ಪಾತ್ರದ ಮುಂದೆ ವ್ಯಕ್ತಿಯನ್ನು ಮರೆಯುವ ಉಡುವೆಕೋಡಿ
ಇವರು
ಇರುವುದೇ ಹೀಗೆ. ಪ್ರಾಯ 75 ದಾಟಿದೆ.
ಹೆಸರಿನ ಹಿಂದೆ ಹೋಗುವ, ದುಡ್ಡೇ
ಅಂತಿಮವೆಂದು ಬಯಸುವ, ಎಲ್ಲಾ ಬಿಟ್ಟು
ತನ್ನ ಅಗಾಧ ಕಲಾ ಸಾಮಥ್ರ್ಯ
ಅಭಿವ್ಯಕ್ತಗೊಳ್ಳಲೇಬೇಕೆನ್ನುವ
ಯಾವ ಆತುರತೆಯೂ ಇಲ್ಲದವರು. ಬೇಕೆನಿಸಿದರೆ ವೇದಿಕೆ ಹತ್ತಿಯಾರು, ಇಲ್ಲಾ
ವರ್ಷಗಟ್ಟಲೇ ಸುಮ್ಮನೆ ಕುಳಿತಾರು, “ಸನ್ಮಾನ
ಮಾಡಿ ಗೌರವಿಸುತ್ತೇವೆ,” ಎಂದರೆ ಆ ಭಾಗಕ್ಕೆ ತಲೆ
ಹಾಕದೇ ಮಲಗಿಯಾರು, ಕಾರ್ಯಕ್ರಮಗಳಿಗೆ ಕರೆದರೂ ಒಂದೆ, ಕರೆಯದಿದ್ದರೂ
ಒಂದೆ. ತಾನಾಗಿ ಬರುತ್ತೇನೆ ಎಂದು
ಎಲ್ಲೂ ಹೇಳಿರಲಾರರು, ಇನ್ನೊಬ್ಬ ಕರೆದರೂ ಇಷ್ಟ ಇದ್ದರೆ
ಹೋದಾರು, ಇಲ್ಲಾ, “ನನ್ನನ್ನು ಬಿಟ್ಟು
ಬಿಡಿ”
ಎಂದಾರು. ಆದರೆ ವೇದಿಕೆ ಹತ್ತಿ
ಮಾತಿಗಿಳಿದರೆ ಮಾತ್ರ ಖಳನಾಯಕ ನಾಯಕನಾದಾನು,
ನಾಯಕ ಸೇವಕನಾದಾನು. ತನ್ನ ಮಾತಿನಲ್ಲಿ ಜಾಳು
ಕಾಳಾಗಬಹುದು, ಕಾಳಿಗೆ ಮರುಜೀವ ತುಂಬಬಹುದು.
ಯಾರೇ ಇರಲಿ, ಇಲ್ಲದಿರಲಿ. ಕೇಳಲಿ,
ಬಿಡಲಿ ತನಗೆ ನೀಡಿದ ಪಾತ್ರಕ್ಕೆ
ಒಂದಿನಿತೂ ಚ್ಯುತಿ ಬಾರದಂತೆ ಪಾತ್ರ
ಗೌರವವನ್ನು ಎತ್ತಿ
ಹಿಡಿಯುತ್ತಾ ಅರ್ಥಗಾರಿಕಾ ಕ್ಷೇತ್ರದ ಗಾಂಭೀರ್ಯವನ್ನೂ ಪಾವಿತ್ರ್ಯತೆಯನ್ನೂ ಉಳಿಸಿಕೊಂಡು ಬಂದ ಅಪೂರ್ವ ಕಲಾವಿದ
ಉಡುವೆಕೋಡಿ ಸುಬ್ಬಪ್ಪಯ್ಯ. ಮೊನ್ನೆ ಮೊನ್ನೆ 75 ವರ್ಷಗಳನ್ನು
ಪೂರೈಸಿದ್ದಾರೆ. ಅರ್ಧ ಶತಮಾನಕ್ಕೂ ಹೆಚ್ಚು
ಕಾಲ ತಾಳಮದ್ದಳೆಯ ಮಾತಿನ ಲೋಕದಲ್ಲಿ ಕಳೆದಿದ್ದಾರೆ,
ಈ ನಡುವೆ ಕೆಲವು
ದಶಕಗಳು ಅಡಿಕೆ, ತೆಂಗುಗಳ ಮಧ್ಯೆ
ಮೌನಿಯಾಗಿ ನಿಂತಿದ್ದಾರೆ. ಬೇಕೆಂದಾಗ ಮಾತನಾಡುವ, ಬೇಡವೆಂದಾಗ ಸುಮ್ಮನಿರುವ ಕಲಾವಿದನಿಗಿಲ್ಲದ ಈ ಸ್ವಾತಂತ್ರ್ಯವನ್ನು ತಾನು
ಮಾತ್ರ ಬಳಸಿಕೊಂಡು ಇಂದಿಗೂ ಬೇಡಿಕೆಯ ಅರ್ಥಧಾರಿಯಾಗಿ
ತಾಳಮದ್ದಳೆ ಕ್ಷೇತ್ರದಲ್ಲಿ ಉಳಿದಿದ್ದಾರೆ. ಪ್ರಾಯಶಃ ಇಂತಹ ಅಪರೂಪದ
ಯಕ್ಷಗಾನ ಕಲಾವಿದನೋರ್ವನಿದ್ದರೆ ಅದು ಉಡುವೆಕೋಡಿ ಸುಬ್ಬಪ್ಪಯ್ಯನವರು
ಮಾತ್ರ. ಕಲಾಕ್ಷೇತ್ರದ ಮೇಲೆ ತಾನೇ ಕಟ್ಟಿಕೊಂಡ
ಕೆಲವು ಬದ್ಧತೆ, ಹಲವು ಪ್ರಾಮಾಣಿಕತೆ
ಮತ್ತು ಅಗಾಧ ಅಧ್ಯಯನಶೀಲತೆ ಇದೇ
ಉಡುವೆಕೋಡಿಯವರನ್ನು ನಿತ್ಯ ಹರಿದ್ವರ್ಣವಾಗಿಸಿದೆ.
