ಕನ್ನಡ ನಾಟಕ : ವಸ್ತು – ವಿನ್ಯಾಸ
ಕನ್ನಡ ನಾಟಕಗಳ ಪ್ರಾದೇಶಿಕ ನೆಲೆ
ಪೀಠಿಕೆ:
ಒಂದು ಭಾಷಿಕ ನೆಲೆಯಲ್ಲಿ, ‘ಕನ್ನಡ’
ಎನ್ನುವ ಭಾಷೆಗೆ ಬಹಳ ವಿಸ್ತøತವಾದ ವ್ಯಾಪ್ತಿ ಮತ್ತು
ಇತಿಹಾಸವಿದೆ. ಗೋದಾವರಿಯಿಂದ ಚಂದ್ರಗಿರಿಯವರೆಗಿನ ಈ ವ್ಯಾಪ್ತಿಯಲ್ಲಿ ಹಬ್ಬಿ
ನಿಂತಿರುವ ಕನ್ನಡ ನಾಡು ಮತ್ತು
ಕವಿರಾಜಮಾರ್ಗದಿಂದ ಗ್ರಂಥಸ್ಥಗೊಂಡ ಈ ಭಾಷೆಯಲ್ಲಿ ಅದೆಷ್ಟೋ
ಬರಹಗಳು ಮೂಡಿಬಂದಿವೆ. ಸಮಗ್ರ ಕನ್ನಡ ನಾಡಿನ
ನೆಲೆಯಲ್ಲಿ ಈ ಬರಹಗಳನ್ನು ಕನ್ನಡದ
ಕೃತಿ ಎಂದು ಕರೆದರೆ, ಒಂದು
ಪ್ರಾದೇಶಿಕ ನೆಲೆಯಲ್ಲಿ ಇವುಗಳು ಒಂದು ಪ್ರದೇಶದ
ಕೃತಿಗಳೂ ಆಗಿರುತ್ತವೆ. ಹಾಗೆ ನೋಡಿದರೆ, ಕನ್ನಡ
ಭಾಷೆಯ ಸಮಗ್ರ ವ್ಯಾಪ್ತಿಗೆ ‘ಪ್ರಾದೇಶಿಕತೆ’
ಎನ್ನುವ ಸೀಮಿತ ಅರ್ಥವನ್ನು ಹಾಕಿಕೊಳ್ಳುವುದು
ಕಷ್ಟ. ಸಾಧ್ಯವಿದ್ದಲ್ಲೆಲ್ಲಾ ಕನ್ನಡವನ್ನು ಆ ಪ್ರದೇಶದ ಹೆಸರಿನೊಂದಿಗೆ
ಅಥವ ಜನಾಂಗದ ಹೆಸರಿನೊಂದಿಗೆ ಕರೆಯುವುದು
ಈಗಾಗಲೇ ರೂಢಿಯಾಗಿದೆ. ಉದಾಹರಣೆಗೆ ಕರಾವಳಿ ಕನ್ನಡ, ಧಾರವಾಡ
ಕನ್ನಡ, ಬೆಂಗಳೂರು ಕನ್ನಡ, ಬಿಜಾಪುರ ಕನ್ನಡ
ಅಥವಾ ಹವ್ಯಕ ಕನ್ನಡ, ಅರೆಗನ್ನಡ
ಇತ್ಯಾದಿ. ಹಾಗೆಂದು ಕಾಸರಗೋಡು ಕನ್ನಡ
ಎನ್ನುವುದು ಹೆಚ್ಚು ಚಾಲ್ತಿಯಲ್ಲಿಲ್ಲದಿದ್ದರೂ ಅದು ಕರಾವಳಿಯ
ಕನ್ನಡವೇ ಆಗಿದೆ. ಸಮಗ್ರ ಕರ್ನಾಟಕದ
ಗ್ರಾಂಥಿಕ ಕನ್ನಡವೂ ಹೌದು. ಆದ್ದರಿಂದ
ಕಾಸರಗೋಡಿನಲ್ಲಿ ರಚನೆಯಾದ ಕನ್ನಡ ಸಾಹಿತ್ಯ
ಕೃತಿಗಳು ಸಮಗ್ರ ಕರ್ನಾಟಕವೆಂಬ ಪ್ರಾದೇಶಿಕ
ವ್ಯಾಪ್ತಿಯನ್ನು ಪಡೆದಿರುತ್ತವೆ. ಪ್ರಸ್ತುತ ಈ ಪ್ರಬಂಧದಲ್ಲಿ ಕಾಸರಗೋಡು
ಎನ್ನುವ ಪ್ರಾದೇಶಿಕ ವ್ಯಾಪ್ತಿಯ ಕನ್ನಡ ನಾಟಕಗಳ ರಚನೆ,
ಪ್ರದರ್ಶನ, ಅದರ ವಸ್ತು-ವಿನ್ಯಾಸ,
ಮತ್ತದರ ರಂಗಚಟುವಟಿಕೆಗಳನ್ನು ಸೀಮಿತ ಚೌಕಟ್ಟಿನೊಳಗೆ ದಾಖಲಿಸಿದ್ದೇನೆ.
ನಾಟಕ
ಕ್ಷೇತ್ರಕ್ಕೆ, ಸಾಹಿತ್ಯ ಚಟುವಟಿಕೆ ಮತ್ತು
ರಂಗಭೂಮಿ ಚಟುವಟಿಕೆ ಎನ್ನುವ ಎರಡು ಪ್ರತ್ಯೇಕ
ಮುಖಗಳಿವೆ. ಅಂದರೆ ಒಂದು ಸಾಹಿತ್ಯ
ಕೃತಿ, ರಂಗ ಕೃತಿಯ ರೂಪ
ಪಡೆದಾಗ ‘ಪ್ರಾದೇಶಿಕತೆ’
ಎನ್ನುವುದು ಹೆಚ್ಚು ಜಾಗೃತಗೊಳ್ಳುತ್ತದೆ. ಒಂದೇ
ವಸ್ತುವನ್ನು ಬೇರೆಬೇರೆ ಪ್ರದೇಶದ ನಾಟಕಕಾರರು ಮತ್ತು
ನಿರ್ದೇಶಕರು ನೋಡುವ ದೃಷ್ಟಿಕೋನ ಬೇರೆಬೇರೆಯೇ,
ಹಾಗಾಗಿ ಅದರ ಅಭಿವ್ಯಕ್ತಿಯೂ ಬೇರೆಯೇ.
ಆದ್ದರಿಂದ ಪ್ರಾದೇಶಿಕ ನೆಲೆಗಳನ್ನು ನಾಟಕದ ವಸ್ತು ವಿನ್ಯಾಸದಲ್ಲೇ
ಹೆಚ್ಚು ಕಾಣಬಹುದು.
ಶಿಷ್ಟ
ಸಂದರ್ಭದಲ್ಲಿ ಒಂದು ವಸ್ತುವನ್ನು ನಾಟಕವಾಗಿ
ರಚಿಸುವಾಗ, ಮುಖ್ಯವಾಗಿ ಕಾಲಘಟ್ಟಗಳನ್ನು ಮತ್ತು ಆ ಕಾಲದ
ಮನೋಧರ್ಮವನ್ನು ಗುರುತಿಸಿಕೊಳ್ಳಬೇಕು. ಅಂದರೆ ಸ್ವಾತಂತ್ರ್ಯಪೂರ್ವ ಕಾಲ
ಮತ್ತು ಸುಧಾರಣಾವಾದಿ ಮನೋಧರ್ಮ. ಸ್ವಾತಂತ್ರ್ಯಾ ನಂತರದÀ ಕಾಲ ಮತ್ತು
ಆಧುನಿಕ ಅಥವಾ ಪಾಶ್ಚಿಮಾತ್ಯ ಮನೋಧರ್ಮ
ಹೀಗೆ ವಿಭಾಗಿಸಬಹುದು. ಸಾಹಿತ್ಯದ ಭಾಷೆಯಲ್ಲಿ ನವೋದಯ, ನವ್ಯ ಮತ್ತು
ಆ ನಂತರದ ಸಾಹಿತ್ಯ
ಚಳವಳಿಯ ಕಾಲದಲ್ಲಿ ರಚನೆಗೊಂಡ ನಾಟಕಗಳೆಂದೂ ಪ್ರತ್ಯೇಕಿಸÀಬಹುದು. ಕಾಸರಗೋಡಿನ ಕನ್ನಡ
ನಾಟಕ ಸಾಹಿತ್ಯದಲ್ಲೂ ಈ ವಿಭಾಗಗಳಿವೆ. ಆದರೆ,
ಸ್ವಾತಂತ್ರ್ಯಾನಂತರ, ಅದರಲ್ಲೂ ಭಾಷಾವಾರು ಪ್ರಾಂತ್ಯ
ರಚನೆಯ ನಂತರ ಭಾರತದಲ್ಲಿ ‘ಪ್ರಾದೇಶಿಕ’
ಎನ್ನುವ ಪರಿಕಲ್ಪನೆ ಹೆಚ್ಚು ಜಾಗೃತಗೊಂಡದ್ದನ್ನು ಗಮನಿಸಬೇಕಾಗಿದೆ.
ಸ್ವಾತಂತ್ರ್ಯಾ
ಪೂರ್ವದ ನಾಟಕಗಳ ವಸ್ತು ಮತ್ತು
ವಿನ್ಯಾಸವನ್ನು ಕರ್ನಾಟಕ ಅಥವಾ ಭಾರತೀಯ
ಸಾಹಿತ್ಯದ ಸಂದರ್ಭವನ್ನು ಇಟ್ಟುಕೊಂಡು ನೋಡಿದರೆ, ಸ್ವಾತಂತ್ರ್ಯಾನಂತರದ ನಾಟಕಗಳನ್ನು ಪಾಶ್ಚಿಮಾತ್ಯ ಅಥವಾ ಪ್ರಗತಿಪರ ಸಂದರ್ಭವನ್ನು
ಇಟ್ಟುಕೊಂಡು ನೋಡಬೇಕಾಗುತ್ತದೆ. ಇಲ್ಲೂ ಜನಪ್ರಿಯ ಮಾದರಿಯ
ಸಿದ್ಧ ವಸ್ತುಗಳ ಪ್ರತಿಪಾದನೆ ಮತ್ತು
ಕನ್ನಡದ ವೃತ್ತಿ(ಕಂಪೆನಿ) ನಾಟಕಗಳ
ಪ್ರಭಾವವೂ ಇಲ್ಲದಿಲ್ಲ. ಅದರೊಂದಿಗೆ ರಚನೆ, ನಿರ್ದೇಶನ ಮತ್ತು
ಪ್ರದರ್ಶನಗಳಲ್ಲಿ ಕಾಸರಗೋಡಿನ ಮಣ್ಣಿನ ಗುಣಗಳೂ ಇವೆ.
ಸ್ವಾತಂತ್ರ್ಯ
ಪೂರ್ವ ಮತ್ತು ನಂತರದ ಸುಧಾರಣಾವಾದಿ
ನಾಟಕಗಳು: ಸ್ವಾತಂತ್ರ್ಯ ಪೂರ್ವದ ನಾಟಕಗಳಲ್ಲಿ ನಮಗೆ
ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರೇ ಅಗ್ರರು. ಅವರು
ರಚಿಸಿದ ಹೆಬ್ಬೆರಳು, ಚಿತ್ರಬಾನು, ತಾಯಿ ಮತ್ತು ಜಪಾನಿನ
ನೋ ನಾಟಕಗಳ ಕನ್ನಡೀಕರಣ, ರಂಗಕ್ಕಿಂತಲೂ
ಸಾಹಿತ್ಯ ಕೃತಿಯಾಗಿ ಗಟ್ಟಿ ತಳಪಾಯವನ್ನೇ ಹಾಕಿಕೊಟ್ಟಿವೆ.
ಕನ್ನಡದ ಮೊದಲ ನಾಟಕ(1887- ಕರ್ಕಿ
ವೆಂಕಟರಮಣ ಶಾಸ್ತ್ರಿಯವರ ‘ಇಗ್ಗಪ್ಪ ಹೆಗ್ಗಡೆಯ ವಿವಾಹ
ಪ್ರಹಸನ’)ರಚನೆಗೊಂಡ ಐದಾರು ವರ್ಷಗಳ (1895) ನಂತರದ
ಕಾಲಘಟ್ಟದಲ್ಲೇ ಕಾಸರಗೋಡಿನಲ್ಲಿ ಪೈಯವರು ನಾಟಕ ಬರೆದಿದ್ದಾರೆ
ಎಂಬ ಉಲ್ಲೇಖ ಇದೆ. ಆ
ನಂತರ ಶೇಕ್ಸ್ಪಿಯರ್ನ
‘ದ್ವಾದಶ ರಾತ್ರಿ’ಯ ಮೊದಲ ಅಂಕದ
ಅನುವಾದ ಮಾಡಲಾಗಿದೆ
ಎಂದು ಹೇಳಿಕೊಂಡಿದ್ದಾರೆ. ಇದೇ ಕಾಲದಲ್ಲಿ ಕೂಡ್ಲು
ಸುಬ್ರಾಯ ಶ್ಯಾನುಭೋಗರು ‘ಸೌಭಾಗ್ಯ ಸುಂದರಿ’ ಎನ್ನುವ
ನಾಟಕವನ್ನು ರಚಿಸಿದ್ದಾರೆ, ಇದು ಕಾಸರಗೋಡಿನ ಮೊದಲ
ನಾಟಕವೆಂದೂ ಹೇಳಲಾಗಿದೆ. ಕವಿ ಕೈಯ್ಯಾರ ಕಿಂಞ್ಞಣ್ಣ
ರೈಯವರ ‘ವಿರಾಗಿಣಿ’
ಇದೇ ಕಾಲಘಟ್ಟದಲ್ಲಿ ಪ್ರಕಟಗೊಂಡ ಇನ್ನೊಂದು ನಾಟಕ.
ವಸ್ತು
ವಿನ್ಯಾಸದ ದೃಷ್ಟಿಯಿಂದ ಈ ಮೂವರ ನಾಟಕಗಳನ್ನು
ಗಮನಿಸಿದಾಗ, ಆ ಕಾಲದ ಕನ್ನಡದ
ಇತರ ಜನಪ್ರಿಯ ನಾಟಕಕಾರರ ಪರಿಕಲ್ಪನೆಯಲ್ಲೇ
ಇವುಗಳೂ ರಚನೆಗೊಂಡಿವೆ. ಪೈಯವರ ‘ಹೆಬ್ಬೆರಳು’ ಒಂದು
ಪೌರಾಣಿಕ ನಾಟಕ. ಮಹಾಭಾರತದ ಏಕಲವ್ಯನ
ಕಥೆ. ಏಕಲವ್ಯನ ದುರಂತ, ಶ್ರೇಣೀಕೃತ
ಸಮಾಜದ ದುರಂತವೂ ಹೌದು ಎಂದು
ಪ್ರತಿಪಾದಿಸುವ ಸುಧಾರಣಾವಾದಿ ನೆಲೆಯ ಮನೋಧರ್ಮ. ವ್ಯವಸ್ಥೆಯನ್ನು
ತಣ್ಣಗೆ ಪ್ರಶ್ನಿಸುವ, ಆದರೆ ಉತ್ತರವನ್ನು ಗಂಭೀರವಾಗಿ
ಪರಿಗಣಿಸದೇ ಇರುವ ನಡೆ ಇಲ್ಲಿಯದು.
ಈ ನಿಲುವು ನವೋದಯ
ಸಾಹಿತ್ಯದ ನಿಲುವು ಕೂಡ. ಆದರೆ
ಇದಕ್ಕಿಂತ ಸ್ವಲ್ಪ ಭಿನ್ನವಾದ ನೆಲೆಯನ್ನು
ಚಿತ್ರಬಾನು ಅಥವ 1942 ಮತ್ತು ಕೈಯಾರರ ವಿರಾಗಿಣಿಯಲ್ಲಿ
ಕಾಣುತ್ತೇವೆ. ಇದೆರಡೂ ಭಾರತದ ಸ್ವಾತಂತ್ರ್ಯ
ಚಳವಳಿಯನ್ನು ಉದ್ದೀಪಿಸುವ ಚಾರಿತ್ರಿಕ ವಸ್ತು. ಕ್ವಿಟ್ ಇಂಡಿಯಾ
ಚಳವಳಿಗಾರನೊಬ್ಬನನ್ನು ಪೊಲೀಸರು ಹುಡುಕಿ ಗುಂಡಿಕ್ಕಿ
ಕೊಲ್ಲವ, ಆ ಮೂಲಕ ಆ
ಕಾಲದಲ್ಲಿ ನಡೆಯುತ್ತಿದ್ದ ಬ್ರಿಟೀಷ್ ದೌರ್ಜನ್ಯವನ್ನು ಪ್ರಚುರಪಡಿಸುವ ಉದ್ದೇಶವನ್ನು ಕಾಣುತ್ತೇವೆ. ಇದು ಇನ್ನೂ ಸ್ವಲ್ಪ
ಭಿನ್ನವಾಗಿ ವಿರಾಗಿಣಿಯಲ್ಲಿದೆ. ರಜಪೂತ ಮಹಿಳೆಯರು ಯುದ್ಧ
ಗೆಲ್ಲಲು ಸ್ಫೂರ್ತಿಯಾಗುವ ಸಂದರ್ಭ, ಆ ಮೂಲಕ
ಭಾರತೀಯ ಸ್ತ್ರೀ ಅದರಲ್ಲೂ ಕರಾವಳಿ
ಭಾಗದ ಸ್ತ್ರೀಯರೂ ಸ್ವಾತಂತ್ರ್ಯ ಹೋರಾಟಕ್ಕೆ ಕೈ ಜೋಡಿಸಬೇಕೆಂದು ಬಯಸುತ್ತಾರೆ.
ಗೋವಿಂದ
ಪೈಯವರ ‘ತಾಯಿ’
ಮತ್ತು ಕೂಡ್ಲು ಶ್ಯಾನುಭೋಗರ ‘ಸೌಭಾಗ್ಯ
ಸುಂದರಿ’
ಸಾಮಾಜಿಕ ನಾಟಕಗಳು. ಬಂಧು ಸಂಬಂಧದ ಸುಧಾರಣೆಗಳೇ
ಇಲ್ಲಿಯ ಆಶಯಗಳು. ಅತ್ಯಂತ ಪುಟ್ಟ
ಆದರೆ ದೀರ್ಘ ಕಾಲದ ಪ್ರದರ್ಶನಾವಧಿಯನ್ನು
ಬಯಸುವ ಜಪಾನಿನ ‘ನೋ’ ನಾಟಕಗಳನ್ನು
ಗೋವಿಂದ ಪೈಯವರು ಕನ್ನಡಕ್ಕೆ ತಂದಿದ್ದಾರೆ.
ಬೌದ್ಧ ತತ್ವವನ್ನು ಪ್ರತಿಪಾದಿಸುತ್ತಾ ಬೋಧಿತತ್ಪರು, ದೇವತೆಗಳು, ಪ್ರೇತಗಳು, ಸತ್ತವರ ಆತ್ಮಗಳು ಹೀಗೆ
ಅತಿಮಾನುಷ ಪಾತ್ರಗಳ ಮೂಲಕ ಅಲೌಕಿಕ
ಸಂಗತಿಯನ್ನು ಹೇಳುತ್ತಾರೆ. ಗದ್ಯಪದ್ಯ ಮಿಶ್ರಿತ ಈ ನಾಟಕಗಳನ್ನು
ಕೇವಲ ಪರಿಚಯಾತ್ಮಕ ದೃಷ್ಟಿಯಿಂದ ಮಾತ್ರ ರಚಿಸಲಾಗಿದೆ ಎಂದು
ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.
