ಕಲೆಯಾಗಿ ಯಕ್ಷಗಾನ
ಕರ್ನಾಟಕದ ಪ್ರಾತಿನಿಧಿಕ ಕಲೆಯಾದ ಕರಾವಳಿಯ ಯಕ್ಷಗಾನ
ಇಂದು ಕೇವಲ ಒಂದು ಕಲೆಯಾಗಿ
ಮಾತ್ರ ನಮ್ಮ ಮಧ್ಯೆ ಬೆಳೆದು
ನಿಂತಿರುವುದಲ್ಲ, ಮತ್ತು ಹಾಗೆ ಇದನ್ನು
ನೋಡುವುದೂ ಸರಿಯಲ್ಲ. ಇದು ಹಲವು ಕಲೆಗಳ
ಗುಚ್ಛ ಹಾಗೂ ಹಲವು ಪರಿಣಾಮಗಳನ್ನು
ನೀಡಬಲ್ಲ ಏಕೀಕೃತ ಕಲಾ ಮಾಧ್ಯಮ.
ಆದ್ದರಿಂದಲೇ ಇದು ಸಮಗ್ರ ಕಲೆ.
ಒಂದರೊಳಗೆ ಹಲವನ್ನು ಸೇರಿಸಿಕೊಂಡು ಪರಿಣಾಮ
ನೀಡುವ ಕಲೆಯೂ ಹೌದು. ಪರಿಣಾಮಕ್ಕಾಗಿ
ಹಲವನ್ನು ಸೇರಿಸಿಕೊಂಡು ಒಂದು ಆಗಿರುವ ಕಲೆಯೂ
ಹೌದು. ಆದ್ದರಿಂದಲೇ ಯಕ್ಷಗಾನದ ಅಂಗಗಳನ್ನು ಪ್ರತ್ಯೇಕವಾಗಿಯೂ ಸಮಗ್ರವಾಗಿಯೂ ಸಮಾನವಾಗಿ ಆಸ್ವಾದಿಸಲು ಸಾಧ್ಯವಾಗುತ್ತಿರುವುದು. ಯಕ್ಷಗಾನವನ್ನು ಹೊರತುಪಡಿಸಿ ಇನ್ನಾವುದೇ ಕಲೆಗಳನ್ನು ತುಂಡುತುಂಡು ಮಾಡಿ ಪರಿಣಾಮವನ್ನು ನಿರೀಕ್ಷಿಸುವ
ಪರಂಪರೆ ಇಲ್ಲ ಎನ್ನುವಷ್ಟರ ಮಟ್ಟಿಗೆ
ವಿರಳ. ಆಧುನಿಕ ಪರಿಕಲ್ಪನೆಗಳ ಮಧ್ಯೆ
ಕಲೆಯೊಂದು ಹಲವಾಗುವ, ಹಲವು ಒಂದಾಗುವ ಸ್ಥಿತಿಗಿಂತ
ತೀರಾ ಭಿನ್ನವಾಗಿ ತನ್ನಲ್ಲಿ ಹಲವನ್ನು ಸೇರಿಸಿಕೊಂಡ ಕಲೆ
ಯಕ್ಷಗಾನ. ಆದ್ದರಿಂದಲೇ ಇರಬೇಕು ಜಾನಪದ ಮೂಲದ
ಬಹುತೇಕ ಕಲೆಗಳು ನಶಿಸುತ್ತಿರುವ ಈ
ಕಾಲದಲ್ಲೂ ಯಕ್ಷಗಾನ ವಿಜೃಂಬಿಸುತ್ತಿರುವುದು ಮತ್ತು
ಹೊಸ ತಲೆಮಾರುಗಳನ್ನೂ ಸೆಳೆಯುತ್ತಿರುವುದು.
ಕರಾವಳಿಗೆ
ಸಂಬಂಧಿಸಿದಂತೆ ಯಕ್ಷಗಾನದ ರಚನೆಯ ಮೇಲೆ ಇಲ್ಲಿಯ
ಬೌದ್ಧಕತೆಯ ಪ್ರಭಾವ ಹಾಗೂ ಇಲ್ಲಿಯ
ಬೌದ್ಧಿಕತೆಯ ಮೇಲೆ ಯಕ್ಷಗಾನ ಬೀರಿರುವ
ಪರಿಣಾಮ ಇವೆರಡೂ ‘ಮೊಟ್ಟೆ ಮತ್ತು
ಕೋಳಿ ನ್ಯಾಯ’ದ ರೀತಿಯದ್ದು. ಯಾವುದು
ಯಾವುದರಿಂದ ಪ್ರಭಾವಿತಗೊಂಡು ಬೆಳೆಯಿತು ಎನ್ನುವುದನ್ನು ತಿಳಿದುಕೊಳ್ಳುವುದು ಅಷ್ಟು ಸುಲಭದ ಕಾರ್ಯವಲ್ಲ.
