ಮಕ್ಕಳ ಮಾಯಾಲೋಕ


                                                       ಮಕ್ಕಳ ಮಾಯಾಲೋಕದ ವಾಸ್ತವ ಲೋಕ
                ಕನ್ನಡ ರಂಗಭೂಮಿ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಪರದಾಡುತ್ತಿರುವ ಕಾಲಘಟ್ಟದಲ್ಲಿ ಪುಟ್ಟ ಪುಟ್ಟ ಮಕ್ಕಳನ್ನು ಇಟ್ಟುಕೊಂಡು ಅವರಿಗೆ ದಿನವಿಡೀ ದಿನಗಟ್ಟಲೆ ತರಬೇತಿ ನೀಡಿ ರಂಗದ ಮೇಲೆ ತಂದು ನಿಲ್ಲಿಸುವುದು ಸಾಮಾನ್ಯದ ಕೆಲಸವಲ್ಲ. ತಾಳ್ಮೆ, ಏಕಾಗ್ರತೆ ಮತ್ತು ಮಕ್ಕಳೊಡನೆ ಬೆರೆಯುವ ಇಚ್ಚಾಶಕ್ತಿ ಇರುವ ವ್ಯಕ್ತಿಗಳಿಂದ ಮಾತ್ರ ಅದು ಸಾಧ್ಯ. ಸಾಧ್ಯತೆಯ ಹೆಜ್ಜೆ ಗುರುತನ್ನು ಕಳೆದೆರಡು ದಶಕಗಳಿಂದ ಕರಾವಳಿಯಲ್ಲಿ ಮೂಡಿಸುತ್ತಾ ಬಂದವರು ರಂಗಮನೆಯ ನಿರ್ದೇಶಕ ಜೀವನ್ರಾಂ ಸುಳ್ಯ. ಒಬ್ಬ ಸೃಜನಶೀಲ ನಿರ್ದೇಶಕನ ಕೈಗೆ ಒಂದೇ ವಸ್ತುವಿನ ಕಥೆ ದೊರತರೂ ಅದನ್ನು ಹೇಗೆ ಜನರಂಜಿತವಾಗಿ ರೂಪಿಸಬೇಕು ಎನ್ನುವ ಪ್ರಜ್ಞೆ ಜಾಗ್ರತಾವಸ್ಥೆಯಲ್ಲಿ ಇರುವವರಲ್ಲಿ ಜೀವನ್ರಾಂ ಮೊದಲಿಗರು. ಮಕ್ಕಳ ನಾಟಕವನ್ನು ಮಕ್ಕಳು ಮತ್ತು ದೊಡ್ಡವರು ಇಬ್ಬರೂ ಸಮಾನವಾಗಿ ಆಸ್ವಾದಿಸುವುದಾದರೆ ಅದಕ್ಕೆ ಜೀವನ್ ನಿರ್ದೇಶಿಸಿದ ನಾಟಕಗಳಿಗಿಂತ ಬೇರೆ ಹುಡುಕುವುದು ಕಷ್ಟ. ಅನೇಕ ಬಾರಿ ಅವರು ಬಳಸುವ ಕಾಸ್ಟಿಮ್ಗಳು ರಂಗಕ್ಕೆ ಭಾರವೆಂದೆನಿಸಿದರೂ ಪ್ರತೀ ಬಾರಿಯ ತಂತ್ರ ಹೊಸತನದಿಂದ ಕೂಡಿರುವಂತದ್ದು ಮತ್ತು ಕುತೂಹಲಕಾರಿಯಾದುದು. ಇದಕ್ಕೆ ಒಳ್ಳೆಯ ನಿದರ್ಶನ ಅವರು ಬಾರಿ ನಿರ್ದೇಶಿಸಿ ಇತ್ತೀಚೆಗೆ ರಂಗಮನೆಯಲ್ಲಿ ಪ್ರದರ್ಶಿಸಿದಮಕ್ಕಳ ಮಾಯಾಲೋಕ ನಾಟಕ.
