್ರಿಯೆಯಲ್ಲಿನ ತಂತ್ರವೆಂದೂ ಕರೆಯಬಹುದು. ಆದರೆ ಕಾಲ, ಸಾಮಾಜಿಕ ವ್ಯವಸ್ಥೆ, ನಂಬಿಕೆ ಇತ್ಯಾದಿಗಳು ಬೆಸೆದುಕೊಂಡದ್ದರಿಂದ ಒಂದಷ್ಟು ಗೊಂದಲ, ವಿರೋಧಾಭಾಸಗಳನ್ನು ಪಾಡ್ದನ ಸಿರಿ ಪ್ರಕಟಿಸಿದರೂ ಪ್ರಕೃತಿ ನಿಯಮವನ್ನು ಮೀರುವುದಿಲ್ಲ. ಈ ಕೃತಿಯ ಆರನೇ ಅಧ್ಯಾಯ ಈ ಅಂಶವನ್ನು ಎತ್ತಿ ಹಿಡಿಯುತ್ತದೆ. (ಬಿರ್ಮಾಳುವರನ್ನು ‘ಅಜ್ಜೆರೆ’ ಎಂದು ಕರೆಯುವುದು ನಿರ್ಬೀಜದ ಸಂಕೇತವಾಗಿಯೇ? ಆ ಕಾರಣದಿಂದ ಸಿರಿ ಪಿಂಗಾರದಲ್ಲಿ ಜನಿಸಿದಳೇ? ಹಾಗಾಗಿ ಆತನನ್ನು ತಂದೆ ಎಂದು ಕರೆಯದೇ ಅಜ್ಜ ಎಂದು ಕರೆಯಲಾಗಿದೆಯೇ? ಈ ಬಗ್ಗೆ ಚೆರ್ಚೆ ನಡೆಸಬಹುದು)
ಮತ್ತೆ ಪ್ರಕೃತಿ ನಿಯಮ: ಕೊಡ್ಸರಾಳ್ವನನ್ನು ಸಿರಿ ಮರುಮದುವೆಯಾಗುವುದು, ಪ್ರಕೃತಿ ನಿಯಮವನ್ನು ಪರಿಪಾಲಿಸುವ ನೆಲೆಯಿಂದ. ಗಂಡಿನ(ಕುಮಾರನÀ) ವಿರೋಧದ ನಡುವೆಯೂ ಸಿರಿ ತನ್ನೆಲ್ಲ ಪ್ರತಿಭಟನೆ, ಸಿಟ್ಟು ಸೇಡುಗಳನ್ನು ಶಮನಗೊಳಿಸಿ ಸಾಮಾಜಿಕವಾದ ಕೆಲವು ವಾಸ್ತವಗಳನ್ನು ಒಪ್ಪಿಕೊಳ್ಳುತ್ತಾಳೆ. ಅಲ್ಲದೇ ಮಾನವ ಸಹಜ ರೀತಿಯಲ್ಲಿ ಮಗುವೊಂದನ್ನೂ ಪಡೆಯುತ್ತಾಳೆ. ಮಾನವ ಸಹಜ ಕಷ್ಟ, ದುಃಖ, ನೋವನ್ನು ಅನುಭವಿಸುವ ಸಿರಿ, ಅಸಹಜವಾಗಿ ಅದಕ್ಕೆ ಪ್ರತ್ಯುತ್ತರವನ್ನು ನೀಡುತ್ತಾ ಬರುತ್ತಾಳೆ. ಆದರೆ ತನ್ನ ಮರು ಮದುವೆ, ಸೊನ್ನೆಯನ್ನು ಹೊತ್ತು ಹೆರುವ ಸಹಜ ಸ್ಥಿತಿ, ಮೂರನೇ ತಲೆಮಾರಾದ ಅಬ್ಬಗ ದಾರಗೆಯರ ಜನನ, ಇವೆಲ್ಲ ಮತ್ತೆ ಅಲೌಕಿಕದಿಂದ ಲೌಕಿಕಕ್ಕೆ ಸಿರಿ ಬಳಗ ನಡೆದು ಬಂದ ದಾರಿಯಂತಿದೆ. ಅಂದರೆ ಮೂಲ ಬೇಸಾಯ ಸಂಸ್ಕøತಿ ಪ್ರತಿಪಾದಿಸುವ ಬೀಜ ಮತ್ತು ಕ್ಷೇತ್ರದ ಸಮನ್ವಯದಂತೆ ಕಾಣುತ್ತದೆ.
ಒಟ್ಟಿನಲ್ಲಿ ಜೋಡಿ ಸಿರಿಗಳ ಕಾಲ ಅಂದರೆ ಮಾತೃ ವ್ಯವಸ್ಥೆಯ ಗಟ್ಟಿಯಾಗಿದ್ದ ಕಾಲ, ಹೆಣ್ಣು ಗಂಡಿನ ಸಮನ್ವದ ಕಾಲ, ಆ ಮೂಲಕ ಫಲವಂತಿಕೆಯನ್ನು ಸುಸೂತ್ರವಾಗಿ ಪಡೆಯುತ್ತಿದ್ದ ಕಾಲ, ಸಂಮೃದ್ಧಿಯ ಕಾಲ. ಅದೇ ಪಾಡ್ದನ ಸಿರಿಯ ಕಾಲ ಅಂದರೆ ಮಾತೃ ವ್ಯವಸ್ಥೆ ಶಿಥಿಲಗೊಂಡ ಕಾಲ, ಗಂಡಿನ ಅಸ್ಥಿತ್ವವನ್ನು ಅಲ್ಲಗಳೆದ ಕಾಲ, ಫಲವಂತಿಕೆಗಾಗಿ ಅಲೌಕಿಕ ಶಕ್ತಿಗಳನ್ನು ಆಶ್ರಯಿಸಿಕೊಂಡ ಕಾಲ, ಹತಾಶೆಯ ಕಾಲವೆಂದು ಈ ಕೃತಿ ಮತ್ತು ನನ್ನ ತಿಳುವಳಿಕೆಯ ನೆಲೆಯಲ್ಲಿ ಹೇಳ ಬಯಸುತ್ತೇನೆ.
ಉಪಸಂಹಾರ: ಪಾಡ್ದನ ಮತ್ತು ಆಲಡೆಯ ಮೂಲಕ ಅಭಿವ್ಯಕ್ತಗೊಳ್ಳುತ್ತಿರುವ ಸಿರಿಯನ್ನು ಸಿರಿ ಬಳಗಗಳೆಂಬ ವಿಸ್ತಾರವಾದ ಸಾಂಸ್ಕøತಿಕ ಸಂಕೀರ್ಣಕ್ಕೆ ಒಳಪಡಿಸಿದ ಕೃತಿ ಈ ‘ಸಿರಿಬಾರಿ ಲೋಕ ತುಳುನಾಡು’. ಅಪೂರ್ವವಾದ ಮಾಹಿತಿ ಸಂಗ್ರಹದೊಂದಿಗೆ ಸಿರಿ ಪರಿಕಲ್ಪನೆಗೆ ಹೊಸ ಆಯಾಮವನ್ನು ಮತ್ತು ಅಧ್ಯಯನಕ್ಕೆ ಬಹುಶ್ರುತ ಅವಕಾಶವನ್ನು ನೀಡಿದ್ದಾರೆ ಡಾ.ಇಂದಿರಾ ಹೆಗ್ಗಡೆಯವರು. ಹಾಗೆಂದು ಒಂದೇ ಓದಿಗೆ ನಿಲುಕುವ ಕೃತಿ ಇದಲ್ಲ, ಇನ್ನೂ ಹೆಚ್ಚಿನ ವಿಶ್ಲೇಷಣೆಯನ್ನು ಬಯಸುವ ಹಲವಾರು ಅಂಶಗಳೂ ಇಲ್ಲದಿಲ್ಲ. ಜೋಡು ಸಿರಿಗಳು ಮತ್ತು ಪಾಡ್ದನ ಸಿರಿ ಎನ್ನುವ ಎರಡು ಪ್ರತ್ಯೇಕ ವಲಯಗಳನ್ನು ಮಾತೃಪ್ರಧಾನ ವ್ಯವಸ್ಥೆಯ ಹಿಂದಿರುವ ಬೇಸಾಯ ಮತ್ತು ಪಿತೃ ಪ್ರಧಾನ ವ್ಯವಸ್ಥೆಗೆ ಒಗ್ಗಿಸಿಕೊಳ್ಳಲು ಹೆಣಗಾಡುತ್ತಿದ್ದ ಬೇಸಾಯ ಎಂದು ಗುರುತಿಸಬಹುದು. ಇದರಲ್ಲಿ ಮಾತೃ ವ್ಯವಸ್ಥೆಗೆ ಹಿನ್ನಡೆಯಾಗುತ್ತದೆ, ಈ ಹಿನ್ನಡೆಯ ಒಂದು ರೂಪವೇ ತುಳುನಾಡಿನಲ್ಲಿ ಬೇಸಾಯ ಕಣ್ಮರೆಯಾಗಿ ವಾಣಿಜ್ಯ ಬೆಳೆಗಳು ವಿಜೃಭಿಸುತ್ತಿರುವುದು. ಆದರೆ ಹೆಣ್ಣು ಮತ್ತು ಮಣ್ಣುನ್ನು ತಾರ್ಕಕವಾಗಿ ಅಲ್ಲಗಳೆಯಬಹುದೇ ಹೊರತು, ವಾಸ್ತವಿಕವಾಗಿ ಅಲ್ಲ. ಅನಾದಿಕಾಲದಿಂದ ಇದನ್ನು ಒಪ್ಪಿಕೊಂಡು ಬಂದ ಸಾಮಾಜಿಕ ವ್ಯವಸ್ಥೆ ಹಾಗೂ ಅದನ್ನು ನಿರಾಕರಿಸುತ್ತಾ ಬಂದ ವ್ಯವಹಾರಿಕ ವ್ಯವಸ್ಥೆ ಎರಡೂ ಈ ಸಮಾಜದಲ್ಲೇ ಇದೆ. ಯಾವುದರ ಪ್ರಮಾಣ ಎಷ್ಟಿದೆ ಎನ್ನುವುದನ್ನು ತಿಳಿಯುವುದೇ ಇಂದಿನ ಅನಿವಾರ್ಯ. ಈ ಅನಿವಾರ್ಯದ ಹಿನ್ನಲೆಯಲ್ಲಿ ಸಿರಿಬಾರಿ ಲೋಕದ ಒಂದೊಂದು ಅಧ್ಯಾಯವೂ ಚರ್ಚೆಗೊಳಗಾಗುವ ಹಾಗೂ ವಿಸ್ತರಣೆ ಪಡೆಯುವ ಸಾಮಥ್ರ್ಯವನ್ನು ಪಡೆದಿದೆ. ಇಲ್ಲಿ ತುಳುನಾಡಿನ ಭತ್ತದ ಲೋಕ ಮತ್ತು ಸಿರಿ ಆಳಿದ ಲೋಕ ಇವೆರಡನ್ನು ಮುಖಾಮುಖಿಯಾಗಿಸಿ ಫಲವಂತಿಕೆಯನ್ನು ನೋಡುವ ಪ್ರಯತ್ನ ನಡೆಸಿದ್ದೇನೆ.
Comments
Post a Comment