ಹಾಸ್ಯಕ್ಕೊಂದು ಭಾಷ್ಯ ಬರೆದ ಪೆರುವಡಿ
ಪೆರುವಡಿ ಎಂಬ
ಈ ಹೆಸರಿಗೆ ಅನ್ವರ್ಥವೋ
ಎಂಬಂತೆ ಎರಡು ಪಾತ್ರಗಳ ಈಗಲೂ
ಕಣ್ಣ ಮುಂದೆ ಬಂದು ನಿಲ್ಲುತ್ತದೆ.
ಈ ಎರಡು ಪಾತ್ರಗಳಿಗೆ
ಹಾಸ್ಯ ಎಂಬ ಹೆಸರಿದ್ದರೂ ಪ್ರೇಕ್ಷಕನ
ಅರಿವಿಗೆ ಬಾರದೇ ಕಣ್ಣೊರಸುವಂತೆ ಮಾಡುತ್ತಿದ್ದುದೇ
ಇಲ್ಲಿಯ ವಿಶೇಷತೆ. ಘನೀಭವಿಸಿದ ದುಃಖವನ್ನು ಹಾಸ್ಯದ ಮೂಲಕ ಹೊರಹಾಕಿಸುವಲ್ಲಿ
ಯಶಸ್ವಿಯಾಗುತ್ತಿದ್ದ ಒಬ್ಬ ಕಲಾವಿದ ಕೇವಲ
ವಿದೂಷಕ ಮಾತ್ರನಲ್ಲ, ಆತನೊಬ್ಬ ಆಪ್ತ ಸಮಾಲೋಚಕ(ಥೆರಪಿಸ್ಟ್) ಕೂಡ. ಒಬ್ಬ ನೈಜ
ಕಲಾವಿದನ ಪ್ರತಿಭೆಯ ವ್ಯಾಪ್ತಿ ಎಷ್ಟು ಅಗಾಧವಾದುದು ಎನ್ನುವ
ಸತ್ಯ ಅರಿವಿಗೆ ಬರುವುದೇ ಇಂತವರಿಂದ.
ನಳ ಚರಿತ್ರೆಯ ಬಾಹುಕನಾಗಿ ಋತುಪರ್ಣನ ಮುಂದೆ ಸತ್ಯ ಹೇಳಬೇಕಾದ ವಾಸ್ತವ
ಸ್ಥಿತಿ ಮತ್ತು ದಮಯಂತಿಯ ಮುಂದೆ
ಸುಳ್ಳು ಹೇಳುವ ಅವಾಸ್ತವ ಸ್ಥಿತಿ,
ಅದೇ ಪಾಪಣ್ಣ ವಿಜಯದ ಪಾಪಣ್ಣನಾಗಿ
ಬೇಡುವ ವಾಸ್ತವ ಸ್ಥಿತಿ ಮತ್ತು
ರಾಜಕುಮಾರಿಯನ್ನು ಮದುವೆಯಾಗಿ ಬದುಕುವ ಅವಾಸ್ತವ ಸ್ಥಿತಿ
ಇವೆರಡನ್ನು ಪ್ರೇಕ್ಷಕನ ಅನುಭವಕ್ಕೆ ತಟ್ಟುವಂತೆ ಅನುಭವಿಸಿ ಅಭಿವ್ಯಕ್ತಿಸುವ ಇನ್ನೊಬ್ಬ ಕಲಾವಿದನನ್ನು ನಾನು ಆ ಕಾಲದಲ್ಲಿ
ಕಂಡಿರಲಿಲ್ಲ. ಈ ಪಾತ್ರಗಳ ಮೂಲಕ
ಪ್ರೇಕ್ಷಕನಲ್ಲಿ ದುಃಖ ಉಮ್ಮಳಿಸಲು ಬೇರೆ
ರೂಪಕಗಳೇ ಬೇಡವೆಂಬಂತೆ ಪಾತ್ರಕ್ಕೆ ಜೀವತುಂಬುತ್ತಿದ್ದವರು ಪೆರುವಡಿ ನಾರಾಯಣ ಭಟ್ಟರು.
