ಕಲೆ ಮತ್ತು ಕಾವ್ಯಕ್ಕೆ ಭಾಷೆ ಹಾಗೂ ಪ್ರದೇಶದ ಮಿತಿ ಎಲ್ಲಿರುತ್ತದೆ
ಕಳೆದ
ಎರಡು ಸಂಚಿಕೆಯಲ್ಲಿ ಪರಭಾಷೆಯಲ್ಲಿ ಯಕ್ಷಗಾನ ಸಾಧಕವೇ ಬಾಧಕವೇ
ಎನ್ನುವ ವಿಚಾರವಾಗಿ ಒಂದಷ್ಟು ಪರ ವಿರೋಧ
ಅನಿಸಿಕೆಗಳನ್ನು ಗಮನಿಸಿದೆ. ಸಾಂಪ್ರದಾಯಿಕ ನೆಲೆಯಲ್ಲಿ
ಪರಭಾಷೆಯ ವಿರೋಧವೂ ಪ್ರಗತಿಪರ ನೆಲೆಯಲ್ಲಿ ಪರವೂ ಯೋಚಿಸುವುದು ಒಂದರ್ಥದಲ್ಲಿ
ಸರಿ. ಯಾಕೆಂದರೆ ಯಕ್ಷಗಾನದಲ್ಲಿ ಜಾನಪದ ಮತ್ತು
ಶಾಸ್ತ್ರೀಯ ಎಂಬ ಎರಡು ಮುಖಗಳನ್ನು
ಈಗಾಗಲೇ ಗುರುತಿಸಿರುವ ಕಾರಣ. ಹಾಗಾಗಿ ಈ ವಾದಗಳು
ಮೇನ್ನೋಟಕ್ಕೆ ಸರಿ ಎನ್ನಬಹುದು. ಆದರೆ
ಜಾನಪದ ಮತ್ತು ಶಾಸ್ತ್ರದ ವಿಚಾರದಲ್ಲಿ
ಇಂದಿನ ವಾಸ್ತವ ಸ್ಥಿತಿ ಬೇರೆಯೇ
ಇದೆ. ಅಂದರೆ ಭಾರತೀಯ ಜನಪದ
ಕಲೆಗಳು ನಿರ್ದಿಷ್ಟವಾದ ಒಂದು ಭಾಷೆ ಮತ್ತು
ಪ್ರದೇಶಕ್ಕೆ ಸೀಮಿತವಾಗಿ ಹುಟ್ಟಿಕೊಂಡವುಗಳು ಮತ್ತು ಅಸ್ಥಿತ್ವಕ್ಕೆ ಬಂದವುಗಳು.
ಹಾಗಾಗಿ ಈ ಕಲೆಗಳಿಗೆ ಒಂದು
ಪ್ರಾದೇಶಿಕ ಹಾಗೂ ಒಂದು ಭಾಷಾ
ಮಿತಿಗಳು ಇವೆ. ಈ ಮಿತಿ
ಯಕ್ಷಗಾನಕ್ಕೂ ಇತ್ತು ಮತ್ತು ಇದೆ.
ಯಾವಾಗ ಜನಪದ ಕಲೆಗಳಿಗೆ ಈ
ಮಿತಿಯನ್ನು ಮೀರುದಕ್ಕೆ ಸಾಧ್ಯವಾಗಿಲ್ಲವೋ ಅವಾಗ ಇವುಗಳ ವಿನಾಶವೂ
ಉಂಟಾದವು. ಇದಕ್ಕೆ ತುಳು ಭಾಷಿಕ
ಮತ್ತು ಪ್ರಾದೇಶಿಕ ಕಲೆಗಳಾದ ಕಂಗಿಲು, ಕರಂಗೋಲು,
ಸಿದ್ದವೇಶ, ಹೂವಿನಕೋಲು ಇತ್ಯಾದಿಗಳೂ ಉದಾಹರಣೆ. ಇಂತಹಾ ಉದಾಹರಣೆಯನ್ನು ಕರ್ನಾಟಕ
ಅಥವಾ ಭಾರತದ ಎಲ್ಲಾ ಭಾಷೆ
ಹಾಗೂ ಪ್ರದೇಶಗಳ ಜನಪದ ಕಲೆಗಳಿಗೂ ವಿಸ್ತರಿಸಬಹುದು.
ಆದ್ದರಿಂದ ನಿರ್ದಿಷ್ಟ ಭಾಷೆ ಹಾಗೂ ಪ್ರದೇಶಕ್ಕೆ
ಮಾತ್ರ ಸೀಮಿತವಾಗಿರುವ ಯಾವುದೇ ಕಲೆಗಳು ಭಾಷಾ
ಪ್ರೇಮ ಮತ್ತು ಪ್ರಾದೇಶಿಕತೆಯನ್ನು ಇಟ್ಟುಕೊಂಡರೂ
ಇಂದು ಸಾಮುದಾಯಿಕವಾಗಿ ಉಳಿದುಕೊಳ್ಳುತ್ತಿಲ್ಲ ಎನ್ನುವುದು ವಾಸ್ತವ ಸತ್ಯ.
