ನಾಟಕ "ನಿಲುಕದ ನಕ್ಷತ್ರ "


ಕಳೆದ ಮಾ. 8 ನೇ ತಾರೀಕು ಭಾನುವಾರ ಕಿರುರಂಗಮಂದಿರದಲ್ಲಿ  ಮೈಸೂರು ವಿಜ್ಞಾನ ನಾಟಕೋತ್ಸವದಲ್ಲಿ, ಅರಿವು ರಂಗ ತಂಡದಿಂದ ಪ್ರದರ್ಶನಗೊಂಡ ನಾಟಕ "ನಿಲುಕದ ನಕ್ಷತ್ರ " ಶ್ರೀನಿವಾಸ ರಾಮಾನುಜನ್ ,  ನಾಟಕದ ಬಗೆಗಿನ ವಿಮರ್ಶೆ.  






    
        ವಿಜ್ಞಾನದ ಪ್ರೌಢಿಮೆ ಮತ್ತು ಬದುಕಿನೊಳಗಿನ ಭಾವನೆ ಇವೆರಡು ಸಮತೂಕದಲ್ಲಿ ಬೆರೆತು ಕಲೆಯಾಗಿ ಅಭಿವ್ಯಕ್ತಿಗೊಂಡಾಗ ಆತ್ಯಂತಿಕ ಅನುಭವವೊಂದು ಸಿಗುತ್ತದೆ ಎನ್ನುವುದಕ್ಕೆ ಮೈಸೂರಿನ ಅರಿವು ರಂಗ ಪ್ರಸ್ತುತಪಡಿಸುತ್ತಿರುವ "ನಿಲುಕದ ನಕ್ಷತ್ರ" (ಗಣಿತಜ್ಞ ಎಸ್.ರಾಮಾನುಜನ್ ಕುರಿತ)ನಾಟಕವೇ ನಿದರ್ಶನ.
ಭಾರತಕ್ಕೆ ಪಾಶ್ಚಿಮಾತ್ಯರ ಪ್ರಭಾವ ಹೆಚ್ಚಾದ ನಂತರ ಎಲ್ಲವನ್ನೂ ಪಶ್ಚಿಮದ ಕಣ್ಣಿನಿಂದಲೇ ನೋಡಲು ಆರಂಭಿಸಿದ ಭಾರತೀಯರಿಗೆ ವಸ್ತುವಲ್ಲದೇ ವ್ಯಕ್ತಿ  ಕೂಡಾ ಹೀಗೇ ಇರಬೇಕೆಂದೂ ನಿರ್ಧರಿತವಾಯಿತು. ಹೀಗೆ ಇರುವುದರಲ್ಲಿ  ವಿಜ್ಞಾನಿಗಳು, ಅನ್ವೇಷಕರು, ಸಂಶೋಧಕರು, ಶಿಕ್ಷಣ ತಜ್ಞರು ಹೀಗೆ ಮೊದಲ ಸಾಲಲ್ಲಿ, ಸಾಹಿತಿಗಳು, ಕಲಾವಿದರು ಮತ್ತು ಇನ್ನಿತರ ಪಾರಂಪರಿಕರೂ ನಂತರದ ಸಾಲಲ್ಲಿದ್ದಾರೆ. ಇದನ್ನು ತೊಡೆದು ಹಾಕಬೇಕೆಂಬ ನೆಲೆಯ ದೇಸೀವಾದ ಪಾಶ್ಚಾತ್ಯ ಪ್ರಭಾವದಷ್ಟೇ ಹಿಂದಿನದ್ದು, ಆದರೆ ರಾಜಕೀಯವಾದ ವಾಸನೆಯ ಹೊರತಾದ ಈ  ಭಾರತೀಯತೆ ಅಥವಾ ದೇಸಿಯತೆ ಏನು ಎನ್ನುವುದನ್ನು ಇಂದಿಗೂ ಸಮರ್ಪಕವಾಗಿ ಹೊಸ ತಲೆಮಾರಿಗೆ ಸೂತ್ರೀಕರಿಸಿ ಪರಿಚಯಿಸಲು ನಮ್ಮಿಂದ ಸಾಧ್ಯವಾಗಿಲ್ಲ.  ಆದರೆ ಸಿದ್ದಸೂತ್ರವಲ್ಲದಿದ್ದರೂ "ವೈಜ್ಞಾನಿಕ ಮತ್ತು ತಾಂತ್ರಿಕ ಪರಿಕಲ್ಪನೆಗಳ ಮಧ್ಯೆ ಇರಬೇಕಾದ ದೇಸೀಯತೆ ಇದು" ಎಂದು ಹೇಳುವ ಕೆಲಸಗಳು ಅಲ್ಲಿ ಇಲ್ಲಿ  ಮಿಂಚುಹುಳುವಿನಂತೆ ಮಿನುಗುತ್ತಲೇ ಇರುತ್ತದೆ.  ಅದರಲ್ಲಿ ಈ ವಿಜ್ಞಾನ ನಾಟಕವೂ ಒಂದು.
