ಗೋಪಾಲಕೃಷ್ಣ ಕುರುಪ್


                                            ಕುಣಿಯುವ ಕೈಗಳ ಗೋಪಾಲಕೃಷ್ಣ ಕುರುಪ್
       ಇವರ ಕಾಲುಗಳು ಕುಣಿಯಲಿಲ್ಲ, ಆದರೆ ಕೈಗಳು ಕುಣಿದವು. ಮೂಲಕ ಸಾವಿರಾರು ಕಾಲುಗಳನ್ನು ಕುಣಿಸಿದವು. ಅಲ್ಲದೇ ಇವರಿಂದಲೇ ಮತ್ತೆ ನೂರಾರು ಕೈಗಳೂ ಕುಣಿದವು. ಕೈಗಳು ಮತ್ತೆ ಅಸಂಖ್ಯೆ ಕಾಲುಗಳನ್ನು ಕುಣಿಸಿದವು. ಹೀಗೆ ಒಂದು ಪರಂಪರೆ ದಾಟುತ್ತಾ ಬೆಳೆಯುತ್ತಾ ಮುಂದೆ ಸಾಗಿತು. ಇವತ್ತು ಇವರ ಶಿಷ್ಯರು, ಶಿಷ್ಯರ ಶಿಷ್ಯರು ಹೀಗೆ ಸಮಸ್ತ ಕಲಾವಿದರನ್ನೂ ಕುಣಿಸುತ್ತಿರುವುದು ಒಂದು ಅಚ್ಚರಿಯ ಗುರು ಪರಂಪರೆ.  ತೆಂಕು ಯಕ್ಷಗಾನದಲ್ಲಿ ಇಂತಹಾ ಪರಂಪರೆಗೆ ಬಹುಮಾನ್ಯ ಕೊಡುಗೆ ಕೊಟ್ಟ ಕಲಾವಿದ ಬಿ.ಗೋಪಾಲಕೃಷ್ಣ ಕುರುಪ್. ವೃತ್ತಿಯಾಗಿಸಿದ ಕಲಾ ಬದುಕು ಮತ್ತು ತನ್ನ ವೈಯಕ್ತಿಕ ಬದುಕು ಇವೆರಡರಲ್ಲೂ ತೂಕವನ್ನು ಇಟ್ಟುಕೊಂಡೇ ಬದುಕುತ್ತಿರುವ ಮೇರು ವ್ಯಕ್ತಿತ್ವ ಇವರದು.  ಯಕ್ಷಗಾನದ ಕೆಲವೇ ಕೆಲವು ದಂತೆಕಥೆಯ ಹಿಮ್ಮೇಳವಾದಕರ ಸಾಲಿನಲ್ಲಿ ನಿಲ್ಲುವ ಸಾಧಕನಿಗೆ ಈಗ 81 ವರ್ಷ.  ವಯಸ್ಸಿನಲ್ಲೂ ಬತ್ತದ ಉತ್ಸಾಹ, ಮಗು ಮನಸ್ಸಿನ ಕುತೂಹಲ, ಪ್ರೀತಿ ತುಂಬಿದ ಮಾತು ಆದರೆ ಈಗ ಇರುವುದು ಮಾತ್ರ ಯಕ್ಷಗಾನದ ಗಂಧವನ್ನೇ ಕಳೆದುಕೊಂಡಿರುವ  ಕಾಸರಗೋಡಿನ ನೀಲೇಶ್ವರದಲ್ಲಿ. ಒಂದು ಕಾಲದಲ್ಲಿ ತನ್ನ ಮಾಂತ್ರಿಕ ನುಡಿತಗಳಿಂದ ಹಿಮ್ಮೇಳಕ್ಕೆ ಹೊಸ ಆಯಾಮವನ್ನು ತಂದುಕೊಟ್ಟ ಕುರುಪರು, ಅಗಾಧ ಶಿಷ್ಯ ಪರಂಪರೆಗೂ ಕಾರಣರಾದವರು. ಅವರ ಜೊತೆಗಿನ ಎರಡು ಗಂಟೆಗಳ ಮಾತುಕತೆಯಲ್ಲಿ ಹೆಚ್ಚು ಬಳಕೆಯಾದ ವ್ಯಕ್ತಿತ್ವ  ಒಂದು ಅವರ ತಂದೆ, ಇನ್ನೊಂದು ಅವರ ಗುರುಗಳು. ಆದ್ದರಿಂದ ಇವತ್ತು ನಾನು ಏನು ಆಗಿದ್ದೇನೆಯೋ ಅದಕ್ಕೆ ನನ್ನ ತಂದೆ ಮತ್ತು ನನಗೆ ಸಿಕ್ಕಿದ ಗುರುಗಳೇ ಕಾರಣವೆಂದು ಮತ್ತೆ ಮತ್ತೆ ನೆನಪಿಸುತ್ತಾರೆ ಗೋಪಾಲಕೃಷ್ಣ ಕುರುಪ್.
       ಬಡತನವನ್ನೇ ಹಾಸುಹೊದ್ದು  ಬಾಲ್ಯ ಕಳೆದ ಕುರುಪರ ಬದುಕೇ ಒಂದು ಸಾಧನೆ. ಅದರ ಮಧ್ಯೆ ಕಲಾವಿದತ್ವ ಬದುಕಿನ ಇಮ್ಮಡಿ ಸಾಧನೆ. ತನ್ನ ತಂದೆಯ ಜೊತೆಗೆ ಊರೂರು ಸುತ್ತುತ್ತಾ ಅಲ್ಲಿ ಇಲ್ಲಿ ಬೇಸಾಯ ಮಾಡುತ್ತಾ ಅದಮ್ಯ ತುಡಿತದ ಯಕ್ಷಗಾನದ ಹಿಮ್ಮೇಳವನ್ನು ಅಭ್ಯಸಿಸಿದರ ಹಿಂದೆ ಅಪಾರ ಶ್ರಮವಿದೆ, ಶ್ರದ್ಧೆ ಇದೆ. ಕಲಿಕೆಯನ್ನೇ ಬದುಕಿನುದ್ದಕ್ಕೂ ಹಾಗೂ ಮುಂದಿನ ತಲೆಮಾರಿಗೂ ದಾಟಿಸಿದ ದೂರಗಾಮಿ ಚಿಂತನೆ ಇದೆ. ಆದ್ದರಿಂದ ಯಕ್ಷಗಾನದ ಮೂಲಕ ಒಂದು ಪರಿಪೂರ್ಣ ಮತ್ತು ಸಂತೃಪ್ತ ಬದುಕನ್ನು ಕಟ್ಟಿಕೊಂಡವರಲ್ಲಿ ಗೋಪಾಲಕೃಷ್ಣ ಕುರುಪರು ಆದರ್ಶಪ್ರಾಯರೇ ಸರಿ. ಆರಂಭ ಕಾಲದ ತನ್ನ ಹವ್ಯಾಸವನ್ನೇ ವೃತ್ತಿಯಾಗಿಸಿ ಅದರಿಂದ ತನ್ನ ತಮ್ಮಂದಿರಿಗೆ, ಮಕ್ಕಳಿಗೆ, ಜೊತೆಗೆ ತನಗೇ ಒಳ್ಳೆಯ ನೆಲೆಯನ್ನು ತಂದುಕೊಟ್ಟದ್ದನ್ನು ಕುರುಪರು ಇಂದು ಆಪ್ಯಾಯಮಾನವಾಗಿ ನೆನಪಿಸಿಕೊಳ್ಳುತ್ತಾರೆ. 