ತಾಳಮದ್ದಳೆ
ಪ್ರಿಯರಿಗೆ ಉಡುವೆಕೋಡಿ ಎಂದಾಕ್ಷಣ ಕಣ್ಣ ಮುಂದೆ ಬರುವುದೇ
ಇವರ ರಾವಣ, ಕೌರವ, ವಾಲಿ,
ಕಂಸ ಹೀಗೆ ಪ್ರತಿನಾಯಕರ ಸಾಲು.
ಇವರ ಮಾತಿಗೆ ಸಿಕ್ಕ ಈ
ಪಾತ್ರಗಳು ತಮ್ಮ ವ್ಯಕ್ತಿತ್ವಕ್ಕೆ ವಿರುದ್ಧವಾಗಿ
ಬೆಳೆಯುತ್ತಾರೆ ಎಂದೇನಾದರೂ ನಾವು ತೀರ್ಮಾನಿಸಿದರೆ ಉಡುವೆಕೋಡಿಯವರು
ಮಾತ್ರ ಅದಕ್ಕೆ “ ಈ ಪಾತ್ರಗಳು ಖಳರೆಂದು
ಸ್ವತಃ ಅವರೇ ಒಪ್ಪಿಕೊಳ್ಳುವುದಿಲ್ಲ. ಅವರಿಗೆ
ಅವರು ಸರಿಯೇ, ಜಗತ್ತಿನಲ್ಲಿರುವ ಜನರೂ
ಕೂಡ ಹೀಗೇ ಅಲ್ಲವೇ” ಎಂದು
ಮರುಪ್ರಶ್ನೆ ಹಾಕುತ್ತಾರೆ. ಆದ್ದರಿಂದ ಪಾತ್ರವನ್ನು ಯಾವ ಪೂರ್ವಗ್ರಹದ ಕಣ್ಣಿನಿಂದಲೂ
ನೋಡದೆ ಆ ಪಾತ್ರ ತಾನು
ಎಂದು ಮಾತನಾಡುವುದೇ ಉಡುವೆಕೋಡಿಯವರ ಯಶಸ್ಸಿನ ಗುಟ್ಟು. ಈ
ಪ್ರೌಢಿಮೆಗಾಗಿ ಅವರು ಸ್ಮರಿಸುವುದು ಅವರ
ಗುರುಗಳಾದ ದೇರಾಜೆ ಸೀತಾರಾಮಯ್ಯನವರು ಗದರಿಸಿ
ಹೇಳಿದ ಸಂದರ್ಭವನ್ನು, ”ಅರ್ಥಗಾರಿಕೆಯ ಆರಂಭದಲ್ಲಿ ನಾನು ಸೋಲಬೇಕಾದ ಪಾತ್ರಗಳಲ್ಲಿ ಸೋಲದೇ
ತರ್ಕ ಮಾಡುತ್ತಿದ್ದೆ. ಆದರೆ ಒಮ್ಮೆ ದೇರಾಜೆಯವರು
ನನ್ನ ಅರ್ಥಗಾರಿಕೆಯ ಕೇಳುಗನಾಗಿ ಕುಳಿತಿದ್ದರು, ನನ್ನ ಮೊಂಡು ವಾದ
ನೋಡಿ, ಸೋಲುವ ಪಾತ್ರಗಳು ಸೋಲಲೇ
ಬೇಕು, ಗೆಲ್ಲುವ ಪಾತ್ರಗಳನ್ನು ಗೆಲ್ಲಿಸಲೇಬೇಕು
ಎಂದು ನನಗೆ ಬೈದು ಹೇಳಿದರು.
ಆ ನಂತರ ನಾನು
ಪಾತ್ರ ಗೌರವಕ್ಕೆ ಮಹತ್ವ ನೀಡಿದೆ” ಎಂದು
ಹೇಳುತ್ತಾರೆ. “ಶೇಣಿ ಮತ್ತು ದೇರಾಜೆಯವರ
ಪ್ರಭಾವ ಎಲ್ಲರಂತೆ ನನ್ನಲ್ಲೂ ಆಗಿದೆ. ನನಗೆ ಗೊತ್ತಿಲ್ಲದನ್ನು ಅವರಿಂದ ಹಾಗೆ
ಉಳಿದ ಕಲಾವಿದರಿಂದಲೂ ಕೇಳಿ ಕಲಿತಿದ್ದೇನೆ “
ಎನ್ನುವ ವಿನಯವಂತಿಕೆ ಇಂದಿಗೂ
ಉಡುವೆಕೋಡಿಯವರಲ್ಲಿದೆ.