       ಎಸ್.ರಾಮಾನುಜನ್ ಜಗತ್ತು ಕಂಡ ಶ್ರೇಷ್ಠ ಭಾರತದ ಗಣಿತಜ್ಞ ಎನ್ನುವ ನಿರ್ವಿವಾದ ಎಲ್ಲರ ಕಣ್ಣಿಗೆ ಕಾಣುತ್ತಲೇ ಬಂದಿದೆ. ಆದರೆ ಅವರೊಳಗೊಬ್ಬ ಅಪ್ಪಟ ದೇಸೀ ವ್ಯಕ್ತಿತ್ವ ಇತ್ತು ಎನ್ನುವುದನ್ನು ತಿಳಿಸುವ ಕೆಲಸ ನಡೆದದ್ದು ಕಡಿಮೆ. ಆದರೆ ಈ ನಾಟಕ  ರಾಮಾನುಜರಂತೆ ಭಾರತೀಯ ಎಲ್ಲಾ ವಿಜ್ಞಾನಿ, ತಂತ್ರಜ್ಞರಲ್ಲೂ ದೇಸೀ ವ್ಯಕ್ತಿತ್ವವೊಂದನ್ನು ಮೊದಲು ಗುರುತಿಸಿ ಆ ಮೂಲಕ ಅವರ ಸಾಧನೆಯನ್ನು ನೋಡಬೇಕೆನ್ನುವ ನೋಟವೊಂದಕ್ಕೆ ಚಾಲನೆ ನೀಡಿದೆ.   ಆದರೆ ಇದು ಒಬ್ಬ ವ್ಯಕ್ತಿಯ ಸಾಮರ್ಥ್ಯವೂ ಹೌದು, ದೌರ್ಬಲ್ಯವೂ ಹೌದು ಎನ್ನುವ ನೆಲೆಯಲ್ಲೇ ಸ್ವೀಕರಿಸಬೇಕು ಎನ್ನುವುದು ಪ್ರಜ್ಞಾವಂತ ತಿಳುವಳಿಕೆ, ಇದನ್ನೂ ಈ ನಾಟಕ ತಿಳಿಸುತ್ತದೆ. ಈ ತಿಳುವಳಿಕೆಯ ಸೂಕ್ಷ್ಮವನ್ನು ಸಮತೋಕದಲ್ಲಿ ಒಂದು ನಾಟಕದ ಮೂಲಕ ಅರಿವು ರಂಗ ಎತ್ತಿತೋರಿಸಿದೆ.