        ಎರಡು ರಾಜ್ಯಗಳ ಅಕಾಡೆಮಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಎಲ್ಲಕ್ಕೂ ಮಿಕ್ಕಿ ದಾಖಲೆ ಸಂಖ್ಯೆಯ(ನೂರಾರು) ಶಿಷ್ಯ ಬಳಗ, ಹೆಗ್ಗಳಿಕೆಯ ಜೊತೆಗೆ ತನ್ನ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ, ಒಂದಷ್ಟು ಸ್ಥಿರಾಸ್ತಿ ಮತ್ತು ಒಂದಿನಿತೂ ದುಶ್ಚಟಗಳಿಲ್ಲದೇ ಕಾಪಾಡಿಕೊಂಡು ಬಂದ ಸುಸ್ಥಿರ ಆರೋಗ್ಯ ಇವೇ ಮೊದಲಾದವು ಒಬ್ಬ ಕಲಾವಿದನ  ಯಶಸ್ಸಿನ ಮಾನದಂಡಗಳಾಗಿ ಕುರುಪರ ಜೊತೆಗೂ ಇದೆ. “ತನಗೆ ಗುರು ಕೊಟ್ಟದ್ದನ್ನು ನಾನು ಶಿಷ್ಯರಿಗೆ ನೀಡಿದ್ದೇನೆಎನ್ನುವ ವಿನಂಮ್ರತೆಯೇ ನಮ್ಮ ಪರಂಪರಾಗತ ಸಂಸ್ಕøತಿಯ ಹರಿವಿನ ಧೀಶಕ್ತಿಯಾಗಿ ಕುರುಪರಲ್ಲಿ ಕಾಣುತ್ತದೆ. ಆದ್ದರಿಂದ ಈಗ ಅಪರೂಪವಾಗಿ ಕಾಣುವ ಅದರಲ್ಲೂ ಯಕ್ಷಗಾನ ಕ್ಷೇತ್ರದಲ್ಲಿ ಮಾರು ದೂರವಾಗಿಯೇ ಉಳಿದಿರುವ ಗುರು ಪರಂಪರೆಯ ಪ್ರತಿಪಾದನೆ ಗೋಪಾಲಕೃಷ್ಣ ಕುರುಪರಿಂದ ಸಮರ್ಥವಾಗಿಯೇ ಆಗಿದೆ. ಯಕ್ಷಗಾನದ ತಾಳಕ್ಕೆ ಸಂಬಂಧಿಸಿದ ಕೃತಿಗಳನ್ನೂ ರಚಿಸಿರುವ ಕುರುಪರು ಪರಂಪರೆಯನ್ನು ದಾಟಿಸುವ ಸಮರ್ಥ ಪ್ರತಿನಿಧಿಯಾಗಿ ಕಾಣುತ್ತಾರೆ.  ಇಂದು ಯಕ್ಷಗಾನದ ಹಿಮ್ಮೇಳದ ಬಗ್ಗೆ ಅತ್ಯಂತ ಅಧಿಕೃತವಾಗಿ ಮಾತನಾಡಬಲ್ಲ ಬೆರಳೆಣಿಕೆಯ ವ್ಯಕ್ತಿಗಳಲ್ಲಿ ನಮ್ಮ ಮಧ್ಯೆ  ಇರುವ ಕುರುಪರು ಹೊಸ ತಲೆಮಾರಿನ ಗುರುಗಳಿಗೆ ಗುರುಗಳು. ಅದ್ದರಿಂದ ಅವರು ಕಲಾ ಕ್ಷೇತ್ರದಲ್ಲಿ ವಿಜೃಂಭಿಸಿದ್ದಕ್ಕಿಂತ ಒಂದು ತೂಕ ಹೆಚ್ಚಾಗಿ ಅವರ ಗುರುತ್ವ ನಿಲ್ಲುತ್ತದೆ. ಇದು ಅತಿಶಯೋಕ್ತಿಯೂ ಅಲ್ಲ, ಅಪಚಾರದ ಮಾತೂ ಅಲ್ಲ. ಅವರನ್ನು ಹತ್ತಿರದಿಂದ ಬಲ್ಲವರಿಗೆ ಹೀಗೆ ಅನಿಸಿದರೆ ಅದು ತಪ್ಪೂ ಅಲ್ಲ.  ಹಾಗಾಗಿ ಕುರುಪರ ಕೈ ಕೇವಲ ಮದ್ದಳೆಗಳ ನುಡಿತಗಳಿಂದ ಕುಣಿಸುದಕ್ಕೆ ಮಾತ್ರ ಸೀಮಿತವಾಗಲಿಲ್ಲ, ಅನೇಕಾನೇಕ ಶಿಷ್ಯರನ್ನು ಹರಸುವುದಕ್ಕೂ ಬಳಕೆಯಾಗಿದೆ. ಇದು ಯಕ್ಷಗಾನದ ಒಂದು ಕಾಲದ ಸೌಭಾಗ್ಯ.  ಇದೇ ಸೌಭಾಗ್ಯ ಯಕ್ಷಗಾನಕ್ಕಿಂದು ಹೆಚ್ಚುಹೆಚ್ಚು ಸಿಗಬೇಕು. ಜೊತೆಗೆ ಕೀರ್ತಿ, ಸಂಪತ್ತು ಮತ್ತು ಆರೋಗ್ಯ-ಆಯುಷ್ಯ ಇವೆಲ್ಲವನ್ನೂ ಪಡೆದುಕೊಂಡ ಆದರ್ಶ ಕಲಾವಿದನ ಮಾದರಿ ವ್ಯಕ್ತಿತ್ವವೂ ಬೇಕು, ಇದನ್ನು ಗೋಪಾಲಕೃಷ್ಣ ಕುರುಪರಲ್ಲಿ ಕಾಣುವುದಕ್ಕೆ ಸಾಧ್ಯವಿದೆ.

