ಓದಿಸುವ ಗುಣದ ಪರಕಾಯ

                                                                 ಓದಿಸುವ ಗುಣದ ಪರಕಾಯ

        ಹಿರಿಯ ಸ್ನೇಹಿತರಾದ ರಾಧಾಕೃಷ್ಣ ಕಲ್ಚಾರ್ ರವರ ಕೃತಿ 'ಪರಕಾಯ ಪ್ರವೇಶ' ಓದಿದೆ. ಬಹುಬೇಗ ಓದಿ ಮುಗಿಸುವ ಗುಣ ಕೃತಿಗೇ ಇರುವ ಕಾರಣ ಸುಲಭವಾಯಿತು. ಪುರಾಣ ಪಾತ್ರಗಳ ಸ್ವಗತ ನಿರೂಪಣೆಯೇ ಈ ಕೃತಿ. ಹಾಗೆಂದು ಯಕ್ಷಗಾನ ತಾಳಮದ್ದಳೆಯ ಜನಪ್ರಿಯ ಪಾತ್ರಗಳ ಹೊರತು ಬಹುತೇಕ ಗುರುತಿಸದೇ ಇರುವ, ಗುರುತಿಸಿದರೂ ಒಂದೆರಡು ವಾಕ್ಯಗಳಲ್ಲಿ ಮುಗಿಸಬಹುದಾದ ಪಾತ್ರಗಳು ಇಲ್ಲಿ ಧೀರ್ಘವಾಗಿ ಮಾತನಾಡುತ್ತವೆ. ಇದೇ ಈ ಕೃತಿಯ ವಿಶೇಷತೆ.
           ಇಲ್ಲಿ ಬರುವ ೧೪ ಪಾತ್ರಗಳಲ್ಲಿ ಕೆಲವುದರ ಹೆಸರೇ ಕೇಳದೇ ಇರುವಾಗ ಅವುಗಳ ಬಗ್ಗೆ ಸುದೀರ್ಘ ಸ್ವಗತವಾದರೂ ಹೇಗೆ ಸಾಧ್ಯ? ಸಾಧ್ಯವಿದೆ ಎನ್ನುವುದಾದರೆ ಅಲ್ಲೊಂದು ಅಧ್ಯಯನ ಬೇಕು. ಆ ಪಾತ್ರಗಳನ್ನೂ ಸೂಕ್ಷ್ಮವಾಗಿ ಗಮನಿಸುವ ಮನಸ್ಥಿತಿಯೊಂದು ಬೇಕು. ಅದನ್ನು ಕಲಾವಿದರಾದ ಕಲ್ಚಾರ್ ಅರಗಿಸಿಕೊಂಡಿದ್ದಾರೆ. ಒಂದು ಪಾತ್ರ ತನ್ನನ್ನು ತಾನೇ ಕಟ್ಟಿ ಬೆಳೆಯುವುದು ಯಕ್ಷಗಾನ ಜಗತ್ತಿನಲ್ಲಿ ಹೊಸತಲ್ಲ. ಆದರೆ ನಗಣ್ಯವಾದ ಪಾತ್ರವೊಂದು ಹಾಗೆ ಬೆಳೆಯಬೇಕಾದರೆ ಅದಕ್ಕೆ ಕಲಾವಿದನ ಜಾಣ್ಮೆ, ಪ್ರೌಢಿಮೆ ಕಾರಣವಾಗಬೇಕು. ಅದನ್ನು ಈ ಕೃತಿಯ ಮೂಲಕ ಕಾಣಬಹುದು. ಸುದೇಷ್ಣಾ, ರಥಕಾರ, ಭದ್ರ, ಪ್ರಾತಿಕಾಮಿ, ಸಾರಥಿ, ರುಮಾ, ರುರು, ಅಂತಿಮಾ ಈ ಪಾತ್ರಗಳು ಯಕ್ಷಗಾನದ ಸಂದರ್ಭದಲ್ಲಿ ಕಾಣುವುದೇ ಅಪರೂಪ. ಕಂಡರೂ ಒಂದೆರಡು ಪದ್ಯದಲ್ಲಿ ಮುಗಿಯಲೇ ಬೇಕು( ಅಶ್ವಸೇನ, ವಿಕರ್ಣ ಕೂಡ, ಅಂಬೆಯ ಪ್ರಕರಣದಲ್ಲಿ ಸಾಲ್ವನಿಗೆ ಸ್ವಲ್ಪ ಅವಕಾಶ ಇದೆ.) ಈ ಪಾತ್ರಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಅಲ್ಲಿರುವ ಯಾರಿಗಾದರೂ ಎತ್ತಿಕಟ್ಟಿ ಇಲ್ಲಾ ಮೊದಲ ಬಾರಿ ವೇದಿಕೆ ಹತ್ತುವವನನ್ನು ಪುಸ್ಲಾಯಿಸಿ ಕಟ್ಟುಕಟ್ಲೆ ಮುಗಿಸುವುದೇ ಹೆಚ್ಚು. ಆದ್ದರಿಂದ ಈ ಪಾತ್ರಗಳಿಗೆ ಯಾವ ಅಧ್ಯಯನವೂ ಬೇಡ, ಸುಪ್ರಸಿದ್ಧ ಕಲಾವಿದರೂ ಬೇಡ. ಹಾಗಾಗಿ ಈ ಪಾತ್ರಗಳ ಮಹತ್ವವೂ ಯಾರಿಗೂ ಗೊತ್ತೂ ಇಲ್ಲ. ಅಂತಹಾ ಪಾತ್ರಗಳಿಗೆ ಕಲ್ಚಾರ್ ಇಲ್ಲಿ ಶಕ್ತಿ ತುಂಬಿದ್ದಾರೆ. ಒಬ್ಬ ರಥಾಕಾರ, ಸಾರಥಿಯ ಮೂಲಕವೂ ಮಹಾಭಾರತದಂತಹಾ ಉದ್ಗ್ರಂಥವನ್ನು ನೋಡಬಹುದು, ಒಬ್ಬ ಬೇವಿನಚರನ ಮೂಲಕ ರಾಮನ ವ್ಯಕ್ತಿತ್ವವನ್ನು ನೋಡಬಹುದು ಇದನ್ನು ಈ ಕೃತಿ ಸಾಬೀತುಪಡಿಸುತ್ತದೆ.