         ನಾಟಕವನ್ನು ಜೀವನ್ ಎರಡನೇ ಬಾರಿ ನಿರ್ದೇಶಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಆಳ್ವಾಸ್ ಪ್ರೌಢ ಮಕ್ಕಳು ಮತ್ತು ಬಾರಿಯ ಸುಳ್ಯದ ಆಸುಪಾಸಿನ ಬಹತೇಕ ಪುಟ್ಟ ಮಕ್ಕಳು, ಎರಡೂ ಪ್ರಯೋಗದಲ್ಲೂ ತನ್ನದೇ ಆದ ಹೊಸತನವನ್ನು ತಂದಿದ್ದಾರೆ. ಮೂಲ ಕತೆಯಾದರಿಸಿ ಇಂಗ್ಲೀಷ್ನಲ್ಲಿ ತಯಾರಾಗಿರುವ ಮಕ್ಕಳ ಸಿನಿಮಾಕ್ಕೂ ನಾಟಕದ ರೂಪಾಂತರಕ್ಕೂ ಒಂದಷ್ಟು ವ್ಯಸ್ಯಾಸ ಇದ್ದೇ ಇದೆ. ಹಾಗೆ ನೋಡಿದರೆ ಸಿನಿಮಾವನ್ನು ನಾಟಕವಾಗಿಸಿವುದು ಕಷ್ಟಸಾಧ್ಯದ ಮಾತು. ಆದರೆ ಜೀವನ್ರಾಂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಮೊದಲ ತಂಡದ ಪ್ರಯೋಗಕ್ಕಿಂತ ಈಗಿನ ಹೊಸ ತಂಡದ ಪ್ರಸ್ತುತಿಯನ್ನು ಸಿನಿಮಾ ಏನಿಮೇಷನ್ನಂತೆ ನೋಡಿಕೊಂಡಿದ್ದಾರೆ.  ಅದೇ ರೀತಿ ಸಿನಿಮಾಕ್ಕೂ ನಾಟಕಕ್ಕೂ ತೆಳುವಾದ ಪರದೆ ಎಳೆದಿದ್ದಾರೆ. ಆದರೆ ಸಿನಿಮಾದಲ್ಲಿ ಬರುವ ಜಕ್ಕಿಣಿಯ ಪಾತ್ರ ಸಪ್ಪೆ ಎನಿಸಿದರೆ ನಾಟಕದಲ್ಲಿ ಅದು ತೆಂಕುತಿಟ್ಟು ಯಕ್ಷಗಾನದ ಹೆಣ್ಣು ಬಣ್ಣದ ವೇಷದಂತೆ ವಿಜೃಂಭಿಸುತ್ತದೆ. ಅಸ್ಲಾನ್ ತುಂಡಾದ ತಲೆ ಗರಗರನೆ ತಿರುಗುವುದು,ಖಾಲಿ ಪೆಟ್ಟಿಗೆಯಲ್ಲಿ ಇದ್ದಕ್ಕಿದ್ದಂತೆ ತಿಂಡಿ ಪ್ರತ್ಯಕ್ಷವಾಗುವುದು, ಒಣಗಿದ ಮರ ಹಸುರಾಗಿ ಚಿಗುರುವುದು ಹೀಗೆ ಮಧ್ಯೆ ಮಧ್ಯೆ ಪ್ರಯೋಗಿಸಲ್ಪಟ್ಟ ಜಾದು, ಒಂದು ಚಿಕ್ಕ ಪರದೆಯಿಂದ ಹಿಡಿದು ಚಲಿಸುವ ರಥದ ವರೆಗಿನ ದುಬಾರಿ ರಂಗಸಜ್ಜಿಕೆ, ಒಂದು ಸಣ್ಣ ಬಿಂದುವನ್ನಾದರೂ ನಿರ್ದಿಷ್ಟಪಡಿಸುವ ಕರಾರುವಕ್ಕಾದ ಬೆಳಕಿನ ವಿನ್ಯಾಸ ಮತ್ತು ಕಿವಿಗೆ ಹೊಂದಿಕೆಯಾಗಿ ಗುನುಗುನಿಸಬಹುದಾದ ಹಿನ್ನಲೆ ಸಂಗೀತ ಇದು ಜೀವನ್ ಪ್ರತಿಭೆ,ಇವುಗಳಿಂದ ನಾಟಕ ಅಡ್ಡಿ ಇಲ್ಲದೇ ಒಂದೂಮುಕ್ಕಾಲು ಗಂಟೆ ಕುಳ್ಳಿರಿಸುತ್ತದೆ.
