ಕುಂಬ್ಳೆ ಪ್ರವೇಶಕ್ಕೊಂದು ಪುಟ್ಟ ಪೀಠಿಕೆ
ಇವರು
ಯಾರು? ಮತ್ತು ಹೇಗೆ? ಎಂದು
ಪರಿಚಯಿಸಬೇಕಾದ ಹಾಗೂ ವಿವರಿಸಬೇಕಾದ ಅಗತ್ಯ
ಇನ್ನು ಸಾಂಸ್ಕøತಿಕ ಕ್ಷೇತ್ರಕ್ಕಂತೂ
ಖಂಡಿತ ಇಲ್ಲ. ಜೊತೆಗೆ ಒಂದು
ಕಾಲದಲ್ಲಿ(ಇಂದಿಗೂ ಅನ್ವಯಿಸುವಂತೆ) ಕರಾವಳಿಗೆ
ಮಾತ್ರ ಸೀಮಿತವಾಗಿದ್ದ ಯಕ್ಷಗಾನವೆಂಬ ಕಲೆಯೊಂದರಿಂದ ಹೀಗೂ ಪ್ರಸಿದ್ಧಿ, ಪ್ರಸನ್ನತೆ
ಪಡೆಯಲು ಸಾಧ್ಯ ಎನ್ನುವುದಕ್ಕೂ ಇವರೇ
ಉತ್ತಮ ಸಾಕ್ಷಿ. ಒಬ್ಬ ಪ್ರಾಮಾಣಿಕ
ವ್ಯಕ್ತಿ ತನ್ನ ಪರಿಶ್ರಮ ಮತ್ತು
ಸಮಯೋಚಿತ ತೀರ್ಮಾನಗಳಿಂದ ಜನಾನುರಾಗದ ಜೊತೆಗೆ ಆ ಕ್ಷೇತ್ರದ
ಶಕಪುರುಷರ ಸಾಲಿನಲ್ಲಿ ನಿಲ್ಲಬಲ್ಲ ಎನ್ನುವುದಕ್ಕೂ ಇವರೇ ಉದಾಹರಣೆ. ಹೌದು
ಕುಂಬ್ಳೆ ಸುಂದರ ರಾಯರು ಯಕ್ಷಗಾನಕ್ಕೆ
ಬಹಳಷ್ಟು ನೀಡಿದ್ದಾರೆ ಮತ್ತು ಅದರಿಂದ ಅಷ್ಟೇ
ಪಡೆದುಕೊಂಡಿದ್ದಾರೆ. ಇದನ್ನು ಸ್ವತಃ ಅವರೂ
ಅಲ್ಲಗಳೆಯುವುದಿಲ್ಲ. ಯಕ್ಷಗಾನ
ಕ್ಷೇತ್ರದ ಮಾತಿನ ದಂತಕಥೆಗಳಾಗಿ ಶೇಣಿ,
ಸಾಮಗರ ಸಾಲಿನಲ್ಲಿ ಪಕ್ಕನೆ ನಿಲ್ಲುವ ಇನ್ನೊಂದು
ಹೆಸರು ಕುಂಬ್ಳೆ. ಸಾಮಾಜಿಕ ಹಿನ್ನೆಲೆ ಇಲ್ಲದ,
ಆರ್ಥಿಕ ಸಾಮಥ್ರ್ಯವಿಲ್ಲದ, ಎಲ್ಲಕ್ಕೂ ಮಿಗಿಲಾಗಿ ಹೀಗೆ ಎಂದು ದಾರಿ
ತೋರಿಸುವ ಕೈಗಳಿಲ್ಲದ ಕಾಲದಲ್ಲಿ ಅನುಕೂಲವನ್ನೇ ಹಿನ್ನೆಲೆಯಾಗಿಸಿ, ಬುದ್ಧಿಯನ್ನೇ ಸಾಮಥ್ರ್ಯವಾಗಿಸಿ, ತನ್ನದೇ ಕೈಗಳನ್ನು ದಾರಿಗೆ
ತೋರಿಸಿ ಬೆಳೆದು ನಿಂತವರು ಕುಂಬ್ಳೆ
ಸುಂದರ ರಾಯರು.
ಅನೇಕರು
ಅನೇಕ ವರ್ಷಗಳನ್ನು ಅವರೊಂದಿಗೆ ಕಳೆದ ಅನುಭವ ದಟ್ಟವಾಗಿರುವಾಗ
ಬಾಲ್ಯದಿಂದಲೇ ನೆಲದ ಮೇಲಿನ ಚಾಪೆಯಲ್ಲಿ
ನಿದ್ದೆಗಣ್ಣಿನಿಂದ ನೋಡಿದ ಅವರ ಪಾತ್ರಗಳು
ನೀಡಿದ ಪರಿಚಯ, ಕೆಲವು ವರ್ಷ ಅವರೊಂದಿಗೆ ಕೆಲಸ
ಮಾಡಿದ ಅನುಭವ ಹಾಗೂ ಹಲವು
ವರ್ಷ ಅವರ ತೀರಾ ಆಪ್ತ
ಸಂಪರ್ಕಕ್ಕೊಳಗಾದ ಸಲುಗೆ ಈ ಸಾಧ್ಯತೆಯಿಂದ
ಇಲ್ಲಿಯ ಬರೆಹಕ್ಕೆ ಅಡಿ ಇಡುತ್ತಿದ್ದೇನೆ. ಅವರ
ಬಗ್ಗೆ ಅವರೇ ಬರೆದ ಬರೆಹ
ಇದೆ(ಯಕ್ಷಪಥದ ಯಾತ್ರಿಕ, ಜೀವನ
ಸ್ಮøತಿಸಂಚಯ- ಸುಂದರಕಾಂಡ-1, ಸಂ:ಪ್ರೊ.ಅಮೃತ ಸೋಮೇಶ್ವರ)
ಜೊತೆಗೆ ಅದೆಷ್ಟೋ ಬರಹಗಾರರು, ವಿಮರ್ಶಕರು
ಬರೆದ, ಆಡಿದ ಮಾತುಗಳು ಪ್ರಕಟಗೊಂಡಿವೆ.
ಹಾಗಾಗಿ ಇಲ್ಲಿಯ ಕೆಲವು ಕಂತುಗಳು
ಅವÀರ ಕುರಿತಾಗಿ ಎನ್ನುವುದಕ್ಕಿಂತ
ಯಕ್ಷಗಾನದ ಕುರಿತಾಗಿ ಅವರದು ಎನ್ನುವುದೇ ಹೆಚ್ಚು
ಸೂಕ್ತ. ಬೆಲ್ಲ ಕಟ್ಟಿ ತಂದ
ತುಂಡು ಪೇಪರಿನಿಂದ ಹಿಡಿದ ಸಿಕ್ಕಿದ್ದನ್ನೆಲ್ಲಾ ಓದದೇ
ಬಿಡದ, ಓದಿದ ಓದು ಮತ್ತು
ಅನುಭವಿಸಿದ ಅನುಭವವನ್ನು ಹೇಳದೇ ಬಿಡದ, ಹೇಳಿದ
ಮಾತುಗಳನ್ನು ಕಟ್ಟಿಕೊಂಡು ಜಿದ್ದಿಗೆ ಒಳಗಾಗದ ನಿರುಮ್ಮಳ ಭಾವದಿಂದಿರುವ
ಈ ಕಲಾವಿದನ ಬದುಕು
ಎಷ್ಟು ಮುಖ್ಯವೋ ಅದೇ ಕಲಾವಿದ
ತನಗೆಲ್ಲವನ್ನೂ ನೀಡಿದ ಕಲೆಯ ಬಗೆಗಿನ
ಆದರದ ಅಭಿಪ್ರಾಯವೂ ಅಷ್ಟೇ ಮುಖ್ಯ. ಯಕ್ಷಗಾನವೆಂಬ
ಕಲಾಪ್ರಕಾರವೊಂದು ವಿಶ್ವಮಾನ್ಯವಾಗುವ ಕಾಲಘಟ್ಟದಲ್ಲಿ ಅದನ್ನು ಕಟ್ಟಿ ಬೆಳೆಸಿದ
ಕಲಾವಿದರ ಅನುಭವದ ನುಡಿ ಅನೇಕ
ಪ್ರಶ್ನೆಗಳಿಗೆ ಉತ್ತರವಾಗುತ್ತದೆ. ಮುಂದಿನ ದಾರಿಗೆ ಬೆಳಕಾಗುತ್ತದೆ.
ಈ ಅನಿಸಿಕೆಯ ಹಿನ್ನೆಲೆಯಿಂದ
ಇಲ್ಲಿರುವ ಬರೆಹವನ್ನು ಗಮನಿಸಬೇಕಾಗಿದೆ. ಈ
ಫಲಶೃತಿಗಾಗಿ ಸುದೀರ್ಘ ಮಾತುಕತೆ ನಡೆಸಿದ್ದೇನೆ.
ಅವರಿಂದ ಅನೇಕ ಅನುಭವ ಸತ್ಯವನ್ನು
ಹೊರತೆಗೆದಿದ್ದೇನೆ. ಇದರಲ್ಲಿ ಎಲ್ಲವನ್ನು ಎಷ್ಟರ
ಮಟ್ಟಿಗೆ ಇಲ್ಲಿ ದಾಖಲಿಸಲು ಸಾಧ್ಯ
ಮತ್ತು ಸಾಧು ಎಂದು ನಾನಿಲ್ಲಿ
ಹೇಳಲಾರೆ. ಆದರೆ ಅದು ಕಲೆಗಳ
ದೃಷ್ಠಿಯಿಂದ ಅತ್ಯಮೂಲ್ಯವೆಂದೇ ಭಾವಿಸಿದ್ದೇನೆ. ಈ ಎಲ್ಲಾ ವಿದ್ಯಮಾನಗಳ
ಮಧ್ಯೆ ಯಕ್ಷಗಾನದ ಅವರ ಕೊಡುಗೆಗೆ ಸಂದ
ಹತ್ತು ಹಲವು ಪ್ರಶಸ್ತಿಗಳ ಗರಿಗಳಲ್ಲಿ
ಪದ್ಮ ಪ್ರಶಸ್ತಿಯೂ ಸೇರಲಿದೆ ಎಂದೂ ಕೇಳಿದ್ದೇವೆ.
ಆದರೆ ಈ ಬರೆಹ ಅದರ
ಸುತ್ತ ಬರೆದದ್ದಲ್ಲ, ಬದಲಾಗಿ ಅವರ ಒಟ್ಟು
ಆಲೋಚನೆ ಮತ್ತು ವ್ಯಕ್ತಿತ್ವದ ಹಿನ್ನೆಲೆಯಲ್ಲಿ
ಬರೆÀಯಲಾಗುತ್ತಿದೆ.
ಕುಂಬ್ಳೆ
ಸುಂದರ ರಾಯರಿಗೆ ಈಗ 82 ವರ್ಷ
ಪ್ರಾಯ. ಹದಿನೆಂಟರಿಂದ ಕಾಲಿಗೆ ಕಟ್ಟಿದ ಗೆಜ್ಜೆ
ಮತ್ತು ಅವರ ಮಾತಿನ ಹೆಜ್ಜೆ
ಅದು ಕೇವಲ ಗುರುತಾಗಿ ಮಾತ್ರ
ಉಳಿಯಲಿಲ್ಲ. ಅದು ವಾಮನ ರೂಪದಿಂದ
ತ್ರಿವಿಕ್ರಮ ರೂಪಕ್ಕೇರಿದೆ. ಈ ತ್ರಿವಿಕ್ರಮ ರೂಪದಲ್ಲಿ
ಹಲವು ಒಳವುಗಳಿವೆ ಮತ್ತು ಒಳನೋಟಗಳಿವೆ. ಅಷ್ಟು
ಮಾತ್ರವಲ್ಲದೇ ಈ ಸುದೀರ್ಘ ನಡೆಯ
ಹಿಂದೆ ಕುತೂಹಲ ಇದೆ, ರೋಚಕ
ಕ್ಷಣಗಳಿದೆ, ಎಲ್ಲಕ್ಕೂ ಹೆಚ್ಚಾಗಿ ನೋವನ್ನೇ ನಲಿವೆಂದು, ನಲಿವನ್ನೇ
ಒಲವೆಂದು ಭಾವಿಸುವ ಮುಗ್ಧ ಮನಸ್ಸೊಂದಿದೆ.
ಯಕ್ಷಗಾನವನ್ನು ಕೇವಲ ಒಂದು ಕಲೆ
ಎಂದು ಮಾತ್ರ ಸ್ವೀಕರಿಸದೇ ತನ್ನ
ಭಾವಾಭಿವ್ಯಕ್ತಿಯ ಮಾಧ್ಯಮವೆಂದು ಭಾವಿಸಿ ಅದರಿಂದ ಪಡೆದ
ಮತ್ತು ಅದಕ್ಕೆ ಕೊಟ್ಟ ಹಿನ್ನೆಲೆಗಳನ್ನು
ಮತ್ತೆ ಮುನ್ನೆಲೆಗೆ ತಂದ ಸುಖಾನುಭವವಿದೆ. ಸುಂದರ
ರಾಯರನ್ನು ಒಂದಷ್ಟು ಕಂತುಗಳಲ್ಲಿ ಇಲ್ಲಿ
ಹೇಳಲಾಗುತ್ತದೆ ಎನ್ನುವ ದಾಷ್ಟೀಕದ ಬದಲು
ಅವರ ಕಾಲವನ್ನು ಅವರಿಂದಲೇ ಮೆಲುಕು ಹಾಕಿಸುತ್ತಿದ್ದೇವೆ. ಕೆದಕಿದಷ್ಟು
ಹೊರಬರುವ ನೈಜ ಆಶಯಗಳನ್ನು ಕಲೆಹಾಕಿದ್ದೇವೆ. ಆ
ಮೂಲಕ ಯಕ್ಷಗಾನ ಚಿಂತಕರಿಗೆ ಹಾಗೂ
ಸಹೃದಯ ಕಲಾಸಕ್ತರಿಗೆ ಅವರ ವೈಭವವನ್ನು ಸಣ್ಣದಾಗಿ
ನೆನಪಿಸುವ ಕಾರ್ಯ ಮಾಡುತ್ತಿದ್ದೇವೆ. ವಿದ್ವತ್ಪೂರ್ಣ ಎನ್ನುವ ಅಕಾಡೆಮಿಕ್
ಭಾಷೆಗಿಂತಲೂ ಸರಳ ಸಹಜ ಮಾತಿನ
ಆಪ್ಯಾಯಮಾನತೆಯ ಮೂಲಕ ಯಕ್ಷ ರಂಗದ
ವಿಶಿಷ್ಟ ಪ್ರತಿಭೆ ಎಂದೇ ಹೆಸರಾದ
ಕುಂಬ್ಳೆಯವರು ಇಲ್ಲೂ ಅದನ್ನೇ ಅನುಸರಿಸಿದ್ದಾರೆ.
ಮಾಗಿದ ಅವರ ಅಭಿಪ್ರಾಯಗಳಲ್ಲಿ ಬೇಧವಿಲ್ಲ,
ಶಬ್ಧಗಳಲ್ಲಿ ಭಾರವಿಲ್ಲ, ನಿಲುವುಗಳಲ್ಲಿ ದ್ವಂದ್ವವಿಲ್ಲ. ಹಾಗಾಗಿ ಇದು ಸರ್ವಕಾಲಿಕ
ಮತ್ತು ಸ್ವೀಕಾರಾರ್ಹ ಎನ್ನುತ್ತಾ ಮುಂದಿನ ಕೆಲವು
ಕಂತುಗಳಿಗೆ ಈ ಪೀಠಿಕೆಯನ್ನು ಹಾಕಿದ್ದೇನೆ.
ಕುಂಬ್ಳೆಯಿಂದ ಕೂಡ್ಲಿನವರೆಗೆ........
ಕುಂಬಳೆ
ಸಮೀಪದ ಕಾಯರ್ಪಾಡಿಯ ಬ್ರಾಹ್ಮಣರೊಬ್ಬರ ತೋಟದಲ್ಲಿದ್ದ ಮನೆ ಭಗವತಿ ದೇವಿಯ
ದರ್ಶನ ಪಾತ್ರಿ ಅಯ್ಯಪ್ಪ ಕೋಮರನವರದು.