ಸ್ವಾತಂತ್ರ್ಯಪೂರ್ವದ
ನಾಟಕಗಳು ಕೇವಲ ಸಾಹಿತ್ಯ ಕೃತಿಯಾಗಿ
ಮಾತ್ರ ರಚಿಸಲ್ಪಟ್ಟಿರುತ್ತವೆ. ಆ ಕಾಲದ ನಾಟಕಕಾರನಿಗೆ,
ಒಂದು ವಸ್ತು ಹೇಳಬೇಕಾದ ವಿಷಯವೇ
ಹೊರತು ನೋಡಿ ಅನುಭವಿಸಬೇಕಾದ ಸಂಗತಿಯಾಗಿದ್ದದ್ದು
ಕಡಿಮೆ. ಹಾಗಾಗಿ ರಂಗ ಕೃತಿಗಿರಬೇಕಾದ
ಗುಣಗಳಿಂದ ಈ ನಾಟಕಗಳು ದೂರವಿದ್ದವು.
ಇದಕ್ಕೆ ‘ಹೆಬ್ಬೆರಳು’
ನಾಟಕಕ್ಕೆ ಬಳಸಿದ ಭಾಷೆಯೂ ಒಂದು
ಉದಾಹರಣೆ. ಆದ್ದರಿಂದ ಈ ಎಲ್ಲಾ ನಾಟಕಗಳ
ವಸ್ತು ವಿನ್ಯಾಸಗಳಲ್ಲಿ ಪ್ರಾದೇಶಿಕ ನೆಲೆಗಳಿಗಿಂತ ರಾಷ್ಟ್ರೀಯ ನೆಲೆಗಳೇ ಹೆಚ್ಚು ಪ್ರಕಾಶಿಸುತ್ತವೆ.
ಸ್ವಾತಂತ್ರ್ಯಾ
ನಂತರದ ಕೆಲವು ದಶಕಗಳಲ್ಲೂ ಅನೇಕರು,
ನಾಟಕಕಾರರೆಂದು ಪ್ರಸಿದ್ಧರಾಗದೇ ಸಾಹಿತ್ಯ ಕರ್ತೃವೆಂದು ಮಾತ್ರ ನಾಟಕ ರಚಿಸಿದವರಿದ್ದಾರೆ.
ಇಲ್ಲಿಯೂ ಪುರಾಣ, ಚರಿತ್ರೆ ಮತ್ತು
ನಾಡಿನ ಸಾಮಾಜಿಕ ಸಂಗತಿಗಳೇ ಪ್ರಧಾನ
ವಸ್ತು. ರಾಷ್ಟ್ರೀಯ ಪರಿಕಲ್ಪನೆಯ ಬದಲು ಅಖಂಡ ಕರ್ನಾಟಕದ
ವ್ಯಾಪ್ತಿಯಲ್ಲಿ ಚಿಂತನೆ ನಡೆಯುವುದೇ ಇಲ್ಲಿಯ
ವ್ಯತ್ಯಾಸ. ಅಂದರೆ ಈ ಹಂತದಲ್ಲಿ
ರಾಷ್ಟ್ರದಿಂದ ರಾಜ್ಯಕ್ಕೆ ಇಳಿಯುವ ಮನೋಧರ್ಮವೊಂದನ್ನು ಕಾಣುತ್ತೇವೆ.
ಹೇಳಬೇಕಾದ ವಿಷಯಗಳನ್ನು ನೇರವಾಗಿ ಹೇಳುತ್ತಾ ರಂಗ
ತಂತ್ರ ಮತ್ತು ಒಳನೋಟಗಳಿಂದ ದೂರ
ನಿಂತ ನಾಟಕಗಳು ಈ ಕಾಲದ್ದಾಗಿವೆ.
ಹಾಗೆಂದು ಕೆಲವು ಸಂದರ್ಭದಲ್ಲಿ ಇಂತಹಾ
ನಾಟಕಗಳು ಪ್ರದರ್ಶನ ಕಂಡದ್ದೂ ಬಹಳವಿದೆ. ಅಂದರೆ
ಶಾಲಾ ವಾರ್ಷಿಕೋತ್ಸವಗಳಲ್ಲಿ, ಸಂಘ ಸಂಸ್ಥೆಯ ಕಾರ್ಯಕ್ರಮಗಳಲ್ಲಿ
ಈ ನಾಟಕಗಳಿಗೆ ಜನ
ಸೇರುತ್ತಿದ್ದರು. ಇದರ ಮೇಲೆ ಆ
ಕಾಲದ ಕಂಪೆನಿ ನಾಟಕಗಳ ಪ್ರಭಾವವನ್ನೂ
ತಳ್ಳಿ ಹಾಕುವಂತಿಲ್ಲ. ಅದರ ಹೊರತಾಗಿ ನಾಟಕ
ಸಾಹಿತ್ಯವನ್ನು ರಂಗಭೂಮಿಯ ಗಂಭೀರ ಮಾಧ್ಯಮವೆಂದು ಪರಿಗಣಿಸಿದ್ದು
ಕಡಿಮೆ ಎಂದೇ ಹೇಳಬಹುದು.
ಕುಂಬಳೆ
ಶಂಕರನಾರಾಯಣ ಅಡಿಗ ಮೂವತ್ತಕ್ಕೂ ಹೆಚ್ಚಿನ
ನಾಟಕಗಳನ್ನು ರಚಿಸಿದವರು. ಬಹುತೇಕ ಎಲ್ಲವೂ ಪೌರಾಣಿಕ
ಮತ್ತು ಐತಿಹಾಸಿಕ ಸಂಗತಿಗಳನ್ನಾಧರಿಸಿದ ವಸ್ತುಗಳು. ಶಶಿಪ್ರಣಯ, ಕಣ್ವ ಪ್ರತಿಷ್ಟೆ, ಛಲದಂಕಮಲ್ಲ,
ಪ್ರಚಂಡ ಪರಶುರಾಮ, ವೀರಭದ್ರ, ಕಲಿಕರ್ಣ, ಬಬ್ರುವಾಹನ ಇತ್ಯಾದಿ. ಖಂಡಿಗೆ ಶ್ಯಾಮ್ ಭಟ್ಟರ
ಗುರುದಕ್ಷಿಣೆ, ಶ್ರೀಮತಿ ಪರಿಣಯ, ವೇಣೀ
ಸಂಹಾರ, ಪರಮೇಶ್ವರ ಪುಲಿಕೇಶಿ, ನಚಿಕೇತ, ಕಂಸವಧೆ, ಸತ್ಯ
ಸಂಕಲ್ಪ, ಪ್ರಹ್ಲಾದ ಚರಿತ್ರೆ, ಚಿತ್ರಾಂಗದ ಇವೇ ಮೊದಲಾದವು, ವೆಂಕಟ್ರಾಜ
ಪುಣಿಂಚತ್ತಾಯರ ಭಕ್ತ ಕುಚೇಲ ಹಾಗೂ
ಇನ್ನಿತರ ನಾಟಕಗಳು, ವಿಠಲ್ದಾಸರ ಅಪ್ರಕಟಿತ
ನಾಟಕಗಳು, ಎಡನೀರು ಮಠದ ಕೇಶವಾನಂದ
ಭಾರತಿ ಸ್ವಾಮಿಗಳವರು ರಚಿಸಿ ನಿರ್ದೇಶಿಸುತ್ತಿದ್ದ ನಾಟಕಗಳು,
ಎಲ್ಲವೂ ಪೌರಾಣಿಕ, ಚಾರಿತ್ರಿಕ ಮತ್ತು ಸಾಮಾಜಿಕ ವಸ್ತು
ವಿನ್ಯಾಸವನ್ನು ಹೊಂದಿದ ನಾಟಕಗಳು. ಹಾಗೆಂದು
ವಸ್ತುವಿನ ಪ್ರತಿಪಾದನೆಯಲ್ಲಿ ಹೊಸತನ್ನು ತೋರುವ ಸಾಹಸಕ್ಕೆ ಈ
ನಾಟಕಕಾರರು ಇಳಿದದ್ದು ಕಡಿಮೆ. ಮುಖ್ಯ ಪಾತ್ರದ
ಸುತ್ತಮುತ್ತ ಒಂದಷ್ಟು ಇತರ ಪಾತ್ರಗಳನ್ನು
ಸೃಷ್ಟಿಸಿ, ನೇರ ಸಂಭಾಷಣೆಯನ್ನು ಹೆಣೆದ
ನಾಟಕಗಳಿವು. ಕರ್ಣಾಟಕದ ಇತರ ಭಾಗದಲ್ಲಿ ಇಂತದ್ದೇ
ನಾಟಕಗಳು ಒಂದಷ್ಟು ದೀರ್ಘ ಅವಧಿಯ
ವ್ಯಾಪ್ತಿಯನ್ನು ತೆಗೆದುಕೊಂಡು ವೃತ್ತಿ ರಂಗಭೂಮಿಯಲ್ಲಿ ಪ್ರದರ್ಶಿಸಲ್ಪಡುತ್ತಿದ್ದವು,
ಅದೇ ಕರಾವಳಿಯಲ್ಲಿ ತೆಂಕು-ಬಡಗು ಯಕ್ಷಗಾನ
ಪ್ರಸಂಗ ರೂಪವಾಗಿ ಪ್ರದರ್ಶನಗೊಳ್ಳುತ್ತಿತ್ತು. ಅಲ್ಲದೇ ಕೆಲವೊಂದು
ಕಂಪೆನಿ ನಾಟಕಗಳಲ್ಲೂ ಇಂತಹಾ ವಸ್ತುವಿನ ನಾಟಕಗಳಿಗೆ
ಪ್ರಾಮುಖ್ಯತೆ ಇತ್ತು. ಸಾಮಾನ್ಯವಾಗಿ ಇಲ್ಲಿಯ
ಸುತ್ತಮುತ್ತಲಿನ ಪ್ರದೇಶದ ಶಾಲಾ ವಾರ್ಷಿಕೋತ್ಸವಕ್ಕೆ
ಈ ನಾಟಕಗಳು ಆಣಿಯಾಗುತ್ತಿದ್ದವು.
