ಹೊರಗುಳಿದ ಮಕ್ಕಳನ್ನು ಒಳತರಲು ಹೊಸ ಕಾರ್ಯತಂತ್ರ
ರಾಜ್ಯ ಹೈಕೋರ್ಟ್‍ನ ನಿರ್ದೇಶನ ಹಾಗೂ ಶಿಕ್ಷಣ ಹಕ್ಕು ಕಾಯ್ದೆಯ ಅನುಷ್ಟಾನ ಇವು ಕಟ್ಟುನಿಟ್ಟುಗೊಳ್ಳುತ್ತಾ ಇರುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ಒಂದು ರೀತಿಯ ಸಂಜಯನಗೊಳ್ಳುತ್ತಾ ಇರುವುದನ್ನು ಗಮನಿಸಬಹುದು. ಕಳೆದೊಂದು ವರ್ಷಗಳಿಂದ ಈ ಎರಡು ವಿಭಾಗಗಳು ಶಿಕ್ಷಣರಂಗದಲ್ಲಿ ಚುರುಕು ಮುಟ್ಟಿಸಿದ ಪರಿಣಾಮ ಎಷ್ಟಿತ್ತೆಂದರೆ ರಾಜ್ಯ ಸರಕಾರವೇ ಬೆವರಿಳಿಸುವ ಮಟ್ಟದ್ದಾಗಿತ್ತು. ರಾಜ್ಯ ಸರಕಾರದ ಪರವಾಗಿ ಸ್ವತಾ ಮುಖ್ಯ ಕಾರ್ಯದರ್ಶಿಗಳೇ ಕೋರ್ಟಿಗೆ ಹಾಜರಾಗಬೇಕಾದ ಸ್ಥಿತಿ ಪ್ರಕರಣದ ಗಂಭೀರತೆಯನ್ನು ತಿಳಿಸುತ್ತದೆ. ಹೀಗೆ ಇಡೀ ಸರಕಾರ ಮತ್ತು ಅದರ ಇಲಾಖೆಗಳನ್ನು ಬೆವರಿಳಿಸುಂತೆ ಮಾಡುತ್ತಿರುವವರು ಬೇರೆ ಯಾರೂ ಅಲ್ಲ. ನಮ್ಮ ನಿಮ್ಮ ಮಧ್ಯೆ ಕಾಣುತ್ತಿರುವ ಆದರೆ ಎಲ್ಲರ ಕಣ್ಣು ತಪ್ಪಿಸಿ ಸುತ್ತಾಡುತ್ತಿರುವ ಎಳೆಯ ಮಕ್ಕಳು. ಅಂದರೆ ಆರರಿಂದ ಹದಿನಾಲ್ಕು ವರ್ಷ ಪ್ರಾಯದ ಇನ್ನೂ ಎಂಟನೇ ತರಗತಿ ಪೂರ್ಣಗೊಳಿಸದ ಶಾಲೆಯಿಂದ ಹೊರಗುಳಿದ ಮಕ್ಕಳು. ಇವರು ಇಂದು ಎಲ್ಲರನ್ನೂ ಬಾಧಿಸತೊಡಗಿದ್ದಾರೆ. ಬೇರೆ ಬೇರೆ ಕಾರಣಗಳನ್ನು ನೀಡುತ್ತಾ ಈ ಮಕ್ಕaಳ ಸಂವೃದ್ಧ ಬಾಲ್ಯ ಮತ್ತು ಭವಿಷ್ಯ ಕಟ್ಟಿಕೊಳ್ಳುವ ಹಾಗೂ ಕಟ್ಟಿಗೊಡುವ ಈ ಕಾಲಘುಟ್ಟದಲ್ಲಿ ಈ ಮಕ್ಕಳನ್ನು ಒಂದು ರೀತಿ ಬೇಟೆಯಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೈಕೋರ್ಟ್ ಗರಂ ಆದದ್ದೇ ತಡ ಈ ಮಕ್ಕಳನ್ನು ಹೇಗಾದರೂ ಕರೆತರಲೇಬೇಕಾದ ಸ್ಥಿತಿಯೂ ಸಹಜವಾಗಿಯೇ ನಿರ್ಮಾಣವಾಗಿದೆ.
