ಯಕ್ಷಾಮೃತ ಗಳಿಗೆ...... ಅಮೃತ ಸೋಮೇಶ್ವರ
ಅಮೃತ
ಸೋಮೇಶ್ವರ ಎಂದಾಗ ಎಲ್ಲರಿಗೂ ಇಷ್ಟವಾಗುವುದು
ವಿದ್ವತ್ ಮತ್ತು ವಿನಯ ಜೊತೆಯಾಗಿರುವ
ವ್ಯಕ್ತಿತ್ವ. ನೆನಪಾಗುವುದು ಯಕ್ಷಗಾನ ಪ್ರಸಂಗ ಮತ್ತು
ತುಳು ಕನ್ನಡ ಬರಹ, ಹಾಗೇ
ನೋಡಿದರೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೈಯಾಡಿಸಿದ
ಕರಾವಳಿಯ ಬಹುಮಾನ್ಯರಾದ ಡಾ.ಶಿವರಾಮ ಕಾರಂತರನ್ನು
ಹೊರತುಪಡಿಸಿದರೆ ಮತ್ತೆ ಕಾಣಸಿಗುವುದು ಅಮೃತ
ಸೋಮೇಶ್ವರರೇ ಇರಬೇಕು. ತುಳು ಕನ್ನಡದ
ನಾನಾ ಪ್ರಕಾರಗಳಲ್ಲಿ ಗಟ್ಟಿ ಕೃಷಿ ಮಾಡಿದವರು
ಸೋಮೇಶ್ವರರು. ಕರಾವಳಿ ಕರ್ನಾಟಕದ ಸಂಶೋಧÀನೆ ಮತ್ತು ಶಿಷ್ಟ
ಸಾಹಿತ್ಯದ ವಿಸ್ತøತ ಹರಿಕಾರರಿವರು.
ಸಣ್ಣ ಕಥೆ, ಕಾವ್ಯ, ಕಾದಂಬರಿ,
ನಾಟಕ, ನೃತ್ಯರೂಪಕ, ವ್ಯಕ್ತಿ ಚಿತ್ರ, ಅಂಕಣ,
ವಿಮರ್ಶೆ, ರೇಡಿಯೋ ರೂಪಕ, ಪಾಡ್ದನ
ಸಂಗ್ರಹ, ಧ್ವನಿಸುರುಳಿ, ಭಕ್ತಿಗೀತೆ, ಸಂಪಾದನೆ ,ಶಬ್ದಕೋಶ, ಜಾನಪದ, ಭಾವಗೀತೆ, ಅನುವಾದ
ಹೀಗೇ ಒಬ್ಬ ವ್ಯಕ್ತಿಯ ಜೀವಿತಾವಧಿಯಲ್ಲಿ
ಇಷ್ಟೆಲ್ಲಾ ಓದಲು ಬರೆಯಲು ಸಾಧ್ಯವೋ
ಎನ್ನುವಷ್ಟರ ಮಟ್ಟಿಗೆ ಬರೆದವರು. ಇವೆಲ್ಲದರಲ್ಲಿ
ಯಕ್ಷಗಾನ ಕ್ಷೇತ್ರಕ್ಕೆ ಅವರು ರಚಿಸಿದ ಪ್ರಸಂಗಗಳು
ಇಲ್ಲಿ ಒಂದು ದಾಖಲೆಯಾಗಿ ಉಳಿದಿದೆ.
ಒಂದು ಕಾಲದಲ್ಲಿ ಧರ್ಮಸ್ಥಳ ಮೇಳ ಹಾಗೂ ಇತರ
ಪ್ರಮುಖ ಮೇಳಗಳ ಧ್ವನಿವರ್ಧಕ ಪ್ರಚಾರಗಳಲ್ಲಿ,
ಮಾವಿನ ಮರಗಳಿಗೆ ಅಂಟಿಸಿದ್ದ ಭಿತ್ತಿ
ಪತ್ರಗಳಲ್ಲಿ ಬಹುತೇಕ ಕೇಳುತ್ತಿದ್ದ ಮತ್ತು
ಕಾಣುತ್ತಿದ್ದ ಹೆಸರು ಅಮೃತ ಸೋಮೇಶ್ವರ
ವಿರಚಿತ. ಮಧ್ಯರಾತ್ರಿಗೂ ಮುನ್ನ ಟೆಂಟು ಬಿಚ್ಚಿ
ಜನರನ್ನು ಒಳಬಿಡಬೇಕಾಗಿದ್ದ ಪ್ರಸಂಗವನ್ನು ಸೃಷ್ಟಿಸಿದ, ಪ್ರಸಂಗಗಳ ಮೂಲಕವೇ ಭರ್ಜರಿ ಯಶಸ್ಸಿನ
ಮೇಳಗಳನ್ನು ರೂಪಿಸಿದ,
ಅನೇಕ ಕಲಾವಿದರು ತಮ್ಮ ತಾರಾ ಮೌಲ್ಯವನ್ನು
ಹೆಚ್ಚಿಸಿಕೊಂಡ ಯಕ್ಷಗಾನ ಪ್ರಸಂಗಗಳನ್ನು ಕೊಟ್ಟವರು
ಅಮೃತ ಸೋಮೇಶ್ವರರು. ವರ್ಷದಿಂದ ವರ್ಷಕ್ಕೆ ಅವರು ತಯಾರಿಸುತ್ತಿದ್ದ ಪ್ರಸಂಗ
ಮತ್ತು ಅದಕ್ಕೆ ಕಾತರದಿಂದ ಕಾಯುತ್ತಿದ್ದ
ರೀತಿ, ಇಂದು ಭಾರತೀಯ ಸಿನಿಮಾದ
ಜನಪ್ರಿಯ ನಿರ್ದೇಶಕರು ನಿರ್ದೇಶಿಸುತ್ತಿರುವ ಸಿನಿಮಾಕ್ಕೆ ಕಾಯುವಂತೆಯೇ ಇತ್ತು. ಅಷ್ಟರ ಮಟ್ಟಿಗೆ
ಯಕ್ಷಗಾನಕ್ಕೆ ಎಂಬತ್ತರ ದಶಕದಲ್ಲಿ ಪ್ರಸಿದ್ಧಿಯನ್ನೂ
ಕೀರ್ತಿಯನ್ನೂ ಗಳಿಕೆಯನ್ನೂ ತಂದುಕೊಟ್ಟಿದ್ದರು.
ಕಾಲ
ಬದಲಾಗಿದೆ. ಯಕ್ಷಗಾನ ಕ್ಷೇತ್ರ ತನ್ನ
ದಿಕ್ಕನ್ನು ತಾನೇ ರೂಪಿಸಿಕೊಳ್ಳುವಂತೆ ಸಾಗುತ್ತಿದೆ.
ಹೆಚ್ಚು ಕಡಿಮೆ ಆರು ತಿಂಗಳು
ಕರಾವಳಿಯ ಮೂಲೆಮೂಲೆಗಳಿಂದ ಚಂಡೆಯ ನಿನಾದವನ್ನೂ ಭಾಗವತಿಕೆಯ
ಸೊಗಸುಗಾರಿಕೆಯನ್ನೂ ಬಿತ್ತರಿಸಲು ಕಾರಣವಾಗುತ್ತಿದ್ದ ಮೇಳಗಳು ಸೊರಗಿ ಹೋಗಿವೆ.
ಯಾರಿಗೂ ಯಾರ ಪ್ರಸಂಗವೂ ಅನಿವಾರ್ಯವಾಗಿಲ್ಲ.
ತಾನು ಆಡಿದೇ ಆಟ, ತೋರಿದ್ದೇ
ಬಯಲಾಟ ಎನ್ನುವ ಕಾಲಘಟ್ಟದಲ್ಲಿ ಯಕ್ಷಗಾನ
ನಿಂತಿದೆ. ಇಂತಹಾ
ಸಂಧೀ ಕಾಲದಲ್ಲಿ ಯಕ್ಷಗಾನ ಪ್ರಸಂಗ ಭೀಷ್ಮರಾದ
ಅಮೃತ ಸೋಮೇಶ್ವರರು ತನ್ನ ವಯೋಸಹಜ ಸಮಸ್ಯೆಗಳ
ಮಧ್ಯೆಯೂ ಈ ಕ್ಷೇತ್ರವನ್ನು ಗಂಭಿರವಾಗಿ
ಅವಲೋಕಿಸುತ್ತಿದ್ದಾರೆ. ಈ ಕಲೆಯ ಏಳುಬೀಳುಗಳ
ಬಗ್ಗೆ ಸಮಚಿತ್ತದಿಂದ ಪ್ರತಿಕ್ರಿಯೈಸುತ್ತಿದ್ದಾರೆ. ಅದರ ಏಳಿಗೆಗೆ ಸಂತಸಪಡುತ್ತಾ
ಅದರ ಅವನತಿಗಳಿಗೆ ಎಚ್ಚರಿಸುತ್ತಾ ತನ್ನ ಎಂಬತ್ತರ ಹರೆಯದಲ್ಲಿದ್ದಾರೆ.
ಹೀಗೆ ಪ್ರತಿಕ್ರಿಯೆ ನೀಡಿದ ಒಂದಷ್ಟು ಭಾಗವನ್ನು
ಇಲ್ಲಿ ದಾಖಲಿಸಲಾಗಿದೆ. ಯಕ್ಷಗಾನದ ಸೀಮೋಲಂಘನ ಕಾಲದಲ್ಲಿ ಆ ಕ್ಷೇತ್ರದ ಸಚಿತ್ರ
ಮೌಲ್ಯಗಳನ್ನು ಕಟ್ಟಿಕೊಟ್ಟ ಈ ಹಿರಿಯರ ಮಾತುಗಳಿಗೆ
ತೂಕವಿದೆ ಮತ್ತು ದಿಕ್ಸೂಚಿ ಗುಣವಿದೆ.
ಈ ಮಾತುಗಳನ್ನು ಕೆಲವು
ಕಂತುಗಳಾಗಿ ಕಣಿಪುರದಲ್ಲಿ ಯಕ್ಷಾಮೃತ ಗಳಿಗೆಗಳನ್ನು ಪ್ರಕಟಿಸ ಬಯಸುತ್ತೇವೆ. ಈ
ಅಮೃತ ಗಳಿಗೆ ಯಕ್ಷಗಾನದ ಸುವರ್ಣಯುಗವೂ
ಹೌದು, ಆ ಯುಗದಲ್ಲಿ ಯಕ್ಷಗಾನಕ್ಕೆ
ಅಮೃತ ಸೋಮೇಶ್ವರರ ಕೊಡುಗೆ ಮತ್ತು ಅವರ
ಅನುಭವ ಜನ್ಯ ಮಾತುಗಳನ್ನು ದಾಖಲಿಸುವುದು
ಮಾತ್ರ ಈ ಬರಹದ ಉದ್ದೇಶ.
ಯಕ್ಷಗಾನದ ಭವಿಶ್ಯಕ್ಕೆ ಇದೊಂದು ಚರಿತ್ರೆ ಎಂದು
ಭಾವಿಸಬೇಕಾಗುತ್ತದೆ.
• ಯಕ್ಷಗಾನದ ಕಲಾವಿದ ಎನ್ನುವುದಕ್ಕಿಂತ ಅದರ
ಜೀವನಾಡಿಯಾದ ಪ್ರಸಂಗದ ಹಿನ್ನಲೆಯಲ್ಲಿ ಕೆಲಸ
ಮಾಡಿದವರು ನೀವು, ಪ್ರಸಂಗ ರಚಿಸುವ
ಈ ಅಧಿಕೃತ ಹಿಡಿತ
ನಿಮಗೆ ಹೇಗೆ ಸಿದ್ಧಿಸಿತು?
ಅಧಿಕೃತ
ಅಂತ ನಾನು ಹೇಳಲಾರೆ, ಆದರೆ
ಎಳೆವೆಯಂದಲೇ ಯಕ್ಷಗಾನದ ಮೇಲೆ ನನಗೆ ಅತಿಯಾದ
ಸೆಳೆತ ಇತ್ತು, ಆ ಕಾಲದಲ್ಲಿ
ನಮ್ಮ ಸುತ್ತಮುತ್ತ ಐದಾರು ಮೈಲು ದೂರದ
ವರೆಗೂ ನಾನು ಮತ್ತು ನನ್ನ
ಅಕ್ಕ ಯಕ್ಷಗಾನ ನೋಡಲು ಹೋಗುತ್ತಿದ್ದೆವು.
ಮರುದಿನ ನಮ್ಮದೇ ಆದ ರೀತಿಯಲ್ಲಿ
ಅದನ್ನು ಆಡುತ್ತಿದ್ದೆವು. ಆಟದಲ್ಲೆಲ್ಲಾ ನಾನೇ ಭಾಗವತನಾಗುತ್ತಿದ್ದೆ., ಉಳಿದವರು
ಸಿಕ್ಕಿದ್ದನ್ನೆಲ್ಲಾ ಕಟ್ಟಿಕೊಂಡು ಕುಣಿಯುತ್ತಿದ್ದರು. ಹಿರಣ್ಯಾಕ್ಷ ವಧೆ ಆಟ ನೋಡಿ
ಬಂದು ಅದೇ ರೀತಿ ದೊಂದಿ
ಹಿಡಿದು ದಾರಿ ಹೋಕರನ್ನು ಓಡಿಸಿದ
ನೆನಪು ನನಗೆ ಇನ್ನೂ ಇದೆ.
ಚಿಕ್ಕಂದಿನಲ್ಲೇ ಯಕ್ಷಗಾನದ ಚಪಲ ನನಗೆ ಅತಿಯಾಗಿ
ಇತ್ತು. ಆ ಕಾಲದಲ್ಲಿ ಮ್ಮದು
ಬಾಲಿಶವಾದ ಆಟಗಳಾದರೂ ಅದರಲ್ಲಿ ಒಂದು ಕಲಾ
ಪ್ರೇಮವಿದೆ ಎನ್ನುವ ಅಂಶವನ್ನು ಗುರುತಿಸಬಹುದು.
ಮತ್ತೆ, ಯಕ್ಷಗಾನ ಆಟ ಅದು
ಸರ್ವಾಂಗ ಸುಂದರವಾದ ಕಲೆ ಅಂತ ಹೇಳುವುದಕ್ಕೆ
ಯಾವ ಅನುಮಾನವೂ ಇಲ್ಲ. ಒಂದು ಕಾಲದಲ್ಲಿ
ಯಕ್ಷಗಾನ ಆಟಕ್ಕೆ ಕೆಲವರಿಗೆ ಹೇವರಿಕೆ
ಇತ್ತು. ಆಟ ನೋಡಿದರೆ ಒಂಬತ್ತು
ರಂಗಪೂಜೆ ನೋಡಬೇಕೆಂಬ ಸರ್ವತಾ ಒಪ್ಪಿಗೆ ಅಲ್ಲದ
ಪ್ರವೃತಿಗಳಿದ್ದವು. ಅದು ಅನಾವಶ್ಯಕ ಮಡಿವಂತಿಕೆ
ಎನ್ನುವುದರಲ್ಲಿ ಯಾವ ಸಂಶಯವೂ ಉಳಿದಿಲ್ಲ.
ಯಕ್ಷಗಾನದವರಿಗೆ ಹೆಣ್ಣು ಕೊಡದ ಕಾಲವೂ
ಇತ್ತು. ತಕ್ಕಮಟ್ಟಿಗೆ ಆ ಪ್ರವೃತ್ತಿಯೂ ಬದಲಾಗಿದೆ.
ಈ ಕಾಲಘಟ್ಟದಲ್ಲೇ ನಾನು
ಯಕ್ಷಗಾನಕ್ಕೆ ಆಕರ್ಷಿತನಾದುದು, ಜೊತೆಗೆ ಕನ್ನಡ ಸಾಹಿತ್ಯದ
ಅಭಿರುಚಿಯೂ ನನ್ನಲ್ಲಿದ್ದುದರಿಂದ ಪ್ರಸಂಗ ರಚಿಸುವ ಸಾಹಸಕ್ಕೆ
ಕೈಹಾಕಿದೆ. ಇದರಲ್ಲಿ ಒಂದಷ್ಟು ಯಶಸ್ಸನ್ನೂ
ಕಂಡೆ. ನಾನು ಕಂಡಿದ್ದೇನೆ ಎನ್ನುವುದಕ್ಕಿಂತ
ಕಲಾಸ್ವಾಧಕರು ಕಂಡುಕೊಂಡರು ಎನ್ನಬಹುದು.
• ಯಕ್ಷಗಾನಕ್ಕೆ
ಸಂಮೃದ್ಧವಾದ ಪ್ರಸಂಗ ಹೇಗೆ ಅನಿವಾರ್ಯ?
ಯಕ್ಷಗಾನದ
ವೈಶಿಷ್ಠ್ಯವೇ ಅದೊಂದು ಪ್ರಮಾಣ ಬದ್ಧವಾಗಿರುವುದು.
ಸಾಹಿತ್ಯದಲ್ಲಿ ಛಂದೋಬದ್ಧತೆಯೂ ಅದರ ಶ್ರೇಷ್ಠತೆ. ಅಂದರೆ
ಛಂದೋ ರೂಪದಲ್ಲಿ ಇರುವಂತಹಾ ವಿವಿಧ ಛಂಧಸ್ಸುಗಳು ಸೇರಿ
ಆಯಾ ರಸಕ್ಕೆ ಸಂದರ್ಭಕ್ಕೆ ಅನುಕೂಲವಾಗುವಂತಾ
ರೀತಿಯಲ್ಲಿ ಛಂದೋ ವಿನ್ಯಾಸ ಇರುತ್ತದೆ.