ಅಷ್ಟರಮಟ್ಟಿಗೆ ಕರಾವಳಿ ಮತ್ತು ಯಕ್ಷಗಾನ
ಪರಸ್ಪರ ಬೆಸೆದುಕೊಂಡಿದೆ. ಇಲ್ಲಿಯ ಮೂಲ ನಿವಾಸಿಗಳಿಂದ
ಹಿಡಿದು ಎಲ್ಲಾ ವರ್ಗದ ಜನರ
ವರೆಗೆ ಯಕ್ಷಗಾನ ತನ್ನ ಗಾಢ
ಪ್ರಭಾವವನೇ ಬೀರಿದೆ. ಆದ್ದರಿಂದಲೇ ಯಕ್ಷಗಾನ
ಜಾನಪದ ಮತ್ತು ಶಾಸ್ತ್ರೀಯ ಎನ್ನುವ
ಎರಡು ಪ್ರತ್ಯೇಕ ಆಯಾಮಗಳನ್ನು ಒಂದಾಗಿಸಿ ಬೆಳೆದಿರುವುದು. ಶಿಷ್ಟ ಕತೆಯನ್ನು ಜನಪದೀಯಗೊಳಿಸುವ
ಅಭಿವ್ಯಕ್ತಿ ವಿಧಾನ, ಆ ವಿಧಾನದಲ್ಲಿ
ಮತ್ತೆ ಜಾನಪದ ಮತ್ತು ಶಿಷ್ಟವನ್ನು
ಸಮತೂಕದಲ್ಲಿ ಬೆರೆಸುವ ಎಚ್ಚರದಿಂದಾಗಿ ಯಕ್ಷಗಾನ
ಎಲ್ಲರ ಕಲೆಯಾಗಿದೆ. ಅಂದರೆ ಪುರಾಣದ ಕತೆಗಳನ್ನು
ಜನಸಾಮಾನ್ಯರು ತಮ್ಮ ಮಟ್ಟಕ್ಕೆ ತಂದು
ಅರ್ಥೈಸಿಕೊಳ್ಳಲು ಆಶು ಮಾತು, ಅಭಿನಯಗಳನ್ನೂ
ಹಿಮ್ಮೇಳ, ಕುಣಿತ, ವೇಷಭೂಷಣಗಳ ಸಿದ್ಧ
ಚೌಕಟ್ಟನ್ನೂ ಸಮತೋಲಿತವಾಗಿ ತಂದಿರುವುದರಿಂದ ಯಕ್ಷಗಾನ ಎಲ್ಲರೊಳಗೊಂದಾಗಲು ಸಾಧ್ಯವಾಗಿದೆ.
ಅಲ್ಲದೇ ತಮಗರಿವಿಲ್ಲದಂತೆ ಜನಪದರು ಮತ್ತು ಶಿಷ್ಟಪದರು
ಸಮಾನವಾಗಿ ಒಪ್ಪಿಕೊಳ್ಳುವಂತಾಗಿದೆ.
ಇಂದು
ಯಕ್ಷಗಾನದ ಸ್ವರೂಪದಲ್ಲಿ ಬದಲಾವಣೆ ಕಾಣುತ್ತಿದ್ದೇವೆ. ಈ
ಕಲೆಯನ್ನು ಸಮಗ್ರವಾಗಿ ನೋಡುವ ಪರಂಪರೆಗೆ ಧಕ್ಕೆಯಾಗುತ್ತಿದೆ.