ಮೂಲದಲ್ಲಿ
ಎಲ್ಲಾ ಕಲೆಗಳೂ ಜನಪದ ಕಲೆಗಳು
ಎನ್ನುವುದನ್ನು ಒಪ್ಪಿಕೊಳ್ಳೋಣ. ನಂತರದ ಕಾಲಘಟ್ಟಗಳಲ್ಲಿ ಆದ
ಪರಿಷ್ಕರಣೆ,ಸಂಶೋಧನೆ,ಆವಿಸ್ಕಾರಗಳು ಕಲೆಗೆ
ಮತ್ತು ಕಾವ್ಯಕ್ಕೆ ಶಾಸ್ತ್ರದ ಚೌಕಟ್ಟನ್ನು ಹಾಕಿಕೊಟ್ಟವು. ಯಕ್ಷಗಾನದ ಹಿನ್ನಲೆಯಲ್ಲಿಯೂ ಈ ಮಾತು ಒಪ್ಪಿತ.
ಶಾಸ್ತ್ರ ಎಂದಾಗ ಅದಕ್ಕೆ ಭಾಷೆ
ಅಥವಾ ಪ್ರದೇಶದ ಮಿತಿ ಇರಬೇಕೆಂದೇನೂ
ಇಲ್ಲ. ಹಿಂದೂಸ್ತಾನೀ ಅಥವಾ ಕರ್ನಾಟಿಕ್ ಸಂಗೀತಗಳು,
ಹಾಗೇ ಸಂಸ್ಕøತದಲ್ಲಿ ರಚಿತವಾದ
ನಾಟ್ಯಶಾಸ್ತ್ರದ ಸೂತ್ರಗಳು ಭಾರತೀಯ ಭಾಷೆ-ಪ್ರದೇಶಗಳಿಗೆ ವ್ಯಾಪಿಸಿರುವುದೇ ಇದಕ್ಕೆ ನಿದರ್ಶನ. ಆದ್ದರಿಂದ
ಯಕ್ಷಗಾನವೂ ಇಂತಹದ್ದೇ ಒಂದು ಸೂತ್ರವನ್ನು ಇಟ್ಟುಕೊಂಡು
ಪ್ರದರ್ಶಿಸಲ್ಪಡುತ್ತದೆ ಎಂದಾದರೆ ಅದಕ್ಕೆ ಭಾಷೆ
ಅಥವಾ ಪ್ರದೇಶದ ಮಿತಿ ಹಾಕಲು
ಸಾಧ್ಯವಿಲ್ಲ. ಅದರ ಹೊರತು ಅದನ್ನು
ಕೇವಲ ಜನಪದ ಹಿನ್ನಲೆಯಲ್ಲಿ ಮಾತ್ರ
ಚಿತ್ರಿಸುವುದಾರೆ ಅದು ತಾನು ಹುಟ್ಟಿನಿಂದ
ಪಡೆದ ಭಾಷೆಯ ಹೊರತಾಗಿ ಇನ್ನೊಂದರಲ್ಲಿ
ನೆಲೆ ಕಾಣಲೂ ಸಾಧ್ಯವಿಲ್ಲ. ಹಾಗಾಗಿ
ಅದು ಯಾವ ಭಾಷೆ ಮತ್ತು
ಯಾವ ಪ್ರದೇಶಕ್ಕೆ ಸೀಮಿತಗೊಳ್ಳಬೇಕೆಂದು ಚರ್ಚಿಸುವುದು ಕೇವಲ ಒಂದು ಸಂಪ್ರದಾಯ.
ಆದರೆ ನಿರ್ಧಾರವನ್ನು ಕಲೆಯ
ಶಕ್ತಿಯೇ ಮಾಡಿಕೊಳ್ಳುತ್ತದೆ. ಅದರ ಆಧಾರದಲ್ಲಿಯೇ ಕಲೆಯ
ಅಳಿವು-ಉಳಿವು ನಿಂತಿರುತ್ತದೆ. ಕಲೆಯ
ಅಭಿವ್ಯಕ್ತಿಯ ಮಿತಿ ಕಲಾವಿದನದ್ದೇ ಹೊರತು
ಕಲೆಯದ್ದಲ್ಲ. ಇದನ್ನು ಅರ್ಥಮಾಡಿಕೊಂಡು ಅದರೊಂದಿಗೆ
ಇರುವುದು ಮಾತ್ರ ನಮ್ಮ ಕೆಲಸ.
ಅದ್ದರಿಂದ ಕಲೆಯನ್ನು ಸಾಂಪ್ರದಾಯಿಕ-ಪ್ರಗತಿಪರ(ಅಸಂಪ್ರದಾಯಿಕ)ಜನಪದ-ಶಾಸ್ತ್ರೀಯ,ದೇಶೀಯ-ವಿದೇಶಿಯ ಈ ನೆಲೆಯಲ್ಲಿ
ಪ್ರತ್ಯೇಕಿಸಿ ನೋಡಿದಾಗ ಈ ರೀತಿಯ
ಚರ್ಚೆಗಳು ಹುಟ್ಟಿಕೊಳ್ಳುತ್ತವೆ.ಒಟ್ಟಿನಲ್ಲಿ ಭಾಷೆ ಒಂದು ಮಾಧ್ಯಮವೇ
ಹೊರತು ಮಾನದಂಡವಂತೂ ಅಲ್ಲ. ಮಾನಡಂಡ ಮಾಡಿದ್ದೇ
ಆದರೆ ಭಾರತದ ಜನಪದ ಕಲೆಗಳಿಗಾದ
ಸ್ಥಿತಿ ಯಕ್ಷಗಾನಕ್ಕೂ ಆಗುವುದರಲ್ಲಿ ಸಂಶಯವಿಲ್ಲ. ಡಾ.ಸುಂದರ ಕೇನಾಜೆ
Comments
Post a Comment