              ಶಿಷ್ಯನಿಗಿರಬೇಕಾದ ತಾಳ್ಮೆ ಮತ್ತು ಗುರುವಿಗಿರಬೇಕಾದ ಪ್ರೀತಿ       
        ಯಕ್ಷಗಾನ ಕ್ಷೇತ್ರದಲ್ಲಿ ಕುರುಪರ ಪಯಣ ಬಹಳ ದೀರ್ಘವಾದುದು ಮತ್ತು ಅಷ್ಟೇ ವಿಶಿಷ್ಟವಾದುದು. ಮುಮ್ಮೇಳದ ಸಮಗ್ರತೆ ಸಾಧಿಸಿದ ಕಲಾವಿದ ಹೇಗೆ ಜನಮಾನಸದಲ್ಲಿ ಉಳಿಯುತ್ತಾನೋ ಹಾಗೇ ಹಿಮ್ಮೇಳದ ಸಮಗ್ರತೆ ಸಾಧಿಸಿದಾತನೂ ಉಳಿಯುತ್ತಾನೆ. ಅದಕ್ಕೆ ನಿದರ್ಶನ ಕುರುಪರು. ಆರಂಭದ ಒಂದಷ್ಟು ವರ್ಷ ಉತ್ತಮ ಭಾಗವತನಾಗಿ, ಕುಣಿತಗಾರನಾಗಿ, ನಂತರ ಚಂಡೆ ಮದ್ದಳೆಯ ನುಡಿತಗಾರನಾಗಿ ಮರೆದವರು ಕುರುಪರು. ಆರಂಭ ಕಾಲದಲ್ಲಿ ಅವರ ಕಲಿಕೆಯ ಆಸಕ್ತಿ, ಶ್ರದ್ಧೆ, ಪರಿಶ್ರಮ ನಮ್ಮ ಹೊಸ ತಲೆಮಾರಿನ ಕಲಿಕಾರ್ಥಿಗಳಿಗೆ ಆದರ್ಶ. ಹಾಗೇ ಕಾಲದಲ್ಲಿ ಅವರಿಗೆ ಸಿಕ್ಕ ಗುರುಗಳ ಶಿಷ್ಯ ಪ್ರೀತಿ ಅನುಕರಣೀಯ. ಹಾಗಾಗಿ ಅವರದೇ ಮಾತನಲ್ಲಿ ಅದನ್ನಿಲ್ಲಿ ತೆರೆದಿಡಲಾಗಿದೆ,
ತಂದೆಯೇ ಮೊದಲ ಗುರು : ನನ್ನ ತಂದೆಯೇ ನನ್ನ ಮೊದಲ ಪ್ರಧಾನ ಗುರು. ಅವರಿಗೂ ಯಕ್ಷಗಾನದ ಹಿಮ್ಮೇಳದ ಎಲ್ಲಾ ಪ್ರಕಾರಗಳೂ ಗೊತ್ತಿದ್ದವು. ಚಂದು ಕುರೂಪ್ ಕಾಲದ ಹವ್ಯಾಸಿ ಕಲಾವಿದರು, ಅವರು ನನ್ನ ತಂದೆ. ಅವರಲ್ಲಿ ಒಂದು ಮದ್ಲೆ ಇತ್ತು. ನಾನು ತುಂಬಾ ಸಣ್ಣವನಿರುವಾಗಲೇ ಅವರು ಮದ್ಲೆ ಬಾರಿಸುವಾಗ ನನಗೆ ತಾಳ ಹೇಳಿ ಕೊಡುತ್ತಿದ್ದರು. ಅವರು ಮದ್ದಳೆ ನುಡಿಸುವುದು, ನಾನು ಕೈಯಲ್ಲಿ ತಾಳ ಹಾಕುವುದು ಇದು ನನ್ನ ನಾಲ್ಕೈದು ವರ್ಷ ಪ್ರಾಯದಿಂದಲೇ ಆರಂಭಗೊಂಡಿತ್ತು. ತಾಳ ಅಭ್ಯಾಸ ಆದ ನಂತರ ಪದ್ಯ ಹೇಳಿ ಕೊಡುತ್ತಿದ್ದರು. ಹೀಗಿರುವಾಗ ನನ್ನ ಸಂಬಂಧದವರ ಮದುವೆಯಲ್ಲಿ ತಂದೆಯವರುನೀನು ಗಜಮುಖ ಹೇಳು ಅಂತ ಹೇಳಿದ್ರು. “ನೀವು ಹೇಳಿಕೊಟ್ಟರೆ ಹೇಳುತ್ತೇನೆ ಅಂತ ಹೇಳಿದೆ ಆದರೆ ಅವತ್ತು ಸರಿ ಆಗಿ ಹೇಳಲಾಗಲಿಲ್ಲ. ಆದರೆ ನಂತರ ಹಟ ಹಿಡಿದು ಕಲಿತೆ, ತಂದೆ ಮತ್ತೆ ಹೇಳಿಕೊಟ್ರು. ಹಾಗೆ ಕೆಲವು ಕಡೆ ಹಾಡಿದೆ. ಆಗ ನಾನು ಎರಡನೇ ತರಗತಿ, ಸುಮಾರು ಆರೇಳು ವರ್ಷ ಪ್ರಾಯ
ಊರೂರು ಸುತ್ತುತ್ತಾ ಕಲಿಕೆ : ನಾನು ಹುಟ್ಟಿದ್ದು ನೆಲ್ಲಿಕುಂಜ ಎಂಬಲ್ಲಿ. ಅಲ್ಲಿ ಒಂದಷ್ಟು ವರ್ಷ ನಮ್ಮ ಕುಟುಂಬ ನಲೆ ಇದ್ದು, ನಾನು ಐದನೇ ತರಗತಿಯವರೆಗೆ ಪಡ್ರೆ ಶಾಲೆಯಲ್ಲಿ ಕಲಿತೆ. ನಾನು ಶಾಲೆಗೆ ಹೋದದ್ದೇ ಅಷ್ಟು. ಆಗ ಪಲ್ಲತ್ತಡ್ಕ ಎಂಬಲ್ಲಿ ದೊಡ್ಡಮಟ್ಟಿನ ಒತ್ತೆಕೋಲವೊಂದು ನಡೆಯುತ್ತಿತ್ತು. ನನ್ನ ತಂದೆ ವಿಷ್ಣುಮೂರ್ತಿ ದೈವದ ಬೆಳ್ಚಪಾಡ(ದರ್ಶನ ಪಾತ್ರಿ). ಅಲ್ಲಿ ತಾಳಮದ್ದಳೆಗಳೂ ನಡೆಯುತ್ತಿದ್ದವು. ನಾನು ಐದನೇ ಕ್ಲಾಸಿನಲ್ಲಿರುವಾಗ ತಂದೆಯವರು ಅಲ್ಲಿಗೆ ನನ್ನನ್ನು ಕರೆದುಕೊಂಡು ಹೋದರು. ಆಗ ಪ್ರಸಂಗ ಪುಸ್ತಕ ನನ್ನ ಚೀಲದಲ್ಲಿ ಮಾಮೂಲು ಇರುತ್ತಿತ್ತು. ಹಾಗೇ ಒತ್ತೆಕೋಲಕ್ಕೆ ಹೋದ ದಿನವೂ ಇತ್ತು. ಅವತ್ತು ತಂದೆಯವರಿಗೆ ಮದ್ದಳೆ ಬಾರಿಸುವುದಿತ್ತು. ನಾನು ಅವರ ಹಿಂದೆ ಕುಳಿತುಕೊಂಡಿದ್ದಾಗ, “ಪದ್ಯ ಹೇಳ್ತಿಯಾ ಅಂತ ಕೇಳಿದ್ರು, “ನೀವು ಕೇಳಿಕೊಟ್ರೆ ಹೇಳುತ್ತೇನೆ ಅಂತ ಹೇಳಿದೆ. ಪಂಚವಟಿಯನೋಡಿದೆಯಾ ರಾಮ ಪದ್ಯ ಹೇಳು ಅಂತ ಹೇಳಿದ್ರು. ನಾನು ಹೇಳ್ಲಿಕ್ಕೆ ಶುರು ಮಾಡಿದೆ. ಆಗ ಒತ್ತೆಕೋಲದ ಸುತ್ತಮುತ್ತ ಇದ್ದ ಜನರೆಲ್ಲಾ ಓಡೋಡಿ ಬಂದ್ರು. “ಒಬ್ಬ ಸಣ್ಣ ಹುಡುಗ ಪದ್ಯ ಹೇಳುತ್ತಿದ್ದಾನೆ, ನೋಡಿಬಿಡುವಾ  ಅಂತ. ನಾನು ಸುಮಾರು ನಾಲ್ಕು ಗಂಟೆ ನಿರಂತರ ಹಾಡಿದೆ. ಆಗ ನನಗೆ ತಾಳ ಜ್ಞಾನ ದೊಡ್ಡ ಮಟ್ಟಿಗೆ ಇರಲಿಲ್ಲ. ಆದರೆ ತಂದೆ ಹೇಳಿಕೊಡುತ್ತಿದ್ದರು ಹಾಗೇ ಹಾಡುತ್ತಿದ್ದೆ. ಕಾರ್ಯಕ್ರಮ ನನಗೊಂದು ಧೈರ್ಯ ಕೊಟ್ಟಿತು. 
ಶಾಲೆಯ ಯಕ್ಷಗಾನ ಪಾಠ : ಆಗ ನಮ್ಮ ಪೆರ್ಲ ಶಾಲೆಯಲ್ಲಿ ಪ್ರತೀ ಶುಕ್ರವಾರ ಯಕ್ಷಗಾನದ ಪದ್ಯ ಹೇಳಿಸುತ್ತಿದ್ದರು. ಹಾಗಾಗಿ ಪ್ರಸಂಗ ಪುಸ್ತಕ ಯಾವಾಗಲೂ ನನ್ನ ಚೀಲದಲ್ಲಿ ಇರುತ್ತಿತ್ತು. ಶಾಲೆಯ ಅಧ್ಯಾಪಕ ತಿರುಮಲೇಶ್ವರ ಭಟ್ಟರು ಒಳ್ಳೆಯ ವಿದ್ವಾಂಸ, ಜೊತೆಗೆ ಹಿಮ್ಮೇಳ ವಾದಕ. ಅವರಲ್ಲಿ ಮದ್ದಳೆ ಕಲಿಯಲು ತಂದೆಯವರು ನನ್ನನ್ನು ಸೇರಿಸಿದರು.  ಹೀಗೆ ಶಾಲೆಯ ಪಾಠ ಮತ್ತು ಮದ್ದಳೆ ಪಾಠ ಎರಡೂ ಒಬ್ಬನೇ ಶಿಕ್ಷಕನಿಂದ ಒಂದಷ್ಟು ಸಮಯ ನನಗೆ ದೊರಕಿತು.
ಮತ್ತೆ ಇನ್ನೊಂದೂರಿಗೆ : ನಾನು ಸಣ್ಣವನಿದ್ದಾಗ ಒಂದು ಊರು ಬಿಟ್ಟು ಇನ್ನೊಂದೂರಲ್ಲಿ ನೆಲೆಸುವುದು ಸಾಮಾನ್ಯ ವಿಷಯವಾಗಿತ್ತು. ಎಲ್ಲಿ ಹೊಟ್ಟೆಗೆ ಸಿಗುತ್ತದೋ ಅಲ್ಲಿಗೆ ಹೋಗುತ್ತಿದ್ದೆವು. ನಮ್ಮ ತಂದೆ ಹಲವು ಊರುಗಳನ್ನು ಬದಲಿಸಿದ್ದಾರೆ. ಹೋದಲೆಲ್ಲ ಬೇಸಾಯ ಮಾಡುತ್ತಾ ಆಸುಪಾಸಿನಲ್ಲಿ ಯಕ್ಷಗಾನ, ತಾಳೆಮದ್ದಳೆಯಲ್ಲಿ ಭಾಗವಹಿಸುತ್ತಾ ಅಲ್ಲಿಗೆಲ್ಲ ನನ್ನನ್ನೂ ಕರೆದುಕೊಂಡು ಹೋಗುತ್ತಾ ಪ್ರೇರಕರಾಗಿ  ಬೆಳೆಸಿದರು. ಪೆರ್ಲದಿಂದ ನಾವು ಆದೂರು ಬಳಿಯ ಕಡನಡ್ಕ ಎಂಬಲ್ಲಿಗೆ ಬಂದೆವು. ಆಗ ಪಾಂಡಿ ಎಂಬಂಲ್ಲಿ ದೊಡ್ಡಮಟ್ಟಿನ ತಾಳಮದ್ದಳೆ ನಡೆಯುತ್ತಿತ್ತು. ಪಾಂಡಿ ಪಟೇಲರು ಅದನ್ನು ನಡೆಸುತ್ತಿದ್ದರು. ತಂದೆಯವರು ತಾಳಮದ್ದಳೆಗೆ ಹೋಗೋಣ ಎಂದರೆ ನನಗೆ ಬಹಳ ಖುಷಿಯಾಗುತ್ತಿತ್ತು. ಆಗಲೇ ನನಗೆ ಯಕ್ಷಗಾನ ಅಂದರೆ ದೇವರು, “ಗೋಪಾಲಕೃಷ್ಣ ನಿನಗೆ ಯಕ್ಷಗಾನ ಹೇಳಿಕೊಡುತ್ತೇನೆ, ನೀನು ಬಾವಿಗೆ ಹಾರು ಅಂತ ಯಾರಾದರೂ ಹೇಳಿದ್ರೂ ಹಾರುತ್ತಿದ್ದೆನೋ ಏನೋ? ಅಷ್ಟು