ಅದನ್ನು ಆಡುವ ರೀತಿಯಿಂದ ಅದು
ಪೂರ್ಣ ಸ್ವರೂಪವನ್ನು ಪಡೆಯುತ್ತದೆ. ಯಕ್ಷಗಾನದಲ್ಲಿ ಮುಖ್ಯವಾಗಿ ಅಭಿನಯ ಇದೆ., ಕುಣಿತ
ಇದೆ, ಮಾತು, ಹಿಮ್ಮೇಳ ಹೀಗೆ
ಎಲ್ಲವೂ ಒಂದು ಪ್ರಮಾಣ ಬದ್ಧವಾಗಿ
ಇದೆ. ಹೀಗೆ ಇರುವುದರಿಂದಲೇ ಅದು
ಸರ್ವಾಂಗ ಸುಂದರ ಕಲೆ. ಪ್ರಮಾಣ
ತಪ್ಪಿ ಒಂದೇ ಒಂದು ಭಾಗ
ಅತಿಯಾಗಿ ಬೆಳೆದರೆ ಅದು ವಿಕಾರವಾಗುತ್ತದೆ.
ಎಷ್ಟೇ ಭಾಗವತಿಕೆ ಒಳ್ಳೆಯದಾದರೂ ಅಥವಾ ಭಾಗವತಿಕೆಯನ್ನು ಮಾತ್ರ
ಮೆರೆಸಿದರೆ ಅದು ದೇಹದ ಒಂದು
ಭಾಗ ಮಾತ್ರ ಬೆಳೆದಂತೆ ಆಗುತ್ತದೆಯೇ
ಹೊರತು ಪ್ರಮಾಣ ಬದ್ಧವಾಗಿ ದೇಹ
ಬೆಳೆದಂತೆ ಆಗುವುದಿಲ್ಲ. ಇದು ಕೇವಲ ಭಾಗವತಿಕೆಗೆ
ಮಾತ್ರ ಅನ್ವಯಿಸಿದ ಮಾತಲ್ಲ, ಬದಲಾಗಿ ಮಾತುಗಾರಿಕೆ
ಕುಣಿತ ಹಾಗೂ ಯಕ್ಷಗಾನದ ಉಳಿದಲ್ಲಾ
ವಿಭಾಗಕ್ಕೂ ಅನ್ವಯಿಸುತ್ತದೆ. ಆದರಿಂದ ಒಬ್ಬ ಕಲಾವಿದ
ಆ ಕ್ಷೇತ್ರದಲ್ಲಿ ದುಡಿಯುವಾಗ
ಈ ಪ್ರಮಾಣ ಬದ್ದತೆಯನ್ನು
ನೆನಪಲ್ಲಿಟ್ಟುಕೊಳ್ಳುವುದು ಯಕ್ಷಗಾನದಲ್ಲಿ ಅತೀ ಅಗತ್ಯ. ಈ
ಪ್ರಮಾಣ ಬದ್ದತೆಯನ್ನು ಒಂದು ಪ್ರಸಂಗದಿಂದ ಕಾಣಲು
ಸಾಧ್ಯವಿದೆ. ನಿರ್ದೇಶಕನಾದ ಭಾಗವತ ಇದನ್ನು ಪ್ರಸಂಗದ
ಮೂಲಕ ರಂಗಕ್ಕೆ ತರುವ ಜವಾಬ್ಧಾರಿಯನ್ನು
ಹೊತ್ತಿರುತ್ತಾನೆ.
ಯಕ್ಷಾಮೃತ ಗಳಿಗೆ......2
ಕಲೆ
ಕಲಾವಿದರನ್ನು ಜನ ಸ್ವೀಕಾರ ಮಾಡಬೇಕು
• ಇವತ್ತು ಯಕ್ಷಗಾನದ ಯಾವುದೋ
ಒಂದು ಭಾಗವನ್ನು ಮಾತ್ರ ಮೆರೆಸುವಂತೆ ಕೆಲವು
ಕಲಾವಿದರು ರೂಪುಗೊಳ್ಳುತ್ತಿದ್ದಾರೆ. ಇದು ಪ್ರಸಂಗದ ಮೇಲೆ
ಯಾವ ಪರಿಣಾಮವನ್ನು ಬೀರುತ್ತದೆ.
ಯಾವುದೇ
ಒಂದು ಭಾಗ ಮಾತ್ರ ದೇಹದಲ್ಲಿ
ಬೆಳೆದರೆ ಅದನ್ನು ರೋಗ ಎಂದು
ಕರೆಯುತ್ತಾರೆ. ಯಕ್ಷಗಾನಕ್ಕೆ ಈ ರೋಗ ಬಾರದ
ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಕಲಾವಿದನದ್ದು. ಪ್ರಮಾಣ ಬದ್ದತೆಯಲ್ಲೇ ಸೌಂದರ್ಯವಿರುವುದು
ಎನ್ನುವ ಸತ್ಯವನ್ನು ಪ್ರತಿಯೊಬ್ಬ ಕಲಾವಿದನೂ ತಿಳಿದುಕೊಳ್ಳಬೇಕು. ಯಕ್ಷಗಾನದಲ್ಲಿ ಭಾಗವತನೇ ಪ್ರಧಾನ ಪಾತ್ರಧಾರಿ,
ಆತನೇ ಪ್ರಮಾಣ ಬದ್ಧತೆಯನ್ನು ಪಾಲಿಸಬೇಕಾದ
ಪ್ರಮುಖ. ಒಬ್ಬ ಪುಂಡು ವೇಷಧಾರಿ
ಎಪ್ಪತ್ತೈದು-ನೂರು ಧೀಂಗಿಣ ಹಾಕಿ
ಒಮ್ಮೆ ಜನಗಳ ತಪ್ಪಾಳೆ ಗಿಟ್ಟಿಸಬಹುದು,
ಆದರೆ ಅದು ಕಲೆ ಆಗುವುದಿಲ್ಲ
ಎನ್ನವ ಅಭಿಪ್ರಾಯ ನನ್ನದು. ಪುಂಡು ವೇಷಧಾರಿಯಾಗಿ
ತತ್ಕಾಲಕ್ಕೆ ಮೆರೆಯಬಹುದು, ಆದರೆ ಅದು ಹುಡುಗ
ಪ್ರಾಯದಲ್ಲಿ ಮಾತ್ರ ಸಾಧ್ಯ, ಆತನೇ
ಕಿರೀಟ ವೇಷಧಾರಿಯಾದರೆ ಹಾಗೆ ಕುಣಿಯಲು ಸಾಧ್ಯವಿಲ್ಲ
ಎನ್ನುವ ಸತ್ಯವನ್ನು ತಿಳಿದಿರಬೇಕು. ಹಾಗೇ ಈ ಸ್ತ್ರೀವೇóಷದ ಕುಣಿತದಲ್ಲಿ ವಿರಾವೇಶದ
ಪರಿಕಲ್ಪನೆ ಇರಬಾರದು ಎಂದಲ್ಲ, ಉದಾಹರಣೆಗೆ
ಧಕ್ಷದ್ವರ ಪ್ರಸಂಗದಲ್ಲಿ ಅತಿಯಾದ ಆವೇಶ ಹೆಣ್ಣಿಗೆ
ಬರಬಹುದು ಮತ್ತು ಆಕೆ ಕುಣಿಯಬಹುದು.
ಕುಣಿಯುತ್ತಾಳೆ ಕೂಡ, ಆದರೆ ದೀಂಗಿಣ
ಅಲ್ಲ. ಧೀಂಗಿಣ ಹಾಕಿ ಕುಣಿಯುವಂತೆಯೂ
ಇದೆ. ಹಾಗೇ ವೀರರಸದಲ್ಲಿ ಹಾಡುವಾಗ
ನಿಧಾನವಾಗಿ ಹಾಡಿದರೆ ಅದರಿಂದ ರಸ
ಭಂಗವಾಗಬಹುದು. ಅದನ್ನು ತಾರಕ ಸ್ಥಾಯಿಯಾಗಿಯೇ
ಹಾಡಬೇಕು. ಅದು ಬಹಳ ದೂರಕ್ಕೆ
ಕೇಳಬೇಕು. ಹಿಂದೆ ಮೈಕ್ ಇಲ್ಲದೇ
ಇದ್ದ ಕಾರಣ ಅದು ಗಟ್ಟಿಯಾಗಿ
ಇರಬೇಕಿತ್ತು. ಆದ್ದರಿಂದ ಎಲ್ಲ ಕಲಾವಿದರೂ, ವೇಷಗಳೂ
ಪರಸ್ಪರ ಅವಲಂಬಿಗಳು. ರಂಗಸ್ಥಳದಲ್ಲಿ ಕೇವಲ ಒಬ್ಬ ವೇಷಧಾರಿಯಿಂದ
ಮಾತ್ರ ಒಂದು ಪ್ರಸಂಗವನ್ನು ಮುನ್ನಡೆಸಲು
ಹೇಗೆ ಸಾಧ್ಯವಿಲ್ಲವೋ ಹಾಗೇ ಒಬ್ಬ ವೇಷಧಾರಿ
ಮಾತ್ರ ಮೆರೆಯುದಕ್ಕೂ ಯಕ್ಷಗಾನದಲ್ಲಿ ಅವಕಾಶ ಇಲ್ಲ. ಮತ್ತದು
ಸಾಧುವೂ ಅಲ್ಲ. ಪ್ರಯೋಗದಲ್ಲಿ ಅದನ್ನು
ತೋರಿಸಬಹುದೇ ಹೊರತು ಪ್ರಸಂಗದ ಪ್ರದರ್ಶನದಲ್ಲಿ
ಅಲ್ಲ.
• ತಮ್ಮ ಪ್ರಸಂಗದ ವೈಶಿಷ್ಠ್ಯವನ್ನು
ನೀವೇ ಹೇಗೆ ಗುರುತಿಸುತ್ತೀರಿ?
ಯಾವುದೇ
ಪ್ರಸಂಗದಲ್ಲೂ ಒಂದು ಆರೋಹಣ,
ಅವರೋಹಣ ಮತ್ತು ಒಂದು ರೀತಿಯ
ಸಂದೇಶ ಇದು ಇರಲೇ ಬೇಕು,
ಕಥೆ ನಮಗೆ ಪುರಾಣದಲ್ಲಿ ಬೇಕಾದಷ್ಟು
ಸಿಗುತ್ತದೆ, ಆದರೆ ಆ ಕಥೆಯೊಂದಿಗೆ
ಒಂದು ಸಂದೇಶವೂ ಸಿಗಬೇಕು. ಕಲಾಭಿನಯಕ್ಕೆ
ಇಂಬು ಸಿಗಬೇಕು, ಈ ದೃಷ್ಟಿಯಿಂದಲೇ ಕತೆಯನ್ನು
ಆಯ್ಕೆ ಮಾಡಬೇಕಾಗುತ್ತದೆ. ಎಲ್ಲಾ ಕತೆಗಳೂ ಯಕ್ಷಗಾನಕ್ಕೆ
ಹೊಂದುವುದಿಲ್ಲ ಎನ್ನುವ ಎಚ್ಚರ ಪ್ರಸಂಗಕರ್ತನಲ್ಲಿ
ಇರಲೇಬೇಕು, ಕೆಲವು ಕಥೆಗಳು ತಾಳಮದ್ದಳೆಗೆ
ಹೊಂದಿಕೆಯಾಗಬಹುದು. ಹಾಗೆಂದು ಯಕ್ಷಗಾನ ಪ್ರದರ್ಶನಕ್ಕೆ
ಆಗುತ್ತದೆ ಎನ್ನಲು ಸಾಧ್ಯವಿಲ್ಲ. ಆಟಕ್ಕೆ
ಪ್ರತ್ಯೇಕತೆ ಬೇಕಾಗುತ್ತದೆ. ಎಲ್ಲಾ ರೀತಿಯ ರಚನೆ
ಮತ್ತು ಕಲಾ ಪ್ರಸ್ತುತಿಗೆ ಪೂರಕವಾದ
ಕಥೆಗಳನ್ನೇ ಆಯ್ಕೆ ಮಾಡಬೇಕಾಗುತ್ತದೆ. ನಾನು
ಪ್ರಸಂಗ ರಚಿಸುವ ಸಂದರ್ಭದಲ್ಲಿ ಈ
ಮೇಲಿನ ಆಶಯಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದೆ.
ಹಾಗಾಗಿ ಅದನ್ನು ಜನ ಸ್ವೀಕಾರ
ಮಾಡಿದ್ದಿರಬೇಕು ಅಂತ ನನಗೆ ಅನಿಸುತ್ತದೆ.
• ಪುರಾಣ ಕತೆಗಳು ಮತ್ತು
ಸಾಮಾಜಿಕ ಕತೆಗಳನ್ನು ಆಯ್ಕೆ ಮಾಡುವಾಗ ವೈಶಿಷ್ಠ್ಯಗಳಲ್ಲಿ
ಭಿನ್ನತೆ ಇರುವುದಿಲ್ಲವೇ?
ಬಹುತೇಕ
ಪುರಾಣ ಕತೆಗಳಲ್ಲಿ ಸಂದೇಶ ಅಡಕವಾಗಿರುತ್ತದೆ. ಅದನ್ನು
ಆಯ್ಕೆ ಮಾಡಿ ಪ್ರಸಂಗಕ್ಕೆ ಬೇಕಾದಂತೆ
ರೂಪಿಸಲೂ ಸಾಧ್ಯವಾಗುತ್ತದೆ. ರಚನೆಗೆ ಬೇಕಾದಂತೆ ಹೊಂದಿಸಿಕೊಳ್ಳುವ
ಜಾಣ್ಮೆ ಕಲಾವಿದನಿಗೆ ಅಥವಾ ಕವಿಗೆ ಇರಬೇಕಾಗುತ್ತದೆ.
ಆದರೆ ಸಾಮಾಜಿಕ ಕತೆಗಳನ್ನು ತೆಗೆದುಕೊಳ್ಳುವಾಗ
ಇನ್ನೂ ಒಂದಷ್ಟು ಎಚ್ಚರ ವಹಿಸಬೇಕಾಗುತ್ತದೆ.
ಸಾಮಾನ್ಯವಾಗಿ ಸಾಮಾಜಿಕ ಕತೆಗಳು ವರ್ತಮಾನಕ್ಕೆ
ಹತ್ತಿರವಾದುವುಗಳು. ಆದರೆ ಯಕ್ಷಗಾನದಂತಹಾ ಕಲೆ
ವರ್ತಮಾನಕ್ಕಿಂತ ಸ್ವಲ್ಪ ದೂರವಿದ್ದರೆನೇ ಚಂದ.
ಈಗ ನಾನು ವಿನೋದಕ್ಕೆ ಅಂತ
ಕೆಲವು ಪ್ರಸಂಗ ಬರೆದಿದ್ದೆ, ಅದು
ಬಾಲಿಶ, ಅದನ್ನು ನಾನು ದೋಷ
ಸಂಗತಿ ಅಂತ ಕರೆಯುವುದಿಲ್ಲ, ಅದನ್ನೂ
ಬರೆಯಬಹುದು,. ವರ್ತಮಾನದ ಒಂದು ಕಲಹವನ್ನೇ ಪ್ರಸಂಗವಾಗಿ
ಬರೆಯಬಹುದು. ಆದರೆ ಅದರಿಂದ ಏನು
ಪುರುಷಾರ್ಥವಿದೆ ಎನ್ನುವುದೇ ಪ್ರಶ್ನೆ. ಅದು ನಾಲ್ಕು ಕಾಲ
ಬಾಳಬೇಕು ಎಂದಾದರೆ ವರ್ತಮಾನವನ್ನು ಪ್ರಸಂಗವಾಗಿ
ತರುವಾಗಲೂ ಎಚ್ಚರದಿಂದಿರಬೇಕು.
• ಪ್ರಸಂಗ ರಚನೆಯಲ್ಲಿ ಭಾಷೆಯ
ಮಹತ್ವವನ್ನು ಹೇಗೆ ತೀರ್ಮಾನಿಸುತ್ತಿದ್ದಿರಿ?
ಭಾಷೆಯನ್ನು
ಎರಡು ರೀತಿಯಲ್ಲಿ ಅರ್ಥೈಸಿಕೊಳ್ಳಬೇಕಾಗುತ್ತದೆ. ಒಂದು ಪ್ರಸಂಗದ ಭಾಷೆ,
ಇನ್ನೊಂದು ಪ್ರಸಂಗದೊಳಗಿನ ಭಾಷೆ. ತೆಂಕು ಯಕ್ಷಗಾನದಲ್ಲಿ
ಕನ್ನಡ ಮತ್ತು ತುಳು ಎಂಬ
ಎರಡು ಪ್ರಸಂಗದ ಭಾಷೆಗಳಿವೆ. ನಾನು
ಇದರಲ್ಲಿ ಕನ್ನಡವನ್ನೇ ಹೆಚ್ಚು ಆಯ್ಕೆ ಮಾಡಿಕೊಂಡವ.
ಬೇರೆ ಭಾಷೆಯಲ್ಲಿ ನಾನು ನಾಟಕ ಅಥವಾ
ಇತರ ಸಾಹಿತ್ಯವನ್ನು ರಚಿಸಿದ್ದೇನೆ. ಆದರೆ ಯಕ್ಷಗಾನದಲ್ಲಿ ಕನ್ನಡವೇ
ನನ್ನ ಪ್ರಮುಖ ಅಭಿವ್ಯಕ್ತಿ ಮಾಧ್ಯಮ.
ಯಾಕೆಂದರೆ ಯಕ್ಷಗಾನಕ್ಕೆ ಕನ್ನಡವೇ ಹೆಚ್ಚು ಹೊಂದಿಕೆಯಾಗುವಂತದ್ದು.
ತುಳುವಿನಲ್ಲೂ ಹೆಚ್ಚು ಕತೆಗಳು, ಚರಿತ್ರೆ
ಪುರಾಣ ಇವೆಲ್ಲವೂ ಇರಬಹುದು ಆದರೆ ನನಗೆ
ಕನ್ನಡವೇ ಹೆಚ್ಚು ಆಕರ್ಷಣಿಯವಾಗಿ ಕಂಡಿದೆ.
