ವಲಸೆಯಲ್ಲಿನ ಸಮನ್ವಯ

                                                 ವಲಸೆಯಲ್ಲಿನ ಸಮನ್ವಯ-ಡಾ.ಬಿಳಿಮಲೆ ಕೃತಿ

         ಈ ಕೃತಿ ಪ್ರಕಟಗೊಂಡು ನಾಲ್ಕು ತಿಂಗಳುಗಳೇ ಕಳೆಯಿತು. ಓದಿ ಮುಗಿಸಿ ತಿಂಗಳೆರಡೂ ಕಳೆದು ಹೋಯಿತು. ಕೃತಿ ಪ್ರಕಟಗೊಳ್ಳಲು ತೆಗೆದುಕೊಂಡ ಸುದೀರ್ಘ ಕಾಲದಂತೆ ಅದರ ಬಗ್ಗೆ ಹೇಳಿಕೊಳ್ಳಲೂ ಸಮಯ ಬೇಕಾಗಿತ್ತೋ ಎಂದು ಅನಿಸುತ್ತಿರುವಾಗಲೇ ಬರೆಯಬೇಕೆಂದೆನಿಸಿ ಬರೆಯುತ್ತಿದ್ದೇನೆ. ಯಾವುದೇ ಒಂದು ವಿಷಯ, ಸಂದರ್ಭಗಳು ಘಟಿಸಲು ಅದರದೇ ಆದ ಸನ್ನಿವೇಶಗಳು ನಿರ್ಮಾಣಗೊಂಡರೆ ಅದು ಹೆಚ್ಚು ಪರಿಣಾಮಕಾರಿ. ಈ ಕೃತಿಯೂ ಪ್ರಕಟಗೊಳ್ಳಲು ಹಾಗೇ ಕಾಲ ತೆಗೆದುಕೊಂಡಿರಬಹುದೋ ಏನೋ? ಏನೇ ಇರಲಿ, ಜಗತ್ತಿನ ಚರಿತ್ರೆಯ ಪ್ರಧಾನ ಘಟನೆಗಳಲ್ಲಿ ಜನಾಂಗೀಯ ವಲಸೆಗಳೇ ಮುಖ್ಯವಾಗಿ ತುಂಬಿಹೋಗಿವೆ. ಎಂದೋ ನಡೆಯುತ್ತಾ ಬಂದ ಈ ವಲಸೆಗಳು ಇಂದೂ ನಡೆಯುತ್ತಲೇ ಇವೆ. ನದಿಗಳ ಸಂಗಮದಂತೆ ಮತ್ತೆ ಒಟ್ಟಾಗಿ ಹರಿಯುತ್ತಲೂ ಇವೆ. ಆದ್ದರಿಂದ ಈ ವಲಸೆಗಳೇ ನಮ್ಮ ಚರಿತ್ರೆಯ ಆಧಾರ ಸ್ಥಂಭಗಳು.
        ಇತಿಹಾಸದ ವಿದ್ಯಾರ್ಥಿಯೂ ಆದ ನಾನು ವಲಸೆಗಳಿಂದ ಸಂಘರ್ಷವಾದುದ್ದನ್ನು ಮತ್ತೆ ಸಮನ್ವಯಗೊಂಡು ತಿಳಿಗೊಂಡದ್ದನ್ನು ಅಲ್ಲಲ್ಲಿ ಓದಿದ್ದೇನೆ. ಅದರೆ ಅದೇ ಸಮನ್ವಯತೆ ಮತ್ತೆ ಸಂಘರ್ಷಕ್ಕಿಳಿದು ವಿಘಟನೆಯ ದಾರಿಯತ್ತ ಸಾಗಿದ್ದನ್ನು ಓದಿರುವುದು ಕಡಿಮೆ. ಆದರೆ ವರ್ತಮಾನ ಇದಕ್ಕೆ ಅಪವಾದವಾಗುತ್ತಿದೆ. ಈ ಹಂತದಲ್ಲಿ ಡಾ. ಪುರುಷೋತ್ತಮ ಬಿಳಿಮಲೆಯವರ "ವಲಸೆ- ಸಂಘರ್ಷ ಮತ್ತು ಸಮನ್ವಯ" ಈ ಕೃತಿ ಪ್ರಕಟಗೊಂಡು ಎಲ್ಲವೂ ಸಮನ್ವಯದಲ್ಲಿ ನಿಲ್ಲಬೇಕೆಂದು ತಿಳಿ ಹೇಳುತ್ತದೆ. ಆ ಕಾರಣದಿಂದ ಇದು ಮಹತ್ವದ ಕೃತಿ ಎಂದು ತಿಳಿದಿದ್ದೇನೆ.