ಅಲ್ಲದೇ ಇವುಗಳಲ್ಲಿ ಅನೇಕ ನಾಟಕಗಳು ದಾಖಲೆಯ
ಪ್ರದರ್ಶನಗಳನ್ನೂ ಕಂಡಿದ್ದವು. ಪೌರಾಣಿಕ ಮತ್ತು ಐತಿಹಾಸಿಕ
ಪರಿಕಲ್ಪನೆಯನ್ನು ಗಟ್ಟಿಗೊಳಿಸುದರೊಂದಿಗೆ ರಂಜನೆ ಮತ್ತು ಬೋಧನೆಯನ್ನೇ ಪ್ರಧಾನವಾಗಿರಿಸಿಕೊಂಡ
ನಾಟಕಗಳಿವು. ಹಾಗೆಂದು ಇವು ಒಂದು
ಕಾಲದ ಸಾಂಸ್ಕøತಿಕ ದಾಹಕ್ಕೆ
ಪಾನಕವಾಗಿಯೂ ಇದ್ದವು.
ಸ್ವಾತಂತ್ರ್ಯಾ ನಂತರದ ಕಾಲ ಮತ್ತು
ಆಧುನಿಕ ಅಥವಾ ಪ್ರಗತಿಪರ ನಾಟಕಗಳು:
70ರ ದಶಕದ ನಂತರ ಕಾಸರಗೋಡು
ಕನ್ನಡ ನಾಟಕ ಸಾಹಿತ್ಯ ಮತ್ತು
ರಂಗಭೂಮಿ ಬದಲಾವಣೆಗೊಂಡ ಪರ್ವಕಾಲ. ಕರ್ನಾಟಕದ ಸಂದರ್ಭವನ್ನು ಮುಂದಿಟ್ಟುಕೊಂಡು ಗಮನಿಸುವುದಾದರೆ, ಅತ್ಯಂತ ಸಣ್ಣ ವ್ಯಾಪ್ತಿಯನ್ನು
ಹೊಂದಿದ್ದ ಮತ್ತು ತನ್ನದೇ ಆಂತರಿಕ
ಸಮಸ್ಯೆಗಳಿಗೆ ತುತ್ತಾದ ಕಾಸರಗೋಡು ಪ್ರದೇಶದಲ್ಲಿ
ಕನ್ನಡ ನಾಟಕ ಸಾಹಿತ್ಯ ಮತ್ತು
ರಂಗಭೂಮಿ, ಕ್ರಾಂತಿಕಾರಕ ಹೆಜ್ಜೆ ಗುರುತುಗಳನ್ನು ಮೂಡಿಸಿದೆ.
ಸ್ವಾತಂತ್ರ್ಯಾ ನಂತರ ಭಾಷಾವಾರು ಪ್ರಾಂತ್ಯದ
ನಷ್ಟವನ್ನು ತುಂಬುವ ಅನಿವಾರ್ಯ ಮತ್ತು
ಕಾಸರಗೋಡಿನಲ್ಲೇ ಹುಟ್ಟಿ ಬೆಳೆದ ಯಕ್ಷಗಾನದಂತಹಾ
ಜನಪದ ರಂಗಭೂಮಿ ತನ್ನ ಅಸ್ಥಿತ್ವವನ್ನು
ಕಳೆದುಕೊಂಡದ್ದು, ಇದು ನಾಟಕ ಸಾಹಿತ್ಯ
ಮತ್ತು ರಂಗಭೂಮಿ ಬೆಳೆಯಲು ಕಾರಣವಾಗಿರಬೇಕು.
ಕನ್ನಡ ನಾಟಕ ಕ್ಷೇತ್ರದಲ್ಲಿ ನಡೆದ
ಎಲ್ಲಾ ಸ್ಥಿತ್ಯಂತರಗಳನ್ನು ಗಮನಿಸುತ್ತಾ ಸಮನ್ವಯದ ನೆಲೆಯಲ್ಲಿ ಕಾಸರಗೋಡಿನ
ನಾಟಕವೂ ರೂಪುಗೊಂಡಿದೆ. ಅತ್ತ ಮಲೆಯಾಳಂ ಇತ್ತ
ತುಳು ರಂಗಭೂಮಿಗಳಿದ್ದರೂ ಅವುಗಳಿಂದ ಪೂರ್ಣ ಅಂತರವನ್ನು ಕಾಯ್ದುಕೊಂಡು,
ಸ್ವತಂತ್ರವಾಗಿ ಬೆಳೆದು ನಿಂತ ಆಧುನಿಕ
ಕನ್ನಡ ರಂಗಭೂಮಿ ಕಾಸರಗೋಡಿನದ್ದು.
ಈಗಾಗಲೇ
ಕಾವ್ಯ ಹಾಗೂ ಇತರ ಸಾಹಿತ್ಯ
ಪ್ರಕಾರಗಳ ಮೂಲಕ ಜನಪ್ರಿಯವಾಗಿದ್ದ ಕಾಸರಗೋಡು,
ಇಲ್ಲಿಯ ಚಳವಳಿಗಳ ಮೂಲಕ್ಕೆ ಹೊಸ
ಮಾಧ್ಯಮವೊಂದನ್ನು ಬಳಸಿಕೊಳ್ಳಲು ಆರಂಭಿಸಿತು. ಅದು ನಾಟಕದ ಮೂಲಕ
ಎಂದು ನಿಸ್ಸಂಶಯವಾಗಿಯೂ ಹೇಳಬಹುದು. ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡದ
ಪ್ರಾಧ್ಯಾಪಕರಾಗಿದ್ದ ಪ್ರೊ.ವೇಣುಗೋಪಾಲ ಕಾಸರಗೋಡು
ರಚಿಸಿದ ಅನೇಕ ನಾಟಕಗಳು ಮತ್ತು
ಅದರ ಪ್ರದರ್ಶನಗಳು ಕಾಸರಗೋಡಿನ ರಂಗಭೂಮಿಯ ದಿಕ್ಕನ್ನು ಬದಲಾಯಿಸಿತು.
ಪಾಶ್ಚಿಮಾತ್ಯ
ರಂಗಭೂಮಿಯ ಪರಿಕಲ್ಪನೆಯಲ್ಲಿ ಪ್ರಾದೇಶಿಕವಾದ ಹೊಸ ಆಲೋಚನೆಗಳಿಗೆ ಪ್ರೇರಣೆ
ನೀಡಬಲ್ಲ ಸುಮಾರು ಹದಿನೈದು ನಾಟಕಗಳನ್ನು
ಸಾಹಿತ್ಯಕ್ಕೂ ರಂಗಭೂಮಿಗೂ ನೀಡಿದವರು ಪ್ರೊ.ವೇಣುಗೋಪಾಲ್ ಕಾಸರಗೋಡು.
ಈ ಎಲ್ಲ ನಾಟಕಗಳ
ವಸ್ತು, ಪೌರಾಣಿಕ, ಚಾರಿತ್ರಿಕ, ಸಾಮಾಜಿಕ ಇತ್ಯಾದಿಗಳಂತೆ ಕಂಡರೂ
ಅದನ್ನು ಹೇಳಿದ ರೀತಿ ಮತ್ತು
ಒಳಧ್ವನಿ ಬಹಳ ಭಿನ್ನವಾದುದು. ಕಾವ್ಯಗಳಲ್ಲಿ
ನವ್ಯದ ನೇರ ಪ್ರಭಾವಕ್ಕೆ ಒಳಗಾಗಿದ್ದ
ವೇಣುಗೋಪಾಲರು ಅದನ್ನು ನಾಟಕಗಳಲ್ಲೂ ಬಿಂಬಿಸಲು
ಶಕ್ತರಾದರು. ಆದ್ದರಿಂದ ವಸ್ತುವಿನ ಘನತೆಯೊಂದಿಗೆ ರಂಗದ ಗಾಂಭೀರ್ಯವನ್ನು ಹೆಚ್ಚಿಸಿಕೊಳ್ಳಲು
ಸಾಧ್ಯವಾಯಿತು. ನಾಟಕವನ್ನು ಅಭಿವ್ಯಕ್ತಿಸುವ ಕಲಾವಿದನ ಜೊತೆಗೆ ಅದನ್ನು
ಅರಗಿಸುವ ಪ್ರೇಕ್ಷಕನೂ ಸಿದ್ಧಗೊಳ್ಳಬೇಕು ಎನ್ನುವಂತಾಯಿತು.
ವೇಣುಗೋಪಾಲರ
ದೃಷ್ಟಿ, ಪ್ರಶ್ನೆ ಮತ್ತು ಮಣ್ಣಿನ
ಗೊಂಬೆ ಇವು ಪೌರಾಣಿಕ ವಸ್ತುಗಳು.
ಆದರೆ ಅದನ್ನು ಯತಾವತ್ತು ಭಟ್ಟಿ
ಇಳಿಸದೇ ತಾನು ಹೇಳಬೇಕಾದುದನ್ನು ಆ
ಪಾತ್ರಗಳ ಮೂಲಕ ಹೇಳುವ ತಂತ್ರವನ್ನು
ಮೆರೆದಿದ್ದಾರೆ. ಕರ್ನಾಟಕದಾದ್ಯಂತ ಹಲವು ಪ್ರದರ್ಶನದ ಜೊತೆಗೆ,
ಕೃತಿಯಾಗಿ ಓದಿಸಿಕೊಳ್ಳುವ ನಾಟಕ ದೃಷ್ಟಿ. ಇಲ್ಲಿ
ಹರಿಶ್ಚಂದ್ರ, ವಿಶ್ವಾಮಿತ್ರ, ಆಂದ್ರಕ ಮತ್ತು ಮಧುಚ್ಚಿಕ
ಎನ್ನುವ ನಾಲ್ಕು ಪ್ರಮುಖ ಪಾತ್ರಗಳು.