ಒಪ್ಪಿಕೊಂಡ
ಕಾರ್ಯಕ್ರಮಗಳಿಗೆ ಸಮಯಕ್ಕೆ ಸರಿಯಾಗಿ, ನಿಗದಿತ
ಪಾತ್ರಕ್ಕೆ ಪೂರ್ವ ತಯಾರಿಯಾಗಿ, ಕುಳಿತ
ವೇದಿಕೆಯಲ್ಲಿ ಅಚ್ಚುಕಟ್ಟಾಗಿ ಮತ್ತು ವಹಿಸಿದ ಪಾತ್ರಕ್ಕೆ
ನ್ಯಾಯೋಚಿತವಾಗಿ ಇಂದಿಗೂ ಮಾತನಾಡುವ ಗುಣ
ಉಡುವೆಕೊಡಿಯವರದು. ಸಂಭಾವನೆಗಾಗಿ
ಕಾದು ಕುಳಿತುಕೊಳ್ಳದೆ ಸಂಘಟಕರಿಗೆ ಸಂಕಟ ತರಿಸದೇ, ತಾನು
ಮತ್ತು ತನ್ನ ಪಾತ್ರ, ಹೀಗೆ
ಪೂರ್ವ ನಿರ್ಧರಿತ ಚೌಕಟ್ಟಿನ
ಒಳಗೆ ಕರಾರುವಕ್ಕಾಗಿ ಗುರುತಿಸಿಕೊಂಡವರು ಇವರು. ಹಾಗೆಂದು ಸಹಕಲಾವಿದರ,
ಸಂಘಟಕರ ಅಥವಾ ಕೇಳುಗರ ಅತ್ರಾಣವನ್ನೆಲ್ಲಾ
ನುಂಗಿ ಕುಳಿತುಕೊಳ್ಳುತ್ತಾರೆ ಎಂದರ್ಥವಲ್ಲ. ಸಂದರ್ಭ ಸನ್ನಿವೇಶಗಳು ಪ್ರತಿಕೂಲವಾದರೆ
ತಕ್ಷಣ ಪ್ರತಿಕ್ರೈಸುತ್ತಾರೆ, ನಿರ್ದಾಕ್ಷಿಣ್ಯವಾಗಿ ತನಗೆ ಸರಿ ಕಾಣಲಿಲ್ಲವೆಂದೂ
ಹೇಳುತ್ತಾರೆ. ಅಂತಹ ಕೆಲವು ಸಂದರ್ಭಗಳೂ
ಉಡುವೆಕೋಡಿಯವರ ಕಲಾ ಬದುಕಿನಲ್ಲಿ ಬಂದಿವೆ.
ಪ್ರಚಾರ,
ಸನ್ಮಾನ, ಶಾಲು, ಹಾರವೆಂದರೆ ಇವರಿಗೆ
ಒಂದು ರೀತಿಯ ರೇಜಿಗೆ. ಇದರಲ್ಲಿನ
ತೀರಾ ಅನಾಸಕ್ತಿ ಮತ್ತು ತಪ್ಪಿಸಿಕೊಳ್ಳುವ ಗುಣದಿಂದಾಗಿ
ಅದೆಷ್ಟೋ ಪ್ರತಿಷ್ಟಿತ ಗೌರವಾರ್ಪಣೆಗಳನ್ನು ಬಿಟ್ಟುಬಿಟ್ಟಿದ್ದಾರೆ. ಅತ್ಯಂತ ಅನಿರೀಕ್ಷಿತ ಹಾಗೂ
ಅನಿವಾರ್ಯ ಎರಡು ಸಂದರ್ಭವನ್ನು ಹೊರತುಪಡಿಸಿ
ಉಡುವೆಕೋಡಿ ಶಾಲು ಹಾರ ಫಲಪುಷ್ಪಗಳನ್ನು
ಹಿಡಿದದ್ದೇ ಇಲ್ಲ. ಯಾರ ಹಂಗಿಗೂ
ದಾಕ್ಷಿಣ್ಯಕ್ಕೂ ಒಳಗಾಗದ ಅಪರೂಪದ ಕಲಾವಿದ
ಉಡುವೆಕೋಡಿ.“ಸನ್ಮಾನ,ಪ್ರಶಸ್ತಿಗಳನ್ನು ತಿರಸ್ಕರಿಸುವಷ್ಟು
ದೊಡ್ಡ ವ್ಯಕ್ತಿ ನಾನಲ್ಲ. ಆದರೆ
ಇವೆಲ್ಲವೂ ಒಂದು ಅಮಲಿನ ಹಾಗೆ.
ಒಮ್ಮೆ ಅದು ಹಿಡಿದರೆ ಮತ್ತೆ
ಬಿಡಿಸಿಕೊಳ್ಳಲು ಕಷ್ಟ. ಹಾಗಾಗಿ ನಾನು
ದೂರ ಇದ್ದೇನೆ. ಅಷ್ಟಕ್ಕೂ ನನಗೆ ಗೊತ್ತಿರುವುದನ್ನು ನಾಲ್ಕು
ಜನರ ಮುಂದೆ ಹೇಳಿದ್ದಕ್ಕೆ ಇಂತದ್ದೆಲ್ಲವನ್ನು
ಯಾಕೆ ಪಡೆದುಕೊಳ್ಳಬೇಕು ಎನ್ನುವುದೇ ನನ್ನ ನಿಲುವು”. ಈ
ಎಲ್ಲ ವಿಶೇಷ ವ್ಯಕ್ತಿತ್ವದ ಮಧ್ಯೆ
ಉಡುವೆಕೋಡಿ ಸುಬ್ಬಪ್ಪಯ್ಯ ಎನ್ನುವ ಹೆಸರು ಯಕ್ಷಗಾನದ
ಮೌಖಿಕ ಪರಂಪರೆಯಲ್ಲಿ ನಿತ್ಯ ನೂತನ. ತಾನು
ನಿರ್ವಹಿಸುವ ಪಾತ್ರಕ್ಕೆ ಎಂದಿಗೂ ಅನ್ಯಾಯವಾಗಬಾರದು ಎಂದು
ಇದುವರೆಗೂ ಬಲವಾಗಿ ನಂಬಿಕೊಂಡು ಬಂದವರು
ಮತ್ತು ಅದುವೇ ಎಲ್ಲಾ ವ್ಯಕ್ತಿನಿಷ್ಟ
ಪುರಸ್ಕಾರಗಳಿಗಿಂತ ಮೇಲೆಂದೂ ಭಾವಿಸಿಕೊಂಡವರು.
