ತುಳು ಬೇಸಾಯ ಕ್ರಮ ಮತ್ತು ಸ್ಥಿತ್ಯಂತರ

ತುಳು ಬೇಸಾಯ ಕ್ರಮ ಮತ್ತು ಸ್ಥಿತ್ಯಂತರ

ತುಳುವಿನ ‘ಬೆನ್ನಿ’ ಎಂಬ ಪದಕ್ಕೆ ಕನ್ನಡದಲ್ಲಿ ‘ಕೆಲಸ ಮಾಡು’ ಎನ್ನುವ ಅರ್ಥವಿದೆ. ಆದರೆ ಇದೇ ಪದ ತುಳುವಿನಲ್ಲಿ ಭತ್ತದ ಬೇಸಾಯಕ್ಕಾಗಿ ಮಾತ್ರ ಬಳಕೆಯಾಗುತ್ತಿರುವುದು ರೂಢಿ. ಅಂದರೆ ‘ಬೆನ್ನಿ’ ಎನ್ನುವ ಈ ಪದವನ್ನು ಇನ್ನಿತರ ಯಾವುದೇ ಕೃಷಿ ಪ್ರಕ್ರಿಯೆಗೆ ಬಳಸದೇ ಇದ್ದುದು ಇಲ್ಲಿಯ ವಿಶೇಷ. ಇದರರ್ಥ ತುಳುನಾಡಿನಲ್ಲಿ ಕೆಲಸ ಮಾಡುವುದೆಂದರೆ, ಅದು ಭತ್ತ ಬೆಳೆಯುವ ಕೆಲಸ ಮಾತ್ರವೆಂದು ಪರಿಗಣಿಸಲ್ಪಟ್ಟಿರಬೇಕು. ಭತ್ತದ ಜೊತೆಗೆ ಬೆಳೆಯುತ್ತಿದ್ದ ಇತರ ಆಹಾರ ಬೆಳೆಗಳಾದ ರಾಗಿ, ಜೋಳ, ಕಬ್ಬು, ತರಕಾರಿ ಇತ್ಯಾದಿ ಬೆಳೆಗಳಿಗೆ ‘ಬೆನ್ನಿ’ ಎನ್ನುವ ಪದ ಪ್ರಯೋಗ ಕಂಡುಬಂದಿಲ್ಲ. ಆದ್ದರಿಂದಲೇ ಒಟ್ಟು ಕೃಷಿ ಪ್ರಕ್ರಿಯೆಯಲ್ಲಿ ಈ ಪದದ ಬಳಕೆ ಇಂದು ಕಡಿಮೆಯಾಗುತ್ತಿರುವುದು. ಅಂದರೆ ಭತ್ತದ ಬೇಸಾಯ ಕಡಿಮೆ ಆದ ನಂತರ, ‘ಬೆನ್ನಿ’ ಪದದ ಬಳಕೆಯೂ ಕಡಿಮೆಯಾಗಿದೆ. ಸದಾ ಬಳಕೆಯಲ್ಲಿದ್ದ ಪದವೇ ಕಣ್ಮರೆಯಾಗುವಷ್ಟರ ಮಟ್ಟಿಗೆ ಇಂದು ತುಳುನಾಡಿನಲ್ಲಿ ಭತ್ತ ಬೇಸಾಯ ಕಡಿಮೆಯಾಗಿದೆ. ಆದರೆ ‘ಬೇಸಾಯ’ ಎನ್ನುವ ಇನ್ನೊಂದು ಪದವನ್ನು ಭತ್ತದ ಹೊರತಾಗಿ ಇತರ ಕೃಷಿಗೂ ಬಳಸುವುದನ್ನು ಕಾಣುತ್ತೇವೆ. ಅದೇ ರೀತಿ ತುಳುವಿನಲ್ಲಿ ಭತ್ತ ಬೇಸಾಯಕ್ಕೆ ‘ಬುಳೆ’ ಅಂದರೆ ‘ಬೆಳೆ’ ಎನ್ನುವ ಪದವೊಂದರ ಬಳಕೆಯೂ ಇತ್ತು. ಈ ಬುಳೆ ಎನ್ನುವ ಪದದ ಜೊತೆಗೆ ‘ಭತ’್ತ ಎಂದು ಪ್ರತ್ಯೇಕವಾಗಿ ಸೇರಿಸುವ ಪದ್ದತಿಯಂತೂ ಇರಲಿಲ್ಲ. ಯಾಕೆಂದರೆ ತುಳು ಜನಪದರು ಬಳಸುವ ‘ಬುಳೆ’ ಅಂದರೆ ಅದು ಕೇವಲ ‘ಭತ್ತದ ಬೆಳೆ’ ಮಾತ್ರ ಎಂದರ್ಥ. ಹೀಗೆ ವೃತ್ತಿ ಮತ್ತು ಅದರ ಪರಿಪೂರ್ಣತೆಯನ್ನು ಸೂಚಿಸುವ ಪದವಾಗಿ ಇಲ್ಲಿಯ ಬೇಸಾಯ ಪದ್ದತಿ ಇತ್ತು. ಆದ್ದರಿಂದ ವಾರ್ಷಿಕ ಆವರ್ತನದ ಪೂರ್ಣ ಕಾಲ ಈ ವೃತ್ತಿ ಬದುಕಿನಲ್ಲಿ ಕಳೆಯುತ್ತಿದ್ದ ತುಳುವರು, ಬೇಸಾಯದ ಬಿಡುವಿನ ಕಾಲದಲ್ಲಿ ಮಾತ್ರ ಅದರ ಹೊರತಾದ ಯೋಚನೆಗಳಿಗೆ ಅವಕಾಶ ನೀಡುತ್ತಿದ್ದರು.

ತುಳುನಾಡಿನ ಭತ್ತದ ಬೇಸಾಯವು ಕೆಲವು ವರ್ಷಗಳ ಹಿಂದೆ ಯಾವ ಸ್ವರೂಪದಲ್ಲಿತ್ತು? ಇಂದಿನ ಬೆಳೆಗಳ ಸ್ವರೂಪ ಮತ್ತು ಇದರಿಂದ ಮುಂದೆ ಆಗುವ ಪರಿಣಾಮಗಳನ್ನು ಇಲ್ಲಿ ಒಂದಷ್ಟು ಚರ್ಚಿಸಲಾಗಿದೆ. ಇದರೊಂದಿಗೆ ಈ ಬದಲಾವಣೆಯು ತುಳು ಜೀವನಕ್ರಮದ ಮೇಲೆ ಬೀರಬಹುದಾದ ಪರಿಣಾಮವನ್ನೂ ವಿಶ್ಲೇಷಿಸಲಾಗಿದೆ.

ಜಾಗತಿಕವಾಗಿ ಭತ್ತ ಬೇಸಾಯಕ್ಕೆ ಸುಮಾರು ಐದು ಸಾವಿರ ವರ್ಷಗಳ ಹಿಂದಿನ ಇತಿಹಾಸವಿದೆ. ಚೀನಾ ದೇಶದ ಹಳೆಯ ಐತಿಹಾಸಿಕ ದಾಖಲೆಗಳಲ್ಲಿ ಈ ಪ್ರಸ್ತಾಪವಿದೆ. ಭಾರತದಲ್ಲೂ ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಭತ್ತ ಬೆಳೆಯುತ್ತಿದ್ದರು ಎನ್ನುವ ದಾಖಲೆಗಳು ದೊರಕುತ್ತವೆ. ಇದೇ ಅವಧಿಯಲ್ಲಿ ತುಳುನಾಡಿನ ಜನರೂ ಭತ್ತ ಬೆಳೆಯಲು ಆರಂಭಿಸಿರಬೇಕೆಂದು ನಂಬಲಾಗಿದೆ. ಲೋಹಯುಗದ ಕಾಲದಲ್ಲಿ, ಇಲ್ಲಿಯ ಕಾಡನ್ನು ಕಡಿದು ಭತ್ತ ಬೆಳೆಯುವ ಕರಾವಳಿಯ ಜನ ಮುಂದಾಗಿರಬೇಕು. ಕರಾವಳಿಯ ಭಾಗಕ್ಕೆ ಹೊರಗಿನಿಂದ ಬಂದ ಮುಂದುವರಿದ ಜನಾಂಗ, ಕೊಡಲಿಯಂತಹಾ ಕಬ್ಬಿಣದ ವಸ್ತುಗಳನ್ನು ಬಳಸಿ ಇಲ್ಲಿಯ ಕಾಡನ್ನು ಸವರಿರಬೇಕು. ನಂತರ ಇಲ್ಲಿ ಬಿತ್ತನೇ ಕಾರ್ಯ ಮಾಡಿರಬಹುದು. ಇದನ್ನೇ ಮುಂದೆ ಪರಶುರಾಮನ ಸೃಷ್ಟಿಯೆಂದು ಹೇಳಿರುವ ಸಾಧ್ಯತೆಯೂ ಇದೆ. ಇದಕ್ಕೆ ಪೂರಕವಾಗಿ ಕರಾವಳಿ ಭಾಗದಲ್ಲಿ ದಟ್ಟ ಕಾಡು ಇದ್ದುದು, ಅದನ್ನು ಕಡಿಯಲು ಕೊಡಲಿಯಂತಹಾ ಕಬ್ಬಿಣದ ಸಾಮಗ್ರಿಯ ಬಳಕೆಯಾದುದು ಹಾಗೂ ವ್ಯಾಪಕವಾಗಿ ಭತ್ತದ ಗದ್ದೆ ನಿರ್ಮಾಣವಾಗಿದ್ದದ್ದು ಕಾಣುತ್ತೇವೆ. ಇದಕ್ಕೆ ನಮ್ಮ ಚಾರಿತ್ರಿಕ ದಾಖಲೆಗಳಲ್ಲದೇ ಅನೇಕ ಪಾಡ್ದನ, ಕಬಿತ, ಕತೆ ಹಾಗೂ ಇತರ ಜಾನಪದ ಸಾಹಿತ್ಯಗಳಲ್ಲೂ ದಾಖಲೆ ಇದೆ. ಈ ರೀತಿ ನಿರ್ಮಾಣವಾಗಿದ್ದ ಭತ್ತದ ಗದ್ದೆಗಳು ಕಳೆದ ಮೂವತ್ತು ವರ್ಷಗಳವರೆಗೂ ಭತ್ತ ಬೇಸಾಯಕ್ಕಾಗಿಯೇ ಬಳಕೆಯಾಗಿ ಇದ್ದುದನ್ನೂ ಕಾಣುತ್ತೇವೆ. ಒಂದು ಅಂಕಿ ಅಂಶದ ಪ್ರಕಾರ, 1988ರಲ್ಲಿ ಈಗಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 71 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿತ್ತು.