ನಾನು ಪ್ರಸಂಗ ಬರೆಯುವ ಕಾಲದಲ್ಲಿ
ಅನೇಕ ಮೇಳಗಳಲ್ಲಿ ತುಳು ಪ್ರಸಂಗಗಳು ಬಹಳ
ಜನಪ್ರಿಯವಾದದ್ದು ಇದೆ. ಆದರೆ ಯಕ್ಷಗಾನದ
ಒಂದು ಕೃತಿ ಕೂಡ ನಾಟಕದ
ಹಾಗೇ ರಂಗ ಕೃತಿಯಾಗಿಯೂ ಸಾಹಿತ್ಯ
ಕೃತಿಯಾಗಿಯೂ ಮೂಡಿ ಬರಬೇಕೆನ್ನುವ ಆಶಯ
ನನ್ನಲ್ಲಿತ್ತು. ಆದ್ದರಿಂದಲೇ ನಾನು ಯಕ್ಷಗಾನ ಕೃತಿಯ
ಸಂಪುಟ ಹೊರತಂದಿರುವುದು. ಯಾವಾಗ ಪ್ರಸಂಗದೊಳಗಿನ ಭಾಷೆ
ಸಹೃದಯ ಓದುಗರಿಗೆ ನಿಲುಕುಂತದ್ದಾಗಿರುತ್ತದೋ ಆಗ ಅದು ಸಾಹಿತ್ಯ
ಕೃತಿಯಾಗಿಯೂ ಮೆಚ್ಚುಗೆ ಪಡೆಯುತ್ತದೆ. ಈ ಸಾಮಥ್ರ್ಯ ಎಲ್ಲಾ
ಭಾಷೆಗೂ ಇದೆ ಎನ್ನುವ ಸತ್ಯವನ್ನೂ
ತಿಳಿದುಕೊಳ್ಳಬೇಕು. ಆದರೆ ನನಗೆ ಮಾತ್ರ
ಯಕ್ಷಗಾನದಲ್ಲಿ ಕನ್ನಡದ ಪ್ರಸಂಗಗಳೇ ಹೆಚ್ಚು
ಆಪ್ಯಾಯಮಾನ.
• ನೀವು ರಚಿಸಿದ ಪ್ರಸಂಗಗಳಲ್ಲಿ
ನಿಮಗೆ ಹೆಚ್ಚು ಇಷ್ಟವಾದುದು ಯಾವುದು?
ಹಲವು
ಮಕ್ಕಳಿದ್ದರೆ ಅದರಲ್ಲಿ ನಿಮಗಿಷ್ಟವಾದುದು ಯಾವುದು
ಅಂತ ಕೇಳಿದರೆ ಹೇಳುವುದು ಕಷ್ಟ.
ಆದರೂ ಕೆಲವು ಸರ್ತಿ ನಮ್ಮ
ಮನಸ್ಸಿಗೆ ಸಂತೃಪ್ತಿಯನ್ನು ನೀಡಿದ ಕೆಲವು ಕೃತಿಗಳಿರುತ್ತವೆ.
ಬರೆದದ್ದೆಲ್ಲಾ ಉತ್ತಮ ಎಂದಲ್ಲ, ಸಹಸ್ರ
ಕವಚ ಮೋಕ್ಷ, ಕಾಯಕಲ್ಪ, ಮಹಾಬಲಿ
ಮಾಗದೇಂದ್ರ, ಮಹಾಶೂರ ಭೌಮಾಸುರ ಹೀಗೆ
ಒಂದಷ್ಟು ಪ್ರಸಂಗಗಳು ನನಗೆ ಒಂದಷ್ಟು ಪ್ರಸಿದ್ಧಿಯನ್ನು
ನೀಡಿವೆ. ಈ ಪ್ರಸಿದ್ಧಿಯ ಹಿಂದೆ
ಇದ್ದ ಕಲಾವಿದರನ್ನು ಸ್ಮರಿಸಲೇಬೇಕು. ನನಗೆ ಸಂತೃಪ್ತಿ ಏನೆಂದರೆ
ನಾನು ಬರೆದ ಪ್ರಸಂಗಗಳನ್ನು ಆಡಿದ
ಕಲಾವಿದರು ಅದನ್ನು ವಿಕಾರಗೊಳಿಸದೇ ಪ್ರಸಂಗಕ್ಕೆ
ನ್ಯಾಯ ಒದಗಿಸುವ ರೀತಿಯಲ್ಲಿ ಆ
ಕಾಲದಲ್ಲಿ ಆಡಿದ್ದಾರೆ. ಈಗ ಕಾಲ ಬದಲಾಗಿದೆ.
ಸಹಸ್ರ ಕವಚ ಮೋಕ್ಷ, ಕಾಯಕಲ್ಪ
ಇತ್ಯಾದಿ ಪ್ರಸಂಗಗಳಲ್ಲಿ ಕಲಾವಿದನ ಪ್ರಸ್ತುತಿಯಂತೂ ನನಗೆ
ಬಹಳ ಇಷ್ಟವಾದ ಸಂಗತಿ. ಪ್ರಸಂಗಗಳನ್ನು
ಆಡಿದ್ದರಲ್ಲಿ ಸೂರಿಕುಮೇರಿ ಗೋವಿಂದ ಭಟ್ಟರು ಕೆಲವು
ಪಾತ್ರಗಳಿಗೆ ನಾಯಕನಾಗಿ ಕತೆಯನ್ನು ಮೆರೆಸಿದ್ದಾರೆ. ಅವರ ಕಂಠಧ್ವನಿ ಶೃತಿಬದ್ಧವಾದುದು,
ಮಾತುಗಾರಿಕೆ ಆಕರ್ಷಣೀಯವಾದುದು, ಸಾಹಿತ್ಯ ಭಾಷೆ ಅಷ್ಟೇ
ಉತ್ತಮವಾದುದು, ಪುತ್ತೂರು ನಾರಾಯಣ ಹೆಗ್ಡೆಯವರು ಪ್ರತಿನಾಯಕನ
ಪಾತ್ರ ಮಾಡುತ್ತಿದ್ದರು. ಪಾತ್ರಕ್ಕೆ ಸರಿಯಾದ ಬಣ್ಣಗಾರಿಕೆ, ಸ್ವರ
ಗಾಂಭೀರ್ಯ ಇವುಗಳ ಮೂಲಕ ಪಾತ್ರವನ್ನು
ಗೆಲ್ಲಿಸುತ್ತಿದ್ದರು. ಪುಂಡುವೇಷದಲ್ಲಿ ಪುತ್ತೂರು ಶ್ರೀಧರ ಭಂಡಾರಿಯವರು ಪ್ರಸಂಗಕ್ಕೆ
ಕಳೆ ತಂದಿದ್ದರು. ಇವರಲ್ಲದೇ ಎಲ್ಲಾ ಕಲಾವಿದರು ಆಯಾ
ಪಾತ್ರಕ್ಕೆ ಗೌರವ ತರುವ ಕಾರ್ಯವನ್ನು
ಆ ಕಾಲದಲ್ಲಿ ಮಾಡುತ್ತಿದ್ದರು.
ಹಾಗಾಗಿ ನನ್ನ ಪ್ರಸಂಗಗಳು ಹೆಚ್ಚು
ಜನಪ್ರಿಯಗೊಳ್ಳಲು ಸಾಧ್ಯವಾಯಿತು.
• ಒಂದು ಕಾಲದಲ್ಲಿ ಧರ್ಮಸ್ಥಳ
ಮೇಳ ನಿಮ್ಮ ಪ್ರಸಂಗಗಳಿಂದಲೇ ಪ್ರಸಿದ್ಧಿಯನ್ನು
ಪಡೆದಿತ್ತು, ಇದಕ್ಕೆ ಏನೆನ್ನುತ್ತೀರಿ?
ಆ
ಕಾಲದಲ್ಲಿ ಧರ್ಮಸ್ಥಳ ಮೇಳ ಒಳ್ಳೆಯ ಯಕ್ಷಗಾನ
ಪಟುಗಳನ್ನೂ ವೇಷಧಾರಿಗಳಾಗಿ ಹೊಂದಿತ್ತು ಎನ್ನುವದೂ ಸತ್ಯ. ಎಷ್ಟೇ ಒಳ್ಳೆಯ
ಪ್ರಸಂಗವಿರಲಿ, ಭಾಗವತನಿರಲಿ ಕಲಾವಿದರಲ್ಲಿ ಸೃಜನಶೀಲತೆ ಇಲ್ಲದಿದ್ದರೆ ಪ್ರಸಂಗ ಮೆರೆಯುವುದಿಲ್ಲ. ನನ್ನ
ಸುದೈವವೋ ಏನೋ ಈ ಪ್ರಸಂಗಗಳಿಗೆ
ಕಡತೋಕರಂತಹಾ ಭಾಗವತರು ಸಿಕ್ಕಿದರು. ಕವಿ
ಹೃದಯವನ್ನು ಅರ್ಥ ಮಾಡಿಕೊಂಡು ಹಾಡಬಲ್ಲ
ಭಾಗವತ ಕಡತೋಕರು. ಕೆಲವು ಭಾಗವತರು ಕವಿಯನ್ನು
ಮೀರಿ ಹಾಡಬೇಕೆಂದು ಬಯಸುತ್ತಾರೆ. ಇದರಿಂದ ಕವಿಯ ಆಶಯಕ್ಕೆ
ಮತ್ತು ಪ್ರಸಂಗದ ನಡೆಗೆ ಚ್ಯುತಿಯಾಗುತ್ತದೆ.
ಆದರೆ ಸಮಷ್ಠಿ ಪ್ರಜ್ಞೆಯಿಂದ ಕೆಲಸ
ಮಾಡಿದರೆ ಎಲ್ಲವೂ ಯಶಸ್ವಿಯಾಗುತ್ತದೆ. ಒಂದು
ಪ್ರಮಾಣ ಬದ್ಧ ಹೊಂದಾಣಿಕೆ, ಅನ್ಯೋನ್ಯತೆ,
ಸೌಹಾರ್ದತೆ ಇದ್ದರೆ ಮಾತ್ರ ಯಕ್ಷಗಾನ
ಕಲೆ ಉಳಿಯುತ್ತದೆ. ಇಲ್ಲದಿದ್ದರೆ ವಿಕೃತಗಳನ್ನೇ ಕಾಣಬೇಕಾಗುತ್ತದೆ. ಧರ್ಮಸ್ಥಳ ಮೇಳದ ಆಡಳಿತ ಮತ್ತು
ಅದರಲ್ಲಿದ್ದ ಕಲಾವಿದರು ನನ್ನ ಪ್ರಸಂಗಗಳಿಗೆ ನ್ಯಾಯ
ಒದಗಿಸುವಲ್ಲಿ ಪ್ರಾಮಾಣಿಕವಾಗಿ ದುಡಿದಿದ್ದಾರೆ ಇದರಿಂದ ನನಗೂ ಮೇಳಕ್ಕೂ
ಪ್ರಸಿದ್ಧ ಸಿಗುವಂತಾಯಿತು.
• ಇವತ್ತು ಮೌಲಿಕ ಪ್ರಸಂಗಗಳು
ಬರುವುದು ಕಡಿಮೆ ಅಂತ ಏನಾದರು
ಇದೆಯೇ?
ಹೌದು,
ಹೊಸ ಪ್ರಸಂಗ, ಪ್ರಯೋಗಶೀಲತೆ ಇವೆಲ್ಲಾ
ಇಂದು ಕಡಿಮೆಯಾಗಿದೆ. ಅಪ್ಪಟವಾದ ಕಲಾ ಪ್ರೇಮ, ಪರಂಪರೆಯ
ಹಿನ್ನಲೆಯ ಪ್ರೇಮವಿದ್ದರೆ ಮೌಲಿಕ ಪ್ರಸಂಗಗಳು ಬರುತ್ತವೆ.
ಆದರೆ ಕುರುಡು ಅಥವಾ ಅಂಧಾಭಿಮಾನ
ಇರಬೇಕೆಂದಲ್ಲ. ಹಳೆಬೇರು ಹೊಸ ಚಿಗುರು
ಎನ್ನುವ ಪರಿಕಲ್ಪನೆಯಲ್ಲಿ ಹೊಸತಾದ ವಿಷಯಗಳು ಇರಬೇಕು.
ಈಗಿನ ಜೀವನ ಮೌಲ್ಯಗಳು ಇರಬೇಕಾಗುತ್ತದೆ.
ಹಾಗೆಂದು ಈಗಿನ ಕಾಲದ ವಿಕೃತಗಳು
ಸೇರದಂತೆ ಎಚ್ಚರ ವಹಿಸಬೇಕು. ಬದಲಾಗಿ
ಅದರ ಅನಾಹುತ ಅಥವಾ ಅದರ
ಪರಿಣಾಮವನ್ನು ಹೇಳುವಂತೆ ರೂಪುಗೊಳ್ಳಬೇಕು. ಹೆಚ್ಚು ಯೋಚಿಸಬೇಕಾದ ವಿಚಾರ
ಈ ಮೌಲಿಕ ಕೃತಿ.
• ಯಕ್ಷಗಾನ ಪ್ರಸಂಗ ಕಾವ್ಯ
ಹೇಗಿರಬೇಕು? ಅದರ ಶ್ರೇಷ್ಟತೆಯನ್ನು ತಿಳಿಸುವುದು
ಹೇಗೆ?
ಯಕ್ಷಗಾನಕ್ಕೆ
ಶಿಕ್ಷಣದಲ್ಲಿ ಆದ್ಯತೆಯನ್ನು ನೀಡದೇ ಇರುವ ಕಾರಣ
ಅದರ ಶ್ರೇಷ್ಟತೆಯನ್ನು ದಾಖಲಿಸಲು ನಮ್ಮಿಂದ ಸಾಧ್ಯವಾಗಿಲ್ಲ. ಅಂದರೆ
ಸ್ನಾತಕೊತ್ತರ ಪದವಿ ತರಗತಿಯಲ್ಲಿ ಪಠ್ಯವಾಗಿ
ಅಥವಾ ಉಪಪಠ್ಯವಾಗಿ ಯಕ್ಷಗಾನವನ್ನು ಇಟ್ಟುಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ. ಇದು
ಯಕ್ಷಗಾನದ ಶ್ರೇಷ್ಟತೆಯನ್ನು ವಿದ್ಯಾರ್ಥಿ ಜೀವನದಲ್ಲೇ ತಿಳಿದುಕೊಳ್ಳುವ ಅವಕಾಶದಿಂದ ವಂಚಿಸುತ್ತದೆ.
ಯಕ್ಷಗಾನ
ಕಾವ್ಯ ಇತರ ಯಾವ ಕಾವ್ಯಗಳಿಗಿಂತಲೂ
ಕಡಿಮೆಯಲ್ಲ. ಯಕ್ಷಗಾನ ಕಾವ್ಯ ಬರೆಯಬೇಕಾದರೂ
ಬಹಳಷ್ಟು ಪರಿಶ್ರಮ, ಪ್ರತಿಭೆ ಮತ್ತು ಆ
ಕ್ಷೇತ್ರದ ಬಗ್ಗೆ ವಿಶೇಷವಾದ ಜ್ಞಾನ
ಇರಬೇಕಾಗುತ್ತದೆ. ಛಂಧಸ್ಸಿನ ಹಿಡಿತ ಇರಲೇಬೇಕಾಗುತ್ತದೆ. ಅದಿಲ್ಲದಿದ್ದರೆ
ಪ್ರಸಂಗದ ರಚನೆ ಕಷ್ಟಸಾಧ್ಯ. ಆದ್ದರಿಂದ
ರಸಾನುಗುಣವಾದ ಛಂದಸ್ಸು ಗೊತ್ತಿರಬೇಕು. ಯಾವ
ಛಂದಸ್ಸಿಗೆ ಯಾವ ತಾಳ ಎನ್ನುವುದು
ಗೊತ್ತಾದಾಗ ಮಾತ್ರ ಒಳ್ಳೆಯ ಪ್ರಸಂಗ
ರಚನೆ ಸಾಧ್ಯ. ಆ ವೇಗ,
ಲಯಾಗಾರಿಕೆ ಇವೆಲ್ಲದರ ಅರಿವಿದ್ದ ಕವಿ ಪ್ರಸಂಗ ರಚಿಸಿದರೆ
ಅದು ಶ್ರೇಷ್ಟ ಕಾವ್ಯದ ಸಾಲಿಗೂ
ನಿಲ್ಲತ್ತದೆ. ಹಾಡುಗಾರಿಕೆ ಹಿನ್ನಲೆ ಸಾಂಗತ್ಯದ ಅರಿವಿರಬೇಕು.
ವೇಷಭೂಷಣಕ್ಕೂ ರಸಾನುಭವಕ್ಕೂ ತಾಳೆ ಬೀಳಬೇಕು. ಅನ್ಯೋನ್ಯವಾಗಿರಬೇಕು.
ಇದು ಎಲ್ಲ ವಿಭಾಗದಲ್ಲೂ ಬೇಕು.
ಪ್ರಸಂಗಕರ್ತನಿಗೆ
ಪದ್ಯದ ಅರಿವಿರುವಂತೆ ಸಂಗೀತದ ಅರಿವಿರುವುದೂ ಮುಖ್ಯ.
ಆದರೆ ನನಗೆ ಶಾಸ್ತ್ರೀಯವಾದ ಸಂಗೀತದ
ಅರಿವಿರಲಿಲ್ಲ. ಹಾಗೆಂದು ನಾನು ಒಂದು
ಪದ್ಯಕ್ಕೆ ಒಬ್ಬ ಕವಿ ಯಾವ
ರಾಗ ತಾಳವನ್ನು ಹಾಕಿದ್ದಾನೆ ಎನ್ನುವುದನ್ನು ಪತ್ತೆ ಹಚ್ಚಲು ಸಾಧ್ಯವಾದಷ್ಟು
ಸಂಗೀತ ಜ್ಞಾನವನ್ನು ಇಟ್ಟುಕೊಂಡಿದ್ದೇನೆ. ಅದು ಬೇಕು ಎನ್ನುವುದು
ನನ್ನ ಅಭಿಪ್ರಾಯ. ಇವೆಲ್ಲವೂ ಪರಸ್ಪರ ಅನ್ಯೋನ್ಯ, ರಾಗ,
ತಾಳ, ಛಂದಸ್ಸು ಎಲ್ಲವೂ ಇರಬೇಕು.