75 ದಾಟಿದ ಉಡುವೆಕೋಡಿ
ಉಡುಕೋಡಿ
ಸುಬ್ಬಪ್ಪಯ್ಯ ಸುಳ್ಯ ತಾಲೂಕಿನ ಕಲ್ಮಡ್ಕ
ಗ್ರಾಮದ ಉಡುವೆಕೋಡಿಯವರು. ತಂದೆ ನಾರಾಯಣಯ್ಯ, ಹವ್ಯಾಸಿ
ಯಕ್ಷಗಾನ ಕಲಾವಿದರು ಜೊತೆಗೆ ಆ ಕಾಲದ
ಪಟೇಲರು. ಅರವತ್ತರ ದಶಕದಲ್ಲೇ ಉಡುವೆಕೋಡಿಯವರು
ಮಂಗಳೂರಿನ ಸೈಂಟ್ ಅಲೋಸಿಯಸ್ಸ್ನಲ್ಲಿ
ಚರಿತ್ರೆ ಮತ್ತು ರಾಜ್ಯಶಾಸ್ತ್ರದಲ್ಲಿ ಪದವಿ
ಪಡೆದವರು. ಹತ್ತಾರು ಎಕರೆ ಅಡಿಕೆ,
ತೆಂಗು, ರಬ್ಬರ್ ತೋಟಗಳ ವೃತ್ತಿಯೊಂದಿಗೆ
ಯಕ್ಷಗಾನ ಕಲೆಯನ್ನು ಪ್ರವೃತ್ತಿಯಾಗಿ ಸ್ವೀಕರಿಸಿಕೊಂಡವರು. ಕಲ್ಮಡ್ಕದ ಸಂಗಮ ಕಲಾ ಸಂಘದಲ್ಲಿ
ಸಕ್ರಿಯರಾಗಿ ನೂರಾರು ತಾಳಮದ್ದಳೆಯನ್ನು ಸಂಘಟಿಸಿದ್ದಲ್ಲದೇ
ಸ್ವತಃ ಅರ್ಥಧಾರಿಯಾಗಿ ಮನ್ನಣೆ ಪಡೆದವರು. ಎಳವೆಯಲ್ಲಿಯೇ
ಶೇಣಿ, ಸಾಮಗ, ದೇರಾಜೆ, ಪೆರ್ಲ,
ತೆಕ್ಕಟ್ಟೆ, ಕೀರಿಕ್ಕಾಡು, ಕೊಳಂಬೆ ಇವರೆಲ್ಲರೊಂದಿಗೆ ಒಡನಾಡಿಕೊಂಡು
ಇವರ ಅರ್ಥಗಾರಿಕೆಯ ಗರಡಿಯಲ್ಲಿ ಪಳಗಿದವರು. ಮುಂದೆ ಕುಂಬ್ಳೆ, ಜೋಷಿ,
ಕೋಳ್ಯೊರು, ಮೂಡಂಬೈಲು, ಗೋವಿಂದ ಭಟ್ ಈ
ಸಮಕಾಲಿನರೊಂದಿಗೆ ನಿರಂತರ ವೇದಿಕೆ ಹಂಚಿಕೊಂಡವರು.
ಹೊಸ ತಲೆಮಾರಿನ ಎಲ್ಲಾ ಭರವಸೆಯ ಅರ್ಥಧಾರಿಗಳ
ಜೊತೆಗೂ ಅತ್ಯಂತ ಗೌರವಯುತವಾಗಿಯೇ ಅರ್ಥ
ಹೇಳುತ್ತಿರುವವರು. ಎದುರು ಕುಳಿತವ ಯಾರೇ
ಆದರೂ ಆತನನ್ನು ಒಬ್ಬ ವ್ಯಕ್ತಿ
ಎಂದು ಪರಿಗಣಿಸದೇ ಅದೊಂದು ಪುರಾಣ ಪಾತ್ರವೆಂದು
ಸಂವಾದಿಸುತ್ತಾ ಬಂದವರು ಮತ್ತು ಬರುತ್ತಿರುವವರು
ಉಡುವೆಕೋಡಿ ಸುಬ್ಬಪ್ಪಯ್ಯನವರು. 1972 ರಿಂದ ಸುಳ್ಯ ತಾಲೂಕಿನ
ಕುಕ್ಕುಜಡ್ಕದಲ್ಲಿ ನೆಲೆಸಿರುವ ಇವರು ಹಲವು ಎಕರೆ
ತೋಟಗಳ ಮಾಲಿಕ. ಯೌವನದಲ್ಲಿ ಅತ್ಯುತ್ತಮ
ಬ್ಯಾಡ್ಮಿಂಟನ್ ಆಟಗಾರ. ಯವಕ ಮಂಡಲದಂತಹ
ಸಂಘಟನೆಯ ಸ್ಥಾಪಕ, ಕಲ್ಮಡ್ಕ ಸಹಕಾರಿ
ಸಂಘದ ಅಧ್ಯಕ್ಷರಾಗಿ ಒಂದಷ್ಟು ವರ್ಷ ದುಡಿದಿದ್ದಾರೆ.
ಜೊತೆಗೆ ಮಂಗಳೂರಿನ ಪ್ರತಿಷ್ಟಿತ ರೆಗ್ಯುಲೇಟಿಂಗ್ ಮಾರ್ಕೆಟಿಂಗ್ ಸೊಸೈಟಿ ಹಾಗೂ ಶತಮಾನ
ಕಂಡ ಎಸ್.ಕೆ.ಎ.ಸಿ.ಎಂ.ಎಸ್ನ ನಿರ್ದೇಶಕರಾಗಿ ಕೆಲಸ
ಮಾಡಿದ್ದಾರೆ. ಊರಿನ ಸಾಮಾಜಿಕ, ಧಾರ್ಮಿಕ
ಕ್ಷೇತ್ರಗಳಲ್ಲಿ ಇಂದಿಗೂ ದುಡಿಯುತ್ತಿರುವ ಉಡುವೆಕೋಡಿಯವರ
ಪತ್ನಿ ಗೃಹಿಣಿ, ಮಗ ಬೆಂಗಳೂರಿನಲ್ಲಿ
ಉದ್ಯಮಿ, ಇಬ್ಬರು ಹೆಣ್ಣು ಮಕ್ಕಳಲ್ಲಿ
ಒಬ್ಬರು ಪುತ್ತೂರಿನಲ್ಲಿದ್ದರೆ, ಇನ್ನೊಬ್ಬರು ಇಂಗ್ಲೇಡಿನಲ್ಲಿದ್ದಾರೆ. ಕಳೆದ ಜನವರಿ ತಿಂಗಳಲ್ಲಿ
75 ವರ್ಷವನ್ನು ಪೂರೈಸಿದ ಉಡುವೆಕೋಡಿಯವರು ಪ್ರಾಯ
ತೋರಿಸಿಕೊಳ್ಳದ ದೇಹದಾಢ್ಯತೆ ಮತ್ತು ಆರೋಗ್ಯವನ್ನು ಹೊಂದಿದವರು.