ಆದರೆ ಕಳೆದ ಮೂವತ್ತು ವರ್ಷಗಳ ನಂತರದಿಂದ ತುಳುನಾಡಿನಲ್ಲಿ ಭತ್ತ ಬೆಳೆಯುವ ಪ್ರದೇಶ ತುಂಬಾ ಇಳಿಮುಖವಾಗಿದೆ. ಇಂದಂತೂ ಇದು ಇನ್ನೂ ಕಡಿಮೆಯಾಗಿದೆ. 2018ರ ಅಂಕಿ ಅಂಶವೊಂದರ ಪ್ರಕಾರ ಇದೇ ಜಿಲ್ಲೆಯಲ್ಲಿ ಒಟ್ಟು ಸುಮಾರು 26 ಸಾವಿರ ಹೆಕ್ಟೇರ್‍ಗಳಲ್ಲಿ ಮಾತ್ರ ಭತ್ತ ಬೆಳೆಯಲಾಗುತ್ತದೆ. ಇದು ಇನ್ನೂ ಇಳಿಮುಖವಾದರೂ ಆಶ್ಚರ್ಯಪಡಬೇಕಾಗಿಲ್ಲ.

ಒಂದು ಕಾಲದಲ್ಲಿ ಅಹಾರದಲ್ಲಿ ಸ್ವಾವಲಂಬಿಗಳಾಗಿದ್ದ ಕರಾವಳಿ ಜನ, ಈ ರೀತಿ ಭತ್ತ ಬೇಸಾಯವನ್ನು ತ್ಯಜಿಸಿರುವುದರ ಪರಿಣಾಮ ಪರಾವಲಂಬಿಗಳಾಗಬೇಕಾದ ಅನಿವಾರ್ಯ ಉಂಟಾಗಿದೆ. ಇಂದು ಈ ಪರಾವಲಂಬನೆ ಸಹಜವೆಂದೂ ಕರೆಯಬಹುದು, ಆದರೆ ಅನೇಕ ಶತಮಾನಗಳಿಂದ ಬೇಸಾಯದ ಜೊತೆ ಜೊತೆಗೆ ಹರಿದು ಬಂದ ತುಳು ಸಂಸ್ಕøತಿಯ ಬದಲಾವಣೆಗೆ ಪರ್ಯಾಯವೇನು ಎನ್ನುವುದೇ ಪ್ರಶ್ನೆ? ತುಳು ಆಚರಣೆ, ಆರಾಧನೆ, ಜನಪದ ಸಾಹಿತ್ಯ, ಕುಣಿತ ಇವೆಲ್ಲವುಗಳಿಗೂ ಇಲ್ಲಿಯ ಭತ್ತ ಬೇಸಾಯವೇ ಮೂಲ. ಇವೆಲ್ಲವೂ ಕಳೆದ ಇಪ್ಪತ್ತೈದು ವರ್ಷಗಳಿಂದ ತೀವೃ ಸ್ವರೂಪದಲ್ಲಿ ಬದಲಾವಣೆಗೊಳ್ಳುತ್ತಿದೆ. ಆದ್ದರಿಂದ ಭತ್ತ ಬೇಸಾಯದ ಹಿನ್ನಡೆ ತುಳು ಸಾಂಸ್ಕøತಿಕ ವ್ಯವಸ್ಥೆಯ ಹಿನ್ನಡೆಗೂ ಕಾರಣವಾಗುತ್ತಿದೆ.

ಭತ್ತವನ್ನು ಹೊರತುಪಡಿಸಿ ತುಳುನಾಡಿನ ಕೆಲವು ಭಾಗಗಳಲ್ಲಿ ಇನ್ನು ಕೆಲವು ಬೆಳೆಗಳನ್ನು ಬೆಳೆಯುತ್ತಾ ಬಂದದ್ದು ಕಂಡುಬರುತ್ತದೆ. ವಾಸ್ತವಿಕವಾಗಿ ಭತ್ತದ ಹೊರತಾದ ಇತರ ಬೆಳೆಗಳಿಗೆ ದೀರ್ಘಕಾಲದ ಇತಿಹಾಸವೇನೂ ಇಲ್ಲ. ಸುಮಾರು ನೂರೈವತ್ತು-ಇನ್ನೂರು ವರ್ಷಗಳ ಇತಿಹಾಸವಿರುವ ಅಡಿಕೆ, ಸುಮಾರು ಐನೂರು-ಆರುನೂರು ವರ್ಷಗಳ ಹಿಂದೆ ಕರಾವಳಿ ಪ್ರವೇಶಿಸಿದ ತೆಂಗು, ಸುಮಾರು ಐವತ್ತು ವರ್ಷಗಳ ಹಿಂದಿನ ರಬ್ಬರ್, ನೂರೈವತ್ತು ವರ್ಷಗಳ ಹಿಂದಿನ ಗೊಡಂಬಿ ಇಲ್ಲಿಯ ಇತರ ಪ್ರಮುಖ ಬೆಳೆಗಳಾಗಿವೆ. ಕಾಲದ ದೃಷ್ಟಿಯಿಂದ ಮತ್ತು ವ್ಯಾಪ್ತಿಯ ದೃಷ್ಟಿಯಿಂದ ಅಷ್ಟೊಂದು ಪ್ರಮುಖವಲ್ಲದ ಈ ಬೆಳೆಗಳು, ವಾಣಿಜ್ಯ ಉದ್ದೇಶದಿಂದ ಮಾತ್ರ ಮಹತ್ವ ಪಡೆದಿವೆ. ಮೂವತ್ತು ವರ್ಷಗಳ ಹಿಂದೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೇವಲ 15 ಸಾವಿರ ಹೆಕ್ಟರ್‍ಗಳಲ್ಲಿ ಅಡಿಕೆ, 8 ಸಾವಿರ ಹೆಕ್ಟೇರ್‍ಗಳಲ್ಲಿ ತೆಂಗು ಮತ್ತು ರಬ್ಬರ್ ಹಾಗೂ 23 ಸಾವಿರ ಹೆಕ್ಟೇರ್‍ಗಳಲ್ಲಿ ಗೋಡಂಬಿಯನ್ನು ಬೆಳೆಯುತ್ತಿದ್ದರು. ಆದರೆ ಇಂದು ಈ ವಾಣಿಜ್ಯ ಬೆಳೆಗಳ ಪ್ರಮಾಣ ವೇಗವಾಗಿ ಏರಿರುವುದನ್ನು ಕಾಣುತ್ತೇವೆ. ಅಡಿಕೆ ಬೆಳೆಯುವ ಪ್ರಮಾಣ ಎರಡು ಪಟ್ಟಿಗಿಂತ ಹೆಚ್ಚು ಅಂದರೆ 37 ಸಾವಿರ ಹೆಕ್ಟೇರ್‍ನಷ್ಟಾಗಿದೆ. ಅದೇ ತೆಂಗು 20 ಸಾವಿರ ಹೆಕ್ಟೇರ್‍ಗಿಂತ ಹೆಚ್ಚಾಗಿದ್ದರೆ, ರಬ್ಬರ್ 12 ಸಾವಿರ ಹೆಕ್ಟೇರ್‍ಗೆ ಏರಿದೆ. ಗೇರು ಮಾತ್ರ ಬಾರಿ ವ್ಯತ್ಯಾಸವಿಲ್ಲದಿದ್ದರೂ ಏರಿಕೆಯಂತೂ ಆಗಿದೆ. ಅಂದರೆ ಭತ್ತ ಬೆಳೆಯುತ್ತಿದ್ದ ಪ್ರದೇಶಗಳನ್ನು ಈ ವಾಣಿಜ್ಯ ಬೆಳೆಗಳು ಆಕ್ರಮಿಸಿಕೊಂಡಿವೆ ಎನ್ನುವುದು ಈ ಅಂಕಿ ಅಂಶಗಳಿಂದ ತಿಳಿದುಕೊಳ್ಳಬಹುದು.