ಕೇರಳ ಕಡೆಯಿಂದ ಮುತ್ತಾತನ ಕಾಲದಿಂದಲೇ
ಬಂದು ಇಲ್ಲಿ ನೆಲಸಿದ್ದ ಈ
ಕುಟುಂಬದ ಮನೆ ಮಾತು ಮಲೆಯಾಳ.
ಅಯ್ಯಪ್ಪ ಕೋಮರನವರಿಗೆ ಸಣ್ಣ ಪ್ರಾಯದಿಂದಲೇ ಯಕ್ಷಗಾನದ
ಆಸಕ್ತಿ. ಯಕ್ಷಗಾನ ಕಾರ್ಯಕ್ರಮಗಳಲ್ಲಿ ವೇಷ
ಮಾಡುತ್ತಲೂ ಇದ್ದರು. ಆದರೆ ಆ
ಕಾಲದಲ್ಲಿ ಇವರ ಆಸಕ್ತಿಯನ್ನು ಹುಚ್ಚೆಂದು
ಅರ್ಥೈಸಿಕೊಂಡ ಮನೆಮಂದಿ ಉರ್ಕು, ಜೋತಿಷ್ಯ,
ಮಂತ್ರವಾದದ ಮೂಲಕ ಯಕ್ಷಗಾನದಿಂದ ಬಿಡಿಸಿ
ಮನೆ ಸೇರಿಸಿದರು. ಇಂತಹಾ ಪ್ರಕ್ರಿಯೆಗಳನ್ನು ಕೇಳುತ್ತಾ
ಗಮನಿಸುತ್ತಾ ಬೆಳೆದವರೇ ಅಯ್ಯಪ್ಪ ಕೋಮರರ ಮೊಮ್ಮಗ,
ಯಕ್ಷಗಾನದ ಹವ್ಯಾಸಿ ಸ್ತ್ರೀ ವೇಷಧಾರಿ
ಕುಂಞÂಕಣ್ಣನವರ ಮಗ, ಸುಪ್ರಸಿದ್ಧ
ಕಲಾವಿದ ಕುಂಬಳೆ ಸುಂದರ ರಾವ್.
ಅವರೇ ಹೇಳುವಂತೆ, “ನನ್ನ ಅಜ್ಜ ಆ
ಕಾಲದಲ್ಲಿ ಆಢ್ಯರು ಮತ್ತು ಆಚಾರ್ಯರು.
ನಾಯ್ಕಪು ಭಗವತಿ ಮತ್ತು ಕುಂಬಳೆ
ದೇವಸ್ಥಾನದಲ್ಲಿ ಏನೇ ನಡೆಯುದಾದರೂ ಅಲ್ಲಿ
ಅಜ್ಜನ ಉಪಸ್ಥಿತಿ ಅನಿವಾರ್ಯ. ಬಾರೀ ಚಂದದ ನರ್ತನ,
ಜೊತೆಗೆ ಅಷ್ಟೇ ಚಂದದ ಮೈಕಟ್ಟು.
ಅವರಿಗೆ ದರ್ಶನವೂ ಇತ್ತು. ಅವರನ್ನು
ಗೊತ್ತಿದ್ದವರು ಈಗಲೂ ದೇವತಾಮನುಷ್ಯ ಎಂದೇ
ಹೇಳುವುದು. ಮಗ್ಗದ ನೇಕಾರಿಕೆ ನಮ್ಮ
ಕುಲಕಸುಬು. ಅವರಿಗೆ ಮಗ್ಗದ ಕೊಟ್ಟಿಗೆಯ
ಮೂಲೆಯಲ್ಲಿ ಒಂದಷ್ಟು ಜಾಗ ಇತ್ತು.
ಅಲ್ಲಿ ಕೇರಳದಿಂದ ನೇಕಾರಿಕೆಗಾಗಿ ಬಂದ ಅನೇಕÀರೂ
ಇರುತ್ತಿದ್ದರು. ಅಲ್ಲಿ ಬೇರೆಬೇರೆ ಕಲಾಪ್ರಕಾರಗಳೂ
ನಡೆಯುತ್ತಿದ್ದವು. ಮಲೆಯಾಳಿ ನಾಟಕಗಳೂ ನಡೆದದ್ದಿದೆ.
ಹಾಗಾಗಿ ನಮ್ಮ ಮಗ್ಗದ ಮನೆ
ಒಂದು ಕಲಾ ಕೇಂದ್ರವಾಗಿತ್ತು. ನನ್ನ
ಓರ್ವ ಚಿಕ್ಕಪ್ಪ ಬೋರ್ಡ್ ಹೈಸ್ಕೂಲ್ನಲ್ಲಿ
ಸಂಸ್ಕøತ ಪಂಡಿತ-ಶಿರೋಮಣಿ.
ಅವರು ಸಂಸ್ಕøತದಲ್ಲಿ ಯಾವಾಗಲೂ
ಒಂದೊಂದು ಕತೆಯನ್ನು ಓದಿ ಹೇಳುತ್ತಿದ್ದರು. ಆಗ
ನನಗೆ ಶಾಲೆಗೆ ಹೋಗುವುದಕ್ಕಿಂತ ಕೈಗೊಂದು
ಪುಸ್ತಕ ಸಿಕ್ಕಿದರೆ ಓದುವುದೇ ಹೆಚ್ಚು ಆಸಕ್ತಿಯ
ವಿಷಯವಾಗಿತ್ತು. ಹಾಗೆ ನಿರಂತರ ಓದುವ
ಅಭ್ಯಾಸವನ್ನು ಬೆಳೆಸಿಕೊಂಡೆ. ಈ ರೀತಿಯ ಸುಸಂಸ್ಕøತ ವಾತಾವರಣ ನನ್ನನ್ನು
ಯಕ್ಷಗಾನದತ್ತ ಹೊರಳುವಂತೆ ಮಾಡಿತು.”
“ಎರಡನೇ
ಮಹಾಯುದ್ಧದ ಅವಧಿಯಲ್ಲಿ ಕುಂಬಳೆಗೆ ಮಿಲಿಟರಿ ಬ್ಲಾಕ್ ಬಂತು.
ನಾವೆಲ್ಲಾ ನಿರಾಶ್ರಿತರಾದೆವು. ನಮ್ಮ ಕುಟುಂಬ ಮಂಗಳೂರಿಗೆ
ವಲಸೆ ಹೋಗಬೇಕಾಯಿತು. ಅಶೋಕನಗರ ಶಾಲೆಯಲ್ಲಿ 5ನೇ
ತರಗತಿ ಮುಗಿಸಿದೆ. ಮಹಾಯುದ್ಧ ಮುಗಿದ ಮೇಲೆ ಮತ್ತೆ
ಕುಂಬ್ಳೆಗೆ ಬಂದೆವು. ಉಪ್ಪಳದಲ್ಲಿ ಮನೆ
ಮಾಡಿದೆವು. ನನಗೆ ಇಂಗ್ಲೀಷಿನ ಗಂಧಗಾಳಿ
ಇರಲಿಲ್ಲ. 7ನೇ ತರಗತಿಯವರೆಗೆ ಹೋದೆ,
ಏನೂ ಪ್ರಯೋಜನ ಇಲ್ಲಾಂತ ಆಯಿತು.
ಶಾಲೆ ಬಿಟ್ಟೆ. ಒಂದು ದಿನ
ಸಿಟ್ಟು ಮಾಡಿಕೊಂಡು ಬೆಂಗಳೂರಿಗೂ ಹೋದೆ, ಅಲ್ಲೂ ಸರಿಯಾಗಲಿಲ್ಲ.
ಆದರೆ ಮತ್ತೆ ಊರಿಗೆ ಬರಲು
ದುಡ್ಡಿರಲಿಲ್ಲ, ನನ್ನ ದೊಡ್ಡಣ್ಣನಿಗೆ ಕಾಗದ
ಬರೆದೆ, ಅವ ದುಡ್ಡು ಕಳುಹಿಸಿದ್ದರಿಂದ
ಊರಿಗೆ ಬಂದೆ. ಊರಿಗೆ ಬಂದರೂ
ನೇಕಾರಿಕೆಯಲ್ಲಾಗಲಿ ಮಗ್ಗದ ಅಂಗಡಿಯಲ್ಲಾಗಲಿ ಕುಳಿತುಕೊಳ್ಳುವ
ಮನಸ್ಸಾಗಲಿಲ್ಲ. ಕುಳಿತರೂ ಅದು ಸರಿ
ಹೋಗುತ್ತಿರಲಿಲ್ಲ. ಹಾಗಾಗಿ ಮನೆಯಲ್ಲಿ ಅಪ್ರಯೋಜಕನಾಗಿ,
ಯಾರಿಗೂ ಬೇಡದವನಾಗಿ, ಅಮ್ಮನ ಕಣ್ಣೀರಿಗೆ ಕಾರಣದವನಾಗಿ
ಬದುಕಿದೆ. ಆದರೂ ಅಪ್ಪ ಏನೂ
ಮಾತನಾಡುತ್ತಿರಲಿಲ್ಲ. ಆ ಕಾಲದಲ್ಲಿ ನಾಯ್ಕಪಿನಲ್ಲಿ
ತಾಳಮದ್ದಳೆಗಳು ನಡೆಯುತ್ತಿದ್ದವು. ನಾನು ತುಂಬಾ ಓದುತ್ತಿದ್ದ
ಕಾಲ ಅದು, ಜೊತೆಗೆ ನನಗೆ
ಕನ್ನಡವೂ ಚೆನ್ನಾಗಿ ಬರುತ್ತಿತ್ತು. ಅಲ್ಲಿ ಒಂದು ಸಣ್ಣ
ಅರ್ಥ ಹೇಳಿದೆ, ಎಲ್ಲರೂ ಹೇಳು
ಏನಾಗುವುದಿಲ್ಲ ಅಂತ ಹೇಳಿದ್ರು, ನಿಜವಾಗಿಯೂ
ಏನೂ ಆಗಲ್ಲಿಲ್ಲ. ಬದಲಾಗಿ ಒಳ್ಳೆಯದೇ ಆಯಿತು.
ಆಗ ಕೆಲವರು ಚಟವೋ ಎಂಬಂತೆ
ಯಕ್ಷಗಾನ, ತಾಳಮದ್ದಳೆಗಳಿಗೆ ಹೋಗುತ್ತಿದ್ದುದನ್ನು ಗಮನಿಸಿದೆ. ನಾನೂ ಅವರೊಂದಿಗೆ ಹೋದೆ.
ಅಲ್ಲಿಂದಲೇ ಕೂಡ್ಲು ಮೇಳಕ್ಕೆ ಸೇರಿದೆ.
ಹೀಗೆ ಆರಂಭವಾಯಿತು ನನ್ನ ಯಕ್ಷಯಾತ್ರೆ,” ಎಂದು
ಹೇಳಿ ಒಂದು ಕಂತು ಮುಗಿಸಿದರು
ಕುಂಬ್ಳೆ ಸುಂದರ ರಾಯರು.
ಪರಂಪರೆ ಮತ್ತು
ಮಾತಿನ
ಮಲ್ಲ
ಕುಂಬ್ಳೆ
ಮಾತು
ಸಮಗ್ರ ಯಕ್ಷಗಾನದ ಒಂದು ಭಾಗ. ಆದರೆ
ಯಕ್ಷಗಾನದಲ್ಲಿ ಮಾತು ಪ್ರಧಾನ ಬಂಡವಾಳವೂ
ಆಯಿತು. ಯಕ್ಷಗಾನದ ರಚನೆಯಲ್ಲಿ ಮಾತಿಗೆ ಸಿಕ್ಕಿದಷ್ಟೇ ಪ್ರಾಮುಖ್ಯತೆ
ಅದರ ಉಳಿದ ಅಂಗಗಳಿಗೆ ಸಿಕ್ಕಿಲ್ಲವೆಂದರೂ
ತಪ್ಪಿಲ್ಲ. ಮಾತಿನ ವ್ಯಾಪ್ತಿ ಎಷ್ಟು
ವಿಸ್ತಾರವಾದುದೆಂದರೆ, ಕುಣಿತ, ವೇಷಭೂಷಣ, ಅಭಿನಯ
ಈ ಅಂಗಗಳು ಇಲ್ಲದ್ದರೂ
ಈ ಎಲ್ಲವನ್ನೂ ನೋಡಿದಷ್ಟೇ
ಪರಿಣಾಮಕಾರಿಯಾಗಿ ಕಟ್ಟಿಕೊಡುವ ಪ್ರಕಾರವೊಂದೂ ಬೆಳೆಯಿತು, ಅದೇ ತಾಳಮದ್ದಳೆ. ಮಾತಿಲ್ಲದ
ಕಥಕ್ಕಳಿ ಪಂಡಿತರ ಕಲೆಯಾಗಿಯೂ ಮಾತಿರುವ
ಯಕ್ಷಗಾನ ಪಂಡಿತ ಮತ್ತು ಜನಸಾಮಾನ್ಯ
ಈ ಇಬ್ಬರ ಕಲೆಯಾಗಿಯೂ
ಬೆಳೆದದ್ದೇ ಇದರ ಹೆಗ್ಗಳಿಕೆ. ಯಕ್ಷಗಾನದಲ್ಲಿ
ಮಾತಿನ ಪರಂಪರೆ ಬೆಳೆಸಲು ಕೊಡುಗೆ
ಕೊಟ್ಟ ಪ್ರಸಿದ್ಧ ಕಲಾವಿದರ ಸಾಲಿನಲ್ಲಿ ಕುಂಬಳೆ
ಸುಂದರ ರಾಯರಿಗೆ ವಿಶೇಷ ಸ್ಥಾನವಂತೂ
ಇದ್ದೇ ಇದೆ. ಯಕ್ಷಗಾನದ ಸಮಗ್ರತೆಯ
ದೃಷ್ಟಿಯಲ್ಲಿ ನಿಮ್ಮ ಕೊಡುಗೆ ಅಪರಿಪೂರ್ಣ
ಅಂತ ನಿಮಗೆ ಅನ್ನಿಸುದಿಲ್ಲವೇ? ಎಂದು
ಕುಂಬ್ಳೆಯವರನ್ನು ಕೆದಕಿ ಕೇಳಿದಾಗ ಅವರು
ಅತ್ಯಂತ ಪ್ರಾಂಜಲ ಮನಸ್ಸಿನಿಂದ “ಅದು
ಒಳ್ಳೆಯ ಲಕ್ಷಣವಂತೂ ಅಲ್ಲ. ಸಮಗ್ರ ಕಲೆಯನ್ನು
ನೋಡುವಾಗ ಒಂದು ಭಾಗ ಎಷ್ಟೇ
ಒಳ್ಳೆಯ ರೀತಿಯಲ್ಲಿ, ಎಷ್ಟೇ ಆಕರ್ಷಕವಾಗಿ ಬೆಳೆದರೂ
ಉಳಿದ ಭಾಗಕ್ಕೆ ಅದರ ಹೊಡೆತ
ಬಿದ್ದೇ ಬೀಳುತ್ತದೆ. ನನ್ನ ವೇಷಕ್ಕೆ ಆಗಿರುವ
ತೊಂದರೆಯೂ ಅದೇ. ಕುಣಿತ ಸಾಲದೇ
ಹೋಯಿತಲ್ಲಾ, ಕುಣಿತ ಇರುತ್ತಿದ್ದರೆ ಈ
ಮಾತುಗಾರಿಕೆಗೆ ಎಷ್ಟು ಗೌರವ ಬರುತ್ತಿತ್ತು.
ಎಷ್ಟು ಆಕರ್ಷಣೆ ಉಂಟಾಗುತ್ತಿತ್ತು. ಆದ್ದರಿಂದ
ಮಾತುಗಾರಿಕೆ ಎನ್ನುವುದು ಒಳ್ಳೆಯದೂ ಮಾಡಿದೆ, ಹಾಳೂ ಮಾಡಿದೆ.
ಆದರೆ ಮಾತುಗಾರಿಕೆ
ಬೆಳೆಯದೇ ಇರುತ್ತಿದ್ದರೆ ವಿದ್ವಾಂಸರು ಇದರ ಹತ್ತಿರ ಬರುತ್ತಿರಲಿಲ್ಲ.