ಯಕ್ಷಗಾನ ಕಲಾಜಗತ್ತಿಗೆ ಮಾದರಿ ಕಲಾವಿದನಾಗಿ ಕಾಣಬಲ್ಲ
ಉಡುವೆಕೋಡಿಯವರು ಶತಮಾನ ಕಾಣಲಿ ಎನ್ನುವುದೇ
ನಮ್ಮೆಲ್ಲರ ಆಶಯ.
ಪ್ರತಿಭಟಿಸಿದ ಎರಡು
ಸಂದರ್ಭ
“ಒಮ್ಮೆ
ಒಂದು ಕಡೆಯ ತಾಳಮದ್ದಳೆಯಲ್ಲಿ
ಕರ್ಣಾರ್ಜುನ ಪ್ರಸಂಗ. ನನ್ನ
ಕರ್ಣ “ಶಿವ ಶಿವಾ ಸಮರದಲಿ
ಕೈಸೋತೆನಲ್ಲಾ”
ಈ ಪದ್ಯಕ್ಕೆ ನಾನು
ಅರ್ಥ ಹೇಳಬೇಕಿತ್ತು . ಅತ್ಯಂತ ದುಃಖ ಮತ್ತು
ದುರಂತದ ಸನ್ನಿವೇಶ ಇದು. ಆದರೆ ಭಾಗವತರು
ಮತ್ತು ಮದ್ಲೆಗಾರರು ಈ ಪದ್ಯವನ್ನು ಸಮಾರು
20 ನಿಮಿಷಕ್ಕೂ ಹೆಚ್ಚು ಕಾಲ ಎಳೆದಾಡಿದರು.
ಪದ್ಯ ಮುಗಿದ ನಂತರ ನನಗೆ
ಅರ್ಥ ಹೇಳುವ ವ್ಯವಧಾನವಾಗಲಿ ಹುಮ್ಮಸ್ಸಾಗಲಿ
ಉಳಿಯಲಿಲ್ಲ. ನಾನು ಅರ್ಥ ಹೇಳದೇ
ಮುಂದೆ ಹೋಗಿ ಎಂದೆ. ಆ
ಪದ್ಯ ಬಿಟ್ಟು ನಂತರದ ಪದ್ಯಕ್ಕೆ
ಅರ್ಥ ಹೇಳಿದೆ. ಅವರು ಆಲಾಪನೆಯನ್ನೋ
ಅವರ್ತಗಳನ್ನೋ ನಡೆಸಬಾರದು ಎನ್ನುವುದು ಇಲ್ಲಿ ನನ್ನ ಆಕ್ಷೇಪವಲ್ಲ.
ಆದರೆ ಸಂದರ್ಭವನ್ನು ಗಮನಿಸಲೇಬೇಕು ಎನ್ನುವುದು ನನ್ನ ಅಭಿಮತ. ಈ
ಪದ್ಯದ ಬದಲು ಅವರಿಗೆ ಅದಕ್ಕೂ
ಮುನ್ನ ಬರುವ ಬೇರೆ ಪದ್ಯಗಳನ್ನು
ಬೇಕಾದಷ್ಟು ಹೊತ್ತು ಎಳೆಯಬಹುದಿತ್ತು. ಉದಾಹರಣೆಗೆ
“ಏನು ಚಿಂತೆ ಬಂತು ಪಾರ್ಥ”
ಈ ಪದ್ಯಕ್ಕೆ ಎಷ್ಟು
ಹಾಡಿಕೊಂಡರೂ ಮದ್ಲೆ ಬಾರಿಸಿದರೂ ಔಚಿತ್ಯ
ಕೆಡುವುದಿಲ್ಲ. ಆದರೆ ಇಲ್ಲಿ ಮಾತ್ರ
ಸರಿಯಲ್ಲ ಅಂತ ಕಂಡು ಸುಮ್ಮನಾದೆ”.
ಎಂದು ತಾನು ವ್ಯಕ್ತಪಡಿಸಿದ ಸಾತ್ವಿಕ
ಸಿಟ್ಟನ್ನು ಹೇಳಿಕೊಂಡರು.
ಇನ್ನೊಂದು
ಸಂದರ್ಭ, ಅದು ತೀರಾ ಸಜ್ಜನ
ಮತ್ತು ಹಿಂದುಳಿದ ವರ್ಗದ ಭಾಗವತರೊಬ್ಬರು ಹಾಡಿಗಿದ್ದ
ತಾಳಮದ್ದಳೆ, ಹಿರಿಯ ಅರ್ಥಧಾರಿಯೊಬ್ಬರ ಕೌರವ.
ಪ್ರಸಂಗ ಆರಂಭವಾಗುವ ಮೊದಲೇ ಈ ಅರ್ಥಧಾರಿ
‘ಯಾವೆಲ್ಲಾ ಪದ್ಯ ಗುರುತಿಸಿದ್ದಿ’ ಎಂದು
ದರ್ಪದಿಂದ ಭಾಗವತರಲ್ಲಿ ಕೇಳಿದರು. ಅವರು ಹೆದರಿ ಹೆದರಿ
‘ನೀವೇ ಹೇಳಿ’
ಎಂದು ಇವರಿಗೇ ಪುಸ್ತಕ ಕೊಟ್ಟರು.
ಹಾಗೆ ಇವರು ಗುರುತು ಹಾಕಿಕೊಟ್ಟರು.
