ಪ್ರೊ. ಜಿ.ಎಸ್. ಭಟ್ಟರ ಕಾದಂಬರಿ
ಹೆಗ್ಗೋಡಿಗೆ ಹೋಗಿ ಬರುವಾಗ ಸಾಗರದಲ್ಲಿ ಹಿರಿಯ ಸಾಹಿತಿ, ವಿದ್ವಾಂಸ ಡಾ.ಜಿ.ಎಸ್.ಭಟ್ಟರನ್ನು ಮಾತನಾಡಿಸಬೇಕೆಂದು ಅವರ ಮನೆಗೆ ಹೋದೆ.(ಜೊತೆಗೆ ಡಾ.ಎಂ.ಸಿ ಮನೋಹರ್ ಇದ್ದರು) ಕಳೆದ ಎಂಟು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ತೀರಾ ಜರ್ಝರಿತರಾಗಿದ್ದ ಭಟ್ಟರು ಜೀವನೋತ್ಸಾಹಕ್ಕೆ ಇನ್ನೊಂದು ಹೆಸರು ಎಂಬಂತೆ ಮರು ಹುಟ್ಟು ಪಡೆದಿದ್ದರು. ಆಗ ಮಣಿಪಾಲ ಆಸ್ಪತ್ರೆಯ ಐಸಿಯು ನಲ್ಲಿ ತಿಂಗಳುಗಟ್ಟಲೆ ಮಲಗಿದವರು ಇವರೇನಾ? ಎನ್ನುಷ್ಟರ ಮಟ್ಟಿನ ಚೇತರಿಕೆ ಲವಲವಿಕೆ ಕಂಡು ಖುಷಿಪಟ್ಟೆ. ಅದೂ ಇದೂ ಮಾತನಾಡುತ್ತಾ ಯಕ್ಷಗಾನ ಪಠ್ಯವೊಂದನ್ನು ಕೊಟ್ಟೆ( ಇವರು ಸೀನಿಯರ್ ವಿಭಾಗದ ಪರಿಶೀಲಕರು ಕೂಡ) ಕೊನೆಗೂ ಪಠ್ಯ ಮುದ್ರಣಗೊಂಡದ್ದು ಕಂಡು ಖುಷಿಪಟ್ಟರು. ಹಿಡಿದ ಕೆಲಸಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಿದ್ದಕ್ಕೆ ಅಭಿನಂದಿಸಿದರು. ಅಪಘಾತದ ನಂತರ ಬಲಗೈಯ ಸ್ವಾಧೀನ ಕಳೆದುಕೊಂಡು ಎಡಗೈಯಲ್ಲಿ ಬರವಣಿಗೆಯ ಅಭ್ಯಾಸ ಬೆಳೆಸಿ ಆರು ಕೃತಿಗಳನ್ನು ಹೊರ ತಂದಿದ್ದಾರೆ ಈ ಹಿರಿಜೀವ! ಅದರಲ್ಲಿ ಮೂರನ್ನು ನನಗೆ ಕೊಟ್ಟರು. ಒಂದು ಕಾದಂಬರಿ, " ಓದಿ ನೋಡಿ, ನಾನು ಕಾದಂಬರಿ ಕ್ಷೇತ್ರದಲ್ಲಿ ಮುಂದುವರಿಯಬಹುದೋ ಹೇಳಿ" ( ಇಪ್ಪತ್ತು ವರ್ಷಗಳ ಹಿಂದೆ ಒಂದು ಕಾದಂಬರಿ ಪ್ರಕಟಿಸಿದ್ದಾರೆ) ಎಂದರು.
ಹಾಗೆ ೨೫೦ ಪುಟದ ಕಾದಂಬರಿಯನ್ನು ಓದಲು ಕುಳಿತೆ. ಇದೊಂದು ಹೊಸ ಅನುಭವವನ್ನು ಕೊಡಬಲ್ಲ ಕಾದಂಬರಿ. ಮಡಿವಂತಿಕೆಯಿಂದ ಮಾತನಾಡಲು ಹೇಸುವ, ಕ್ರಿಯೆಯನ್ನು ಸದಾ ಗುಪ್ತವಾಗಿರಿಸಲು ಅದರೆ ಸದಾ ಜೊತೆಯಾಗಿರಬೇಕೆಂದು ಬಯಸುವ ವಸ್ತುವೊಂದರ ಸುತ್ತ ಹೆಣೆದಿರುವ ಕಾದಂಬರಿ. ವಾತ್ಸಾಯನನ ಕಾಮಸೂತ್ರ, ವೃದ್ಧಾಪ್ಯದ ದಾಂಪತ್ಯ, ಅಧ್ಯಯನಕಾರನೋರ್ವನ ದೃಷ್ಟಿಕೋನ ಮತ್ತು ತನ್ನದೇ ಮನೆ, ಸುತ್ತಮುತ್ತ ನಡೆಯುವ ವಾಸ್ತವ ಇವುಗಳ ಸುತ್ತ ಸಾಗುವ ಕಥೆ. ಮನುಷ್ಯ ಬದುಕಿನ ಮುಖ್ಯ ಆದರೆ ಸಾಮಾಜಿಕ ನೆಲೆಯ ಅಮುಖ್ಯ ಎಂದು ತೋರ್ಪಡಿಸಲ್ಪಡುವ ಹೆಣ್ಣು-ಗಂಡಿನ ಸಂಬಂಧಗಳ ಗಡಿಗಳನ್ನು ಬ್ರಹ್ಮಚಾರಿ ವಾತ್ಸಾಯನ ಗುರುತಿಸಿದ ರೀತಿ ಮತ್ತು ಇನ್ನೂ ಅನುಭವ ಪಡೆಯದ ತರುಣನೋರ್ವನ ಸಂಶೋಧನೆ ಇದನ್ನು ಸಮಾಜದ ವಾಸ್ತವದ ಜೊತೆಗೆ ಸಮೀಕರಿಸಿ ನೋಡುವ ಬಗೆ ಕಾದಂಬರಿಯ ತಿರುಳು. ಆದರೆ ಅನುಭವ ಪಡೆದ ದಂಪತಿಗಳ ಒಳಗಿನ ಬೇಗುದಿ, ಹತಾಶೆ, ಹಪಾಹಪಿ ಆ ಮೂಲಕ ಕಾಣುವ ದುರಂತಗಳು,- ಮುಚ್ಚಿಡಲು ಬಯಸುವ ಒಂದು ಸಂಗತಿ ಏನೆಲ್ಲಾ ಪರಿಣಾಮವನ್ನು ಬೀರುತ್ತದೆ ಎನ್ನುವುದನ್ನು ಕಾದಂಬರಿ ಮೂಲಕ ಚಿತ್ರಿಸಲಾಗಿದೆ.