ಪ್ರೀತಿ ನನಗೆ ಯಕ್ಷಗಾನದ ಮೇಲೆ. ಹಾಗೇ ಪಾಂಡಿಗೆ ಹೋದೆವು. ಅಲ್ಲಿಸುಭದ್ರಾ ಕಲ್ಯಾಣ ಪ್ರಸಂಗ. ತಂದೆ ಮಾಮೂಲಿನಂತೆ, “ಪದ್ಯ ಹೇಳ್ತಿಯಾ ಮಗಾ ಅಂತ ಕೇಳಿದ್ರು, ನಾನೂ ಯತಾಃರೀತಿ, “ನೀವು ಹೇಳಿದ್ರೆ ಹೇಳುತ್ತೇನೆ ಅಂತ ಹೇಳಿದೆ. ಭಾಗವತನ ಸ್ಥಾನದಲ್ಲಿ ಕುಳಿತು ಹೇಳಿದೆ. ಪಕ್ಕದಲ್ಲೇ ತಂದೆಯವರು ಇರುವ ಕಾರಣ ನನಗೆ ಹೆದರಿಕೆ ಆಗುತ್ತಿರಲಿಲ್ಲ. ಹೀಗೆ ಹೇಳ್ತಾ ಇರುವಾಗ ನನ್ನ ಒಂದು ಪದ್ಯಕ್ಕೆ ಪಟೇಲರ ಹೆಂಡತಿ ಐದು ರೂಪಾಯಿ ಕೊಟ್ಟರು. ಆಗಿನ ಕಾಲದ ಐದು ರೂಪಾಯಿ. ನನಗೆ ಬಾರಿ ಸಂತೋಷ ಆಯಿತು. ಮತ್ತೂ ತುಂಬಾ ಹೊತ್ತು ಪದ್ಯ ಹೇಳಿದೆ. ಬೆಳಿಗ್ಗೆ  ತಾಳಮದ್ದಳೆ ಮುಗಿದಾಗ ಪಟೇಲರು ತಂದೆಯವರಲ್ಲಿ ಹೇಳಿದರು, ‘ಚಂದು, ಮುಂದಕ್ಕೆ ನಿಮ್ಮ ಮಗ ನಮ್ಮ ಯಕ್ಷಗಾನ ಕೂಟದ ಭಾಗವತ ಆಗಬೇಕು. ಅವನಿಗೆ ದಿನಕ್ಕೆ ಮೂರು ರೂಪಾಯಿ ಕೊಡುತ್ತೇನೆ. ಮತ್ತೆ, ಅವ ಇನ್ನೂ ಹೆಚ್ಚಿಗೆ ಕಲಿಯುದಾದರೆ ನಾವೇ ಅದರ ಖರ್ಚು ಕೊಡುತ್ತೇವೆ ಎಂದು. ಇದು ಕೇಳಿ ನನಗೆ ಇನ್ನೂ ಸಂತೋಷವಾಯಿತು.
ಗುರುಗಳನ್ನು ಅರಸಿ : ನನಗೆ ಹದಿನಾಲ್ಕು ವರ್ಷ ಆಗುವ ಹೊತ್ತಿಗೆ ನನ್ನ ಕಲಿಕಾ ದಾಹ ಇನ್ನೂ ಹೆಚ್ಚಾಯಿತು. ಆಗ ನನಗೆ ಕಾಲದ ತೆಂಕಿನ ಶ್ರೇಷ್ಠ ಗುರುಗಳಾದ ನಾರಂಪಾಡಿ ಸುಬ್ಬಯ ಶೆಟ್ಟರು ಗುರುಗಳಾಗಿ ದೊರೆತರು. ನಾವಿರುವ ಮನೆಯಿಂದ ಅವರು ತರಗತಿ ಮಾಡುತ್ತಿದ್ದ ಪಾಂಡಿ ಪಟೇಲರ ಮನೆಗೆ ಸುಮಾರು ಮೂರುವರೆ ಮೈಲು ದೂರ ಇತ್ತು. ಪ್ರತಿದಿನ ಬೆಳಗೆ ಮದ್ದಳೆ ಹೆಗಲಿಗೆ ಹಾಕಿ ನಾನು ಅಲ್ಲಿಗೆ ನಡೆದು ಹೋಗುತ್ತಿದ್ದೆ.  ಎರಡು ಪಾಠ ಮುಗಿಸಿ ಸಂಜೆ ಹಾಗೇ ನಡೆದು ಬರುತ್ತಿದ್ದೆ. ಹಾಗೇ ನಡೆದು ಹೋಗುತ್ತಿದ್ದಾಗ ಮತ್ತು ಬರುತ್ತಿದ್ದಾಗ ನಾನು ದಾರಿಯಲ್ಲಿ ಬಾಯಿ ತಾಳ ಕಲಿಯುತ್ತಿದ್ದೆ. ಯಾಕೆಂದರೆ ಅದನ್ನು ರಾತ್ರಿ ಮತ್ತೆ ತಂದೆಯವರಿಗೆ ಒಪ್ಪಿಸಬೇಕಾಗಿತ್ತು. ಆಗ ನನಗೆ ಗುರುಗಳು ಸುಮಾರು 14 ರಾಗಗಳನ್ನು ಹೇಳಿ ಕೊಟ್ಟಿದ್ರು. ಕಾಲದಲ್ಲಿ ಹಾಗೆ ಹೆಚ್ಚು ರಾಗಗಳು ಗೊತ್ತಿದ್ದವರು ಯಾರೂ ಇರಲಿಲ್ಲ. ಆದರೆ ಸುಬ್ಬಯ ಶೆಟ್ರು ಭಾಗವತಿಕೆ, ಚಂಡೆ-ಮದ್ದಳೆ ಜೊತೆಗೆ ಒಳ್ಳೆಯ ಅರ್ಥಗಾರಿಕೆ ಗೊತ್ತಿತ್ತು. ಅಲ್ಲಿ ಇದೆಲ್ಲವನ್ನೂ  ಹೇಳಿಕೊಡುತ್ತಿದ್ದರು. ಆದರೆ ನಾನು ಅವರ ಬಳಿ ಭಾಗವತಿಕೆ ಮತ್ತು ಮದ್ದಳೆಯನ್ನು ಅಭ್ಯಾಸ ಮಾಡಿದೆ. ಮಧ್ಯೆಮಧ್ಯೆ ಕಾರ್ಯಕ್ರಮಗಳಲ್ಲೂ ಭಾಗವಹಿಸಲು ಅವಕಾಶ ನೀಡುತ್ತಿದ್ದರು. ಇದು ನನಗೆ ಬಹಳ ಪ್ರಯೋಜನ ನೀಡಿತು. ಅಲ್ಲಿಂದ ನಾವು ಸುಳ್ಯ ತಾಲೂಕಿನ ದೇವಚ್ಚಳ್ಳ ಎಂಬಂಲ್ಲಿಗೆ ಬಂದು ನೆಲೆಸಿದೆವು.