ಕವಿಯ
ಕಲ್ಪನೆ ಮೀರಿ ಕೆಲವು ಸಂದರ್ಭದಲ್ಲಿ
ಭಾಗವತ ಸ್ವಾತಂತ್ರ್ಯ ತೆಗೆದುಕೊಳ್ಳುತ್ತಾನೆ. ಕೆಲವು ಬಾರಿ ಇದು
ಯಶಸ್ವಿಯಾಗುತ್ತದೆ. ಅನೇಕ ಬಾರಿ ಆಭಸವಾಗುತ್ತದೆ.
ನನ್ನ ಪದ್ಯಗಳನ್ನು ಹಾಗೆ ಹಾಡಿದ್ದೇ ಕಡಿಮೆ.
ಆ ಕಾಲದಲ್ಲಿ ಅನೇಕ
ಉತ್ತಮ ಭಾಗವತರಿದ್ದರು, ಈ ಕಾಲದಲ್ಲಿ ಅದನ್ನು
ಹುಡುಕುವುದೇ ಕಷ್ಟ. ನಿಜವಾಗಿ ಒಂದು
ಪ್ರಸಂಗ ಭಾಗವತನ ನಿರ್ದೇಶನದಲ್ಲಿಯೇ ನಡೆಯಬೇಕು.
ಇಲ್ಲಿ ಪಾತ್ರದಾರಿ ನಿರ್ದೇಶಕನ ಸೂಚನೆಯನ್ನು ಪಾಲಿಸಿ ಪಾತ್ರ ನಿರ್ವಹಣೆ
ಮಾಡಬೇಕು. ಕಲಾವಿದ ಎಷ್ಟೇ ದೊಡ್ಡ
ವ್ಯಕ್ತಿಯಾದರೂ ಅವನು ತನ್ನ ಪರಿಧಿಯನ್ನು
ಉಲಂಘಸಿ ಮೆರೆಯಬಾರದು.
ಅಮೃತರ ಪ್ರಸಂಗಗಳು
ಒಂದು
ಮೇಳ ವರ್ಷಕ್ಕೊಂದು ಪ್ರಸಂಗವನ್ನು ತೆಗೆದುಕೊಂಡು ಆಡಿ ತೋರಿಸಿದರೂ ಹೆಚ್ಚು
ಕಡಿಮೆ ನಲವತ್ತು ವರ್ಷ ಆಡಬಹುದಾದಷ್ಟು
ಪ್ರಸಂಗಗಳನ್ನು ರಚಿಸಿಕೊಟ್ಟಿದ್ದಾರೆ ಅಮೃತ ಸೋಮೇಶ್ವರರು.
1978 ರಿಂದ ನಿರಂತರ ಹಲವು ವರ್ಷ
ಹೊಸಹೊಸ ಪ್ರಸಂಗಗಳನ್ನು ಧರ್ಮಸ್ಥಳ ಮೇಳಕ್ಕೆ ರಚಿಸಿಕೊಟ್ಟು ಆ
ಮೇಳಕ್ಕೆ ಹೊಸತನವನ್ನು ನೀಡಿದ್ದು ಈಗ ಇತಿಹಾಸ. ಹಲವು ದಾಖಲೆಯ ಪ್ರಸಂಗಗಳನ್ನು
ರಚಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಮತ್ತೆ
ನೆನಪಿಸುವ ಉದ್ದೇಶಕ್ಕಾಗಿ ಅದನ್ನಿಲ್ಲಿ ಪ್ರಕಟಿಸುತ್ತೇವೆ ಇದರಲ್ಲಿ ಬಹುತೇಕ ಪ್ರಸಂಗಗಳು
ಮುದ್ರಣಗೊಂಡಿವೆ ಎನ್ನುವುದೇ ಹೆಮ್ಮೆಯ ಸಂಗತಿ. ಅಮರ
ಶಿಲ್ಪಿ ವೀರ ಕಲ್ಕುಡ(1978), ಸಹಸ್ರ
ಕವಚ ಮೋಕ್ಷ(1981), ಕಾಯಕಲ್ಪ(1982), ಅಮರವಾಹಿನಿ(1983), ತ್ರಿಪುರ ಮಥನ(1984), ಮಹಾಕಲಿ
ಮಗದೇಂದ್ರ(1985), ವಂಶವಾಹಿನಿ(1986), ಮಾಹಾಶೂರ ಭೌಮಾಸುರ(1987), ಚರ್ಕವರ್ತಿ
ದಶರಥ(1988), ಆದಿಕವಿ ವಾಲ್ಮೀಕಿ(1988), ಸಾರ್ವಭೌಮ
ಸಹಸ್ರಾನೀಕ(1989), ಚಾಲುಕ್ಯ ಚಕ್ರೇಶ್ವರ(1989), ಅಂಧಕ
ಮೋಕ್ಷ(1990), ಚಂದ್ರಮತೀ ಸ್ವಯಂವರ(1989), ಭುವನ ಭಾಗ್ಯ(1991), ಘೋರ
ಮಾರಕ(1991), ಪೌಂಡ್ರಕ
ವಾಸುದೇವ, ಆಚಾರ್ಯ ವಿಶ್ವರೂಪ, ಶಬ್ದವೇದಿ,
ದಂಭ ದಮನ, ಗುರು ತೇಜ,
ಗಂಗಾತರಣ, ವಾತಾಪಿ ಜೀರ್ಣೋಭವ, ಅರುಣ
ಸಾರಥ್ಯ, ಛಾಯಾವತರಣ, ನಿಸರ್ಗ ವಿಜಯ, ಸಹನಾ
ಸಂದೇಶ, ರುಧಿರ ಮೋಹಿನಿ, ಏಕಶೃಂಗ,
ಅಂಗುಲಿ ಮಾಲಾ, ಮದಿರಾಸುರ ಮರ್ಥನ, ಮಹಾದಾನಿ
ಬಲೀಂದ್ರ, ಸಪ್ತ ಮಾತೃಕೆಯರು, ಶ್ರೀ
ಭಗವತಿ ಚರಿತೆ, ಸಂಗ್ಯಾ ಬಾಳ್ಯಾ,
ಸತ್ಯನಾಪುರದ ಸಿರಿ, ಪುತ್ತೂರ್ದ ಮುತ್ತು,
ಪಾದುಕಾ ಪ್ರದಾನ ಇತ್ಯಾದಿ.
ಅಮೃತರ ಪ್ರಸಂಗ,
ಹಿರಿಯ
ಕಲಾವಿದರು
ಕಂಡಂತೆ......
ಮಾತಿನ
ಮಧ್ಯೆ, ನನ್ನ ಪ್ರಸಂಗದ ಯಶಸ್ಸಿನ
ಹಿಂದೆ ಕಲಾವಿದರ ಕೊಡುಗೆ ದೊಡ್ಡದು,
ಆ ಕಾಲದಲ್ಲಿ ದರ್ಮಸ್ಥಳ
ಮೇಳದಲ್ಲಿದ್ದ ಕಲಾವಿದರು ಪಾತ್ರದ ಜೀವಂತಿಕೆಗೆ ಕಾರಣರಾದರೆಂದು
ಅಮೃತರು ಹೇಳಿದರು. ಹಾಗಾಗಿ ಪಾತ್ರಗಳ ಮೂಲಕ
ಮೆರೆದ ಹಿರಿಯ ಕಲಾವಿದರ ಮಾತು
ಹೀಗಿದೆ.
“ಪ್ರಸಂಗ
ಹೇಗಿರಬೇಕೋ ಹಾಗೆ ಪ್ರಸಂಗ ರಚಿಸಿದವರು
ಅಮೃತ ಸೋಮೇಶ್ವರರು. ನನಗೆ ಬೇಕಾದ ಹಾಗೇ
ಪ್ರಸಂಗ ರಚನೆಯಾಗುತ್ತಿತ್ತು ಎಂದು ಜನ ಹೇಳುತ್ತಿದ್ದರು.
ಇದು ಎಲ್ಲಾ ಕಲಾವಿದರಿಗೂ ಅನ್ವಯವಾಗುತ್ತಿತ್ತು
ಎನ್ನುವ ಅನಿಸಿಕೆ ನನ್ನದು. ಆದರೆ
ನನ್ನನ್ನು ಎತ್ತಿ ಹಿಡಿಯುವ ಹಾಗೆ
ಅನೇಕ ಪ್ರಸಂಗಗಳು ಇದ್ದದ್ದು ಹೌದು. ಪೌರಾಣಿಕ ಪ್ರಸಂಗಗಳಲ್ಲಿ
ಆದರ್ಶ ಇರುತ್ತಿತ್ತು, ದಿಕ್ಕು ಇರುತ್ತಿತ್ತು. ಪ್ರಸಂಗದ
ಆಶಯ ಪರಿಣಾಮವನ್ನು ಉಂಟುಮಾಡುವ ಹಾಗೇ ಇತ್ತು. ಪದ್ಯ
ಕೇಳಿಯೇ ಅರ್ಥ ಹೇಳುವ ಹಾಗೆ
ಇತ್ತು. ಹೊರಗಿನಿಂದ ತರಬೇಕಾದ ಅಗತ್ಯ ಇರಲಿಲ್ಲ,”
ಎಂದು ಹೇಳಿದವರು ಅಮೃತರ ಪ್ರಸಂಗದ ‘ಚಾರ್ವಾಕ’
ಪಾತ್ರಕ್ಕೆ ಹೊಸ ಜೀವ ಕೊಟ್ಟ
ಹಿರಿಯ ಕಲಾವಿದ ಕುಂಬ್ಳೆ ಸುಂದರ
ರಾವ್.
“ಹೊಸ
ನೋಟದಿಂದ ಪೌರಾಣಿಕ ಪ್ರಸಂಗಗಳನ್ನು ರಚಿಸಿದವರು
ಅಮೃತರು, ಅವರ ಪ್ರಸಂಗಗಳನ್ನು ಸರಿಯಾಗಿ
ನೋಡಿದರೆ ಬೇರೆ ಅಕರಗಳನ್ನು ನೋಡುವ
ಅಗತ್ಯವಿರುವುದಿಲ್ಲ. ಕುಣಿತ, ಅಭಿನಯ, ಅರ್ಥ,
ಸಂದೇಶ, ಸರಳತೆ ಇವೆಲ್ಲದಕ್ಕೂ ಉನ್ನತ
ಅವಕಾಶವನ್ನು ಈ ಪ್ರಸಂಗಗಳು ನೀಡುತ್ತಿದ್ದವು.
ಹಾಗಾಗಿ ಎರವಲು ಸಾಹಿತ್ಯದ ಅಗತ್ಯವೇ
ಇಲ್ಲ ಎನ್ನುವಷ್ಟರ ಮಟ್ಟಿಗೆ ಈ ಪ್ರಸಂಗಪಠ್ಯ
ಉತ್ತಮವಾಗಿತ್ತು. ಯಕ್ಷಗಾನದ ಸಮಗ್ರ ಹಿನ್ನಲೆಯನ್ನು ಪ್ರತಿನಿಧಿಸುವ
ಪ್ರಂಸಂಗಗಳನ್ನು ಅಮೃತರು ಆ ಕಾಲದಲ್ಲಿ
ಕೊಟ್ಟಿದ್ದರು. ಅದನ್ನು ರಂಗಪ್ರಯೋಗ ಹೇಗೆ
ಮಾಡಬಹುದು ಎನ್ನುವುದನ್ನು ಕಲಾವಿದರಾದ ನಾವು ತೋರಿಸಿಕೊಟ್ಟಿದ್ದೆವು, ಅದರಲ್ಲಿ
ತೃಪ್ತಿಕರ ಯಶಸ್ಸನ್ನೂ ಸಾಧಿಸಿದ್ದೇವೆ” ಎಂದು ಹೇಳುತ್ತಾರೆ ಯಕ್ಷ
ತಿರುಗಾಟದಲ್ಲಿ ದಾಖಲೆ ನಿರ್ಮಿಸಿದ ಮೇರು
ಕಲಾವಿದ ಸೂರಿಕುಮೇರಿ ಗೋವಿಂದ ಭಟ್.
“ದುಷ್ಟತ್ವವನ್ನು
ಮೈಗೂಡಿಸಿಕೊಂಡರೆ ಏಳಿಗೆ ಇಲ್ಲ ಎನ್ನುವುದೇ
ಅವರ ಪ್ರಸಂಗಗಳಲ್ಲಿ ಇರುವ ಆಶಯ. ಅವರ ಬಹುತೇಕ ಪ್ರಸಂಗಗಳ
ಒಬ್ಬ ಕಲಾವಿದನಾಗಿ ನಾನು ಅನೇಕ ಮೌಲ್ಯಗಳನ್ನು
ಕಂಡುಕೊಂಡಿದ್ದೇನೆ. ದೇವತೆಗಳ ಮಗನಾದರೂ ಒಳ್ಳೆಯವರ
ಸಂಸರ್ಗವಿಲ್ಲದಿದ್ದರೆ ಆತನೂ ದುಷ್ಟನಾಗುತ್ತಾನೆ, ಸುಖ,
ಶಾಂತಿ ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ಎಷ್ಟೇ ದೊಡ್ಡವನಾದರೂ ಸಮಕಾಲೀನ
ಮೌಲ್ಯಗಳನ್ನು ಮೈಗೊಡಿಸಿಕೊಳ್ಳಲೇಬೇಕು ಎನ್ನುವ ಆಶಯವನ್ನು ಅಮೃತರ
ಪ್ರತಿಯೊಂದು ಪ್ರಸಂಗದಲ್ಲೂ ಕಾಣಲು ಸಾಧ್ಯ. ಅವರ
ಮೌಲ್ಯಯುತ ಪ್ರಸಂಗಗಳು ಮೇಳಕ್ಕೂ ಒಳ್ಳೆಯ ಹೆಸರನ್ನು
ತಂದುಕೊಟ್ಟಿದೆ. ಕಲಾವಿದರನ್ನೂ ಬೆಳೆಸಿದೆ. ಅವರ ಪ್ರಸಂಗಗಳಿಗೆ ಸಿಕ್ಕಿದ
ಜನಬೆಂಬಲವೇ ಅದರ ಜನಪ್ರಿಯತೆಗೆ ಸಾಕ್ಷಿ”,
ಇದು ಧರ್ಮಸ್ಥಳ ಮೇಳದಲ್ಲಿ ಅಮೃತರ ಪ್ರಸಂಗದ ಪಾತ್ರ ನಿರ್ವಹಿಸಿದ ಹಿರಿಯ
ಯಕ್ಷಕಲಾವಿದ ಉಬರಡ್ಕ ಉಮೇಶ ಶೆಟ್ಟಿಯವರ
ಅಭಿಪ್ರಾಯ.
ಯಕ್ಷಾಮೃತ ಗಳಿಗೆ......3
ಕಲೆ ಮತ್ತು ಕಲಾವಿದನ
ಅನುಸಂಧಾನವೇ
ಪ್ರದರ್ಶನ
• ಯಕ್ಷಗಾನ ಪ್ರಸಂಗಗಳನ್ನು ಕಾವ್ಯಗಳೆಂದು
ಪರಿಗಣಿಸದೇ ಇರುವುದಕ್ಕೆ ಕಾರಣಗಳೇನು?
ಯಕ್ಷಗಾನ
ಪ್ರಸಂಗಗಳು ನಡುಗನ್ನಡ ಕಾವ್ಯಗಳು. ಇಂದು ಹೊಸಗನ್ನಡ ಕಾವ್ಯಗಳನ್ನು
ಸಲೀಸಾಗಿ ಅಧ್ಯಯನ ಮಾಡುವುದನ್ನು ಕಾಣುತ್ತಿದ್ದೇವೆ.
ಆದರೆ ಹಳೆಗನ್ನಡ ಮತ್ತು ನಡುಗನ್ನಡಗಳ ಅಧ್ಯಯನ
ಕ್ಷೀಣಿಸುತ್ತಿದೆ. ನಡುಗನ್ನಡ ರಚನೆಯನ್ನು ಅಧ್ಯಯನ ಮಾಡುವ ಆಸಕ್ತಿ
ಇರಬೇಕು. ಅದಕ್ಕಾಗಿ ವಿಶ್ವವಿದ್ಯಾನಿಲಂiÀiಗಳು ಪ್ರಸಂಗ ಕಾವ್ಯವನ್ನೂ
ಪಠ್ಯವಾಗಿ ಅಂಗೀಕರಿಸಬೇಕು. ಆಗ ಅದರ ಬೆಳವಣಿಗೆ
ಸಾಧ್ಯ, ಮಾತ್ರವಲ್ಲ ಮುಂದೆ ಪ್ರಸಂಗಕರ್ತರ ಕೊರತೆಯನ್ನೂ
ನೀಗಿಸಲು ಸಾಧ್ಯವಾಗುತ್ತದೆ ಎನ್ನುವ ಅಭಿಪ್ರಾಯ
ನನ್ನದು.
• ಮಾತೇ ಮೆರೆಯುತ್ತಿದ್ದ ಕಾಲದಲ್ಲಿ
ನಿಮ್ಮ ಹೆಚ್ಚಿನ ಪ್ರಸಂಗಗಳು ರಚನೆಯಾಗಿವೆ.
ಹೇಗೆ ಈ ಸವಾಲನ್ನು ನಿಮ್ಮ
ಪ್ರಸಂಗಳು ನಿಭಾಯಿಸಿದವು?
