ಇಂದಿನಿಂದ ಕಛೇರಿ ಮತ್ತೆ ಆರಂಭವಾಗುತ್ತಿದೆ( ಈ ಮಧ್ಯೆ ಮೂರು ದಿನ ಹೋಗಿದ್ದೆ) ಹೆಚ್ಚು ಕಡಿಮೆ ನಲವತ್ತು ದಿನಗಳು ಲಾಕ್ ಡೌನ್ ಹೆಸರಿನಲ್ಲಿ ಮನೆಯಲ್ಲಿ ಇರಬೇಕಾಯಿತು. ದೊಡ್ಡದೊಡ್ಡ ವ್ಯಕ್ತಿಗಳಿಗೆ ಸಿಗುವ ಗೃಹಬಂಧನದ ಅನುಭವ ಹೀಗೇ ಇರಬಹುದು ಅಂತ ಅನಿಸಿತು. ಮಾರ್ಚ್ ೨೪ ರಿಂದ ಇಲ್ಲಿಯವರೆಗಿನ ದಿನಚರಿಯನ್ನೊಮ್ಮೆ ಯೋಚಿಸಿದೆ. ಅಂತೂ ಆ ಭಯ, ಅಸಮಾಧಾನ, ಬಿಸಿಲು, ಸೆಕೆಯ ಮಧ್ಯೆಯೂ ವ್ಯರ್ಥವಾಗಲಿಲ್ಲ. ಹೆಂಡತಿ, ಮಕ್ಕಳ ಮುಖವನ್ನೇ ನೋಡುತ್ತಾ ಅವರಲ್ಲೇ ಮಾತನಾಡುತ್ತಾ ಹೀಗೇ ಕುಳಿತರೂ ಬೇಜಾರಿಲ್ಲ ಎನ್ನುವುದೂ ಗೊತ್ತಾಯಿತು. ಸ್ವಲ್ಪ ಗಂಜಿ,ಚಟ್ನಿ ಇದ್ದರೂ, ಹಾಲು ಹಾಕಿದ ಚಹ ಇಲ್ಲದೇ ಇದ್ದರೂ ಆರಾಮವಿರಬಹುದು ಅಂತ ಮತ್ತೆ ಮನದಟ್ಟಾಯಿತು. ಈ ಮಧ್ಯೆ ಒಂದಷ್ಟು ಪಾಪದ ಕೆಲಸಗಳೂ ನಡೆದವು
ಲಾಕ್ ಡೌನ್ ನ ಆರಂಭದ ಒಂದು ವಾರ ಏನಾಗುತ್ತದೋ ಏನೋ? ನಮಗೆಲ್ಲ ಇನ್ನು ಎಷ್ಟು ದಿನಗಳಲ್ಲಿ ಈ ಕೊರೋನಾ ಬಂದು ಬಿಡುತ್ತದೋ ಎಂದೆಲ್ಲ ದುಗುಡ ತುಂಬಿ ಕಾಲ ಕಳೆಯುವುದೇ ಕಷ್ಟ ಅಂತ ಅನಿಸಿತು.(ಅದು ಇನ್ನೂ ಹೇಳುವಂತಿಲ್ಲ, ಇದುವರೆಗೆ ಮಾಡಿಕೊಂಡ ಜಾಗೃತೆ ನೀರಲ್ಲಿಟ್ಟ ಹೋಮವಾಗದಿದ್ದರೆ ಸಾಕು) ಅಕ್ಕಪಕ್ಕದ ಊರುಗಳಿಗೆ ಕೊರೋನಾ ಬಂದ ಸುದ್ದಿ ಬರುತ್ತಿದ್ದಂತೆ ಪುಕುಪಕು ಹೆಚ್ಚಾದದ್ದು ಸತ್ಯ. ಗಂಟಲು ಕೆರೆತ ಇದೆಯೋ ಅಂತ ಕೆಮ್ಮಿದ್ದು, ಜ್ವರ ಇದೆಯೋ ಅಂತ ಹಣೆ ಮುಟ್ಟಿಕೊಂಡದ್ದು, ಮೂಗುಕಟ್ಟಿದೆಯೋ ಅಂತ ಆಗಾಗ ಉಸಿರೆಳೆದುಕೊಂಡದ್ದು ಎಲ್ಲವೂ ಎಲ್ಲರ ಮನೆಯ ದೋಸೆ ತೂತಿನಂತೆಯೋ ಅಲ್ಲಾ ನನ್ನಲ್ಲಿ ಮಾತ್ರವೋ ಗೊತ್ತಿಲ್ಲ. ಒಂದಷ್ಟು ಕಾಳುಮೆಣಸು, ಅಮೃತಬಳ್ಳಿ ಎಲೆಯೂ ಖರ್ಚಾದದ್ದು ಹೌದು. ಟಿ.ವಿ, ವಾಟ್ಸ್ ಆಪ್ ತೋರಿಸುವ ಸುದ್ದಿಗಳೇ(ಬಹುತೇಕ ಸುಳ್ಳಾಗಿದ್ದರೂ) ಸತ್ಯವೆಂದು ನಂಬಿದ್ದು, ಈ ವಿಚಾರದಲ್ಲಿ ಅದೆಷ್ಟು ತಜ್ಜರು, ಸಲಹೆಗಾರರು,ನಿರ್ಣಾಯಕರು ಒಬ್ಬರನ್ನು ಮೀರುವಂತೆ ಒಬ್ಬರು ಮಾಧ್ಯಮಗಳಲ್ಲಿ ಬರುವುದು ಕಂಡು ಚಕಿತಗೊಂಡದ್ದೂ ಹೌದು. ಅಲ್ಲದೇ ಈ ಕಾಯಿಲೆಯೂ ಪಿತ್ರಾರ್ಜಿತ ಆಸ್ತಿ ಎನ್ನುವಂತೆ ಜಾತಿ, ಧರ್ಮ, ಪ್ರದೇಶದಲ್ಲಿ ಅದನ್ನು ನೋಡುವುದನ್ನು ಕಂಡು ಬೇಜಾರುಪಟ್ಟಿದ್ದೂ ಸುಳ್ಳಲ್ಲ. ಅಂತೂ ಮೊಬೈಲ್ ಉಜ್ಜುತ್ತಾ ಎಲ್ಲಿಯವರೆಗೆ ಬಂತೆಂದು ನೋಡುತ್ತಾ ಮಾರ್ಚ್ ಮುಗಿಸಿದ್ದೆ.
ಆದರೆ ಏಪ್ರೀಲ್ ಒಂದಷ್ಟು ಕೆಲಸ ಮಾಡುವಂತೆ ಕರೆಯಿತು. ಕಳೆದ ಇಪ್ಪತ್ತೇಳು ವರ್ಷಗಳಿಂದ ನಾನು ಸಾಹಿತ್ಯ ಅಂತ ಹೇಳುತ್ತ ಬರೆಯುತ್ತಾ ಬಂದ ಅದೇನೋ ಅಕ್ಷರಗಳ ಗುಂಪು ಅಲ್ಲೆಲ್ಲೋ ಹರಡಿ, ಒಂದಷ್ಟು ಗೆದ್ದಲುಗಳಿಗೆ ಹೊಟ್ಟೆ ತುಂಬಿಸಿ, ಆಗಾಗ ಕೈಕೊಡುವ ಕಂಪ್ಯೂಟರ್ ನಿಂದ ಮಾಯವಾಗಿ ಕ್ಷೀಣವಾಗುತ್ತಲೇ ಇತ್ತು. ಪುಸ್ತಕದ ಹೊರತಾಗಿ ಅವುಗಳನ್ನು ಎಷ್ಟೇ ಒಟ್ಟು ಸೇರಿಸಿದರೂ ತಕ್ಕಡಿಯ ಕಪ್ಪೆಗಳಂತೆ ಹಾರಿ ಹೋಗುತ್ತಿತ್ತು. ಸಂಘಟನೆ, ಗೋಷ್ಠಿ, ಭಾಷಣ ಅಂತ ಒದರಿದ್ದ ಅನೇಕ ಕಾರ್ಯಕ್ರಮಗಳ ದಾಖಲೆಗಳೂ ಚಲ್ಲಾಪಿಲ್ಲಿಯಾಗಿ, ಯಾರಿಗೂ ಬೇಡವಾಗಿ( ನಿಜವಾಗಿಯೂ ಬೇಡ) ಮಣ್ಣು ಸೇರುತ್ತಿತ್ತು. ಅದಕ್ಕೆ ಪರಿಹಾರವೋ ಎಂಬಂತೆ ಆಪ್ತ ಸ್ನೇಹಿತ ಡಾ.