ಯಕ್ಷಗಾನ ಪಠ್ಯ



                               ಯಕ್ಷಗಾನ ಪಠ್ಯ- ಕ್ರಿಯೆ ಮತ್ತು ಪ್ರತಿಕ್ರಿಯೆ
     ಯಕ್ಷಗಾನಕ್ಕೆ ಪಠ್ಯ ಎನ್ನುವ ವಿಷಯದಲ್ಲಿ ಬೇರೆಬೇರೆ ಕಡೆಗಳಿಂದ ಒಂದಷ್ಟು ಚರ್ಚೆಗಳು ನಡೆಯುತ್ತಿದೆ. ಆದರೆ ಹಿಂದೆ, ಅಂದರೆ ಹೆಚ್ಚು ಕಡಿಮೆ ಹತ್ತು ವರ್ಷಗಳ ಹಿಂದೆ ವಿಚಾರದಲ್ಲಿ ನಡೆದ ಕೆಲಸದ ಬಗ್ಗೆ ಅರಿವಿಲ್ಲದೆಯೋ ಅಥವಾ ಜಾಣ ಮರೆವಿನಿಂದಲೋ ಕೆಲವರು ಪ್ರತಿಕ್ರಿಯೆ ನೀಡುವುದನ್ನೂ ಗಮನಿಸಿದ್ದೇನೆ. ಅದೇನೇ ಇದ್ದರು ಈಗಾಗಲೇ ತಯಾರಾದ ಪಠ್ಯಪುಸ್ತಕದÀ ಒಳಗೇನಿದೆ ಎಂದು ಬಿಡುಗಡೆಗೊಳ್ಳದೇ ನಾನು ಹೇಳಲು ಇಚ್ಚಿಸುವುದಿಲ್ಲ. ಆದರೆ ಅದರ ತಯಾರಿಯ ಹಿಂದೆ ನಡೆದ ಪ್ರಕ್ರಿಯೆಯಲ್ಲಿ ಪಠ್ಯಪುಸ್ತಕ ಸಮಿತಿ ಕೆಲಸ ಮಾಡಿದ ಮತ್ತು ಅದನ್ನೆಲ್ಲೂ ನಾವು(ತಂಡ) ದಾಖಲಿಸದೇ ಇರುವ ಕಾರಣ ಅದನ್ನು ನಾನಿಲ್ಲಿ ದಾಖಲಿಸಲು ಇಚ್ಚಿಸುತ್ತೇನೆ.
ಯಕ್ಷ ಶಿಕ್ಷಣ ಅಂದರೆ
             ಕರ್ನಾಟಕ ಪೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರತಿ ವರ್ಷಇತರ ಪರೀಕ್ಷೆಗಳು ಎಂದು ಕಲೆಗಳಿಗೆ ಸಂಬಂಧಿಸಿ ಪರೀಕ್ಷೆ ನಡೆಸಿ ಸರ್ಟಿಫಿಕೇಟ್ಗಳನ್ನು ನೀಡುತ್ತದೆ. ಪರೀಕ್ಷೆಗಳಲ್ಲಿ ಮುಖ್ಯವಾಗಿ ಸಂಗೀತ, ಭರತನಾಟ್ಯ, ಚಿತ್ರಕಲೆ ಇತ್ಯಾದಿಗಳು ಸೇರಿಕೊಂಡಿವೆ. ಪ್ರಕಾರಗಳಿಗೆ ಸಾಮಾನ್ಯವಾಗಿ ಮೂರು ಹಂತಗಳಲ್ಲಿ ಅಂದರೆ ಜೂನಿಯರ್, ಸೀನಿಯರ್, ವಿದ್ವತ್ ಹೆಸರಿನಿಂದ ಪರೀಕ್ಷೆಗಳು ನಡೆಯುತ್ತದೆ. ವಿಭಾಗದಲ್ಲಿ ತೇರ್ಗಡೆಯಾದವರೇ ಇಂದು ಶಾಸ್ತ್ರೀಯ ವಿಭಾಗದ ಕಲಾವಿದರಾಗಿ, ಗುರುಗಳಾಗಿ ಬೆಳೆದು ನಿಂತಿರುವವರು. ರೀತಿ ಪರೀಕ್ಷೆ ನಡೆಸುವುದಕ್ಕಾಗಿ ಕಲೆಗಳಿಗೆ ಬಹಳ ವರ್ಷಗಳ ಹಿಂದೆಯೇ ತಜ್ಞರ ಮೂಲಕ ಪಠ್ಯ ರಚನೆ ಮಾಡಲಾಗಿದೆ. ಕರ್ನಾಟಕ ಪಠ್ಯ ಪುಸ್ತಕ ಸಂಘ ಪಠ್ಯಪುಸ್ತಕ ರಚಿಸುತ್ತದೆ. ಪರೀಕ್ಷಾ ಮಂಡಳಿ ಖಾಸಗಿ ಸಂಸ್ಥೆಗಳ ಕಲಿಕಾರ್ಥಿಗಳಿಗೆ ಪರೀಕ್ಷೆ ನಡೆಸುತ್ತದೆ. ಇದರಿಂದ ಇಂತಹಾ ಕಲೆಗಳಿಗೆ ಸರಕಾರದಿಂದ ಒಂದು ಅಧಿಕೃತ ಮಾನ್ಯತೆ ದೊರಕಿದಂತಾಗಿದೆ ಮತ್ತು ಇವುಗಳ ಬೆಳವಣಿಗೆಗೆ ಅನುಕೂಲವೂ ಆಗಿದೆ. ಆದರೆ ಯಕ್ಷಗಾನದಂತಂತಹಾ ಉನ್ನತ ವ್ಯಾಪ್ತಿ ಮತ್ತು ಬಹುಶ್ರುತ ಕಲೆಯ ಕಲಿಕೆಗೆ ಸರಕಾರಿ ಅಧಿಕೃತ ಸಂಸ್ಥೆಯಿಂದ ಕೆಲಸ ನಡೆದದ್ದು ಕಡಿಮೆ. ಯಕ್ಷಗಾನಕ್ಕೆ ಶಾಸ್ತ್ರೀಯ ಹಿನ್ನಲೆ ಇದ್ದರೂ ಅದು ಜನಪದ ಮಾದರಿಯ ಕಲಿಕೆಯನ್ನೇ ರೂಢಿಸಿಕೊಂಡು ಬಂದಿದೆ. ಹಿನ್ನಲೆಯಲ್ಲಿ ಯಕ್ಷಗಾನಕ್ಕೂ ಅಧಿಕೃತ ಸಂಸ್ಥೆಯ ಮೂಲಕ ಔಪಚಾರಿಕ ಕಲಿಕೆ ನಡೆಯಬೇಕೆಂಬ ಆಶಯ ನಮ್ಮದು. ಇದು ಹತ್ತು ವರ್ಷಗಳ ಹಿಂದೆ ಸುಳ್ಯದ ಶಿಕ್ಷಕರ ಯಕ್ಷಗಾನ ಒಕ್ಕೂಟದಲ್ಲಿ ಚರ್ಚೆಯಾಗಿ ಒಂದಷ್ಟು ಮಕ್ಕಳಿಗೆ ಪ್ರಾಯೋಗಿಕವಾಗಿಯೂ ಮಾಡಿ ನೋಡಿದ ಸಂಗತಿ.
ಪಠ್ಯಕ್ರಮದ ತಯಾರಿ
        ನಂತರ ಯಕ್ಷಗಾನ ಅಕಾಡೆಮಿಗೆ ಸದಸ್ಯನಾಗಿ ನೇಮಕವಾದ ನಾನು ಒಕ್ಕೂಟದ ಆಶಯವನ್ನು ಸರಕಾರಿ ಮಟ್ಟದಲ್ಲಿ ಜಾರಿಗೆ ತರುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದೆ. ‘ಯಕ್ಷ ಶಿಕ್ಷಣ ಎನ್ನುವ ಹೆಸರಿನ ಪ್ರಸ್ತಾವನೆಗೆ ಅಕಾಡೆಮಿ ತನ್ನ ಮೊದಲ ಸಭೆಯಲ್ಲಿ ಒಪ್ಪಿಗೆ ಕೊಟ್ಟಿತು. ಅದರ ಸಂಚಾಲಕನಾಗಿ ನನ್ನನ್ನು ನೇಮಕ ಮಾಡಿತು. (ನಾನಾಗ ಕೆಲವು ತರಗತಿಗಳ ಪಠ್ಯಪುಸ್ತಕ ಸಮಿತಿಯ ಸದಸ್ಯನೂ ಆಗಿದ್ದೆ) ಯಕ್ಷಗಾನ ಅಕಾಡೆಮಿಯ ಮೊದಲ ಕಾರ್ಯಕ್ರಮದ ಉದ್ಘಾಟನೆ ಹಾಗೂ ಯಕ್ಷ ಶಿಕ್ಷಣ ಕಾರ್ಯಗಾರ ಇವೆರಡನ್ನೂ ಸುಳ್ಯದಲ್ಲಿ 2009 ಜನವರಿಯಲ್ಲಿ ನಡೆಸಲಾಯಿತು. ಎರಡು ದಿನ ನಡೆದ ಕಾರ್ಯಾಗಾರದಲ್ಲಿ ತೆಂಕು ಮತ್ತು ಬಡಗಿನ ಸುಮಾರು 60ಕ್ಕೂ ಹೆಚ್ಚು ಹಿರಿಯ ಕಿರಿಯ ಕಲಾವಿದರು, ವಿದ್ವಾಂಸರು, ವಿಮರ್ಶಕರು, ಗುರುಗಳು ಸೇರಿದ್ದರು. ವಿಭಾಗವಾರು ಚರ್ಚೆ, ಸಂವಾದ ಮತ್ತು ಅಭಿಪ್ರಾಯ ಹಂಚಿಕೆಯ ಮೂಲಕ ಯಕ್ಷಗಾನದ ಜೂನಿಯರ್ ಮತ್ತು, ಸೀನಿಯರ್ ವಿಭಾಗಕ್ಕೆ ಪಠ್ಯಕ್ರಮವನ್ನು ರಚಿಸಲಾಯಿತು. ಈಗಾಗಲೇ ಹಲವು ಪಠ್ಯಪುಸ್ತಕ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ್ದ ಸುಳ್ಯದ ಪ್ರಕಾಶ್ ಮೂಡಿತ್ತಾಂರು ಹಂತದಲ್ಲಿ ಪಠ್ಯಪುಸ್ತಕ ಸಂಘದ ನಿಯಮಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಿದರು.( ನಂತರ ಇದರ ಪರಿಸ್ಕರಣೆ ವಿವಿಧ ಹಂತದಲ್ಲಿ ತಜ್ಞರಿಂದ ನಡೆದಿದೆ.)
