ಬಲಿ

ಬಲಿ

ಹೆಸರೇ ಸೂಚಿಸುವಂತೆ ಅದು ಬಲಿ ಅಥವಾ ಆಹುತಿ, ಸುಮಾರು ಆರ್ನೂರು-ಏಳ್ನೂರು ವರ್ಷಗಳ ಹಿಂದೆ ನಡೆದ ಆಹುತಿ. ಒಬ್ಬ ನಿಷ್ಟಾವಂತ ಪ್ರಜಾಪ್ರಿಯನ ಅಥವಾ ಬೇಸಾಯಗಾರನ ಬಲಿ. ಅದರೊಂದಿಗೆ ಇಲ್ಲಿಯ ತಳ ಸಂಸ್ಕøತಿಯ ನಾಶ ಹೆಚ್ಚುಗೊಂಡದ್ದು ಹಾಗೂ ಮೇಲ್ವರ್ಗದ ಪ್ರಭುತ್ವದ ಹೇರಿಕೆ ಜಾಗೃತಗೊಂಡದ್ದು ಹೌದು. ಆತನ ಬಲಿ ನಡೆದಲ್ಲಿಂದ ತುಳು ಜನಪದರು, ಆತನನ್ನು ಆರಾಧಿಸಲು ಪಾಡ್ದನ ಕಟ್ಟಿದ್ದು ಆಚರಣೆಗಳನ್ನು ಜಾರಿಗೆ ತಂದದ್ದು ಸತ್ಯ. ಪಾಡ್ದನದಲ್ಲಿ ಬಲೀಂದ್ರ (ಬಲಿ ಎನ್ನುವುದೇ ಸರಿ, ಇಂದ್ರ ಶಿಷ್ಟ ಸೇರ್ಪಡೆ) ಒಬ್ಬ ಕ್ರಾಂತಿಕಾರಿ ಬೇಸಾಯಗಾರ, ಭೂಮಿಯ ಒಡೆಯ ಎನ್ನುವುದಕ್ಕಿಂತ ಭೂಮಿಯ ಮಗ(ಭೂಮಿಪುತ್ರ). ಅಂದಂದೇ ಬಿತ್ತಿ ಅಂದಂದೇ ಕೊಯಿಲು ಮಾಡುವವ. ದಿನಬಿಟ್ಟು ದಿನ ಪುದ್ವಾರ್(ಹೊಸಕ್ಕಿ ಊಟ) ಮಾಡುವವ. ದಾನ ಧರ್ಮ ಮಾಡಿ ತನ್ನ ಜೊತೆಗಾರರನ್ನು ಜತನದಿಂದ ಕಾಪಾಡುತ್ತಿದ್ದವ, ಜನರ ನೋವು ನಲಿವಿನಲ್ಲಿ ಸದಾ ಭಾಗಿಯಾಗುತ್ತಿದ್ದವ. ಹೀಗಿರುವಾಗಲೇ ಅಲ್ಲಿಗೆ ಬಾಲಮಾಣಿಗಳ ಪ್ರವೇಶವಾದುದು. ‘ಮಿತ್ತ ಮಿರಿಲೋಕದವರಿಗೆ ಮಾನಮತ್ಸರ ಹುಟ್ಟಿತು’ ಎಂದು ಹೇಳುತ್ತದೆ ಪಾಡ್ದನ. ಇದು ಹೆಚ್ಚು ಕಡಿಮೆ 12-14ನೇ ಶತಮಾನದ ಕಾಲಗಟ್ಟವಾಗಿರಬೇಕು. ಅಂದರೆ ಪ್ರಾಯಶಃ ತುಳುನಾಡಿಗೆ ವೈದಿಕರ ಮೂರನೇ ವಲಸೆಯ ಕಾಲ. ತುಳು ಸಂಸ್ಕøತಿಯ ಪ್ರತಿನಿಧಿಯಾದ ಬಲೀಂದ್ರನನ್ನು ಉಪಾಯದಿಂದ ಬಲಿ ತೆಗೆದುಕೊಂಡು ಅಲ್ಲಿ ತಮ್ಮ ಸಂಸ್ಕøತಿಯನ್ನು ಗಟ್ಟಿಗೊಳಿಸಿದ ಕಾಲವೂ ಹೌದೆನ್ನಬಹುದು. ನಿಧಾನಕ್ಕೆ ಬೇಸಾಯ ಸಂಸ್ಕøತಿ, ವಾಣಿಜ್ಯ ಸಂಸ್ಕøತಿಯ ಕಡೆಗೆ ವಾಲತೊಡಗಿದ ಕಾಲವೆಂದೂ ತೀರ್ಮಾನಿಸಬಹುದು. ಅಲ್ಲದೇ ಈ ಬಲಿ(ಆಹುತಿ), ತುಳುನಾಡಿನ ಎರಡು ಮತಾಚರಣೆಗಳ (ಶೈವ-ವೈಷ್ಣವ) ಸಂಘರ್ಷ ಕಾಲವೆಂದು ಪಾಡ್ದನ ತಿಳಿಸುತ್ತದೆ. ಇದರೊಂದಿಗೆ ಇದು ತುಳುನಾಡಿನ ಜನಪದ ಮತ್ತು ಶಿಷ್ಟಪದಗಳ ತಾಕಲಾಟದ ಕಾಲವೂ ಆಗಿದೆ. ಈ ತಾಕಲಾಟದ ಕಾಲದಲ್ಲೇ ನಮ್ಮಲ್ಲೇ ಅನೇಕ ಭೂತ-ದೈವಗಳು, ಆಚರಣೆಗಳು, ಜನಪದ ಸಾಹಿತ್ಯಗಳು ಹುಟ್ಟಿಕೊಂಡಿರುವುದು ಎಂದು ನಂಬಲಾಗಿದೆ. ಅದರಲ್ಲಿ ಒಂದು ಈ ಬಲಿ(ಬಲೀಂದ್ರ) ಮತ್ತು ಬಲಿಯ ಆಚರಣೆ.

ಬಲಿಯ ಆಚರಣೆಯ ಹಿಂದೆ, ಒಂದು ಘಟನೆಯ ಸಾಂಕೇತಿಕ ಜನಪದ ಆವರ್ತನ ಇರುವುದನ್ನು ಸಮರ್ಥಿಸಬಹುದೋ ಏನೋ? ತುಳು ಜನಪದರು ಜಾರಿಗೆ ತಂದ ಪರ್ಬ ಹಾಗೂ ದೇಶಾದ್ಯಂತ ಆಚರಿಸುವ ದೀಪಾವಳಿ ಇವೆರಡು ಒಂದೇ ಅಲ್ಲದಿರುವುದು ಈ ಅಭಿಪ್ರಾಯವನ್ನು ಸಮರ್ಥಿಸುತ್ತದೆ. ಇವೆರಡರ ಮಧ್ಯೆ ಜನಪದ ನಂಬಿಕೆ ಮತ್ತು ಕ್ರಿಯಾಚರಣೆಯ ಸ್ವರೂಪದಲ್ಲಿ ಬಹಳಷ್ಟು ವ್ಯತ್ಯಾಸವಿದೆ. ತುಳು ಪಾಡ್ದನ ಬಲೀಂದ್ರನ ಜೀವನವನ್ನು ಬಿಂಬಿಸಿದರೆ, ಪರ್ಬದ ಆಚರಣೆ ಆತನ ಮರಣದ ನಂತರವನ್ನು ನೆನಪಿಸುತ್ತದೆ ಎಂದು ಹೇಳಬಹುದೋ ಏನೋ? ಈ ಆಚರಣೆಯೇ ಪರ್ಬ ಮತ್ತು ದೀಪಾವಳಿಗಿರುವ ವ್ಯತ್ಯಾಸ. ದೀಪಾವಳಿಯ ಸುತ್ತ ನರಕ ಚತುರ್ಥಿ, ಅಮವಾಸ್ಯೆ ಮತ್ತು ಬಲಿಪಾಡ್ಯ ಹೀಗೆ ಒಂದಕ್ಕೊಂದು ಸಂಬಂಧವಿಲ್ಲದ ಸಂಗತಿಗಳು ಆಚರಣೆಗೊಳ್ಳುತ್ತಿದ್ದರೆ, ಪರ್ಬದ ಸುತ್ತ ಬಲೀಂದ್ರನನ್ನು ಬಲಿ ತೆಗೆದುಕೊಂಡ ಕರಾಳ ದಿನಗಳನ್ನು ನೆನಪಿಸುವಂತಹ ಆಚರಣೆಗಳನ್ನು ರೂಪಿಸಲಾಗಿದೆ. ಇಲ್ಲಿರುವುದು ಮೀಪಿ ಪರ್ಬ, ಅಮಾಸೆ, ಕೊಡಿಪರ್ಬ ಇತ್ಯಾದಿ. ಈ ಆಚರಣೆಯ ತಾತ್ವಿಕತೆಗೂ ತುಳುವರ ಸಾವಿನ ಆಚರಣೆಗೂ ಸಂಬಂಧವಿರುವಂತೆ ಕಾಣುತ್ತದೆ. ಮೀಪಿ ಪರ್ಬ ಸ್ನಾನ ಮಾಡುವ ಅಂದರೆ ತನ್ನ ಹತ್ತಿರದ ಬಂಧು ತೀರಿಕೊಂಡಾಗ ಸ್ನಾನ ಮಾಡಿ ಸೂತಕ ಕಳೆಯುವ ದಿನ, ಎರಡನೆಯದು ಅಮವಾಸ್ಯೆ ತೀರಿಗೊಂಡ ವ್ಯಕ್ತಿಗೆ ಉತ್ತರಕ್ರಿಯೆ ಅಂದರೆ ಬೊಜ್ಜ ನಡೆಸುವ ದಿನ. ಇಂದಿಗೂ ತುಳುವರಿಗೆ ಅಮಾವಾಸ್ಯೆ ದಿನ ಬೊಜ್ಜ ಮಾಡುವುದೆಂದರೆ ನೇರ ಸದ್ಗತಿ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಮೂರನೇಯದು ಕೊಡಿ ಪರ್ಬ ಅಂದರೆ ಒಳಗೆ ಕರೆಯುವ ದಿನ. ಸಾಮಾನ್ಯವಾಗಿ ತುಳುವರಲ್ಲಿ ಸತ್ತ ಹದಿನಾರನೇ ದಿನ ಆ ವಕ್ತಿಯನ್ನು ಹದಿನಾರಕ್ಕೆ ಸೇರಿಸುವುದು ಪದ್ಧತಿ. ಸತ್ತ ವ್ಯಕ್ತಿಯ ಹೆಸರು ಕೂಗಿ ಹದಿನಾರರೊಂದಿಗೆ ಬಂದು ಸೇರು ಎಂದು ಕರೆಯುವುದು ಸಾರ್ವತ್ರಿಕ ಆಚರಣೆ. ಆದ್ದರಿಂದ ತುಳುನಾಡ ಬಲೀಂದ್ರನಿಗೆ ಆತನ ಬಂಧುಗಳಾದ ತುಳುವರು ಮೊದಲು ಸೂತಕ ಕಳೆಯುತ್ತಾರೆ, ಉತ್ತರಕ್ರಿಯೆ ನಡೆಸುತ್ತಾರೆ, ಕೂಗಿ ಕರೆದು ಒಳ ಸೇರಿಸುತ್ತಾರೆ. ಹೀಗೆ ಕರೆಯುವಾಗ ಶೈವ ಸಂಪ್ರದಾಯ ‘ಹರೋಹರ’ ಎಂದು ಸಂಬೋಧಿಸಿದರೆ ವೈಷ್ಣವ ಸಂಪ್ರದಾಯ ‘ಹರೋಹರಿ’ ಎಂದು ಸಂಬೋಧಿಸುತ್ತದೆ. ಇದು ಬಲೀಂದ್ರ ಮತ್ತು ಬಾಲಮಾಣಿಗಳ ಶೈವ-ವೈಷ್ಣವ ಸಂಘರ್ಷವನ್ನು ಸ್ಪಷ್ಟಪಡಿಸುತ್ತದೆ. ಆದರೆ ಈ ಕ್ರಿಯೆ ವಾರ್ಷಿಕವಾದುದು ಮತ್ತು ಬಲೀಂದ್ರನ ಹತ್ತಿರದ ಬಂಧುಗಳಾದ ತುಳುವರು ನಡೆಸುವಂತದ್ದು. ಆದ್ದರಿಂದ ಇಲ್ಲಿ ಮತಾಚರಣೆಯ ಭಿನ್ನತೆ ನಗಣ್ಯವಾದುದು. ಹೀಗೆ ಪುರಾಣದ ದೀಪಾವಳಿಗೂ ತುಳು ಜನಪದರ ಪರ್ಬ ಆಚರಣೆಗೂ ವ್ಯತ್ಯಾಸವಿದೆ. ಒಂದು ಕಲ್ಪನೆಯಾದರೆ, ಇನ್ನೊಂದು ವಾಸ್ತವದ ಪುನರ್‍ಸೃಷ್ಟಿ. ಒಂದು ಐತಿಹ್ಯವಾದರೆ ಇನ್ನೊಂದು ಇತಿಹಾಸ. ಒಂದು ಮೇಲ್ಪರಿಕಲ್ಪನೆಯಾದರೆ ಇನ್ನೊಂದು ತಳ ಮಟ್ಟದ್ದು.

