ಡಾ.ಕೆ.ಕಮಲಾಕ್ಷ ಕಾಸರಗೋಡು
ಸರಕಾರಿ ಕಾಲೇಜಿನಲ್ಲಿ ಕನ್ನಡ ಎಂ.ಎ ಯ ನನ್ನ ಗುರುಗಳು. ಕನ್ನಡ, ತುಳು, ಮಲೆಯಾಳಂ ಈ ಮೂರೂ ಭಾಷೆಯಲ್ಲಿ ಹಿಡಿತ ಇಟ್ಟುಕೊಂಡು ಒಂದಷ್ಟು ಒಳ್ಳೆಯ ಬರಹಗಳನ್ನು ಹೊರತಂದವರು. ಅವರ ಹೊಸ ಕೃತಿ 'ಕಂಡಿರೆ ಕಂಗಳ ಬೆಳಕು' ಈ ದಿನ ಅವರ ಆಪ್ತ ಬಳಗದ ಮಧ್ಯೆ ಕಡೆಶಿವಾಲ್ಯದಲ್ಲಿ ಬೆಳಕು ಕಂಡಿತು. ಆ ಸಂದರ್ಭದಲ್ಲಿ ನನಗೂ ಮಾತನಾಡಲು ತಿಳಿಸಿದರು. ನಾನು ಗಮನಿಸಿದಂತೆ ಅನೇಕ ಮೌಲಿಕ ಕೃತಿಗಳನ್ನು ನೀಡಿದ ಅವರ ಬಗ್ಗೆ ಅಥವಾ ಅವರ ಕೃತಿಗಳ ಬಗ್ಗೆ ಎಲ್ಲೂ ಗಂಭೀರ ಚರ್ಚೆಗಳು ನಡೆದಿಲ್ಲ. ಅವರಿಗೆ ಈಗಾಗಲೇ ಎಪ್ಪತ್ತಾಯಿತು, ಒಂದು ಅಭಿನಂದನೆಯಾಗಲಿ, ಗ್ರಂಥವಾಗಲಿ ಬಂದಿಲ್ಲ, ಎಲ್ಲಾ ಬಿಟ್ಟು ಯಾವುದೇ ಅಕಾಡೆಮಿ ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ಗೌರವಿಸಿಲ್ಲ. ಈ ಕೆಲಸ ನಡೆಯಬೇಕು, ಆ ಮೂಲಕ ಅವರು ಈ ಮೂರೂ ಭಾಷೆಗೆ ಕೊಟ್ಟ ಕೊಡುಗೆಯನ್ನು ಕೃತಜ್ಞತೆಯಿಂದ ಸ್ಮರಿಸಬೇಕು ಎಂದೆ. ಈ ಮಾತಿಗೆ ಅಲ್ಲಿ ಸೇರಿದ ಹಲವರು ಸಹಮತ ವ್ಯಕ್ತಪಡಿಸಿದರು. ಆದ್ದರಿಂದ ಈ ಕೆಲಸ ಆದಷ್ಟು ಬೇಗ ಅವರಿಂದ ಉಪಕೃತರಾದ ಎಲ್ಲರೂ ಒಟ್ಟು ಸೇರಿ ನಡೆಯುವಂತಾಗಲಿ, ಅವರ ಎಲ್ಲಾ ಕೃತಿಗಳನ್ನು ಹೆಚ್ಚು ಓದುವಂತಾಗಲಿ ಎನ್ನುವ ಆಶಯ ನನ್ನದು.