ತಾಳಮದ್ದಳೆ ಆರಂಭವಾಯಿತು. ಒಂದು ಪದ್ಯ ಮುಗಿದು
ಇನ್ನೊಂದು ಪದ್ಯ ಭಾಗವತರು ಹಾಡುವಾಗ
‘ನಿನ್ನಲ್ಲಿ ಅದನ್ನು ಹಾಡಲು ಯಾರು
ಹೇಳಿದ್ದು ? ಅದು ಬೇಡ, ಕೆಳಗಿನದ್ದನ್ನು
ಹಾಡು’
ಎಂದು ಈ ಅರ್ಥಧಾರಿ ತಾಳಮದ್ದಳೆಯ
ಮಧ್ಯದಲ್ಲೇ ಭಾಗವತರನ್ನು ಗದರಿಸಿದರು. ಅದು ನನಗೆ ಸರಿ
ಕಾಣಲಿಲ್ಲ. ತಕ್ಷಣ ನಾನು, ‘ನೀವೇ
ಅಲ್ವಾ ಗುರುತು ಹಾಕಿಕೊಟ್ಟದ್ದು. ಈಗ
ನೀವು ಗದರಿಸುವುದು ಎಂತದ್ದು ?’ ಎಂದು ಕೇಳಿದೆ. ಅವರು
ತಾಳಮದ್ದಳೆಯ ಮಧ್ಯದಲ್ಲೇ ಒಬ್ಬ ಭಾಗವತನನ್ನು ನಿಯಂತ್ರಿಸುವುದಾದರೆ
ನಾನ್ಯಾಕೆ ಕೇಳಬಾರದು. ತಾಳಮದ್ದಳೆ ಮುಗಿದ ನಂತರ ಅನೇಕರು
ನೀವು ಪ್ರಶ್ನಿಸಿ ಬಾಯಿ ಮುಚ್ಚಿಸಿದ್ದು ಸರಿಯಾಗಿದೆ
ಎಂದು ಹೇಳಿದರು.
ಶೇಣಿಯ ತರ್ಕ
ಮತ್ತು
ದೇರಾಜೆಯ
ಭಾವ
ಶೇಣಿ
ಮತ್ತು ದೇರಾಜೆಯವರಿಗೆ ಒಂದು ಸ್ಥಾನದ ಗೌರವ
ಕೊಡುತ್ತಾ ಬಂದವ ನಾನು. ಶೇಣಿಯವರೊಂದಿಗೆ
ಅರ್ಥ ಹೇಳಬೇಕಾದರೆ ಸರ್ವ ವಿಧದಿಂದಲೂ ಎಚ್ಚರದಿಂದ
ಇರಬೇಕು. ಅವರಲ್ಲಿ ನಿಗ್ರಹಾನುಗ್ರಹ ಎರಡೂ
ಇತ್ತು. ಹಾಗಾಗಿ ಎಷ್ಟು ಎಚ್ಚರವಿದ್ದರೂ
ಸಾಲದಾಗಿತ್ತು. ಶೇಣಿಯವರು ತರ್ಕ ಮತ್ತು ವೈಚಾರಿಕತೆಗೆ
ಒತ್ತು ನೀಡಿದವರು. ಅದೇ ದೇರಾಜೆಯವರು ಭಾವಕ್ಕೆ
ಆದ್ಯತೆ ನೀಡಿದವರು. ಅದು ಹೇಗಿತ್ತೆಂದರೆ, ಒಮ್ಮೆ
ಭೀಷ್ಮಾರ್ಜುನ ಪ್ರಸಂಗ. ದೇರಾಜೆಯವರ
ಭೀಷ್ಮ, ನನ್ನ ಕೌರವ. ದೇರಾಜೆಯವರ
ಭೀಷ್ಮ ಹೇಗೆಂದರೆ ಕೌರವನನ್ನು ಒಲಿಸಿ ಪಾಂಡವರಿಗೆ ರಾಜ್ಯ
ಕೊಡು ಮಗನೇ ಎಂದು ಹೇಳುವ
ಭೀಷ್ಮ. ಅಲ್ಲೊಂದು ಪದ್ಯ ಬರುತ್ತದೆ. “ತರಳ
ಲಾಲಿಸು ಧರ್ಮಜಾತನ ಸರಳ ಸದ್ಗುಣಾಚರ” ಹೀಗೆ.....
ಮಂಡೆಚ್ಚರ ಪದ್ಯ. ಈ ಪದ್ಯಕ್ಕೆ
ಅರ್ಥ ಹೇಳಿದ ನಂತರ ಕೌರವನಿಗೆ
ಒಂದು ಪದ್ಯ ಇದೆ. ಅದು
ಮೊದಲಿನ ಪದ್ಯವನ್ನು ಖಂಡಿಸಿ ಮಾತನಾಡಲು ಇರುವ
ಪದ್ಯ. ಆದರೆ ಆ ದಿನ
ಆ ಪದ್ಯಕ್ಕೆ ನಾನು
ಅರ್ಥವನ್ನೇ ಹೇಳಲಿಲ್ಲ. ಇದು ಪದ್ಯಕ್ಕೆ ಅರ್ಥ
ಹೇಳದ ನನ್ನ ಜೀವನದ ಎರಡೇ
ಎರಡು ಸಂದರ್ಭದಲ್ಲಿನ ಒಂದು ಸಂದರ್ಭ. ತಾಳಮದ್ದಳೆ
ಮುಗಿದ ಬಳಿಕ ಯಾಕೆ ಅರ್ಥ
ಹೇಳಲಿಲ್ಲ ಎಂದು ದೇರಾಜೆಯವರು ಕೇಳಿದರು.