       ಹೀಗೆ ರಚನೆಯಾದ ಪಠ್ಯಕ್ರಮದ ಅನುಮೋದನೆಯನ್ನು ಡಿ.ಎಸ್..ಆರ್.ಟಿ ಬೆಂಗಳೂರು ಇಲ್ಲಿಂದ ಪಡೆಯಬೇಕಾಗಿತ್ತು. ನಂತರ ಅಲ್ಲಿಂದ ಅದನ್ನು ಸರಕಾರದ ಒಪ್ಪಿಗೆಗಾಗಿ ಕಳುಹಿಸಬೇಕಾಗಿತ್ತು. ಸರಕಾರದ ಪ್ರಧಾನ ಕಾರ್ಯದರ್ಶಿ ಹಂತದಿಂದ ಶಿಕ್ಷಣ ಸಚಿವರ ವರೆಗೂ ಕಡತ ಹೋಗಬೇಕಾಗಿತ್ತು. ಹೀಗೆ ಹೋಗಬೇಕಾದ ಕಡತ ಆಗಾಗ ಅಜ್ಞಾತವಾಸ ಅನುಭವಿಸುತ್ತಲೂ ಇತ್ತು. ಸಂದರ್ಭದಲ್ಲೆಲ್ಲಾ ಒಬ್ಬೊಬ್ಬ ಅಧಿಕಾರಿಗಳು ಸಹಕರಿಸುತ್ತಾ ಬಂದಿದ್ದರು. ಡಿ.ಎಸ್..ಆರ್.ಟಿಯಲ್ಲಿ ಆಗ ಹಿರಿಯ ಸಹಾಯಕ ನಿರ್ದೇಶಕರು, ಆತ್ಮೀಯರೂ ಆದ ಗಂಗಮಾರೇ ಗೌಡರು ಕಡತವನ್ನು ಮುಂದಕ್ಕೆ ಕಳುಹಿಸಲು ಸಹಕರಿಸಿದರು. (ಇದರೊಂದಿಗೆ ತುಳು ಪಠ್ಯದ ಕಡತವನ್ನೂ ಕಳುಹಿಸುವಂತೆ ವಿನಂತಿಸಿಕೊಂಡೆ. ತುಳು ಪಠ್ಯಪುಸ್ತಕ ಜಾರಿಗೆ ಬಂದು ಆರೇಳು ವರ್ಷಗಳೇ ಆದವು) ಪ್ರಧಾನ ಕಾರ್ಯದರ್ಶಿ ಹಂತದಲ್ಲಿ ಉತ್ತರ ಕನ್ನಡದ ಯಕ್ಷಗಾನ ಪ್ರೇಮಿ ಪಟಗಾರ್ ಅಧೀನ ಕಾರ್ಯದರ್ಶಿಯಾಗಿದ್ದರು. ಅವರು ಕಡತವನ್ನು ಮುಂದಕ್ಕೆ ಕಳುಹಿಸಿದರು. ಶಿಕ್ಷಣ ಸಚಿವರ ಹಂತದಲ್ಲಿ ಅಕಾಡೆಮಿಯ ಅಧ್ಯಕ್ಷ ಕುಂಭ್ಳೆ ಸುಂದರ ರಾಯರು ಹಾಗೂ ಇತರ ಕೆಲವು ಸದಸ್ಯರೊಂದಿಗೆ ಭೇಟಿ ಮಾಡಿ ಒಪ್ಪಿಗೆ ಪಡೆದುಕೊಳ್ಳಲಾಯಿತು.(ಮುಖ್ಯಮಂತ್ರಿಗಳನ್ನು ಕೂಡ) ಹೀಗೆ ಪಠ್ಯಕ್ರಮದ ಒಪ್ಪಿಗೆಗಾಗಿ ಕೆಲವು ವರ್ಷ ಅಲೆಯಬೇಕಾಯಿತು.