ಆದರೆ ಮೂಲ ಕತೆಯಲ್ಲಿ ಕಾಣದ
ಹೊಸ ದೃಷ್ಟಿಯೊಂದು ಇಲ್ಲಿದೆ. ಆ ದೃಷ್ಟಿ ಈ
ಭಾಗದ ಜನರಲ್ಲಿ ಕಾಣುವ ಬಂಧುತ್ವದ
ಸೋಲು, ಅಧಿಕಾರ ವ್ಯವಸ್ಥೆಯ ಪ್ರತಿಷ್ಟೆ
ಹಾಗೂ ವೈಯಕ್ತಿಕ ಅಹಂಗಳ ಕುಸಿತ ಇತ್ಯಾದಿಗಳು.
ಸಮಕಾಲೀನ ರಾಜಕೀಯ ಮತ್ತು ಧರ್ಮಗಳ
ಪ್ರತಿಷ್ಟೆಯಲ್ಲಿ ಕುಸಿಯುತ್ತಿರುವ ಸಮಾಜವನ್ನು ಎಚ್ಚರಿಸುವುದು ಈ ನಾಟಕದ ದೃಷ್ಟಿ.
ಇದನ್ನು ನಾಟಕಗಾರರು ಸಮರ್ಥವಾಗಿ ಬಿಂಬಿಸುತ್ತಾರೆ. ಆದ್ದರಿಂದ ಪೌರಾಣಿಕ ವಸ್ತುವೊಂದು ಪ್ರಾದೇಶಿಕ
ವಿದ್ಯಮಾನಗಳ ಸ್ಪರ್ಶದಿಂದ ನೂತನವಾಗಿ ನಿಲ್ಲುತ್ತದೆ.
ಇದೇ
ಹಿನ್ನಲೆಯ, ಆದರೆ ಭಿನ್ನ ಸಂದರ್ಭವನ್ನು
ಅಭಿವ್ಯಕ್ತಿಸುವ ಇನ್ನೊಂದು ನಾಟಕ ಪ್ರಶ್ನೆ. ಸಾವು
ಮತ್ತು ಹಸಿವಿನಲ್ಲಿ ಹಸಿವು ತೀವ್ರವಾದುದು. ಇದಕ್ಕೆ
ಪರಿಹಾರದ ಪ್ರಶ್ನೆಗಳನ್ನು ನಚಕೇತ ಯಮನಲ್ಲಿ ಕೇಳುತ್ತಾನೆ.
ಶಾಂತಿಯ ಮೂಲಕ ಅದನ್ನು ಸಾಧಿಸಲು
ಸಾಧ್ಯವಿದೆ ಎನ್ನುವುದು ಯಮನ ಉತ್ತರ. ಶಾಂತಿಗಿರುವ
ಅಶಾಂತತೆಯ ಹಿನ್ನಲೆ, ನಮ್ಮ ಸುತ್ತಮುತ್ತಲಿನ ವ್ಯವಸ್ಥೆಯೂ
ಹೌದು. ಇದನ್ನು ನಾಟಕದ ಮೂಲಕ
ಪ್ರತಿಪಾದಿಸುವುದು ನಾಟಕಕಾರನ ಉದ್ದೇಶ. ಇಲ್ಲಿ ಬರುವ
ನಚಿಕೇತ, ಉದ್ಧಾಲಕ, ಯಮಕಿಂಕರರು, ಕಾಳಪ್ಪ, ಬೆಳ್ಳಪ್ಪ ಈ
ಪಾತ್ರಗಳು ಸ್ವಭಾವತಾಃ ನಮ್ಮ ಸುತ್ತಮುತ್ತ ಇರುವ
ವ್ಯಕ್ತಿಗಳೇ ಆಗಿರುತ್ತಾರೆ. ಆ ಮೂಲಕವೂ ಪಾತ್ರವನ್ನು
ಸಾಮಿಪ್ಯಗೊಳಿಸುವ ತಂತ್ರ ಇಲ್ಲಿಯದು. ಮಣ್ಣಿನ
ಗೊಂಬೆ, ಗೋವಿಂದ ಪೈಯವರ ಹೆಬ್ಬೆರಳು
ನಾಟಕದ ಸರಳೀಕರಣ. ಸಾಮಥ್ರ್ಯದ ಹಿಂದಿರುವ ಸ್ವಾರ್ಥಕ್ಕೆ ಸಿಡಿದೇಳಬೇಕಾದ ಧ್ವನಿ ಈ ನಾಟಕದ
ಆಂತರ್ಯ. ಗೋವಿಂದ ಪೈಯವರ ಈ
ಒಳಗನ್ನು ಸಮರ್ಥವಾಗಿ ಹೊರಹಾಕಿದವರು ವೇಣುಗೋಪಾಲರು.
ವ್ಯವಸ್ಥೆಯಲ್ಲಿನ
ಭ್ರಷ್ಟತೆ, ದ್ರೋಹ, ಅನ್ಯಾಯಗಳಿಗೆ ತಾತ್ವಿಕ
ಪ್ರತಿಭಟನೆಯನ್ನು ವ್ಯಕ್ತಪಡಿಸುವ ನೆಲೆಯಲ್ಲಿ ವೇಣುಗೋಪಾಲ ಕಾಸರಗೋಡರ ಸಾಮಾಜಿಕ ನಾಟಕಗಳನ್ನು ನೋಡಬೇಕು.
ನಮ್ಮ ಆಡಳಿತಾತ್ಮಕ ವ್ಯವಸ್ಥೆಯನ್ನು ವಿಡಂಬಿಸುವಂತಹಾ ‘ಡ್ಯೂಟಿ ಅಂದ್ರೆ ಡ್ಯೂಟಿ’,
ಪೋಲಿಸ್ ಅವ್ಯವಸ್ಥೆಯ ಪ್ರತಿಬಿಂಬವೋ ಎನ್ನುವಂತಹ ‘ನೀನಲ್ಲಾಂದ್ರೆ ನಿನ್ನಪ್ಪ’,
ಭ್ರಷ್ಟ ರಾಜಕಾರಣ ಮತ್ತು ಬಂಡವಾಳಶಾಹಿ
ವ್ಯವಸ್ಥೆಯ ಸಮ್ಮಿಲನದಿಂದಾಗುವ ದುರಂತವನ್ನು ಎತ್ತಿ ತೋರಿಸುವ ‘ಬಂಗಾರಾಂ’
(ಇದು ಗಂಗಾರಾಂ ಕಟ್ಟಡ ಕುಸಿತದ
ಕುರಿತ ವಸ್ತು), ತಮಾಷೆಯಾದರೂ ನಮ್ಮ
ಮಧ್ಯೆ ನಡೆಯಬಹುದಾದ ಜ್ಯೋತಿಷ್ಯದ ಚಮತ್ಕಾರವನ್ನು ಹೇಳುವ ‘ಹೀಗೂ ಆಗುತ್ತೆ’,
ಇವೆಲವೂ ಸಾಮಾಜಿಕ ವಸ್ತುಗಳನ್ನು ಇಟ್ಟುಕೊಂಡು
ರಚಿಸಿದ ನಾಟಕಗಳು. ಆದರೆ ಈ ಮಣ್ಣಿನ
ಪ್ರತಿನಿಧಿಗಳೆಂಬಂತೆ ನಾವು ಎಲ್ಲೋ ಒಂದು
ಕಡೆ ನಾಟಕದೊಳಗಿರುತ್ತೇವೆ.
ಐತಿಹಾಸ
ನಾಟಕವಾದ ‘ಶಿಲುಬೆ’
ಮತ್ತು ‘ಜಿಯಾ’ದಲ್ಲಿ, ಕ್ರೌರ್ಯ ಜಗತ್ತಿನ
ಯಾವ ಮೂಲೆಯಲ್ಲಿ ನಡೆದರೂ ಅನಿಷ್ಟ ಎನ್ನುವುದನ್ನು
ತಿಳಿಸುತ್ತದೆ. ಏಸುವನ್ನು ಶಿಲುಬೆಗೇರಿಸುವ ದಾಷ್ಟ್ರ್ಯ ಮತ್ತು ಪಾಕಿಸ್ತಾನವನ್ನು ಮುಷ್ಟಿಯ
ಒಳಗಿಟ್ಟುಕೊಳ್ಳುವ ಹಟ, ರಾಜಕೀಯ ದೃಷ್ಟಿಯಿಂದ
ಎರಡೂ ಸಮಾನವೇ ಮತ್ತು ಮಾನವತೆಯ
ಹರಣವೇ ಆಗಿದೆ. ಇದನ್ನೇ ಭಾಷಾವಾರು
ಪ್ರಾಂತ್ಯ ರಚನೆಯ ಮೂಲಕ ಭಾರತೀಯ
ಆಡಳಿತವು ಮಾಡಿದ್ದು. ಆದ್ದರಿಂದ ಅನೇಕ ರಾಜಕೀಯ ತೀರ್ಮಾನಗಳಿಗೆ
ಬಲಿಪಶುವಾಗುವ ಸಂದರ್ಭವನ್ನು ಈ ಕಿರುನಾಟಕಗಳ ಮೂಲಕ
ತಿಳಿಸಲಾಗಿದೆ. ಇವರು ರಚಿಸಿದ ‘ರಾಮಾಯಣ’
ಮತ್ತು ‘ಮಹಾಭಾರತ’
ಅಸಂಗತ ನಾಟಕಗಳು. ಇಲ್ಲಿಯ
ಪಾತ್ರ ಮತ್ತು ಸನ್ನಿವೇಶಗಳು ನಮ್ಮ
ಮಧ್ಯೆ ಇರುವಂತವುಗಳು ಎನ್ನುವಷ್ಟು ಸಹಜವಾಗಿ ರೂಪಿತವಾಗಿದೆ.