ಈ ರೀತಿಯ ಬದಲಾವಣೆ ತುಳುನಾಡಿನ ನೈಸರ್ಗಿಕ ಮತ್ತು ಪ್ರಾಕೃತಿಕ ವ್ಯವಸ್ಥೆಯ ಮೇಲೂ ಗುರುತರವಾದ ಪರಿಣಾಮ ಬೀರಿರುವುದನ್ನು ಗಮನಿಸಬಹುದು. ಅಂದರೆ ಗದ್ದೆಗಾಗಿ ಬಳಸುತ್ತಿದ್ದ ನೈಸರ್ಗಿಕ ನೀರಾವರಿ ವ್ಯವಸ್ಥೆ ಸಂಪೂರ್ಣ ಬದಲಾಗಿದೆ. ಯಾಂತ್ರಿಕೃತ ವ್ಯವಸ್ಥೆ ಬಹಳ ಆಳದಿಂದ ನೀರೆತ್ತುತ್ತಿದೆ. ಆ ಮೂಲಕ ಈ ಬೆಳೆಗಳಿಗೆ ಹೆಚ್ಚಿನ ಪ್ರಮಾಣದ ನೀರನ್ನು ಕೊಡುತ್ತಿದೆ. ಮಳೆಯ ನೀರನ್ನೇ ಆಶ್ರಯಿಸಿ ನಡೆಯುತ್ತಿದ್ದ ನಮ್ಮ ಬೇಸಾಯಕ್ಕೆ ಸರಾಸರಿ ಸುಮಾರು 4 ಸಾವಿರ ಮಿಲಿ ಮೀಟರ್ ನೀರು ಸಿಗುತ್ತಿತ್ತು. ಆದರೆ ಆದೇ ಇಂದು 2800 ಮಿಲಿ ಮೀಟರ್‍ಗೆ ಇಳಿದಿದೆ. ಹಿಂದೆ ಕೆರೆ ಕಟ್ಟೆಗಳ ನೀರಿನ ಬಳಕೆ ಹೆಚ್ಚಾಗಿದ್ದ ಕಾರಣ, ಅಂತರ್ಜಲದ ಮಟ್ಟವೂ ಹೆಚ್ಚಾಗಿತ್ತು. ಆದರೆ ಇಂದು ಕರೆ ಕಟ್ಟೆಯ ನೀರಿನ ಬಳಕೆ ಬಹಳ ಕಡಿಮೆಯಾಗಿದೆ. ಅದರ ಸಾಲಿನಲ್ಲಿ ಕೃಷಿಗಾಗಿ ಬೋರ್‍ವೆಲ್‍ಗಳನ್ನು ಬಳಸುವ ಪರಿಸ್ಥಿತಿ ಹೆಚ್ಚಾಗಿದೆ. ದ.ಕ ಜಿಲ್ಲೆಯಲ್ಲಿ ಲೆಕ್ಕಕ್ಕೆ ಸಿಕ್ಕಿದ 15 ಸಾವಿರಕ್ಕೂ ಹೆಚ್ಚಿನ ಬೋರ್‍ವೆಲ್‍ಗಳು ಇಂದು ನೀರೆತ್ತಿ ಕೃಷಿಗೆ ನೀಡುತ್ತಿವೆ. ಇನ್ನೂ ಸಾವಿರಾರು ಅನಧಿಕೃತ ಬೋರ್‍ವೆಲ್‍ಗಳು ಲೆಕ್ಕಕ್ಕೆ ಸಿಗದೇ ಚಾಲ್ತಿಯಲ್ಲಿವೆ. ಈ ತೋಟಗರಿಕಾ ಬೆಳೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಳಸುವುದರಿಂದ ಕುಡಿಯುವ ನೀರಿಗೂ ಬೋರ್‍ವೆಲ್‍ಗಳನ್ನು ಕೊರೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸೂಕ್ಷ್ಮ ಪ್ರದೇಶವಾದ ತುಳುನಾಡಿನಲ್ಲಿ ಸಮರ್ಪಕವಾದ ನೀರಾವರಿ ಸೂತ್ರಗಳು ಇಲ್ಲದೇ ಇರುವುದರಿಂದ ನಮ್ಮ ನದಿಗಳು ಬಹುಬೇಗ ಬತ್ತಿ ಹೋಗುತ್ತಿವೆ. ಸ್ವಯಂಚಾಲಿತ ಪಂಪ್‍ಸೆಟ್‍ಗಳಿಂದಾಗಿ ಜೀವ ನದಿಗಳು ಬರಡಾಗುತ್ತಿವೆ.