 ಸಾಮಾನ್ಯವಾಗಿ ವಿಜ್ಞಾನಿಗಳು, ವಿಮರ್ಶಕರು ಎಂದರೆ ಭಾವನೆಗಳಿಲ್ಲದ ಯಾಂತ್ರಿಕರು ಎನ್ನುವ ಅಭಿಪ್ರಾಯ ಇದೆ. ಇದು ಪಾಶ್ಚಾತ್ಯರ ಮಟ್ಟಿಗೆ ಸರಿಯಾಗಿರಬಹುದು. ಆದರೆ ಭಾರತೀಯರ ಮಟ್ಟಿಗಲ್ಲ. ಇಲ್ಲಿ ಒಬ್ಬ ಕವಿಗೆ, ಕಲಾವಿದನಿಗೆ ಹೇಗೆ ಭಾವನೆಗಳಿವೆಯೋ ಹಾಗೇ ವಿಜ್ಞಾನಿಗೂ ವಿಮರ್ಶಕನಿಗೂ ಇದೆ. ಇದು ತಪ್ಪು ಎನ್ನುವುದಾದರೆ ಅದೂ ಪಾಶ್ಚಿಮಾತ್ಯರದ್ದೇ. ವಿದೇಶಿ ವಿಜ್ಞಾನಿಗಳೇನೋ ಇದನ್ನು ಒಗ್ಗಿಸಿಕೊಂಡಿರಬಹುದು. ಆದರೆ ಭಾರತೀಯರು ಹಾಗಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಈ ನಾಟಕ ನೋಡಲೇಬೇಕು. ರಾಮನುಜನ್ ವ್ಯಕ್ತಪಡಿಸುವ ಭಾವನೆಗಳು ವಿಜ್ಞಾನದ ದೃಷ್ಟಿಯಿಂದ ತಪ್ಪು ಆದರೆ ಮನುಷ್ಯನಾಗಿ  ಸರಿ. ಏಕೆಂದರೆ ರಾಮಾನುಜನ್ ಮೊದಲು ಓರ್ವ ಮನುಷ್ಯ ಅದಕ್ಕೂ ಮಿಗಿಲಾಗಿ ಭಾರತದಲ್ಲಿ ಹುಟ್ಟಿ ಬೆಳೆದ ಮನುಷ್ಯ. ಸಹಜವಾಗಿಯೇ ಇಲ್ಲಿಯ ಪ್ರೀತಿ,ಸಂಕಟ, ಹಿಂಜರಿಕೆ ಎಲ್ಲವನ್ನೂ ಮೈಗೂಡಿಸಿಕೊಂಡಿರುವ ಮನುಷ್ಯ. ಅದನ್ನು ಮೀರಿನಿಲ್ಲುವ ಪರಂಪರೆಯನ್ನು ಇಂದಿಗೂ ರೂಢಿಸಿಕೊಳ್ಳಲು ಸಾಧ್ಯವಾಗಿಲ್ಲದಿರುವಾಗ ಇತಿಹಾಸದ ದೃಷ್ಟಿಯಲ್ಲಿ ಈ ಪಾತ್ರವನ್ನು ದೇಸಿಯ ನೆಲೆಯಲ್ಲಿಯೇ ಸೃಷ್ಟಿಸಿದ್ದು ಈ ನಾಟಕದ ಸಾಮರ್ಥ್ಯ. ಇದು ನಾಟಕಗಳ ಚೌಕಟ್ಟನ್ನೂ ವೀರಿ ಜನರ ಕಣ್ಣಲ್ಲಿ ಗಾಂಭೀರ್ಯ ಮತ್ತು ಆರ್ದ್ರತೆ ಎರಡನ್ನೂ ಏಕಕಾಲದಲ್ಲಿ ಮೂಡಿಸುತ್ತದೆ. 
