ಸೂಜಿದಾರ
ಬಿಡುಗಡೆಯ ದಿನವೇ ಸೂಜಿದಾರವನ್ನು ನೋಡಿದ್ದೆ. ಒಂದು ಹೊಸ ಪ್ರಯೋಗ ಎಂದೆನಿಸಿತು. ಆದರೆ ಹರಿದ ಬಟ್ಟೆಯ ಹೊಲಿಗೆ ಇನ್ನೂ ಸಮರ್ಪಕವಾಗಬೇಕಿತ್ತು, ನಾಜೂಕಾಗಬೇಕಿತ್ತು ಅಂತಲೂ ಅನಿಸಿತು. ಈ ರೀತಿ ಹೇಳಿ ಚಿತ್ರ ತಂಡದ ಅದರಲ್ಲೂ ರಂಗಭೂಮಿ ಗೆಳೆಯರ ಕಾಳಜಿಗೆ, ಒಂದಿಬ್ಬರಾದರೂ ನೋಡದೇ ಆಗುವ ನಷ್ಟವನ್ನು ತಪ್ಪಿಸಿ ಬಿಡೋಣ ಎನ್ನುವ ಕಾರಣಕ್ಕೆ ಚಿತ್ರದ ಬಗ್ಗೆ ಏನೂ ಹೇಳಿರಲಿಲ್ಲ. ನಿರ್ದೇಶಕ ಕ್ಲೈಮೆಕ್ಸ್ ಬಗ್ಗೆ ಇನ್ನೂ ಒಂದಷ್ಟು ತಲೆಕೆಡಿಸುತ್ತಿದ್ದರೆ ಅನೇಕ ವರ್ಷದ ಕರಾವಳಿಗರ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿತ್ತೋ ಏನೋ. ಕಥೆಗೆ ನವ್ಯತೆ ಸರಿ, ಆದರೆ ಚಿತ್ರಕಥೆ ನನ್ನಂತಹಾ ಸಾಮಾನ್ಯನಿಗೂ ತಕ್ಷಣಕ್ಕೆ ಅರ್ಥವಾಗುವಂತೆ ಇರಬೇಕು. ಮಧ್ಯಂತರದ ವರೆಗಿನ ಕುತೂಹಲ,ತಂತ್ರಗಾರಿಕೆಯ ಬಿಗಿತನ ನಂತರದಲ್ಲೂ ಉಳಿಯಬೇಕಿತ್ತು. ಎಲ್ಲಕ್ಕಿಂತಲೂ ಮುಖ್ಯವಾಗಿ ಉತ್ತರ ಕೊಡುವಲ್ಲಿ ಚಿತ್ರ ಎಡವಿದೆ, ಉತ್ತರ ವಾಚ್ಯವಾದರೂ ಸರಿ, ಸ್ಫಷ್ಟ ಮತ್ತು ನೇರವಾಗಿ ಇರಬೇಕಾಗಿತ್ತು. ಇದು ದೇಶದ ಅದರಲ್ಲೂ ಕರಾವಳಿಯ ಇಂದಿನ ಸ್ಥಿತಿಗೆ ಖಂಡಿತಾ ಅನಿವಾರ್ಯ. ಆದರೆ ಮೌನೇಶರ ಆಂತರ್ಯ ಅದೇ ಎನ್ನುವುದು ಸ್ಪಷ್ಟ. ಪ್ರಾಯಶಃ ಚಿತ್ರ ತಂಡ ಈ ಬಗ್ಗೆ ಇನ್ನೂ ಒಂದಷ್ಟು ಯೋಚಿಸುತ್ತಿದ್ದರೆ ಉತ್ತಮವಿತ್ತು ಮತ್ತು ಒಂದು ಕ್ರಾಂತಿಕಾರಕ ಹೆಜ್ಜೆಯೂ ಆಗುತ್ತಿತ್ತು.