          ಇನ್ನೊಂದು ಇಷ್ಟಪಡಬೇಕಾದ ಸಂಗತಿ, ಈ ಪಾತ್ರಗಳೆಲ್ಲವೂ ಲೌಕಿಕವಾಗಿಯೇ ವ್ಯವಹರಿಸುವುದು. ರಾಮಾಯಣ , ಮಹಾಭಾರತ ಹಾಗೂ ಇತರ ಕಾವ್ಯಗಳು ಕಾವ್ಯ ಸಾಮರ್ಥ್ಯದ ಹೊರತಾಗಿಯೂ ಅತಿಮಾನುಷ ಗುಣಗಳಿಂದ ಪ್ರಸಿದ್ಧವಾಗಿವೆ. ಈ ಅತಿಮಾನುಷ ನೆಲೆಗಳಿಂದ ಅಸ್ಥಿತ್ವ ಉಳಿಸಿಕೊಳ್ಳುವುದು ಈ ಪಾತ್ರಗಳಿಗೆ ಸಾಮಾನ್ಯವೇ ಆಗಿದೆ. ಅದಿಲ್ಲದ ಪಾತ್ರಗಳು ಅಲ್ಲಿವೂ ಸಾಮಾನ್ಯವೇ. ಈ ಸಾಮಾನ್ಯವೆಂಬುವುದೇ ವಾಸ್ತವ. ವಾಸ್ತವ ಎನ್ನುವದಕ್ಕೆ ಇನ್ನೊಂದು ಅರ್ಥ ಸಹಜ. ಈ ಪಾತ್ರಗಳೆಲ್ಲವೂ ಸಹಜ ಹಾಗಾಗಿ ವಾಸ್ತವ. ಸ್ವಗತದಲ್ಲೂ ಕೃತಿಕಾರರು ಇದನ್ನು ಕಂಡಿದ್ದಾರೆ. ಅಂದರೆ ಸಾಮಾನ್ಯವಾಗಿ ಸ್ವಗತದಲ್ಲಿ ಇರುವದಕ್ಕಿಂತ ಹೆಚ್ಚು ಕಾಣುವುದು ಮಾನವ ಗುಣ. ಅದೇ ಪುರಾಣ ಪಾತ್ರಗಳ ಗುಣವೂ ಹೌದು. ಅದನ್ನು ಇಲ್ಲಿ ಅಲ್ಲಗಳೆಯಲಾಗಿದೆ. ಈ ಎಲ್ಲಾ ಕಾರಣದಿಂದ ಈ ಕೃತಿಯನ್ನು ಇಷ್ಟಪಟ್ಟು ಓದಬಹುದು. ಪುರಾಣಗಳ ಮರು ಸೃಷ್ಟಿಗಾಗಿ ಈ ಸೃಜನಶೀಲ ತಂತ್ರವನ್ನು ಇನ್ನೂ ಹೆಚ್ಚು ಬಳಸಬಹುದು.


    12.04.2020                                                                                                                    ಡಾ.ಸುಂದರ ಕೇನಾಜೆ

Comments