ಕೂಡ್ಲ ಮೇಳದತ್ತ ಹೆಜ್ಜೆ : ದೇವಚ್ಚಳ್ಳದಲ್ಲಿ ಬೇಸಾಯ ಮತ್ತು ಹವ್ಯಾಸಿ ಪ್ರದರ್ಶನ ನೀಡುತ್ತಿದ್ದಾಗ ಕೂಡ್ಲು ಮೇಳದ ಆಟ ವಳಲಂಬೆಗೆ ಬಂತು. ನಾನು ಮತ್ತು ತಂದೆಯವರು ಅಲ್ಲಿಗೆ ಹೋದೆವು. ಮೇಳದಲ್ಲಿ ಮದ್ದಳೆ ನುಡಿಸುತ್ತಿದ್ದ ಕುದ್ರೆಕೂಡ್ಲು ರಾಮಭಟ್ಟರು ನನಗೆ ಮೇಳದಲ್ಲಿ ಹಾಡುವುದಕ್ಕೆ ಅವಕಾಶ ಮಾಡಿಕೊಟ್ಟರು. ಅದರಂತೆ ನಾನು ಅಲ್ಲಿ ಹಾಡಿದೆ. ಅದನ್ನು ಕೇಳಿದ ಮೇಳದ ಭಾಗವತರು ಮೇಳಕ್ಕೆ ಬರುವಂತೆ ಕರೆದರು. ತಂದೆಯವರುಹೋಗುತ್ತಿಯಾ ಮಗಾ ಎಂದು ಕೇಳಿದರು. “ನೀವು ಒಪ್ಪಿಗೆ ಕೊಟ್ಟರೆ ಹೋಗುತ್ತೇನೆ ಅಂತ ಹೇಳಿದೆ. “ನೀನು ಹೋಗು ಕೃಷಿ ನಾನು ನೋಡಿಕೊಳ್ಳುತ್ತೇನೆ ಅಂದರು, ಹಾಗೆ ನಾನು ಮೇಳಕ್ಕೆ ಸೇರಿದೆ. ಆಗ ಕೂಡ್ಲು ಮೇಳದಲ್ಲಿ ಕುದ್ರೆಕೂಡ್ಲು ರಾಮಭಟ್ಟರು ಮದ್ದಳೆಗಾರರಾಗಿದ್ದರು. ನಾನು ಅವರನ್ನು ಗುರುಗಳಾಗಿ ಸ್ವೀಕರಿಸಿದೆ. ಅವರ ಶಿಷ್ಯ ಪ್ರೀತಿ ನನ್ನ ಮೇಲೆ ಬಹಳ ಪ್ರಭಾವ ಬೀರಿತು. ಅವರು ನನಗೆ ರಂಗಸ್ಥಳದಲ್ಲೇ ಪಾಠ ಹೇಳಿಕೊಟ್ಟರು. ಕಾಲದಲ್ಲಿ ಅಂತಹಾ ಗುರುಗಳು ಸಿಗುವುದು ಕಷ್ಟ.  ಅಲ್ಲಿ ಭಾಗವತಿಕೆ ಮತ್ತು ಮದ್ದಳೆ ಎರಡನ್ನೂ ಗಟ್ಟಿ ಮಾಡಿಕೊಂಡೆ. ವರ್ಷ ಹಾಗೇ ಹೋಯಿತು. ಮುಂದಿನ ವರ್ಷದಿಂದ ನಾನು ಬಳ್ಳಂಬೆಟ್ಟು ಮೇಳಕ್ಕೆ ಸೇರಿದೆ. ಅಲ್ಲಿ ನಾನು ಭಾಗವತಿಕೆ ಬಿಟ್ಟು ಒತ್ತು ಮದ್ಲೆಗಾರನಾಗಿ ಸೇರಿಕೊಂಡೆ. ಹೀಗೆ ತಂದೆಯಿಂದ ತೊಡಗಿ ನಂತರ ಸಿಕ್ಕ ಗುರುಗಳೆಲ್ಲಾ ನನಗೆ ನೀಡಿದ ಪ್ರೀತಿ ಮತ್ತು ಕಲಿಸುವ ರೀತಿ ನನ್ನನ್ನೂ ಒಬ್ಬ ಕಲಾವಿದನಾಗಿ ಬೆಳೆಸಿತು. ಅದೇ ವರ್ಷ ನಮ್ಮ ಮನೆಯನ್ನು ದೇವಚ್ಚಳ್ಳದಿಂದ ಪಂಜದ ಹತ್ತಿರಕ್ಕೆ ಬದಲಾಯಿಸಿದೆವು. ಸಂಸಾರ ಸಾಗಿಸುವುದು ಕಷ್ಟಕರವಾಯಿತು. ಹಾಗಾಗಿ ಮಳೆಗಾಲ ಕಳೆಯುದಕ್ಕಾಗಿ ರಾತ್ರಿ ಮನೆಮನೆಗೆ ಸ್ತ್ರೀವೇಷ ತೆಗೆದುಕೊಂಡು ಹೋದೆವು. ನಾನು ಭಾಗವತಿಗೆ ಅಥವಾ ಮದ್ದಳೆ ನುಡಿಸುತ್ತಿದ್ದೆ. ನನ್ನ ತಮ್ಮ ಸ್ತ್ರೀವೇಷ ಹಾಕುತ್ತಿದ್ದ, ತಂದೆಯವರು ಯಾವುದಾದರೂ ಒಂದು ಕಲಾವಿದನಾಗಿ ಇರುತ್ತಿದ್ದರು. ಎಲ್ಲವೂ ಹೊಟ್ಟೆಪಾಡಿಗಾಗಿಯೇ ನಡೆಯಿತು.