ಹಾಗೆಂದು ಚಿತ್ರ ಕಳಪೆ, ನೊಡಲಸಾಧ್ಯ ಎನ್ನುವ ಅಭಿಪ್ರಾಯವಲ್ಲ. ಹೊಸ ಯೋಚನಾಕ್ರಮಕ್ಕೆ ಚಿತ್ರ ನಾಂದಿ ಹಾಡಿದೆ. ಇದರ ವಿಸ್ತೃತರೂಪ, ಅಥವಾ ಒಂದಷ್ಟು ಪರಿಷ್ಕೃತ ರೂಪ ಇನ್ನು ಅಲ್ಲಲ್ಲಿ ಸಿನಿಮಾ ಮೂಲಕ ಕಾಣಬಹುದಾದಷ್ಟು ಪ್ರಭಾವಶಾಲೀ. ಅದರೆ ನಟಿ ಹರಿಪ್ರಿಯ ಈಗ ಹೇಳುವ ಆಶಯ ಜನಪ್ರಿಯ ಮಟ್ಟದ್ದು. ಯಾಕೆಂದರೆ ಹಲವು ಅವಕಾಶಗಳನ್ನೂ ಸವಾಲುಗಳನ್ನೂ ಈ ಸಿನಿಮಾದಲ್ಲಿ ನಟಿ ಚೆನ್ನಾಗಿಯೇ ನಿಭಾಯಿಸಿದ್ದಾರೆ. ಹಾಗೆ ನೋಡಿದರೆ ಮೌನೇಶ್ ನಟಿಯ ಪ್ರತಿಭೆಯನ್ನು ಅಭಿವ್ಯಕ್ತಿಸುದಕ್ಕೆ ಒಳ್ಳೆಯ ವೇದಿಕೆಯನ್ನೇ ಕೊಟ್ಟಿದ್ದಾರೆ. ಇದು ಮುಂದೆ ಅವರಿಗೆ ಪ್ರಶಸ್ತಿಯನ್ನು ತಂದುಕೊಟ್ಟರೂ ಆಶ್ಚರ್ಯ ಪಡಬೇಕಾಗಿಲ್ಲ. ಅಷ್ಟರ ಮಟ್ಟಿಗಿನ ನಟನೆ ಹರಿಪ್ರಿಯರದ್ದು. ಉಳಿದಂತೆ ಎಲ್ಲಾ ನಟರ ನಟನೆಯೂ ಮೆಚ್ಚುವಂತದ್ದೇ. ಗೆಳೆಯ ಇಂದ್ರಕುಮಾರರ ಮೂಲ ಕಥೆ ಹೊಸದಿಕ್ಕಿನಲ್ಲಿದೆ. ಚಿತ್ರಕ್ಕೆ ಅಳವಡಿಸುವಾಗ ಇನ್ನೂ ಒಂದಿಷ್ಟು ಗ್ರೌಂಡ್ ವರ್ಕ್ ನಡೆಯಬೇಕಿತ್ತು ಅಷ್ಟೇ.
ಮೌನೇಶರ ಶ್ರಮಕ್ಕೆ ಖಂಡಿತಾ ಬೆಲೆ ಇದೆ. ಚಿತ್ರವನ್ನು ಒಂದು ಬಾರಿ ನೋಡಿದರಂತೂ ಅದು ಆಯ್ಕೆ ಸಿನಿಮಾ ನೋಡಿದಂತೆ. ಎಲ್ಲೇ ಇದ್ದರೂ ನೋಡಿ, ರಂಗಭೂಮಿ ತಂಡದ ಹೊಸ ಸಾಧ್ಯತೆಯ ಈ ಸೂಕ್ಷ್ಮ ಯೋಚನೆಗೆ ಕೈಜೋಡಿಸಿ ಎಂದು ಆಶಿಸುತ್ತೇನೆ.
16.05.2019 ಡಾ.ಸುಂದರ ಕೇನಾಜೆ
Comments
Post a Comment