“ಸಾಧ್ಯವಿಲ್ಲ, ಅಷ್ಟೂ ಭಾವಪೂರ್ಣವಾಗಿ ಅರ್ಥ
ಹೇಳಿದ್ದಿರಿ, ನಾನೇನಾದರು ರಾಜ್ಯ ಕೊಡುವುದಾದರೆ ‘ಇಕ್ಕೊಳ್ಳಿ’
ಎಂದು ಕೊಟ್ಟು ಬಿಡುತ್ತಿದ್ದೆ, ಆದರೆ
ನಾನು ಅಲ್ಲಿ ಕೌರವ, ಹೇಗೆ ತಾನೇ
ಕೊಡಲು ಸಾಧ್ಯ? ಭಾವನೆಗಳಿಂದ ಕಟ್ಟಿ
ಹೋದೆ”
ಎಂದೆ. ಅದೇ ಶೇಣಿಯವರ ಭೀಷ್ಮನಾದರೆ
ಬೈಯುವುದೆ. “ನಿನಗೆ ಭಾಷೆ ಉಂಟೋ
ಕೌರವಾ ? ನನ್ನ ಮಾತು ಕೇಳದಿದ್ದರೆ
ನೀನು ಹಾಳಾಗುತ್ತಿ”
ಹೀಗೆ. ದೇರಾಜೆಯವರು,” ಹಾಳಾಗಬೇಡ ಮಗನೇ, ಜಾಗ್ರತೆ ಮಾಡಿಕ್ಕೋ”
ಎರಡರ ವ್ಯತ್ಯಾಸ ನೋಡಿ. ಒಂದೇ ಪಾತ್ರ,
ಚಿತ್ರಿಸುವ ವಿಧಾನ ಮಾತ್ರ ಬೇರೆ.
ಕಲಾವಿದ ಎನ್ನುವುದೇ
ಒಂದು
ಜಾತಿ
ಕೇನಾಜೆ: ತಾಳಮದ್ದಳೆಯ
ಮಾತುಗಾರನಾಗಲು ಪ್ರೇರಣೆ ?
ಉಡುವೆಕೋಡಿ : ಒಂದು ನನ್ನ ಮನೆ.
ಕಲಾವಿದರ ಮತ್ತು ಕಲಾಪೋಷಕರ ಮನೆ.
ಇನ್ನೊಂದು ಕಲ್ಮಡ್ಕ ಪರಿಸರ. ಕಲ್ಮಡ್ಕದಲ್ಲಿ
ಪ್ರತೀವರ್ಷ ಮಳೆಗಾಲದಲ್ಲಿ ತಾಳಮದ್ದಳೆ ನಡೆಸುತ್ತಿದ್ದೆವು. ಅದು ಪ್ರತೀ ಶನಿವಾರ.
ರಾಮಾಯಣದ ಪುತ್ರಕಾಮೇಷ್ಟಿಯಿಂದ ಆರಂಭವಾಗಿ ಶ್ರೀರಾಮ ನಿರ್ಯಾಣದ ವರೆಗೆ,
ಹಾಗೇ ಮಹಾಭಾರತ. ಇದರಿಂದ ತಾಳಮದ್ದಳೆಯ ಪದ್ಯದ
ನಡೆಗಳನ್ನು ತಿಳಿಯಲು ಸಾಧ್ಯವಾಯಿತು. ಅಲ್ಲದೇ
ದೊಡ್ಡ ಕಲಾವಿದರ ಸಹಚರ್ಯೆ ಕೂಡ
ಪ್ರಯೋಜನವಾಗಿದೆ. ಇವತ್ತಿಗೂ ಅಭ್ಯಾಸಿಗಳು ಈ ಕ್ರಮ ಅಳವಡಿಸಿಕೊಂಡರೆ
ಉತ್ತಮವೇ.
ಕೇನಾಜೆ: ಸೌಮ್ಯ ಪಾತ್ರಗಳನ್ನು
ನೀವು ಹೇಳಿದ್ದು ಮತ್ತು ಹೇಳುವುದು ಕಡಿಮೆಯಲ್ಲವೇ?
ಉಡುವೆಕೋಡಿ : ಕಡಿಮೆ ಮಾತ್ರವಲ್ಲ ಕೆಲವನ್ನು
ಹೇಳಿಯೇ ಇಲ್ಲ. ರಾಮ,ಕೃಷ್ಣರ
ಅರ್ಥ ನಾನು ಹೇಳಿಯೇ ಇಲ್ಲ.
ನನ್ನ ಕೌರವನನ್ನು ಕೇಳಿದವರು ಮತ್ತೆ ಅವರನ್ನೇ ಕರೆಯೋಣ
ಅಂತ ಕರೆಯುತ್ತಾರೆ. ಹಾಗಾಗಿ ಸೌಮ್ಯ ಪಾತ್ರಗಳು
ನನಗೆ ಸಿಕ್ಕುವುದೂ ಕಡಿಮೆ. ಆದರೆ ಭರತ,
ವಿಧುರ, ಅಕ್ರೂರ, ಹನೂಮಂತ ಈ
ಪಾತ್ರಗಳನ್ನು ಅನೇಕ ಬಾರಿ ಹೇಳಿದ್ದೇನೆ.
ಕರ್ಣನ ಭಕ್ತಿ, ವೀರ, ಕರುಣಾ
ರಸವನ್ನು ಹೇಳಿದ್ದೇನೆ. ಮತ್ತೇ..... ಖಳ ಪಾತ್ರ ಹೇಳುವುದು
ಸುಲಭ, ಅದರಲ್ಲಿ ಸ್ವಲ್ಪ ಆಚೀಚೆ
ಆದರೂ ನಡೆಯುತ್ತದೆ. ರಾಮ, ಧರ್ಮರಾಯನ ಪಾತ್ರ
ಹಾಗೆ ಆಗುವುದಿಲ್ಲ ನೋಡಿ. ಖಳ ಪಾತ್ರದಲ್ಲಿ
ಸ್ವಲ್ಪ ದಬಾಯಿಸಿ ಹೇಳಿದ್ರೂ ದಕ್ಕುತ್ತದೆ(ನಗು). ಜನರಿಗೆ ಖಳ
ಪಾತ್ರವೇ ಇಷ್ಟ ಕೂಡ. ಯಾಕೆಂದರೆ ಬಹುತೇಕರು
ಖಳರೇ(ಮತ್ತೆ ನಗು), ಎಲ್ಲರಲ್ಲೂ
ಪ್ರತಿ ರಾವಣ, ಪ್ರತಿ ಕೌರವ,
ಪ್ರತಿ ಮಾಗಧ ಇದ್ದೇ ಇರುತ್ತದೆ. ಆದ್ದರಿಂದ
ಅವರ ಮನಃಸ್ಥಿತಿಗೆ ಒಗ್ಗುವಂತೆ ಹೇಳಿದರೆ ಅವರಿಗೆ ಖುಷಿ.
ಅದೇ ಭೀಷ್ಮನ ಅರ್ಥ ಹೇಳಿ
ಉಪದೇಶ ಮಾಡಿದರೆ ಯಾರಿಗೂ ಅಷ್ಟೊಂದು
ಹಿಡಿಸುವುದಿಲ್ಲ. ಹಾಗೇ ನಾನು ಸ್ತ್ರೀ
ಪಾತ್ರ ಹೇಳಿಲ್ಲ. ನನಗೆ ಯಾರೂ ಕೊಡಲೂ
ಇಲ್ಲ.
ಕೇನಾಜೆ: ಅರ್ಥಧಾರಿಯ ಸಿದ್ಧತೆ
ಏನು ?
ಉಡುವೆಕೋಡಿ: ಸಿದ್ಧತೆ ಇಲ್ಲದೇ ಅರ್ಥ
ಹೇಳಬಾರದು ಎಂದು ಹೇಳುವವ ಮತ್ತು
ಪಾಲಿಸುವವ ನಾನು. ಪಾತ್ರವನ್ನು ಕಡೆದು
ನಿಲ್ಲಿಸಲು ಸಿದ್ಧತೆ ಬೇಕು. ಒಬ್ಬ
ಕಲಾವಿದ ಎಲ್ಲಾ ಪಾತ್ರಗಳನ್ನೂ ಹೇಳಬೇಕು.
ಅವನೇ ನಿಜವಾದ ವೇಷಧಾರಿ ಮತ್ತು
ಅರ್ಥಧಾರಿ. ಆದರೆ ನನ್ನ ಕೊರತೆಯೂ
ಅದೇ. ಅರ್ಥಧಾರಿಯ ಭಾಷೆ ಪ್ರೌಢವಾಗಿರಬೇಕು. ಅರ್ಥಧಾರಿಯಲ್ಲಿ
ಅಧ್ಯಯನಶೀಲತೆ ಬೇಕೇಬೇಕು. ಕಾವ್ಯಗಳ ಹಿಡಿತ ಬೇಕು
ಮತ್ತು ಅದನ್ನು ಸರಳವಾಗಿ ಹೇಳುವ
ಕೌಶಲವೂ ಬೇಕು. ಆದರೆ ಪದ
ಮತ್ತು ವಾಕ್ಯಗಳ ಬಳಕೆಯಲ್ಲಿ ಗಾಂಭೀರ್ಯವಿರಬೇಕು.
ಪುರಾಣದ ಜೊತೆಗೆ ಚರಿತ್ರೆ ತಿಳಿದಿರಬೇಕು.
ಒಬ್ಬ ಲೂಯಿ, ಬಿಸ್ಮಾರ್ಕ್, ಮುಸೋಲಿನಿ,
ಲೆನಿನ್, ಹಿಟ್ಲರ್, ಸ್ಟಾಲಿನ್ ಮತ್ತು ನಮ್ಮ ಅನೇಕ
ಚಾರಿತ್ರಿಕ ರಾಜರು ಒಬ್ಬ ಕಂಸ,
ರಾವಣ, ಕೌರವರೂ ಅಗಿರುತ್ತಾರೆ. ಅದನ್ನು
ಪರಸ್ಪರ ನೋಡಿ ಅರ್ಥ ಕಟ್ಟಿದರೆ
ಅದು ಚಂದ.
ಕೇನಾಜೆ: ಯಕ್ಷಗಾನ
ಜಾತಿ, ವರ್ಗಗಳ ಗಡಿಯಲ್ಲಿ ಏದುಸಿರು
ಬಿಡುತ್ತಿದೆಯೇ?
ಉಡುವೆಕೋಡಿ: ಹೌದು, ಕಲಾವಿದನನ್ನು ಒಂದು
ಜಾತಿಗೆ ಸೀಮಿತಗೊಳಿಸುವುದನ್ನು ಬಲವಾಗಿ ವಿರೋಧಿಸುವವ ನಾನು.
ಕಲಾವಿದ ಎನ್ನುವುದೇ ಒಂದು ಜಾತಿ, ಅದಕ್ಕೆ
ಪ್ರತ್ಯೇಕ ಇನ್ನೊಂದು ಜಾತಿಯ ಅಗತ್ಯವಿಲ್ಲ. ಜಾತಿಯ
ಮೂಲಕ ಗುರುತಿಸುವುದೇ ಮೇಲು-ಕೀಳಿನ ಭಾವನೆಗೆ
ಕಾರಣ. ಯಕ್ಷಗಾನ ಜೀವಂತವಾಗಿರುವುದಕ್ಕೆ ಎಲ್ಲಾ
ವರ್ಗಗಳ ಕೊಡುಗೆಯೂ ಇದೆ. ಕೆಲವರು ಕುಣಿತದ
ಮೂಲಕ ಮತ್ತೆ ಕೆಲವರು ಮಾತಿನ
ಮೂಲಕ ಯಕ್ಷಗಾನವನ್ನು ಜೀವಂತವಾಗಿಟ್ಟಿದ್ದಾರೆ. ಆದ್ದರಿಂದ ಇಲ್ಲಿ ಪ್ರತ್ಯೇಕ ಜಾತಿ
ವರ್ಗಗಳಲ್ಲಿ ಗುರುತಿಸಿಕೊಳ್ಳುತ್ತಾ ಹೋಗುವುದು ಸಣ್ಣತನ. ಇದರಿಂದ ಯಕ್ಷಗಾನದ
ಬೆಳವಣಿಗೆಗೆ ಅಪಾಯವಿದೆ.
26- 05 - 2016 ಡಾ.ಸುಂದರ
ಕೇನಾಜೆ
Comments
Post a Comment