ಶಿಕ್ಷಣ ಮತ್ತು ವೈದ್ಯ ವ್ಯವಸ್ಥೆ ಮುಂದಿನ ಅನಿವಾರ್ಯ
ಭವಿಷ್ಯದಲ್ಲಿ ಈ ಜಗತ್ತಿಗೆ ಪ್ರಜ್ಞಾವಂತರನ್ನು ರೂಪಿಸುವ ಶಿಕ್ಷಣ ಮತ್ತು ಮಾನವೀಯತೆಯನ್ನು ಪೋಷಿಸುವ ವೈದ್ಯ ವ್ಯವಸ್ಥೆ ಇವೆರಡು ಅತೀ ಅನಿವಾರ್ಯ ಎನ್ನುವುದನ್ನು ಈ ಕೋವಿಡ್ ಸಾರಿ ಹೇಳುತ್ತಿದೆಯೋ ಎನ್ನುವ ಸಂಶಯ ಮೂಡುತ್ತಿದೆ. ಇದನ್ನು ಒಪ್ಪಿಕೊಳ್ಳುವವರೆಗೂ ಇದು ಹಠ ಬಿಡುವ ಲಕ್ಷಣ ಕಾಣುತ್ತಿಲ್ಲ. ಆದ್ದರಿಂದ ಮೊದಲು ಇದನ್ನು ಯಾರು ಒಪ್ಪಿಕೊಳ್ಳಬೇಕು ಎನ್ನುವುದೇ ಮುಖ್ಯ ಪ್ರಶ್ನೆ. ನನಗನಿಸುವುದು ನಮ್ಮ ನಾಯಕರುಗಳೇ ಇದನ್ನು ಮೊದಲು ಒಪ್ಪಿಕೊಳ್ಳಬೇಕು. ಈ ನಾಯಕರುಗಳು ಅಂದರೆ ಕೇವಲ ಆಳುವವರು ಅಥವಾ ರಾಜಕಾರಣಿಗಳು ಎಂದು ಮಾತ್ರ ಅರ್ಥವಲ್ಲ. ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಗೂ ಒಬ್ಬ ನಾಯಕನಿದ್ದೇ ಇರುತ್ತಾನೆ. ಒಂದೋ ರಾಜಕಾರಣಿ ಇಲ್ಲಾ ಸಿನಿಮಾ, ಧಾರ್ಮಿಕ, ಜಾತಿ, ಕುಟುಂಬ ಇವುಗಳ ಮುಖ್ಯಸ್ಥರು ಅಥವಾ ವಿಚಾರವಂತರು, ಅಧಿಕಾರಿ, ಇತ್ತೀಚೆಗೆ ಮಾಧ್ಯಮಗಳು, ಯಾರೂ ಸಿಗದಿದ್ದರೆ ಜ್ಯೋತಿಷ್ಯರು ಹಲವರಿಗೆ ನಾಯಕತ್ವವನ್ನು ಒದಗಿಸುತ್ತಿದ್ದಾರೆ. ಹಾಗಾಗಿ ಇಂತಹಾ ನಾಯಕರುಗಳು ಪ್ರಜ್ಞಾವಂತರನ್ನು ರೂಪಿಸುವ ಶಿಕ್ಷಣ ಮತ್ತು ಮಾನವೀಯತೆಯನ್ನು ಮೆರೆಯುವ ವೈದ್ಯಕೀಯ ಸೌಲಭ್ಯಕ್ಕೆ ಒತ್ತು ನೀಡಬೇಕಾಗುತ್ತದೆ. ಇದನ್ನೇ ಅಭಿವೃದ್ಧಿಯ ಪ್ರಧಾನ ಆಧ್ಯತೆ ಎಂದು ಪರಿಗಣಿಸಬೇಕಾಗಿದೆ. ಆಗ ಜನಸಾಮಾನ್ಯರು ಇದನ್ನು ಹಿಂಬಾಲಿಸಲು ಸಾಧ್ಯವಿದೆ. ಅದೆಲ್ಲದರ ಮೊದಲು ಈ ಸುಳಿಯಿಂದ ತಪ್ಪಿಸಿಕೊಳ್ಳುವಂತೆಯೂ ಇದೇ ನಾಯಕರು ತಿಳುವಳಿಕೆಯ ಸಲಹೆಗಳನ್ನೂ ನೀಡಬೇಕಾಗಿದೆ. ಈ ಸಲಹೆಗಳೇ ಸದ್ಯಕ್ಕೆ ಔಷಧಿಯಾಗಬಲ್ಲುದು.