ಹೌದು,
ಯಕ್ಷಗಾನ ಪ್ರಸಂಗಗಳಲ್ಲಿ ಮಾತೇ ಪ್ರಧಾನವೆಂದು ತಿಳಿದ
ಕಾಲಘಟ್ಟದಲ್ಲೇ ನನ್ನ ಅನೇಕ ಪ್ರಸಂಗಗಳು
ರಚನೆಯಾಗಿವೆ. ಯಕ್ಷಗಾನ ಸರ್ವಾಂಗ ಸುಂದರ
ಕಲೆ ಎನ್ನುವ ನೆಲೆಯಲ್ಲಿ ನಾನು
ಮಾತನ್ನೇ ಮರೆಯುವುದಕ್ಕೆ ಕಡಿಮೆ ಅವಕಾಶವಿರುವಂತೆ ಪ್ರಸಂಗ
ರಚಿಸಿದ್ದೇನೆ. ಶೇಣಿ, ಸಾಮಗ, ಕುಂಬ್ಳೆ,
ಅಥವಾ ಇತ್ತೀಚಿನ ಹಲವು ಪ್ರಸಿದ್ಧ ಕಲಾವಿದರು
ಮಾತಿನಲ್ಲೇ ಪ್ರೌಢಿಮೆ ಮೆರೆದಿದ್ದಾರೆ. ಅಂದರೆ
ಯಕ್ಷಗಾನದಲ್ಲಿ ಮಾತಿಗೆ ಮಾನ್ಯತೆ ಇದೆ
ಎನ್ನುವುದನ್ನು ಒಪ್ಪಿಕೊಂಡರೂ ಅಸಂಬಂಧ್ಧ ಮಾತುಗಳಿಗೆ ಅವಕಾಶವಿಲ್ಲ. ಯಾವುದೇ ಪಾತ್ರವಾದರೂ ಪಾತ್ರದ
ಮಿತಿಯನ್ನು ಮೀರಿ ಮಾತನ್ನು ಬೆಳೆಸುವುದು
ಅಕ್ಷಮ್ಯ. ಒಂದು ಕಾಲದಲ್ಲಿ ಮಾತೇ
ಮುಖ್ಯವಾಗಿತ್ತು. ಆಗ ಮಾತುಗಾರರು ಮೆರೆದರು.
ಈಗ ಭಾಗವತರು ಮೆರೆಯುತ್ತಿದ್ದಾರೆ. ಮುಂದೆ
ವೇಷಧಾರಿಗಳೇ ಮೆರೆಯುವ ಸಾಧ್ಯತೆ ಇದೆ.
ಇದು ಯಕ್ಷಗಾನದ ಸಮಗ್ರತೆಯ ನೆಲೆಯಲ್ಲಿ ಅಪಚಾರ ಹಾಗೂ ಪ್ರಮಾಣ
ಬದ್ಧತೆಯ ಕೊರತೆ ಎನ್ನುವ ಅನಿಸಿಕೆ
ನನ್ನದು. ಅನ್ಯೋನ್ಯತೆ ತಪ್ಪಿದ್ದೇ ಆದರೆ ಅದರ ಮೌಲ್ಯ
ವಿರೂಪಗೊಳ್ಳುತ್ತದೆ.
ಕೆಲವು
ಭಾಗವತರಿದ್ದಾರೆ ಒಂದೇ ಪದ್ಯನ್ನು ಮತ್ತೆ
ಮತ್ತೆ ಆಲಾಪಿಸಿ ಹಾಡುವವರು. ಹಾಗೆ
ಹಾಡಿದರೆ ಮುಂದೆ ಕುಣಿಯುವ ಕಲಾವಿದನ
ಗತಿ ಏನು? ಹಾಡಿಗೆ ಚಪ್ಪಾಳೆ
ಸಿಗಬಹುದು, ಆದರೆ ವೇಷಧಾರಿಯ ದೂಷಣೆ
ಆಗುವುದಿಲ್ಲವೇ? ಸಮಗ್ರತೆ ಎನ್ನುವ ಪರಿಕಲ್ಪನೆಗೆ
ಧಕ್ಕೆಯಾಗುವುದಿಲ್ಲವೇ? ಇದನ್ನು ಆರೋಗ್ಯಕರ ಬೆಳವಣಿಗೆ
ಎಂದು ಕರೆಯಲು ಹೇಗೆ ಸಾಧ್ಯ?
ಯಕ್ಷಗಾನದಲ್ಲಿ ನಿರ್ದೇಶಕನೆಂದು ಕರೆಯಲ್ಪಡುವ ಭಾಗವತನೇ ಹೀಗೆ ಮಾಡಿದರೆ
ಯಕ್ಷಗಾನ ಬೆಳೆಯುವುದು ಹೇಗೆ? ಆದ್ದರಿಂದ ನನ್ನ
ಪ್ರಸಂಗದಲ್ಲಿ ಅತಿಯಾದ ಮಾತನ್ನೂ ಆಲಾಪನೆಯನ್ನೂ
ನಾನು ಇಷ್ಟಪಡುತ್ತಿರಲಿಲ್ಲ. ಇದನ್ನು ಕಲಾವಿದರೂ ಅರಿತಿದ್ದರು.
ಯಕ್ಷಗಾನದಲ್ಲಿ
ವೈಯಕ್ತಿಕ ಪ್ರತಿಷ್ಠೆ ಬಿಟ್ಟು ಸಾಮುದಾಯಿಕ ನಿರ್ವಹಣೆಯನ್ನು
ಮಾಡುವುದೇ ಹೆಚ್ಚು ಸರಿ. ಕಲಾವಿದ
ಜನರ ಅಭಿರುಚಿಯನ್ನು ಬದಲಾಯಿಸುತ್ತಿರುವುದು ಯಕ್ಷಗಾನ ಕ್ಷೇತ್ರಕ್ಕೊಂದು ಬಹುದೊಡ್ಡ
ಸವಾಲು. ಸಮಗ್ರ ಯಕ್ಷಗಾನದ ಬದಲು
ಅದನ್ನು ತುಣುಕುಗಳಾಗಿ ಆಸ್ವಾದಿಸುವ ಕಾಲ ಹೆಚ್ಚಾಗಿದೆ. ಇದು
ಪರಂಪರೆಯ ದೃಷ್ಟಿಯಿಂದ ಅಪಾಯ.
• ಇಂದಿನ ಕಾಲಘಟ್ಟದಲ್ಲಿ ಕಲಾವಿದ
ಬದಲಾಗಬೇಕೋ? ಇಲ್ಲಾ ಪ್ರೇಕ್ಷಕ ಬದಲಾಗಬೇಕೋ?
ಯಕ್ಷಗಾನ
ಪ್ರೇಕ್ಷಕ ಪ್ರೇರಿತ ಕಲೆ. ಅಲ್ಲಿ
ಇಬ್ಬರೂ ಪರಸ್ಪರ ಪೂರಕ. ಹಿಂದೆ
ಯಕ್ಷಗಾನ ಕಲೆಯನ್ನು ವಿಕ್ಷಿಸಲು ವಿದ್ವತ್ ಜನರೂ ಬರುತ್ತಿದ್ದರು.
ಅವರು ಮಾತುಗಾರ ಕಲಾವಿದರ ಮಾತನ್ನು
ಕೇಳಿ ಹುರಿದುಂಬಿಸಿದ ಕಾರಣ ಮಾತಿಗೆ ಮಾನ್ಯತೆ
ಸಿಕ್ಕಿತು. ಇವತ್ತು ರಂಜನೆಯನ್ನು ಬಯಸುವವರು
ಹೆಚ್ಚಿನ ಪ್ರಮಾಣದಲ್ಲಿ ಯಕ್ಷಗಾನವನ್ನು ನೋಡುತ್ತಿದ್ದಾರೆ. ಇದರಿಂದ ವಿದ್ವತ್ಪೂರ್ಣ
ಮಾತಿಗಿಂತ ರಂಜನೆ ನೀಡುವ ಕುಣಿತ,
ಹಾಡುಗಳು, ಹಾಸ್ಯ ಮೆರೆಯುತ್ತಿವೆ. ಯಕ್ಷಗಾನ
ಎನ್ನುವುದು ಪ್ರೌಢಿಮೆಯನ್ನೂ ರಂಜನೆಯನ್ನೂ ನೀತಿಯನ್ನೂ ನೀಡುವ ಕಲೆ. ಅದನ್ನು
ನಿಭಾಯಿಸುವ ಚಾಕಚಕ್ಯತೆ ಓರ್ವ ಕಲಾವಿದನಿಗೂ ಬೇಕು,
ಅದನ್ನು ಅರಿತು ಆಸ್ವಾಧಿಸುವ ಜಾಣ್ಮೆ
ಓರ್ವ ಪ್ರೇಕ್ಷಕನಿಗೂ ಬೇಕು. ಪ್ರೇಕ್ಷಕ ಸುಶಿಕ್ಷಿತನಾದಷ್ಟು
ಕಲೆ ಬೆಳೆಯುತ್ತದೆ. ಯಕ್ಷಗಾನಲ್ಲಿ ಇರುವ ಸಿದ್ಧ ಚೌಕಟ್ಟನ್ನು
ಪಾಲಿಸದೇ ಇದ್ದಷ್ಟು ಅದು ಸಮಸ್ಯೆಗೆ
ಈಡಾಗುವುದು ಹೆಚ್ಚು. ಯಕ್ಷಗಾನದ ಪ್ರತಿಯೊಂದು
ಪ್ರಕ್ರಿಯೆಗೂ ಒಂದು ಹಿನ್ನಲೆ ಇರುತ್ತದೆ. ಅದು
ಬಿಟ್ಟು ನಾಟಕೀಯ ರೀತಿಯಲ್ಲಿ ಪ್ರಸ್ತುತ
ಪಡಿಸಿದರೆ ಅದರ ಔಚಿತ್ಯಕ್ಕೆಕ್ಕೆ ತೊಂದರೆಯಾಗುತ್ತದೆ.
ಯಕ್ಷಗಾನದಲ್ಲಿ ಪ್ರತಿಯೊಂದು ವೇಷ, ಬಣ್ಣ, ಹೆಜ್ಜೆ,
ಅಭಿನಯ, ಮಾತುಗಳಿಗೆ ಒಂದು ನಿರ್ಧಿಷ್ಟ ಉದ್ದೇಶವಿರುತ್ತದೆ.
ಇದನ್ನು ಅರಿತು ವೇಷ ಮಾಡಬೇಕಾದುದು
ಕಲಾವಿದನ ಜವಾಬ್ಧಾರಿ. ಕಲಾವಿದನ ಕಲಿಕೆ ನಡೆಯಬೇಕಾದುದೂ
ಇಲ್ಲಿಯೇ. ಆನರಿಂದ ಚಪ್ಪಾಳೆ ಸಿಗುತ್ತದೆ
ಎನ್ನುವ ಏಕೈಕ ಕಾರಣಕ್ಕೆ ಚೌಕಟ್ಟನ್ನು
ಬಿಟ್ಟು ಹೋಗುವುದು ಆತನ ಕಲಿಜಕೆಯ ಕೊರತೆಯನ್ನು
ತೋರಿಸುತ್ತದೆ. ಇದರಿಂದ ಯಕ್ಷಗಾನಕ್ಕೆ ಅನ್ಯಾಯವಾಗುತ್ತದೆ.
ಇಲ್ಲಿ ಕಲಾವಿದನ ಕಲಿಕೆ ಅತ್ಯಂತ
ಮುಖ್ಯವಾಗಿರುತ್ತದೆ. ಆತನಲ್ಲಿ
ಸ್ವಸ್ವರೂಪ ಜ್ಞಾನ ಇಲ್ಲದೇ ಇದ್ದಾಗ
ಆತ ಏನು ಮಾಡಿದರೂ ಎನ್ನುವುದು
ಆಗಿ ಬಿಡುತ್ತದೆ. ಇದು ಬೆಳವಣಿಗೆಯ ದೃಷ್ಟಿಯಿಂದ
ಎಂದಿಗೂ ಸರಿಯಲ್ಲ.
• ಕಲಾವಿದನ ಕಲಿಕೆ ಹೇಗಿರಬೇಕು?
ಕಲಾವಿದರು
ಮೂಲತಾ ತಾನು ಯಾವ ಕ್ಷೇತ್ರದಲ್ಲಿ
ದುಡಿಯುತ್ತಿದ್ದೇನೆ, ಅದರಲ್ಲಿ ಹೇಗಿದ್ದೇನೆ ಮತ್ತು
ಹೇಗಿರಬೇಕು ಎನ್ನುವ ತಿಳಿವಳಿಕೆಯನ್ನು ಅತೀ
ಅಗತ್ಯವಾಗಿ ಬೆಳೆಸಿಕೊಳ್ಳಬೇಕು. ಅಧ್ಯಯನದ ಹಿನ್ನಲೆಯಲ್ಲಿ ಆತ
ಬೆಳೆಯಬೇಕು. ವೇಷ ಹಾಕಿದ ತಕ್ಷಣ
ಕಲಾವಿದನಾಗಬೇಕೆಂದು ಬಯಸುವುದು ತಪ್ಪು. ಪದ್ಯ ಅರ್ಥ
ಮಾಡಿಕೊಳ್ಳಬೇಕು, ಸ್ವತಂತ್ರವಾಗಿ ಅರ್ಥ ಹೇಳುವ ಸಾಹಿತ್ಯ
ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಪ್ರಸಂಗಕರ್ತರೂ ತಿಳಿದುಕೊಳ್ಳಬೇಕಾದ ಒಂದು ಸತ್ಯ ಇದೆ,
ಅದೇನೆಂದರೆ, ಯಕ್ಷಗಾನ ಪದ್ಯಗಳು ಬಹಳ
ಪಾಂಡಿತ್ಯಪೂರ್ಣವಾಗಿರಬೇಕೆಂದೇನೂ
ಇಲ್ಲ, ಇರಬಾರದು ಕೂಡ. ಒಂದು
ಕೇಳ್ಮೆಯಿಂದ ಅದು ಕಲಾವಿದನಿಗೆ ಅರ್ಥವಾಗಬೇಕು.
ಕೆಲವರು ತಮ್ಮ ಪಾಂಡಿತ್ಯವನ್ನು ಯಕ್ಷಗಾನ
ಕೃತಿಯಲ್ಲಿ ತೋರ್ಪಡಿಸುವುದಿದೆ, ಹಾಗೆ ಮಾಡಿದ್ದಲ್ಲಿ ಅದು
ಕಲಾವಿದರಿಗೆ ತೊಂದರೆ ಕೊಡುತ್ತದೆ. ಆದರೆ
ಯಕ್ಷಗಾನ ಕಲೆಯನ್ನು ಜನಸಾಮಾನ್ಯರು ಬೆಳೆಸಿದ್ದು ಮತ್ತು ಕಲಾವಿದರೂ ಜನಸಾಮಾನ್ಯರಾಗಿಯೇ
ಬಂದವರು. ಜನರನ್ನು ಸೆಳೆಯಲು ಸುಲಭೀಕರಣದ
ದಾರಿಯನ್ನು ಈ ಕ್ಷೇತ್ರದಲ್ಲಿ ದುಡಿಯುವ
ಎಲ್ಲರೂ ಕಂಡುಕೊಳ್ಳಬೇಕು. ಶ್ರೇಷ್ಠ ಕಾವ್ಯಗಳನ್ನು ಯಕ್ಷಗಾನದಲ್ಲಿ
ಬಳಸುವ ಪರಿಪಾಠ ಬೆಳೆಯಬೇಕು. ಇದರಿಂದ
ಜನರ ಪ್ರೀತಿ, ಗೌರವ ಗಳಿಸಲು
ಸಾಧ್ಯ. ಆದ್ದರಿಂದ ಯಕ್ಷಗಾನ ಸಾಹಿತ್ಯ ಮತ್ತು
ಕಲಾವಿದ ಜನ ಪ್ರೀತಿ ಗಳಿಸುವ
ನೆಲೆಯ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು.
• ಜನಪದ ಮೂಲದ ಕಲೆ
ಶಾಸ್ತ್ರೀಯವಾದಾಗ ಅದು ಸಂಕೀರ್ಣಗೊಳ್ಳುತ್ತದೆಯೇ?
ಜನಪದ
ಕಲೆಯಲ್ಲೂ ಒಂದು ರೀತಿಯ ಶಾಸ್ತ್ರೀಯತೆ
ಇರುತ್ತದೆ. ಆ ಶಾಸ್ತ್ರೀಯತೆಯನ್ನು ಪಾಲಿಸದರೆ
ಮಾತ್ರ ಅದರ ಅಭಿವ್ಯಕ್ತಿ ಆಕರ್ಷಣೀಯವಾಗುತ್ತದೆ.
ಉದಾಹರಣೆಗೆ ಭೂತದಕೋಲ ಎನ್ನುವುದು ಜನಪದ
ಕಲೆ, ಅಲ್ಲಿಯೂ ವೇಷಭೂಷಣ, ನುಡಿಕಟ್ಟು,
ದರ್ಶನ, ಕುಣಿತ ಇತ್ಯಾದಿಗಳು ಕ್ರಮಬದ್ಧವಾಗಿ
ಮೂಡಿಬಂದಾಗ ಮಾತ್ರ ಭೂತದಕೋಲಕ್ಕೆ ಮಹತ್ವ
ಬರುತ್ತದೆ. ಕೇವಲ ವೇಷಭೂಷಣ ಮಾತ್ರವಿದ್ದರೆ
ಅಥವಾ ನುಡಿಕಟ್ಟು, ಕುಣಿತ ಮಾತ್ರವಿದ್ದರೆ ಅಲ್ಲಿ
ಅದರ ಮಹತ್ವ ಕಳೆದುಕೊಳ್ಳುತ್ತದೆ. ಅದೇ
ರೀತಿ ಯಕ್ಷಗಾನ ಇಲ್ಲಿರುವ ಎಲ್ಲಾ
ಜಾನಪದೀಯ ಅಂಶಗಳಿಗೂ ಒಂದು ರೀತಿಯ ಶಾಸ್ತ್ರೀಯತೆ
ಇದೆ. ಅದೇ ಇದನ್ನು ಇಲ್ಲಿಯವರೆಗೆ
ಮುನ್ನಡಿಸುತ್ತಾ ಬಂದಿರುವುದು. ಯೋಚನಾ ವಿಧಾನ ಬದಲಾದಂತೆ
ಕಲೆಯಲ್ಲೂ ಒಂದಷ್ಟು ಬದಲಾವಣೆಯಾಗುವುದು ಸಹಜವೇ.