  ನೆಡ್ಲೆ, ಅಗರಿ, ಶಾಸ್ತ್ರಿಯವರ ಗರಡಿಯಲ್ಲಿ : ನಂತರದ ವರ್ಷ ನಾನು ಬಳ್ಳಂಬೆಟ್ಟು ಮೇಳ ಬಿಟ್ಟು ಧರ್ಮಸ್ಥಳ ಮೇಳಕ್ಕೆ ಸೇರಿದೆ. ಆಗ ಅಲ್ಲಿ ಯಕ್ಷಗಾನದ ತ್ರಿಮೂರ್ತಿಗಳಂತಿದ್ದ ಸುಪ್ರಸಿದ್ಧ ಹಿಮ್ಮೇಳವಾದಕ ನೆಡ್ಲೆ ನರಸಿಂಹ ಭಟ್ಟರು, ಅದ್ವಿತೀಯ ಭಾಗವತ ಅಗರಿಯವರು ಹಾಗೂ  ಪ್ರಬುದ್ಧ ನಾಟ್ಯಚಾರ್ಯ ಕುರಿಯ ವಿಠಲ ಶಾಸ್ತ್ರಿಯವರ ಸಂಪರ್ಕ ದೊರಕಿತು. ಮೂವರು ನನ್ನ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ನೆಡ್ಲೆಯವರು ನನಗೆ ಅಗರಿಯವರ ಭಾಗವತಿಯ ಶೈಲಿ ಮತ್ತು ಶಾಸ್ತ್ರಿಯವರ ಕುಣಿತ ಮತ್ತು ಅಭಿನಯದ ವಿಧಾನಕ್ಕೆ ಮದ್ದಳೆ ಬಾರಿಸುವ  ರೀತಿಯನ್ನು ಹೇಳಿಕೊಟ್ಟರು. ನನ್ನ ತಿಳುವಳಿಕೆಯ ಪ್ರಕಾರ ಅಗರಿಯವರಷ್ಟು ದೊಡ್ಡ ಭಾಗವತರು ಇನ್ನೊಬ್ಬರಿಲ್ಲ. ಅವರೊಬ್ಬ ಅಸಾಧಾರಣ ಕಲಾವಿದ. ಅವರೊಬ್ಬ ವ್ಯಾಘ್ರ ಮುಖದ ಗೋವು. ಮುಖ ಮಾತ್ರ ವ್ಯಾಘ್ರ, ಹೃದಯ ಗೋವು. ಯಕ್ಷಗಾನದಲ್ಲಿ ಅವರೊಬ್ಬ ನಿರ್ದೇಶಕನೂ ಆಗಿದ್ದರು. ಅವರ ತಾಳಕ್ಕೂ ಬಲಿಪರ ತಾಳಕ್ಕೂ ವ್ಯತ್ಯಾಸವಿತ್ತು.  ಅದೇ ರೀತಿ ವಿಠಲ ಶಾಸ್ತ್ರಿಗಳು, ಅವರ ಕುಣಿತದ ಕ್ರಮಕ್ಕೂ ಇತರರ ಕ್ರಮಕ್ಕೂ ವ್ಯತ್ಯಾಸವಿತ್ತು. ಅವರಿಗೆ ಭರತನಾಟ್ಯವೂ ಗೊತ್ತಿತ್ತು. ಅವರ ಅಭಿನಯ ಮತ್ತು ಕುಣಿತ ಎರಡೂ ಪರಿಣಾಮಕಾರಿ ಹಾಗೂ ತನ್ನದೇ ಆದ ಕ್ರಮವನ್ನು ಒಳಗೊಂಡಿತ್ತು. ಆದ್ದರಿಂದ ಇವರಿಬ್ಬರಿಗೆ ಮದ್ದಳೆ ಬಾರಿಸುದಕ್ಕೆ ಆಗ ಮೇಳದ ಪ್ರಧಾನ ಮದ್ಲೆಗಾರರಾದ ನೆಡ್ಲೆಯವರೇ ಸರಿಕಟ್ಟಿನವರಾಗಿದ್ದರು. ಒತ್ತು ಮದ್ಲೆಗಾರನಾಗಿ ಸೇರಿದ ನನಗೆ ನೆಡ್ಲೆಯವರ ಪಾಠ ಆರಂಭವಾಯಿತು. 
  ಹಲವು ಮೇಳಗಳ ಅನುಭವ : ಕೂಡ್ಲು ಮೇಳದಿಂದ ಆರಂಭವಾದ ನನ್ನ ವೃತ್ತಿ ಜೀವನ ಹಲವು ಮೇಳಗಳಲ್ಲಿ ಉತ್ತಮ ಕೊಳ್ಳುತ್ತಾ ಸಾಗಿತು. ಬಳ್ಳಂಬೆಟ್ಟು, ಧರ್ಮಸ್ಥಳ, ಸುರತ್ಕಲ್, ರಾಜರಾಜೇಶ್ವರಿ, ಕಲಾವಿಹಾರ, ಕರ್ನಾಟಕ, ಇರಾ ಸೋಮೇಶ್ವರ, ಕಣಿಪುರ ಹೀಗೆ ಎಲ್ಲಾ ಮೇಳಗಳದ್ದೂ ಹೊಸಹೊಸ ಅನುಭವಗಳೇ ಆಗಿದ್ದವು. ಎಲ್ಲೇ ಹೋದರೂ ನಾವು ಹೊಸದನ್ನು ನೋಡಲು ಸಾಧ್ಯವಾದರೆ ಸಂತೃಪ್ತಿಯಿಂದ ಇರುವುದಕ್ಕೆ ಸಾಧ್ಯವಿದೆ. ಸುಮಾರು 40 ವರ್ಷಗಳ ವರೆಗೆ ಮೇಳಗಳ ತಿರುಗಾಟದಲ್ಲಿ ಅನುಭವ ನನಗಾಗಿದೆ. ಆರಂಭದ ಕಾಲದಲ್ಲಿ ರಾಮಭಟ್ಟರು, ನೆಡ್ಲೆ ನರಸಿಂಹ ಭಟ್ಟರು, ಅಡೂರು ಶಿವ ಮದ್ಲೆಗಾರರು, ಕುಂಡಂಕುಳಿ ರಾಮಕೃಷ್ಣಯ್ಯನವರು, ದಿವಾಣ ಭೀಮ ಭಟ್ಟರು ಹೀಗೆ ದೊಡ್ಡ ಮದ್ದಳೆಗಾರರಾಗಿ ಮೇಳಗಳಲ್ಲಿ ಇದ್ದರು. ನಂತರ ನನ್ನ ತಲೆಮಾರಿನ ಹಲವು ನುರಿತ ಮದ್ಲೆಗಾರರು ಗುರುತಿಸಿಕೊಂಡರು. ಈಗ ಮತ್ತೆ ಹೊಸ ತಲೆಮಾರಿನ ಪ್ರಬುದ್ಧ ಕಲಾವಿದರು ಮೂಡಿ ಬಂದಿದ್ದಾರೆ. ಹೀಗೆ ಪರಂಪರೆ ಸಾಗುವುದೇ ಯಕ್ಷಗಾನದ ಶಕ್ತಿ.
