ಯಕ್ಷ ಕಾರ್ಯಾಗಾರ


                                  ಯಕ್ಷಗಾನದ ಸಮಗ್ರ ಕಲಿಕೆಯ ಇಣುಕು ನೋಟ- ರಂಗಮನೆ ಕಾರ್ಯಾಗಾರ       
                      ಹೀಗೆ ಯಕ್ಷಗಾನ ಕಾರ್ಯಾಗಾರಗಳು, ತರಬೇತಿಗಳು ನಡೆಯಬೇಕು ಎನ್ನುವುದು ನಮ್ಮ ಆಶಯ. ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರ ಸುಳ್ಯ ಮತ್ತು ರಂಗಮನೆ (ರಿ) ಸುಳ್ಯ ಇದರ ಆಶ್ರಯದಲ್ಲಿ ಹತ್ತು ದಿನಗಳ ಯಕ್ಷ ಶಿಕ್ಷಣ ಕಾರ್ಯಾಗಾರ ಎಪ್ರೀಲ್ 18 ರಿಂದ 27 ವರೆಗೆ ರಂಗಮನೆಯಲ್ಲಿ ನಡೆಯುತ್ತಿದೆ. ಕಳೆದ ಒಂದು ವರ್ಷಗಳಿಂದ ಕೇಂದ್ರದಲ್ಲಿ ಪ್ರಥಮ ತಂಡದಲ್ಲಿ ನಾಟ್ಯಾಭ್ಯಾಸ, ಭಾಗವತಿಕೆ ಮತ್ತು ಚೆಂಡೆ-ಮದ್ದಳೆ ತರಬೇತು ಪಡೆಯುತ್ತಿರುವ ವಿದ್ಯಾರ್ಥಿಗಳು ಹಾಗೂ ಇತರ ಸೀಮಿತ ಆಸಕ್ತÀರು ವಯಸ್ಸಿನ ಮಿತಿ ಇಲ್ಲದೇ ಕಾರ್ಯಾಗಾರದಲ್ಲಿ ಭಾಗವಹಿಸುತ್ತಿದ್ದಾರೆ.
                   ಸಾಮಾನ್ಯವಾಗಿ ಯಕ್ಷಗಾನ ಕಾರ್ಯಾಗಾರಗಳÀನ್ನು ಎಲ್ಲರೂ ಎಲ್ಲಾ ಕಡೆಗಳಲ್ಲೂ ಮಾಡುತ್ತಾರೆ. ಒಂದು ಪ್ರಸಂಗವನ್ನು ಇಟ್ಟುಕೊಂಡು ಅದಕ್ಕೆ ಪೂರಕವಾಗುವಂತೆ ಕಲಿಕಾರ್ಥಿಗಳನ್ನು ತಯಾರು ಮಾಡುವುದು, ಕೊನೆಯ ದಿನ ಒಂದು ಪ್ರಸಂಗವನ್ನು ಆಡಿ ತೋರಿಸುವುದು ಅಲ್ಲಿಗೆ ಕಾರ್ಯಾಗಾರ ಮುಕ್ತಾಯವಾಗುತ್ತದೆ. ಆದರೆ ಕೇಂದ್ರದಲ್ಲಿ ನಡೆಯುವ ಕಾರ್ಯಾಗಾರ ಅದಕ್ಕಿಂತ ಭಿನ್ನ. ಪ್ರತಿದಿನ ಪೂರ್ವಾಹ್ನ ಒಂದು ವರ್ಷ ನಡೆದ ನಾಟ್ಯಾಬ್ಯಾಸದ ಪುನರ್ಮನನ, ಅದರಲ್ಲೂ ಪೂರ್ವರಂಗಕ್ಕೆ ಸಂಬಂಧಪಟ್ಟ ನಾಟ್ಯಗಳ ಅಭ್ಯಾಸವೇ ಪ್ರಧಾನ. ಸಬ್ಬಣ್ಣಕೋಡಿ ರಾಮ ಭಟ್ ಮತ್ತು ಅವರು ನಡೆಸುತ್ತಿರುವ ಪೆರ್ಲ ಕೇಂದ್ರದ ಹಿರಿಯ ವಿದ್ಯಾರ್ಥಿಗಳು ತರಗತಿಯನ್ನು ನಡೆಸಿಕೊಡುತ್ತಿದ್ದಾರೆ. ಇಲ್ಲಿಯೂ ಒಂದು ಪ್ರಸಂಗವನ್ನಾಧರಿಸಿದ ಕಲಿಕೆ ನಡೆಯುದಿಲ್ಲ. ಬದಲು ಯಕ್ಷಗಾನದ ಹೆಜ್ಜೆಗಳನ್ನು ಗಟ್ಟಿಗೊಳಿಸುವುದೇ ಇಲ್ಲಿಯ ಪ್ರಧಾನ ಗಮನ. ಅಪರಾಹ್ನ ನಾಟ್ಯದ ಹೊರತಾಗಿ ಯಕ್ಷಗಾನ ಕ್ಷೇತ್ರದಲ್ಲಿ ಅತೀ ಅಗತ್ಯÀ ಅಂಗಗಳಾದ ಅರ್ಥಗಾರಿಕೆ, ಹಿಮ್ಮೇಳ ಸಾಂಗತ್ಯ, ಬಣ್ಣಗಾರಿಕೆ, ವೇಷಭೂಷಣ, ರಂಗಪ್ರಜ್ಞೆಯ ತರಬೇತಿ ನಡೆಯುತ್ತಿದೆ. ಯಕ್ಷ ಕಲಿಕಾರ್ಥಿ ಹೇಗೆ ಒಂದು ಪದಕ್ಕೆ ಅರ್ಥ ಹೇಳಬೇಕಾಗುತ್ತದೆ. ಅಂದರೆ ಒಂದು ಕುಣಿತದ ನಂತರ ಆತ ಅರ್ಥಕ್ಕೆ ತೊಡಗುವ ಮುನ್ನ ಯಾವೆಲ್ಲಾ ಅಂಶಗಳನ್ನು ಗಮನಿಸಬೇಕಾಗುತ್ತದೆ. ಅರ್ಥದ ವಿಸ್ತಾರ, ಅದರ ಆಳ, ಅನುಕೂಲ ಇತ್ಯಾದಿ ಸೂಕ್ಷ್ಮ ವಿಚಾರಗಳನ್ನು ಪ್ರಾತ್ಯಕ್ಷಿಕೆ ಹಾಗೂ ಕಲಿಕಾರ್ಥಿಗಳ ಅಭಿವ್ಯಕ್ತಿಯ ಮೂಲಕ ತಿಳಿಯಪಡಿಸಲಾಗುತ್ತದೆ. ಸಂದರ್ಭದಲ್ಲಿ ಭಾಗವತರು ಚೆಂಡೆ ಮದ್ದಳೆಗಾರರು ಮತ್ತು ನುರಿತ ಕಲಾವಿದರು ಜೊತೆಯಾಗಿರುತ್ತಾರೆ. ಇದೇ ರೀತಿ ಪ್ರತ್ಯೇಕವಾಗಿ ಭಾಗವತಿಕೆ ಸಂದರ್ಭಗಳನ್ನು ತಿಳಿಸಿಕೊಡಲಾಗುತ್ತಿದೆ. ಅಲ್ಲದೇ ಚೆಂಡೆಯ ಬಳಕೆಯ ಸಂದರ್ಭವನ್ನೂ ಕಲಿಕಾರ್ಥಗಳಿಗೆ ನಿರ್ದಿಷ್ಟ ಪ್ರಸಂಗದ ಹೊರತಾಗಿ ತಿಳಿಸಲಾಗುತ್ತಿದೆ. ಹಿಮ್ಮೇಳದ ಬಳಕೆಯ ಪರಿಪೂರ್ಣ ಜ್ಞಾನ ಕಲಿಕಾರ್ಥಿಗಳಿಗೆ ಸಿಗಬೇಕೆನ್ನುವುದೇ ಇಲ್ಲಿಯ ಉದ್ದೇಶ. ವಿಷಯವನ್ನು ಸಮರ್ಥವಾಗಿ ಕಲಿಕಾರ್ಥಿಗಳಿಗೆ ಅಭ್ಯಾಸಿಸುವಂತೆ ಮಾಡುತ್ತಿರುವವರು ಹಿರಿಯ ಭಾಗವತರಾದ ವಿಶ್ವವಿನೋದ ಬನಾರಿ, ರಮೇಶ್ ಭಟ್ ಪತ್ತೂರು, ವೆಂಕಟ್ರಾಮ್ ಭಟ್ ಸುಳ್ಯ, ಕುಮಾರ ಸುಬ್ರಹ್ಮಣ್ಯ, ಲಿಂಗಪ್ಪ ಬೆಳ್ಳಾರೆ ಹಾಗೂ ಇತರ ಕಲಾವಿದರು.