ಆದರೆ ಕಲೆಯ ಆಶಯಕ್ಕೆ ಧಕ್ಕೆಯಾಗಂತೆ
ಕಾಪಾಡಿಕೊಳ್ಳುವುದು ಬಹಳ ಮುಖ್ಯ.
• ಯಕ್ಷಗಾನ ಪಠ್ಯ ರಚನೆಯಿಂದ
ಯಕ್ಷಗಾನಕ್ಕೆ ಪ್ರಯೋಜನವಾಗಬಹುದೇ?
ಕನ್ನಡ
ಸ್ನಾತ್ತಕೊತ್ತರ ಪದವಿಯಂತಹಾ ವಿದ್ಯಾರ್ಥಿಗಳಿಗೆ ಒಳ್ಳೆಯ ಪ್ರಸಂಗಗಳನ್ನು ಉಪಪಠ್ಯವಾಗಿಯಾದರೂ
ಸರಿ ಇರಿಸಿದ್ದೇ ಆದಲ್ಲಿ ಅದರ ಪರಿಚಯಾತ್ಮಕ
ಮತ್ತು ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದು. ಸಾಮಾನ್ಯವಾಗಿ ಬೋಧಕರೆಲ್ಲರೂ ಯಕ್ಷಗಾನದಲ್ಲಿ ಪರಿಣಿತರು ಎನ್ನುವ ಹಾಗಿಲ್ಲ. ಆದರೆ
ಪಠ್ಯದಲ್ಲಿ ಬಂದಾಗ ಬೋಧಕರೂ ಕೂಡ
ಕಲಿಯಬೇಕಾಗುತ್ತದೆ. ಆಗ ಪ್ರಾಥಮಿಕ ಹಂತದ
ಪರಿಚಯವಾಗುತ್ತದೆ. ಪಠ್ಯ ರೂಪದಲ್ಲಿ ಯಕ್ಷಗಾನ
ಈಗಾಗಲೇ ಬಂದಿದೆ. ಅದನ್ನು ಪರಿಣಾಮಕಾರಿಯಾಗಿ
ಜಾರಿಗೆ ತಂದರೆ ಅದು ಪ್ರಯೋಜನಕಾರಿಯಂತೂ
ಸತ್ಯ. ಒಂದು ಸಿದ್ಧ ಚೌಕಟ್ಟಿಗೆ
ಯಕ್ಷಗಾನವನ್ನು ತರುವ ಕೆಲವೊಂದು ಪ್ರಯೋಗಗಳನ್ನು
ಈಗಾಗಲೇ ಮಾಡಿದ್ದೇವೆ. ವಿದೇಶಿ ಕಥೆಗಳನ್ನೂ ಯಕ್ಷಗಾನಕ್ಕೆ
ಹೊಂದಿಕೆಯಾಗುವಂತೆ ನೋಡಿಕೊಂಡಿದ್ದೇವೆ. ಆದ್ದರಿಂದ ಅದರ ಶಾಸ್ತ್ರೀಯ ಅಂಶಗಳನ್ನು
ಪಠ್ಯಗಳಿಗೆ ಒಳಪಡಿಸುವುದು ಅತ್ಯಂತ ಒಳ್ಳೆಯ ಕೆಲಸವೇ
ಆಗಿದೆ.
• ಯಕ್ಷಗಾನದ ವಿಸ್ತರಣೆಯನ್ನು ಹೇಗೆ ಮಾಡಬಹುದು?
ಯಕ್ಷಗಾನದಲ್ಲಿ
ತೊಡಗಿಕೊಂಡವರು ಅದನ್ನು ಬೆಳೆಯಲು ಬಿಟ್ಟದ್ದು
ಕಡಿಮೆ ಎಂದೇ ಹೇಳಬಹುದು. ನಿಜವಾಗಿ
ಯಕ್ಷಗಾನ ರಾಜಕಲೆ, ಅದು ರಾಜ್ಯ
ಕಲೆಯಾಗಿಯೂ ಮಾನ್ಯತೆ ಪಡೆಯಬೇಕು. ಇಡೀ
ಕರ್ನಾಟಕದಲ್ಲಿ ಮಾನ್ಯತೆ ಪಡೆಯುವ ಎಲ್ಲಾ
ಅರ್ಹತೆ, ಸಾಮಥ್ರ್ಯ ಈ ಕಲೆಗಿದೆ. ಆದ್ದರಿಂದ
ಆಸ್ವಾದನೆ ಮತ್ತು ಅಧ್ಯಯನಾತ್ಮಕ ಕೆಲಸಗಳು
ಹೆಚ್ಚುಹೆಚ್ಚು ನಡೆಯಬೇಕು. ಆದರೆ ಅದು ಇದುವರೆಗೆ
ಆದದ್ದು ಕಡಿಮೆ. ಅದಕ್ಕೆ ನಾವೇ
ಕಾರಣ, ಇನ್ನಾದರೂ ಈ ಮಹಾನ್ ಕಲೆಯನ್ನು
ಉಳಿಸಿ ಬೆಳೆಸುವ ಪ್ರವೃತ್ತಿ ಬರಬೇಕು.
ಯಕ್ಷಗಾನದ ಸಂವಾದಿ ಕಲೆಗಳಾದ ದೊಡ್ಡಾಟ,
ಸಣ್ಣಾಟ, ರಾಧಾನಾಟ ಇತ್ಯಾದಿಗಳೆಲ್ಲ ಇಂದಿಗೂ
ಬೆಳವಣಿಗೆ ಕಾಣಲಿಲ್ಲ. ಅಲ್ಲಿ ಇನ್ನೂ ಹೆಚ್ಚಿನ
ಪರಿಸ್ಕರಣೆ ಮತ್ತು ಬೌದ್ಧಿಕ ಮಟ್ಟದ
ಎತ್ತರಿಸುವಿಕೆ ನಡೆಯಬೇಕು. ಇದು ಉದ್ದೇಶಪೂರ್ವಕವಾದ ಕಾರ್ಯ.ಯಕ್ಷಗಾನದ ಪ್ರತಿಯೊಂದು ಅಂಶವೂ ಅಧ್ಯಯನಕ್ಕೆ ಯೋಗ್ಯವಾದುದು.ಇದನ್ನು ಬೇರೆಬೇರೆ ಕಲೆಗಳ
ದೃಷ್ಟಿಯಿಂದ ನೋಡಬೇಕು. ನಮ್ಮಲ್ಲಿರುವ ಬೇರೆಬೇರೆ ವಿಭಾಗಗಳನ್ನು ಪ್ರತ್ಯೇಕವಾಗಿ ಕಲಿಯಬೇಕು. ನಮ್ಮ ಅಕಾಡೆಮಿಗಳು ವಿಶ್ವವಿದ್ಯಾನಿಲಯಗಳು
ಕಮ್ಮಟಗಳನ್ನು ಅಲ್ಲಲ್ಲಿ ಮಾಡುವುದು ಉತ್ತಮ. ಇದರಿಂದ ಯಕ್ಷಗಾನದ
ವಿಸ್ತರಣೆ ನಡೆಯಲು ಸಾಧ್ಯವಾಗುತ್ತದೆ.
ಮಾಧ್ಯಮಗಳು
ಯಕ್ಷಗಾನದ ವಿಸ್ತರಣೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತವೆÁ್ಯದರೆ ಅದರಲ್ಲಿ ಇರುವ
ವ್ಯಕ್ತಿಗಳು ಸ್ವಲ್ಪ ಅಧ್ಯಯನ ಪ್ರವೃತ್ತಿಯನ್ನು
ಬೆಳೆಸಿಕೊಳ್ಳಬೇಕು.ಯಕ್ಷಗಾನದಂತಹಾ ಕಲೆ ಹೇಗೆ ಬೆಳೆದಿದೆ
ಮತ್ತು ಅದರಲ್ಲಿರುವ ಕಲಾವಿದರ ಬೆಳವಣಿಗೆಯ ಬಗ್ಗೆ
ಅರಿವಿನಿಂದ ಬರೆಯುವ ಮತ್ತು ಪ್ರಕಟಿಸುವ
ಪ್ರವೃತ್ತಿ ಬೆಳೆಯಬೇಕು.
ಅಮೃತರಿಗೆ ಸಂದ
ಯಕ್ಷಾಭಿನಂದನೆಗಳು
ಯಕ್ಷಗಾನ
ಕ್ಷೇತ್ರವನ್ನು ತನ್ನ ಸಾಹಿತ್ಯ ಮತ್ತು
ಸಂಶೋಧನಾ ದೃಷ್ಟಿಕೋನದಿಂದ ಬೆಳೆಸಿದ ಅಮೃತ ಸೋಮೇಶ್ವರರನ್ನು
ಈ ಕ್ಷೇತ್ರ ಮರೆತಿಲ್ಲ
ಎನ್ನುವುದು ಸತ್ಯ. ಇವರ ಪ್ರಸಂಗಗಳು
ಅಪಾರ ಜನಮನ್ನಣೆಯನ್ನು ಪಡೆಯವ ಮೂಲಕ ಇವರಿಗೆ
ಈ ಕ್ಷೇತ್ರ ವಿಶೇಷ
ಗೌರವವನ್ನು ಸಲ್ಲಿಸಿದೆ. ಇದು ಇವರ ಸ್ವ ಗಳಿಕೆ ಎನ್ನಬಹುದು.
ಆದರೆ ಅನೇಕ ಸಂಘಟನೆಗಳೂ ಯಕ್ಷಗಾನ
ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆಗಾಗಿ
ಗೌರವಿಸಿವೆ. ಎಲ್ಲಕ್ಕೂ ಮುಖ್ಯವಾಗಿ ಯಕ್ಷಗಾನ ಅಕಾಡೆಮಿ ಸ್ಥಾಪನೆಯಾದ
ಮೊದಲ ಪಾರ್ತಿಸುಬ್ಬ ಪ್ರಶಸ್ತಿಯನ್ನೂ ಇವರಿಗೇ ನೀಡಿ ಗೌರವಿಸಿದೆ.
ಇದು ಕರ್ನಾಟಕ ಯಕ್ಷಗಾನಕ್ಕಾಗಿ ನೀಡುವ
ಶ್ರೇಷ್ಠ ಪ್ರಶಸ್ತಿ. ಸಾವಿರಾರು ಕಲಾವಿದರ ಮಧ್ಯೆ ಪ್ರಸಂಗಕರ್ತನೋರ್ವನನ್ನು
ಸರ್ವಾನುಮತದಿಂದ ಮೊದಲು ಆಯ್ಕೆ ಮಾಡಿದ್ದೇ
ಯಕ್ಷಗಾನ ಕ್ಷೇತ್ರ ಇವರ ಮೇಲೆ
ಇರಿಸಿದ ಗೌರವಕ್ಕೆ ಸಾಕ್ಷಿ. ಇಂದಿಗೂ ಅಮೃತರ
ಪ್ರಸಂಗದ ಪ್ರದರ್ಶನವಿದೆ ಎಂದು ಗೊತ್ತಾದರೆ ಪುಳಕಿತರಾಗಿ
ನೋಡವ ಪ್ರೇಕ್ಷಕರಿದ್ದಾರೆ. ಕಲಾವಿದರಷ್ಟೇ ಪ್ರೇಕ್ಷಕರೂ ಇವರ ಪ್ರಸಂಗಕ್ಕೆ ಮಾರು
ಹೋಗಿರುವುದು ಇತಿಹಾಸವಲ್ಲ.
ಹೀಗೂ ಇತ್ತು
ಅಮೃತರ
ಪ್ರಸಂಗಗಳು ವಿಜೃಂಭಿಸುತ್ತಿದ್ದ ಕಾಲದಲ್ಲಿ ಆ ಪ್ರಸಂಗದ ಪ್ರಮುಖ
ಪಾತ್ರದಾರಿಗಳಿಗೆ ‘ಸ್ಟಾರ್ ವ್ಯಾಲೂ’್ಯ
ಇದ್ದದೂ ಹೌದು. ಪ್ರಸಂಗದ ಪ್ರಧಾನ
ಪಾತ್ರಗಳಲ್ಲಿ ಮಿಂಚುತ್ತಿದ್ದ ಕೆಲವು ಕಲಾವಿದರಿಗಾಗಿಯೇ ಅಮೃತರು
ಪ್ರಸಂಗ ಬರೆಯುತ್ತಿದ್ದರು ಎನ್ನುವ ಅಪಾದನೆಯೂ ಯಕ್ಷಗಾನ
ವಲಯದಲ್ಲಿತ್ತು. ಆದರೆ ಪ್ರಧಾನ ಪಾತ್ರಗಳನ್ನು
ಅನುಭವೀ ಪ್ರಮುಖ ಕಲಾವಿದರೂ ಉಪ
ಪಾತ್ರಗಳನ್ನು ಅವರಿಗಿಂತ ಕೆಳಹಂತದ ಕಲಾವಿದರೂ ಮಾಡುವುದು
ಕಲಾ ಪರಂಪರೆಯ ಸಹಜ ಸಂಪ್ರದಾಯ.
ಆದ್ದರಿಂದ ಈ ಆಪಾದನೆಯಲ್ಲಿ ಯಾವ
ಅರ್ಥವೂ ಇರಲಿಲ್ಲ ಎನ್ನುವ ಮಾತು
ಈ ಕಾಲದ ಕಲಾ
ವಿಮರ್ಶಕರದ್ದು.
ಅಮೃತರ ಪ್ರಸಂಗ ನೋಡುಗರು
ಕಂಡಂತೆ
“ಪೌರಾಣಿಕ
ಹಿನ್ನಲೆಯ ಕತೆಗಳೇ ಹೆಚ್ಚಾಗಿ ಅಮೃತ
ಸೋಮೇಶ್ವರರು ರಚಿಸಿದರೂ ಸಾಮಾಜಿಕ ಬದಲಾವಣೆಗಳಿಗೆ ಪೂರಕವಾದ
ಪ್ರಸಂಗಗಳನ್ನೇ ರಚಿಸಿದ್ದಾರೆ. ಆ ಕಾಲದ ನೋಡುಗರಾದ
ನಮಗೆ ಸಾಹಿತ್ಯ ಭಾಷೆಯ ಎಲ್ಲಾ
ರಸಗಳನ್ನು ಸಮತೋಲನದಲ್ಲಿ ಆಸ್ವಾದಿಸಿದ ಅನುಭವ ಆಗುತ್ತಿತ್ತು. ಅವರ
ಪ್ರಸಂಗಗಳು ಪೌರಾಣಿಕ ಕತೆಗಳಲ್ಲೂ ಅಜ್ಞಾತವಾಗಿದ್ದ
ವಸ್ತು. ಅನೇಕರಿಗೆ ಆ ಕಥಾ ವಸ್ತುವಿನ
ಪರಿಚಯವಾದುದೇ ಅವರ ಪ್ರಸಂಗಗಳಿಂದ ಎಂದು
ಹೇಳಬಹುದು. ಪ್ರಸಂಗಗಳÀ ಪದ್ಯ ರಚನೆಯಲ್ಲೂ ಹೊಸತನವಿತ್ತು.
ಅದರ ರಚನೆ ಹಲವು ಕಾ¯ದವರೆಗೆ ಮನಸ್ಸಿನಲ್ಲಿ ಉಳಿಯುವಂತೆಯೂ
ಇತ್ತು. ಆದ್ದರಿಂದ ಪದ್ಯ ಮತ್ತು ಅರ್ಥ
ನಮ್ಮ ಮೇಲೆ ಬಹಳ ಪರಿಣಾಮ
ಬೀರುವಂತೆ ಇದ್ದವು.”
ಲಕ್ಷೀಶ
ರೈ ರೆಂಜಾಳ, ಯಕ್ಷ ಸಂಘಟಕ
“1970-80ರ
ದಶಕಗಳಲ್ಲಿ ಅಮೃತ ಸೋಮೇಶ್ವರರ ಲೇಖನಿಯಿಂದ
ಮೂಡಿಬಂದ ಪ್ರಸಂಗಗಳು ಶ್ರೀ ಧರ್ಮಸ್ಥಳ ಮೇಳದಲ್ಲಿ
ರಂಗೇರಿ ವಿಜೃಂಭಿಸುತ್ತಿದ್ದುದನ್ನು ನೋಡಿದವರಲ್ಲಿ ನಾನೂ ಒಬ್ಬ. ಅವರ
ಬಹುತೇಕ ಜನಪ್ರಿಯ ಪ್ರಸಂಗಗಳನ್ನು ನೋಡಿದ್ದೇನೆ.
ಅವು ಇನ್ನಿಲ್ಲದ ಜನಮನ್ನಣೆ ಪಡೆದದಂತೂ ಇತಿಹಾಸ. ಪೌರಾಣಿಕ ಚೌಕಟ್ಟಿನಲ್ಲಿ
ಹೊಸಬಗೆಯ ಆವಿಸ್ಕಾರಗಳÀನ್ನು ತಂದು ಹೊಸ
ನೋಟ ಹೊಳಹುಗಳನ್ನು ನೀಡಿದುದೇ ಈ ಪ್ರಸಂಗಗಳು ಯಶಸ್ವಿಗೆ
ಮುಖ್ಯ ಕಾರಣ. ಒಂದು ವಿಭಿನ್ನ
ರೀತಿಯಲ್ಲಿ ಕಥೆಗಳನ್ನು ಹೆಣೆಯುವ ಅಮೃತರ ಕಲಾವಂತಿಕೆ
ಹಾಗೂ ಆ ಪ್ರಸಂಗಗಳಿಗೆ ಜೀವ
ತುಂಬುವ ಕಲಾವಿದ ವರ್ಗ ಇದು
ಆ ಕಾಲದ ನೋಡುಗನ
ಮನಸ್ಸಿಗೆ ಮುದ ನೀಡಿದ್ದವು. ಒಂದು ಪ್ರಸಂಗ ವಿಭಿನ್ನ
ಪರಿಣಾಮಗಳನ್ನೂ ಬೀರಬಲ್ಲುದು ಎನ್ನುವುದಕ್ಕೆ ಅಮೃತರ ಪ್ರಸಂಗಗಳು ಉತ್ತಮ
ಉದಾಹರಣೆ”.