ಪಠ್ಯಪುಸ್ತಕದ ಕೆಲಸ
    ಪಠ್ಯಕ್ರಮಕ್ಕೆ ಒಪ್ಪಿಗೆ ದೊರಕಿದ ನಂತರ ಪಠ್ಯಪುಸ್ತಕ ರಚನೆಗೆಕರ್ನಾಟಕ ಪಠ್ಯಪುಸ್ತಕ ಸಂಘ ಮುಂದಾಗಬೇಕು. ಹಿನ್ನಲೆಯಲ್ಲಿ  ಪಠ್ಯಪುಸ್ತಕ ರಚನೆಗಾಗಿ ಅಕಾಡೆಮಿಯೊಂದಿಗೆ ಅಭಿಪ್ರಾಯ ಪಡೆದುಕೊಂಡಿತು. ಪಠ್ಯಪುಸ್ತಕ ಸಂಘದ ನಿಯಮದ ಪ್ರಕಾರ, ಜೂನಿಯರ್, ಮತ್ತು ಸೀನಿಯರ್ ವಿಭಾಗದ ಪಠ್ಯಪುಸ್ತಕ ರಚನೆಗೆ ಒಬ್ಬೊಬ್ಬ ಅಧ್ಯಕ್ಷ, ಪರಿಶೀಲಕ ಹಾಗೂ ಐವರು ಸದಸ್ಯರ ರಚನಾ ಸಮಿತಿ ಬೇಕಿತ್ತು. ಜೂನಿಯರ್ ವಿಭಾಗದ ಅಧ್ಯಕ್ಷರಾಗಿ ಹೊಸ್ತೋಟ ಮಂಜುನಾಥ ಭಾಗವತರು, ಪರಿಶೀಲಕರಾಗಿ ಪ್ರೊ.ಎಂಎಲ್.ಸಾಮಗ, ಸದಸ್ಯರಾಗಿ ಕೆ.ಗೋವಿಂದ ಭಟ್, ತಾರಾನಾಥ ವರ್ಕಾಡಿ, ಸುಜೀಂದ್ರ ಹಂದೆ, ಗಣರಾಜ ಕುಂಬ್ಳೆ ಮತ್ತು ಪ್ರಕಾಶ್ ಮೂಡಿತ್ತಾಯ, ಸೀನಿಯರ್ ವಿಭಾಗದ ಅಧ್ಯಕರಾಗಿ ಕುಂಬ್ಳೆ ಸುಂದರ ರಾವ್, ಪರಿಶೀಲಕರಾಗಿ ಡಾ.ಜಿ.ಎಸ್.ಭಟ್ ಸಾಗರ, ಸದಸ್ಯರಾಗಿ ಕರ್ಗಲ್ಲು ವಿಶ್ವೇಶ್ವರ ಭಟ್, ಸದಾನಂದ ಐತಾಳ್, ಡಾ.ಕೆ.ಕಮಲಾಕ್ಷ, ರಾಧಾಕೃಷ್ಣ ಕಲ್ಚಾರ್, ಮತ್ತು ನಾನು. ಎರಡೂ ಸಮಿತಿಯ ಕಲಾವಿದರಾಗಿ ದಿನೇಶ್ ಕುಕ್ಕುಜಡ್ಕ ಮತ್ತು ಫೋಟೋ ದಾಖಲೆಗೆ ಜೀವನ್ ರಾಂ ಸುಳ್ಯ ಇವರು ಆಯ್ಕೆಗೊಂಡರು. ತೆಂಕು-ಬಡಗು ಕುಣಿತ ವಿಭಾಗದ ನುರಿತ ಕಲಾವಿದರು, ಅಕಾಡೆಮಿಕ್ ಜ್ಞಾನ ಇರುವವರು ಮತ್ತು ಪಠ್ಯಕ್ಕೆ ಬೇಕಾದ ಮೌಲ್ಯಮಾಪನ ಮತ್ತು ವಿನ್ಯಾಸದ ತಿಳುವಳಿಕೆ ಇರುವವರು ಎನ್ನುವ ಹಿನ್ನಲೆಯಲ್ಲಿ ಪಟ್ಟಿಯನ್ನು ರಚಿಸಲಾಗಿತ್ತು.
