ಪರಸರ ದಿನ

                                                               ಪರಸರ ದಿನ
               ಪುತ್ತೂರಿನ ಬಾಲವನ ಅಭಿವೃದ್ಧಿ ಸಮಿತಿ ಮತ್ತು ಸಹಾಯಕ ಆಯುಕ್ತರ ಕಛೇರಿಯ ವತಿಯಿಂದ ಪರಿಸರ ದಿನಾಚರಣೆ ಹಾಗೂ ಜೀವಜಲದ ಬಗ್ಗೆ ಕಾರ್ಯಕ್ರಮ ನಡೆಯಿತು. ಈ ವಿಷಯದ ಬಗ್ಗೆ ನನ್ನ ಅನುಭವದ ಒಂದಷ್ಟು ಮಾತುಗಳನ್ನು ಹಂಚಿಕೆಕೊಳ್ಳುವ ಅವಕಾಶವನ್ನು ಸಂಘಟಕರು ವಿಶೇಷವಾಗಿ ಕೃಷ್ಣಪ್ಪ ಬಂಬಿಲ ಮಾಡಿಕೊಟ್ಟಿದ್ದರು. ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳೇ ತುಂಬಿದ್ದ ಕಾರ್ಯಕ್ರಮ, ಕಾಕತಾಳೀಯವೋ ಎಂಬಂತೆ ಒಳ್ಳೆಯ ಮಳೆ. ಅದರ ಮಧ್ಯೆಯೇ ಕಾರ್ಯಕ್ರಮ ನಡೆಯಿತು. 
     ಮನುಷ್ಯ ಮಾತ್ರನಿಂದ ರೂಪುಗೊಳ್ಳದೇ ಇರುವ ಕಾಡು, ನೀರು, ಗಾಳಿ, ಮಣ್ಣು, ಶಬ್ದವನ್ನು ಮನುಷ್ಯನಿಂದ ನಿಭಾಯಿಸಲು ಇಂದು ಸಾಧ್ಯವಾಗದೇ ಇರುವುದೇ ಇವುಗಳ ನಾಶಕ್ಕೆ ಕಾರಣ ಎನ್ನುವುದು ನನ್ನ ವಾದ. ಪ್ರಕೃತಿಯ ಬಗೆಗಿನ ಅರಿವಿನ ಕೊರತೆ ಇವುಗಳ ದುರ್ಬಳಕೆಗೆ ದಾರಿ ಮಾಡಿಕೊಟ್ಟಿದೆ ಎನ್ನಬಹುದು. ಈ ವಿಷಯದಲ್ಲಿ ನಮ್ಮ ಹಿರಿಯರು ತುಂಬಾ ಬುದ್ದಿವಂತರು, ಈ ಎಲ್ಲಾ ಅವಯವಗಳಿಗೆ ಪೂಜನೀಯ ಸ್ಥಾನವನ್ನು ನೀಡಿ ಅವುಗಳನ್ನು ಭಾವನಾತ್ಮಕವಾಗಿ ತಮ್ಮ ಜೊತೆಗಿರಿಸಿಕೊಂಡಿದ್ದರು. ಆದ್ದರಿಂದಲೇ ಕಾಡು-ಮರಗಳನ್ನು, ನೀರು- ಗಾಳಿಯನ್ನು, ಮಣ್ಣನ್ನು ಪೂಜಿಸುವ ಸಂಪ್ರದಾಯ ನಮ್ಮ ಪರಂಪರೆಯಲ್ಲಿ ಹುಟ್ಟಿಕೊಂಡಿದ್ದದ್ದು. ಕಳೆದ ಇಪ್ಪತೈದು ವರ್ಷಗಳಿಂದ ಈ ಸಂಬಂಧ ಕಳೆದುಹೋಗುತ್ತಿದೆ. ಹಾಗಾಗಿಯೇ ಇವು ನಾಶವಾಗುತ್ತಿರುವುದು.
