ತಾಳಮದ್ದಳೆ


                                          ತಾಳಮದ್ದಳೆ ಅರ್ಥ ಮತ್ತು ಸ್ವರೂಪ ಪರಿಚಯ    
      ಕರಾವಳಿಯ ಗಂಡು ಕಲೆ ಯಕ್ಷಗಾನ. ಯಕ್ಷಗಾನದ ಕೆಲವು ಭಾಗಗಳಾದ ಪ್ರಸಂಗ, ಹಿಮ್ಮೇಳ ಮತ್ತು ಮಾತು ಇವುಗಳನ್ನು ಇರಿಸಿಕೊಂಡು ಪ್ರತ್ಯೇಕವಾಗಿ ಬೆಳೆದ ಇನ್ನೊಂದು ಕಲೆ ತಾಳಮದ್ದಳೆ. ನಮ್ಮ ಪುರಾಣಗಳಾದ ರಾಮಾಯಣ ಮತ್ತು ಮಹಾಭಾರತ ಹಾಗೂ ಇತರ ಕಾವ್ಯಗಳೇ ಇದರ ವಸ್ತು. ವಸ್ತುಗಳಲ್ಲಿ ಬರುವ ಪಾತ್ರಗಳನ್ನು ಮಾತಿನ ಮೂಲಕ ವ್ಯಕ್ತಪಡಿಸುವ ಕಲಾ ಮಾಧ್ಯಮ ತಾಳಮದ್ದಳೆ.  ಹಾಗೆ ನೋಡಿದರೆ ತಾಳಮದ್ದಳೆ, ಸಂಗೀತ ಮತ್ತು ಮಾತುಗಳ ನರ್ತನ. ಪ್ರಬುದ್ಧ ಕಲಾವಿದರ ಬಾಯಿಯಲ್ಲಿ ಮಾತುಗಳು ನಲಿಯುತ್ತವೆ, ಕಾವ್ಯಗಳು ವ್ಯಾಖ್ಯಾನಿಸಲ್ಪಡುತ್ತವೆ, ಇದಕ್ಕೆ  ತಾಳಮದ್ದಳೆಯೇ ಉತ್ತಮ ಉದಾಹರಣೆ.
                   ತಾಳಮದ್ದಳೆ ಎಂದಾಗ ತಾಳ ಮತ್ತು ಮದ್ದಳೆ ಎರಡು ವಾದ್ಯ ಪ್ರಕಾರಗಳ ಬಳಕೆ ಎಂಬ ಸೀಮಿತ ಅರ್ಥವಲ್ಲ. ಅದರ ಹಿಂದೆ ವಿಸ್ತಾರ ಕಾರ್ಯಚಟುವಟಿಕೆಯ ವ್ಯಾಪ್ತಿ ಇದೆ.  ಒಬ್ಬ ಭಾಗವತನ ಹಾಡಿಗೆ ಪೂರಕವಾದ ತಾಳ, ಮದ್ದಳೆ, ಚಂಡೆ ಮತ್ತು ಚಕ್ರತಾಳಗಳ ವಾದನವು  ಹಿಮ್ಮೇಳವಾಗಿ ವೇದಿಕೆಯಲ್ಲಿರುತ್ತದೆ.
       ಇದೇ ಹಿಮ್ಮೇಳ ಯಕ್ಷಗಾನದಲ್ಲೂ ಇರುತ್ತದೆ. ಆದ್ದರಿಂದ ಹಿಮ್ಮೇಳ ಕಲಾಪ್ರಕಾರದ ಒಂದು ಭಾಗ. ಹಿಮ್ಮೇಳ ತಂಡದ ಭಾಗವತ ಒಂದು ಹಾಡನ್ನು ಹಾಡುತ್ತಾನೆ. ಹಾಡು ಛಂದೋಬದ್ಧವಾಗಿ ರಚಿಸಿದ ಕಾವ್ಯ ಸ್ವರೂಪವಾಗಿರುತ್ತದೆ. ಕಾವ್ಯದ ವಸ್ತು ಸಾಮಾನ್ಯವಾಗಿ ಭಾರತೀಯ ಪುರಾಣ. ಆದರೆ ಕೆಲವೊಮ್ಮೆ ಬೇರೆ ವಸ್ತುಗಳೂ ಇರಬಹುದು. ಒಬ್ಬ ನಿರ್ದಿಷ್ಟ ಕವಿಯಿಂದ ರಚಿಸಲ್ಪಟ್ಟ ಕಾವ್ಯವನ್ನುಪ್ರಸಂಗ ಎಂದು ಕರೆಯುತ್ತಾರೆ. ಪ್ರಸಂಗದೊಳಗಿರುವ ಪದ್ಯಗಳನ್ನುಪದ ಎನ್ನುತ್ತಾರೆ.