ಪಾಡ್ದನ ಪಾಠಗಳ ಪ್ರಕಾರ, ಬಾಲಮಾಣಿಗಳು ಘಟ್ಟದ ಮೇಲ್ಭಾಗದಿಂದ ಬಂದವರು. ‘ಮಿತ್ತ ಮಿರಿಲೋಕದಿಂದ ನಾರಾಯಣ ದೇವರು ಕಳುಹಿಸಿಕೊಟ್ಟರು, ಇಬ್ಬರು ಬಾಲಮಾಣಿಗಳು’ ಎಂದು ಹೇಳುತ್ತದೆ ಪಾಡ್ದನ. ಹೀಗೆ ಬಂದವರು, ಕೇಳುವುದು ಭೂಮಿಯ ದಾನವನ್ನು. ತುಳು ಇತಿಹಾಸದ ಪ್ರಕಾರ 12-14ನೇ ಶತಮಾನದಲ್ಲಿ ತುಳುನಾಡಿಗೆ ಘಟ್ಟ ಪ್ರದೇಶದಿಂದ ಬಂದ ಅನೇಕ ವೈದಿಕರಿಗೆ ಸ್ಥಳೀಯ ಅರಸರು ಭೂದಾನ ಮಾಡಿದ ದಾಖಲೆ ಇದೆ. ಹೀಗೆ ಬಲೀಂದ್ರ ಅರಸು ದಾನ ಕೊಡುವಾಗ ತಡೆದವ ಆತನ ಅಣ್ಣ ಸುಕ್ರಾಯ ದೇವೆರ್. (ಶುಕ್ರಾಚಾರ್ಯ ಅಸುರ ಗುರು? ಮುಂದೆ ಬಲಿಯನ್ನೂ ಅಸುರ ಎಂದೇ ಕರೆಯಲಾಗಿದೆ.) ಬಂದವರು ಕೇಳುವುದು ಕೇವಲ ಮೂರಡಿ ಜಾಗ. ಈ ಮೂರಡಿ ಜಾಗದಲ್ಲಿ ಏನು ಮಾಡಲು ಸಾಧ್ಯ ಎನ್ನುವ ಬಲಿಯ ಪ್ರಾಮಾಣಿಕ ಪ್ರಶ್ನೆಗೆ ಬಾಲಮಾಣಿಗಳು ಕೊಡುವ ಉತ್ತರ ಕುತೂಹಲವಾದುದು. ಅಂದರೆ ತುಳುನಾಡಿನಲ್ಲಿ ವಾಸ್ತವಿಕವಾಗಿ ಬೆಳೆಯುತ್ತಿದ್ದ ಭತ್ತವನ್ನು ಬೆಳೆಯುತ್ತೇವೆಲೆಂದೀ ಮಾಣಿಗಳು ಹೇಳುವುದಿಲ್ಲ. ಬದಲಾಗಿ “ಬಾಳೆ, ಗೆಣಸು, ಕೇನೆ’, ಇತ್ಯಾದಿ ಬೇಸಾಯ ಸಂಸ್ಕøತಿಯಲ್ಲಿ ಮಹತ್ವ ಪಡೆಯದ ವಸ್ತುಗಳನ್ನು ಬೆಳೆಯುತ್ತೇವೆ ಎಂದು ಹೇಳುತ್ತಾರೆ. ಇದು ಕ್ರಮೇಣ ವಾಣಿಜ್ಯ ಸಂಸ್ಕøತಿಗೆ ಪ್ರೇರಣೆಯಾಯಿತು. ಭತ್ತ ಬೇಸಾಯದ ಆ ಮೂಲಕ ಬಲೀಂದ್ರ ಸಂಸ್ಕøತಿಯ ನಾಶ ಮತ್ತು ವಾಣಿಜ್ಯ ಬೇಸಾಯ ಆ ಮೂಲಕ ಶಿಷ್ಟ ಸಂಸ್ಕøತಿಯ ಪೋಷಣೆಯನ್ನು ಈ ಘಟನೆ ಸೂಚಿಸುತ್ತದೆ. ಇದೇ ಕಾಲಾನಂತರ ತುಳುನಾಡಿನಲ್ಲಿ ಕಾಣಲು ಸಾಧ್ಯವಾಗಿರುವುದು. ಆದ್ದರಿಂದ ಬಲೀಂದ್ರನ ದುರಂತ ತುಳುನಾಡಿನ ಸಾಂಸ್ಕøತಿಕ ಮತ್ತು ಆರ್ಥಿಕ ಸ್ಥಿತ್ಯಂತರದ ಕಾಲಘಟ್ಟವೂ ಹೌದು.