         ಪಟ್ಟಿಯೂ ಇಲಾಖೆ ಮತ್ತು ಸರಕಾರದಿಂದ ಹಿಂದಿನಂತೆ ಹಂತಹಂತವಾಗಿ ಒಪ್ಪಿಗೆ ಪಡೆಯಬೇಕಾಗಿತ್ತು. ಮತ್ತೆ ಅದರ ಹಿಂದೆ ಹೋಗಿ ಒಪ್ಪಿಗೆ ಪಡೆಯಲಾಯಿತು. ಹೀಗೆ ಒಪ್ಪಿಗೆ ಪಡೆದ ಎರಡೂ ಸಮಿತಿ ಜೊತೆಯಾಗಿ ಮೂರು ದಿನಗಳಂತೆ ಒಟ್ಟು ಎಂಟು ಬಾರಿ ಅಧಿಕೃತವಾಗಿ ಹಾಗೂ ಐದಾರು ವರ್ಷ ಅದೆಷ್ಟೋ ಬಾರಿ ಸ್ವ-ಆಸಕ್ತಿಯಿಂದ (ಯಾವ ಸಂಭಾವನೆಯೂ ಇಲ್ಲದೆ) ಕೆಲಸ ಮಾಡಿದೆ. ಪ್ರಕಾಶ ಮೂಡಿತ್ತಾಯರ ಮನೆಯಲ್ಲಿ ಅವರದೇ ಸಂಘಟನೆಯಲ್ಲಿ ಹಲವು ಬಾರಿ ಅನೌಪಚಾರಿಕ ಕಾರ್ಯಾಗಾರಗಳೂ ನಡೆದಿವೆ. ದೂರದ ಸಾಗರ, ಉತ್ತರ ಕನ್ನಡ, ಉಡುಪಿ, ಕಾಸರಗೋಡು ಕಡೆಯಿಂದ ಬೆಂಗಳೂರು, ಮಂಗಳೂರು, ಸುಳ್ಯಕ್ಕೆ ಯಾವ ಫಲಾಪೇಕ್ಷೆಯೂ ಇಲ್ಲದೇ ಸಮಿತಿಯ ಸದಸ್ಯರು ದಿನಗಟ್ಟಲೆ ಬಂದು ಕೆಲಸ ಮಾಡಿ ಹೋಗಿದ್ದಾರೆ. ಕೊನೆಗೂ ತಯಾರಾದ(ತೆಂಕು ಮತ್ತು ಬಡಗು ಪ್ರತ್ಯೇಕ) ಪಠ್ಯಪುಸ್ತಕದ ಕರಡನ್ನು ಹಿಂದಿನ ಹಂತಗಳಲ್ಲಿ ಪಡೆದ ಒಪ್ಪಿಗೆಯಂತೆ ಮತ್ತೆ ಪಡೆದುಕೊಳ್ಳಬೇಕಿತ್ತು. ಕಾರ್ಯವೂ ಇದೀಗ ಮುಗಿದಿದೆ. ಹಂತಗಳಲ್ಲಿ ಇಲಾಖಾ ಪ್ರತಿನಿಧಿಯಾಗಿ ಅತ್ಯಂತ ಉತ್ಸುಹಕರಾಗಿ ಕೆಲಸ ನಿರ್ವಹಿಸಿದವರು ಕರ್ನಾಟಕ ಪಠ್ಯ ಪುಸ್ತಕ ಸಂಘದ ಹಿರಿಯ ಸಹಾಯಕ ನಿರ್ದೇಶಕರಾಗಿದ್ದ (ಇದೀಗ ಪರಿಕ್ಷಾ ಮಂಡಳಿಯ ಉಪನಿರ್ದೇಶಕರು) ಪಾಂಡುರಂಗರವರು. ಯಕ್ಷಗಾನದ ನಾಡಿನಲ್ಲಿ ಹುಟ್ಟಿ ಬೆಳೆಯದಿದ್ದರೂ ಅಧಿಕಾರಿಯ ಆಸಕ್ತಿ ಅನುಕರಣೀಯ. ಸಂಯೋಜಕರಾಗಿದ್ದ ಪಿ.ಎಸ್. ಮುಡಂಬಡಿತ್ತಾಯ(ಈಗ ದಿವಂಗತರು) ಬೇಗನೆ ಪಠ್ಯ ಪ್ರಕಟವಾಗಬೇಕೆನ್ನುವ ಹಿತಾಸಕ್ತಿಯನ್ನು ಹೊಂದಿದ್ದರೂ ಅವರಿಗೆ ಅದನ್ನು ಕಾಣಲು ಸಾಧ್ಯವಾಗಲಿಲ್ಲ.
 ಮುದ್ರಣಗೊಳ್ಳಲು ಒಪ್ಪಿಗೆ.
        ಪಠ್ಯಪುಸ್ತಕದ ಕೆಲಸಕ್ಕೆ ಹೆಚ್ಚು ಕಡಿಮೆ ಹತ್ತು ವರ್ಷಗಳಾಗುತ್ತಾ ಬಂತು. ಆದರೆ ಇನ್ನೂ ಅದು ಹೊರಬಂದಿಲ್ಲ, ಕೆಲವು ಬಾರಿ ಗಂಭೀರ ಕಾರಣಗಳು, ಹಲವು ಬಾರಿ ಕ್ಷುಲ್ಲಕ ಕಾರಣಗಳಿಂದಾಗಿ ಸ್ಥಗಿತಗೊಂಡಿದೆ. ಅಕಾಡೆಮಿಯಲ್ಲಿ ನಮ್ಮ ಅವಧಿ ಮುಗಿದ ನಂತರ ಪ್ರೊ. ಎಂ.ಎಲ್. ಸಾಮಗರ ಅಧ್ಯಕ್ಷತೆಯಲ್ಲಿ ಪ್ರಯತ್ನಗಳು ನಡೆಯಿತು.(ಇವರು ಪ್ರಯತ್ನ ಈಗಲೂ ಇದೆ) ಆಗ ಅದರ ಕೆಲಸ ಪೂರ್ಣಗೊಳ್ಳಲು ಬಾಕಿ ಇದ್ದುದರಿಂದ ಮುಂದಕ್ಕೆ ಹೋಯಿತು. ಆದರೆ ನಂತರ ಬಂದ ಸಮಿತಿಗಳು ಅದನ್ನು ಪ್ರಾಮಾಣಿಕವಾಗಿ  ಮುಂದುವರಿಸುವ ಕಾರ್ಯವನ್ನು ಮಾಡಬೇಕಿತ್ತು.