ಬಿಡಿಬಿಡಿಯಾಗಿ ಆಸ್ವಾದಿಸಲು ಸಾಧ್ಯವಿರುವ ಈ ಕಲೆಯ ಅಂಗಗಳಲ್ಲಿ
ಕೆಲವೊಂದನ್ನು ಮಾತ್ರ ಮೆರೆಸುವ ಪ್ರವೃತ್ತಿ
ಕಲಾವಿದರಿಂದಲೂ ಅದನ್ನು ಬೆಂಬಲಿಸುವ ಅಭಿರುಚಿಯನ್ನು
ಪ್ರೇಕ್ಷಕರಿಂದಲೂ ಕಾಣುತ್ತಿದ್ದೇವೆ. ಯಕ್ಷಗಾನ ಸಮಗ್ರವಾಗಿದ್ದಾಗ ಮಾತ್ರ
ಒಂದು ಕಲೆ ನೀಡಬಹುದಾದ ಉತ್ಕøಷ್ಟ ಪರಿಣಾಮವನ್ನು ಇದರಿಂದ
ಪಡೆಯಲು ಸಾಧ್ಯ. ಇದು ಪ್ರಜ್ಞಾವಂತ
ಕಲಾವಿದರ ಮತ್ತು ಪ್ರೇಕ್ಷಕರ ಒಕ್ಕೊರಲಿನ
ಅಭಿಪ್ರಾಯ. ಆದರೆ ಈ ಆಶಯಕ್ಕೆ
ವಿರುದ್ಧ ನೆಲೆಯಲ್ಲಿ ಯಕ್ಷಗಾನ ಮುಂದುವರಿಯುತ್ತಿರುವುದು ಕಲೆಯ ಪರಿಣಾಮದ
ದೃಷ್ಟಿಯಿಂದ ಒಳ್ಳೆಯದಲ್ಲ. ಅಂತಹಾ ಪರಿಣಾಮಕಾರಿಯಲ್ಲದ ಕಲೆಗಳು
ಜನರ ಮಧ್ಯೆ ಹೆಚ್ಚು ಕಾಲ
ಉಳಿಯುವುದೂ ಇಲ್ಲ. ಇದಕ್ಕೆ ನಮ್ಮ
ಅನೇಕ ಜನಪದ ಕಲೆಗಳೇ ಸಾಕ್ಷಿ.
ಕಾಲದ ಹಿನ್ನಲೆಯೊಂದಿಗೆ ಪರಂಪರೆಯಲ್ಲಿ ಆಗಬೇಕಾದ ಬದಲಾವಣೆ ಸಹ್ಯವೇ
ಆದರೂ ಅದು ಯಾರದೇ ವೈಯಕ್ತಿಕ
ಲಾಭದ ಮಾನದಂಡದಿಂದ ಆಗಬಾರದು. ಈ ವೈಯಕ್ತಿಕ ಲಾಭಗಳು
ಸಾಮುದಾಯಿಕ ನೆಲೆಗಳನ್ನು ತಪ್ಪು ದಾರಿಗೆ ಎಳೆಯುವುದು
ಒಂದು ಕಲೆಯ ಅವನತಿಯ ಸಂಕೇತವೂ
ಹೌದು, ಅದನ್ನು ನಂಬಿಕೊಂಡವರ ಬೌದ್ಧಿಕ
ದಾರಿದ್ರ್ಯದ ಸೂಚಕವೂ ಹೌದು. ಆದ್ದರಿಂದ
ನಿರ್ದಿಷ್ಟ ನಿರ್ದೇಶಕನ ಪ್ರಭಾವಕ್ಕೆ ಒಳಗಾಗÀದೇ ಅಗಾಧವಾಗಿ
ಬೆಳೆದು ನಿಂತ ಕರಾವಳಿಯ ಯಕ್ಷಗಾನ,
ಹೊಸ ತಲೆಮಾರಿನ ಮಧ್ಯೆ ಗಟ್ಟಿಗೊಳ್ಳುವುದೆಂದರೆ ಅದರಲ್ಲಿರುವ
ಜಾಢ್ಯಗಳನ್ನು ಕಿತ್ತೊಗೆಯುವುದು ಎಂದರ್ಥ. ಇದಕ್ಕೆ ಪ್ರಜ್ಞಾವಂತ
ಕಲಾವಿದರ ಮತ್ತು ಪ್ರೇಕ್ಷಕರ ಸಂಖ್ಯೆ
ಹೆಚ್ಚಾಗುವುದೊಂದೇ ದಾರಿ.
ಡಾ.ಸುಂದರ
ಕೇನಾಜೆ
Comments
Post a Comment