ಎಂ.ಸಿ ಮನೋಹರರವರ ಒತ್ತಾಸೆ, ಇನ್ನೋರ್ವ ಗೆಳೆಯ ಶಿವಮೊಗ್ಗದ ಗುರುಪ್ರಸಾದರವರ ಸಹಾಯದಿಂದ ಒಂದು ಬ್ಲಾಗ್ ನಲ್ಲಿ ಶೇಖರಿಸುವ ಕೆಲಸ ಸುಮಾರು ಮಾಡಿದೆ. ಬಿಡಿ ಲೇಖನ, ಸಾಕ್ಷ್ಯಚಿತ್ರ, ಒಂದೆರಡು ಪುಸ್ತಕ ಹೀಗೇ ಅರ್ಧ ಪಾಲು ಈ ಬ್ಲಾಗ್ ನಲ್ಲಿ ತುಂಬಿಸಿದೆ. ಇನ್ನೂ ಒಂದಷ್ಟು ಕೃತಿಗಳನ್ನು, ಬಿಡಿ ಬರಹ, ಪೋಟೋಗಳನ್ನು ತುಂಬಿಸಿ ನಿಮ್ಮ ನೆಮ್ಮದಿಯನ್ನೂ ಕೆಡಿಸುವುದಕ್ಕೆ ಅಧಿಕೃತವಾಗಿ ಬ್ಲಾಗ್ ವಿಳಾಸ ಕೊಡುವ ಎಂದಿದ್ದೇನೆ. ಅಪ್ಪಿತಪ್ಪಿ ನನ್ನ ಈ ಬ್ಲಾಗ್ ಏನಾದರೂ ಕಂಡರೆ ಒಮ್ಮೆ ಇಣುಕಿ ಎಂದು ವಿನಂತಿಸುವೆ.
ನಾನು ಬಹಳ ಹಿಂದಿನಿಂದಲ್ಲೇ ಸಿನಿಮಾ ಗಿರಾಕಿ, ಅದರಲ್ಲೂ ಮಲೆಯಾಳಂ. ಈಗ್ಗೆ ಹತ್ತು ವರ್ಷಗಳಿಂದ ಬಹಳ ಅಪರೂಪಕ್ಕೆ (ಭಾಷಾ ಬೇಧವಿಲ್ಲದೆ)ಸಿನಿಮಾ ನೋಡುತ್ತಿದ್ದೆ. ಕಳೆದ ನಲವತ್ತು ದಿನಗಳಲ್ಲಿ ಆಯ್ದ ಸುಮಾರು ಇಪ್ಪತ್ತು ಮಲೆಯಾಳಂ ಸಿನಮಾ ನೋಡಿದೆ.(ಮಲೆಯಾಳಂ ಸಿನಿಮಾದ ಬಗ್ಗೆ ಒಂದಷ್ಟು ಹೇಳಬೇಕೆಂದಿದ್ದೇನೆ, ಸಿನಿಮಾ ಜಗತ್ತಿನಲ್ಲೇ ಮಲೆಯಾಳಂ ಸಿನಿಮಾದಲ್ಲಿ ಒಂದಷ್ಟು ವಿಶೇಷತೆ ಇದೆ ಎನ್ನುವುದು ನನ್ನ ಅನುಭವ) ಮಧ್ಯೆ ಒಂದೆರಡು ಇಂಗ್ಲೀಷ್, ಹಿಂದಿ, ತೆಲುಗು, ತಮಿಳೂ ನೋಡಿದೆ. ಆದರೆ ಯಾಕೋ ಕನ್ನಡ ನೋಡುವ ಆಸಕ್ತಿ ಮತ್ತೆ (ಹತ್ತು ವರ್ಷಗಳ)ಹುಟ್ಟುತ್ತಲೇ ಇಲ್ಲ.