ತೋಟಗಾರಿಕಾ ಬೆಳೆಗಳು ಭತ್ತಕ್ಕಿಂತ ಮೂರು ಪಟ್ಟು ಹೆಚ್ಚು ಲಾಭದಾಯಕ ಎನ್ನುವ ಕಾರಣದಿಂದ ಪ್ರಾಕೃತಿಕ ಸಂಪತ್ತು, ರಾಸಾಯನಿಕ ಮತ್ತು ಯಂತ್ರೋಪಕರಣಗಳ ಬಳಕೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ. ಇದರಿಂದ ಕೃಷಿಕನಿಗೆ ಲಾಭ ಹೆಚ್ಚಾದದ್ದು ಸತ್ಯ. ಆದರೆ ವ್ಯವಸ್ಥೆಗೆ ಆದ ದೋಷ ಮಾತ್ರ ತೀವೃತರವಾದದ್ದು. ವಾಣಿಜ್ಯ ಬೆಳೆಗಳಿಗೆ ವಿಪರೀತ ನೀರು ಬಳಸುವುದರಿಂದ ನಮ್ಮ ನೀರಾವರಿ ಮೂಲಗಳು ಹೇಗೆ ಬಹುಬೇಗ ಬತ್ತಿ ಹೋಗುತ್ತಿವೆಯೋ, ಹಾಗೆ ಹೆಚ್ಚುವರಿ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣು ಬರಡಾಗುತ್ತದೆ. ಹಟ್ಟಿಗೊಬ್ಬರ, ಸೊಪ್ಪುಗೊಬ್ಬರ, ಸುಡುಮಣ್ಣಗಳಿಂದಲೇ ನಡೆಯುತ್ತಿದ್ದ ಭತ್ತದ ಬೇಸಾಯ ರಾಸಾಯನಿಕ ಗೊಬ್ಬರಗಳನ್ನು ಕಂಡದ್ದು ಕಡಿಮೆ. ಮೂವತ್ತು ವರ್ಷಗಳ ಹಿಂದೆ ಇಲ್ಲಿ ರಾಸಾಯನಿಕ ಗೊಬ್ಬರ ಬಳಕೆಯಾದದ್ದು ಕೇವಲ 600 ಟನ್ ಮಾತ್ರ, ಅದೇ ಇಂದು ಸುಮಾರು 18,500 ಟನ್‍ಗಳು, ಅಂದರೆ ಸುಮಾರು ಮೂವತ್ತು ಪಟ್ಟಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಅಧಿಕ ಇಳುವರಿಯ ಆಸೆಯಿಂದ ರಸಗೊಬ್ಬರಗಳ ಬಳಕೆಯನ್ನು ಹೆಚ್ಚು ಹೆಚ್ಚು ಮಾಡುತ್ತಲೇ ಇರುವುದು ವಿಪರ್ಯಾಸ.

ಒಂದೆಡೆಯಿಂದ ಮಣ್ಣು ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದ್ದರೆ, ಮಿತಿಮೀರಿದ ಕ್ರಿಮಿನಾಶಕಗಳ ಬಳಕೆಯಿಂದ ಕೃಷಿಗೆ ಸಹಕರಿಸಬೇಕಾದ ಅನೇಕ ಜೀವಿಗಳು ತಮ್ಮ ಜೀವವನ್ನು ಕಳೆದುಕೊಳ್ಳುತ್ತಿವೆ. ತುಳುನಾಡಿಗೆ ಹೈಬ್ರಿಡ್ ತಳಗಳು ಪ್ರವೇಶಿಸಿದ ನಂತರವಂತೂ ಅವುಗಳ ಪೋಷಣೆಯ ಭಾಗವಾಗಿ ಕ್ರಿಮಿನಾಶಕಗಳ ಬಳಕೆ ಹೆಚ್ಚಾಗತೊಡಗಿತು. ಪರಿಣಾಮ ಲಕ್ಷಾಂತರ ವರ್ಷಗಳಿಂದ ಈ ಭೂಮಿಯನ್ನು ಆಶ್ರಯಿಸಿದ್ದ ಎರೇಹುಳು, ಕಪ್ಪೆ, ದುಂಬಿ ಹಾಗೂ ಇನ್ನಿತರ ಕೀಟಗಳು ನಾಶ ಹೊಂದುತ್ತಿವೆ. ರೈತನ ಮಿತ್ರನಾಗಿ ತಲತಲಾಂತರದಿಂದ ಈ ಪ್ರಾಕೃತಿಕ ವ್ಯವಸ್ಥೆಯ ಸಮತೋಲನವನ್ನು ಕಾಯ್ದುಕೊಳ್ಳುತ್ತಾ ಬಂದ ಇವುಗಳು, ಬೇಸಾಯಕ್ಕೆ ಅನಿವಾರ್ಯವಾಗಿ ಬೇಕಾಗಿದ್ದ ಜೀವಿಗಳಾಗಿದ್ದವು. ಆದರೆ ಇಂದು ಇವು ತುಳುನಾಡಿನಲ್ಲಿ ಕಾಣಸಿಗುವುದು ಅಪೂರ್ವವಾಗಿದೆ. ಇದರೊಂದಿಗೆ ಕಾಡಿನ ನಾಶವು ಇಲ್ಲಿಯ ಭೌಗೋಳಿಕ ವ್ಯವಸ್ಥೆಗೆ ಬಹು ದೊಡ್ಡ ಹೊಡೆತವನ್ನು ನೀಡುತ್ತಿದೆ. ಕಾಡಿನಲ್ಲಿದ್ದ ಆನೆ, ಕಾಟಿಗಳು ನಾಡಿಗೆ ದಾಳಿ ಇಡುತ್ತಿವೆ.