ಶ್ಯಾಂಭಟ್
ಪಾತನಡ್ಕ, ಯಕ್ಷ ವಿಮರ್ಶಕ
ಅಮೃತ
ಸೋಮೇಶ್ವರರು ರಚಿಸಿದ ಪ್ರಸಂಗಗಳು ಮೌಲಿಕವಾಗಿಯೂ
ಜನಪ್ರಿಯವಾಗಿಯೂ ಗೆದ್ದಿವೆ. ಅವರ ಪ್ರಸಂಗಗಳಲ್ಲಿ ಕಥೆ
ಮಾತ್ರ ಹೊಸತಲ್ಲ; ಕಥೆಯ ನೋಟವೂ ಹೊಸತೆ.
ರಂಗಕ್ಕನುಕೂಲವಾದ ಪದ್ಯ ರಚನೆ, ಹೊಸ
ಸಾಧ್ಯತೆಗಳ ಹುಡುಕಾಟ ಅವರ ವೈಶಿಷ್ಟ್ಯ.
ಅವರ ಪದ್ಯಗಳು ಸರಳ ಸುಲಲಿತ
ಮಾಲೆಯಾದುದರಿಂದ ಭಾಗವತರಿಗಂತೂ ಬಹಳ ಸುಲಭ. ಅಮೃತರು
ಯಕ್ಷಗಾನ ಕ್ಷೇತ್ರದಲ್ಲಿ ಚಿರಕಾಲ ಉಳಿಯುವ ಮಹಾಕವಿ.
ವೆಂಕಟ್ರಾಮ್
ಭಟ್ ಸುಳ್ಯ ಹಿರಿಯ ಅರ್ಥದಾರಿ
ಯಕ್ಷಾಮೃತ ಗಳಿಗೆ-4
ಅಧ್ಯಯನಶೀಲ
ಗುಣ
ಹೆಚ್ಚಾಗಬೇಕು
ಕಳೆದ
ಮೂರು ಸಂಚಿಕೆಯಲ್ಲಿ ಯಕ್ಷಗಾನ ಅದರಲ್ಲೂ ಮುಖ್ಯವಾಗಿ
ಪ್ರಸಂಗ ಸಾಹಿತ್ಯದ ಕುರಿತು ಹಿರಿಯ ಪ್ರಸಂಗಕರ್ತ
ಪ್ರೊ. ಅಮೃತ ಸೋಮೇಶ್ವರರು ಅಭಿಪ್ರಾಯ
ಹಂಚಿಕೆಕೊಂಡಿದ್ದಾರೆ ಈ ಸಂಚಿಕೆಯಲ್ಲಿ ಮಾಧ್ಯಮದ
ಪ್ರಭಾವ, ಯಕ್ಷಗಾನದಲ್ಲಿ ಆಗಬೇಕಾದ ಕೆಲಸ ಕಾರ್ಯ,
ಇತರ ಕಲೆಗಳ ಪ್ರಭಾವದ ಕುರಿತಾಗಿ
ಅವರು ಮಾತನಾಡಿದ್ದಾರೆ. ಅದು ಇಲ್ಲಿದೆ,
ಯಕ್ಷಗಾನದ
ಬೆಳವಣಿಗೆಯಲ್ಲಿ ಮಾಧ್ಯಮಗಳು ಹೇಗಿದ್ದರೆ ಉತ್ತಮ?
ಮಾಧ್ಯಮಗಳು
ಮತ್ತು ಮಾಧ್ಯಮದಲ್ಲಿರುವ ವ್ಯಕ್ತಿಗಳಲ್ಲಿ ಒಂದಷ್ಟು ಅಧ್ಯಯನ ಶೀಲ
ಗುಣ ಇದ್ದರೆ ಉತ್ತಮ. ಯಕ್ಷಗಾನದ
ಬಗ್ಗೆ ಸಾಮಾನ್ಯ ವರದಿ ತಯಾರಿಸುವುದಕ್ಕೂ
ಅದನ್ನು ಆಸ್ವಾದಿಸಿ ಅದರ ಬಗ್ಗೆ ಒಂದಷ್ಟು
ಅಧ್ಯಯನ ಮಾಡಿ ಬರೆಯುವುದಕ್ಕೂ ವ್ಯತ್ಯಾಸವಿದೆ.
ಅದು ಹೇಗೆ ಬೆಳೆದಿದೆ ಎನ್ನುವುದನ್ನು
ತಿಳಿದುಕೊಂಡು ಕಲಾವಿದರ ಬೆಳವಣಿಗೆಯ ಬಗ್ಗೆ
ಅರಿವಿನಿಂದ ಬರೆಯುವ ಪ್ರವೃತ್ತಿ ಈ
ಕಾಲಕ್ಕೆ ಅತೀ ಅಗತ್ಯ ಎಂದು
ನನಗನಿಸುತ್ತದೆ.
ತೆಂಕು
ಮತ್ತು ಬಡಗಿಗೆ ಹೋಲಿಸಿದರೆ ತೆಂಕಿಗಿಂತ
ಬಡಗಿನಲ್ಲಿ ಹೆಚ್ಚು ಕೆಲಸಗಳು ನಡೆದಿವೆ
ಎಂದೆನಿಸುತ್ತದೆ, ತೆಂಕಿನಲ್ಲಿ ಯಾವ ಕೆಲಸ ನಡೆಯಬೇಕು?
ತೆಂಕಿನವರು
ಸ್ವಲ್ಪ ಉದಾಸೀನ ಪ್ರವೃತ್ತಿಯವರು, ತಮ್ಮ
ಮುಂದಿರುವ ಈ ಕಲೆ ಬಹಳ
ಪ್ರಬುದ್ಧವಾಗಿದೆ ಅದರಲ್ಲಿ ಇನ್ನು ಹೇಳುವಂಹದ್ದು
ಏನೂ ಇಲ್ಲ ಎಂದು ತಿಳಿದುಕೊಂಡವರು.
ಆದರೆ ಬಡಗಿನಲ್ಲಿ ಅದನ್ನು ಬೆಳೆಸುವ ಪ್ರವೃತ್ತಿಯವರು
ಹೆಚ್ಚಿದ್ದಾರೆ. ನಿಜಾರ್ಥದಲ್ಲಿ ತೆಂಕಿನ ವೇಷಭೂಷಣವಾಗಲಿ, ಕುಣಿತವಾಗಲಿ
ಅಥವಾ ಒಟ್ಟು ನಿರ್ವಹಣೆಯಾಗಲಿ ಅದು
ಬಡಗಿಗಿಂತ ಕಳಪೆ ಏನೂ ಅಲ್ಲ.
ಇದಕ್ಕೆ ಇದರದೇ ಆದ ವೈಶಿಷ್ಟ್ಯ
ಇದೆ. ಉದಾಹರಣೆಗೆ ಹನೂವಂತನ ವೇಷವನ್ನೇ ತೆಗೆದುಕೊಳ್ಳಿ,
ಸಾಂಪ್ರದಾಯಿಕವಾದ ಹನೂವಂತನ ಕಿರೀಟ ಅದು
ಬೇರೆ ಯಾವುದೇ ವಿಭಾಗದಲ್ಲಿ ಕಾಣಲು
ಸಾಧ್ಯವಿಲ್ಲ. ಅವನೊಬ್ಬ ಕಪಿ ನಾಯಕ
ಅಷ್ಟೆ, ಹಾಗೆಂದು ಸುಗ್ರೀವ, ವಾಲಿಗೂ
ಅಂತಹಾ ಕಿರೀಟ ಇಲ್ಲ. ಹನೂವಂತನಿಗೆ
ಮಾತ್ರ ಇದೆ. ಹೋಲಿಕೆಯಲ್ಲಿ ನೋಡಿದರೆ
ಕೇರಳದ ಕಥಕಳಿಯಲ್ಲಿ ಆ ರೀತಿ ಇದೆ.
ಹನೂಮಂತ ಪ್ರವೇಶ ಕೂಡ ಚಂದ.
ರಾಕ್ಷಸÀ ವೇಷದ ಒಡ್ಡೋಲಗ ಕೂಡ
ಬೇರೆ ಕಡೆಗಳಲ್ಲಿ ಇಲ್ಲ. ಸಭಾ ಕಲಾಸಂ
ಕೂಡ ಬೇರೆ ಕಲಾ ವಿಭಾಗದಲ್ಲಿ
ಕಾಣಲು ಸಾಧ್ಯವಿಲ್ಲ. ಇಂದು ತೆಂಕಿನಲ್ಲೂ ಇದನ್ನು
ಕಾಣಲು ಕಷ್ಟ ಸಾಧ್ಯವಾಗುತ್ತಿದೆ. ಆದ್ದರಿಂದ
ಯಕ್ಷಗಾನದ ಸಂಪ್ರದಾಯಿಕ ಪ್ರಕಾರಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯ ಇಂದಿನದ್ದಾಗಿದೆ. ಯಾವುದನ್ನೇ ಕಳೆದುಕೊಳ್ಳುವ ಮೊದಲು ಅದು ಒಂದು
ಕಲೆಯ ನೆಲೆಯಲ್ಲಿ ಎಷ್ಟರಮಟ್ಟಿಗೆ ಪೂರಕವಾಗಿದೆ ಎನ್ನುವುದನ್ನು ತಜ್ಞತೆಯ ನೆಲೆಯಲ್ಲಿ ವಿಶ್ಲೇಷಿಸಿಯೇ
ಪರಿಸ್ಕರಿಸಬೇಕಾಗುತ್ತದೆ. ಅದರಿಂದ ಕಲೆಯನ್ನು ವ್ಯವಸ್ಥಿತವಾಗಿ
ಇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಕಾಡೆಮಿಕ್ ಆದ ಕೆಲಸಗಳು ಇನ್ನೂ
ಹೆಚ್ಚು ಯಕ್ಷಗಾನದಲ್ಲಿ ನಡೆಯಬೇಕು.
ಯಕ್ಷಗಾನದ
ಮೇಲೆ ಪ್ರಭಾವ ಬೀರಿರುವ ಇತರ
ಕಲೆಗಳನ್ನು ಹೇಗೆ ಪರಿಗಣಿಸಬೇಕು?
ಯಕ್ಷಗಾನದ
ಮೇಲೆ ಸುತ್ತಮುತ್ತಲಿನ ಪ್ರದೇಶಗಳ ಕಲೆಗಳ ಪ್ರಭಾವ ಇದ್ದೇ
ಇದೆ. ಹಾಗೆಂದು ಅದು ಎಷ್ಟರಮಟ್ಟಿಗೆ
ಬೇಕೆನ್ನುವುದನ್ನು ನಿರ್ಧರಿಸುವ ಅಗತ್ಯ ಕಲಾವಿದರದ್ದು ಮತ್ತು
ಪ್ರಜ್ಞಾವಂತ ಓದುಗರದ್ದಾಗಿರುತ್ತದೆ. ಅಂಧಾನುಕರಣೆ ಎಂದಿಗೂ ಒಳ್ಳೆಯದಲ್ಲ. ಇತ್ತೀಚೆಗೆ
ಪ್ರಯೋಗದ ಹೆಸರಿನಲ್ಲಿ ನಡೆಯುವ ಅನೇಕ ಪ್ರದರ್ಶನಗಳು
ಅನಗತ್ಯವಾದವುಗಳು. ಪ್ರಯೋಗವೂ ಸಹ್ಯವಾಗಿದ್ದಾಗ ಮಾತ್ರ ಅದಕ್ಕೆ ಮಾನ್ಯತೆ
ಬರುವುದು. ಇದನ್ನು ಯಕ್ಷಗಾನ ಸಂಘಟಕರು
ತಿಳಿದುಕೊಳ್ಳಬೇಕು. ಯಕ್ಷಗಾನದ ಆರಂಭದಲ್ಲಿ ಸಂಗೀತ ಭಾಗವತ ಅಂತ
ಇದ್ದ, ಆತ ಪೀಠಿಕೆ ಹೊಡೆಯುವವರೆಗೆ
ಹಾಡುತ್ತಿದ್ದ ಆನಂತರ ಮುಖ್ಯ ಭಾಗವತರು
ಬೆಳಗಿನ ವರೆಗೂ ಪ್ರಸಂಗ ನಡೆಸುತ್ತಿದ್ದರು.
ಇಂತಹಾ ವೈಭವಗಳನ್ನು ಯಕ್ಷಗಾನದಲ್ಲಿ ಕಾನಬಹುದು ಎನ್ನುವ ಅನಿಸಿಕೆ ನನ್ನದು.
ಹರಕೆಯ
ಆಟಗಳು ಹೆಚ್ಚುತ್ತಿರುವುದರ ಪರಿಣಾಮ ಏನು?
ಇತ್ತೀಚೆಗೆ
ಹರಕೆಗಾಗಿಯೇ ಕೆಲವು ಪ್ರಸಂಗಗಳು ಇವೆ,
ಈ ಮಹಾತ್ಮೆಗಳು ಹಿಂದೆ
ಇರಲಿಲ್ಲ. ಇವುಗಳ ಹಾವಳಿ ಇತೀಚೆಗೆ
ಹೆಚ್ಚಾಗಿವೆ. ಇದು ಅತ್ಯಂತ ಕೃತಕತೆಯಾಗುತ್ತಿದೆ.
ಇಲ್ಲಿ ಕಲೆಯ ಬದಲು ಆರಾಧನೆಯೇ
ಮುಖ್ಯ ಅಂತ ಆಗುತ್ತಿದೆ. ಯಕ್ಷಗಾನದಲ್ಲಿ
ಆರಾಧನೆ ಇದೆ. ಆದರೆ ಅದೇ
ಮುಖ್ಯವಾದರೆ ಅದು ವೈಭವೀಕರಣವಾಗುತ್ತದೆ. ಇದರಿಂದ
ಯಕ್ಷಗಾನದಲ್ಲಿನ ಉದ್ದೇಶ ಗೌಣವಾಗುತ್ತದೆ. ಇದು
ಮುಂದೆ ಸ್ಪರ್ಧೆಯ ಸ್ವರೂಪ ಪಡೆಯುವುದೂ ಅಪಾಯಕಾರಿ.
ಆದ್ದರಿಂದ ಮಹಾತ್ಮೆ ಆಟದ ಪ್ರಮಾಣ
ಕಡಿಮೆಯಾಗಿ ಅಲ್ಲಿ ಇತರ ಪ್ರಸಂಗಗಳ
ಪ್ರದರ್ಶನ ನಡೆಯಬೇಕು. ಅದು ಯಕ್ಷಗಾನ ಕಲೆಯನ್ನೇ
ಆರಾಧಿಸುತ್ತೇವೆ ಎನ್ನುವ ಪರಿಕಲ್ಪನೆ ಮೂಡುವಂತೆ
ಮಾಡುತ್ತದೆ.
ಹಾಗೆ
ನೋಡಿದರೆ ಕನ್ನಡ ಪ್ರಸಂಗಗಳಿಗಿಂತ ತುಳು
ಪ್ರಸಂಗದಲ್ಲಿ ವೈಭವೀಕರಣ ಹೆಚ್ಚಾಗಿತ್ತು. ಇದು ಹೆಚ್ಚು ಕಾಲ
ಉಳಿಯುವುದಿಲ್ಲ ಎನ್ನುವುದಕ್ಕೆ ತುಳು ಪ್ರಸಂಗಗಳು ತಮ್ಮ
ಅಬ್ಬರವನ್ನು ಕಳೆದುಕೊಂಡದ್ದೇ ಸಾಕ್ಷಿ. ಆದ್ದರಿಂದ ಮಹಾತ್ಮೆಗಳೂ
ಹೆಚ್ಚು ಕಾಲ ಹೀಗೇ ಇರಬಹುದು
ಎನ್ನಲು ಸಾದ್ಯವಿಲ್ಲ. ಆದರೆ ಕಲೆ ನೀಡುವ
ಪರಿಣಾಮಗಳ ಮೇಲೆ ಇದು I್ಮಣಾತ್ಮಕ
ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚು.
ಕನ್ನಡದಲ್ಲಿ ಅನೇಕ ಒಳ್ಳೆಯ ಪ್ರಸಂಗಗಳಿವೆ.
ಅವುಗಳ ಕಡೆಗೆ ಕಲಾವಿದರು ಮತ್ತು
ಕಲಾ ಸಂಘಟಕರು ಗಮನ ಹರಿಸಬೇಕು.
ಆಗ ಪ್ರೇಕ್ಷಕರಲ್ಲೂ ಹೊಸ ಅಭಿರುಚಿ ಮೂಡುತ್ತದೆ.
ಈ ಅಭಿರುಚಿ ಮೂಡಿಸುವ
ಜವಾಬ್ಧಾರಿ ಅದರಲ್ಲಿ ಕೆಲಸ ಮಾಡುವ
ವ್ಯಕ್ತಿಗಳದ್ದಾಗಿದೆ.
ಹಣ
ಮತ್ತು ಪ್ರಚಾರದ ಗೀಳು ಹೆಚ್ಚಾದ
ಹಾಗೆ ಕಲೆಯ ಮೌಲ್ಯ ಕಡಿಮೆಯಾಗುತ್ತದೆ.
ಇವತ್ತು ಜಗತ್ತು ವೇಗವಾಗಿ ಸಾಗುತ್ತಿದೆ.