ದಿನಾ ಮೊಬೈಲ್ ಉಜ್ಜಿ ಓದಿದ್ದಲ್ಲದೇ, ಐದು ಪುಸ್ತಕ ಹಾಗೂ ಕೆಲವು ಬಿಡಿ ಲೇಖನ ಓದಿದೆ. ಕೊರೋನಾದ ಲಾಕ್ ಡೌನ್ ನಲ್ಲಿದ್ದಾಗ ಕಾರಂತರ ಬೆಟ್ಟದ ಜೀವ ನೆನಪಾಯಿತು. ಅಲ್ಲಿನ ಗೋಪಾಲಯ್ಯ, ಆ ಪಾತ್ರದಂತೆ ಬದುಕುತ್ತಿದ್ದ ಆ ಕಾಲದ ಎಲ್ಲರ ಸಂತೃಪ್ತಿಯನ್ನು ಮತ್ತೆ ಓದಬೇಕೆನಿಸಿತು. ಒಮ್ಮೆ ಕುಸಾಲಿಗೆ ಮತ್ತೊಮ್ಮೆ ಪರೀಕ್ಷೆಗೆ ಓದಿದ ನೆನಪು ಇಪ್ಪತ್ತೊಂದು ವರ್ಷಗಳ ಹಿಂದಿನದ್ದಾಗಿತ್ತು. ಈಗಲೂ ಬೆಟ್ಟದ ಜೀವ ಜೀವಂತ ಕಾದಂಬರಿಯಾಗಿಯೇ ಉಳಿದಿದೆ. ಈ ಕಾಲಕ್ಕೂ ಪ್ರಸ್ತುತವಾಗಿದೆ. ಗಣೇಶಯ್ಯನವರ ಶಿಲಾಕುಲ ವಲಸೆ, ಬಿಳಿಮಲೆಯವರ ಕನ್ನಡ ಕಥನಗಳು, ಕಲ್ಚಾರರ ಪರಕಾಯ ಪ್ರವೇಶ ಮತ್ತು ಡಾ. ಕಮಲಾಕ್ಷರ ಕಂಡಿರೆ ಕಂಗಳ ಬೆಳಕು ಓದಿ ಮುಗಿಸಿದೆ. ಇವುಗಳ ಬಗ್ಗೆ ಬ್ಲಾಗ್ ನಲ್ಲಿ ವಿಸ್ತೃತವಾಗಿ ಬರೆಯಬೇಕೆಂದಿದ್ದೇನೆ.
ಹಾಗೆ ನೋಡಿದರೆ ಈ ನಲವತ್ತು ದಿನಗಳಲ್ಲಿ ಬರೆದದ್ದು ಕಡಿಮೆ. ಈ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲೂ ದೊಣ್ಣೆ ಕೊಟ್ಟು ಹೊಡೆಸಿಕೊಳ್ಳಲು ಇಷ್ಟ ಆಗಲಿಲ್ಲ. ಆದರೂ ಯಾರದೋ ಬರಹಕ್ಕೆ ಕೊಟ್ಟ ಒಂದೆರಡು ಪ್ರತಿಕ್ರಿಯೆಗೆ ಇನ್ನಾರೋ ಕಾಲುಕೆರೆದು ಬರುವಂತೆ ಕಂಡಿತು. ಮುಂದುವರಿಸುವ ಆಸಕ್ತಿಯನ್ನು ಎಂದೋ ಕಳೆದುಕೊಂಡಿದ್ದರಿಂದ ಸುಮ್ಮನಾದೆ. ಈ ಮಧ್ಯೆ ಎರಡು ಲೇಖನಗಳನ್ನು ಬರೆದೆ ಅದರಲ್ಲಿ ಒಂದು ನನಗೆ ಕುತೂಹಲ ಕೆರಳಿಸಿದ ಕೊಡವ- ತುಳುವಿನ ಸಾಂಸ್ಕೃತಿಕ ಸಂಬಂಧಕ್ಕೆ ಸಂಬಂಧಿಸಿದ್ದು. ಇದರಲ್ಲಿ ಇನ್ನೂ ಒಂದಷ್ಟು ಕೆಲಸ ಆಗಬೇಕು.