ಆದ್ದರಿಂದ ಬುದ್ಧಿಯನ್ನು ಬೆಳೆಸುವುದರಲ್ಲಿ ಮಾತುಗಾರಿಕೆಯ ಕೆಲಸ ದೊಡ್ಡದಾಗಿರುವಂತೆ ಭಾವವನ್ನು
ಬೆಳೆಸಲು ಕುಣಿತದ ಭಾಗವೂ ಬೆಳೆಯಬೇಕು.”
ಎನ್ನುತ್ತಾರೆ.
ಯಕ್ಷಗಾನದಲ್ಲಿ
ಮಾತು ಮತ್ತು ಕುಣಿತ ಸಮಾನವಾಗಿ
ಸಾಗಬೇಕೆಂದು ಪ್ರತಿಪಾದಿಸುವ ಕುಂಬ್ಳೆಯವರು ತಾನು ಕುಣಿತಗಾರನಲ್ಲ ಎನ್ನುವುದನ್ನು
ಪ್ರಾಮಾಣಿಕವಾಗಿಯೇ ಒಪ್ಪುತ್ತಾರೆ. “ಹಾಗೆಂದು ನಾನು ಒಂದೇ
ಒಂದು ಪದ್ಯಕ್ಕೂ ಸುಮ್ಮನೆ ನಿಂತು ಮಾತನಾಡಿದವನಲ್ಲ.
ನನ್ನ ಸಮಾಧಾನಕ್ಕೆ ತಪ್ಪುತಪ್ಪಾದರೂ ಕುಣಿಯುತ್ತಿದ್ದೆ. ನನಗೆ ಲಯಜ್ಞಾನ ಕಡಿಮೆ
ಇತ್ತು, ಆದ್ದರಿಂದ ಕುಣಿತ ಬರುತ್ತಿಲ್ಲ ಎನ್ನುವುದೂ
ಗೊತ್ತಿತ್ತು. ಆದರೂ ರಂಗಕ್ಕೆ ಬಂದ
ಮೇಲೆ ಅದಕ್ಕೆ ಅಪಚಾರ ಮಾಡಬಾರದು
ಮತ್ತು ಕೇವಲ ನಿಂತು ಮಾತನಾಡುವ
ಪರಂಪರೆ ಬೆಳೆಯಬಾರದು ಎಂಬ ಕಾರಣಕ್ಕೆ ನಾನು
ಕುಣಿಯುತ್ತಿದ್ದೆ. ನಿಜವಾಗಿ ಯಕ್ಷಗಾನ ನಾಟಕ
ಅಂತ ಆದದ್ದೇ ಹಾಗೆ. ಶೇಣಿಯವರು
ಕುಣಿಯುತ್ತಾರಾ? ಸಾಮಗರು ಕುಣಿಯುತ್ತಾರಾ? ಸುಂದರ
ರಾಯರು ಕುಣಿಯುತ್ತಾರಾ? ಕುಣಿಯದಿದ್ದರೂ ಅವರಿಗೆ ಏನು ಕೊರತೆಯಾಗಿದೆ.
ಹೆಸರು ಬರಲಿಲ್ವಾ? ಅವರ ವೇಷ ನೋಡಲಿಲ್ವಾ?
ಅದ್ದರಿಂದ ಕುಣಿಯುವ ಅಗತ್ಯ ಇಲ್ಲ
ಎನ್ನುವ ಅಭಿಪ್ರಾಯ ಸಾರ್ವತ್ರಿಕವಾಗಬಾರದು. ಆ ಅಭಿಪ್ರಾಯಕ್ಕೆ ನಾನೂ
ಪಾಲುದಾರನಾಗಬಾರದು. ಯಕ್ಷಗಾನ ನಾಟಕವಾಗಬಾರದು ಈ
ಎಲ್ಲಾ ಕಾರಣಕ್ಕಾಗಿ ನಾನು ತಪ್ಪುತಪ್ಪಾದರೂ ಕುಣಿಯುತ್ತಿದ್ದೆ.
ಆದರೆ ಕುಣಿತಕ್ಕೆ ಒಂದು ಪ್ರಾಯದ ಮಿತಿಯೂ
ಇದೆ. ಆ ಪ್ರಾಯದಲ್ಲಿ ರೂಢಿಸಿಕೊಂಡರೆ
ಮಾತ್ರ ಅದು ಸಿದ್ದಿಸುವುದು. ನಾನು
ಮೇಳಕ್ಕೆ ಬರುವ ಹೊತ್ತಿಗೆ ಆ
ಪ್ರಾಯ ಮೀರಿತ್ತು. ಮಾತುಗಾರಿಕೆಯಿಂದ ಬಂದ ಪ್ರಸಿದ್ಧಿಯಲ್ಲಿ ಕುಣಿತದ
ಪಾಲು ಒಂದಷ್ಟು ಮರೆಯಾಯಿತು,” ಎನ್ನುತಾರೆ
ಮಾತಿನ ಮಲ್ಲ ಕುಂಬ್ಳೆ. ಇದೇ
ಮಾತು ಅವರನ್ನು ಕರ್ನಾಟಕದ ವಿಧಾನ
ಸಭಾ ಸದಸ್ಯನನ್ನಾಗಿಸಿತು, ದೇಶ ವಿದೇಶಗಳನ್ನು ಸುತ್ತಿಸಿತು,
ಹತ್ತು ಹಲವು ಪ್ರಶಸ್ತಿ ಸನ್ಮಾನಗಳನ್ನು
ನೀಡಿತು. ಅಲ್ಲದೇ ಕರ್ನಾಟಕ ಯಕ್ಷಗಾನ
ಬಯಲಾಟ ಅಕಾಡೆಮಿಯ ಪ್ರಥಮ ಅಧ್ಯಕ್ಷನನ್ನಾಗಿಯೂ ಮಾಡಿತು.
ಇದೇ ಈ ಮಾತಿನ ಮೌಲ್ಯ.
ದೀರ್ಘಕಾಲ ಯಕ್ಷಗಾನ ಕ್ಷೇತ್ರದಲ್ಲಿದ್ದ ನೀವು
ಈ ಕಲೆಯನ್ನು ಹೇಗೆ
ಅರ್ಥೈಸುತ್ತೀರಿ?
ಬಹಳ
ದೊಡ್ಡ ಪ್ರಶ್ನೆ ಮತ್ತು ಬಹಳ
ವಿವರಣೆಯನ್ನು ಬಯಸುವ ಪ್ರಶ್ನೆ. ವಿದ್ವಾಂಸರಿಗೆ
ಸಂಬಂಧಿಸಿದ್ದು. ಆದರೂ ಸಂಕ್ಷಿಪ್ತವಾಗಿ ಹೇಳುವುದಾದರೆ,
ಮೂಲತಾ ಯಕ್ಷಗಾನ ಒಂದು ಆರಾಧನಾ
ಪದ್ಧತಿಯ ಕಲೆ. ಯಕ್ಷ ಅಂದರೆ
ಪೂಜೆ ಎನ್ನುವ ಅರ್ಥ ಎಂದು
ವಿದ್ವಾಂಸರು ಹೇಳಿದ್ದಿದೆ. ಹಾಗಾಗಿ ಯಕ್ಷಗಾನವೆಂದರೆ ಆರಾಧನೆ
ಎನ್ನುವುದು ಹೆಚ್ಚು ಸ್ಪಷ್ಟ. ಬೇರೆಬೇರೆ
ಆರಾಧನಾ ಕಲೆಗಳಿವೆ. ಒಂದು ದೇವಸ್ಥಾನ ಅಂದರೆ
ಅವಧಾನ, ವಾದ್ಯ, ಉರ್ಕು ಇತ್ಯಾದಿ
ಬೇರೆಬೇರೆ ವಾದ್ಯಗಳಿದ್ದ ಹಾಗೇ ಆರಾಧನೆಗಳಲ್ಲೂ ವಿಧಗಳಿವೆ.
ಇದಕ್ಕೆಲ್ಲಾ ಪ್ರತ್ಯೇಕ ಕಲೆಗಾರಿಕೆಯೂ ಇರುತ್ತದೆ. ದೇವಸ್ಥಾನದಲ್ಲಿ ಒಂದು ಜಾಗಟೆ ಬಾರಿಸುದಕ್ಕೂ
ಒಂದು ಕಲಾಗಾರಿಕೆ ಇದೆ. ಬರೇ ಶಬ್ಧ
ಮಾಡುವುದು ಅದರ ಉದ್ದೇಶವಲ್ಲ. ಚಂಡೆಯಲ್ಲೂ
ಹಾಗೇ. ಆ ಸುತ್ತಿನಲ್ಲಿ ಹೇಗೆ
ಹೋಗಬೇಕು? ಏನು? ಎತ್ತ? ಅಂತ
ಒಂದು ಸಂಪ್ರದಾಯವಿದೆ. ಯಾವಾಗ ಇದೆಲ್ಲಾ ಆರಂಭವಾಯಿತು
ಎನ್ನುವ ಬಗ್ಗೆ ನಮ್ಮಲ್ಲಿ ಸ್ಪಷ್ಟತೆ
ಇಲ್ಲದೇ ಇರಬಹುದು. ಆದರೆ ಸಂಪ್ರದಾಯ ಇದೆ
ಎನ್ನುವುದು ಸತ್ಯ. ಹಾಗೇ ಯಕ್ಷಗಾನ,
ಇದು ಯಾವತ್ತು? ಎಲ್ಲಿಂದ? ಹೇಗೆ? ಬಂತು, ಯಾರು
ಇದಕ್ಕೆ ಹೆಸರಿಟ್ಟರು? ಈ ಹೆಸರಿನ ಹಿಂದೆ
ಇನ್ನೇನು ಅರ್ಥವಿದೆ ಎನ್ನುವುದನ್ನು ಕರಾರುವಕ್ಕಾಗಿ ಹೇಳುವುದು ಅಸಾಧ್ಯ. ಆದರೆ ಇದು
ಸಮಾಜಕ್ಕೆ ಕೊಡಬೇಕಾದಂತಹಾ ಬಹಳ ಅಂಶಗಳನ್ನು ಕೊಟ್ಟು,
ಸಮಾಜದಿಂದ ತಾನು ಪಡೆಯಬೇಕಾದಂತಹಾ ಕೀರ್ತಿಯನ್ನು
ಪಡೆದಂತಹಾ ಕಲೆ. ಬೇರೆಬೇರೆ ಪ್ರಾಂತ್ಯಗಳಲ್ಲಿ
ಬೇರೆಬೇರೆ ಭಾಷೆಗಳಲ್ಲಿ ಅಲ್ಲಿನ ಕಲೆಗಳು ಹೇಗಿದ್ದಾವೋ
ಹಾಗೇ ಇದು ಕೂಡ ಕರಾವಳಿ
ಕರ್ನಾಟಕದಲ್ಲಿ ತನ್ನನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿದೆ.
ಹೀಗೆ ಅರ್ಥೈಸುವ ಯಕ್ಷಗಾನದ
ಶ್ರೇಷ್ಠತೆ ಅಥವಾ ಹಿರಿಮೆ ಏನು?
ಯಕ್ಷಗಾನ
ಯಾಕೆ ಜನಪ್ರಿಯ ಆಗಿದೆ? ಮತ್ತು
ಯಾಕೆ ಕೀರ್ತಿಯನ್ನು ಪಡೆದಿದೆ? ಅಂದರೆ ಇದರಲ್ಲಿ ಇರುವುದು
ಉಳಿದದ್ದರಲ್ಲಿ ಇಲ್ಲ. ಉಳಿದದ್ದರಲ್ಲಿ ಇಲ್ಲದೇ
ಇರುವುದು ಇದರಲ್ಲಿ ಇದೆ. ಮಾತುಗಾರಿಕೆ,
ನೃತ್ಯ, ಸಂಗೀತ, ಅಭಿನಯ, ಬಣ್ಣಗಾರಿಕೆ
ಇದೆಲ್ಲವನ್ನು ಸಮಪಾಕಗೊಳಿಸಿದ ಕಲೆಯೊಂದು ಇದ್ದರೆ ಅದು ಯಕ್ಷಗಾನ
ಮಾತ್ರ. ಯಾವ ಬುದ್ಧಿವಂತ ಇದನ್ನು
ಕಂಡುಹಿಡಿದನೋ ಅಥವಾ ಸಂಯೋಜನೆ ಮಾಡಿದನೋ
ಆ ಪುಣ್ಯಾತ್ಮನಿಗೆ ನಮೋ
ಅನ್ನದೇ ಬೇರೆ ವಿಧಿ ಇಲ್ಲ.
ಬಹಳ ಬುದ್ಧಿವಂತ ಆತ. ಆದ್ದರಿಂದ ಯಕ್ಷಗಾನದ
ಹೆಚ್ಚುಗಾರಿಕೆ ಏನು ಅಂತ ಕೇಳಿದ್ರೆ,
ಏನು ಇಲ್ಲ ಅಂತ ಕೇಳಬೇಕು.
ಎಲ್ಲವೂ ಇದೆ, ಅದೇ ಇದರ
ಹೆಚ್ಚುಗಾರಿಕೆ ಅಥವ ಹಿರಿಮೆ.
ನೀವು ತೆಂಕಿನ ಯಕ್ಷಗಾನ,
ಬಡಗಿನ ತಾಳಮದ್ದಳೆ ಇವೆರಡರಲ್ಲೂ ದುಡಿದವರು, ಈ ಹಿರಿಮೆಯ ಕಲೆ
ಕರಾವಳಿಗೆ ಮಾತ್ರ ಸೀಮಿತವಾಗಿದ್ದದ್ದಾರು ಯಾಕೆ?
ಕೇರಳದ
ಕಥಕ್ಕಳಿಯನ್ನು ಗಮನಿಸಿದರೆ ಅದು ಬಹಳ ಇತ್ತೀಚಿನದ್ದು,
ಯಕ್ಷಗಾನ ಅದಕ್ಕಿಂತಲೂ ಹಿಂದಿನದ್ದು ಅಂತ ಹೇಳುತ್ತೇವೆ. ಅದಲ್ಲ
ಅಂತ ವಾದ ಮಾಡುವವರೂ ಇದ್ದಾರೆ.
ಆ ವಾದದ ಅಂಶವನ್ನು
ಬದಿಗೆ ಇಟ್ಟರೆ, ತಮಿಳುನಾಡಿನ ತಿರುಕುತ್ತು,
ಕೇರಳದ ಕಥಕ್ಕಳಿ ಮತ್ತು ತುಳುನಾಡಿನ
ಯಕ್ಷಗಾನ ಇವು ಮೂರು ಆಯಾ
ಪ್ರದೇಶದಲ್ಲಿ ಹುಟ್ಟಿ ಬೆಳದ ಕಲೆಗಳು.
ಈ ಮೂರಕ್ಕೂ ಒಂದು
ಪ್ರಾದೇಶಿಕ ವ್ಯಾಪ್ತಿ ಇದೆ. ಯಕ್ಷಗಾನಕ್ಕೆ ಸಂಬಂಧಿಸಿದಂತೆ
ಯಾರು ಇದರ ಮೂಲಪುರುಷ ಅಂತ
ಕೇಳಿದ್ರೆ ಹೇಳುವುದು ಕಷ್ಟ. ಪಾರ್ತಿಸುಬ್ಬನೇ ಮೂಲ
ಅಂತ ಹೇಳ್ಲಿಕ್ಕೆ ಆಗುವುದಿಲ್ಲ. ಪಾರ್ತಿಸುಬ್ಬ ಬಹಳ ದೊಡ್ಡ ಸಂಘಟಕ,
ಸೀಮಾ ಪುರುಷ. ಅವನ ಸಂಘಟನೆ
ಕುಂಬಳೆಯಿಂದ ಕುಂದಾಪುರದವರೆಗೆ ಇತ್ತು. ಆ ಕಾಲದಲ್ಲಿ
ಇದು ಸಣ್ಣ ವಿಚಾರವಲ್ಲ. ಆದರೆ
ಇದು ಸ್ಪಷ್ಟವಾಗಿ ಕರಾವಳಿಯ ವ್ಯಾಪ್ತಿ. ಅವನ
ನಂತರ ಕರಾವಳಿಯಲ್ಲೇ ಒಂದಷ್ಟು ಹೆಚ್ಚು ವ್ಯಾಪ್ತಿಯನ್ನು
ಪಡೆಯಿತು. ಪ್ರಾಯಶಃ ಪಾರ್ತಿಸುಬ್ಬನಂತಹ ಸಂಘಟಕರು
ಕರಾವಳಿಯನ್ನು ಹೊರತು ಪಡಿಸಿ ಅದನ್ನು
ವಿಸ್ತರಿಸಲಿಕ್ಕೆ ಅವತ್ತು ಪ್ರಯತ್ನಸುತ್ತಿದ್ದರೆ ಯಕ್ಷಗಾನ
ಸಮಗ್ರ ಕರ್ನಾಟಕದ ವ್ಯಾಪ್ತಿ ಪಡೆಯುತ್ತಿತ್ತೋ ಏನೋ? ಸ್ವಲ್ಪ ಮಟ್ಟಿಗೆ
ಆಗಿದ್ದರೂ ಅದು ಸಮಗ್ರ ಎಂದಾಗಲಿಲ್ಲ.