ಒಟ್ಟಿನಲ್ಲಿ
ಪ್ರೊ.ವೇಣುಗೋಪಾಲ ಕಾಸರಗೋಡು, ಇಲ್ಲಿಯ ನಾಟಕ ಜಗತ್ತಿಗೆ
ಹೊಸತನದ ಅಲೆಯನ್ನು ಮತ್ತು ಹೊಸ ಆಲೋಚನಾ
ಕ್ರಮವನ್ನು ತೋರಿಸಿಕೊಟ್ಟವರು. ರಂಗಭೂಮಿಯ ನಿಕಟ ಸಂಪರ್ಕ ಹಾಗೂ
ಸಾಹಿತ್ಯದ ಹಿಡಿತದಿಂದಾಗಿ ಒಂದು ಅಭಿವ್ಯಕ್ತಿ ಮಾಧ್ಯಮವಾಗಿ
ನಾಟಕ ಪ್ರಕಾರವನ್ನು ಹೇಗೆ ದುಡಿಸಬೇಕು ಮತ್ತು
ಅದರಲ್ಲಿ ಈ ಪ್ರದೇಶದ ಸತ್ಯಗಳನ್ನು
ಹೇಗೆ ತೆರೆದಿಡಬೇಕು ಎನ್ನುವುದನ್ನು ಚೆನ್ನಾಗಿ ತಿಳಿದುಕೊಂಡಿದ್ದವರು. ಆದ್ದರಿಂದ ಅವರು ರಚಿಸಿದ ನಾಟಕ,
ಸಾಹಿತ್ಯ ಮತ್ತು ರಂಗದಲ್ಲಿ ಗೆಲುವನ್ನು
ಕಾಣಲು ಕಾರಣವಾಯಿತು.
ಇದೇ
ಸಂದರ್ಭದಲ್ಲಿ ಇನ್ನೂ ಅನೇಕರ ನಾಟಕ
ಕೃತಿಗಳು ಪ್ರಕಟಗೊಂಡಿವೆ ಮತ್ತು ರಂಗದ ಮೇಲೆ
ಬಂದಿವೆ. ಪ್ರಾತಿನಿಧಿಕವಾಗಿ ಇಲ್ಲಿ ಹೆಸರುಗಳನ್ನು ಮಾತ್ರ
ಉಲ್ಲೇಖಿಸುತ್ತಿದ್ದೇನೆ. ಕೆ.ಟಿ ಶ್ರೀಧರರ
‘ಬಚ್ಚಾಲಿ ಹುಡುಗರು’
ವೇಣು ಮಿತ್ರರ ಗುತ್ತು, ದಿಗ್ಗ,
ಸ್ವಾರ್ಥ ಇತ್ಯಾದಿ. ರಾಧಾಕೃಷ್ಣ ಉಳಿಯತ್ತಡ್ಕರ ಆದಿಕವಿ ವಾಲ್ಮೀಕಿ, ಯುಗಪುರುಷ,
ಪರಿವರ್ತನೆ, ದೃಷ್ಟಿ, ದಿಕ್ಕಾರ, ಕಾಲಚಕ್ರ
ಇತ್ಯಾದಿಗಳು. ತಾರನಾಥ ಮಧೂರುರವರ ಗ್ರಹಣ,
ಗರಿ ಮುರಿದ ಹಕ್ಕಿ, ನಾಗ
ಪಂಚಮಿ, ಮೇ24, ಕಣ್ಣಿರು, ಪ್ರತಿಕಾರ,
ಅಭಿಮನ್ಯು, ಧರ್ಮಕ್ಷೇತ್ರ, ಕುರುಕ್ಷೇತ್ರ ಇವು, ಪ್ರದೀಪ್ ಬೇಕಲರವರ
ನಾವು ಹೀಗೆ, ಉದಯಶಂಕರ ನಾರಾಯಣ
ರಾವ್ರವರ ಪೌರಾಣಿಕ ನಾಟಕಗಳು,
ಶ್ರೀಧರ ಎದ್ರುತೋಡು ಅವರ ಕಡಲು, ಹುಲಿದನ,
ಅಂತರಾಂತರಂಗ, ಉದಯ ಎ.ಸಾರಂಗರವರ
ಸಾಮಾಜಿಕ ನಾಟಕಗಳು, ಇವೆಲ್ಲವೂ ಕಾಸರಗೋಡು ಪ್ರದೇಶದ ಕೆಲಸಗಳೇ ಆಗಿವೆ.
ಇದರಲ್ಲಿ ಬಹುತೇಕ ನಾಟಕಗಳು ಮಕ್ಕಳಿಗೆ
ಸೀಮಿತವಾಗಿದ್ದರೂ ಇಲ್ಲಿಯ ಸಾಮಾಜಿಕ ಸಂಗತಿಗಳನ್ನು
ವಸ್ತುವಾಗಿ ಇಟ್ಟುಕೊಂಡು ರಚಿಸಿದ ನಾಟಕಗಳೇ ಆಗಿವೆ.
ಇವುಗಳಲ್ಲಿ ಕೆಲವೊಂದು ಕೃತಿರೂಪಕ್ಕೂ ಬಂದಿವೆ, ಕೆಲವು ರಂಗದ
ಬೆಳಕನ್ನು ಕಂಡಿವೆ. ಇನ್ನು ಕೆಲವು
ಸ್ಕ್ರಿಪ್ಟ್ ಹಂತದಿಂದ ಮಾಯವಾಗಿವೆ.
ಬಾನುಲಿ ನಾಟಕ: ದೃಶ್ಯ ಚಟುವಟಿಕೆಗಿಂತ ಭಿನ್ನವಾದ
ಶ್ರಾವ್ಯ ನಾಟಕಗಳೂ ಕಾಸರಗೋಡಿನಲ್ಲಿ ಹುಟ್ಟಿಕೊಂಡಿವೆ.
ಕಾಸರಗೋಡಿನಲ್ಲಿ ಪ್ರಸಾರವಾಗುವ ಕನ್ನಡ ಆಕಾಶವಾಣಿ ಕೇಂದ್ರ
ಇಲ್ಲಿಯ ನಾಟಕಗಾರರಿಗೆ ಉತ್ತಮ ಅವಕಾಶ ಮಾಡಿಕೊಟ್ಟಿದೆ.
ವಿಜಯಲಕ್ಷ್ಮೀ ಶ್ಯಾನುಭೋಗ, ಎ. ವಿಠಲ ಶೆಟ್ಟಿÀ,
ಉದಯ ಕುಮಾರ ಮನ್ನಿಪ್ಪಾಡಿ, ನಾಗರಾಜ್
ಮುಂತಾದವರ ಕೆಲಸಗಳು ಗುರುತಿಸಲ್ಪಡುವಂತದ್ದು.
ವಿಜಯಲಕ್ಷ್ಮೀ ಶ್ಯಾನುಭೋಗ, ಸುಮಾರು ಒಂಬತ್ತು ಬಾನುಲಿ
ನಾಟಕಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಕೆಲವು ಕೃತಿಯಾಗಿಯೂ ಹೊರಬಂದಿದೆ.
ಬಾನುಲಿ ನಾಟಕಗಳು ಕೇವಲ ಕಾಸರಗೋಡಿಗೆ
ಸೀಮಿತವಾಗಿರದೆ, ಸಮಗ್ರ ಕನ್ನಡದ ವ್ಯಾಪ್ತಿಗೆ
ಒಳಪಟ್ಟಿರುವುದನ್ನು ಗುರುತಿಬಸಹುದು.
ಕಾಸರಗೋಡು
ರಂಗಭೂಮಿಯಲ್ಲಿ ನಿರ್ದೇಶಕರು: ನಾಟಕದ ಯಶಸ್ಸು, ಕೃತಿಗಿಂತಲೂ
ರಂಗದಲ್ಲಿ ಎನ್ನುವ ನಂಬಿಕೆ ಸಾರ್ವತ್ರಿಕವಾದುದು.
ಆದ್ದರಿಂದ ನಾಟಕಕಾರನಿಗಿಂತಲೂ ನಿರ್ದೇಶಕ ಹೆಚ್ಚು ಸ್ಥಾನಮಾನವನ್ನು ಪಡೆಯುತ್ತಿರುವುದನ್ನು
ನಾವು ಇಂದಿಗೂ ಕಾಣುತ್ತೇವೆ. ಕಾಸರಗೋಡಿನ
ಮಟ್ಟಿಗೂ ಈ ಮಾತು ಸತ್ಯ.
ವೇಣುಗೋಪಾಲ ಕಾಸರಗೋಡುರವರನ್ನು ಹೊರತುಪಡಿಸಿ, ರಂಗದ ಮೇಲೆ ಹಿಡಿತ
ಇದ್ದ ಇನ್ನೊಬ್ಬ ನಾಟಕಕಾರನನ್ನು ಕಾಸರಗೋಡಿನಲ್ಲಿ ಕಾಣಲು ಕಷ್ಟ ಸಾಧ್ಯ.
