ಯಕ್ಷರಂಗಕ್ಕೊಂದು ಭಾಷ್ಯ ಬರೆದ ಲೀಲಾವತಿ ಬೈಪಡಿತ್ತಾಯ
ಆ
ಕಾಲ ಇನ್ನೂ ಅನೇಕ ಯಕ್ಷ
ಪ್ರಿಯರಿಗೆ ನೆನಪಿರಬಹುದು. ಜೀಪಿಗೆ ಮೈಕ್ಕಟ್ಟಿ
ಜನಾಕರ್ಷಣೆಗಾಗಿ ಮೇಳದ ವೈಶಿಷ್ಠ್ಯಗಳನ್ನು ಊರೂರಿಗೆ
ಬಿತ್ತರಿಸುತ್ತಿದ್ದ ಕಾಲ, ಹೋದಲ್ಲಿ ಬಂದಲ್ಲಿ
ಆ ದಿನ ಊರಿಗೆ
ಬಂದ ಮೇಳದ ವಿಶೇಷತೆಯನ್ನು ಚರ್ಚಿಸುತ್ತಿದ್ದ
ಕಾಲ, ರಾತ್ರಿಯ ಹೊತ್ತು ಜನಜಂಗುಳಿಯಿಂದ
ಕಟ್ಟಿದ ಟೆಂಟನ್ನೇ ಬಿಚ್ಚು ಮುಕ್ತ ಪ್ರದರ್ಶನ
ನಡೆಸುತ್ತಿದ್ದ ಕಾಲ. ಹಾಗೆ ಬಿತ್ತರವಾಗುತ್ತಿದ್ದ
ಹಾಗೂ ಚರ್ಚಿಸುತ್ತಿದ್ದ ವೈಶಿಷ್ಠ್ಯಗಳಲ್ಲಿ ಮಹಿಳಾ ಭಾಗವತಿಕೆಯೂ ಒಂದು.
ಪ್ರಮುಖ ವಿಶೇಷ ಆಕರ್ಷಣೆಯಾಗಿ ಕಂಚಿನ
ಕಂಠದ, ಸಂಗೀತ ಪ್ರೀಯರೂ ತಲೆದೂಗುವ
ಪತಿ ಪತ್ನಿಯ ಹಿಮ್ಮೇಳವನ್ನು ಕೇಳಲು
ನೋಡಲು ಮರೆಯದಿರಿ, ಎಂದೆಲ್ಲಾ ಮೂಲೆಮೂಲೆಗಳಿಂದಲೂ ಕೇಳಿದ್ದಕ್ಕೆ ಜನ ಸಾಗರ ಬಂದು
ಸೇರಿದ ದಾಖಲೆಯೂ ಇದೆ. ಕೆಲವು
ಮೇಳದ ಟೆಂಟು ಬಿಚ್ಚಿ ಬಯಲಾಟ
ನೋಡಿದ ನೆನಪೂ ಇದೆ. ಈ
ವೈಶಿಷ್ಠ್ಯಗಳನ್ನು ಸಾಕ್ಷೀಕರಿಸುತ್ತಾ ಯಕ್ಷಗಾನ ಕ್ಷೇತ್ರದ ಹಲವು
ಕುತೂಹಲ, ದಾಖಲೆಗಳಿಗೆ ಅಂದು ಇಂದು ಹೆಸರಾದವರು
ಶ್ರೀಮತಿ ಲೀಲಾವತಿ ಬೈಪಡಿತ್ತಾಯ.
ಕರಾವಳಿ
ಯಕ್ಷರಂಗದ ಹೆಜ್ಜೆ ಗುರುತುಗಳ ಅಳಿಸಲಾದ
ದಾಖಲೆಗಳಲ್ಲಿ ವೃತ್ತಿಪರ ಮಹಿಳಾ ಭಾಗವತರೋರ್ವರ ಪ್ರವೇಶ
ಚಿರಸ್ಥಾಯಿಯಾದುದು. ಗಂಡು ಕಲೆ ಎಂದೇ
ಕರೆಯಲ್ಪಡುವ ತೆಂಕು ಯಕ್ಷಗಾನಕ್ಕೆ ಪುರುಷರೇ
ಕಾಲಿಡಲು ಹಿಂಜರಿಯುವ ಕಾಲಕ್ಕೆ ಮಹಿಳೆ ಅದರಲ್ಲೂ
ಸಂಸಾರಸ್ಥ ಮಹಿಳೆಯ ಪ್ರವೇಶ ಯಕ್ಷ
ಕ್ಷೇತ್ರಕ್ಕೊಂದು ಮಹತ್ವದ ತಿರುವು ಕೊಟ್ಟ
ಸಂಗತಿ. ಯಕ್ಷಗಾನ ಭಾಗವತನೆಂದರೆ ಇಡೀ
ತಂಡದ ಸೂತ್ರಧಾರ. ಈ ಸೂತ್ರಧಾರಿಕೆಯನ್ನು ಹಲವು
ಮೇಳಗಳಲ್ಲಿ ಹಲವು ದಶಕಗಳ ಕಾಲ
ಹಿಡಿದಿಟ್ಟುಕೊಂಡವರು, ಯಕ್ಷ ದಿಗ್ಗಜರೇ ಅಚ್ಚರಿ
ಪಡುವಂತೆ ಮಾಡಿದವರು ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು.