    ಒಂದು ಸೀಮಿತ ಪ್ರದೇಶದ ಅಷ್ಟೇ ಸೀಮಿತ ಸಂಖ್ಯೆಯ ಒಂದು ಜನಾಂಗ ಸುಮಾರು ಐನೂರು ವರ್ಷಗಳ ಹಿಂದೆ ಅನಿವಾರ್ಯ ಕಾರಣಗಳಿಗೆ ನಡೆಸಿದ ವಲಸೆ, ಆ ನಂತರದ ಕಾಲಘಟ್ಟದಲ್ಲಿ ಅಸ್ತಿತ್ವಕ್ಕಾಗಿ ಅಲ್ಪಕಾಲ ನಡೆಸಿದ ಸಂಘರ್ಷ, ಮುಂದೆ ದೀರ್ಘಕಾಲದ ಅನುಸಂಧಾನ( ಸಮನ್ವಯ) ಇವು ಈ ಅಧ್ಯಯನ ಕೃತಿಯ ಪ್ರಧಾನ ವಸ್ತು. ಆದರೆ ಇಂತಹದ್ದೇ ವಸ್ತುವಿನ ವ್ಯಾಪ್ತಿ ಜಿಲ್ಲೆ ರಾಜ್ಯ,ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಜಾತಿ, ಜನಾಂಗವನನ್ನು ಮೀರಿ ಧರ್ಮ, ರಾಜಕೀಯಗಳ ಆಧಾರಗಳಲ್ಲೂ ನಡೆದಿವೆ, ರಾಜರಾಜಗಳ ಸ್ವ ಹಿತಾಸಕ್ತಿಗಾಗಿಯೂ ನಡೆದಿವೆ.( ಹೆಚ್ಚು ನಡೆದದ್ದೇ ಹೀಗೆ) ಆದರೆ ಕುತೂಹಲಕಾರಿ ಸಂಗತಿ ಎಂದರೆ ಎಲ್ಲಾ ಕಡೆಯೂ (ಈ ಕೃತಿಯಲ್ಲೂ ತಿಳಿಸಿದಂತೆ) ಸಮನ್ವಯದ ಚರಿತ್ರೆಯನ್ನೇ ಕಟ್ಟಿ ನಿಲ್ಲಿಸಿರುವುದು ಹೆಚ್ಚು. ಈ ಸಮನ್ವಯದ ಚರಿತ್ರೆಗೆ ಸ್ವಾತಂತ್ರ್ಯಪೂರ್ವದ ಭಾರತವೂ ಅಪವಾದವಾಗಿರಲಿಲ್ಲ. ಆದರೆ ಸ್ವಾತಂತ್ರ್ಯಾನಂತರ ಅದರಲ್ಲೂ ಇತ್ತೀಚಿನ ಕೆಲವು ದಶಕಗಳ ಭಾರತ ಸಮನ್ವಯದ ಚರಿತ್ರೆಯಿಂದ ಬಹುದೂರ ಉಳಿಯುತ್ತಿದೆ. ಈ ಹಂತದಲ್ಲಿ ನಮ್ಮ ಜನಾಂಗೀಯ ಅಧ್ಯಯನಗಳಿಗೆ, ಪ್ರಾದೇಶಿಕ ಚರಿತ್ರೆಗಳಿಗೆ ಮತ್ತು ಜಾನಪದ ಸಂಗ್ರಹಗಳಿಗೆ ಬಹಳ ಮೌಲ್ಯವಿದೆ. ಅವುಗಳ ಪುನಃರವಲೋಕನ ಮಾಡಬೇಕಾಗುತ್ತದೆ. ಹಾಗೇ ಮಾಡುವುದರಿಂದ ಮನುಷ್ಯ ಸಂಬಂಧಗಳನ್ನು, ಸೌಹಾರ್ದ ಬದುಕನ್ನು, ಒಂದಾಗಿ ಸಾಗುವ ರೀತಿ ನೀತಿಗಳನ್ನು ಮತ್ತು ಸಾಂಸ್ಕೃತಿಕ ಅನುಸಂಧಾನಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
      ಬಿಳಿಮಲೆಯವರ ಈ ಕೃತಿ ಎಂಬತ್ತರ ದಶಕದಲ್ಲಿ ಅಂದರೆ ಸುಮಾರು ನಲ್ವತ್ತು ವರ್ಷಗಳ ಹಿಂದೆ ಸಂಗ್ರಹಿಸಿದ ಅಧ್ಯಯನಾಧರಿತ ಮಾಹಿತಿ ಮತ್ತು ವಿಶ್ಲೇಷಣೆ. ಇಲ್ಲಿ ಹೇಳಲ್ಪಟ್ಟ ಪ್ರದೇಶ ಮತ್ತು ಜನಾಂಗ ಒಂದು ಸಂಕೇತ ಮಾತ್ರ. ಯಾಕೆಂದರೆ ಇಂತಹಾ ಸಾವಿರಾರು ಪ್ರದೇಶ ಮತ್ತು ಜನಾಂಗಗಳು ಈ ರೀತಿಯ ವಲಸೆ, ಸಂಘರ್ಷ ಅಂತಿಮವಾಗಿ ಸಮನ್ವಯದ ದಾರಿಯನ್ನು ಕಂಡುಕೊಂಡಿವೆ. ಅದೇ ಭಾರತೀಯ ಚರಿತ್ರೆ. ಆದರೆ ಇಂತಹಾ ಚರಿತ್ರೆ ದಾಖಲಾದದ್ದು ಕಡಿಮೆ. ಈ ಕಡಿಮೆಯಾದ್ದರ ಪರಿಣಾಮವೇ ಇಂದಿನ ವಿಘಟನೆಗಳು. ಈ ವಿಘಟನೆಗಳು ಜಾತಿ- ಧರ್ಮದ ಹೆಸರಿನಲ್ಲಿ ನಡೆಯುತ್ತಿರುವುದಕ್ಕೆ ಮೂಲ ಕಾರಣ ವಲಸೆ ಮತ್ತು ಸಮನ್ವಯದ ಚರಿತ್ರೆ ಗೊತ್ತಿಲ್ಲದೇ ಕೇವಲ ಸಂಘರ್ಷದ ಚರಿತ್ರೆಯನ್ನು ಮಾತ್ರ ವೈಭವೀಕರಿಸುತ್ತಿರುವುದು. ಆದ್ದರಿಂದ ವಸ್ತು ನಿಷ್ಠವಾದ ಇಂತಹಾ ಸಮಗ್ರ ಅಧ್ಯಯನ ದಾಖಲಾತಿಗಳೇ ನಮ್ಮ ಚರಿತ್ರೆ. ಈ ಹಿನ್ನಲೆಯಿಂದ ನೋಡಿದಾಗ ಮಾತ್ರ ಇಂತಹಾ ಅಧ್ಯಯನಗಳ ಮಹತ್ವ ಕಾಣುವುದು.