ಆದ್ದರಿಂದ ಕಾಸರಗೋಡಿನ ಅನೇಕ ನಾಟಕಕಾರರಿಗಿಂತ ಸಹಜವಾಗಿಯೇ
ನಿರ್ದೇಶಕರು ಪ್ರಾಮುಖ್ಯತೆ ಪಡೆದಿದ್ದಾರೆ. ಅಲ್ಲದೇ ತಮ್ಮ ಹೊಸಹೊಸ
ರಂಗ ಪ್ರಯೋಗಗಳ ಮೂಲಕವೂ ಪ್ರಸಿದ್ಧರಾಗಿದ್ದಾರೆ. ವೃತ್ತಿ
ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿ
ಎರಡೂ ಹೆಚ್ಚು ಚಾಲ್ತಿಯಲ್ಲಿಲ್ಲದ ಕಾಲದಲ್ಲಿ,
ಶಾಲಾ-ಕಾಲೇಜು ಮತ್ತು ಸಂಘಸಂಸ್ಥೆಗಳ
ಆಶ್ರಯದಲ್ಲಿ ನಡೆಯುತ್ತಿದ್ದ ನಾಟಕಗಳಿಗೆ ಆ ಶಾಲೆಗಳ ಕನ್ನಡ
ಅಧ್ಯಾಪಕರು ಅಥವಾ ಕಲಾಸಕ್ತ ಅಧ್ಯಾಪಕರು
ನಿರ್ದೇಶಕರಾಗಿದ್ದ ಉದಾಹರಣೆಗಳು ಸಾಕಷ್ಟಿವೆ. ಆದರೆ ಆ ಕಾಲದಲ್ಲಿ
ನಿರ್ದೇಶಕನಿಗಿಂತ ಹೆಚ್ಚು ಮಹತ್ವ ನಟ,ನಾಟಕಕಾರನಿಗಿದ್ದದ್ದು ಸತ್ಯ. ಪೌರಾಣಿಕ ಅಥವಾ
ಚಾರಿತ್ರಿಕ ನಾಟಕಗಳೇ ಹೆಚ್ಚಾಗಿದ್ದ ಕಾಲದಲ್ಲಿ
ನಿರ್ದೇಶಕ ದೃಶ್ಯವನ್ನು ಸಂಯೋಜಿಸುವ ಸೂತ್ರಧಾರನಾಗಿ ಮಾತ್ರ ಕೆಲಸ ಮಾಡುತ್ತಿದ್ದ.
ಕಾಸರಗೋಡಿನ ನೀರ್ಚಾಲು, ಉಕ್ಕಿನಡ್ಕ, ಕುಂಬಳೆ, ಮಧೂರು, ಬದಿಯಡ್ಕ,
ಅನಂತಪುರ, ಎಡನೀರು, ಬೆಳ್ಳೂರು, ಮಂಜೇಶ್ವರ,
ಕೂಡ್ಲು, ಕೊರಕ್ಕೋಡು, ಮುಳ್ಳೇರಿಯಾ, ಮತ್ತಿತರ ಭಾಗಗಳಲ್ಲಿ ಇಂತಹಾ
ನಿರ್ದೇಶಕರು ಹೆಚ್ಚು ಕೆಲಸ ಮಾಡಿದ್ದನ್ನು
ಕಾಣಬಹುದು. ಈ ಪ್ರದೇಶಕ್ಕೆ ಸಂಬಂಧ
ಪಡದ ಪೌರಾಣಿಕ ಅಥವಾ ಚಾರಿತ್ರಿಕ
ನಾಟಕಗಳಲ್ಲಿ ನಿರ್ದೇಶಕನ ಚಾಕಚಕ್ಯತೆಗೆ ಹೆಚ್ಚು ಅವಕಾಶವಿರಲಿಲ್ಲ. ವಸ್ತುವನ್ನು
ಯಥಾವತ್ತಾಗಿ ದಾಟಿಸುವ ಕೆಲಸ ಮಾತ್ರ
ಇವರಿಂದ ನಡೆಯುತ್ತಿತ್ತು.
ಮುಂದೆ
ಪ್ರಾದೇಶಿಕ ನಾಟಕಕಾರರ ರಚನೆಯೂ ಆಧುನಿಕಗೊಳ್ಳುತ್ತಿದ್ದಂತೆ, ಇದೇ ಪ್ರದೇಶದ
ನಿರ್ದೇಶಕರು ಆಧುನಿಕ ರಂಗಭೂಮಿಯ ಪರಿಕಲ್ಪನೆಯಲ್ಲಿ
ನಾಟಕಗಳಿಗೆ ಜೀವತುಂಬವ ಕಾರ್ಯದಲ್ಲಿ ತೊಡಗಿದರು. ಕನ್ನಡದ ಶ್ರೇಷ್ಟ ನಾಟಕಕಾರರ
ನಾಟಕಗಳ ಜೊತೆಗೆ ಕಾಸರಗೋಡಿನ ನಾಟಕಕಾರರ
ನಾಟಕಗಳನ್ನೂ ರಂಗಕ್ಕೆ ತರುವಲ್ಲಿ ಯಶಸ್ವಿಯಾದರು. ಕಾಸರಗೋಡು
ಚಿನ್ನಾ, ಉಮೇಶ್ ಎಂ. ಸಾಲಿಯಾನ್,
ಮುರಾರಿ ಕಾಸರಗೋಡು, ಸುಕುಮಾರನ್ ಕೆ.ಕಣ್ಣನ್, ರಾಧಾಕೃಷ್ಣ
ಉಳಿಯತ್ತಡ್ಕ, ಸುಬ್ಬಣ್ಣ ಶೆಟ್ಟಿ, ರಘ ಕೆ.
ಮೀಪುಗುರಿ, ರವೀಂದ್ರ ರೈ ಮಲ್ಲಾವರ,
ಯತೀಶ್ ರೈ ಇವೇ ಮೊದಲಾದ
ನಟ-ನಾಟಕಕಾರರು, ನಿರ್ದೇಶಕರಾಗಿ ಕನ್ನಡ ರಂಗಭೂಮಿಗೆ ಕೊಡುಗೆ
ಕೊಟ್ಟರು.
ಹೊಸದರ
ತುಡಿತ:
ಕಾಸರಗೋಡು ಚಿನ್ನಾ- ನಟ, ನಿರ್ದೇಶಕ
ಅಲ್ಲದೇ ಬೇರೆ ಭಾಷೆಗಳಿಂದ ಕನ್ನಡಕ್ಕೆ
ನಾಟಕಗಳನ್ನು ಭಾಷಾಂತರ ಮಾಡಿದವರು, ಹಲವು
ಬಾನುಲಿ ನಾಟಕಗಳಿಗೆ ಧ್ವನಿ ನೀಡಿದವರು, ಮಕ್ಕಳ
ನಾಟಕ, ಬೀದಿ ನಾಟಕ ಮತ್ತು
ಲಾರಿ ನಾಟಕ ಹೀಗೆ ರಂಗಭೂಮಿಯ
ವಿಭಿನ್ನ ಆಯಾಮಗಳಲ್ಲಿ ಕೆಲಸ ಮಾಡಿದವರು. ತನ್ನ
ನಿರ್ದೇಶನದ ಮೂಲಕ ಈ ಮಣ್ಣಿನ
ಸತ್ವವನ್ನು ಕಾಸರಗೋಡಿನ ಹೊರಗೂ ಪರಿಚಯಿಸಿದವರು. ವಾಹನವೊಂದರ
ಮೇಲೆ ರಂಗವನ್ನು ನಿರ್ಮಿಸಿ ನಾಟಕವನ್ನು ಪ್ರದರ್ಶಿಸಿರುವುದು ಹೊಸ ಪ್ರಯೋಗ. ವೇಣುಗೋಪಾಲ
ಕಾಸರಗೋಡುರವರ “ನಾಯಿಬಾಲ”
ನಾಟಕವನ್ನು ಕಾಸರಗೋಡಿನಿಂದ ಬೆಂಗಳೂರಿನವರೆಗೆ ಸುಮಾರು 108 ಪ್ರದರ್ಶನ ನೀಡಿರುವುದೇ ಈ ಲಾರಿ ನಾಟಕದ
ಹೆಚ್ಚುಗಾರಿಕೆ. ಕಾಸರಗೋಡಿನ ನಾಟಕಕಾರ, ಭ್ರಷ್ಟಾಚಾರದ ವಸ್ತುವನ್ನಿಟ್ಟುಕೊಂಡು ರಚಿಸಿದ ಈ ನಾಟಕಕ್ಕೆ
ಅಪಾರ ಜನಮನ್ನಣೆ ಲಭಿಸಿತು. ಅಂದರೆ ಕಾಸರಗೋಡಿನಿಂದ ಹೊರಟ
ಈ ವಸ್ತು ವಿಷಯಕ್ಕೆ
ಸಮಗ್ರ ಕರ್ನಾಟಕದ ಅಥವಾ ಅದನ್ನೂ ಮೀರಿದ
ಜಾಗೃತಿಯ ಗುಣವಿದೆ ಎನ್ನುವ ಅರಿವಾಯಿತು.
ಇದೇ
ಸಮಗ್ರತೆಯ ವ್ಯಾಪ್ತಿ ಇದ್ದ ಇನ್ನೊಂದು ನಾಟಕ
“ಮಳೆ ನಿಂತ ಮೇಲೆ”. ಸಾಂತ್ವಾನ
ಯಾತ್ರೆ ಎನ್ನುವ ಹೆಸರಿನಿಂದ ಹೊರಟ
ಈ ರಂಗಸಂಚಾರದ ಹಿಂದೆ,
ಉತ್ತರ ಕರ್ನಾಟಕದ ನೆರೆ ದುರಂತದ ಹಿನ್ನಲೆಯಿತ್ತು.
ರತ್ನಾಕರ ಮಲ್ಲಮೂಲೆಯವರು ರಚಿಸಿದ ಈ ನಾಟಕ,
ದುಃಖ, ನೋವು, ಸಂಕಟ, ಕಷ್ಟಗಳಿಗೆ-
ಭಾಷೆ, ಪ್ರದೇಶ, ಮತ್ತಿತರ ಎಲ್ಲೆಗಳಿಲ್ಲ,
ಮಾನವ ಪರವಾದ ನಿಲುವುಗಳು ಯಾವ
ನೆಲೆಯಿಂದ ದೊರಕಿದರೂ ಮಹತ್ವವಾದುದು ಎನ್ನುವುದನ್ನು ಸಾರಿತು. ನಟ, ನಿರ್ದೇಶಕ,
ಸಂಘಟಕ ಹೀಗೆ ರಂಗಭೂಮಿಯ ಸಾಮಿಪ್ಯದೊಂದಿಗೆ
ಸದಾ ಇರುವ ಉಮೇಶ ಎಂ.ಸಾಲಿಯಾನ್ರವರು ಈ ನಾಟಕವನ್ನು
ನಿರ್ದೇಶಿಸಿ, ಯಾತ್ರೆ ಮೂಲಕ ದಾಖಲೆ
ನಿರ್ಮಿಸಿದರು. ಸಂತ್ರಸ್ತರಿಗೆ ನಿಧಿ ಸಂಗ್ರಹಿಸುವ ಉದ್ದೇಶಕ್ಕೆ
ಹೊರಟ ಈ ಯಾತ್ರೆ, ಜನಮನ್ನಣೆಯ
ಜೊತೆಗೆ ನಿಧಿ ಸಂಗ್ರಹಿಸಿ ಸರಕಾರಕ್ಕೆ
ಹಸ್ತಾಂತರಿಸಿತು. ಇದು ಕನ್ನಡ ರಂಗಭೂಮಿಯ
ಸಾಮಥ್ರ್ಯವನ್ನು ಗಡಿನಾಡಿನ ರಂಗಾಸಕ್ತರು ಸಾಬೀತುಪಡಿಸಿದ ರೀತಿ.