ನಿಜಾರ್ಥದಲ್ಲಿ ತಮ್ಮ ಕಂಚಿನ ಕಂಠದಿಂದ
ಯಕ್ಷಗಾನ ಪದ್ಯಗಳ ಎಲ್ಲಾ ಏರಿಳಿತಗಳನ್ನು
ಸಮರ್ಥವಾಗಿ, ಸುಶ್ರಾವ್ಯವಾಗಿ ಮತ್ತು ಕರಾರುವಕ್ಕಾಗಿ ಅಭಿವ್ಯಕ್ತಿಸುತ್ತಾ
ಬಂದವರು. ಅಲ್ಲದೇ ಒಂದು ಕಾಲದಲ್ಲಿ
ದಾಖಲೆಯ ಆಟಕೂಟವನ್ನು ನಡೆಸಿಕೊಟ್ಟವರು. ತೆಂಕು-ಬಡಗುತಿಟ್ಟಿನ ಅತಿರಥ
ಮಹಾರಥ ಕಲಾವಿದರನ್ನು ಕುಣಿಸಿದವರು. ಬಹು ಬೇಡಿಕೆಯ ಹಾಗೂ
ತಾರಾ ಮೌಲ್ಯದ ಕಲಾವಿದೆಯಾಗಿ ಎಂಬತ್ತರ
ದಶಕದಲ್ಲಿ ಕರಾವಳಿ ಯಕ್ಷಪ್ರೇಮಿಗಳ ಮನೆ
ಮಾತಾಗಿದ್ದವರು.
ಮಹಿಳೆಯೋರ್ವರ
ಭಾಗವತಿಕೆ ಎನ್ನುವ ಕಾರಣಕ್ಕೇ ಮೇಳಗಳು
ವಿಜೃಂಭಿಸಿದ ಉದಾಹರಣೆ ಹಾಗೂ ಇಂದಿಗೂ
ಮುರಿಯಲ್ಪಡದ ದಾಖಲೆ ಶ್ರೀಮತಿ ಲೀಲಾವತಿ
ಬೈಪಾಡಿತ್ತಾಯರ ಹೆಸರಿನಲ್ಲಿದೆ. ಆ ಮೊದಲು ಮತ್ತು
ಆ ನಂತರ ಯಕ್ಷಗಾನ
ಮೇಳಕ್ಕೆ ಪೂರ್ಣಕಾಲಿಕವಾಗಿ ಮಹಿಳೆಯರ ಪ್ರವೇಶ ಆಗದೇ
ಇರುವುದೇ ಇವರ ದಿಟ್ಟತನಕ್ಕೆ ಸಾಕ್ಷಿ.
ಅಲ್ಲದೇ ತನ್ನ ಛಲ ಮತ್ತು
ಪ್ರತಿಭೆಗೆ ಹಿಡಿದ ಕನ್ನಡಿ. ತನ್ನ
ಪತಿ ಹರಿನಾರಾಯಣ ಬೈಪಾಡಿತ್ತಾಯರ ಹಿಮ್ಮೇಳ ಜೊತೆಗಿದ್ದರೂ ಮಹಿಳೆ
ಎದುರಿಸುವ ಅನೇಕ ಸವಾಲುಗಳಿಗೆ ಉತ್ತರವಾಗಿ
ನಿಂತ ಶ್ರೀಮತಿ ಲೀಲಾವತಿ ಬೈಪಡಿತ್ತಾಯರು
ಇಂದು ಎಲ್ಲಾ ರೀತಿಯಿಂದಲೂ ಅಭಿನಂದನಾರ್ಹರು.