       ಮೂರು ಹಂತಗಳ ರಾಮನುಜನ್ ರವರ ಬದುಕಿನ ಪುಟಗಳನ್ನು ಕೇವಲ ಒಂದು ಗಂಟೆ ಹತ್ತು ನಿಮಿಷದಲ್ಲಿ ವಿಸ್ತಾರವೋ ಎಂಬಂತೆ ತೆರೆದಿಟ್ಟ ರೀತಿ ಅನನ್ಯ( ರಾಮಾನುಜನ್ ಬದುಕಿದ್ದೂ ಮೂವತ್ತೆರಡು ವರ್ಷ ಮಾತ್ರ! ಆದರೆ ಸಾಧಿಸಿದ್ದು ಮುನ್ನೂರು ವರ್ಷ ಬೇಕು ಎನ್ನುವಷ್ಟು !) ಮೊದಲ ರಾಮಾನುಜನ್ ( ಅಭಿರಾಮ್) ಕುತೂಹಲಿ, ಮಗು ಸಹಜ ಸ್ವಚ್ಛಂದ.  ಸಾಧಿಸುವ ಛಲವಿರುವ ಆದರೆ  ನಿಖರತೆ ಇಲ್ಲದ ಎರಡನೇಯ ರಾಮಾನುಜನ್ (ಕಾಜು),
        ಮೂರನೇ ಹಂತದ ರಾಮಾನುಜನ್ ಪಾತ್ರವಂತೂ(ಡಾ. ಎಂ.ಸಿ ಮನೋಹರ) ತೀವೃ  ಸಾಧಿಸುವ ಹಠವಿರುವ ಆದರೆ ಅಷ್ಟೇ ತೀವೃವಾದ ಭಾವನೆಗಳಲ್ಲಿ ಬಂಧಿಯಾಗಿರುವ ಪಾತ್ರ. ಈ ಪಾತ್ರ ನಿಜ ಜೀವನದಲ್ಲೂ ರಾಮಾನುಜನ್ ಅನುಭವಿಸಿರಬಹುದಾದ ಸಾಧನೆ ಮತ್ತು ತೊಳಲಾಟಗಳ ಮರುಸೃಷ್ಟಿ. ಈ ತೊಳಲಾಟವೇ ಅವರ ಬದುಕನ್ನು ಬಹುಬೇಗ ಕಸಿಯುವಂತೆ ಮಾಡಿತು. ಇದನ್ನು  ಸಮರ್ಪಕವಾಗಿ ಊಹಿಸಿಕೊಳ್ಳುವಂತೆ ಇತ್ತು ಈ ಪಾತ್ರ. ನಾನು ಮೊದಲೇ ಹೇಳಿದಂತೆ ಇದೇ ದೇಸಿಯತೆಯ ದೌರ್ಬಲ್ಯ. ಇಲ್ಲಿ ಪಾತ್ರಧಾರಿ ಮೂಲ ಪಾತ್ರದ ಪರಕಾಯ ಪ್ರವೇಶ ಮಾಡಿ, ಅನುಭವಿಸಿ ಅಭಿವ್ಯಕ್ತಿಸಿದ್ದರಿಂದ ಈ ಪಾತ್ರವನ್ನು ಸಹಜವಾಗಿ ರಂಗದ ಮೇಲೆ ತರಲು ಸಾಧ್ಯವಾಯಿತು. ಇದಕ್ಕಾಗಿ ಡಾ.ಮನೋಹರರು ವಿಶೇಷ ಅಭಿನಂದನಾರ್ಹರು. ಆದ್ದರಿಂದ  ವಿಜ್ಞಾನಕ್ಕೆ ದೇಶಿಯ ಮತ್ತು ಪಾಶ್ಚಿಮಾತ್ಯ ವ್ಯಕ್ತಿತ್ವಗಳನ್ನು ಒಗ್ಗಿಕೊಳ್ಳಬೇಕಾದ ರೀತಿಯನ್ನೂ ಈ ಪಾತ್ರ ಎತ್ತಿ ತೋರಿಸುತ್ತದೆ. 
       ಇಲ್ಲಿ ಬರುವ ಪ್ರೊ .ಹಾರ್ಡಿ(ಡಾ. ಭುವನೇಶ್ವರ್) ಮತ್ತು  ಪ್ರೊ.ಲಿಟ್ಲ್  ಹುಡ್ ( ಡಾ.ಚಲಪತಿ) ಪಾಶ್ಚಿಮಾತ್ಯ ವ್ಯಕ್ತಿತ್ವದ ಸಮರ್ಪಕ ಪ್ರತಿನಿಧಿಗಳು. ಹಾಗೆಂದು ತೀರ ಭಾವುಕರಲ್ಲ. ಪ್ರತಿಭೆಯನ್ನು ಬೆಂಬಲಿಸುವವರು. ಇವರ ನಟನೆ ಹತ್ತೊಂಬತ್ತನೇ ಶತಮಾನದ ಕೇಂಬ್ರಿಡ್ಜ್ ವಿ.ವಿ. ಮೈಸೂರಿನ ಕಿರುರಂಗ ಮಂದಿರಕ್ಕೆ ಬಂದಂತೆ ಕಂಡಿತು.    