ಇಂದು
ತೆಂಕು ಯಕ್ಷರಂಗದಲ್ಲಿ ಅತ್ಯಂತ ಹಿರಿಯ ಅದೂ
ಚಾಲ್ತಿಯಲ್ಲಿ ಇರುವ ಕಲಾವಿದನೆಂದರೆ ಪೆರುವಡಿಯವರೊಬ್ಬರೇ.(ಮಾನ್ಯ ತಿಮ್ಮಯ್ಯ ಶೆಟ್ಟರ
ಹಿರಿತನದ ಬಗ್ಗೆ ಕಣಿಪುರ ಪತ್ರಿಕೆ
ಪ್ರಕಟಿಸಿತ್ತು) ತೊಂಬತ್ತೊಂದರ ಈ ಪ್ರಾಯದಲ್ಲೂ ಗೆಜ್ಜೆ
ಕಟ್ಟಿ ಕುಣಿಯುವ ಅವರ ಉತ್ಸಾಹ,
ಕಲಾವಿದತ್ವ ಮತ್ತು ಜೀವನ ಇವೆರಡೂ
ಒಂದೇ ಎಂಬುದನ್ನು ಪ್ರತಿಪಾದಿಸುತ್ತದೆ. ಒಂದು ಮಾತಿಗೆ ಎರಡೆರಡು
ಅರ್ಥಗಳನ್ನು, ಆ ಅರ್ಥಗಳಲ್ಲೂ ಸೆನ್ಸಾರ್
ಮಾಡಬೇಕಾದ ಅನೇಕ ಪದಗಳನ್ನು ಸೇರಿಸುವ
ಇಂದಿನ ಹಾಸ್ಯದ ಹಿನ್ನಲೆಯಲ್ಲಿ ಪೆರುವಡಿಯವರ
ಹಾಸ್ಯದ ತೂಕ ಗಮನಾರ್ಹವಾದುದು. ಹಾಸ್ಯವೆಂದರೆ
ಏನೇನೋ ಹೇಳಿ ಅಥವ ಹೇಗೇಗೂ
ವೇಷ ಕಟ್ಟಿ ಜನರನ್ನು ವಿಕೃತ
ನಗುವಿಗೆ ದೂಡುವುದಲ್ಲ. ಪಾತ್ರದ ಪಾತ್ರ ಗೌರವ
ಮತ್ತು ಪ್ರೇಕ್ಷಕನ ಬೌದ್ಧಿಕ ವಿಕಾಸ ಇವೆರಡಕ್ಕೆ
ಆಸ್ಪದ ನೀಡಬಹುದಾದ ಹಾಸ್ಯಗಳೇ ಕಲಾವಿದ ಪ್ರತಿಭೆ. ಈ
ಪ್ರತಿಭೆಯ ದಟ್ಟ ಗುಣವಿದ್ದ ಕಲಾವಿದರಲ್ಲಿ
ಪೆರುವಡಿಯವರು ಪ್ರಮುಖರು.
ಒಂದು
ಪಾತ್ರದ ಆಮೂಲಾಗ್ರ ತಿಳುವಳಿಕೆಯನ್ನು ಪಡೆದು ಅದಕ್ಕೊಪ್ಪುವ ಚಿತ್ರಣವನ್ನು
ಪ್ರೇಕ್ಷಕನ ಮುಂದಿಡುವುದರಲ್ಲಿ ಪೆರುವಡಿ ಅಗ್ರಮಾನ್ಯರು. ಹಾಗಾಗಿ
ಅವರು ಹಾಸ್ಯ ಚಕ್ರವರ್ತಿ. ಒಬ್ಬ
ಪ್ರೇಕ್ಷಕ ನಿರೀಕ್ಷಿಸದ ರೀತಿಯಲ್ಲಿ ಮತ್ತು ಪ್ರತೀ ಪ್ರದರ್ಶನದಲ್ಲೂ
ಚರ್ವಿತಚರ್ವಣಗೊಳ್ಳದ ರೀತಿಯಲ್ಲಿ ಪಾತ್ರವನ್ನು ಪೋಷಿಸುವುದರಲ್ಲೂ ಇವರಿಗೆ ಉನ್ನತ ಸ್ಥಾನವಿದೆ.