ಎಲ್ಲಕ್ಕಿಂತ ಮುಖ್ಯವಾಗಿ ಅಗತ್ಯಕ್ಕಿಂತ ಹೆಚ್ಚಿನ ಹಣ ಜನರ ಕೈಯಲಿ ್ಲಓಡಾಡುತ್ತಿರುವುದೂ ಆಪಾಯಕಾರಿ. ಮನುಷ್ಯನಲ್ಲಿ ಸ್ವಾರ್ಥ, ದುರಾಸೆಯ ಜೊತೆಗೆ ಅಪರಾಧಿ ಪ್ರವೃತ್ತಿಗಳು ಹೆಚ್ಚಾಗುತ್ತಿದೆ. ಬೇಸಾಯದ ಕಾಲದಲ್ಲಿದ್ದ ವ್ಯವಹಾರಿಕ ಸ್ಥಿತಿಗತಿಗೂ ಇಂದಿನ ವ್ಯವಹಾರಕ್ಕೂ ಅಜಗಜಾಂತರವನ್ನು ಕಾಣುತ್ತೇವೆ. ಈ ದೇಶದ ಬೇರಾವ ಪ್ರದೇಶದಲ್ಲೂ ಕಾಣಸಿಗದಷ್ಟು ಉನ್ನತ ಮಟ್ಟದ ವ್ಯವಹಾರಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಲು ಸಾಧ್ಯವಾಗುತ್ತಿದೆ. ಸುಮಾರು ಮೂವತ್ತು ವರ್ಷಗಳ ಹಿಂದೆ ತುಳುನಾಡಿನಲ್ಲಿ 260 ವಾಣಿಜ್ಯ ಬ್ಯಾಂಕುಗಳು, 21 ಸಹಕಾರಿ ಸಂಘಗಳು, ಒಟ್ಟು 6 ಸಾವಿರ ಲಕ್ಷ ಕೃಷಿ ಸಾಲ ವ್ಯವಹಾರ ನಡೆಯುತ್ತಿತ್ತು. ಅದೇ ಇಂದು ಸುಮಾರು 582 ವಾಣಿಜ್ಯ ಬ್ಯಾಂಕುಗಳು, 90 ಸಹಕಾರಿ ಬ್ಯಾಂಕುಗಳು, 82 ಸಾವಿರ ಲಕ್ಷ ಕೃಷಿ ಸಾಲ ವ್ಯಹಾರಗಳು ನಡೆಯುತ್ತಿವೆ. ಆಹಾರ ಬೆಳೆಗಳನ್ನು ಬೆಳೆಯುತ್ತಿದ್ದ ಕಾಲದಲ್ಲಿ ಕೃಷಿಕ ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಇರಲಾರದು. ಆದರೆ ಇಂದು ದೇಶದ ಬೇರೆ ಭಾಗಗಳಲ್ಲಿ ಕೃಷಿ ಸಾಲದಿಂದ ಸಾಯುವ ರೈತರಂತೆ ತುಳುನಾಡಿನಲ್ಲೂ ಈ ಸಂಖ್ಯೆ ಕಾಣಸಿಗುತ್ತಿದೆ. ಅಡಿಕೆ, ರಬ್ಬರ್‍ಗಳಿಗೆ ಧಾರಣೆ ಇಲ್ಲದೇ ಇದ್ದರೆ ಸಾಲ ಪಡೆದ ಕೃಷಿಕನಿಗೆ ಬೇರೆ ದಾರಿ ಕಾಣದ ಸ್ಥಿತಿ ನಿರ್ಮಾಣವಾಗುತ್ತಿದೆ. ತುಳುನಾಡಿನ ವ್ಯವಹಾರಿಕ ಚಿತ್ರಣವನ್ನು ಬದಲಾಯಿಸಿದ ಈ ವಾಣಜ್ಯ ಬೆಳೆಗಳು ಎಂದೂ ಆರ್ಥಿಕ ಸ್ಥಿರತೆಯನ್ನು ತಂದುಕೊಡಲಿಲ್ಲ ಎನ್ನುವುದು ಸತ್ಯ.