'ಕಂಡಿರೆ ಕಂಗಳ ಬೆಳಕು' ಅವರ ಹಳೆಯ ಬರಹಗಳ ಸಂಕಲನ. ಇಲ್ಲಿ 43 ವಿಷಯಗಳ ಬಗ್ಗೆ ತನ್ನ ಅನುಭವದ ಮತ್ತು ಅಧ್ಯಯನದ ಸತ್ಯಗಳನ್ನು ಪ್ರತಿಪಾದಿಸಿದ್ದಾರೆ. ವಿಚಾರ ಸಾಹಿತ್ಯ, ವ್ಯಕ್ತಿತ್ವ ಪರಿಚಯ, ಜಾನಪದ ಅಧ್ಯಯನ, ಸಾಹಿತ್ಯ ವಿಮರ್ಶೆ, ಹಬ್ಬಗಳು ಮತ್ತು ಕಲೆಗಳ (ಯಕ್ಷಗಾನ) ಬಗ್ಗೆ ತನ್ನದೇ ಆದ ಒಳ ನೋಟಗಳ ಮೂಲಕ ಬರೆದಿದ್ದಾರೆ. ಇಲ್ಲಿರುವ ಅನೇಕ ವಿಯಷಗಳು ಸಾಮಾನ್ಯ, ಆದರೆ ಅದೇ ವಿಷಯಗಳ ನಿರೂಪಣೆ ಅಸಮಾನ್ಯ. ನಿರೂಪಣೆಯಲ್ಲಿ ಡಾ.ಕಮಾಲಾಕ್ಷರವರ ಅಧ್ಯಯನ ಶಿಸ್ತು, ಒಂದು ವಿಷಯದಲ್ಲಿನ ಸೂಕ್ಷ್ಮಗ್ರಾಹಿತ್ವ ಮತ್ತು ಕುತೂಹಲ ಎದ್ದು ಕಾಣುತ್ತದೆ. ಒಂದು ವಿಷಯವನ್ನು ಅತ್ಯಂತ ಸಹಜವಾಗಿ ಅಭಿವ್ಯಕ್ತಿಸುವುದು ಡಾ. ಕಮಲಾಕ್ಷರವರ ಜನ್ಮಜಾತ ಕಲೆ. ತರಗತಿಯಲ್ಲಿ ಪಾಠ ಮಾಡುತ್ತಿರುವಾಗಲೂ ಒಂದು ವಿಷಯದ ಅನೇಕ ಸಾಧ್ಯತೆ ಮತ್ತು ಮಗ್ಗುಲುಗಳನ್ನು ವಿಶ್ಲೇಷಿಸುವುದು ಅವರ ದೃಷ್ಟಿ. ಹಾಗೇ ಈ ಕೃತಿಯಲ್ಲೂ ತಾನು ಪ್ರತಿಪಾದಿಸುವ ವಿಷಯದ ಕಡೆಗೆ ವಿಶೇಷ ಗಮನಹರಿಸುತ್ತಾರೆ. ಆ ವಿಷಯದ ಸತ್ಯಾಸತ್ಯತೆಯನ್ನು ಪ್ರಕಟಪಡಿಸಲು ಸಂಶೋಧನೆಯ ದಾರಿಯನ್ನೂ ಬಳಸಿಕೊಳ್ಳುತ್ತಾರೆ. ಆದ್ದರಿಂದ ಡಾ. ಕಮಲಾಕ್ಷರವರು ಇದುವರೆಗೂ ಪ್ರಕಟಿಸಿದ ಮೌಲಿಕ ಕೃತಿಗಳ ಸಾಲಿಗೆ ಈ
'ಕಂಡಿರೆ ಕಂಗಳ ಬೆಳಕು' ಕೃತಿಯೂ ಸೇರುತ್ತದೆ.
ಬರಹ ಮತ್ತು ವೈಯಕ್ತಿಕ ಈ ಎರಡೂ ರೀತಿಯಿಂದಲೂ ನಾನು ಇಷ್ಟಪಡುವ ಡಾ. ಕಮಲಾಕ್ಷರವರು, ಕನ್ನಡ, ತುಳು ಮತ್ತು ಮಲೆಯಾಳಂ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯ. ಅದನ್ನು ಇನ್ನಾದರೂ ಗುರುತಿಸುವಂತಾಗಬೇಕು. ಅವರ ಪಾಸಡಿ, ಮಲೆಯಾಳಂ (ಕನ್ನಡಕ್ಕೆ) ನೀಳ್ಗತೆಗಳು, ತುಳು ಜಾನಪದ ಸಂಶೋಧನಾ ಬರಹಗಳು, ಅಲ್ಲದೇ ತುಳು ಪಾಡ್ದನ ಮತ್ತು ಮಲೆಯಾಳಂ ತೋತ್ತ್ಂಗಳ ತೌಲನಿಕ ಅಧ್ಯಯನಗಳು ಅತ್ಯಂತ ಅಪರೂಪದ ಕೆಲಸಗಳು. ಈ ಭಾಷೆಯ ಸಾಹಿತ್ಯಕ್ಕೆ ನೀಡಿದ ಅಮೂಲ್ಯ ಕೊಡುಗೆಗಳು ಅದು ಪರಿಗಣನೆಗೆ ಒಳಗಾಗಬೇಕು ಎನ್ನುವ ಆಶಯ ನನ್ನದು.
12.01.2020 ಡಾ.ಸುಂದರ ಕೇನಾಜೆ
Comments
Post a Comment