ಆದರೆ ಪಾರ್ತಿಸುಬ್ಬನ ಹೊರತಾಗಿ ಅದು ಹೇಗೆ
ವಿಸ್ತರಿಸಿತು? ಏನು
ಮಾಡಿತು? ಎನ್ನುವುದಕ್ಕೆ ನಮ್ಮಲ್ಲಿ ಲಿಖಿತ ದಾಖಲೆಗಳಿಲ್ಲ. ಸ್ವಲ್ಪ
ಕಲ್ಪನೆ, ಸ್ವಲ್ಪ ವಾಸ್ತವ ಇವುಗಳನ್ನು
ಬೆರೆಕೆ ಮಾಡಿದಾಗ ಒಂದು ಸಿದ್ಧಾಂತ
ರೂಪುಗೊಳ್ಳುತ್ತದೆ. ಯಕ್ಷಗಾನದ ಸಿದ್ಧಾಂತವೂ ಹೀಗೆ. ಕರಾವಳಿಯ ಜನರ
ಸಂಸ್ಕøತಿ, ಸಂಸ್ಕಾರ ಹೆಚ್ಚಾದ
ಕಾರಣವೋ ಏನೋ ಅದು ಇದೇ
ವ್ಯಾಪ್ತಿಗೆ ಸೀಮಿತಗೊಂಡಿರುವುದು.
ನೀವು
ಪಾರ್ತಿಸುಬ್ಬನ ಊರಿನಲ್ಲಿ ಹುಟ್ಟಿ ಬೆಳೆದವರು, ಆತ
ಯಕ್ಷಗಾನದ ಪ್ರಧಾನ ವ್ಯಕ್ತಿಯಾಗಿ ಕಾಣುತ್ತಾನೆ,
ಆ ನಂತರ ಈ
ಸ್ಥಾನವನ್ನು ತುಂಬಿದವರು ಯಾರು?
ಶ್ರೇಷ್ಟರಿದ್ದಿರಬಹುದು,
ಆದರೆ ಪಾರ್ತಿಸುಬ್ಬನ ಹಾಗೇ ಅಂತ ಯಾರನ್ನೂ
ಹೇಳುವ ದಾಖಲೆ ಇಲ್ಲ. ಇತ್ತೀಚಿನ
ಕಾಲಘಟ್ಟದಲ್ಲಿ ಅನೇಕ ಶ್ರೇಷ್ಟರನ್ನು ಗುರುತಿಸಬಹುದು.
ಒಳ್ಳೆಯ ಪ್ರಸಂಗಕರ್ತರನ್ನು ಕಾಣಲು ಸಾಧ್ಯವಿದೆ. ಆದರೆ
ಪಾರ್ತಿಸುಬ್ಬನ ಕಾಲದಲ್ಲಿ ರಾಮಾಯಣ ಪ್ರಸಂಗ ಅಪೂರ್ಣವಾಗಿದ್ದರೂ
ಆ ಕಾಲದ ಅವಶ್ಯಕತೆಯನ್ನು
ಅದು ಪೂರೈಸಿತ್ತು. ಆ ನಂತರ ಜೋಡಾಟ,
ಬಯಲಾಟ, ಹರಕೆಯಾಟ, ಮೇಳದಾಟಗಳಿಂದ ಕಲಾಭಿಮಾನಿಗಳಿಗೆ ಲಹರಿ ಬಂದಿರಬೇಕು. ಇದು
ಸುಮಾರು ನೂರು ವರ್ಷಗಳ ನಂತರದ
ಬೆಳವಣಿಗೆ. ಅಂದರೆ ಅವಶ್ಯಕತೆಯನ್ನು ಪೂರೈಸಲು
ಬಲಿಪ, ಅಗರಿ ಈ ಪರಂಪರೆಯ
ಭಾಗವತರು ಹೊಸಹೊಸ ಪ್ರಸಂಗಗಳನ್ನು ಬರೆದರು.
ಆ ಮೂಲಕ ಹೊಸ
ಬೆಳವಣಿಗೆಗೆ ಕಾರಣರಾದರು. ಪಾರ್ತಿಸುಬ್ಬನ ನಂತರ ಗುರುತಿಸಲ್ಪಡುವ ಪ್ರಥಮ
ಐತಿಹಾಸಿಕ ವ್ಯಕ್ತಿ ಇವನೇ ಅಂತ
ಹೇಳುವುದು ಕಷ್ಟ. ಹಾಗೆ ನೋಡಿದರೆ
ಯಕ್ಷಗಾನದಲ್ಲಿ ನೂರು ವರ್ಷಗಳ ನಂತರದ
ಕೊಡುಗೆಯೇ ದೊಡ್ಡದು.
ಈಗ ಇನ್ನೂರು ವರ್ಷಗಳ
ಹಿಂದೆ ಧರ್ಮಸ್ಥಳ ಮೇಳ ಮೈಸೂರಿಗೆ ಹೋದ
ಬಗ್ಗೆ ದಾಖಲೆ ಇದೆ ಅಂತಾರೆ,
ನೀವು ಧರ್ಮಸ್ಥಳ ಮೇಳದಲ್ಲಿ ಹಲವು ವರ್ಷ ಕೆಲಸ
ಮಾಡಿದವರು ಈ ಬಗ್ಗೆ ನಿಮ್ಮಲ್ಲಿ
ಏನಾದರೂ ಮಾಹಿತಿ ಇದೆಯೇ?
ಮೈಸೂರಿನಿಂದ
ಪತ್ರ ಬಂದಿತ್ತು ಮತ್ತು ಅದಕ್ಕೆ ಸಂಬಂಧಿಸಿದ
ದಾಖಲೆ ಇದೆ ಎನ್ನುವುದನ್ನು ಕೇಳಿದ್ದೇನೆ.
‘ವೇಷಧಾರಿಗಳ ಕೊರತೆ ಇದೆ, ಕಳುಹಿಸಿಕೊಡಿ’
ಅಂತ ಮಹಾರಾಜರಿಂದ ಬಂದ ಪತ್ರ ಅದು.
ಮೈಸೂರಿನಲ್ಲಿ ಈಗಲೂ ‘ಬಿಡಾರಂ’ ಎನ್ನುವ
ಮನೆಯೊಂದು ಇದೆ.(ಈಗ ಬಿಡಾರಂನಲ್ಲಿ
ದೇವಸ್ಥಾನ ಇದೆ) ಅದು ಹಿಂದೆ
ಕೃಷ್ಣಪ್ಪನÀವರ ಮುಳಿಹುಲ್ಲಿನ ದೊಡ್ಡಮನೆ.
ಅಲ್ಲಿ ಕಲಾವಿದರಿಗೆ ಉಳಿದುಕೊಳ್ಳುವ ವ್ಯವಸ್ಥೆ ಇತ್ತು. ಆಟದವರು ಬಿಡಾರ
ಹೂಡುತ್ತಿದ್ದ ಕಾರಣಕ್ಕಾಗಿ ಮುಂದೆ ಈ ಮನೆಗೆ
ಬಿಡಾರಂ ಎನ್ನುವ ಹೆಸರು ಬಂದಿದೆ
ಅಂತ ಹೇಳಿಕೆ ಇದೆ. ಈಗ
ಆ ತಲೆಮಾರಿನವರು ಯಾರೂ
ಇಲ್ಲಾಂತ ಕಾಣುತ್ತದೆ. ಮತ್ತೆ ಈಗ ಇಲ್ಲಿಂದ
ಹೋದವರೇ ಅಲ್ಲಿ ಯಕ್ಷಗಾನ ಮಾಡುತ್ತಾರೆ.
ಹಾಗಾಗಿ ಬೆಳವಣಿಗೆ ಆಗುತ್ತಿದೆ.
ಯಕ್ಷಗಾನದಲ್ಲಿ ತೆಂಕು ಮತ್ತು ಬಡಗು
ಅಂತ ಹೇಗೆ ವಿಭಾಗವಾಗಿರುವ ಸಾಧ್ಯತೆ
ಇದೆ? ಇವುಗಳು ತಮ್ಮ ಸ್ವರೂಪ
ಮತ್ತು ಪರಿಣಾಮದ ದೃಷ್ಟಿಯಿಂದ ಹೇಗೆ
ವ್ಯತ್ಯಾಸವಾಗಿದೆ?
ಹಿಂದೆ
ತೆಂಕು ಮತ್ತು ಬಡಗಿನ ಲಕ್ಷಣಗಳು
ಏಕತ್ರ ಇತ್ತು. ಒಂದೇ ಸ್ವರೂಪವಾಗಿತ್ತು.
ಕೇದಗೆ ಮುಂದಲೆ, ಚೌಕುಳಿ ಸೀರೆಯ
ಕಚ್ಚೆ ಹೀಗೆ ಅನೇಕ ಹೋಲಿಕೆಗಳು
ಎರಡರಲ್ಲೂ ಇತ್ತು. ವಿದ್ವಾಂಸರು ಮತ್ತು
ಪ್ರಯೋಗಶೀಲರು ಎರಡರಲ್ಲೂ ಕೈಯಾಡಿಸಿದ ಕಾರಣ, ಮುಂದೆ ಎರಡೂ
ಪ್ರತ್ಯೇಕವಾಗುತ್ತಾ ಹೋಯಿತು. ಇತ್ತೀಚಿನ ಕಾಲಘಟ್ಟದಲ್ಲಿ
ಇದು ಹೆಚ್ಚುತ್ತಾ ಇರುವುದನ್ನೂ ಕಾಣುತ್ತೇವೆ. ಈ ರೀತಿಯ ಬೆಳವಣಿಗೆಯಲ್ಲಿ
ಕೆಲವು ಮನೆತನದವರ ಕೊಡುಗೆಯೂ ಇದೆ. ಅದೇ ಬೇರೆ
ಇದೇ ಬೇರೆ ಎಂಬ ಸ್ಥಿತಿಯಿಂದ
ಎರಡೂ ಒಂದೇ ಎಂಬ ಸ್ಥಿತಿಯಾಯಿತೋ
ಇಲ್ಲಾ ಒಂದೇ ಎನ್ನುವ ಸ್ಥಿತಿಯಿಂದ
ಬೇರೆಬೇರೆ ಆಯಿತೋ ಎನ್ನುವುದನ್ನು ವಿಮರ್ಶೆ
ಮಾಡಬೇಕಾಗಿದೆ.
ಪರಿಣಾಮದ
ದೃಷ್ಟಿಯಿಂದ ಬಡಗಿನಲ್ಲಿ ಮಾತುಗಾರ ಕೇದಗೆ ಮುಂದಲೆ
ಕಟ್ಟಿ ಕುಣಿದರೆ ಸ್ವಾಗತ ಇತ್ತು.
ಮಾತುಗಾರರು ತೆಂಕಿನಲ್ಲಿ ಮಾತ್ರ ಎನ್ನುವ ಅಭಿಪ್ರಾಯವೂ
ಬಡಗಿನಲ್ಲಿತ್ತು. ಬಡಗಿನಲ್ಲಿ ಇವತ್ತಿಗೂ ಬಹಳ ಮಾತು ಅಂತ
ಇಲ್ಲ. ಕುಣಿತವೇ ಇಂದಿಗೂ ಪ್ರಧಾನ.
ಅಭಿನಯ, ಪುನರುಕ್ತಿ, ಅತ್ಯುಕ್ತಿ, ಶತಾವುಕ್ತಿ ಇವುಗಳು ಅಲ್ಲಿಗೆ ಹತ್ತಿರ.
ಇದು ಬಣ್ಣ ತುಂಬಿಸಲಿಕ್ಕೆ, ಜನರ
ಚಪ್ಪಾಳೆ ಹೆಚ್ಚಿಸಲಿಕ್ಕೂ ಅನುಕೂಲವಾಯಿತು. ಆದರೆ ಸಮಗ್ರ ಯಕ್ಷಗಾನದ
ದೃಷ್ಟಿಯಿಂದ ಸ್ವಲ್ಪ ಅಪಚಾರವೇ ಆಗಿದೆ.
ಅದೇ ತೆಂಕಿನಲ್ಲಿ ದೊಡ್ಡದೊಡ್ಡ ಗಟ್ಟಿ ವ್ಯಕ್ತಿಗಳು ಬಂದಿರುವುದರಿಂದ
ಮಾತಿಗೆ ಸ್ವಾಗತ ಸಿಕ್ಕಿತು. ಆದರೆ
ಬಡಗಿನಲ್ಲಿ ಹಾಗೆ ಬಂದದ್ದು ಕಡಿಮೆ.
ಪದ್ಯಕ್ಕೆ ಕಾಲಗಂಟೆ ಅರ್ಥ ಹೇಳುವುದೇ
ಕಷ್ಟ. ಆದರೆ ಸಾಮಗರು ತೆಂಕು
ಬಡಗು ಎರಡರಲ್ಲೂ ಕೆಲಸ ಮಾಡಿ ಸೈ
ಎನಿಸಿಕೊಂಡರು. ಮತ್ತೆ ಬಡಗಿನ ಲಾಲಿತ್ಯ,
ಶೃಂಗಾರ ಒಂದು ರೀತಿಯಲ್ಲಿ ಮಾತಿಗೆ
ತೊಡಕಾಗಿದೆ ಎಂದೂ ಹೇಳಬಹುದು. ತೆಂಕಿಗಿಂತ
ಬಡಗಿನಲ್ಲಿ ಚಾಲು ಕುಣಿತ ಬಹಳ
ಹೆಚ್ಚು. ಪದ್ಯದಷ್ಟೇ ಮಾತು ಇರಬೇಕು ಎನ್ನುವ
ವಾದ ಬಡಗಿನದು. ಒಂದು ರೀತಿಯಲ್ಲಿ ಈ
ಬೆಳವಣಿಗೆಯೂ ಸರಿ. ಆದರೆ ಎಷ್ಟು
ಸಾಧ್ಯವೋ ಅಷ್ಟು ಕುಣಿ, ಎಷ್ಟು
ಕಡಿಮೆ ಮಾತನಾಡಲು ಸಾಧ್ಯವೋ ಅಷ್ಟು ಕಡಿಮೆ
ಮಾತನಾಡು ಎನ್ನುವ ಸಿದ್ಧಾಂತ ಮಾತ್ರ
ಸರಿಯಲ್ಲ. ಇದರಿಂದ ಭಾಗವತ ಮತ್ತು
ಚಾಲು ಕುಣಿತದವರು ಮೆರೆದರು, ಯಕ್ಷಗಾನ ಮೆರೆಯುವುದು ಕಡಿಮೆಯಾಯಿತು.
ಈ ವಿಚಾರದಲ್ಲಿ ಶಿವರಾಮ
ಕಾರಂತರ ಪಾತ್ರ ಏನು?
ಕಾರಂತರು
ಮಹಾವಿದ್ವಾಂಸ, ಸಾಹಿತಿ, ಅಷ್ಟೇ ಹಠಮಾರಿ.
ಆದರೆ ಅವರಿಗೆ ಕನ್ನಡಕ ಮಾತ್ರ
ಒಂದೇ ಇದ್ದದ್ದು. ಅದು ಬಡಗಿನ ಕಡೆಗೆ
ಮಾತ್ರ. ತೆಂಕಿಗೆ ಅವರು ಏನು
ಮಾಡಲೂ ಇಲ್ಲ, ಆಸಕ್ತಿಯೂ ಇರಲಿಲ್ಲ.