ಈ ಸಂದರ್ಭಕ್ಕೆ ಹೊಂದಿಕೊಂಡು
ಕಲೆಯನ್ನು ಮುಂದುವರಿಸಬೇಕು. ಈಗ ಇರುವ ಸ್ಥಿತಿಯ
ಬಗ್ಗೆ ಒಂದು ಎಚ್ಚರ ವಹಿಸಬೇಕು.
ಎಚ್ಚರ ಇರದೇ ಇದ್ದರೆ ಅಪಾಯ.
ನಾಟಕ ರಂಗಭೂಮಿಗಿಂತ ಗಂಭೀರವಾಗಿ ಪರಿಗಣಿಸಿದ ಕ್ಷೇತ್ರ ಯಕ್ಷಗಾನ. ಆದ್ದರಿಂದ
ಯಕ್ಷಗಾನ ಅನೇಕ ಬದಲಾವಣೆಗಳನ್ನು ಕಂಡಿದೆ.
ಒಂದು ಕಲೆಯಿಂದ ಎಲ್ಲವನ್ನೂ ಬದಲಾವಣೆ
ಮಾಡುತ್ತೇವೆ ಎನ್ನುವುದು ಭ್ರಮೆ. ಆದರೆ ರಸಾಸ್ವಾದ,
ಸಂದೇಶ, ಕಲಾಸ್ಪರ್ಶ,
ಬದುಕನ್ನು ಸಾಧಿಸುವುದು, ನೀತಿಬೋಧ ಇವೆಲ್ಲವೂ ಯಕ್ಷಗಾನದಿಂದ
ಖಂಡಿತಾ ಸಾಧ್ಯ. ಕರಾವಳಿಯ ಜನರಲ್ಲಿರುವ
ಪುರಾಣ ಜ್ಞಾನಕ್ಕೆ ಮೂಲ ಕಾರಣವೇ ಯಕ್ಷಗಾನ.
ಕರಾವಳಿಯ ಜನ ಬುದ್ದಿವಂತರು, ಮುಂದುವರಿದವರು
ಎಂದೆಲ್ಲಾ ಕರೆಸಿಕೊಳ್ಳುವುದಕ್ಕೂ ಇದೇ ಯಕ್ಷಗಾನ ಕಾರಣವಾಗಿದೆ.
ಜನಪದ ನೆಲೆಗಿಂತ ಶಿಷ್ಟ ನೆಲೆಯೇ ಯಕ್ಷಗಾನದಲ್ಲಿ
ಮುಖ್ಯ. ಇದು ಯಕ್ಷಗಾನದ ಮೂಲಕ
ಜನ ಶಿಕ್ಷಣ ಪಡೆಯುವಂತೆ ಮಾಡಿದೆ.
ಯಕ್ಷಗಾನ
ಬೆಳೆಸುವಲ್ಲಿ ಮೇಲ್ವರ್ಗ ಮತ್ತು ಕೆಳವರ್ಗ ಇವೆರಡರ
ಪಾತ್ರವೂ ಇದೆ. ಜಾನಪದ ಮತ್ತು
ಶಾಸ್ತ್ರೀಯ ಎನ್ನುವ ಎರಡೂ ವಿಭಾಗದಲ್ಲಿ
ಇದು ಸ್ಪಷ್ಟವಾಗಿ ಕಾಣಿಸುತ್ತದೆ. ಹಿಮ್ಮೇಳದಲ್ಲಿ ಮೇಲ್ವರ್ಗವೂ ಮುಮ್ಮೇಳದಲ್ಲಿ ಉಳಿದ ವರ್ಗದವರು ಇದ್ದುದನ್ನು
ಕಾಣುತ್ತೇವೆ. ಆದರೆ ಇಂದು ಕಾಲ
ಬದಲಾಗಿದೆ. ಇವೆರಡರಲ್ಲೂ ಸಮಾನ ಹಂಚಿಕೆ ಕಾಣುತ್ತೇವೆ.
ಸಮನ್ವಯತೆಯೂ ಇದೆ. ಆದರೆ ಆರಂಭದಲ್ಲಿ
ಈ ಸಮನ್ವಯತೆ ಸಾಧಿಸಲು
ವರ್ಷಗಳೇ ಹಿಡಿದಿರಬೇಕು. ತೆಂಕುತಿಟ್ಟಿನ ವೇಷಧಾರಿಗಳಲ್ಲಿ ಅನೇಕರು ಮಲೆಯಾಳಿಗಳಿದ್ದರು. ಇದನ್ನು
ನಾನು ಕೃತಿಯೊಂದರಲ್ಲಿ ದಾಖಲಿಸಿದ್ದೇನೆ.
ಡಾ.ಎಂ
ಪ್ರಭಾಕರ
ಜೋಶಿ
ಕಂಡಂತೆ
ಕನ್ನಡದ
ಅಗ್ರಶ್ರೇಣಿಯ ಬಹುಮುಖಿ ತಜ್ಞ ಲೇಖಕರಾಗಿರುವ
ಪ್ರೊ.ಅಮೃತ ಸೋಮೇಶ್ವರರು ಇಪ್ಪತ್ತನೇಯ
ಶತಮಾನದ ಮುಖ್ಯ ಮತ್ತು ಶ್ರೇಷ್ಠ
ಯಕ್ಷಗಾನ ಪ್ರಸಂಗಕರ್ತರಲ್ಲಿ ಓರ್ವರು. ಕಾವ್ಯಗುಣ, ಗೀತಗುಣ,
ವಸ್ತು ನಿರ್ವಹಣೆ ಅವರ ಪ್ರಸಂಗ ಕೃತಿಗಳಲ್ಲಿ
ಹದವಾಗಿ ಮೇಳೈಸಿವೆ. ಯಕ್ಷಗಾನ ಪರಂಪರೆಯನ್ನು ಕಲಾ
ಮಾಧ್ಯಮ ಗುಣವನ್ನೂ ಬಿಡದ, ಅದಕ್ಕೆ ಎರಕವಾಗಿಯೇ
ಹೊಸತನವನ್ನು ತಂದ ಕವಿ ಅವರು.
ಪುರಾಣದ ವಸ್ತುವಿಗೆ ಕಾಲಿಕವಾದ ಹೊಸಭಾವವನ್ನು ಹೊಸ ವ್ಯಾಖ್ಯಾನವನ್ನೂ ನೀಡಿದವರು.
ಯಕ್ಷಗಾನ ಬಂಧಗಳ ವೈವಿಧ್ಯ, ಜತೆಗೆ
ಹೊಸ ಗೀತರೂಪಗಳ ಪ್ರಯೋಗವನ್ನು ತಂದವರು.
ಅವರ
ದೃಷ್ಟಿ ನಾವಿನ್ಯವನ್ನು ಪ್ರಸಂಗಗಳಲ್ಲಿ ಬರುವ ಸ್ತುತಿ, ಮಂಗಲ
ಪದ್ಯಗಳಿಂದಲ್ಲೇ ಗುರುತಿಸಬಹುದು. ಅವರ ಸ್ತುತಿಗಳು ಬೆಳಕಿಗೆ,
ಶ್ರೇಯಕ್ಕೆ, ಅರಿವಿಗೆ, ಜೀವಕ್ಕೆ, ಯುಗಧರ್ಮಕ್ಕೆ ಸಂದಿವೆ. ಸೌಂದರ್ಯಕ್ಕೆ, ಲಯದ
ತತ್ವಕ್ಕೆ, ನಲ್ಮೆಗೆ, ಚೈತನ್ಯಕ್ಕೆ ಮಂಗಲ ಪದ್ಯಗಳನ್ನು ರಚಿಸಿದ್ದಾರೆ.
ಅವರು ರಚಿಸಿದ ಪ್ರಸಂಗಗಳಿಗೆ ರಂಗದ
ಸನ್ನಿವೇಶಗಳ ಪ್ರದರ್ಶನ, ಯಕ್ಷಗಾನ ವೇಷ ವೈವಿಧ್ಯದ
ಬಳಕೆ, ನರ್ತನಾನುಕೂಲಗಳ ರಂಗದೃಷ್ಟಿಯನ್ನು ಅಚ್ಚುಕಟ್ಟಾಗಿ ಅಳವಡಿಸಲು ಸಾಧ್ಯವಾಗಿದೆ. ಅರ್ಥದಾರಿಗೆ ಅರ್ಥ ಹೇಳಲು ಅನುಕೂಲವಾಗುವಂತೆ
ಪದ್ಯಗಳ ವಿಷಯ ಮಂಡನೆ ಇರುವುದರಿಂದ
‘ಅರ್ಥ ಪ್ರಸವ ಕ್ಷಮತೆ’ ಉತ್ಕøಷ್ಟವಾಗಿದೆ. ಸಮನ್ವಯ ದೃಷ್ಟಿ, ಗಂಭೀರ
ದೃಷ್ಟಿಕೋನ, ಪರಂಪರೆಯ ಪರಿಜ್ಞಾನ, ಹೊಸ
ಆಶಯದ ಕನಸು, ಅಸಾಧಾರಣ ಭಾಷಾ
ಸೌಂದರ್ಯಗಳಿಂದ ಅಮೃತರು ಅಧುನಿಕ ಯುಗದ
ಅತ್ಯಂತ ಮಹತ್ವದ ಯಕ್ಷಗಾನ ಕವಿ.
ಡಾ.ಪುರುಷೋತ್ತಮ
ಬಿಳಿಮಲೆಯವರ
ಗ್ರಹಿಕೆ
1970ರ
ದಶಕದ ಕೊನೆಯ ಹೊತ್ತಿಗೆ ಯಕ್ಷಗಾನ
ಕ್ಷೇತ್ರವು ತನ್ನ ಸಾಧ್ಯತೆಗಳನ್ನೆಲ್ಲಾ ತೀರಿಸಿಕೊಂಡು
ಜಡವಾಗುತ್ತಿರುವ ಹೊತ್ತಿಗೆ ಎರಡು ಘಟನೆಗಳು ಒಟ್ಟೊಟ್ಟಾಗಿ
ಸಂಭವಿಸಿದವು. ಮೊದಲನೆಯದು ತುಳು ಯಕ್ಷಗಾನಗಳ ಉಗಮ
ಮತ್ತು ಎರಡನೆಯದು ಪಾರಂಪರಿಕ ಯಕ್ಷಗಾನಕ್ಕೆ ಮರುಜೀವ ಕೊಡುವ ಪ್ರಯತ್ನ.
ಈ ಎರಡೂ ಘಟನೆಗಳ
ಮುಂಚೂಣಿಯಲ್ಲಿ ಅಮೃತ ಸೋಮೇಶ್ವರರು ಇದ್ದರೆಂಬುದು
ಗಮನಾರ್ಹ ವಿಚಾರವಾಗಿದೆ. ಕನ್ನಡ ಯಕ್ಷಗಾನವು ತುಳುವಿನ
ಕಡೆಗೆ ಹೊರಳಿಕೊಳ್ಳುವ ಸ್ಥಿತ್ಯಂತರದ ಕಾಲಘಟ್ಟದಲ್ಲಿ ಅಮೃತರು ಕನ್ನಡದಲ್ಲಿ ಆರಂಭವಾಗಿ
ತುಳುವಿನಲ್ಲಿ ಮುಕ್ತಾಯವಾಗುವ ಅಮರ ಶಿಲ್ಪಿ ವೀರ
ಕಲ್ಕುಡ ಪ್ರಸಂಗವನ್ನು ಬರೆದರು. ವೈದಿಕ ಪುರಾಣದ
ಕತೆಯೊಂದನ್ನು ತುಳು ಸಂಸ್ಕøತಿಗೆ
ಜೋಡಿಸಿದ ಈ ಪ್ರಸಂಗವನ್ನು ಅಗರಿ,
ಶೇಣಿ, ಸಾಮಗ, ಮೊದಲಾದ ಅಗಾಧ
ಪ್ರತಿಭೆಯ ಕಲಾವಿದರುಗಳಿದ್ದ ಸುರತ್ಕಲ್ ಮೇಳದ ಕಲಾವಿದರು ಅದ್ಭುತವಾಗಿ
ಪ್ರದರ್ಶಿಸಿದರು. ಮುಂದೆ ಅಮೃತರು ಧರ್ಮಸ್ಥಳ
ಮೇಳಕ್ಕೆ ಸಹಸ್ರ ಕವಚ ಮೋಕ್ಷ,
ಕಾಯಕಲ್ಪ, ಮಹಾಶೂರ ಭೌಮಾಸುರ, ಮಹಾಕಲಿ
ಮಗಧೇಂದ್ರ, ತ್ರಿಪುರದಹನ, ವಂಶವಾಹಿನಿ, ಮೊದಲಾದ ಅತ್ಯದ್ಭುತ ಪ್ರಸಂಗಗಳನ್ನು
ಬರೆದರು. ಆ ಕಾಲದಲ್ಲಿ ಧರ್ಮಸ್ಥಳ
ಮೇಳದಲ್ಲಿದ್ದ ಶ್ರೀ ಕಡತೋಕ ಮಂಜುನಾಥ
ಭಾಗವತರು, ಕುಂಬಳೆ ಸುಂದರ ರಾವ್,
ಸೂರಿಕುಮೇರು ಗೋವಿಂದ ಭಟ್ಟ, ಎಂಪೆಕಟ್ಟೆ
ರಾಮಯ್ಯ ರೈ, ವಾಸುದೇವ ಸಾಮಗ,
ತಾರನಾಥ ವರ್ಕಾಡಿ, ನಯನ ಕುಮಾರ್ ಮೊದಲಾದ
ಕಲಾವಿದರು ಈ ಪ್ರಸಂಗಗಳನ್ನು ಅಭೂತಪೂರ್ವಕವಾಗಿ
ರಂಗಕ್ಕೆ ತಂದರು. ನನ್ನ ಪ್ರಕಾರ
ಅದು ಯಕ್ಷಗಾನದ ಸುವರ್ಣಯುಗ. ಈ ಪ್ರಸಂಗಗಳ ವಸ್ತು
ಪೌರಾಣಿಕವಾಗಿದ್ದರೂ ಅದು ರಂಗದಲ್ಲಿ ಕಾಣಿಸಿಕೊಂಡಾಗ
ಅತ್ಯಾಧುನಿಕವಾದ ಅನುಭವಗಳನ್ನು ಕೊಡುತ್ತಿತ್ತು. ಗಿರೀಶ್ ಕಾರ್ನಾಡರ ನಾಟಕಗಳು
ನೀಡುತ್ತಿದ್ದ ರೋಮಾಂಚನವನ್ನು ಕರ್ಣ, ಅಶ್ವಿನಿ ದೇವತೆಗಳು,
ಚಾರ್ವಾಕ, ಭೌಮಾಸುರ, ಭಗೀರಥ, ಮಗಧ ಮೊದಲಾದ
ಪಾತ್ರಗಳೂ ನೀಡುತ್ತಿದ್ದುವು. ಕಳೆಗುಂದುತ್ತಿದ್ದ ಪೌರಾಣಿಕ ಯಕ್ಷಗಾನಗಳಿಗೆ ಹೊಸ
ಜೀವಕೊಟ್ಟವರಲ್ಲಿ ಅಮೃತರು ಪ್ರಮುಖರು.
ಮೂಲತ:
ಸಾಹಿತಿಯಾಗಿರುವ ಅಮೃತರು ತಾವು ಬರೆದ
ಪ್ರಸಂಗಗಳನ್ನು ಉತ್ತಮ ಸಾಹಿತ್ಯಿಕ ಪಠ್ಯಗಳಾಗಿ
ರೂಪಿಸಿಕೊಂಡಿದ್ದಾರೆ. ಈ ಕಾರಣದಿಂದಾಗಿ ಅವರ
ಪ್ರಸಂಗಗಳು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ
ಗಟ್ಟಿಯಾಗಿ ನಿಲ್ಲಬಲ್ಲವು. ‘ಸಾಹಿತ್ಯ
ಹೀಗೆ ಇದ್ದರೆ, ನಮಗೆ ಹಾಡಲೂ
ಖುಷಿಯಾಗುತ್ತದೆ’ ಎಂದು ಕಡತೋಕರು ಒಮ್ಮೆ
ನನ್ನೊಡನೆ ಹೇಳಿದ್ದರು. ಭಾಷೆ, ಕಥನತಂತ್ರ, ವಸ್ತುವಿನ
ಆಧುನಿಕತೆ ಮತ್ತು ಬಳಸುವ ಉಪಮೆ
- ರೂಪಕಗಳು ಅಮೃತರನ್ನು ಆಧುನಿಕ ಪಾರ್ತಿ ಸುಬ್ಬ
ಎಂಬ ಬಿರುದಿಗೆ ಅನ್ವರ್ಥಕಗೊಳಿಸಿದುವು. ಕನ್ನಡ ಸಾಹಿತ್ಯದ ವಿಸ್ತಾರವಾದ
ಓದು ಅಮೃತರನ್ನು ಇತರ ಪ್ರಸಂಗಕರ್ತರಿಂದ ಬೇರೆಯಾಗಿಸಿತು.
ಯಕ್ಷಗಾನದ
ಅನೇಕ ಆಯಾಮಗಳ ಬಗ್ಗೆ ಅಧಿಕೃತವಾಗಿ
ಮಾತಾಡಬಲ್ಲ ಅಮೃತ ಸೋಮೇಶ್ವರರು ನಮ್ಮ
ನಡುವಣ ಅತ್ಯಂತ ಪ್ರತಿಭಾಶಾಲೀ ಸಂಸ್ಕøತಿ ವಿಮರ್ಶಕ. ಹಾಗಾಗಿಯೇ
ಅವರು ಮಾಡಿದ ಅನೇಕ ಪ್ರಯೋಗಗಳು
ಇವತ್ತು ಪರಂಪರೆಯ ಭಾಗವಾಗಿ ನಮ್ಮ
ನಡುವೆ ಉಳಿದಿವೆ.
* ಡಾ.
ಸುಂದರ
ಕೇನಾಜೆ
Comments
Post a Comment