       ಎಲ್ಲಿ ಪ್ರೀತಿ ಇಲ್ಲವೋ ಅಲ್ಲಿ ಅದಕ್ಕೆ ಪೂರಕವಾದುದು ಯಾವುದೂ ಉಳಿಯುವುದಿಲ್ಲ ಎನ್ನುವುದಕ್ಕೆ ಪರಿಸರ ನಾಶವೇ ಸಾಕ್ಷಿ. ಆದ್ದರಿಂದ ಪರಿಸರ ಉಳಿವಿಗೆ ನಮ್ಮನಮ್ಮ ಮಿತಿಯಲ್ಲಿ ಏನು ಮಾಡಬಹುದು ಎನ್ನುವ ಮಾತಗಳನ್ನು ಈ ವಿದ್ಯಾರ್ಥಿಗಳಿಗೆ ವಿವರಿಸಿದೆ. ಜಿಲ್ಲಾ ಸಂಖ್ಯಾ ಇಲಾಖೆಯ ಒಂದಷ್ಟು ಅಂಕಿಅಂಶಗಳೂ ನನಗೆ ಸಹಕರಿಸಿತು. ಈ ಅಂಕಿ ಅಂಶಕ್ಕೆ ಅಲ್ಲೇ ಇದ್ದ ಓರ್ವ ಅರಣ್ಯ ಅಧಿಕಾರಿ ಆಕ್ಷೇಪವನ್ನೂ ವ್ಯಕ್ತಪಡಿಸಿದರು. ಸರಕಾರಿ ಅಂಕಿಅಂಶಕ್ಕೆ ವ್ಯಕ್ತಪಡಿಸಿದ ಆಕ್ಷೇಪಕ್ಕೆ ಸಮರ್ಥ ಸ್ಪಷ್ಟೀಕರಣ ನೀಡುವ ಸರಕೂ ಇವರಲ್ಲಿದ್ದಂತೆ ಕಾಣಲಿಲ್ಲ. ಅಂದರೆ ಕಳೆದ ಮೂವತ್ತು ವರ್ಷಗಳಿಂದ ದ.ಕ ಜಿಲ್ಲೆಯ ಕಾಡಿನ ಪ್ರಮಾಣದಲ್ಲಿ ಏನೂ ಕಡಿಮೆಯಾಗಿಲ್ಲ, ನಾಶ ಆಗಿದೆ ಎನ್ನುವ ಈ ಅಂಕಿಅಂಶ ಸರಿ ಇಲ್ಲ ಎನ್ನುವ ವಾದ ಇವರದು. ಅದೇನೇ ಇದ್ದರೂ ಇಂದಿನ ಮಕ್ಕಳಲ್ಲಿ ಪರಿಸರದ ಕುರಿತು ಪ್ರೀತಿ ಹುಟ್ಟಿಸುವ ಕನಿಷ್ಟ ಕೆಲಸ ಪ್ರಾಮಾಣಿಕವಾಗಿ ನಡೆಯಬೇಕು ಎನ್ನುವುದು ನನ್ನ ಅನಿಸಿಕೆ. ಈ ಪ್ರಯತ್ನ ನಡೆದಿದೆ ಎನ್ನುವ feedback ಗೆಳೆಯ ಕೃಷ್ಣಪ್ಪ ಬಂಬಿಲ, ಸಂಶುದ್ದೀನ್ ಸಂಪ್ಯ ಮತ್ತು ಅಲ್ಲಿ ಸೇರಿದ್ದ ಒಂದಷ್ಟು ಸ್ನೇಹಿತರದ್ದಾಗಿತ್ತು. ಇದು ಈ ಸಂಘಟನೆ ನನ್ನನ್ನು ಆಧರಿಸಿದಕ್ಕಿಂತಲೂ ಹೆಚ್ಚು ಖುಷಿಕೊಟ್ಟಿತು.
.19-07-2019                                                                 ಡಾ.ಸುಂದರ ಕೇನಾಜೆ

Comments