ನಿಜವಾದ ಸಮಸ್ಯೆ


                                       ನಿಜವಾದ ಸಮಸ್ಯೆಯನ್ನು ಗುರುತಿಸಿ     
                 ಯಕ್ಷಗಾನ ಅಕಾಡೆಮಿಯಲ್ಲಿ ಗೊಂಬೆಯಾಟ....! ಎಂಬ ಶಿರ್ಷಿಕೆಯಲ್ಲಿ(ವಿ.ವಾ ಜೂನ್ 3- ಮಂಥನ) ಯಕ್ಷಗಾನ ಅಕಾಡೆಮಿಯಲ್ಲಿ ಹುಟ್ಟಿಕೊಂಡ ಹೊಸ ವಿವಾದವೊಂದನ್ನು ತಿಳಿದು ಆಶ್ಚರ್ಯವೂ ಕೆಲವೊಂದು ಅನುಮಾನವೂ ಆಯಿತು. ಯಕ್ಷಗಾನ ಅಕಾಡೆಮಿಯ ಸ್ಥಾಪನೆಯ ಪ್ರಥಮ ಅವಧಿಯಲ್ಲಿ ಮೂರು ವರ್ಷ ಸದಸ್ಯನಾಗಿ ಕೆಲಸ ಮಾಡಿದ ನನ್ನ ಅನುಭವದಲ್ಲಿ ಗೊಂಬೆಯಾಟ ಪ್ರಕಾರ ಅಕಾಡೆಮಿ ಆರಂಭವಾದ ವರ್ಷವೇ ಅದರ ವ್ಯಾಪ್ತಿಗೆ ಸೇರಲ್ಪಟ್ಟಿತ್ತು. ಮಾತ್ರವಲ್ಲದೇ ಪ್ರತೀವರ್ಷದ ಕ್ರಿಯಾಯೋಜನೆಯಲ್ಲಿ ರಾಜ್ಯ ಮಟ್ಟದ ಯಕ್ಷಗಾನ ಮೇಳಗಳ ಏರ್ಪಾಡಿನಲ್ಲಿ ಗೊಂಬೆಯಾಟವನ್ನೂ ಸೇರಿಸಲಾಗುತ್ತಿತ್ತು. ಹಾಗಾಗಿ ಹಲವು ಬಾರಿ ಗೊಂಬೆಯಾಟದ ಉಪಪ್ರಕಾರದ ಸಂಸ್ಥೆಗಳಿಗೆ ಸಹಾಯಧನವನ್ನೂ ನೀಡಿದ ದಾಖಲೆ ಇದೆ. (ನೋಡಿ, ಹಿಂದಿನ ದಾಖಲೆ) ಬರಹದಲ್ಲೇ  ಪ್ರಸ್ತುತ ಅಧ್ಯಕ್ಷರು ಗೊಂಬೆಯಾಟದ ಕಲಾವಿದರು ಎಂದು ತಿಳಿಸಿರುವುದರಿಂದ ಅದೇ ಮಾನದಂಡದಿಂದ ಅವರಿಗೆ ಉನ್ನತ ಸ್ಥಾನ ಲಭಿಸಿದೆ, ಹಾಗಾಗಿ ಅಕಾಡೆಮಿಯಲ್ಲಿ ಪ್ರಕಾರಕ್ಕೆ ಮೊದಲ ಆಧ್ಯತೆ ಇದೆ ಎಂದಾಯಿತಲ್ಲ? ಹಾಗಿದ್ದೂ ಗೊಂದಲಗಳು ಯಾಕೆ? ಎನ್ನುವುದೇ ಪ್ರಶ್ನೆ. ಅಲ್ಲದೇ ಗೊಂಬೆಯಾಟ ಬೇಕೋ ಬೇಡವೋ ಎನ್ನುವ ಚರ್ಚೆ ಈಗ ಬಂದ್ದುದ್ದಾರೂ ಹೇಗೆ? ಯಾಕೆಂದರೆ ಹಿಂದೆಯೇ ಸರಕಾರ ಗೊಂಬೆಯಾಟಕ್ಕೂ ಅಕಾಡೆಮಿಯಲ್ಲಿ ಸಮಾನ ಅವಕಾಶದ ಆದೇಶ ನೀಡಿರುವಾಗ ಮತ್ತೆ ಅದಕ್ಕೆ ಒತ್ತು ನೀಡಬೇಕಾಗಿದ್ದರೆ ಕಾರಣವೇನು? ಈಗಾಗಲೇ ಅಕಾಡೆಮಿಯಲ್ಲಿ ತೆಂಕುತಿಟ್ಟಿಗೆ ದೊರೆತ ಪ್ರಾತಿನಿಧ್ಯದ ಬಗ್ಗೆ ತೆಂಕಿನ ಕಲಾವಿದರಲ್ಲಿ ಮತ್ತು ಅಭಿಮಾನಿಗಳಲ್ಲಿ ತೀವೃ ಅಸಮಾಧಾನವಿರುವಾಗ ಅದನ್ನು ಒಂದಷ್ಟೂ ಪರಿಗಣಿಸಿ ಪರಿಹರಿಸುವ ಬಗ್ಗೆ ಯೊಚಿಸುವ ಬದಲು ಪ್ರಸ್ತುತ ಅವಧಿಯ ಅಕಾಡೆಮಿ ಇದೀಗ ಮತ್ತೇ ತಮಗೇ ಹೆಚ್ಚು ಪಾಲು ಸಿಗಬೇಕೆಂದು ಬಯಸುದರಲ್ಲಿ ಇರುವ ಅರ್ಥವಾದರೂ ಏನು?
                ಇಡೀ ಕರ್ನಾಟಕದಲ್ಲಿ ಅತೀ ಹೆಚ್ಚು ಕಲಾವಿದರನ್ನು ಕಲಾರಸಿಕರನ್ನೂ ಹೊಂದಿದ ತೆಂಕುತಿಟ್ಟಿಗೆ ಅಕಾಡೆಮಿಯ ಎರಡೂ ಅವಧಿಯಲ್ಲಿ ಒಳ್ಳೆಯ ಪ್ರಾತಿನಿಧ್ಯವನ್ನೇ ನೀಡಲಾಗಿತ್ತು. ಆದರೆ ಅದು ಬಾರಿ ಭ್ರಮನಿರಸನಗೊಳ್ಳುವಂತೆ ಆಗಿದೆ. ಹಾಗಿದ್ದರೂ ತೆಂಕಿನ ಪರವಾಗಿ ಅಂತಹಾ ತೀವೃ ಪ್ರತಿಭಟನೆ ಏನೂ ಪ್ರಕಟಗೊಳ್ಳಲಿಲ್ಲ. ಪ್ರಕಟಗೊಳ್ಳಲಿಲ್ಲ ಎಂದ ಮಾತ್ರಕ್ಕೆ ತೆಂಕಿನವರಿಗೆ ತೃಪ್ತಿ ಇದೆ ಎಂದರ್ಥವೇ? ವಾಸ್ತವ ಸ್ಥಿತಿ ಹೀಗಿರುವಾಗ ಈಗಿನ ಅಕಾಡೆಮಿ ಸಮಿತಿ ಯಕ್ಷಗಾನ ಪ್ರಕಾರದಲ್ಲಿ ಮೇರು ಸ್ಥಾನ ಪಡೆದ ತೆಂಕುತಿಟ್ಟಿನ ಬೆಳವಣಿಗೆಗಾಗಿ ಚಿಂತಿಸುವುದೋ ಅಲ್ಲ ಅಧ್ಯಕ್ಷರನ್ನೇ ಹೊಂದಿದ ಗೊಂಬೆಯಾಟಕ್ಕೇ ಇನ್ನೂ ಬೇಕು ಎಂದು ವಿವಾದ ಎಬ್ಬಿಸುವುದೋ? ಗೊಂದಲದ ಬೇಡಿಕೆಯನ್ನು ಹುಟ್ಟು ಹಾಕಿದವರು ಒಮ್ಮೆ ತೆಂಕು ಮತ್ತು ಬಡಗುತಿಟ್ಟಿನ ವ್ಯಾಪ್ತಿ ಮತ್ತು ಜನಪ್ರಿಯತೆಯನ್ನು