ರಂಗ
ಸಂಘಟನೆ
: ಕಾಸರಗೋಡಿನಲ್ಲಿ ನಾಟಕ ರಚನೆ, ನಿರ್ದೇಶನ,
ಪ್ರದರ್ಶನ ಇವು ಕಳೆದ ಶತಮಾನಗಳಿಂದ
ನಿರಂತರ ನಡೆಯುತ್ತಾ ಬಂದ ಪ್ರಕ್ರಿಯೆ. ಇಲ್ಲಿಯ
ನಟರ ಸಂಖ್ಯೆ ಅಪಾರವಾದುದು. ಅವರೆಲ್ಲರನ್ನು
ದಾಖಲಿಸುವುದಕ್ಕೆ ಈ ಮಿತಿಯೊಳಗೆ ಸಾಧ್ಯವಿಲ್ಲ.
ಆದರೆ ಅನೇಕ ರಂಗ ಸಂಘಟನೆಗಳಿಗೂ
ಈ ಪ್ರದೇಶ ಹೆಸರುವಾಸಿಯಾಗಿದೆ.
ಈ ಸಂಘಟನೆಯಲ್ಲೂ ಕೆಲವನ್ನು
ಬಿಟ್ಟಿರುವ ಸಾಧ್ಯತೆ ಇದೆ. ಹಾಗಾಗಿ
ಇದೇ ಅಂತಿಮವಲ್ಲ, ಇನ್ನೂ ಕೆಲವು ಸೇರ್ಪಡೆಗೊಳ್ಳಬೇಕು.
ನನ್ನ ಗಮನಕ್ಕೆ ಈ ಸಂಘಟನೆಗಳು
ಬಂದಿವೆ. ಅವೆಂದರೆ ವಿವೇಕಾನಂದ ಕಲಾ
ಸಂಘ, ನಿತ್ಯಾನಂದ ಕಲಾವೃಂದ, ಕೆ.ಸಿ.ಸ್ಟೋರ್ಸ್
ನೌಕರರ ಕಲಾವೃಂದ, ಆರ್ಯ ಕಾತ್ಯಾಯಿನಿ ಕಲಾ
ಸಂಘ, ಲಲಿತ ಕಲಾ ಸದನ,
ನಂದಿಕೇಶ್ವರ ನಾಟಕ ಸಂಘ(ವೃತ್ತಿ),
ಬೆಳ್ಳೂರಿನ ಉಮಾಮಹೇಶ್ವರ ನಾಟಕ ಸಂಘ(ವೃತ್ತಿ),
ಕೂಡ್ಲು ಯುವಕ ಸಂಘ, ಯವನಿಕಾ,
ಅಪೂರ್ವ ಕಲಾವಿದರು, ತರುಣ ಕಲಾ ವೃಂದ,
ನಟನಾ ಕಾಸರಗೋಡು, ಗಡಿನಾಡ ಕಲಾವಿದರು,s ಸರಿತಾ
ಬಳಗ, ಗೀತಾ ವಿಹಾರ, ಮಿತ್ರ
ಕಲಾ ವೃಂದ, ಚಿನ್ನಾರಿ, ಸ್ವಸ್ತಿಕ್
ಕಲಾವಿದರು, ಓಜಾ ಸಾಹಿತ್ಯ ಕೂಟ,
ಗಿಳಿವಿಂಡು, ನಿಸರ್ಗ ಕಲಾವಿದರು, ಎಸ್.ಆರ್.ಎಸ್ ಕ್ಲಬ್,
ಸಂಗಮ ಕಲಾವಿದರು, ಅಶೋಕ ನಗರ ಆಟ್ಸ್
ಎಂಡ್ ಸ್ಪೋಟ್ಸ್ ಕ್ಲಬ್, ಪಂಚಲಿಂಗೇಶ್ಯರ ಕಲಾವೃಂದ,
ಪಂಚಶ್ರೀ ಕಲಾವೃಂದ, ಹೆದ್ದಾರಿ ಶಾಲಾ ಮಿತ್ರ ಮಂಡಳಿ,
ಭಾರತಿ ಕಲಾಸದನ, ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ, ಆದರ್ಶ
ಯುವಕ ಸಂಘ, ಹವ್ಯಾಸಿ ರಂಗ
ಸಂಸ್ಥೆ, ಧರ್ಮ ಶಾಸ್ತ ಕಲಾ
ಸಂಘ, ನವರಂಗ ಆಟ್ರ್ಸ್, ಸಹೋದರ
ಕಲಾ ವೃಂದ, ಪ್ರತಿಭಾ ಮುಳ್ಳೇರಿಯಾ,
ಮಿತ್ರ ಬೆಳ್ಳೂರು, ಶಿವ ಶಕ್ತಿ ಮಲ್ಲಾವರ,
ರಂಗ ಜಾಗೃತಿ, ಸಂದ್ಯಾ ಸಂಗಮ
ಕುಂಬ್ಳೆ, ವೈಷ್ಣವೀ ಕಲಾವಿದರು, ಶಾರದಾ
ಆಟ್ಸ್ ಎಂಡ್ ಸ್ಪೋಟ್ಸ್ ಮಂಜೇಶ್ವರ ಇವೇ
ಮೊದಲಾದುವು. ಈ ರಂಗ ಸಂಘಟನೆಗಳು
ನಾಟಕ ಪ್ರದರ್ಶನದ ಜೊತೆಗೆ ವಿಚಾರ ಸಂಕಿರಣ,
ರಂಗ ಕಾರ್ಯಾಗಾರ, ರಚನಾ ಕಮ್ಮಟ ಇತ್ಯಾದಿಗಳನ್ನು
ನಡೆಸಿವೆ.
ಮುಕ್ತಾಯ:
ಕಾಸರಗೋಡು ಎನ್ನುವ ಪುಟ್ಟ ವ್ಯಾಪ್ತಿ
ಮತ್ತು ಸದಾ ಸವಾಲಿನಲ್ಲೇ ಕಾಲಕಳೆಯಬೇಕಾದ
ಈ ಪ್ರದೇಶದಲ್ಲಿ ಅನೇಕ
ಕನ್ನಡ ನಾಟಕಗಳು, ನಿರ್ದೇಶಕರು, ನಟರು, ನಾಟಕ ಸಂಘಟನೆಗಳು
ಮತ್ತು ಹೊಸತನದ ಪ್ರಯೋಗಗಳು ಹುಟ್ಟಿಕೊಂಡದ್ದನ್ನು
ಗಮನಿಸುವಾಗ ಆಶ್ಚರ್ಯ ಹುಟ್ಟುತ್ತದೆ. ಅನ್ಯ
ಭಾಷೆಗಳ ಪ್ರಭಾವಕ್ಕೆ ಒಳಗಾಗದೇ ಸ್ವತಂತ್ರ ನೆಲೆಯಲ್ಲಿ
ಈ ನಾಟಕಗಳು ತನ್ನ
ವ್ಯಾಪ್ತಿಯನ್ನೂ ಮೀರಿ ವಿಸ್ತರಿಸಲ್ಪಟ್ಟದೇ ಒಂದು
ಘನಸ್ಥಿಕೆಯ ಸಂಗತಿ. ಇಂತಹಾ ಘನಕಾರ್ಯಕ್ಕೆ
ಇಂದು ಮಾತ್ರ ತಡೆಯಾಗುತ್ತಿದೆ. ಯಾವ
ಕಲೆಗೆ ಇಲ್ಲಿಯ ಅನ್ಯಭಾಷೆಯ ಸೋಂಕು
ಒಂದಿನಿತೂ ತಾಗಿಲ್ಲವೋ ಅದೇ ಕಲೆಗೆ ಅನ್ಯಭಾಷೆಗಳು
ರೋಗವಾಗಿ ಪೀಡಿಸುತ್ತಿವೆ. ಇದನ್ನು ಗಮನಿಸಬೇಕಾದ, ಅದಕ್ಕೆ
ಉತ್ತರ ರೂಪವಾಗಿ ಸಂಘಟನೆಯನ್ನು ಬಲಗೊಳಿಸಬೇಕಾದ
ಅನಿವಾರ್ಯ ಈ ಪ್ರದೇಶದ ನಮಗೆ
ನಿಮಗೆ ಎಲ್ಲರಿಗೆ ಇದೆ. ಇದೇ ಪ್ರಾದೇಶಿಕ
ಅಸ್ಮಿತೆ ಅಥವಾ ಮಣ್ಣಿನ ವಾಸನೆಯನ್ನು
ಆಘ್ರಾಣಿಸುವ ವಿಧಾನ ಎನ್ನುವುದು ನನ್ನ
ಅನಿಸಿಕೆ.
ಡಾ.ಸುಂದರ ಕೇನಾಜೆ
(ಕನ್ನಡ ನಾಟಕ: ವಸ್ತು-ವಿನ್ಯಾಸ, ಕನ್ನಡ ನಾಟಕಗಳ ಪ್ರಾದೇಶಿಕ
ನೆಲೆ ರಾಷ್ಟ್ರೀಯ ವಿಚಾರ ಸಂಕಿರಣ, ಸರಕಾರಿ
ಕಾಲೇಜು ಕಾಸರಗೋಡು. 11.10.2018)
Comments
Post a Comment