ಇನ್ನೊಂದು ಮುಖ್ಯವಾದ ವಿಷಯವೊಂದು ಇತ್ತೀಚೆಗೆ ನಮ್ಮಲ್ಲರ ಅನುಭವಕ್ಕೆ ಬಂದಿತ್ತು, ಅದೆಂದರೆ ಆಹಾರ ಬೆಳೆಗಳನ್ನು ಬೆಳೆಯದ ನಾವು, ಕಳೆದ ಮಳೆಗಾಲದಲ್ಲಿ ಸುರಿದ ವಿಪರೀತ ಮಳೆಯಿಂದ ತತ್ತರಿಸಿದೆವು. ನಮಗೆ ಅಕ್ಕಿಯನ್ನು ತಂದುಕೊಡುವ ರಸ್ತೆ ವ್ಯವಸ್ಥೆ ಕುಸಿದು ಆತಂಕಕ್ಕೊಳಗಾದೆವು. ಇಲ್ಲಿಗೆ ಅಕ್ಕಿ ತರುವ ನಾಲ್ಕು ಭಾಗದ ರಸ್ತೆಗಳಲ್ಲಿ ಏಕಕಾಲದಲ್ಲಿ ಮೂರು ಮುಚ್ಚಿಹೋದುವು. ಒಂದು ವೇಳೆ ನಾಲ್ಕು ರಸ್ತೆಗಳು ಒಂದಷ್ಟು ಕಾಲ ಮುಚ್ಚಿ ಹೋಗುತ್ತಿದ್ದರೆ ಕರಾವಳಿ ಜನರ ಸ್ಥಿತಿ ಏನಾಗುತ್ತಿತ್ತು ಎನ್ನುವುದನ್ನು ಯೋಚಿಸಬೇಕಾಗಿದೆ. ಯಾಕೆಂದರೆ ಕಳೆದ ಇಪ್ಪತ್ತು ವರ್ಷಗಳಿಂದ ಕರಾವಳಿ ಜನರು ಆಹಾರದಲ್ಲಿ ಪರಾವಲಂಬಿಗಳು. ಮಾತ್ರವಲ್ಲದೇ ತಮ್ಮ ಕೆÀಲಸ ಕಾರ್ಯಗಳಲ್ಲೂ ಕೂಡ. ಒಂದು ಕಾ¯ದಲ್ಲಿ ನಮ್ಮ ಕೆಲಸಗಳನ್ನು ನಾವೇ ಮಾಡುತ್ತಿದ್ದೆವು, ಇಲ್ಲಾ ನೆರೆ ಹೊರೆಯವರನ್ನು ಸೇರಿಸಿ ಮಾಡಿಸುತ್ತಿದ್ದೆವು, ಸಾಮುದಾಯಿಕ ಅನುಸಂಧಾನದ ಪ್ರತಿಫಲವನ್ನು ಒಟ್ಟು ಜನಪದ ವ್ಯವಸ್ಥೆ ಪಡೆಯುತ್ತಿತ್ತು. ಅಂದರೆ ಕೆಲವರು ಸಾಗುವಳಿ ನಡೆಸುವ ಕೃಷಿಕ ವರ್ಗವಾಗಿ ಅನುಕೂಲ ಪಡೆದರೆ, ಹಲವರು ಶ್ರಮಿಕ ವರ್ಗವಾಗಿಯೂ ಅನುಕೂಲ ಪಡೆಯುತ್ತಿದ್ದರು. ಈ ಎರಡೂ ವಿಭಾಗಕ್ಕೂ ಸೇರದವರೂ ಇನ್ನಿತರ ಚಟುವಟಿಕೆಯ ಮೂಲಕ ಧಾನ್ಯ ಸಂಗ್ರಹಿಸುವ ಕಾರ್ಯವನ್ನು ಮಾಡುತ್ತಿದ್ದರು. ಉದಾಹರಣೆಗೆ ಇಲ್ಲಿ ದೈವ ನರ್ತನದ ಕಾರ್ಯದಲ್ಲಿ ತೊಡಗಿಸಿಕೊಂಡ ಕೆಲವು ಜನಾಂಗಗಳು ಮೂಲತಾ ಕೃಷಿಕರೂ ಅಲ್ಲ, ಕೃಷಿ ಕಾರ್ಮಿಕರೂ ಅಲ್ಲ. ಆದರೆ ಭತ್ತ ಕೊಯಿಲಿನ ಸಂದರ್ಭದಲ್ಲಿ ಅವರೂ ತಮ್ಮ ವಿಭಿನ್ನ ಕುಣಿತಗಳ ಮೂಲಕ ಭತ್ತ ಸಂಗ್ರಹಿಸುತ್ತಿದ್ದರು. ಆದರೆ ಇಂದು ಕರಾವಳಿಯಲ್ಲಿ ಬೇರೆ ಜಿಲ್ಲೆಗಳಿಂದ ಅಥವಾ ರಾಜ್ಯಗಳಿಂದ ಬಂದು ಕೆಲಸ ಮಾಡುವ ಕಾರ್ಮಿಕರ ಸಂಖ್ಯೆ ಬಹಳ ಹೆಚ್ಚಾಗಿದೆ. ಎಷ್ಟರಮಟ್ಟಿಗೆ ಈ ಅವಲಂಬನೆ ನಡೆದಿದೆ ಎಂದರೆ, ಆ ಪ್ರದೇಶದ ಜನ ಈ ನಾಡನ್ನು ತ್ಯಜಿಸಿ ಹೋದದ್ದೇ ಆದರೆ, ಕರಾವಳಿಯ ಎಲ್ಲ ಚಟುವಟಿಕೆಗಳು ಕ್ಷಣ ಮಾತ್ರದಲ್ಲಿ ಸ್ಥಗಿತಗೊಳ್ಳಬಹುದು. ಇಲ್ಲಿಯ ಹೊಸ ತಲೆಮಾರಿನ ಜನರು ಕೃಷಿ ವೃತ್ತಿಯ ಹೊರತಾದ ವೃತ್ತಿಪರ ಕೋರ್ಸ್‍ಗಳಿಗೆ ಹೆಚ್ಚು ಪ್ರವೇಶ ಪಡೆಯುತ್ತಿರುವುದೂ ಸವಾಲಿನ ವಿಷಯವೇ ಆಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ವಾಣಿತ್ಯ ಬೆಳೆಗಳೂ ಸಂಕಷ್ಟಕ್ಕೊಳಗಾಗದೇ ಇರಲಾರದು.