ತಿಳಿದುಕೊಳ್ಳಲಿ. ಹಾಗೆಂದು ಅಕಾಡೆಮಿ ವ್ಯಾಪ್ತಿಯಲ್ಲಿರುವ ಇತರ ಕಲಾಪ್ರಕಾರಗಳು ಏನು ಅಲ್ಲ ಎನ್ನುವ ಅರ್ಥ ಬರಹದ್ದಲ್ಲ. ಆದರೆ ಆರಂಭದಲ್ಲಿ ತೆಂಕು ಮತ್ತು ಬಡಗನ್ನೇ ಗಮನದಲ್ಲಿರಿಸಿ ಸ್ಥಾಪನೆಗೊಂಡ ಯಕ್ಷಗಾನ ಅಕಾಡೆಮಿಯಿಂದ  (ಬಯಲಾಟ ಪ್ರಕಾರಗಳು ನಂತರದ ಸೇರ್ಪಡೆ) ಪ್ರಧಾನ ಪ್ರಕಾರಗಳೇ ಹೊರದೂಡಲ್ಪಟ್ಟರೆ ಅದಕ್ಕಿಂತ ದೊಡ್ಡ ವಿಪರ್ಯಾಸ ಇನ್ನೇನಿದೆ! ಆದ್ದರಿಂದ ಪ್ರತ್ಯೇಕ ಅಕಾಡೆಮಿಯ ಚಿಂತನೆ ಇದೆ ಎಂದಾದರೆ ಅದು ತೆಂಕು ಮತ್ತು ಬಡಗನ್ನು ಸೇರಿಸಿದ ಅಕಾಡೆಮಿಯಾಗಲಿ. ಅದಿಲ್ಲದಿದ್ದರೆ ಅತಿಹೆಚ್ಚಿನ ಅನುಕೂಲತೆಯನ್ನು ಪಡೆದು ಮತ್ತೆ ಗೊದಲ ಸೃಷ್ಟಿಸುವ ಸ್ವಾರ್ಥ ಯೋಚನೆಗಳ ಬಗ್ಗೆ ತೆಂಕಿನ ಬಹುಸಂಖ್ಯಾತರ ವಿರೋಧವಿದೆ. ಅದ್ದರಿಂದ ಅಕಾಡೆಮಿ ಸಮಿತಿ ತೆಂಕಿಗೆ ನ್ಯಾಯ ಒದಗಿಸುವ ಕಡೆಗೆ ಗಮನ ನೀಡಲಿ ಮತ್ತು ಎಲ್ಲ ಕಲಾಪ್ರಕಾರಕ್ಕೂ ಅವುಗಳ ವ್ಯಾಪ್ತಿಗನುಸಾರ ಪ್ರಾಮುಖ್ಯ ನೀಡಲಿ. ರೀತಿಯ ಸಂಪ್ರದಾಯವೊಂದನ್ನು ಹಿಂದೆ ಬೆಳೆಸಿದ್ದ ಕಾರಣ ಹಾಗೂ ಕಲೆಯಲ್ಲಿ ಸೌಂದರ್ಯ ಹುಡುಕುವ ಬದಲು ವಿವಾದ ಹುಡುಕುವ ಪ್ರವೃತ್ತಿ ನಿಲ್ಲಲಿ ಎನ್ನುವ ಕಾರಣಕ್ಕಾಗಿ   ಕೋರಿಕೆ
(ಕಣಿಪುರ ಯಕ್ಷಗಾನ ಪತ್ರಿಕೆ ಪ್ರಕಟಿತ 2017)                                                       ಡಾ.ಸುಂದರ ಕೇನಾಜೆ                                                                                           


Comments