ಯಕ್ಷರಂಗಕ್ಕೊಂದು ಹೊಸ ಭಾಷ್ಯ ಬರೆದುದೇ
ಇದಕ್ಕೆ ಕಾರಣ. ಕರಾವಳಿಯ ಸಹಸ್ರಾರು
ಯಕ್ಷ ಪ್ರೇಮಿಗಳ ಪ್ರೀತಿ, ವಿಶ್ವಾಸ, ಹತ್ತು
ಹಲವು ಮಾನ ಸನ್ಮಾನ ಇವೆಲ್ಲದರ
ಮಧ್ಯೆ ಸಂತೃಪ್ತ ಜೀವನ ನಡೆಸುತ್ತಿರುವ
ಬೈಪಾಡಿತ್ತಾಯ ದಂಪತಿಗಳು ಹೊಸ ಪರಂಪರೆಯ ಸೃಷ್ಟಿಗೆ
ಕಾರಣರಾದವರು.
ಸವಾಲಿನ
ಕ್ಷೇತ್ರದಲ್ಲಿ ಕಲಾವಿದೆಯಾಗಿ, ಅದನ್ನು ಪೋಷಿಸುವಲ್ಲಿ ಪ್ರತಿಭಾನ್ವಿತೆಯಾಗಿ,
ಹೊಸ ದಾರಿಯೊಂದನ್ನು ತೋರಿಸಿ ಕೊಡುವಲ್ಲಿ ಮೊದಲಿಗರಾಗಿ
ನಮ್ಮ ಮುಂದಿರುವ ಶ್ರೀಮತಿ ಬೈಪಾಡಿತ್ತಾಯರಿಗೆ ಈ
ಬಾರಿಯ ವನಜರಂಗಮನೆ ಪ್ರಶಸ್ತಿ ಸಲ್ಲುತ್ತಿದೆ. ರಂಗಮನೆಯ ಎಲಾ ್ಲಚಟುವಟಿಕೆಯ
ಹಿಂದೆ ಮಾತೃಶಕ್ತಿಯಾಗಿ ಅನೇಕ ವರ್ಷ ತನ್ನನ್ನು
ತಾನೇ ಸವೆಸಿಕೊಂಡಿದ್ದ ಶ್ರೀಮತಿ ವನಜಾಕ್ಷಿಜಯರಾಮ್ರವರ
ಹೆಸರಿನಲ್ಲಿ ರಂಗಕರ್ಮಿ ಜೀವನ್ರಾಂ ಸುಳ್ಯ
ಪುರಸ್ಕರಿಸುತ್ತಿರುವ ಆರನೇ ಪ್ರಶಸ್ತಿ ಇದು.
ಕಳೆದ ಆರು ವರ್ಷಗಳಲ್ಲಿ ಮಹಿಳಾ
ಕಲಾವಿದರೋರ್ವರು ಪಡೆಯುತ್ತಿರುವ ಪ್ರಥಮ ಪ್ರಶಸ್ತಿಯೂ ಹೌದು.
ಅದರಲ್ಲೂ ಪ್ರಥಮ ಮಹಿಳಾ ಭಾಗವತೆಗೇ
ಸಲ್ಲುತ್ತಿರುವುದು ಈ ಭಾರಿಯ ವಿಶೇಷತೆ.
ಇದೇ ಆಗಷ್ಟ್ 25ರ ಸಂಜೆ ಗಣ್ಯ
ಅತಿಥಿಗಳ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರಧಾನ
ಕಾರ್ಯಕ್ರಮ ನಡೆಯಲಿದೆ. ಸನ್ಮಾನ ಸ್ವೀಕರಿಸಿದ ನಂತರ
ಶ್ರೀಮತಿ ಬೈಪಾಡಿತ್ತಾಯರು ಸ್ವತಾಃ ಜಾಗಟೆ ಹಿಡಿಯಲಿದ್ದಾರೆ.
ಪತಿ ಶ್ರೀ ಹರಿನಾರಾಯಣ ಬೈಪಾಡಿತ್ತಾಯರು
ಸಾಥ್ ನೀಡಲಿದ್ದಾರೆ. ರಾತ್ರಿ ಸನಾತನ ಯಕ್ಷಾಲಯ
ಮಂಗಳೂರು ಇಲ್ಲಿನ ಮಹಿಳಾ ಕಲಾವಿದರಿಂದ
‘ಮಾನಿಷಾದ’
ಯಕ್ಷಗಾನ ಬಯಲಾಟವೂ ಪ್ರದರ್ಶನಗೊಳ್ಳಲಿದೆ. ಮಳೆಗಾಲ
ಕಳೆದ ನಂತರದ ಅಪೂರ್ವ ಕಾರ್ಯಕ್ರಮಕ್ಕೆ
ಸುಳ್ಯದ ರಂಗಮನೆ ಸಜ್ಜಾಗುತ್ತಿದೆ ಹಾಗೂ
ಯಕ್ಷಾಸಕ್ತರ ಆಗಮನಕ್ಕಾಗಿ ಕಾಯುತ್ತಿದೆ.
- ಡಾ.ಸುಂದರಕೇನಾಜೆ
Comments
Post a Comment