                  ಯಕ್ಷಗಾನ ಕಲಾವಿದನಿಗೆ ಪುರಾಣ ಜ್ಞಾನ ಅತೀ ಅಗತ್ಯ ಹಿನ್ನಲೆಯಲ್ಲಿ ಪುರಾಣದ ಕಥೆಗಳು ಅವುಗಳನ್ನು ವಿಶ್ಲೇಸಿಸುವ ವಿಧಾನಗಳು ಹಾಗು ಪುರಾಣೇತರ ವಿಷಯಗಳ ಬಳಕೆ ಇವುಗಳನ್ನೂ ಕಾರ್ಯಾಗಾರದಲ್ಲಿ ಪರಿಚಯಿಸಲಾಗುತ್ತಿದೆ. ಬಣ್ಣಗಾರಿಕೆ ಮತ್ತು ವೇಷಭೂಷಣ ಯಕ್ಷಗಾನದ ಪ್ರಧಾನ ಭಾಗ. ಸಾಮಾನ್ಯವಾಗಿ ನಾಟ್ಯ ತರಗತಿಗಳಲ್ಲಿ ಒಬ್ಬ ಕಲಿಕಾರ್ಥಿಗೆ ಅವನ ವೇಷದ ಪರಿಚಯವನ್ನು ಮಾತ್ರ ಮಾಡಿಕೊಡಲಾಗುತ್ತದೆ. ಆದರೆ ಇಲ್ಲಿ ಎಲ್ಲಾ ವೇಷಗಳು ಹಾಗೂ ಅದರ ಮುಖವರ್ಣಿಕೆಗಳ ಪರಿಚಯ ಮಾಡಿಕೊಡಲಾಗುತ್ತಿದೆ. ಸ್ವತಃ ಕಲಿಕಾರ್ಥಿಗಳೇ ವೇಷ ಮತ್ತು ಬಣ್ಣಗಳ ಪರಿಣತಿಯನ್ನು ಪಡೆದು ವೇಷಕ್ಕೆ ತೊಡಗಿಕೊಳ್ಳಬೇಕು ಎನ್ನುವುದು ಇಲ್ಲಿಯ ಉದ್ದೇಶ. ಅಲ್ಲದೇ ಇದೇ ವೇಷ, ಮುಖವರ್ಣಿಕೆಗಳು ಹಿಮ್ಮೇಳಕ್ಕೆ ಹೇಗೆ ಹೊಂದಿಕೊಳ್ಳುತ್ತದೆ ಎನ್ನುವುದನ್ನು ತಿಳಿಸಲಾಗುತ್ತಿದೆ. ಇಲ್ಲಿ ಹಿರಿಯ ಕಲಾವಿದರಾದ ಉಬರಡ್ಕ ಉಮೇಶ ಶೆಟ್ಟಿ, ಮಹಾಬಲ ಕಲ್ಮಡ್ಕ, ವಾಸುದೇವ ರೈ ಬೆಳ್ಳಾರೆ, ಪ್ರಕಾಶ ಮೂಡಿತ್ತಾಯ, ಹಾಗೂ ಹಿಮ್ಮೇಳದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುತ್ತಿದ್ದಾರೆ. ಯಕ್ಷಗಾನದ ಎಲ್ಲಾ ಆಯಾಮಗಳ ಜೊತೆಗೆ ಎಲ್ಲಾ ರಂಗಭೂಮಿಗೂ ಅನ್ವಯಿಸುವ ಅತೀ ಮುಖ್ಯ ವಿಭಾಗ ರಂಗಪ್ರಜ್ಞೆ. ರಂಗದ ಚಲನೆ ಮತ್ತು ಬಳಕೆ ಬಗ್ಗೆ ಪ್ರತ್ಯೇಕವಾಗಿ ತಿಳಿಸುವ ಸಂದರ್ಭಗಳಂತೂ ಯಕ್ಷಗಾನ ಕ್ಷೇತ್ರಕ್ಕೆ ಬಹು ಅಪರೂಪ. ರಂಗಪರಿಜ್ಞಾನವಿಲ್ಲದ ವೇಷಧಾರಿ ಕಲಾವಿದನಾಗಲು ಸಾಧ್ಯವೇ ಇಲ್ಲ. ಆದ್ದರಿಂದ ನಾಟಕರಂಗಕ್ಕಿಂತಲೂ ಭಿನ್ನವಾದ ಯಕ್ಷರಂಗದ ಬಗೆಗಿನ ತರಬೇತಿಯನ್ನು ರಂಗನಿರ್ದೇಶಕ  ಜೀವನ್ರಾಂ ಸುಳ್ಯ ಇವರು ನೀಡುತ್ತಿದ್ದಾರೆ.