          ಹೆಚ್ಚು ಕಡಿಮೆ ಹದಿನೈದು ವರ್ಷಗಳೊಳಗಿರುವ ಮಕ್ಕಳ ತಂಡದ ಬಹುತೇಕ ಎಲ್ಲಾ ಮಕ್ಕಳನ್ನು ಒಂದು ತಿಂಗಳ ಕಾಲಾವಧಿಯಲ್ಲಿ ತಿದ್ದಿ ತೀಡಿದ್ದಾರೆ. ಪ್ರಧಾನ ಪಾತ್ರಗಳಾದ ಎಡ್ಮಂಡ್(ವಿಕ್ರಮ್ ಚಂದ್ರ ),ಲೂಸಿ(ಕ್ಷಮಾ ಅಂಬೆಕಲ್ಲು),ಪೀಟರ್(ಪ್ರಣವ ಬೆಳ್ಳಾರೆ)ಜಕ್ಕಿಣಿ(ರಚನಾ ಎನ್.ಆರ್ )ಇವರು ತಮ್ಮ ವಯಸ್ಸಿಗೂ ಮೀರಿದ ನಟನೆಯನ್ನು ವ್ಯಕ್ತಪಡಿಸಿದ್ದಾರೆ. ಉಳಿದಂತೆ ಶುಶಾನಿ(ಪೂರ್ಣಪ್ರಸಾದ್),ಅಸ್ಲಾನ್ (ವಿನ್ಯಾಸ್ಚಂದ್ರ ವೈ),ನೀರು ನಾಯಕ( ಭವಿತ್ ಶೆಟ್ಟಿ )ಟ್ಯುಮ್ನಸ್ (ಸನತ್ ಕುಮಾರ್) ಇವರೆಲ್ಲರೂ ಮೆಚ್ಚುವಂತೆ ಅಭಿನಯಿಸಿದ್ದಾರೆ. ಸಹಕಲಾವಿದರಾಗಿದ್ದ ಎಲ್ಲಾ ಮಕ್ಕಳೂ ನಟನಾ ಸಂಹಿತೆಗೆ ಎಲ್ಲೂ ದಕ್ಕೆ ಬಾರದಂತೆ ನೋಡಿಕೊಂಡಿದ್ದಾರೆ. ಐದು ವರ್ಷದಿಂದ ಹದಿನೈದು ವರ್ಷದ ವರೆಗಿನ ಮಕ್ಕಳನ್ನು ರಂಗದ ಮೇಲೆ ತರಲೇಬೇಕೆಂಬ ಜೀವನ್ರಾಂರವರ ಹಠಕ್ಕೆ ಯಶಸ್ಸು ಲಭಿಸಿದೆ. ಮಕ್ಕಳ ನಾಟಕಕ್ಕೆ ಇನ್ನೊಬ್ಬನಿಲ್ಲ ಎಂಬಂತೆ ಹಲವು ನಾಟಕ ನಿರ್ದೇಶಿಸಿ ಅದೆಷ್ಟೊ ಪ್ರದರ್ಶನ ನೀಡಿದ ಜೀವನ್ರಾಮರ ಪ್ರಯತ್ನಕ್ಕೊಂದು ಗರಿ ಮೂಡಿದೆ. ಮಕ್ಕಳನ್ನೇ ಗುರಿಯಾಗಿರಿಸಿ ಸುಳ್ಯದಂತಹಾ ಗ್ರಾಮೀಣ ನೆಲವನ್ನೇ ಕರ್ಮಭೂಮಿಯಾಗಿಸುತ್ತಿರುವ ಜೀವನ್ ರಂಗ ಚಟುವಟಿಕೆಯ ವಿಸ್ತøತರೂಪಕ್ಕೆ ನಾಟಕವೂ ಸೇರುತ್ತದೆ.

  (ಉದಯವಾಣಿ ಕಲಾವಿಹಾರ ಪ್ರಕಟಿತ 23.05.2014)                                                       ಡಾ.ಸುಂದರ ಕೇನಾಜೆ
                                                                           
                                                                     

Comments