(ಈಗಿನ ಅಧ್ಯಕ್ಷರು ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಪತ್ರಿಕಾ ಹೇಳಿಕೆಯನ್ನು ಗಮನಿಸುತ್ತಿದ್ದೇನೆ) ‘ನಾನು ಸೇರದೇ ಇರುವುದರಿಂದ ಪ್ರಕ್ರಿಯೆಯೇ ನಿಲ್ಲಬೇಕು ಅಥವಾ ನನಗೂ ಅದಕ್ಕೂ ಸಂಬಂಧವಿಲ್ಲ ಮತ್ತು ಅದು ಏನೂ ಅಲ್ಲ ಎಂಬ ಅರ್ಥದಲ್ಲಿ ಪ್ರತಿಕ್ರಿಯೈಸುವ ಬದಲು,‘ಇದು ಯಕ್ಷಗಾನದ ಕೆಲಸ ಮುಂದುವರಿಯಲಿ ಎನ್ನುವ ನಿಲುವು ಯಕ್ಷಗಾನದ ಅಧಿಕೃತರೆಂದು ಕರೆಸಿಕೊಳ್ಳುವವರಲ್ಲೂ ಇರಬೇಕಿತ್ತು. ಹಾಗೆಂದು ಇವರನ್ನೆಲ್ಲಾ ರಚನಾ ಪ್ರಕ್ರಿಯೆಯ ಒಂದಲ್ಲ ಒಂದು ಸಂದರ್ಭದಲ್ಲಿ ಸಂಪರ್ಕಿಸದೆಯೂ ಬಿಟ್ಟಿಲ್ಲ.(ಅಲ್ಲದೇ ವಿದ್ವತ್ ಪೂರ್ವ ಮತ್ತು ವಿದ್ವತ್ ಎರಡು ವಿಭಾಗದ ಪಠ್ಯಕ್ರಮ ಮತ್ತು ಪಠ್ಯಪುಸ್ತಕ ರಚನಾ ಸಮಿತಿ ಮುಂದೆ ಆಗಬೇಕಿದೆ)
        ಜೂನಿಯರ್, ಮತ್ತು ಸೀನಿಯರ್ ಪಠ್ಯಕ್ಕೆ ಸದ್ಯ ಮುದ್ರಣದ ಅನುಮತಿ ಮಾತ್ರ ಬಾಕಿ ಇದೆ. ಮೇಜಿನಿಂದ ಮೇಜನ್ನು ಹುಡುಕುತ್ತಾ ಸಾಗುವ ಕಡತ, ಆಗಾಗ ಬದಲಾಗುವ ಅಧಿಕಾರಿ ವರ್ಗ ಇವೆಲ್ಲದರ ಮಧ್ಯೆ ಪ್ರಕ್ರಿಯೆಯ ಹಿಂದೆ ಹೋಗಲು ಅಧಿಕಾರಯುತ ವ್ಯಕ್ತಿಗಳೂ ಬೇಕು. ‘ಯಕ್ಷಗಾನ ಎನ್ನುವ ಹೆಸರು ಮಾತ್ರ ಕೇಳಿದವರು ತೋರಿಸುವ ಆಸಕ್ತಿಯ ಕಾಲುಭಾಗ ಇಚ್ಛಾಸಕ್ತಿಯನ್ನು ಯಕ್ಷಗಾನವನ್ನೇ ಉಸಿರಾಗಿಸಿಕೊಂಡವರು ತೋರಿಸಿದರೆ ಸಾಕು.
       ಪಠ್ಯ ಒಂದು ಪ್ರದೇಶದಿಂದ ಆರಂಭವಾಗಿರಬಹುದು, ಹಾಗೆಂದು ಒಂದು ಪ್ರದೇಶಕ್ಕೆ ಸೀಮಿತವಾದ ಸಂಗತಿಯನ್ನು ಒಳಗೊಂಡಿಲ್ಲ.(ಕರಾವಳಿಯ ಎಲ್ಲಾ ಭಾಗ ಮತ್ತು ವಿಭಾಗದ ಪ್ರತಿನಿಧಿಗಳೂ ಕೆಲಸ ಮಾಡಿದ್ದಾರೆ) ಕೆಲವು ವ್ಯಕ್ತಿಗಳಿಂದ ಆಗಿರಬಹುದು.(ನಿಯಮ ಪ್ರಕಾರ) ಅಂದಮಾತ್ರಕ್ಕೆ ಕೆಲವು ವ್ಯಕ್ತಿಗಳಿಗೆ ಸೀಮಿತವಾದುದೂ ಅಲ್ಲ.(ತೆಂಕು-ಬಡಗಿನ 60-70 ತಜ್ಞರು ರಚಿಸಿಕೊಟ್ಟ ಪಠ್ಯಕ್ರಮ) ವ್ಯವಸ್ಥೆಯಲ್ಲಿನ ನಿಯಮ ಹಾಗೂ ವಿಚಾರದಲ್ಲಿನ ಭಿನ್ನತೆಯನ್ನು ಸರಿದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯ ನಮ್ಮ ಮುಂದಿದೆ. ಪಠ್ಯದಲ್ಲಿ ಯಾವುದೇ ದೋಷವಿದ್ದರೆ ಅದನ್ನು ನಿಯಮಾನುಸಾರ ಬದಲಾಯಿಸಲು ಬಹಳಷ್ಟು ಅವಕಾಶವಿದೆ. ಆದರೆ ಪ್ರಕಟಗೊಳ್ಳದೇ ಇದ್ದರೆ ಶಾಶ್ವತ ನಷ್ಟವೊಂದು ಆಗಿ ಹೋಗಬಹುದು. ಈಗಾಗಲೇ ಪಠ್ಯಪುಸ್ತಕ ಸಂಘ ಹಾಗೂ ಒಂದಷ್ಟು ಜನ ಇದಕ್ಕಾಗಿ ಆರ್ಥಿಕ, ದೈಹಿಕ ಮತ್ತು ಮಾನಸಿಕ ಶ್ರಮವನ್ನು ಹಾಕಿದ್ದೇವೆ. ‘ಇದನ್ನು ಮತ್ತೆ ಮೊದಲಿನಿಂದ ಅಥವಾ ಪ್ರತ್ಯೇಕವಾಗಿ ಆರಂಭಿಸುತ್ತೇವೆ ಎನ್ನುವುದು ಅಷ್ಟೊಂದು ಪ್ರಾಯೋಗಿಕ ಮಾತಲ್ಲ. ಇಷ್ಟು ದೊಡ್ಡ ವ್ಯಾಪ್ತಿಯುಳ್ಳ ಕಲೆಯೊಂದಕ್ಕೆ ಮೊದಲ ಬಾರಿಗೆ ತಕ್ಷಣ ಪಠ್ಯಪುಸ್ತಕ ರಚಿಸಿ ಬಿಡುತ್ತೇವೆ ಎನ್ನುವುದೂ ವಾಸ್ತವ ಸಂಗತಿಯಲ್ಲ. ಆದ್ದರಿಂದ ಯಕ್ಷಾಭಿಮಾನಿಗಳು ಈಗಾಗಲೇ ಪೂರ್ಣಗೊಂಡು ಕೇವಲ ಮುದ್ರಣಕ್ಕೆ ಮಾತ್ರ ಬಾಕಿ ಇರುವ ಪಠ್ಯವನ್ನು ಪುಸ್ತಕ ರೂಪವಾಗಿ ಹೊರಬರುವಂತೆ ಒತ್ತಡ ಹಾಕಬೇಕು, ನಂತರ ಪಠ್ಯದೊಳಗಿನ ಸಂಗತಿಯನ್ನು ಮುಕ್ತವಾಗಿ  ಚರ್ಚಿಸಬೇಕು, ಅಗತ್ಯವಿದ್ದರೆ ಬದಲಾಯಿಸಬೇಕು(ಇದು ಸರಕಾರಿ ನಿಯಮ ಕೂಡ) ಎನ್ನುವುದೇ ನನ್ನ ಪ್ರಾಮಾಣಿಕ ಕೋರಿಕೆ.
                                                     
ಬಿಸಿಬಿಸಿ ಚರ್ಚೆ
      ಪಠ್ಯಕ್ರಮದ ಕೆಲಸ ಆರಂಭವಾದಲ್ಲಿಂದ ಮೊನ್ನೆಮೊನ್ನೆಯವರೆಗಿನ ಮುಕ್ತಾಯದ ಕಾರ್ಯಾಗಾರದಲ್ಲೂ ಪಠ್ಯ ಒಳಗೊಳ್ಳಬೇಕಾದ ವಿಷಯಗಳ ಬಗ್ಗೆ ಬಹಳ ವಿಸ್ತø ಚರ್ಚೆ ನಡೆದಿದೆ. ತೆಂಕು ಮತ್ತು ಬಡಗು ಎರಡೂ ವಿಭಾಗದಲ್ಲಿ ಮತ್ತೆ ಅನೇಕ ಕವಲುಗಳು ಮತ್ತು ಶಾಸ್ತ್ರವಾದರೂ ಜಾನಪದೀಯ ನೆಲೆಯ ಗುರು ಪರಂಪರೆಗಳು ಇರುವುದರಿಂದ ಯಕ್ಷಗಾನ ಕ್ಷೇತ್ರದ ಭಿನ್ನತೆಯನ್ನು ಪರಿಗಣಿಸಿ ಚರ್ಚೆ ನಡೆದಿದೆ. ಕೆಲವು ಬಾರಿ ಇದರಲ್ಲಿ ಪೂರ್ವಾಗ್ರಹವೂ ನುಸಿಳಿಕೊಂಡದ್ದಿದೆ. ಆದರೆ ವಸ್ತುನಿಷ್ಠೆ ಅಪವಾದವನ್ನು ಮೀರಿ ನಿಂತಿದೆ. ಪಠ್ಯದಲ್ಲಿ ಬಳಸುವ ಒಂದೊಂದು ಪದಗಳ ಬಗ್ಗೆಯೂ ದೀರ್ಘ ಅವಲೋಕನ ನಡೆದಿದೆ. ಎಲ್ಲದರ ಮಧ್ಯೆಯೂ ಲೋಪಗಳಿರಲಾರದು ಎನ್ನಲು ಸಾಧ್ಯವಿಲ್ಲ. ಆದರೆ ಯಕ್ಷಗಾನ ಕಲೆಗೆ ಅಪಚಾರವಾಗುವಂತಹಾ ಲೋಪಗಳಿಗಂತೂ ಸಮಿತಿ ಎಲ್ಲೂ ಎಡೆ ಕೊಡಲಿಲ್ಲ ಎನ್ನುವುದು ಸತ್ಯ. ಹಿರಿಯ ಕಲಾವಿದರಾದ ಹೊಸ್ತೋಟ ಮತ್ತು ಕುಂಬ್ಳೆ, ವಿದ್ವಾಂಸರಾದ ಪ್ರೊ.ಎಂ.ಎಲ್ ಸಾಮಗ ಮತ್ತು ಡಾ.ಜಿ.ಎಸ್ ಭಟ್ ಇದನ್ನು ಸಮರ್ಥವಾಗಿಯೇ ನಿಭಾಯಿಸಿದ್ದಾರೆ ಎನ್ನುವುದು ನನ್ನ ಆಭಿಪ್ರಾಯ.

