ನೀಲಾಚಾರ್ ಎನ್ನುವ ಅಜ್ಞಾತ ಕಲಾವಿದ
ಮಾನ್ಯ ಸಂಪಾದಕರಿಗೆ,
ನವೆಂಬರ್
ತಿಂಗಳ 72ನೇ ಸಂಚಿಕೆ ಓದಿದೆ.
ನೀವು ಬರೆದ ಸಂಪಾದಕೀಯದಲ್ಲಿ ನೀಲಾಚಾರ್
ಎನ್ನುವ ಅಜ್ಞಾತ ಕಲಾವಿದನ ನೆನಪು
ಬಹಳ ಮಹತ್ವಪೂರ್ಣ ಎಂದೆನಿಸಿತು. ವಾಸ್ತವಿಕವಾಗಿ ಕಲಾವಿದ ಎಂದ ಮೇಲೆ
ಆತ ಎಂದೂ ಅಜ್ಞಾತನಾಗಿರುವುದಿಲ್ಲ. ಕಲೆಯೇ ಆತನ
ಸುತ್ತ ಪ್ರಭಾವಳಿಯಂತೆ ನಿಂತಿರುವುದಂರಿಂದ ಆತ ಎಲ್ಲರಿಗೂ ಕಾಣುತ್ತಲೇ
ಇರಬೇಕು ಎಂದರ್ಥ. ಆದರೆ ನೀಲಾಚಾರರ
ವಿಷಯದಲ್ಲಿ ಇದು ಸುಳ್ಳಾಗಿದೆ ಎಂದೆನಿಸುತ್ತದೆ.
ಪ್ರಾಯಶಃ ನಿವೃತ್ತಿಯ ಸುಧೀರ್ಘ ಅಂತರ, ತಾನು
ನೆಲೆಸಿರುವ ಪ್ರದೇಶ ಮತ್ತು ಕಲೆಯನ್ನು
ನಿಜಾರ್ಥದಲ್ಲಿ ಸೇವೆ ಎಂದು ತಿಳಿದಿರುವುದೇ
ಈ ದಿವ್ಯ ಮೌನಕ್ಕೆ
ಕಾರಣವಾಗಿದೆಯೋ ಏನೋ? ಇವರನ್ನು ಹುಡುಕಿ
ಕಣಿಪುರ ಮತ್ತೆ ನೆನಪಿಸಿರುವುದು ಒಂದು
ಚಾರಿತ್ರಿಕ ಸಂಗತಿ. ಆ ಕಲಾವಿದನ
ಕಲಾಸೇವೆಗೆ ಸಂದ ಗೌರವವೆಂದು ನಾನು
ಭಾವಿಸಿದ್ದೇನೆ. ಪ್ರತಿಭೆ, ಸಾಧನೆ, ವಕ್ತಿತ್ವ, ಜೊತೆಗೆ
ವಯಸ್ಸು ಇವೆಲ್ಲದರಲ್ಲಿ ತಾನು ಇರುವುದಕ್ಕಿಂತ ಒಂದಷ್ಟು
ಪಟ್ಟು ಹೆಚ್ಚಿಗೇ ಹೇಳಿಕೊಳ್ಳಲು ಹೆಣಗುತ್ತಿರುವವರ ಮಧ್ಯೆ ತನ್ನಲ್ಲಿರುವ ಅಮೂಲ್ಯ
ಅನುಭವಗಳನ್ನು ಮುಚ್ಚಿಟ್ಟು ಕುಳಿತಿರುವ ನೀಲಾಚಾರರು ಆಶ್ಚರ್ಯ ಹುಟ್ಟಿಸುತ್ತಾರೆ. ಪ್ರಸ್ತುತ
ಯಕ್ಷಗಾನಕ್ಕೆ ಇವರಂತಹಾ ಕಲಾವಿದರ ಕಲಾ
ಬದುಕಿನ ಅನುಭವ ಬೇಕಾಗಿದೆ. ಮಾಗಿದ
ವ್ಯಕ್ತಿತ್ವ ನೀಡುವ ಮಾತುಗಳು ಕಲೆಯ
ಬೆಳವಣಿಗೆಗೆ ದಿಕ್ಸೂಚಿಯಾಗಬಲ್ಲುದು ಮತ್ತು ಕೆಲವು ಭ್ರಮೆಗಳಿಗೆ
ಉತ್ತರವಾಗಬಲ್ಲುದು. ಆದ್ದರಿಂದ ಇಂತಹಾ ಕಲಾವಿದರ ಬಗ್ಗೆ
ಇನ್ನಷ್ಟು ಬರಹಗಳು ಕಣಿಪುರದಲ್ಲಿ ಪ್ರಕಟಗೊಳ್ಳಲಿ
ಎಂದು ಆಶಿಸುತ್ತೇನೆ.
(ಕಣಿಪುರ
ಯಕ್ಷಗಾನ ಪತ್ರಿಕೆ ಪ್ರಕಟಿತ 2018) ಡಾ.ಸುಂದರ ಕೇನಾಜೆ
Comments
Post a Comment