ಶಾಲೆಯಿಂದ ಹೊರಗುಳಿದ ಮಕ್ಕಳ ವಿಚಾರದಲ್ಲಿ ಶಿಕ್ಷಣ ಇಲಾಖೆ ಬೇರೆಬೇರೆ ಕಾರ್ಯ ತಂತ್ರಗಳನ್ನು ಈಗಾಗಲೇ ರೂಪಿಸಿ ಅನುಷ್ಟಾನಗೊಳಿಸಲು ಮುಂದಾಗುತ್ತಿದೆ. ಈ ಹಂತದಲ್ಲಿ ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಈ ವರ್ಷ ಒಂದಷ್ಟು ಹೊಸ ಕಾರ್ಯ ತಂತ್ರಗಳನ್ನು ಹಾಕಿಕೊಂಡು ಈಗಾಗಲೇ ಕಾರ್ಯಪ್ರವೃತ್ತವಾಗುತ್ತಿದೆ. ಕಳೆದ ಬಾರಿ ಅಂದರೆ 2013-14ರಲ್ಲಿ ತಾಲೂಕಿನಲ್ಲಿ ಒಟ್ಟು 73 ಮಕ್ಕಳನ್ನು ಶಾಲೆಯಿಂದ ಹೊರಗುಳಿದವರು ಎಂದು ಗಣತಿ ಪ್ರಕಾರ ಗುರುತಿಸಲಾಗಿತ್ತು. ಈ ಮಕ್ಕಳಲ್ಲಿ ಈಗಾಗಲೇ 50 ಮಕ್ಕಳನ್ನು ಮತ್ತೆ ಶಾಲೆಗೆ ಹಾಜರಾಗುವಂತೆ ಮಾಡಲಾಗಿದೆ. ಉಳಿದ 23 ಮಕ್ಕಳಲ್ಲಿ 13 ಮಕ್ಕಳು 8ನೇ ತರಗತಿ ಪೂರೈಸುವಂತೆ ನೋಡಿಕೊಳ್ಳಲಾಗಿದೆ ಮತ್ತು ಈ ಮಕ್ಕಳಿಗೆ 15 ವರ್ಷವೂ ಮೀರಿದೆ. ಆದರೂ ಇವರಲ್ಲಿ ಕೆಲವು ಮಕ್ಕಳು ಶಾಲೆಯಲ್ಲಿ ಕಲಿಕೆ ಮುಂದುವರಿಸುತ್ತಿದ್ದಾರೆ. ಇನ್ನು ಉಳಿದ 10 ಮಕ್ಕಳಲ್ಲಿ 8 ಮಕ್ಕಳು ತಾಲೂಕಿನಿಂದ ವಲಸೆ ಹೋಗಿದ್ದು ಆ ಪ್ರದೇಶದಲ್ಲಿ ಶಾಲೆಗೆ ದಾಖಲಾಗುವಂತೆ ನೋಡಿಕೊಳ್ಳಲಾಗಿದೆ. ಉಳಿದ 2 ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವ ಕೆಲಸ ಪ್ರಗತಿಯಲ್ಲಿದೆ .ಹೀಗೆ ಕಳೆದ ವರ್ಷ ಗುರುತಿಸಿದ ಶಾಲೆಯಿಂದ ಹೊರಗುಳಿದ ಎಲ್ಲಾ ಮಕ್ಕಳನ್ನು ಈ ವರ್ಷದ ಆರಂಭದಲ್ಲೇ ಶಾಲೆಯ ಒಳಗೆ ತರುವ ಕೆಲಸ ವ್ಯವಸ್ಥಿತವಾಗಿ ಬ್ಲಾಕ್ ಹಂತದಲ್ಲಿ ನಡೆದು ಯಶಸ್ಸು ಕಾಣುತ್ತಿದೆ.
ಕಳೆದ ವರ್ಷದ ಸಮಸ್ಯೆಗೆ ಪರಿಹಾರ ಕಾಣುತ್ತಿದ್ದಂತೆ ಈ ವರ್ಷ ಮತ್ತೆ ಅಷ್ಟೇ ಬೇರೆ ಮಕ್ಕಳು ಶಾಲೆಯಿಂದ ಹೊರಗುಳಿಯುವ ಮುನ್ಸೂಚನೆಗಳು ಕಾಣುತ್ತಿವೆ. ಈ ವರ್ಷ ಒಂದು ವಾರಗಳ ವರೆಗೆ ಯಾವ ಮಗು ಶಾಲೆಗೆ ಗೈರು ಹಾಜರಾಗುತ್ತದೋ ಅದು ಶಾಲೆಯಿಂದ ಹೊರಗುಳಿದ ಮಗು ಎಂದು ಪರಿಗಣಿಸಲ್ಪಡುತ್ತದೆ. ಹಾಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ವರ್ಷದ ಆರಂಭದಲ್ಲೇ ಉಸ್ತುವಾರಿ ಅಧಿಕಾರಿಗಳ ಮತ್ತು ಮುಖ್ಯ ಶಿಕ್ಷಕರ ಸಭೆ ಕರೆದು ಈಗಾಗಲೇ ಅಂತಹಾ ಸಾಧ್ಯತೆ ಇರುವ ಮಕ್ಕಳನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ. ಈ ಮಕ್ಕಳು ಶಾಲೆಯಿಂದ ಹೊರಗುಳಿಯಲೇಬಾರದು ಹಾಗೂ ತಾಲೂಕಿನ ಎಲ್ಲಾ ಮಕ್ಕಳು ಕಡ್ಡಾಯವಾಗಿ ಶಾಲೆಯ ಒಳಗಿರಲೇಬೇಕೆನ್ನುವ ನಿಟ್ಟಿನಲ್ಲಿ ಕೆಲವೊಂದು