ಅವರಿಂದ ಬಡಗಿಗೆ ಮಾತ್ರ ತುಂಬಾ
ಲಾಭ ಆಗಿದೆ. ವಿದೇಶ ಪ್ರಯಾಣವೂ
ಆಗಿದೆ. ಯಕ್ಷಗಾನ ಎನ್ನುವುದು ಹೆಚ್ಚು
ಪ್ರಚಾರವನ್ನೂ ಪಡೆದಿದೆ. ಹಾಗೆ ನೋಡಿದ್ರೆ ತೆಂಕಿಗೆ
ಕಾರಂತರಂತಹಾ ನೇತೃತ್ವವೇ ಸಿಗಲಿಲ್ಲ. ನಮಗೆ ಇದು ಒಂದು
ರೀತಿಯ ಹಿನ್ನಡೆಯೂ ಹೌದು. ಧರ್ಮಸ್ಥಳದ ಕೊಡುಗೆಯನ್ನು
ಈ ರೀತಿಯಲ್ಲಿ ಅರ್ಥೈಸಿಕೊಳ್ಳುವುದಕ್ಕೆ
ಸಾಧ್ಯವಿಲ್ಲ. ಒಳ್ಳೆಯ ವ್ಯವಸ್ಥೆ, ಸಂಭಾವನೆ
ಇತ್ಯಾದಿಗಳನ್ನೆಲ್ಲಾ ಕೊಟ್ಟಿದ್ದಾರೆ. ಆದರೆ ಯಕ್ಷಗಾನದ ಸಮಗ್ರತೆಯನ್ನು
ಗ್ರಹಿಸಿಕೊಂಡು ಅದಕ್ಕೆ ನಿರ್ದೇಶಕನ ಸ್ಥಾನ
ಕೊಟ್ಟವರಲ್ಲಿ ಕಾರಂತರೇ ಪ್ರಮುಖರು.
ಬಹುತೇಕ ಕಲಾ ಪ್ರಕಾರಗಳಿಗೆ
ಒಬ್ಬ ನಿರ್ದೇಶಕ ಇರುತ್ತಾನೆ. ಯಕ್ಷಗಾನದಲ್ಲಿ ಭಾಗವತನೇ ನಿರ್ದೇಶಕ ಎಂದು
ಗುರುತಿಸಲ್ಪಟ್ಟಿದ್ದಾನೆ. ನಿಮ್ಮ ತಿರುಗಾಟದ ಸಂದರ್ಭದಲ್ಲಿ
ಇದು ಎಷ್ಟರಮಟ್ಟಿಗೆ ಕಾರ್ಯಗತಗೊಳ್ಳುತ್ತಿತ್ತು?
ಸಲಹೆ
ಕೊಡುವ ಕ್ರಮ ಹಿಂದಿನಿಂದಲೇ ಇತ್ತು.
ಇದನ್ನು ಅಗರಿ ಭಾಗವತರು ಹೆಚ್ಚಾಗಿ
ಮಾಡುತ್ತಿದ್ದರು. ಅವರು ಆಟದಲ್ಲಿ ಪದ್ಯ
ಹೇಳುವುದಕ್ಕೆ ಮೊದಲೇ ಚೌಕಿಗೆ ಬಂದು
ಯಾರ್ಯಾರಿಗೆ ಯಾವಯಾವ ಪಾತ್ರ, ಎಷ್ಟು
ಪದ್ಯ, ಪ್ರಸಂಗದ ನಡೆ ಹೇಗೆ
ಇತ್ಯಾದಿಗಳ ಬಗ್ಗೆ ಹೇಳುತ್ತಿದ್ದರು. ಕೆಲವೊಮ್ಮೆ
‘ನೋಡು, ಮೂರು ಪದ್ಯ ಇದೆ,
ಸರಿ ಹೋದರೆ ನಾಲ್ಕು ಕೊಟ್ಟೇನು,
ಇಲ್ಲದಿದ್ದರೆ ಎರಡಕ್ಕೆ ಇಳಿಸಿಯೇನು’ ಎಂದೆಲ್ಲಾ
ಸೂಚನೆ ನೀಡುತ್ತಿದ್ದರು. ಹಾಗೇ ಮಾಡುತ್ತಿದ್ದರು ಕೂಡ.
ಅವರಿಗೆ ಎಲ್ಲಾ ಪದ್ಯಗಳು ಬಾಯಿಪಾಠ
ಬರುತ್ತಿತ್ತು. ಇವರಲ್ಲದೆ ಮಂಡೆಚ್ಚರಲ್ಲಿ ಈ ನಿರ್ದೇಶಕ ಪ್ರಜ್ಞೆ
ಬಹಳ ಜಾಗೃತವಾಗಿತು.್ತ ಬಹಳ ಅಂದ್ರೆ
ಬಹಳ. ಕೆಲವು ಪ್ರಸಂಗಗಳಲ್ಲಂತೂ ಒಳ್ಳೆಯ
ಹಿಡಿತ ಇತ್ತು. ನನ್ನ ಭರತನನ್ನು
ಎತ್ತಿಹಾಕಿದವರೇ ಅವರು. ಬೈತಿದ್ರು, ಆದರೆ
ಅದು ಕಲೆಯ ಬಗೆಗಿನ ತಿದ್ದುವಿಕೆಯ
ದೃಷ್ಟಿಯಿಂದಲೇ ಆಗಿತ್ತು. ಈ ದೃಷ್ಟಿಯಲ್ಲಿ ದೊಡ್ಡ
ಬಲಿಪರಿಗೂ ಒಳ್ಳೆಯ ಸ್ಥಾನ ಇದೆ.
ಹಾಗಾಗಿ ಯಕ್ಷಗಾನದ ಭಾಗವತನೆಂದರೆ ದೊಡ್ಡ
ಜ್ಞಾನ ಭಂಡಾರ ಇದ್ದ ಹಾಗೆ.
ಅವರು ಕಲಾವಿದರನ್ನು ವ್ಯವಸ್ಥಿತವಾಗಿ ದುಡಿಸಿಕೊಂಡು ಪ್ರಸಂಗದ ಮುನ್ನಡೆಗೂ ಕಾರಣರಾಗುತ್ತಿದ್ದರು.
ಇತ್ತೀಚಿನ
ದಿನಗಳಲ್ಲಿ ಭಾಗವತನನ್ನೇ ನಿರ್ದೇಶಿಸುವ ಸ್ಥಿತಿ ನಿರ್ಮಾಣ ಆಗಿದೆ.
ಹಳೆಯ ವೇಷಧಾರಿಗಳಿಗೆ ನಿರ್ದೇಶನ ನೀಡುವಷ್ಟು ಪಕ್ವತೆಯನ್ನು ಭಾಗವತ ಬೆಳೆಸಿಕೊಳ್ಳದಿದ್ದರೆ ಹಾಗಾಗುತ್ತದೆ.
ಈಗಿನ ಹೊಸ ಹುಡುಗರು ಭಾಗವತರಾಗಿ
ಕುಳಿತುಕೊಂಡರೆ ಅವರು ಕಂಗಾಲಾಗುವುದೇ ಜಾಸ್ತಿ.
ಆಗ ವೇಷಧಾರಿಯೇ ಭಾಗವತನಿಗೆ ನಿರ್ದೇಶನ ಮಾಡುತ್ತಾನೆ. ಯಾವ ಪದ್ಯ? ಯಾವಾಗ?
ಹೇಗೆ? ಹಾಡಬೇಕು ಎನ್ನುವುದನ್ನು ಇವನೇ
ಹೇಳುತ್ತಾನೆ. ಇದರಿಂದ ಪ್ರೇಕ್ಷಕನಿಗೆ ಒಳ್ಳೆಯದಾಗಬಹುದು.
ಆದರೆ ಕಲಾಪ್ರಕಾರದ ದೃಷ್ಟಿಯಿಂದ ಒಳ್ಳೆಯದಲ್ಲ.
ಓದಿನಿಂದ ಸಮಗ್ರತೆ
ಕಂಡ
ಕುಂಬ್ಳೆ.
ಹೀಗೆ
ಹೇಳುವುದನ್ನು ಸ್ವತಾಃ ಇವರೇ ಒಪ್ಪಿಕೊಳ್ಳದಿದ್ದರೂ
ಹಾಗೆ ಆದದ್ದಂತೂ ಸತ್ಯ. ಕೇವಲ ವಾಕ್
ಸಾಹಿತ್ಯ ಮಾತ್ರ ಯಕ್ಷಗಾನವಲ್ಲ ಎಂದು
ನಿರಂತರ ಹೇಳುತ್ತಾ ಬಂದಿರುವ ಕುಂಬಳೆ ಸುಂದರ
ರಾಯರು ಇವತ್ತು ಏನು ಆಗಿದ್ದಾರೋ
ಅದಕ್ಕೆ ಮಾತ್ರ ತನ್ನ ವಾಕ್ಚಾತುರ್ಯವೇ
ಕಾರಣ. ಈ ವಾಕ್ಚಾತುರ್ತಕ್ಕೆ ತನ್ನ
ಅನಿಯಮಿತ ಓದೇ ಕಾರಣ. ಇವರ
ಓದಿನ ಸ್ವರೂಪವನ್ನು ಇವರ ಮಾತಿನಲ್ಲಿ ಹೇಳುವುದಾದರೆ,
ಹಾಗೆ ನೋಡಿದರೆ ನಾನು ಯಕ್ಷಗಾನಕ್ಕೆ
ಹೆಚ್ಚೇನೂ ಮಾಡಿಲ್ಲ, ನನ್ನಲ್ಲಿದ್ದದ್ದು ಓದು ಮಾತ್ರ. ಅದು
ಯಕ್ಷಗಾನಕ್ಕೇ ಅಂತ ನಡೆಸಿದ ಓದೂ
ಅಲ್ಲ. ಆದರೆ ಅದರಿಂದ ನನ್ನ
ಯಕ್ಷಜೀವನಕ್ಕೆ ತುಂಬಾ ಪ್ರಯೋಜನವಾದದ್ದಂತೂ ಹೌದು.
ಸ್ವಲ್ಪಮಟ್ಟಿನ ಸಿದ್ಧತೆ ಅಂತ ಏನಾದರೂ
ಮಾಡಿದ್ದರೆ ಅದು ಕುಟ್ಯಪ್ಪಣ್ಣನ ಜೊತೆಗೆ
ಕೂಡ್ಲು ಮೇಳದಲ್ಲಿ, ಅದೂ ಹೊರಗಿನ ಸಿದ್ಧತೆ.
ಆಗ ನವರಾತ್ರಿ ಆಟಗಳು ಸುರತ್ಕಲ್ಲಿನಲ್ಲಿ ನಡೆಯುತ್ತಿದ್ದವು.
ಅಲ್ಲಿಗೆ ಅಗರಿ ಭಾಗವತರು ಖಾಯಂ
ಆಗಿ ಬರುತ್ತಿದ್ದರು. ಅಲ್ಲದೇ ಬಹುತೇಕ ಕಲಾವಿದರೂ
ಕೂಡ. ನಾನು ಅಲ್ಲಿಗೆ ಹೋಗುತ್ತಿದ್ದೆ.
ಒಮ್ಮೆ ಅಲ್ಲಿಗೆ ಹೋಗಿದ್ದಾಗ ವಿಶ್ವಾಮಿತ್ರ
ಚರಿತ್ರೆಯಲ್ಲಿ ಸೋಮನಾಥ ಎಂಬ ಪುರೋಹಿತನ
ಪಾತ್ರ ಇದೆ ಅದನ್ನು ಮಾಡು
ಅಂತ ಹೇಳಿದ್ರು, ಮಾಡಿದೆ, ಏನು ಹೇಳಿದೆನೋ
ಗೊತ್ತಿಲ್ಲ, ಆದರೆ ಅದು ಬಹಳ
ಪರಿಣಾಮ ಅಂತೂ ಬೀರಿತು. ಮರುದಿನ
ನೀನು ಮೇಳಕ್ಕೆ ಬಾ ನಿನಗೆ
ಒಳ್ಳೆಯ ಭವಿಷ್ಯವಿದೆ ಅಂತ ಹೇಳಿದ್ರು. ನಾನು
ಮೇಳಕ್ಕೆ ಸೇರಿದೆ, ಜೊತೆಗೆ ಭವಿಷ್ಯವನ್ನು
ಕಾಯುತ್ತಾ ಕೂತೆ, ನಾಲ್ಕನೇ ವೇಷ
ಕೊಡುತ್ತಿದ್ದರು. ಕಡೆಗೆ ಸಾಮಗರನ್ನು ಕರೆಸಿದ್ರು,
ಆಗ ನಾನು ಸಾಮಗರ ಎದುರು
ಅಂಗದನಂತಹಾ ಪಾತ್ರ ಮಾಡಿದೆ, ಇವೆಲ್ಲವೂ
ನನ್ನ ತಯಾರಿಗೆ ಪೂರಕವಾಯಿತು.
ನನಗೆ
ಪುರಾಣ ಜ್ಞಾನ ಯಕ್ಷಗಾನದಿಂದಲೇ ಆದದ್ದು,
ಅದಕ್ಕೆ ಬೇಕಾದ ಓದನ್ನೂ ಇಟ್ಟುಕೊಂಡಿದ್ದೆ.
ಕುಂಬಳೆ ಲೈಬ್ರರಿಯ ಬಹುತೇಕ ಎಲ್ಲಾ ಪುಸ್ತಕಗಳನ್ನು
ಆ ಕಾಲದಲ್ಲಿ ಓದಿ
ಮುಗಿಸಿದ್ದೆ. ಅದು ದೊಡ್ಡ ಮತ್ತು
ಬಹಳ ಪುಸ್ತಕವಿದ್ದ ಲೈಬ್ರರಿ. ಹಾಗಾಗಿ ಆ ಕಾಲದಲ್ಲಿ
ಏನು ಓದಿದ್ದಿ ಅಂತ ಕೇಳುವ
ಬದಲು ಏನು ಓದಿಲ್ಲ ಅಂತ
ಕೇಳಿದ್ರೆ ಹೇಳಬಲ್ಲೆ, ಅಷ್ಟರಮಟ್ಟಿಗೆ ಸಾಗಿತ್ತು ನನ್ನ ಓದು. ಮನೆಯಿಂದ
ಪರಿತ್ಯಜಿಸಲ್ಪಟ್ಟದ್ದೂ ಇದಕ್ಕೆ ಕಾರಣವಾಗಿರಬಹುದು. ಅದೇ
ರೀತಿ ಕುಣಿತವನ್ನೂ ಕಲಿತಿದ್ದೆ. ಮಾಧವ ಶೆಟ್ರು, ಕೋಳ್ಯೂರು
ರಾಮಚಂದ್ರ ರಾಯರು ನನಗೆ ನೃತ್ಯ
ಕಲಿಸಲು ಪ್ರಯತ್ನಿಸಿದ್ದರು. ಆದರೆ ಪೂರ್ತಿ ನನಗದು
ಸಿದ್ಧಿಸಲಿಲ್ಲ. ನನಗೆ ಲಯ ಜ್ಞಾನದ
ಕೊರತೆ ಇದ್ದದ್ದೇ ಅದಕ್ಕೆ ಕಾರಣ. ಈ
ಲಯ ಜ್ಞಾನ ಎನ್ನುವುದು ತಂದೆತಾಯಿ
ಇದ್ದ ಹಾಗೆ. ಅವರಿಬ್ಬರೂ ಇಲ್ಲದಿದ್ದರೆ
ಪರಿಪೂರ್ಣತೆ ಕಷ್ಟ.
ಮಳೆಗಾಲದಲ್ಲಿ
ನಾನು ಮನೆಯಲ್ಲಿ ಇರುತ್ತಿರಲಿಲ್ಲ. ಕೆಲವು ಪ್ರಮುಖರ ಮನೆಗಳಿಗೆ
ಹೋಗುತ್ತಿದ್ದೆ, ಅಲ್ಲಿ ತಾಳಮದ್ದಳೆ, ಪುರಾಣ
ವಾಚನ ಇತ್ಯಾದಿಗಳಲ್ಲಿ ಭಾಗವಹಿಸುತ್ತಿದ್ದೆ. ಅದೇ ರೀತಿ ಮೇಳದಲ್ಲಿದ್ದಾಗಲೂ
ಕಲಿಕೆ, ಓದಿನ ಕಡೆಗೆ ಹೆಚ್ಚಿನ
ಆಸಕ್ತಿಯನ್ನು ಇಟ್ಟುಕೊಂಡಿದ್ದೆ. ಮೇಳದಲ್ಲಿ ನನ್ನನ್ನು ಬಹಳ ಪ್ರೋತ್ಸಾಹಿಸಿ ಮಾತು
ಕಲಿಸಿಕೊಟ್ಟವರು ಕಡಿಮೆ. ನಾನು ನನ್ನಷ್ಟಕ್ಕೆ
ನನ್ನ ರೀತಿಯಲ್ಲೇ ಬೆಳೆದೆ. ಆರಂಭದಲ್ಲಿ ಬಾಯಿಪಾಠ
ಮಾಡಿದ್ರೆ ಉತ್ತಮ ಅಂತ ಅನಿಸಿದ್ದಿದೆ.