ಅತಿರೇಕಗೊಳ್ಳುತ್ತಿರುವ ಯಕ್ಷಗಾನ :  ಬಹಳ ಹಿಂದೆ ಯಕ್ಷಗಾನದಲ್ಲಿ ಚಂಡೆ ಇರಲಿಲ್ಲ ಅಂತ ಕೇಳಿದ್ದೆ. ಆದರೆ ನಾವೆಲ್ಲಾ ಯಕ್ಷಗಾನದಲ್ಲಿ ಚಂಡೆ ಬಳಕೆಯಾಗುವ ಕಾಲದಲ್ಲಿ ಬಂದವರು. ಆದರೆ ಆಗ ಹಿಮ್ಮಳದಲ್ಲಿ ಚಂಡೆಯ ಬಳಕೆ ಹಿತಮಿತವಾಗಿತ್ತು. ಆದರೆ ಈಗ ಏನಾಗಿದೆ ಎಂದರೆ ಎಲ್ಲದಕ್ಕೂ ಚಂಡೆಯ ಬಳಕೆ. ಬಡಗಿನಲ್ಲಿ ಇದು ಹಿಂದಿನಿಂದಲೂ ಇತ್ತು. ಆದರೆ ತೆಂಕಿಗೆ ಇದು ಹೊಂದಿಕೆಯಾಗುವುದಿಲ್ಲ. ಬಡಗು ಶೃಂಗಾರ ಪ್ರಧಾನ, ಆದ್ದರಿಂದ ಅಲ್ಲಿಯ ಚಂಡೆ ಅದಕ್ಕೆ ಹೊಂದಿಕೆಯಾಗಿಯೇ ರಚನೆಗೊಂಡಿದೆ. ತೆಂಕು ವೀರ ರಸ ಪ್ರಧಾನ. ಇಲ್ಲಿ ಎಲ್ಲಾ ಹಂತದಲ್ಲೂ ಚಂಡೆಯ ಅಗತ್ಯವಿರುವುದಿಲ್ಲ, ಅದರಲ್ಲೂ ಆಯ್ಕೆ ಇದೆ. ಆದರೆ ಇತ್ತಿಚೆಗೆ ಎಲ್ಲದಕ್ಕೂ ಚಂಡೆಯ ಬಾರಿಸುತ್ತಾರೆ. ಇದರಿಂದ ಮದ್ದಳೆಯ ಬೆಲೆ ಕಡಿಮೆಯಾಗುತ್ತಿದೆ. ಚಾ-ಕಾಫಿಯನ್ನು ಮಿಶ್ರ ಮಾಡಿ ಕುಡಿದ ಹಾಗೆ ಇವತ್ತಿನ ಚಂಡೆ-ಮದ್ದಳೆಯ ಬಳಕೆ ನಡೆಯುತ್ತಿರುವುದು ವಿಷಾದನೀಯ.
ಯಕ್ಷಗಾನ ಹೀಗಿದ್ದರೆ ಉತ್ತಮ :  ಇವತ್ತು ಯಕ್ಷಗಾನ ಹಿಮ್ಮೇಳದಲ್ಲಿ ಭಾಗವತರ ಆಲಾಪನೆಗಳೇ ಹೆಚ್ಚಾಗಿದೆ. ಎಲ್ಲದಕ್ಕೂ ಒಂದು ಲೆಕ್ಕ ಇದ್ದೇ ಇದೆ. ಆದರೆ ಇವತ್ತು ಲೆಕ್ಕ ತಪ್ಪುತ್ತಿದೆ. ದೊಡ್ಡ ಬಲಿಪರ, ಅಗರಿಯವರ ಕಾಲದಲ್ಲಿ ಲೆಕ್ಕ ತಪ್ಪಿರಲಿಲ್ಲ. ಮಿತಿಯನ್ನು ದಾಟಿ ಅವರು ಮುಂದೆ ಹೋಗುತ್ತಿರಲಿಲ್ಲ. ಆದರೆ ಈಗಿನ ಭಾಗವತರು ಹೇಗೆಂದರೆ, ಒಂದು ಗಂಜಿ ಊಟ ಅಂತ ಇಟ್ಕೊಳಿ, ಒಂದಷ್ಟು ಗಂಜಿ, ಅದಕ್ಕೆ ಸರಿಯಾದ ತಿಳಿ ಇದ್ದರೆ ಸರಿ. ಈಗ ತಿಳಿಯೇ ಜಾಸ್ತಿ ಬಡಿಸುತ್ತಿದ್ದಾರೆ, ಗಂಜಿ ಬಹಳ ಕಡಿಮೆ. ಭಾಗವತಿಕೆ, ಕುಣಿತಗಳಿಗೆ ಮದ್ದಳೆಯನ್ನು ತಯಾರು ಮಾಡಬೇಕಾದ ಅನಿವಾರ್ಯ ಉಂಟಾಗುತ್ತಿದೆ. ಇದು ಇವತ್ತಿನ ಸಮಸ್ಯೆ. ಅದೇ ರೀತಿ ಚಂಡೆ ಮದ್ದಳೆಯಲ್ಲೂ ಪ್ರಯೋಗ ನಡೆಯುತ್ತಿದೆ.
         ಅದೇ ರೀತಿ ಕುಣಿತದಲ್ಲೂ ಬಹಳ ಏರುಪೇರಾಗಿದೆ. ನೋಡಿ, ಚಾಲು ಕುಣಿತ ತೆಂಕಿನದ್ದಲ್ಲ, ಅದು ಬಡಗಿನದ್ದು. ಆದರೆ ಇತ್ತೀಚೆಗೆ ತೆಂಕಿನಲ್ಲಿ ಅದರ ಬಳಕೆ ಹೆಚ್ಚಾಗಿದೆ. ಅದೇ ರೀತಿ ಮಾತುಗಾರರು ಬಂದ ನಂತರ ಭಾಗವತರಿಗೂ ಹಿನ್ನಡೆಯಾಗಿದೆ. ಮನೆಗಿಂತ ದೊಡ್ಡ ಮೆಟ್ಟುಕಲ್ಲು ಆದರೆ ಹೇಗೆ? ಆದ್ದರಿಂದ ಯಾವತ್ತೂ ಪ್ರಯೋಗಗಳು ಪ್ರಯೋಗಕ್ಕೇ ಸೀಮಿತವಾಗಿರಬೇಕು, ಅದು ಪ್ರದರ್ಶನದ ಹಂತಕ್ಕೆ ಬಂದಾಗ ಅಪಾಯ ಹೆಚ್ಚಾಗುತ್ತದೆ. ಹಾಗಾಗಿ ವೇಷ, ಕುಣಿತ, ಅಭಿನಯ, ಮಾತು ಮುಮ್ಮೇಳಗಳಲ್ಲಿ ಮತ್ತು ಭಾಗವತಿಕೆ, ಚಂಡೆ, ಮದ್ದಳೆ ಹಿಮ್ಮೇಳಗಳಲ್ಲಿ  ಒಂದನ್ನೊಂದು ಮೀರದ ಎಲ್ಲವೂ ಸಮನ್ವಯಗೊಂಡಿರುವ ಸಮಗ್ರವಾದ ಯಕ್ಷಗಾನ ನಮಗೆ ಇವತ್ತು ಬೇಕು. ಇಲ್ಲಿ ಎಲ್ಲವೂ ಮುಖ್ಯವಾಗಬೇಕು. ಯಾವುದೂ ಹೆಚ್ಚಾಗದೆ, ಯಾವುದೂ ಕಡಿಮೆಯಾಗದೇ  ಸಮನ್ವಯಗೊಂಡಿರಬೇಕು. ಇದನ್ನು ಸಾಧಿಸಲು ಕಲಾವಿದನೊಂದಿಗೆ ಪ್ರೇಕ್ಷಕರೂ ಕೈಜೋಡಿಸಬೇಕು.
                                                                                                                                ಡಾ. ಸುಂದರ ಕೇನಾಜೆ

        

Comments