                     ಕಾರ್ಯಾಗಾರದಲ್ಲಿ ಒಬ್ಬ ಕಲಿಕಾರ್ಥಿ ವೇದಿಕೆ ಹತ್ತಿ ಒಂದು ವೇಷ ಹಾಕಿ ಅಲ್ಲಿಗೆ ಯಕ್ಷಗಾನ ಕಲಿತಿದ್ದೇನೆ ಎಂದು ತಿಳಿದುಕೊಳ್ಳುವ ಬದಲು ಕಲಿತ ವಾಪ್ತಿ ಸೀಮಿತವಾದರೂ ಯಕ್ಷಗಾನದ ಎಲ್ಲಾ ವಿಭಾಗಗಳನ್ನು(ನಾಟ್ಯ, ಅರ್ಥಗಾರಿಕೆ, ಹಿಮ್ಮೇಳ, ಬಣ್ಣಗಾರಿಕೆ, ವೇಷಭೂಷಣ, ರಂಗಪ್ರಜ್ಞೆ)ಒಳಗೊಂಡಂತೆ ಹಂತಹಂತವಾಗಿ ಕಲಿಯುತ್ತಾ ಸಾಗಬೇಕು ಎನ್ನುವುದೇ ಆಶಯ. ಇದೇ ಏಪ್ರೀಲ್ ಕೊನೆಯ ವಾರಕ್ಕೆ ಈಗ ಕೇಂದ್ರದಲ್ಲಿ ಕಲಿಯುತ್ತಿರುವ ತಂಡ ಒಂದು ವರ್ಷ ಪೂರೈಸಿ ಎರಡನೇ ಹಂತದ ಕಲಿಕೆಗೆ ತೊಡಗುತ್ತದೆ. ಮುಂದಿನ ವರ್ಷಕ್ಕೆ ಹೊಸ ತಂಡ ಪ್ರವೇಶ ಪಡೆಯುತ್ತದೆ. ಪ್ರಸಂಗಕ್ಕೂ ಮುನ್ನ ಎಷ್ಟು ಕಲಿಕೆ ನಡೆದಿದೆಯೂ ಅಷ್ಟರ ಪ್ರದರ್ಶನವೂ ನಾನಾ ಸಂದರ್ಭದಲ್ಲಿ ನಡೆಯಲಿದೆ. ಆದರೆಕಲಿಕೆ ಮುಖ್ಯವೇ ಹೊರತು ಕಲಿಕೆಗೂ ಮುನ್ನ ನಡೆಸುವ ಪ್ರದರ್ಶನ ಮುಖ್ಯವಲ್ಲ, ಸಾವಧಾನವಾಗಿ ಆದರೆ ಕರಾರುವಕ್ಕಾಗಿ ಕಲಿಕೆ ನಡೆಯಬೇಕು ಎಂಬ ಬಲವಾದ ನಂಬಿಕೆಯೊಂದಿಗೆ ಕೇಂದ್ರ ಎರಡನೇ ವರ್ಷಕ್ಕೆ ಕಾಲಿಡುತ್ತಿದೆ. ನಂಬಿಕೆಗೆ ಅನೇಕ ಹಿರಿಯ ಯಕ್ಷಕಲಾವಿದರ ಬೆಂಬಲವೂ ದೊರಕಿದೆ. ಇದೇ ಕೇಂದ್ರದ ಒಂದು ವರ್ಷದ ಹೆಗ್ಗಳಿಕೆ. ಇದಕ್ಕೆ ಪೂರಕವಾಗಿ ಯಕ್ಷಗಾನ ಸಂಬಂಧಿ ಪುಸ್ತಕಗಳ ಸಂಗ್ರಹ ಹಾಗೂ ಅಧ್ಯಯನದ ದೃಷ್ಟಿಯ ಉತ್ಕøಷ್ಟ ಪ್ರದರ್ಶನ  ಆಗಾಗ ಆಯೋಜನೆಗೊಳ್ಳುತ್ತಿದೆ.
                      ಒಟ್ಟಿನಲ್ಲಿ ಯಕ್ಷಗಾನವನ್ನು ಸಾಂಪ್ರದಾಯಿಕ ಕಲಿಕಾ ವಿಧಾನಕ್ಕಿಂತ ಬಿನ್ನವಾಗಿ ಸಮಗ್ರ  ಮತ್ತು ಅಕಾಡೆಮಿಕ್ ಆದ ನೆಲೆಯಲ್ಲಿ ಅಭ್ಯಾಸ ಮತ್ತು ಅಧ್ಯಯನ ನಡೆಸಬೇಕು, ಅದಕ್ಕಾಗಿ ಕೇರಳದ ಕಥಕ್ಕಳಿ ಮಾದರಿಯ ಕಲಿಕಾ ಪ್ರಯತ್ನ ಇಲ್ಲಿಯದು. ನಿಟ್ಟಿನಲ್ಲಿ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ರಂಗಮನೆ (ರಿ) ಸುಳ್ಯ ಇದರ ಅಧ್ಯಕ್ಷ ಜೀವನ್ರಾಂ ಸುಳ್ಯ, ಸಂಚಾಲಕ ಡಾ.ಸುಂದರ ಕೇನಾಜೆ ಮೊದಲಾದವರು ದುಡಿಯುತ್ತಿದ್ದಾರೆ.
                                                                                                                                     ಡಾ.ಸುಂದರ ಕೇನಾಜೆ



Comments