ಆದರೆ ಬಾಯಿಪಾಠ ಮಾಡುವ ಆಸಕ್ತಿ
ನನ್ನಲ್ಲಿರಲಿಲ್ಲ. ಹಾಗಾಗಿ ನನಗೆ ಏನು
ಹೊಳೆಯುತ್ತಿತ್ತೋ ಅದನ್ನು ಹೇಳುತ್ತಾ ಬಂದೆ.
ಅದಕ್ಕೆ ಬೇಕಾದ ತಯಾರಿಯನ್ನು ಓದಿನಲ್ಲಿ
ಕಂಡುಕೊಂಡೆ, ಎಂದು ತನ್ನ ಓದನ್ನು
ನೆನಪಿಸಿಕೊಳ್ಳುತ್ತಾರೆ ಕುಂಬ್ಳೆ. ತನ್ನ ವಯೋಸಹಜ ಸಮಸ್ಯೆಗಳ
ನಡುವೆಯೂ ಕುಂಬ್ಳೆಯವರಿಗೊಂದು ಪುಸ್ತಕವೋ ಪತ್ರಿಕೆಯೋ ಸಿಕ್ಕಿದರೆ ಹೊತ್ತುಗೊತ್ತು ಇಲ್ಲದೇ ಎಲ್ಲವನ್ನೂ ಮರೆತು
ಓದತೊಡಗುತ್ತಾರೆ. ಕೆಲವು ಬಾರಿ ಎದ್ದು
ನಡೆಯುದಕ್ಕೆ ತನ್ನ ದೇಹ ಒಪ್ಪದಿದ್ದರೂ
ಕಾರ್ಯಕ್ರಮಗಳಿಗೆ ಅದರಲ್ಲೂ ತಾಳಮದ್ದಳೆಗಳಿಗೆ ಹೋಗುವ
ಹುಮ್ಮಸ್ಸನ್ನು ತೋರಿಸುತ್ತಾರೆ. ಓದಿನ ಗಳಿಕೆ ಮತ್ತು
ಮಾತಿನ ಅಭಿವ್ಯಕ್ತಿ
ಇದು ಕುಂಬ್ಳೆಯವರ ಸಾರ್ವಜನಿಕ ಬದುಕಿನ ಮಾಧ್ಯಮ. ಈ
ಎರಡು ಮಾಧ್ಯಮ ಇಂದಿಗೂ ಇವರನ್ನು
ಚಿರ ಯೌವನದಲ್ಲಿರಿಸಿದೆ.
ಕುಂಬ್ಳೆಯ ರಾಜಕೀಯ
ಬಹುತೇಕ
ಕಲಾವಿದರು ಇಂದಿಗೂ ತಮ್ಮ ಪಾತ್ರಗಳಲ್ಲಿ
ವರ್ತಮಾನದ ರಾಜಕೀಯವನ್ನು ತರುವುದು ಸಾಮಾನ್ಯ. ಕೆಲವರಿಗೆ
ಅದು ರಂಜನೆ, ಇನ್ನು ಕೆಲವರಿಗೆ
ಅದೊಂದು ಚಟ. ಈ ರೀತಿಯ
ರಂಜನೆ ಮತ್ತು ಚಟವಾಗಿಸಿಕೊಂಡವರು ಅದರಿಂದ
ಗಳಿಸಿದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು. ಯಾಕೆಂದರೆ ಕಲೆಗೆ
ಬಹಿರಂಗ ರಾಜಕೀಯ ಅಪವಿತ್ರ. ಆದರೆ
ಕುಂಬ್ಳೆಯ ರಾಜಕೀಯ ಹಾಗಲ್ಲ, ಇವರು
ಕಳೆದುಕೊಂಡದ್ದು ಏನೂ ಇಲ್ಲ. ಬದಲಾಗಿ
ಪಡೆದುಕೊಂಡದ್ದೇ ಬಹಳ. ಇದು ಒಬ್ಬ
ರಾಜಕಾರಣಿಗೆ ಇರಬೇಕಾದ ತಂತ್ರ ಕೂಡ. ಅಂದರೆ
ಕುಂಬ್ಳೆಯವರಿಗೆ ರಾಜಕೀಯ ಎನ್ನುವುದು ರಂಜನೆಯ
ಮತ್ತು ಚಟವನ್ನು ತೀರಿಸುವ ಮಾಧ್ಯಮವಾಗಿರಲಿಲ್ಲ,
ಬದಲಾಗಿ ಅದೊಂದು ಪ್ರವೃತ್ತಿ. ಆದ್ದರಿಂದ
ಇವರು ಯಕ್ಷಗಾನ ವೃತ್ತಿಯ ಮೂಲಕ
ಕಲಾವಿದ, ರಾಜಕೀಯ ಪ್ರವೃತ್ತಿಯ ಮೂಲಕ
ರಾಜಕಾರಣಿ. ಯಕ್ಷಗಾನದ ಪ್ರಾಮಾಣಿಕ ತೊಡಗಿಕೊಳ್ಳುವಿಕೆಯ ಒಂದಷ್ಟು ನಡೆಯನ್ನು ರಾಜಕೀಯದಲ್ಲೂ
ಬಳಸಿಕೊಂಡಿದ್ದರು. ಹಾಗಾಗಿ ಕುಂಬ್ಳೆಯವರ ರಾಜಕೀಯ
ಒಂದು ರಾತ್ರಿಯ ರಂಗಸ್ಥಳಕ್ಕೆ ಸೀಮಿತವಾಗಲಿಲ್ಲ.
ಅದು ಹಗಲಿನ ಕಾರ್ಯಾಚರಣೆಗಳಿಗೂ ವಿಸ್ತರಿಸಿತ್ತು.
“ನಾನು
ಮೇಳದಲ್ಲಿದ್ದಾಗ ಮಧ್ಯಾಹ್ನದ ಊಟ ನಮ್ಮ ಕ್ಯಾಂಪಿನಲ್ಲಿ
ಮಾಡಿದ್ದೇ ಇರಲಿಕ್ಕಿಲ್ಲ. ಮಧ್ಯಾಹ್ನ ಯಾರಾದರೂ ಪರಿಚಯದವರ ಅಥವಾ
ಪಕ್ಷದ ಜೊತೆಗಾರರಲ್ಲಿ ಊಟ ಮಾಡುತ್ತಿದ್ದೆ. ಹಾಗಾಗಿ
ಕಲಾವಿದರ ದೊಡ್ಡ ಸ್ನೇಹಕ್ಕಿಂತಲೂ ಸಾರ್ವಜನಿಕರ
ಆತ್ಮೀಯತೆಯೇ ನನಗೆ ಹೆಚ್ಚು ಲಭಿಸಿದ್ದು.
ಬೇರೆಬೇರೆ ಮನೆಗಳಿಗೆ ಭೇಟಿ ನೀಡುತ್ತಿದ್ದೆ, ಅವರೊಂದಿಗೆ
ಇರುತ್ತಿದ್ದೆ. ಇದು ನನ್ನ ಬೆಳವಣಿಗೆಯಲ್ಲಿ
ಬಹಳ ಮುಖ್ಯ ಪಾತ್ರ ವಹಿಸಿತು.
ಚುನಾವಣಾ ಸಂದರ್ಭದಲ್ಲಿ ನನ್ನನ್ನು ಭಾಷಣಕ್ಕೆ ಕರೆಯುತ್ತಿದ್ದರು. ಬೆಳಿಗ್ಗೆ ಬಣ್ಣ ಒರಸುವಾಗ ಕಾರು
ತಯಾರಾಗಿರುತ್ತಿತ್ತು. ಎಲ್ಲಿಯೋ ಒಂದು ಕಡೆಯ
ಮನೆಯಲ್ಲಿ ಸ್ನಾನಕ್ಕೂ ಊಟಕ್ಕೂ ವ್ಯವಸ್ಥೆಯಾಗಿರುತ್ತಿತ್ತು. ಸಾಯಂಕಾಲ ಸಾರ್ವಜನಿಕ
ಸಭೆ. ಆ ಸಭೆ ಮುಗಿಸಿ
ಮತ್ತೆ ಚೌಕಿಗೆ, ಹೀಗೆ ಸಾಗಿತ್ತು
ನನ್ನ ಪಕ್ಷ ರಾಜಕಾರಣ. ನಾನು
ಕೇವಲ ರಾಜಕಾರಣಿ ಮಾತ್ರವಾಗಿರದೆ ಯಕ್ಷಗಾನದ ಕಲಾವಿದನೂ ಆಗಿರುವುದರಿಂದ ನಾನು ಇಂದಿಗೂ ಎಲ್ಲಾ
ಪಕ್ಷದವರ ಪ್ರೀತಿ ವಿಶ್ವಾಸಕ್ಕೆ ಪಾತ್ರನಾಗಿದ್ದೇನೆ.
ಇದು ಉಳಿದ ರಾಜಕಾರಣಿಗಳಿಗಿಂತ ನಾನು
ಪಡೆದ ವಿಶೇಷ ಅವಕಾಶ.” ಅಂತ
ಹೇಳುತ್ತಾರೆ ಜನನಾಯಕರೂ ಆಗಿದ್ದ ಕುಂಬ್ಳೆ ಸುಂದರ
ರಾಯರು. ಯಕ್ಷಗಾನದಲ್ಲಿ ಪ್ರಾಸದಿಂದ ಹೆಸರುವಾಸಿಯಾಗಿದ್ದ ಕುಂಬ್ಳೆ ಮೇಳ ಬಿಟ್ಟು
ಎಂ.ಎಲ್.ಎ ಚುನಾವಣೆಗೆ
ಸ್ಪರ್ಧಿಸಬೇಕಾದ ಸಂದರ್ಭದಲ್ಲಿ ಮೇಳದ ಯಜಮಾನರಿಗೆ “ಗೆದ್ದರೆ ಎಂಮ್ಮೆಲ್ಲೆ, ಸೋತರೆ
ನಿಮ್ಮಲ್ಲೆ”
ಎಂದು ಹೇಳಿ ಬಂದಿದ್ದರು ಎನ್ನುವ
ಮಾತು ಇವತ್ತಿಗೂ ಕೆಲವರ ಬಾಯಿಯಲ್ಲಿದೆ. ಇವರ
ದೃಷ್ಟಿಯಲ್ಲಿ ಶಾಸಕನ ಸ್ಥಾನಮಾನ ಮತ್ತು
ಕಲಾವಿದನ ಸ್ಥಾನ ಇವೆರಡೂ ಒಂದೆ. ಯಾವುದನ್ನೂ
ವಿಪರೀತವಾಗಿ ಗಂಭೀರ ಮಾಡಿಕೊಳ್ಳದ ಅಷ್ಟೇ
ಲಘುವಾಗಿಯೂ ಪರಿಗಣಿಸದ ವ್ಯಕ್ತಿತ್ವ ಕುಂಬ್ಳೆಯವರದು. ಪ್ರಾಯಶಃ ಇದೇ ಇವರ
ಯಶಸ್ಸಿನ ಮೆಟ್ಟಿಲಿಗೆ ಕೈಮರವಾಗಿ ಆಸರೆ ನೀಡಿದ್ದಾಗಿರಬೇಕು.
ಕಲೆ ಮತ್ತು
ಕಲಾವಿದ,
ಸೃಷ್ಟಿ-ದೃಷ್ಟಿ
ಹಿಂದಿನ ಕಲಾವಿದರಲ್ಲಿ ಕುಣಿತ
ಮತ್ತು ಮಾತನ್ನು ಸಮದೂಗಿಸಿಕೊಂಡು ಹೋಗುತ್ತಿದ್ದವರ
ಉದಾಹರಣೆ ನೆನಪಿದೆಯೇ?
ಬೆರಳೆಣಿಕೆ,
ಆ ಕಾಲದಲ್ಲಿ ನಾಲ್ಕು
ಗೆರೆ ಪದ್ಯಕ್ಕೆ ಮೂರು ಗೆರೆ ಅರ್ಥ
ಹೇಳುವವರೇ ಇದ್ದದ್ದು. ದೊಡ್ಡ ಮಾತುಗಾರರು ಅಂತ
ಬಹಳ ಜನ ಏನೂ ಇರಲಿಲ್ಲ.
ಒಂದೆರಡು ಹೆಸರುಗಳಷ್ಟೆ. ಬಡಗಿನಲ್ಲಿ ತೆಕ್ಕಟ್ಟೆ ಆನಂದ ಮಾಸ್ತರ್ರವರ
ಅಜ್ಜ ತೆಕ್ಕಟ್ಟೆ ಬಾಬಣ್ಣ ಶ್ಯಾನ್ಬಾಗ್
ಅಂತ ಇದ್ರು, ಅವರು ಒಳ್ಳೆಯ
ಮಾತುಗಾರ ಮತ್ತು ಒಳ್ಳೆಯ ಕುಣಿತಗಾರ
ಎರಡು ಆಗಿದ್ದರಂತೆ. ಅದೇ ರೀತಿ ತೆಂಕಿನಲ್ಲಿ
ಕಾಸರಗೋಡು ಸುಬ್ಬಯ್ಯ ಶೆಟ್ಟಿ ಅಂತ ಒಬ್ಬರಿದ್ದರು,
ಬಣ್ಣಗಾರಿಕೆಯಲ್ಲೂ ಇವರು ಪ್ರಸಿದ್ಧರು. ವಾಲಿಯಂತಹಾ
ಪಾತ್ರವನ್ನು ಮಾಡಿದಾಗ ಒಳ್ಳೆಯ ಮಾತು,
ಕುಣಿತ ಮತ್ತು ಬಣ್ಣಗಾರಿಕೆ ಮಾಡುತ್ತಿದ್ದರು.
ಆ ನಂತರ ಹರಿದಾಸರ
ಪ್ರವೇಶ ಆಗುವ ವರೆಗೂ ಯಕ್ಷಗಾನದಲ್ಲಿ
ತಕ್ಕಮಟ್ಟಿಗೆ ಪದ್ಯದ ಅರ್ಥ, ಹೆಚ್ಚೆಂದರೆ
‘ನಿಲ್ಲು ಯುದ್ಧಕ್ಕೆ’
ಅಂತ ಹೇಳುವುದಕ್ಕೇ ಸೀಮಿತವಾಗಿತ್ತು. ಹರಿದಾಸ ಪರಂಪರೆ ಯಕ್ಷಗಾನದೊಂದಿಗೆ
ಸೇರಿದ ನಂತರ ಮಾತಿಗೆ ಪ್ರಾಧಾನ್ಯತೆ
ಬಂತು ಮತ್ತು ಒಂದಷ್ಟು ಕುಣಿತಕ್ಕೆ
ಲೋಪವೂ ಆಯಿತು. ಅವರು ಮಾತನ್ನು
ಮೆರೆಸಿದರು ಮತ್ತು ಮಾತಿನಿಂದ ಮೆರೆದರು.
ಆದರೆ ಯಕ್ಷಗಾನದ ಮೂಲ ಭಾಗ ಏನಿದೆಯೋ
ಕುಣಿತ ಅದು ಅವಗಣಿಸಲ್ಪಟ್ಟಿತು ಎನ್ನುವುದು
ಸತ್ಯ. ಆದರೆ ಜನ ಕೂಡ
ಮಾತನ್ನೇ ಬಯಸಿದರು ಎನ್ನುವುದನ್ನೂ ಒಪ್ಪಿಕೊಳ್ಳಬೇಕು.