ಇದರ ಮಧ್ಯೆ ತುಳು ಜನಪದರಲ್ಲಿ ಒಂದಕ್ಕೊಂದು ಸಂಬಂಧ ಪಡದ ಬಲೀಂದ್ರ ಹೇಳಿಕೆಯೊಂದು ಹುಟ್ಟಿಕೊಂಡಿತು, ಈ ಹೇಳಿಕೆಯಲ್ಲಿ ಬಲಿ ಯಾವಾಗ ತುಳುನಾಡು ಆಳಲು ಬರಬೇಕು ಎನ್ನುವ ಅಭಿಪ್ರಾಯವಿದೆ. ‘ಬಳ್ಳಮಲೆ ಸುಳ್ಳಮಲೆ ಒಂದಾಗುವಾಗ, ಬೆಕ್ಕಿಗೆ ಕೋಡು ಮೂಡುವಾಗ, ತುಂಬೆ ಗಿಡಕ್ಕೆ ಏಣಿ ಇಟ್ಟ ಹತ್ತಬೇಕಾಗುವಾಗ.....’ ಹೀಗೆ ಅಸಾಧ್ಯವಾದುದು ಸಾಧ್ಯವಾಗುವಾಗ ಬಲಿ ಮತ್ತೆ ತುಳುನಾಡಿಗೆ ಬರಬೇಕೆನ್ನುತ್ತಾರೆ, ಆದರೆ ಇದು ನಿಜವಾಗಿಯೂ ತುಳು ಜನಪದರ ಸೃಷ್ಟಿ ಎಂದೇ ಹೇಳಲು ಸಾಧ್ಯವಿಲ್ಲ. ದಕ್ಷಿಣ ಕರಾವಳಿಯಲ್ಲಿ ಹೆಚ್ಚು ಕಂಡು ಬರುವ ಈ ಹೇಳಿಕೆ ಬಲೀಂದ್ರ ಅಥವಾ ಅವನ ಪ್ರತಿನಿಧಿಗಳು ತುಳುನಾಡಲ್ಲಿ ಮತ್ತೆ ಕಾಣಸಿಗದಂತೆ ಮಾಡುವ ತಡೆಯಾಗಿದೆ. ಆದರೆ ದುರಂತ ನಾಯಕನನ್ನು ವೈಭವೀಕರಿಸುವುದು ಜನಪದರ ವಿಶಿಷ್ಟ ತಂತ್ರವಾದರೂ ಈ ಹೇಳಿಕೆ ಮಾತ್ರ ಬಾಲಮಾಣಿ ಪರಂಪರೆಯ ಮುಂದುವರಿದ ರೂಪದಂತೆ ಕಾಣುತ್ತದೆ. ಯಾಕೆಂದರೆ ತುಳುನಾಡಿನ ಯಾವುದೇ ಭೂತ ಚರಿತ್ರೆಗಳಲ್ಲೂ ಕರ್ನಾಟಕದ ಇತರ ಸಾಂಸ್ಕøತಿಕ ನಾಯಕರ (ಮಂಟೇಸ್ವಾಮಿ, ಮಾದೇಶ್ವರ, ಮೈಲಾರ, ಜುಂಜಪ್ಪ ಇತ್ಯಾದಿ)ಕಥಾನಕದಲ್ಲೂ ಇಂತಹಾ ಅಸಾಧ್ಯ ಹೇಳಿಕೆಗಳಿಲ್ಲ. ಆದರೆ ಬಲೀಂದ್ರನ ಆರಾಧನಾ ಪದ್ಧತಿಯೂ ವಿಶಿಷ್ಟವಾದುದು ಮತ್ತು ತೀರಾ ಅಮೂರ್ತವಾದುದು, ಆತ ಭೂತ ಅಲ್ಲ, ಆತನಿಗೆ ಕೋಲ, ನೇಮ ಇಲ್ಲ ಅಥವಾ ಮೂರ್ತಿ ಮುಖವಾಡ, ಗುಡಿ ಗೋಪುರಗಳಿಲ್ಲ. ಆದರೆ ವಾರ್ಷಿಕವಾಗಿ ಒಂದಷ್ಟು ದಿನ ಸಂಭ್ರಮಾಚರಣೆ ಇದೆ. ಇದಕ್ಕೆ ಆತನ ದುರಂತ ಹಿನ್ನಲೆ ಮತ್ತು ಮೂರ್ತ ರೂಪಕ್ಕಿಳಿಸಲು ಸಾಧ್ಯವಾದ ಭಯವೇ ಕಾರಣ ಎನ್ನಬಹುದು. ಒಟ್ಟಿನಲ್ಲಿ ಬಲೀಂದ್ರ ತುಳುನಾಡಿನ ಸಂಮೃದ್ಧಿಯ ಸಂಕೇತ. ಆತನಿಗೆ ‘ಬಲಿ’ ಎನ್ನುವ ಹೆಸರು ಕೊಟ್ಟದ್ದು ಮತ್ತು ಅದನ್ನು ಉಳಿಸಿದ್ದೇ ಜನಪದರು. ಆತನ ಬಗ್ಗೆ ಕಟ್ಟಿದ ಪಾಡ್ದನ ಮತ್ತು ನಡೆಸುತ್ತಾ ಬಂದ ಆಚರಣೆ ಪ್ರತಿಭಟನಾ ರೂಪದ್ದು, ಆತನ ಕಾಲ ಹೆಚ್ಚು ಕಡಿಮೆ ಹನ್ನೆರಡನೇ ಶತಮಾನ, ಆತನನ್ನು ಕೊಂದು ಸಮುದ್ರಕ್ಕೆ ಎಸೆದಿರುವುದರಿಂದಲೋ ಏನೋ ಒಟ್ಟೆ ದೋಣಿ ಮತ್ತು ಏಳು ಸಮುದ್ರದ ಕಲ್ಪನೆಯನ್ನು ಜನಪದರು ಪೋಣಿಸಿರುವುದು? (ಫಿನ್‍ಲ್ಯಾಂಡ್ ಕಲೇವಾಲ ಕಾವ್ಯದ ನಾಯಕ ವೆಯಿನ್ನಾಮೋಯಿನ್ನಾನಿಗೂ ಹೆಚ್ಚು ಕಡಿಮೆ ಇದೇ ಕಾಲಘಟ್ಟದಲ್ಲಿ ಇದೇ ಒಟ್ಟೆ ದೋಣಿಯಲ್ಲಿ ಸಾಗುವ ಸ್ಥಿತಿ ಬರುತ್ತದೆ) ಒಟ್ಟೆ ದೋಣಿ ಮತ್ತು ಮೋಟು ಜಲ್ಲ ಸೋಲಿನ ಸಂಕೇತ. ತುಳುನಾಡ ಬಲಿ ಎಂದರೆ ಇಲ್ಲಿಯ ಸಂಸ್ಕøತಿಯ ಬಲಿ, ಭತ್ತ ಬೇಸಾಯವೆನ್ನುವ ಆರ್ಥಿಕತೆಯ ಬಲಿ, ಶತಮಾನಗಳಿಂದ ಪಾಲಿಸಿಕೊಂಡು ಬಂದ ಧಾರ್ಮಿಕ ವ್ಯವಸ್ಥೆಯೊಂದರ ಬಲಿ, ಜನಸ್ನೇಹಿ ಪ್ರಭತ್ವದ ಬಲಿ ಹೀಗೆ ಬೇರೆಬೇರೆ ಆಯಾಮಗಳ ಬಲಿ. ಆದರೆ ಬಲಿ ಮತ್ತೆ ಬರುವುದೆಂದರೆ ಜೀವಂತಿಕೆಯ ಆಗಮನ, ಗತವೈಭವದ ಮರು ನಿರ್ಮಾಣ, ಪಾರಂಪರಿಕ ಮೌಲ್ಯಗಳ ಪುನರಭಿನಯ. ಆದ್ದರಿಂದ ಸಂಕೇತಗಳ ಪ್ರತಿನಿಧಿಯಾಗಿ ಈ ಬಲಿ ಮತ್ತೆ ಈ ವರ್ಷ ಬರುತ್ತಿದ್ದಾನೆ,

ಡಾ.ಸುಂದರ ಕೇನಾಜೆ

Comments