ಅಲ್ಲದೇ ರಂಗದ ಮೇಲಿನ ಸಭ್ಯತೆಗೆ
ಪೆರುವಡಿ ಹೇಗೆ ಪ್ರಸಿದ್ಧರೋ ರಂಗದ
ಹೊರಗಿನ ಸೌಜನ್ಯಕ್ಕೂ ಹಾಗೇ ಹೆಸರಾದವರು. ಇಂದಿಗೂ
ತನ್ನ ಹಿರಿತನವನ್ನು ತಾನೇ ವಿಡಂಬಿಸುತ್ತಾ ಕಿರಿಯರನ್ನು
ಪ್ರೀತಿಸುವ ಮತ್ತು ಪ್ರೋತ್ಸಾಹಿಸುವ ಅವರ
ಗುಣ ಅನನ್ಯವಾದುದು. ಇದುವೇ ಅವರ ಜೀವನೋತ್ಸಾಹದ
ಪ್ರಮುಖ ಸೆಲೆ ಎನ್ನುವುದರಲ್ಲಿ ಯಾವ
ಸಂಶಯವೂ ಇಲ್ಲ.
ತನ್ನ
ಸುದೀರ್ಘ ಕಾಲದ ಮೇಳ ತಿರುಗಾಟ
ಮತ್ತು ಹಲವು ಮೇಳಗಳಲ್ಲಿ ಕೆಲಸ
ಮಾಡಿದ ಅನುಭವ ಪೆರುವಡಿಯವರನ್ನು ಒಬ್ಬ
ಪ್ರಬುದ್ಧ ಕಲಾವಿದನನ್ನಾಗಿ ರೂಪಿಸಿದೆ ಎಂದರೆ ತಪ್ಪಾಗಲಾರದು. ಐವತ್ತು
ವರ್ಷ ಮತ್ತು ಹತ್ತಕ್ಕೂ ಹೆಚ್ಚು
ಮೇಳಗಳಲ್ಲಿ ತಿರುಗಾಟ ನಡೆಸಿದ ಇವರು
ಪ್ರೇಕ್ಷಕರ ಸ್ಮøತಿಯಿಂದ ಇಂದಿಗೂ
ಮರೆಯಾದವರಲ್ಲ. ವೇಷ ಹಾಕುವುದಾದರೆ ಇಂದಿಗೂ
ಪೆರುವಡಿಯವರಿಗೆ ಬೇಡಿಕೆ ಇದೆ ಎನ್ನುವುದೇ
ವಿಶೇಷ. ಸಾಮಾನ್ಯವಾಗಿ ಹಿರಿಯ ಕಲಾವಿದರಲ್ಲಿ ವೇಷ
ಹಾಕಿದ ಅನುಭವದ ಜೊತೆಜೊತೆಗೆ ಇನ್ನೂ
ಒಂದು ವಿಶೇಷ ಅನುಭವವಿರುತ್ತದೆ, ಅದು
ಮೇಳ ನಡೆಸಿ ಬೆಂದುಬೆಂಡಾದ ಅನುಭವ.
ಇದರಿಂದ ಪೆರುವಡಿಯವರೂ ಹೊರತಾಗಿಲ್ಲ. ಮೇಳದ ಯಜಮಾನನಾಗಿ ಅಲ್ಲೂ
ಆ ಕಷ್ಟದಲ್ಲಿ ಸುಖ
ಕಂಡವರು. ತನಗೆ ಬಂದ ನೂರಾರು
ಸನ್ಮಾನ ಪ್ರಶಸ್ತಿಗಳಿಗೆ ಹಿಗ್ಗದೇ ಅದು ಸಿಗದೇ
ಇದ್ದಾಗ ಕುಗ್ಗದೇ ಸಮಸ್ಥಿತಿಯನ್ನು ಕಾಯ್ದುಕೊಂಡು
ಬಂದ ಪೆರುವಡಿ ನಾರಾಯಣ ಭಟ್ಟರಿಗೆ
ಈ ವರ್ಷದ ವನಜ
ರಂಗಮನೆ ಪ್ರಶಸ್ತಿ ಆ 13 ರಂದು ಸಲ್ಲುತ್ತಿದೆ.
ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ
ಪ್ರೀತಿಯಿಂದ ಮತ್ತು ಪ್ರಾಮಾಣಿಕತೆಯಿಂದ ತನ್ನ
ಅಮ್ಮನ ಹೆಸರಿನಲ್ಲಿ ನೀಡುವ ಈ ಪ್ರಶಸ್ತಿ
ಅಷ್ಟೇ ಪ್ರಾಮಾಣಿಕ ಕಲಾವಿದನೊರ್ವನಿಗೆ ಸಲ್ಲುತ್ತಿರುವುದೇ ಸಂತಸದ ವಿಷಯ.
ಡಾ.ಸುಂದರ ಕೇನಾಜೆ
Comments
Post a Comment