ಈ ಹಿನ್ನೆಲೆಯಲ್ಲಿ ಈಗಿನ
ಬೆಳವಣಿಗೆಯ ಬಗ್ಗೆ ನಿಮಗೆ ಏನು
ಅನಿಸುತ್ತಿದೆ?
ಈಗ
ಮಾತುಗಾರರು ಬಂದಿದ್ದಾರೆ, ತಾಳಮದ್ದಳೆಯಂತಹಾ ಪ್ರಕಾರ ಬಹಳ ಬೆಳೆದಿದೆ.
ಮಳೆಗಾಲದ ಬಿಡುವಿನ ದಿನಗಳಲ್ಲಿ ಕಲಾವಿದನಿಗೆ
ಎಲ್ಲಿಯಾದರೂ ಒಂದು ಕಡೆ ಸೇರಿ
ಸಂಪಾದನೆಯ ದಾರಿ ಕಾಣಬೇಕಿತ್ತು, ನೆಪ
ಇದಾದರೂ ಮಾತುಗಾರಿಕೆಯ ಬೆಳವಣಿಗೆಗೆ ಇದು ಪ್ರೇರಣೆ ನೀಡಿತು.
ಅಲ್ಲದೇ ಬಯಲಾಟಗಳ ಮೇಲೂ ಪ್ರಭಾವ
ಬೀರಿತು. ಜೊತೆಗೆ ಬಯಲಾಟದಲ್ಲಾದ ಹೊಸ
ಬೆಳವಣಿಗೆಗಳಿಂದ ಕುಣಿತಗಳೂ ಬೆಳೆಯಿತು. ಆದರೆ ನಾನು ಈಗಲೂ
ಹೇಳುವುದು ಇಷ್ಟೇ, ಯಾವುದಾದರು ಒಂದು
ಅಂಗ ಬೆಳೆಯುವುದು ಯಕ್ಷಗಾನದ ಜಾಯಮಾನವಲ್ಲ, ಸಮಗ್ರವಾಗಿ ಬೆಳೆಯುವುದೇ ಈ ಕಲೆಯ ಸ್ವಭಾವ.
ಈ ಸ್ವಭಾವವನ್ನು ಅರಿತು
ಬೆಳೆಸಬೇಕಾದುದು ಕಲಾವಿದ ಧರ್ಮ.
ಇವತ್ತಿನ
ಇನ್ನೊಂದು ಬೆಳವಣಿಗೆ ಎಂದರೆ, ಕೇವಲ ಕುಣಿತ
ಮಾತ್ರ ಯಕ್ಷಗಾನವೋ ಎನ್ನುವ ಸ್ಥಿತಿ ನಿರ್ಮಾಣವಾಗಿರುವುದು.
ಅದಕ್ಕೆ ಪೂರ್ವಕವಾಗಿ ಹಿಮ್ಮೆಳ ಬಿಟ್ಟರೆ ಕುಣಿತವನ್ನು
ಮಾತ್ರ ಕಲಿಸುವ ಪರಂಪರೆ ಯಕ್ಷಗಾನದ್ದು.
ಅಧಿಕೃತವಾಗಿ ಮಾತು, ಬಣ್ಣಗಾರಿಕೆ, ವೇಷಭೂಷಣ
ಅಥವಾ ರಂಗ ನಡೆಯನ್ನು ಕಲಿಸುವ
ಪರಂಪರೆ ನಮ್ಮ ಯಕ್ಷಗಾನದಲ್ಲಿ ಇಲ್ಲ.
ಇದು ಸಮಗ್ರ ಬೆಳವಣಿಗೆಯ ದೃಷ್ಟಿಯಿಂದ
ಒಂದು ಲೋಪ. ಇತ್ತೀಚೆಗೆ ಅಕಾಡೆಮಿಗಳೋ
ಸಂಘಟನೆಗಳೋ ಮಾಡುತ್ತಿರಬಹುದು ಅದು ಬೇರೆ ವಿಚಾರ.
ಆದರೆ ಯಕ್ಷಗಾನದ ಕಲಿಕಾ ಮೂಲದಲ್ಲಿ ಅಪಚಾರ
ಆಗಿದೆ, ಈಗೀಗ ಮೂಲ ಸ್ವರೂಪ
ಏನಿದೆಯೇ ಅದನ್ನು ಕೆಡಿಸುವ ಕೆಲಸವೂ
ಆಗುತ್ತಿದೆ. ಒಳ್ಳೆಯ ನಾಲಗೆ ಬಲ
ಇದ್ದವ ಮಾತುಗಾರನಾಗುವಂತೆ ಕುಣಿತ ಕಲಿತವ ಕುಣಿತಗಾರನಾಗುತ್ತಾನೆ.
ಆದರೆ ಅದು ಪೂರ್ಣ ಯಕ್ಷಗಾನ
ಅಲ್ಲ. ನಾನು ಆಗಾಗ ಒಂದು
ಉದಾಹರಣೆ ಹೇಳುತ್ತಿರುತ್ತೇನೆ, ಎಲ್ಲಾ ಕಡೆ ಫೈಲೇರಿಯಾ
ಇದ್ದ ಹಾಗೇ ಮಂಗಳೂರು ಕಡೆ
ಒಂದು ಕಾಯಿಲೆ ಇತ್ತು. ಅದು
ಕೈಯೋ ಕಾಲೋ ತೋರ ಆಗುವ
ಕಾಯಿಲೆ. ಸಮಗ್ರ ದೇಹ
ದಪ್ಪ ಆದರೆ ಅದು ಆರೋಗ್ಯದ
ಲಕ್ಷಣ. ಅದೇ ಒಂದು ಭಾಗ
ಮಾತ್ರ ದಪ್ಪ ಆದರೆ ಅದು
ಕಾಯಿಲೆ. ಯಕ್ಷಗಾನದ ಒಂದು ಭಾಗವನ್ನು ಮಾತ್ರ ಬೆಳೆಸುವುದು ಆರೋಗ್ಯದ
ಲಕ್ಷಣ ಅಲ್ಲ. ನನ್ನನ್ನೂ ಸೇರಿ
ಈ ಮಾತು ಹೇಳುತ್ತಿದ್ದೇನೆ.
ನಾನೂ ಮಾಡಿದ್ದು ಒಳ್ಳೆಯ ಕೆಲಸ ಅಂತ
ಅಲ್ಲ. ಅದರಿಂದಲೂ ಕೆಟ್ಟದ್ದಾಗಿದೆ. ಹರಿದಾಸರನ್ನು ಭವ್ಯವಾಗಿ ಸ್ವಾಗತಿಸಿ ಪ್ರಸಿದ್ಧಿಗೆ ತಂದ ಇದೇ ವ್ಯವಸ್ಥೆ,
ಇಂದು ಕುಣಿತದವರನ್ನು ವಿಜೃಂಭಿಸುವಂತೆ ಮಾಡುತ್ತಿದೆ. ಇದರಿಂದ ಆಯುಷ್ಯ ಪೂರ್ತಿ
ಯಕ್ಷಗಾನಕ್ಕಾಗಿ ದುಡಿದ ಕಲಾವಿದರು ಮೂಲೆ
ಗುಂಪಾಗುತ್ತಾರೆ. ಇದೆಲ್ಲಾ ಬಹಳ ಸೂಕ್ಷ್ಮ
ವಿಚಾರ. ಹಾಗಂತ ಯಕ್ಷಗಾನಕ್ಕೆ ಮಾತು,
ಕುಣಿತ ಬೇಡ ಅಂತ ಅಲ್ಲ,
ಇದು ಮಾತ್ರ ಬೇಡ. ಎಲ್ಲವೂ
ಸಮತೋಲನದಲ್ಲಿ ಇರುವುದಾದರೆ ಮಾತ್ರ ಅದು ಯಕ್ಷಗಾನ.
ತೆಂಕಿನಲ್ಲೂ ಇವತ್ತು ಚಾಲು ಕುಣಿತ
ಇದೆ, ಹಾಗಾಗಿ ಕುಣಿತಕ್ಕೆ ಸಂಬಂಧಿಸಿ
ನಿಮ್ಮ ಅಭಿಪ್ರಾಯ ಏನು?
ಹೌದು
ತೆಂಕಿನಲ್ಲೂ ಚಾಲು ಕುಣಿತ ಇದೆ.
ಇದರಿಂದ ಒಂದು ಮೂಲ ಪ್ರಕಾರವನ್ನು
ಅವಗಣಿಸಿದ ಹಾಗಾಗುತ್ತದೆ. ತೆಂಕಿನ ಕುಣಿತ, ಗಿರ್ಕಿ,
ಬಡಗಿನ ಮಂಡಿ ಕುಣಿತ ಇದನ್ನು
ಬಿಟ್ಟು ಬೇರೆಯೇ ತಂದರೆ ಎರಡೂ
ಕಡೆಯ ಮೂಲ ಸ್ವರೂಪಗಳಿಗೆ ಹೊಡೆತ
ಬೀಳುತ್ತದೆ. ಹಾಗೇ ಆಗದೇ ಇರುವುದೇ
ಒಳ್ಳೆಯದು. ಆದರೆ ಹೊಸ ಪ್ರೇಕ್ಷಕ
ವರ್ಗ ಇದನ್ನೇ ಬಯಸುತ್ತದೆ. ಅದೇ
ಸಮಸ್ಯೆ. ಆದರೆ ಇದು ಹೊಸ
ಅಡುಗೆ ಮಾಡಿದ ಹಾಗೇ, ಒಳ್ಳೆಯ
ಫಲಿತಾಂಶ ಸಿಗುತ್ತದೆ ಎನ್ನುವ ನಿರೀಕ್ಷೆ ತಪ್ಪು.
ಆದ್ದರಿಂದ ಪ್ರೇಕ್ಷಕ ತನ್ನ ಅಭಿರುಚಿಯನ್ನೇ ಪ್ರಶ್ನಿಸಬೇಕಾಗಿದೆ.
ಪ್ರಯೋಗಗಳೇ ಪ್ರದರ್ಶನಗಳಲ್ಲ. ಹಾಗಾಗಿ ಪ್ರಯೋಗಗಳು ಪ್ರದರ್ಶನದ
ಆಶಯಕ್ಕೆ ದಕ್ಕೆ ತರಬಾರದು.
ಇಂದು
ಯಕ್ಷಗಾನದಲ್ಲಿ ಕಾಣುವ ಗುಣಾವಗುಣಗಳು ಮತ್ತು
ಅದರಲ್ಲಿ ಬದಲಾಗಬೇಕು ಎನ್ನುವ ಅಂಶಗಳು ಯಾವುವು?
ಅದರಲ್ಲಿ
ಇದ್ದುಕೊಂಡು ಅವಗುಣಗಳನ್ನು ಹೇಳುವುದು ಕಷ್ಟ. ಮತ್ತೇ..... ಅವಗುಣ
ಹೇಳುವುದು ನಮ್ಮ ಸ್ವಭಾವವೂ ಆಗಬಾರದು.
ಗುಣದ ಬಗ್ಗೆ ಪ್ರತ್ಯೇಕ ಹೇಳಬೇಕಾದ
ಅಗತ್ಯ ಇಲ್ಲ. ಒಂದೇ ಒಂದು
ಗಮನಿಸಿ, ಕರಾವಳಿಯ ನಿರಕ್ಷರ ಕುಕ್ಷಿಗಳೂ
ರಾಮಾಯಣ, ಮಹಾಭಾರತ ಕಾವ್ಯದ ಪುರಾಣ
ಜ್ಞಾನ ಪಡೆದಿದ್ದರೆ ಅದಕ್ಕೆ ಯಕ್ಷಗಾನವೇ
ಕಾರಣ. ಮಳೆಗಾಲದ ತಾಳಮದ್ದಳೆ, ಪುರಾಣವಾಚನ
ಇವೆಲ್ಲ ಒಟ್ಟು ಸೇರಿ ಮನುಷ್ಯ
ಸಂಸ್ಕಾರವಂತ, ಕಲಾವಂತ, ವಿದ್ಯಾವಂತ, ಬುದ್ಧಿವಂತ
ಹೀಗೆ ಎಲ್ಲಾ ಗುಣಗಳನ್ನು ಪಡೆಯಲು
ಸಾಧ್ಯವಾಗಿದೆ. ಆದ್ದರಿಂದ ಒಂದೇ ಮಾತಿನಲ್ಲಿ ಹೇಳುದಾದರೆ
ಕರಾವಳಿಯ ಜನರನ್ನು ಈ ಹಂತಕ್ಕೆ
ತಂದದ್ದೇ ಯಕ್ಷಗಾನ.
ಬದಲಾವಣೆ
ಏನೆಂದರೆ, ಸ್ವಾಭಾವಿಕವಾಗಿ ಪರಿವರ್ತನಾ ಶೀಲ ಕಲೆ ಯಕ್ಷಗಾನ.
ಬದಲಾಗಬೇಕು ಅಂತ ಅನಿಸಿದ್ದಕ್ಕಿಂತ ಬದಲಾಗಿ
ಕೆಟ್ಟಿತು ಅಂತ ಅನಿಸಿದ್ದೇ ಹೆಚ್ಚಿನದ್ದು.
ಈ ವೇಷಗಾರಿಕೆ, ಬಣ್ಣಗಾರಿಕೆ
ಇವೆಲ್ಲ ಎಷ್ಟು ವರ್ಷದ ತಪಸ್ಸಿನ
ಫಲ? ಬಣ್ಣದ ವೇಷದವರು, ಪೀಠಿಕೆ
ವೇಷದವರು ಹೀಗೆ ಎಲ್ಲರೂ ತೊಡಗಿಕೊಂಡಿದ್ರು.
ಇವತ್ತು ವೇಷ ಹೋಗಿ ಆವೇಶ
ಆಗಿದೆ. ಅನೇಕರು ಮೈಗೆ ಬಂದವರ
ಹಾಗೆ ವರ್ತಿಸುತ್ತಿದ್ದಾರೆ. ಹಣೆಯ ಮೇಲೆ ಫರ್ಲಾಂಗು
ಕಲ್ಲಿನ ಹಾಗೆ ಉದ್ದಕ್ಕೆ ನಾಮ
ಹಾಕಿದರೆ ಬಣ್ಣಗಾರಿಕೆ ಹೇಗಾಗುತ್ತದೆ? ವೇಷವೂ ಹಾಗೆ ಎಲ್ಲವನ್ನೂ
ಕಟ್ಟಿ ವಿಜೃಂಭಿಸುವುದಕ್ಕಿಂತ ಬಹಳ ಸುಲಭ ಆಗಬೇಕಂತ
ನಾಟಕೀಯತೆಯನ್ನು ತಂದಿದ್ದಾರೆ. ಸುಬ್ಬಯ್ಯ ನಾಯ್ಡುರವರು ಒಂದು ಸಲ ಧರ್ಮಸ್ಥಳ
ಮೇಳದ ಆಟ ಆದಾಗ ವಿಠಲ
ಶಾಸ್ತ್ರಿಗಳಲ್ಲಿ ಹೇಳಿದರಂತೆ, “ನೋಡಿ ಶಾಸ್ತ್ರಿಗಳೇ ಈ
ನಾಟಕ ಇದೆಯಲ್ಲ ಇದರ ಅಪ್ಪನಂತದ್ದನ್ನು
ನಾವು ಮಾಡುತ್ತೇವೆ, ದಯವಿಟ್ಟು ನೀವು ಮಾತ್ರ ಮಾಡಬೇಡಿ.
ಯಕ್ಷಗಾನ ನಿಮ್ಮದು, ಅದನ್ನೇ ನೀವು ಮಾಡಿ
ತೋರಿಸಿ, ಅದರಲ್ಲಿ ನಾಟಕ ತರಲು
ಹೋಗಬೇಡಿ”
ಅಂತ. ಯಕ್ಷಗಾನ ನಾಟಕವೂ ಅಲ್ಲ,
ನಾಟಕ ಯಕ್ಷಗಾನವೂ ಅಲ್ಲ. ಹಿಂದೆ ಬೋರ್ಡ್
ಇದ್ದದೇ ಯಕ್ಷಗಾನ ನಾಟಕ ಮಂಡಳಿ
ಅಂತ. ಈಗ ಅದು ಬಯಲಾಟ
ಅಂತ ಆಗಿದೆ. ನಾಟಕ ಮಂಡಳಿ
ಬೇರೇ ಇದೆಯಲ್ಲಾ.