 ಪ್ರತ್ಯೇಕ ಪಠ್ಯ   
         ಯಕ್ಷಗಾನದ ತೆಂಕು ಮತ್ತು ಬಡಗು ಎರಡೂ ಪ್ರಭೇದವನ್ನು ಗಮನದಲ್ಲಿಟ್ಟುಕೊಂಡು ಪಠ್ಯ ತಯಾರಾಗಿದೆ. ಎರಡರಲ್ಲೂ ಸಮಾನವಾಗಿರುವ ಅಂಶವನ್ನು ಗಮನಿಸಿ ಅದನ್ನು ಒಂದಾಗಿ ನೀಡಿದರೆ, ಭಿನ್ನ ಅಂಶಗಳನ್ನು ಪ್ರತ್ಯೇಕ ನೀಡಲಾಗಿದೆ. ಒಂದಾಗಿರುವ ಅಂಶಗಳ ಬಗ್ಗೆ ಡಾ.ಕೆ.ಕಮಲಾಕ್ಷ, ರಾಧಾಕೃಷ್ಣ ಕಲ್ಚಾರ್, ಗಣರಾಜ ಕುಂಬ್ಳೆ ಅಧ್ಯಯನ ಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ಪ್ರತ್ಯೇಕ ಅಂಶಗಳ ಬಗ್ಗೆ ಕರ್ಗಲ್ಲು ವಿಶ್ವೇಶ್ವರ ಭಟ್, ಕೆ.ಗೋವಿಂದ ಭಟ್, ತಾರಾನಾಥ ವರ್ಕಾಡಿ,  ಸದಾನಂದ ಐತಾಳ್, ಸುಜೀಂದ್ರ ಹಂದೆ ಬಹಳ ಶ್ರಮ ಹಾಕಿದ್ದಾರೆ. ಪಠ್ಯಕ್ಕೆ ಮುಖ್ಯವಾಗಿ ಬೇಕಾದ ಮೌಲ್ಯಮಾಪನ ಮತ್ತು ಒಟ್ಟು ಸಂಘಟನೆಯನ್ನು ಪ್ರಕಾಶ್ ಮೂಡಿತ್ತಾಯ ಮತ್ತು ನಾನು ನಿರ್ವಹಿಸಿದ್ದೇವೆ. ಮಾಹಿತಿಗಳನ್ನು ಕಲೆ ಹಾಕುವ ವಿಚಾರದಲ್ಲಿ ಮಾತ್ರ ಹೀಗೆ ವಿಭಾಗವಾಗಿದೆ. ಆದರೆ ಸಮಿತಿಯ ಎಲ್ಲಾ ಸದಸ್ಯರು ಜೊತೆಯಾಗಿ ಕುಳಿತು ಸುದೀರ್ಘ ಚರ್ಚೆಯ ಮೂಲಕ ವಿಷಯದ ಪ್ರಸ್ತುತಿಯನ್ನು ಅಂತಿಮಗೊಳಿಸಲಾಗಿದೆ. ಪ್ರತ್ಯೇಕ ಕಾರ್ಯಾಗಾರದ ಮೂಲಕ ಅಸಂಖ್ಯಾತ ಛಾಯಾಚಿತ್ರಗಳನ್ನು ಜೀವನ್ ರಾಂ ಸುಳ್ಯ ನೀಡಿದರೆ, ಮುಖಪುಟ ಹಾಗೂ ಅನೇಕ ರೇಖಾಚಿತ್ರಗಳನ್ನು ದಿನೇಶ್ ಕುಕ್ಕುಜಡ್ಕ ಬರೆದುಕೊಟ್ಟಿದ್ದಾರೆ.
(ಕಣಿಪುರ ಪತ್ರಿಕೆ- ಒಕ್ಟೋಬರ್, 2018)                                                                    ಡಾ.ಸುಂದರ ಕೇನಾಜೆ
                                                                                             ಮಾಜಿ ಸದಸ್ಯರು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ
               

Comments