ವಿಶೇಷ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಅವುಗಳಲ್ಲಿ ಪ್ರತೀ ಗ್ರಾಮ ಪಂಚಾಯತ್‍ಗೆ ಸಂಬಂಧಿಸಿದಂತೆ ಯಾವ ಗಾಮ ಪಂಚಾಯತ್ ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲಾ ಮಕ್ಕಳ ಶೇ100 ದಾಖಲಾತಿ ಮತ್ತು ನಿರಂತರ ಹಾಜರಾತಿ(ಆರೋಗ್ಯ ಸಮಸ್ಯೆಯ ಹೊರತಾಗಿ ಒಂದು ವಾರಕ್ಕಿಂತ ಹೆಚ್ಚು ಗೈರು ಹಾಜರಾಗದಿರುವುದು)ಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗುತ್ತದೋ ಅಂತಹಾ ಗ್ರಾ.ಪಂ ಅನ್ನು ಇಲಾಖಾ ಹಂತದಿಂದ ಪರಿಶೀಲಿಸಿ ಅದನ್ನು ತಾಲೂಕು ಹಂತದಲ್ಲಿ ನಗದು ಪುರಸ್ಕಾರಗಳೊಂದಿಗೆ ಗೌರವಿಸಲಾಗುವುದು ಹಾಗೂ ಆ ಪಂಚಾಯತ್‍ನ ಸಾಧನೆಯನ್ನು ಇಲಾಖಾ ವೆಬ್‍ಸೈಟ್‍ನಲ್ಲಿ ಪ್ರಕಟಿಸುವ ಕಾರ್ಯ ಮಾಡಲಾಗುವುದು. ಅದೇ ರೀತಿ ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ವಿಶೇಷ ಕಾಳಜಿ ವಹಿಸಿದ ಶಿಕ್ಷಕರು,ಮುಖ್ಯಶಿಕ್ಷಕರು,ಎಸ್.ಡಿ.ಎಂ.ಸಿ, ಸಾರ್ವಜನಿಕರು, ಸಂಘಸಂಸ್ಥೆಗಳು, ಜನಪ್ರತಿನಿಧಿಗಳು, ಮತ್ತು ಅಧಿಕಾರಿಗಳಿಗೆ ತಾಲೂಕು ಹಂತದಲ್ಲಿ ಗುರುತಿಸಿ ಸತ್ಕರಿಸುವ ಯೋಜನೆ, ಶಾಲೆಗೆ ಹೋಗಲು ದೂರ ಅಥವಾ ಆರ್ಥಿಕ ಕಷ್ಟಕರ ಎನ್ನುವ ಮಕ್ಕಳಿಗೆ ಯಾವುದೇ ಸಂದರ್ಭದಲ್ಲಾದರೂ ಹಾಸ್ಟೆಲ್ ಸೌಲಭ್ಯ ನೀಡುವ ಬಗ್ಗೆಯೂ ಇಲಾಖೆ ಸಿದ್ಧತೆ ನಡೆಸಿದೆ. ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ, ಹಾಗೂ ಎಲ್ಲ ಉಸ್ತುವಾರಿ ಅಧಿಕಾರಿಗಳು ಹಾಗೂ ಇತರ ಇಲಾಖೆಯ ಮುಖ್ಯಸ್ಥರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲಾಗಿದೆ. ಮಕ್ಕಳಲ್ಲಿ,ಪೋಷಕರಲ್ಲಿ ಮತ್ತು ಸಾರ್ವಜನಿಕರಲ್ಲಿ ಹಂತಹಂತವಾಗಿ ಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಒಟ್ಟಿನಲ್ಲಿ 2014-15ನೇ ಸಾಲಿನಲ್ಲಿ ಸುಳ್ಯ ತಾಲೂಕಿನಲ್ಲಿ ಒಂದೇ ಒಂದು ಮಗೂ ಶಾಲೆಯಿಂದ ಹೊರಗುಳಿಯಬಾರದು ಎಂಬ ಪ್ರಾಮಾಣಿಕ ಕೆಲಸ ನಡೆಯುತ್ತಿದೆ.
ಮಕ್ಕಳು ಶಾಲೆಯಿಂದ ಹೊರಗುಳಿದಾಗ ಅವರ ಪುಟ್ಟ ಕೈಗಳು ಕೂಲಿಗೋ ಅಪರಾಧಕ್ಕೋ ಬಳಸಲ್ಪಡುತ್ತವೆ. ಅದರ ಬದಲು ಅದು ಕಲಿಕೆಗೆ ಬಳಕೆಯಾಗಲಿ ಎನ್ನುವುದೇ ನಮ್ಮ ಆಶಯ. ಸಮಾಜದ ಸಮಸ್ತರು ಒಗ್ಗೂಡುವುದರಿಂದ ಈ ಪಿಡುಗಿನಿಂದ ಹೊರಬರಲು ಸಾಧ್ಯ. ಕಾಯ್ದೆ ಕಾನೂನಿನಷ್ಟೇ ಜನ ಜಾಗೃತಿ ಮುಖ್ಯ.
ಡಾ.ಸುಂದರ ಕೇನಾಜೆ
Comments
Post a Comment