ಪ್ರಾಯಶಃ ಇನ್ನೊಂದೆರಡು ತಿಂಗಳಲ್ಲಿ ಕೋವಿಡ್ ಹೊರಟು ಹೋಗಬಹುದು. ಆದರೆ ಅದು ಮಾಡುವ ಪರಿಣಾಮ ಕಳೆದರಡು ವರ್ಷಗಳಲ್ಲಿ ನಮ್ಮ ಸುತ್ತಮುತ್ತ ಬಂದ ಪ್ರವಾಹದಷ್ಟೇ ಭೀಕರವಾಗಿರುವ ಸಾಧ್ಯತೆ ಇದೆ. ಈ ಪ್ರವಾಹದ ನೇರ ಪರಿಣಾಮ ಅರಿತವರು ಒಂದಷ್ಟು ಜನ ಮತ್ತು ಅಲ್ಲಿ ಇಲ್ಲಿ ಮಾತ್ರ. ಆದರೆ ಕೋವಿಡ್ ನ ಪರಿಣಾಮ ಒಂದಲ್ಲಾ ಒಂದು ರೀತಿಯಿಂದ ಬಹುತೇಕ ಎಲ್ಲರಿಗೂ ತಟ್ಟಿದ ಮತ್ತು ಇನ್ನೂ ತಟ್ಟಲಿರುವ ಸಾಧ್ಯತೆ ಇದೆ. ಹಾಗಾಗಿ ಭವಿಷ್ಯ ಹಿಂದಿನಂತೆ ಮತ್ತೆ ಮುಂದುವರಿಯಬೇಕೇ ಅಥವಾ ಬದಲಾಗಬೇಕೇ ಎನ್ನುವುದನ್ನು ಮೇಲೆ ಗುರುತಿಸಿದ ನಾಯಕರುಗಳು ತಮ್ಮನ್ನು ನಂಬಿದ ಜನರಿಗಾಗಿ, ನಿಸ್ವಾರ್ಥವಾಗಿ ತೀರ್ಮಾನಿಸಬೇಕಾಗಿದೆ. ಇದರಲ್ಲಿ ಪೂರಕವಾದ ಶಿಕ್ಷಣ ಮತ್ತು ವೈದ್ಯಕೀಯ ವ್ಯವಸ್ಥೆ ಬೇಕೇಬೇಕು ಎನ್ನುವ ತೀರ್ಮಾನವೇ ಮೊದಲಾಗಬೇಕು, ಅದೇ ಬದುಕಿಗೆ ಧೈರ್ಯ ಮತ್ತು ಭವಿಷ್ಯ ಎನ್ನುವ ಅನಿಸಿಕೆ ನನ್ನದು.
ಅದ್ದರಿಂದ ಈ ಕೋವಿಡ್ ಘಟನೆ # ಶಿಕ್ಷಣವನ್ನು ಕಡೆಗಣಿಸಿ, ವೈದ್ಯಕೀಯ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿ ನಾಡು ಕಟ್ಟುತ್ತೇವೆ ಎನ್ನುವುದು ಸುಳ್ಳು# ಎನ್ನುವ ಸತ್ಯವೊಂದನ್ನು ಶಿಕ್ಷಣ ಪಡೆದ ಮತ್ತು ಮಾನವೀಯ ವ್ಯವಸ್ಥೆಯನ್ನು ಬೆಂಬಲಿಸುವವರಿಗೆಲ್ಲ ಮತ್ತೆ ತಿಳಿಯುವಂತೆ ಮಾಡಿದೆ.
Comments
Post a Comment