ಮಂಡೆಕೋಲಿನ ಗೆಳೆಯರು ಒಂದತ್ತು ಮನೆಗಳಿಗೆ ಸಹಕಾರ ಮಾಡಿ ಎಂದು ಕೇಳಿಕೊಂಡರು. ಅವರ ಉತ್ಸಾಹಕ್ಕೆ ಕೈಜೋಡಿಸಿದೆ. ಆಸುಪಾಸಿನ ಒಂದಷ್ಟು ಮನೆಗಳಲ್ಲಿ ವಸ್ತುಗಳ ಅಗತ್ಯಗಳನ್ನು ವಿಚಾರಿಸುತ್ತಲೇ ಇದ್ದೆ.( ಇದು ಪಾಪ ನಿವೇದನೆ ಅಲ್ಲ) ಯಾರಿಗೂ ಹೆಚ್ಚು ಫೋನ್ ಮಾಡಿಲ್ಲ. ಹಲವು ಆತ್ಮೀಯರಲ್ಲಿ ಕೆಲವರು ಮತ್ತು ಹಲವು ಹಿರಿಯರಲ್ಲಿ ಕೆಲವರೊಂದಿಗೆ ಒಂದೆರಡು ಬಾರಿ ಮಾತನಾಡಿದೆ. ಎಲ್ಲರೂ ಮಾತನಾಡುವುದು ಒಂದೇ ವಿಷಯವಾದ ಕಾರಣ ಮಾತು ಬೇಡ ಅಂತ ಅನಿಸಿತ್ತು. ಟಿ.ಎ, ಜೀವನ್ ವಿದ್ಯಾ ಮತ್ತು ಮುಂದಿನ ಒಂದಷ್ಟು ಯೋಜನೆಗಳನ್ನೂ ಇದೇ ಸಂದರ್ಭದಲ್ಲಿ ಮಾಡಿಕೊಂಡಿದ್ದೇನೆ. ಈ ಮಧ್ಯೆ ಗೆಳೆಯ ದುರ್ಗಾ ಸುದ್ದಿ ಚಾನೆಲ್ ಗಾಗಿ ಎರಡು ಬಾರಿ ಮಾತನಾಡಿಸಿ ಪ್ರಸಾರ ಮಾಡಿದ್ದರು. ಹಾಗೇ ಕೆಲವು ಮಾಧ್ಯಮಗಳ ಬಗ್ಗೆ ಮೈಪರಚಿಕೊಂಡದ್ದು ಹೌದು. ಅದರಿಂದ ಒಂದೆರಡು ದಿನ ಏಳುವಾಗ ಮೈಕೈ ನೋವು ಆಗುತ್ತಿರುವುದು ಕಂಡು ಅದನ್ನು ಬಿಟ್ಟುಬಿಟ್ಟೆ. ಮತ್ತೆ ಯತಾಃ ಪ್ರಕಾರ ಬೆಳಿಗಿನ ನಡಿಗೆ, ಗಿಡಗಳಿಗೆ ನೀರು, ಮಕ್ಕಳೊಂದಿಗೆ ಆಟ ಲಘು ನಿದ್ದೆ ಇವೆಲ್ಲಾ ನಡೆದಿದೆ. ಅಗತ್ಯಕ್ಕಾಗಿ ಮೂರು ಬಾರಿ ಗೇಟು ದಾಟಿ ಹೊರಬಂದಿದ್ದೇನೆ. ( ಕಛೇರಿ ಕೆಲಸ ಹೊರತು ಪಡಿಸಿ)ಕಾಯಾ ವಾಚ ಮನಸಾ ಲಾಕೌ ಡೌನ್ ಪಾಲಿಸಿದ್ದೇನೆಂದು ( ಹಾಗೆಯಾದರೂ ಪುಣ್ಯ ಸಿಗುವುದಾದರೆ) ಈ ವರದಿ ನಿವೇದಿಸುತ್ತಾ ಏರುತ್ತಿರುವ ಕೊರೋನಾದ ಜೊತೆಗಿನ ಹೋರಾಟ ಇನ್ನೂ ಮುಗಿದಿಲ್ಲ ಎನ್ನುವ ಎಚ್ಚರದೊಂದಿಗೆ ನಿಮ್ಮ ಅನುಭವಕ್ಕೂ ಸ್ವಾಗತ ಕೋರುತ್ತಾ ಗೇಟು ದಾಟುತ್ತಿದ್ದೇನೆ.
04-05-2020 ಡಾ.ಸುಂದರ ಕೇನಾಜೆ
ಸೃಜನಶೀಲ ಅಭಿವ್ಯಕ್ತಿ, ಸಂಪರ್ಕಕ್ಕೆ ಇದೊಂದು ಒಳ್ಳೆಯ ಮಾಧ್ಯಮ. ಅಭಿನಂದನೆಗಳು.
ReplyDelete