ಕೇವಲ ಆಹಾರ ಬೆಳೆಗಳನ್ನು ಮಾತ್ರವಲ,್ಲ ತುಳುನಾಡಿನಲ್ಲಿ ಹಣ್ಣು ತರಕಾರಿಯಂತಹಾ ಬೆಳೆಗಳನ್ನು ಬೆಳೆಯುವ ಸಂದರ್ಭಗಳೂ ಕಡಿಮೆಯಾಗುತ್ತಿದೆ. ಒಂದು ಕಾಲದಲ್ಲಿ ತಮ್ಮ ಮನೆಗಳಿಗೆ ಬೇಕಾಗುವ ತರಕಾರಿಗಳನ್ನು ತಾವೇ ಬೆಳೆಯುತ್ತಿದ್ದರು. ಸಹಜ ಅಥವಾ ಸಾವಯವ ಮಾದರಿಯಲ್ಲಿ ಬೆಳೆಯುತ್ತಿದ್ದ ಈ ತರಕಾರಿಗಳು ಅತ್ಯಂತ ರುಚಿಕರವೂ, ಆರೋಗ್ಯಕರವೂ ಆಗಿತ್ತು. ಆದರೆ ಇಂದು ಸ್ವಯಂ ತರಕಾರಿಗಳನ್ನು ಬೆಳೆಯುವ ವ್ಯವಸ್ಥೆ ತುಳುನಾಡಿನಲ್ಲಿ ತುಂಬಾ ಕಡಿಮೆಯಾಗಿದೆ. ಅದರ ಬದಲು ಒಂದು ವಸ್ತುವಿನ ಉಪವಸ್ತುಗಳ ತಯಾರಿ ಹೆಚ್ಚಾಗಿದೆ. ಅಂದರೆ ನೇರವಾಗಿ ಬಳಸುತ್ತಿದ್ದ ಮಾವಿನ ಹಣ್ಣು, ಹಲಸಿನ ಹಣ್ಣು ಇಲ್ಲಾ ಅನಾನಸು ಇತ್ಯಾದಿಗಳನ್ನು ಪಾನೀಯ, ಚಾಕಲೇಟ್ ಅಥವ ಇನ್ನಿತರ ರೂಪದಲ್ಲಿ ಬಳಸುವ ವ್ಯವಸ್ಥೆ ಹೆಚ್ಚಾಗಿದೆ. ಇದರÀ ಸವಿಯನ್ನು ಇಮ್ಮಡಿಗೊಳಿಸುವ ರುಚಿಕಾರಕ, ವರ್ಣಕಾರಕಗಳು ಈ ಹಣ್ಣುಗಳ ನೈಜತೆಯನ್ನು ಮರೆಮಾಚುತ್ತಿವೆ. ಇದು ಕ್ರಮೇಣ ನಮ್ಮ ಆರೋಗ್ಯದ ಮೇಲೆ ತೀವೃ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.

ಒಟ್ಟನಲ್ಲಿ ಈ ಮಾತುಗಳ ತಾತ್ಪರ್ಯ ವಾಣಿಜ್ಯ ಬೆಳೆಗಳು ಬೇಡವೆಂದಾಗಲಿ, ಮತ್ತೆ ಭತ್ತ ಬೇಸಾಯವನ್ನೇ ಎಲ್ಲರೂ ಮಾಡಬೇಕೆಂದಾಗಲಿ ಅಲ್ಲ. ಬದಲಾಗಿ ಇಂದು ಅಹಾರ ಸರಪಳಿ ವ್ಯವಸ್ಥೆ ತನ್ನ ಸ್ವರೂಪವನ್ನು ಬದಲಾಯಿಸುತ್ತಿದೆ. ಸಸ್ಯ ಉತ್ಪನ್ನಗಳನ್ನು ಬಳಸುವ ಮೂಲಕ ಸಮೃದ್ಧಿಯನ್ನು ಕಾಣುತ್ತಾ ಬದುಕಿದ ಮನುಷ್ಯ, ಇಂದು ಅದೇ ಮೂಲಗಳಿಂದ ಸಂಕಷ್ಟಕ್ಕೆ ಈಡಾಗುತ್ತಿದ್ದಾನೋ ಎನ್ನುವ ಸಂಶಯ ಹುಟ್ಟುತ್ತಿದೆ. ವಾಣಿಜ್ಯ ಬೆಳೆಗಳ ಜೊತೆಗೆ ತನಗೆ ಬೇಕಾದಷ್ಟು ಆಹಾರದ ಬೆಳೆಗಳನ್ನೂ ಬೆಳೆದರೆ ಸ್ವಾವಲಂಬೀ ಬದುಕಿಗೆ ಆತಂಕಪಡಬೇಕಾಗಿಲ್ಲ. ಆದ್ದರಿಂದ ಬದಲಾವಣೆ ಅಥವ ಅಭಿವೃದ್ಧಿಗಳನ್ನು ಬುದ್ದಿವಂತಿಕೆಗಿಂತಲೂ ತಿಳುವಳಿಕೆಯ ನೆಲೆಯಲ್ಲಿ ಸ್ವಾಗತಿಸುವುದೇ ಇಂದಿನ ಅನಿವಾರ್ಯ.

ಡಾ.ಸುಂದರಕೇನಾಜೆ


Comments