ಹಾಸನದ ಐಗೂರು ಸೀಮೆಯಿಂದ ಐನೂರು ವರ್ಷಗಳ ಹಿಂದೆ ಸುಳ್ಯ ಭಾಗಕ್ಕೆ ಬೇರೆಬೇರೆ ಕಾರಣಗಳಿಂದ ವಲಸೆ ಬಂದವರು ಇಲ್ಲಿಯ ಗೌಡ ಜನಾಂಗದವರು. ಮುಂದೆ ಧರ್ಮ ಮತ್ತು ರಾಜಕೀಯ ಕಾರಣಕ್ಕಾಗಿ ಸ್ಥಳೀಯರೊಂದಿಗೆ ಒಂದಷ್ಟು ಸಂಘರ್ಷವನ್ನೂ ನಡೆಸುತ್ತಾರೆ.(ಹಾಗೆಂದು ಅದು ಅಕ್ರಮಣಕಾರಿ ಏನೂ ಅಲ್ಲ) ಮತ್ತೆ ತಮ್ಮ ಆಚರಣೆ, ಆರಾಧನೆ ಮತ್ತು ಇತರ ಸಾಂಸ್ಕೃತಿಕ ಹಿನ್ನಲೆಗಳಿಂದ ಸುಳ್ಯ ಪರಿಸರದ ಜನರೊಂದಿಗೆ ಒಂದಾಗುತ್ತಾರೆ. ಈ ಒಂದಾಗುವಿಕೆ ನಿರಂತರವಾಗಿ ಉಳಿಯುತ್ತದೆ ಎನ್ನುವುದನ್ನು ಈ ಅಧ್ಯಯನ ಸಮರ್ಪಕ ಆಧಾರಗಳೊಂದಿಗೆ ಸಮರ್ಥಿಸುತ್ತದೆ. ಸಂಘರ್ಷವನ್ನು ಪ್ರತಿನಿಧಿಸಿದ ಎರಡು ಅಂಶಗಳಾದ ಅಮರ ಸುಳ್ಯದ ಕ್ರಾಂತಿ (ರಾಜಕೀಯ) ಮತ್ತು ಸಿದ್ಧವೇಷ ಕುಣಿತ(ಧಾರ್ಮಿಕ) ವಿವರಗಳಂತೂ ಪ್ರಾದೇಶಿಕ ಚರಿತ್ರೆ ಮತ್ತು ಜಾನಪದ ಅಧ್ಯಯನ ಮಾಡುವ ರೀತಿಗೆ ಅತ್ಯುತ್ತಮ ಮಾದರಿಗಳು. ( ಈ ಎರಡು ವಿಷಯಗಳ ಬಗ್ಗೆ ಈ ವರೆಗೆ ಹಲವು ಅಧ್ಯಯನಗಳು ನಡೆದಿವೆ. ಆದರೆ ಸದ್ಯ ಖಚಿತ ಮತ್ತು ನಿಖರ ಮಾಹಿತಿ ಸಿಗುವುದು ಇದೇ ಕೃತಿಯಿಂದ)
      ಉಳಿದಂತೆ ಗೌಡರ ಆಹಾರ, ವಸತಿ, ಕುಟುಂಬ ಪದ್ದತಿ, ಜೀವನಾವರ್ತ ಆಚರಣೆ, ಧಾರ್ಮಿಕ ಸಂಪ್ರದಾಯ, ಜಾನಪದ, ಆಟ- ಬೇಟೆ ಮತ್ತು ಮುಖ್ಯವಾಗಿ ಅರೆಭಾಷೆಯ ಬಗ್ಗೆ ವಿವರಿಸಲಾಗಿದೆ. ಕಾಲಗತಿಯಲ್ಲಿ ನಾಶವಾಗಬಲ್ಲ ಈ ಮಾಹಿತಿಗಳು ಒಂದು ಜನಾಂಗದ ಅಸ್ಥಿತ್ವದ ಸಾಂಸ್ಕೃತಿಕ ಹೆಗ್ಗುರುತುಗಳು. ಬಹುತ್ವವನ್ನು ಉಳಿಸಿಕೊಳ್ಳುವುದಕ್ಕೆ ಇರುವ ಅಮೂಲ್ಯ ಸಾಧನಗಳು. ಅನೇಕ ಜನಾಂಗಗಳು ಇವುಗಳನ್ನು ಸಂಗ್ರಹಿಸದೇ ಏಕಸಂಸ್ಕೃತಿ ವಾದಕ್ಕೆ ಸುಲಭವಾಗಿ ಕೊರಳೊಡ್ಡುವ ಸ್ಥಿತಿ ನಿರ್ಮಾಣವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಆದ್ದರಿಂದ ಪ್ರತೀ ಜನಾಂಗದ ಸಾಂಸ್ಕೃತಿಕ ವೈವಿಧ್ಯತೆ ಒಂದು ನಾಡಿನ ಆಸ್ತಿಯೂ ಆಗಿರುತ್ತದೆ.