ಯಕ್ಷಗಾನದಲ್ಲಿ ಭಾಗವತರುಗಳÀ ಚಮತ್ಕಾರಗಳು ಹೆಚ್ಚಾಗುತ್ತಿರುವುದರ ಪರಿಣಾಮವೇನು?
ಒಟ್ಟಾರೆಯಾಗಿ
ರಂಜನೆಯ ಮೂಲಕ ಜನರನ್ನು ಆಕರ್ಷಿಸಬೇಕೆಂಬ
ಕಾರಣಕ್ಕೆ ಏನೆಲ್ಲಾ ಮಾಡಬಹುದೋ ಅದೆಲ್ಲವನ್ನೂ
ಇವತ್ತಿನ ಕಲಾವಿದರು ಮಾಡುತ್ತಾರೆ. ಭಾಗವತರುಗಳೂ ಅಷ್ಟೆ, ವೇಷಧಾರಿಗಳೂ ಅಷ್ಟೇ.
ಒಬ್ಬ ಕಲಾವಿದ ಕೇದಗೆ ಮುಂದಲೆ
ಕಟ್ಟಿ ಹಿಂದಕ್ಕೆ ಬಾಗಿ ಕಾಲಿಗೆ ಕಿರೀಟವನ್ನು
ತಾಗಿಸುತ್ತಿದ್ದರು. ಒಳ್ಳೆಯ ಕಲಾಗಾರಿಕೆ, ನೋಡುವುದಕ್ಕೆ
ಖುಷಿಯಾಗುತ್ತದೆ. ಆದರೆ ಅದು ಯಕ್ಷಗಾನವೋ?
ಅಥವಾ ಯಕ್ಷಗಾನಕ್ಕೆ ಕೊಡುಗೆ ಕೊಟ್ಟ ಹಾಗೆ
ಆಗುತ್ತದೆಯೋ? ಬದಲಾಗಿ ಅದರ ಸ್ವರೂಪವನ್ನು
ಕೆಡಿಸಿದ ಹಾಗೇ ಅಲ್ಲವೇ? ಎನ್ನುವುದು ನನ್ನ ಪ್ರಶ್ನೆ. ಹಾಗೇ
ಭಾಗವತರು ಒಂದು ಪದ್ಯವನ್ನು ನಾಲ್ಕು,
ಐದು, ಆರು ಸಲ ಹೇಳಿದ್ರೆ
ಈ ವೇಷಧಾರಿ ಏನು
ಮಾಡಲು ಸಾಧ್ಯ? ನಮ್ಮ ಕಾಲದಲ್ಲಿ
ಹೀಗೆ ಇರಲೇ ಇಲ್ಲ. ಅಗರಿ
ಭಾಗವತರು ಎರಡು ಸಲ ಪದ್ಯ
ಹೇಳುತ್ತಿದ್ದರು, ಅದು ವಿಠಲ ಶಾಸ್ತ್ರಿಗಳ
ಮೇಳಕ್ಕೆ ಬಂದ ನಂತರ. ಯಾಕೆಂದರೆ
ವಿಠಲ ಶಾಸ್ತ್ರಗಳು ಒಳ್ಳೆಯ ಕುಣಿತ, ಅಭಿನಯಕ್ಕೆ
ಹೆಸರಾದವರು. ಆ ಕಾರಣಕ್ಕೆ ಎರಡೇ
ಎರಡು ಸಲ ಪುನರಾವರ್ತಿಸುತ್ತಿದ್ದರು. ಅದರಲ್ಲೇನೂ ಅಪಚಾರ
ಕಾಣುತ್ತಿರಲಿಲ್ಲ. ಆದರೆ ಈ ಪರಂಪರೆ
ಮತ್ತೆ ಬೆಳೆಯುತ್ತಾ ಹೋಯಿತು, ಮುಂದೆ ಕುಣಿತಕ್ಕಿಂತಲೂ
ಭಾಗವತರ ಹಿತಾಸಕ್ತಿಗಳೇ ಹೆಚ್ಚಾಯಿತು. ಇಬ್ಬರಿಗೂ ಚಪ್ಪಾಳೆಯ ಕನವರಿಕೆ ಆರಂಭವಾಯಿತು. ಯಕ್ಷಗಾನ
ಬದಲಾಯಿತು.
ಯಕ್ಷಗಾನದ ಭವಿಷ್ಯ ಹೇಗೆ?
ಏನೇ
ಹೇಳಿದರೂ ಮಾಡಿದರೂ ಯಕ್ಷಗಾನ ಅಷ್ಟು
ಬೇಗ ಏನೂ ಆಗುವುದಿಲ್ಲ, ಆ
ಆತಂಕ ಯಾರಿಗೂ ಬೇಡ. ಒಂದು
ಮೂವತ್ತು ವರ್ಷಗಳ ಹಿಂದೆ ಇದು
ಇನ್ನೆಷ್ಟು ಸಮಯ ಉಳಿಯುತ್ತದೋ ಎನ್ನುವ
ಆತಂಕ ಇತ್ತು. ಆದರೆ ಈಗ
ಅದಿಲ್ಲ. ಏನೂ ಆಗುವುದಿಲ್ಲ ಎನ್ನುವುದು
ನಿಶ್ಚಿತವಾಗಿದೆ. ಅದರ ಭವಿಷ್ಯ ಭದ್ರವಾಗಿದೆ.
ತನ್ನನ್ನು ತಾನೇ ಉಳಿಸಿಕೊಳ್ಳುವ ಸಾಮಥ್ರ್ಯವೂ
ಈ ಕಲೆಗಿದೆ. ತನ್ನನ್ನು
ತಾನೇ ಸಾಕಬಲ್ಲ, ಉಳಿಸಿ ಬೆಳೆಸಿಕೊಳ್ಳಬಲ್ಲ, ಶಕ್ತಿ
ಇದಕ್ಕಿದೆ. ಇನ್ನು ಕೆಲವು ವರ್ಷಗಳ
ವರೆಗೆ ಇದನ್ನು ಅಲುಗಾಡಿಸಲು ಸಾಧ್ಯವಿಲ್ಲ.
ತುಳು ನಾಟಕ, ಸಿನಿಮಾಗಳು ಬಂದಾಗ
ಯಕ್ಷಗಾನ ಹೋಯಿತು ಅಂತ ಹೇಳಿದವರು
ಇದ್ದಾರೆ. ಆದರೆ ಈಗ ಹಾಗೆ
ಇಲ್ಲ. ಅದರ ಪ್ರೇಕ್ಷಕ ವರ್ಗವೇ
ಬೇರೆ, ಇದರ ಪ್ರೇಕ್ಷಕ ವರ್ಗವೇ
ಬೇರೆ.
ಇನ್ನೊಂದು
ಮುಖ್ಯ ಅಂಶವೆಂದರೆ, ಯಕ್ಷಗಾನ ಜಾನಪದವೂ ಹೌದು,
ಶಾಸ್ತ್ರೀಯವೂ ಹೌದು. ಇವೆರಡರಲ್ಲಿ ಒಂದನ್ನೇ
ಸಮರ್ಥಿಸುವ ಅಥವಾ ತಿರಸ್ಕರಿಸುವ ಪ್ರವೃತಿಯಿಂದ
ಆಗುವ ಪ್ರಯೋಜನ ಏನೂ ಇಲ್ಲ.
ಜನ ಅವರಷ್ಟಕ್ಕೇ ಹೇಳುತ್ತಿರುತ್ತಾರೆ. ಹಾಗೆಂದು ಯಕ್ಷಗಾನ ಅದಕ್ಕಾಗಿ
ತಲೆಕೆಡಿಸಿಕೊಳ್ಳುವುದಿಲ್ಲ. ಪರಂಪರೆಯ ವೇಷವೇ ಆಗಬೇಕೆಂದು
ಕೆಲವು ಮೇಳಗಳು ಪ್ರತಿಪಾದಿಸಿದವು, ಆದರೆ
ಅದು ಹೆಚ್ಚು ಕಾಲ ಉಳಿಯಲಿಲ್ಲ.
ಹಾಗಂತ ನಾಟಕೀಯ ವೇಷಗಳೂ ಉಳಿಯಲಿಲ್ಲ.
ತುಳು ಯಕ್ಷಗಾನದ ವೇಷಗಳೂ ಇಂದು ಉಳಿದುಕೊಂಡಿಲ್ಲ. ಹಾಗಿದ್ದರೂ
ಯಕ್ಷಗಾನ ಸಮೃದ್ಧವಾಗಿಯೇ ಇದೆ.
ಆದರೆ
ಯಕ್ಷಗಾನ ಬೆಳೆಯುದಕ್ಕೆ ಈ ಕಾಲಘಟ್ಟದಲ್ಲಿ ಒಂದು
ಸಮರ್ಥವಾದ ವ್ಯವಸ್ಥೆ ಇದ್ದರೆ ಅದು ಖಂಡಿತಾ
ಒಳ್ಳೆಯದೆ. ಕಮ್ಮಟ, ಶಿಬಿರ, ಕಾರ್ಯಾಗಾರಗಳಿಂದ ಪ್ರಯೋಜನ
ಇದೆ. ಸಾಮಾನ್ಯವಾಗಿ ಒಂದು ಗೋಷ್ಠಿಯೋ ಕಾರ್ಯಾಗಾರವೋ
ಉತ್ತಮವಾಗಿಯೇ ನಡೆಯುತ್ತದೆ, ದುರಂತವೆಂದರೆ ಹೊರಗೆ ಹೋದಾಗ ಎಲ್ಲವೂ
ಬದಲಾಗುತ್ತದೆ. ಅಂದರೆ ಎಲ್ಲವೂ ಹೇಳುವುದಕ್ಕೆ
ಮಾತ್ರ ಅಂತ ಆಗಿದೆ. ಯಕ್ಷಗಾನವನ್ನು
ಉಳಿಸಿ ಬೆಳೆಸುವ ದೃಷ್ಟಿಯಿಂದ ವಿಶೇಷ
ಗಮನ ಅತೀ ಅಗತ್ಯ. ಇಂದಿನ
ಬಹುತೇಕ ಕಲಾವಿದರಲ್ಲಿ ಓದಿನ ಕೊರತೆ ಎದ್ದು
ಕಾಣುತ್ತದೆ, ಆದರೆ ಕಲಾವಿದರಿಗೆ ಓದು
ಅತೀ ಅಗತ್ಯ. ಹಾಗಾದಾಗ ಮಾತ್ರ
ಯಕ್ಷಗಾನದ ಭವಿಷ್ಯ ಉತ್ತಮವಾಗಿರಲು ಸಾಧ್ಯ.
ಕಲಾವಿದನಂತೆ ಪ್ರೇಕ್ಷಕ ಹೇಗೆ ತಯಾರಾಗಬೇಕು.
ಒಳ್ಳೆಯ
ಪ್ರಶ್ನೆ. ಯಕ್ಷಗಾನ ಉಳಿದ ಕಲೆಗಳ
ಹಾಗಲ್ಲ, ಇಲ್ಲಿ ಮನುಷ್ಯನ ಕಣ್ಣು,
ಕಿವಿ ಎರಡೂ ಜಾಗೃತವಾಗಿದ್ದಷ್ಟು ಪರಿಣಾಮ
ಹೆಚ್ಚು. ಕಣ್ಣು, ಕಿವಿ ಜಾಗೃತವಾಗಿರಬೇಕಾದರೆ
ಸಂವೇದನಾ ಶೀಲ ಗುಣ ಪ್ರೇಕ್ಷಕನಲ್ಲಿರಬೇಕು.
ಅದು ಇದ್ದಾಗ ಕಲಾವಿದನಲ್ಲೂ ಮಾತು
ಹುಟ್ಟುತ್ತದೆ ಮತ್ತು ಪಾತ್ರ ನಿರ್ವಹಣೆ
ಉತ್ತಮವಾಗುತ್ತದೆ. ಪ್ರೇಕ್ಷಕನಲ್ಲಿ ನೋಡುವ ಗುಣ ಇಲ್ಲದೇ
ಇದ್ದರೆ ಅವನಿಂದ ಪ್ರತಿಕ್ರಿಯೆ ಹುಟ್ಟುವುದಿಲ್ಲ,
ಆಗ ರಂಗಸ್ಥಳದ ಕಲಾವಿದನಿಗೆ ಉತ್ಸಾಹ ಭಂಗವಾಗುತ್ತದೆ. ಅವರು
ತನ್ಮಯತೆಯಿಂದ, ಆಸಕ್ತಿಯಿಂದ ಮುಂದೇನಾಗುತ್ತದೆ ಅಂತ ಬಾಯಿಬಿಟ್ಟು ಕುಳಿತುಕೊಂಡಿದ್ದರೆ
ನಮ್ಮ ಬಾಯಿಯೂ ಬಿಡುತ್ತದೆ.
ಇದು ನಮ್ಮ ಇತ್ತೀಚಿನ
ಭಾಗವತರ ಮತ್ತು ಕುಣಿತದವರ ಮೇಲೆ
ಪ್ರಭಾವ ಬೀರಿರಬಹುದೇ?
ಬೀರಿರುವ
ಸಾಧ್ಯತೆ ಇದೆ. ಆದರೆ ಪ್ರೇಕ್ಷಕನ
ಅತಿ ಉತ್ಸಾಹ ಪ್ರಜ್ಞಾವಂತಿಕೆಯ ಲಕ್ಷಣ
ಅಲ್ಲ. ಆ ಮೂಲಕ ಕಲಾವಿದ
ದಿಕ್ಕು ತಪ್ಪುವುದೂ ಅಪರಾಧ. ಪ್ರೇಕ್ಷಕ ಕಲಾವಿದನ
ಅವಲಂಬಿಯಾಗುದರಲ್ಲಿ ಅರ್ಥ ಇದೆ. ಅದೇ
ಕಲಾವಿದ ಪ್ರೇಕ್ಷಕನ ಅವಲಂಬಿಯಾಗಬಾರದು, ಅರ್ಥಧಾರಿ ಯಾವ ಮಿತಿಯಲ್ಲಿರುತ್ತಾನೋ ಅದೇ
ಮಿತಿಯನ್ನು ಪ್ರೇಕ್ಷಕನೂ ಹಾಕಿಕೊಳ್ಳುವುದು ಸರಿ. ಬರೀ ಕುಣಿತ
ಅಂತ ನೂರು- ನೂರೈವತ್ತು ಹಾರಿದರೆ
ಖುಷಿಯಾಗಬಹುದು, ಆದರೆ ಅದು ಪಾತ್ರವಾಗುತ್ತದೋ?
ಶಾರೀರಿಕ ಶ್ರಮವೇ ಹೊರತು ಇನ್ನೇನೂ
ಇಲ್ಲ. ಆದ್ದರಿಂದ ಏನು ಪರಿಣಾಮ ಆಗಬೇಕೋ
ಅದು ಆಗಬೇಕು. ಪಕ್ವತೆ ಬಹಳ
ಮುಖ್ಯ. ಉದಾಹರಣೆಗೆ ಅಭಿಮನ್ಯುವಿನ ಪಾತ್ರದಲ್ಲಿ ಅದರ ಸಂಭಾಷಣೆ, ನಿರ್ವಹಣೆ
ಎಲ್ಲವೂ ಮುಖ್ಯ. ಕೇವಲ ಹಾರುವುದು
ಮಾತ್ರ ಮುಖ್ಯ ಅಲ್ಲ, ಅದು
ಸಮಗ್ರ ಪಾತ್ರವನ್ನು ನೋಡುವ ದೃಷ್ಠಿಯೂ ಅಲ್ಲ.
ಹಾರುವುದೇ ಪ್ರಮುಖ ಭಾಗ ಅಂತ
ಅಂಗೀಕಾರ ಆದರೆ ಅದು ಕಲಾವಿದನಿಗೆ
ಆಗುವ ಕಷ್ಟ ಮತ್ತು ಯಕ್ಷಗಾನಕ್ಕೆ
ಆಗುವ ನಷ್ಟ. ಯಾಕೆಂದರೆ ಅಷ್ಟು
ಹಾರಿದ ನಂತರ ಮತ್ತೆ ಆತನಿಗೆ
ಮಾತು ಹುಟ್ಟುವುದಾದರೂ ಹೇಗೆ?
ಡಾ.ಸುಂದರ ಕೇನಾಜೆ
Comments
Post a Comment