      ಕಥಾನಕ ರೂಪದಲ್ಲಿರುವ ಪದವನ್ನು ಭಾಗವತ ರಾಗ ಮತ್ತು ತಾಳಬದ್ಧವಾಗಿ ಹಾಡುತ್ತಾನೆ. ಭಾಗವತ ತಾಳಮದ್ದಳೆಯ ಪ್ರಧಾನ ಪಾತ್ರಧಾರಿ. ಈತನೇ ಪ್ರಸಂಗವನ್ನು ಮುನ್ನಡೆಸುತ್ತಾನೆ. ಸಂದರ್ಭಾನುಸಾರ ನಿಶ್ಚಿತ ಪದ್ಯಗಳನ್ನು ಏರು, ಸೌಮ್ಯ, ಶೃಂಗಾರ ಹೀಗೆ ವಿಭಿನ್ನ ಧಾಟಿಗಳಲ್ಲಿ ಹಾಡುತ್ತಾನೆ. ಅದಕ್ಕೆ ಸರಿಯಾಗಿ ವಾದ್ಯ ಪರಿಕರಗಳನ್ನು ನುಡಿಸುವುದು ಹಿಮ್ಮೇಳದ ಕಾರ್ಯ. ಹಿಮ್ಮೇಳದ ಪಾತ್ರ ತಾಳಮದ್ದಳೆಯಲ್ಲಿ ಮಹತ್ವದ್ದಾಗಿರುತ್ತದೆ. ಹಿಮ್ಮೇಳ ವಾದಕ ತಾಳಮದ್ದಳೆಯಲ್ಲಿ ವಿಶೇಷ ಜವಾಬ್ದಾರನೂ ಆಗಿರುತ್ತಾನೆ.
        ಹೀಗೆ ಹಿಮ್ಮೇಳದ ಹಾಡು ಮತ್ತು ವಾದನ ಮುಗಿದ ತಕ್ಷಣ ಹಾಡಿನ ಕಥೆಯನ್ನು ಆಧರಿಸಿ ಅದರ ಅರ್ಥವನ್ನು ಹೇಳಲಾಗುತ್ತದೆ. ಪ್ರಸಂಗದ ಕಥೆಯಲ್ಲಿ ಬರುವ ಒಂದೊಂದು ಪಾತ್ರವನ್ನು ಇಟ್ಟುಕೊಂಡು ಒಬ್ಬೊಬ್ಬ ಪಾತ್ರಧಾರಿಗಳು ಮಾತನಾಡುತ್ತಾರೆ. ಇದನ್ನು ತಾಳಮದ್ದಳೆಯ ಭಾಷೆÀಯಲ್ಲಿಅರ್ಥಗಾರಿಕೆ ಎಂದು ಕರೆಯುತ್ತಾರೆ. ಭಾಗವತ ಹಾಡಿದ ಹಾಡಿನ ಗದ್ಯ ರೂಪವಾಗಿ ಅರ್ಥಗಾರಿಕೆ ಇರುತ್ತದೆ. ಅದಕ್ಕಿಂತಲೂ ಒಬ್ಬ ಅರ್ಥಧಾರಿಯ ಪ್ರತಿಭೆಯ ಅನಾವರಣವೂ ಅದಾಗಿರುತ್ತದೆ. ಅಂದರೆ ಒಬ್ಬ ಪ್ರಬುದ್ಧ ಮತ್ತು ಪ್ರಸಿದ್ಧ ಅರ್ಥಧಾರಿ ಕೇವಲ ಕಥೆಯನ್ನು ಮಾತ್ರ ವಿವರಿಸಿ ಹೇಳದೇ ಅದರೊಂದಿಗೆ ಆತನ ಅನುಭವ, ಅಧ್ಯಯನದ ಹಿನ್ನಲೆ ಮತ್ತು ಬೌದ್ಧಿಕ ಸಾಮಥ್ರ್ಯಗಳ ತರ್ಕಬದ್ಧ ಮಂಡನೆ ಇದಾಗಿರುತ್ತದೆ.