ಇಲ್ಲಿ ಹೇಳಿರುವ ಅರೆಭಾಷೆಯ ಬೆಳವಣಿಗೆಯ ಬಗೆಗಿನ ದೂರದೃಷ್ಟಿ ವಿಶ್ಲೇಷಣೆಗಳು ಭಾಷಾ ಪ್ರಸರಣದ ಹಿನ್ನಲೆಯಲ್ಲಿ ತುರ್ತಾಗಿ ಅನುಸರಿಸಬಹುದಾದ ಸಲಹೆಗಳು ಎನ್ನಬಹುದು.
ಪ್ರೊ.ವಿವೇಕ ರೈಯವರ ಮುನ್ನುಡಿ, ಬಿಳಿಮಲೆಯವರೇ ಬರೆದ ಪ್ರವೇಶ ಒಟ್ಟು ಅಧ್ಯಯನದ ಮಹತ್ವವನ್ನು ಮೊದಲಿಗೆ ಸಾಬೀತು ಪಡಿಸುತ್ತದೆ.
        ನಲ್ವತ್ತು ವರ್ಷಗಳ ಹಿಂದೆ ಅಧ್ಯಯನ ನಡೆಸಿದ ವಿಷಯವೊಂದನ್ನು ಪ್ರಕಟಿಸದೇ ಬಹಳ ಕಾಲ ಇಟ್ಟು ಕಾಲ ಪಕ್ವಗೊಂಡಾಗ ಈ ಕಾಲಕ್ಕೆ ಬೇಕಾಗುವಂತೆ ಅದನ್ನು ಪ್ರಕಟಿಸಿ ಬಿಳಿಮಲೆಯವರು ತನ್ನ ಜನಪರವಾದ ಅಧ್ಯಯನಗಳ ಅಗತ್ಯತೆಯನ್ನು ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಹೇಳಿರುವ ಅನೇಕ ಅಂಶಗಳು ಜಾತಿ ಧರ್ಮಗಳನ್ನು ಪರಸ್ಪರ ಸಮನ್ವಯಗೊಳಿಸುತ್ತವೆಯೇ ಹೊರತು ಸಂಘರ್ಷಕ್ಕೀಡು ಮಾಡುತ್ತಿಲ್ಲ ಎನ್ನುವುದನ್ನು ಸಮರ್ಥಿಸಿವೆ. ಪ್ರಾಯಶಃ ಭಾರತದ ಉದ್ದಗಲದಲ್ಲಿ ನೆಲೆ ನಿಂತ ಮೇಲೆ, ಜಾತಿ ಧರ್ಮಗಳ ವೈವಿಧ್ಯತೆಯ ಸತ್ಯವನ್ನು ಅನುಭವಿಸಿದ ಮೇಲೆ ಈ ಕೃತಿ ಪ್ರಕಟಣೆಯ ಆಸಕ್ತಿ ಸ್ವತಃ ಬಿಳಿಮಲೆಯವರಿಗೆ ಆಗಿರುವ ಸಾಧ್ಯತೆಯೂ ಇದೆ. ಆ ಕಾರಣಕ್ಕೆ ನಾನವರನ್ನು ಅಭಿನಂದಿಸುತ್ತೇನೆ. ಪ್ರಕಟಿಸಿದ ಕಲ್ಲೂರು ನಾಗೇಶರನ್ನು ಕೂಡ ಮತ್ತು ಈ ಕೃತಿಯನ್ನು ಆಸಕ್ತರು ಕೊಂಡು ಓದಬಹುದು(ಸುದ್ದಿ ಸೆಂಟರ್ ಸುಳ್ಯ ದೂರವಾಣಿ:೦೮೨೫೭ ೨೩೦೨೩೦, ಬೆಲೆ: ೪೦೦)ಎಂದು ಹೇಳುತ್ತೇನೆ. ಭಾರತದ ಬಹುತ್ವದ ಉಳಿವಿಗಾಗಿ ಇಲ್ಲಿಯ ಎಲ್ಲಾ ಜನಾಂಗಗಳ ಅಧ್ಯಯನವನ್ನು ಹೀಗೆ, ಬಹುಬೇಗ ನಡೆಸಬೇಕಾಗುತ್ತದೆ ಎಂದೂ ನನಗನಿಸುತ್ತದೆ.

  05-04-2020                                                                                               ಡಾ.ಸುಂದರ ಕೇನಾಜೆ

Comments