       ರಾಮಾನುಜನ್ ತಾಯಿ(ಸುಧಾ ಗುಡಗುಂಡಿ) ತಂದೆ(ಪ್ರಸಾದ್ ಬಾಬು ಎಂ)ಇವರ ಗ್ರಾಮ್ಯ  ಸಹಜ ಮುಗ್ದತೆ, ಅಜ್ಜಿಯ(ಶ್ರೀಮತಿ ಹರಿಪ್ರಸಾದ್) ಸಾಂಪ್ರದಾಯಿಕತೆ, ಹೆಂಡತಿಯ(ನೇತ್ರ ರಘುನಂದನ್) ದೇಸೀ ವಿಧೇಯತೆ, ಸ್ನೇಹಿತರ (ಪವಮಾನ, ರಾಜೇಂದ್ರ) ಹಳ್ಳಿಯ ಹುಡುಗಾಟಿಕೆ, ಗ್ರಾಮೀಣ  ಅಧ್ಯಾಪಕರ(ರೋಹಿತ್ ಬಾಟ್ನಿ) ನಿಸ್ಸಾಹಾಯಕತೆ ಈ ಎಲ್ಲಾ ಪರಿಸರದ ಮಧ್ಯೆ ಬೆಳೆದ ರಾಮಾನುಜನ್ ವ್ಯಕ್ತಿತ್ವ ಮೂತ್ತೆರಡಕ್ಕಿಂತ ಹೆಚ್ಚಿರಲು ಹೇಗೆ ಸಾಧ್ಯವಿಲ್ಲ ಎನ್ನುವುದನ್ನು ಈ ನಾಟಕದ ಮೂಲಕ ಗ್ರಹಿಸಬಹುದು. ಆದರೆ ಇವರ ಈ ಸಾಂಗತ್ಯದಿಂದಲೇ ಮೂವತ್ತೆರಡರಲ್ಲೇ ಇಂತಹಾ ಅಸಾಧಾರಣ ಸಾಧನೆಯನ್ನು ಮಾಡಲೂ ಸಾಧ್ಯವಿದೆ ಎನ್ನುವುದನ್ನೂ ಇದು  ತೋರಿಸುತ್ತದೆ. ಇದೇ ದೇಸಿಯತೆಯ ದೌರ್ಬಲ್ಯ ಮತ್ತು ಸಾಮರ್ಥ್ಯ. 
         ಡಾ. ಭದ್ರಪ್ಪ ಶಿ ಹೆನ್ಲಿಯವರ ದೀರ್ಘ ನಾಟಕವನ್ನು ಪ್ರಶಾಂತ್ ಮೈಸೂರು ಒಂದು ಗಂಟೆಗೆ ನಿರ್ದೇಶಿಸಿ ರಂಗಕ್ಕೆ ತಂದಿದ್ದಾರೆ. ಕಲಾವಿದರೆಂದರೆ ವೃತಿಪರರೇ ಆಗಬೇಕಾಗಿಲ್ಲ, ಪ್ರವೃತ್ತಿಯವರೂ ಸಮರ್ಥರು ಎನ್ನುವುದನ್ನು ಪ್ರಶಾಂತ್ ತನ್ನ ಗರಡಿಗೆ ಸೇರಿದ ವಿಭಿನ್ನ ವೃತ್ತಿಯವರನ್ನು ಪಳಗಿಸಿ ತೋರಿಸಿಕೊಟ್ಟಿದ್ದಾರೆ. ವಿಜ್ಞಾನ ನಾಟಕಗಳಲ್ಲಿ ಸೃಜನಶೀಲತೆಯನ್ನು ಹೇಗೆ ತರಬಹುದು ಎನ್ನುವುದಕ್ಕೆ ಪ್ರಶಾಂತರ ಈ ಪ್ರಯತ್ನ ಒಂದು ಸಾಕ್ಷಿ. ರಂಗಕ್ಕೆ ಹೊಂದುವ ಬೆಳಕು(  ಮಹೇಶ್ ಕಲ್ಲತ್ತಿ), ಶಬ್ದ ವಿನ್ಯಾಸ ( ಪ್ರವೀಣ್ ಬೆಳ್ಳಿ), ರಂಗ ಸಜ್ಜಿಕೆ( ಕಾಜು) ಮುದನೀಡಿತು. 
                17.03.2020                                                                                       ಡಾ.ಸುಂದರ ಕೇನಾಜೆ


Comments