      ಯಕ್ಷಗಾನದಲ್ಲಾದರೆ ವೇಷಭೂಷಣ, ಕುಣಿತ ಮತ್ತು ಅಭಿನಯ ಮುಗಿಸಿ ಹಿಮ್ಮೇಳದ ಪದಕ್ಕೆ ಅರ್ಥಗಳನ್ನು ಹೇಳಲಾಗುತ್ತದೆ. ಅದೇ ತಾಳಮದ್ದಳೆಯಲ್ಲಾದರೆ ಇದು ಯಾವುದೇ ಇಲ್ಲದೇ ಅರ್ಥ ಮಾತ್ರ ಇರುತ್ತದೆ. ರೀತಿಯ ಚರ್ಚೆಗಳು ಎರಡು ಪಾತ್ರಗಳ ಮಧ್ಯೆ ಅತ್ಯಂತ ಪ್ರೌಢವಾಗಿ ಮತ್ತು ಕರಾರುವಕ್ಕಾಗಿ ನಡೆದಷ್ಟು ತಾಳಮದ್ದಳೆ ಕಳೆಗಟ್ಟುತ್ತದೆ.  ಅದು ಆಯಾ ಪಾತ್ರಧಾರಿಯ ಜಾಣ್ಮೆ, ನಿರೂಪಣಾ ಸಾಮಥ್ರ್ಯ, ವಿಷಯ ಜ್ಞಾನವನ್ನು ಹೊಂದಿಕೊಂಡಿರುತ್ತದೆ. ಸಾಮಾನ್ಯವಾಗಿ ಮಾತಿನ ಮೂಲಕ ದೃಶ್ಯ ಕಟ್ಟಿಕೊಡುವ ಕೆಲಸ ಅರ್ಥಧಾರಿಗಳಿಂದ ನಡೆಯುತ್ತದೆ
      ಹಾಗೆಂದು ಮಾತಿಗಾಗಿ ಲಿಖಿತ ಪಠ್ಯಗಳಿಲ್ಲದೇ ಆಶುರೂಪದ ಅನಾವರಣ ನಡೆಯುತ್ತದೆ.  ಕೇವಲ ಪ್ರತಿಭೆಯ ಅಭಿವ್ಯಕ್ತಿಯಾಗಿ ಮಾತುಗಾರಿಕೆ ಬೆಳೆದು ನಿಲ್ಲುತ್ತದೆ. ಇಂತಹಾ ಪ್ರತಿಭೆಗಳಲ್ಲಿ ಶೇಣಿ ಗೋಪಾಲಕೃಷ್ಣ ಭಟ್, ಸಾಮಗ ಸಹೋದರರು, ದೇರಾಜೆ ಸೀತಾರಾಮಯ್ಯ, ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್, ಪೆರ್ಲ ಕೃಷ್ಣ ಭಟ್, ಕುಂಬ್ಳೆ ಸುಂದರರಾವ್, ಡಾ. ಎಂ ಪ್ರಭಾಕರ ಜೋಶಿ, ಉಮಾಕಾಂತ ಭಟ್ಟ, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಇವೇ ಮೊದಲಾದವರು ಪ್ರಸಿದ್ಧರು.
     ಕರಾವಳಿಯನ್ನು ಮೀರಿ ಇಂದು ತಾಳಮದ್ದಳೆ ಬೆಳೆಯುತ್ತಿದೆ. ಕರ್ನಾಟಕದ ನಾನಾ ಭಾಗವಲ್ಲದೇ ದೇಶವಿದೇಶಗಳಲ್ಲೂ ಮಾನ್ಯತೆ ಪಡೆಯುತ್ತಿದೆ.  ಒಂದು ಕಥೆ, ಕಥೆಯನ್ನು ಅಭಿವ್ಯಕ್ತಿಸಲು ಇರುವ ಮಾತು, ಮಾತನ್ನು ಕೇಳುವಂತೆ ಮಾಡುವ ತರ್ಕ, ಜಾಣ್ಮೆ, ರಸಿಕತೆ, ಪ್ರೌಢಿಮೆ, ಇವೆಲ್ಲವನ್ನೂ ಕಲಾತ್ಮಕವಾಗಿ ಪೋಣಿಸುವ ಸಂಗೀತ ಇವೇ ಇದರ ಶ್ರೇಷ್ಟತೆ. ಇದರಿಂದಲೇ ಇದರ ರುಚಿ ಒಮ್ಮೆ ಹತ್ತಿಸಿಕೊಂಡವರು ಮತ್ತೆ ಬಿಟ್ಟಿರಲಾರರು. ಆದ್ದರಿಂದಲೇ ಇಂದು ಇದರ ಅಭಿಮಾನಿ ವ್ಯಾಪ್ತಿಯೂ ಹೆÀಚ್ಚುತ್ತಿರುವುದು. ನಮ್ಮ ನಾಗರಿಕ ಸಮಾಜದ ಮೇಲೆ ತಾಳಮದ್ದಳೆ ಬಹಳ ದೊಡ್ಡ ಕೊಡುಗೆಗಳನ್ನು ನೀಡುತ್ತಿದೆ. ಇದಲ್ಲದೇ ಶೈಕ್ಷಣಿಕ ಕ್ಷೇತ್ರಕ್ಕೂ ಇದನ್ನು  ಬಳಸುವ ಸಾಧ್ಯತೆಗಳು ಹೆಚ್ಚಾಗಿವೆ. ಮಕ್ಕಳ ಕಲಿಕೆಗೆ ಪೂರಕವಾಗಿ ಬಳಸುವ ಅನೇಕ ಅಂಶಗಳು ಇದರಲ್ಲಿವೆ. ನಿಟ್ಟಿನಲ್ಲಿ ಕಲಾವಿದರ ಜೊತೆಗೆ ಸಂಘಟಕರ ಮತ್ತು ಪ್ರಜ್ಞಾವಂತ ಪ್ರೇಕ್ಷಕರ ಪಾತ್ರ ಹಿರಿದಾಗಿದೆ.
          ಒಟ್ಟಿನಲ್ಲಿ ಭಾರತೀಯ ಕಲೆಗಳಲ್ಲಿ ಭೂತ-ವರ್ತಮಾನಗಳೆರಡನ್ನೂ ಭವಿಷ್ಯತ್ತಿಗೆ ಕಟ್ಟಿಕೊಡುವ ಪರಿಶುದ್ಧ ಕಲೆ ತಾಳಮದ್ದಳೆ. ತಾಳಮದ್ದಳೆಯಲ್ಲಿ ಚರ್ಚಿಸಲ್ಪಡುವ ಅನೇಕ ಧರ್ಮಸೂಕ್ಷ್ಮಗಳಿಂದ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆಯಾಗಿಲ್ಲ. ಬದಲಾಗಿ ನಂಬಿಕೆಯ ಚೌಕಟ್ಟನ್ನೂ ಮೀರಿದ ಪೌರಾಣಿಕ ನಿಷ್ಕರ್ಷೆ ಮತ್ತು ತಿಳುವಳಿಕೆ ಹೊರಹೊಮ್ಮುತ್ತಾ ಬರುತ್ತಿದೆ. ಜನಪದ ಮತ್ತು ಶಾಸ್ತ್ರೀಯ ಎರಡೂ ಚೌಕಟ್ಟುಗಳು ತಾಳಮದ್ದಳೆಗಿದೆ. ಹಾಗೆ ರಂಜನೆ ಮತ್ತು ಬುದ್ಧಿ ಇವೆರಡನ್ನೂ ನೀಡುವ  ಸಾಮಥ್ರ್ಯವೂ ಇದೆ. ಆದ್ದರಿಂದ ತಾಳಮದ್ದಳೆ ಇನ್ನೂ ಹೆಚ್ಚು ಸಂಮೃದ್ಧಗೊಳ್ಳಬೇಕು. ಮೂಲಕ ಅರಿವಿನ ವ್ಯಾಪ್ತಿ ವಿಸ್ತøತಗೊಳ್ಳಬೇಕು. ಯಾವುದಕ್ಕೆ ಸತ್ವವಿರುತ್ತದೋ ಅದಕ್ಕೆ ಅಳಿವಿಲ,್ಲ ತಾಳಮದ್ದಳೆಯ ವಿಚಾರವಾಗಿ ಮಾತು ಸಾರ್ವಕಾಲಿಕ ಸತ್ಯ.
                                                                                                                           ಡಾ.ಸುಂದರ ಕೇನಾಜೆ
                                                                                                      

Comments