ಇಲ್ಲಿ ಓರ್ವ ಮನೋವಿಜ್ಞಾನಿ ಅಥವಾ ಲೈಂಗಿಕ ತಜ್ಞ ಹೇಳುವ ಸಹಜ ಧಾಟಿಯಲ್ಲಿ ಕಾದಂಬರಿಗಾರ ಹೇಳಿದ್ದಾರೆ. ಕಾದಂಬರಿ ಪೂರ್ವಾರ್ಧದ ಉದ್ದೇಶಿತ ಗೊಂದಲಕ್ಕೆ ಉತ್ತರಾರ್ಧದ ನಿಖರ ಉತ್ತರ ಜಿ.ಎಸ್.ಭಟ್ಟರನ್ನು ಓರ್ವ ಉತ್ತಮ ಕಾದಂಬರಿಗಾರನ ಸಾಲಿಗೆ ತಂದು ನಿಲ್ಲಿಸುತ್ತದೆ. ತನ್ನ ಎಪ್ಪತ್ತಾರರ ಹರೆಯ ಅದರಲ್ಲೂ ಆಕಸ್ಮಿಕ ವೈಕಲ್ಯ ಇವುಗಳ ಮಧ್ಯೆ ವಾತ್ಸಯನ ಮತ್ತು ನಮ್ಮ ಸುತ್ತಲಿನ ಅಗೋಚರ ಆದರೆ ಗೋಚರ ವಸ್ತುವನ್ನಿರಿಸಿ ಸಹಜ ಅಭಿವ್ಯಕ್ತಿಯಲ್ಲಿ ಕಾದಂಬರಿ ರಚಿಸಿರುವುದು ಜಿ.ಎಸ್.ಭಟ್ಟರ ಅಧ್ಯಯನ ಮತ್ತು ಬದುಕಿನ ಉತ್ಸಾಹದ ಪರಿಯನ್ನು ಪರಿಚಯಿಸುತ್ತದೆ. ಎಲ್ಲೂ ಗಡಿ ಮೀರದ, ಅಶ್ಲೀಲವೆಂದೆಣಿಸದ, ಪ್ರಕೃತಿ ನಿಯಮಕ್ಕೆ ಧಕ್ಕೆ ಬಾರದ ರೀತಿಯ ವಿವರಣೆ ಈ ಕಾದಂಬರಿಯದು. ಮನುಷ್ಯ ಸಂಬಂಧಗಳ ನೆಲೆಯಲ್ಲಿ ಕಾಮದ ಬಳಕೆ ಮತ್ತು ದುರ್ಬಳಕೆ ಹೇಗೆ? ಏನು? ಎನ್ನುವ ಚರ್ಚೆಗೆ ಈ ಕಾದಂಬರಿಯಲ್ಲಿ ಖಚಿತ ಉತ್ತರವಿದೆ.
ಹಲವು ವಿದ್ವತ್ಪೂರ್ಣ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟ ಹಿರಿಯರಾದ ಜಿ.ಎಸ್.ಭಟ್ ಕಾದಂಬರಿ ಬರೆಯಬಹುದಾದ ಎಲ್ಲಾ ಶಕ್ತಿ ಸಾಮರ್ಥ್ಯ ಹೊಂದಿದ್ದಾರೆ ಎಂದು ಮತ್ತೊಮ್ಮ ಸಾಬೀತು ಪಡಿಸಿದ್ದಾರೆ. ಹೀಗೇ ನೂರ್ಕಾಲ ಬರೆಯುತ್ತಾ ಓದಿಸುತ್ತಾ ನಮ್ಮ ಮಧ್ಯೆ ಈ ಹಿರಿಜೀವ ಖುಷಿಪಡುತ್ತಿರಲಿ ಎಂದು ಬಯಸುತ್ತೇನೆ.
19.10.2019 ಡಾ.ಸುಂದರ ಕೇನಾಜೆ
Comments
Post a Comment