ಯಕ್ಷಗಾನ ಪಠ್ಯ ಪುಸ್ತಕ


                                                       ಯಕ್ಷಗಾನ ಪಠ್ಯ ಪುಸ್ತಕ 

      ಇದನ್ನು ಗಜ ಗರ್ಭ ಪ್ರಸವವೆನ್ನುವುದೋ, ಭಗೀರಥ ಪ್ರಯತ್ನವೆನ್ನುವುದೋ, ಇಲ್ಲಾ ವಿಕ್ರಮ ಬೇತಾಳನನ್ನು ಹಿಡಿದ ಸ್ಥಿತಿ ಎನ್ನುವುದೋ ಅಂತೂ ಮನುಷ್ಯಾಯುಷ್ಯದಲ್ಲಿ ಹತ್ತು ವರ್ಷ ಕಡಿಮೆ ಏನಲ್ಲ. ಈ ಹತ್ತು ವರ್ಷದಲ್ಲಾದರೂ ಆಯಿತಲ್ಲಾ, ಮುಟ್ಟಿದ ಕೆಲಸ ಒಂದು ಹಂತ ತಲುಪಿತಲ್ಲಾ ಎನ್ನುವುದೇ ಸಂತೃಪ್ತಿ. ಸುಳ್ಯದ ಸ್ನೇಹಿತರು ಇಂತದ್ದೊಂದು ಕೆಲಸವನ್ನು ಅಕಾಡೆಮಿ ಮೂಲಕ ಮಾಡಿಸಿ ಎಂದು ಹತ್ತು ವರ್ಷದ ಹಿಂದೆ ಹೇಳಿದಾಗ, ಅದು ಇಷ್ಟು ಕಷ್ಟವಿರಬಹುದು ಮತ್ತು ಇಷ್ಟೊಂದು ಅದ್ವಾನ ಮಾಡಿಸಬಹುದು ಎಂದು ಎಣಿಸಿರಲಿಲ್ಲ. ಎಲ್ಲಾ ಪಠ್ಯಪುಸ್ತಕದಂತೆ ಇದೂ ಒಂದು ಎಂದು ತಿಳಿದು ಕೈಹಾಕಿದೆ. ಆದರೆ ಮಟ್ಟಿದಲ್ಲೆಲ್ಲ ಕಚ್ಚುತ್ತದೆ, ಉರಿ, ಬೊಬ್ಬೆ ಏಳಿಸುತ್ತದೆ ಎಂದು ನಂತರ ಗೊತ್ತಾದದ್ದು. ಆದರೆ ಮಟ್ಟಿ ಆಗಿತ್ತು, ಮುಗಿಸುವುದು ಅನಿವಾರ್ಯವಾಗಿತ್ತು. ಎಲ್ಲಾ ಕಷ್ಟ,ನಷ್ಟ,ಅವಮಾನ, ನಿಂದಗಳನ್ನು ಹೇಳಬೇಕಾಗಿತ್ತು. 
     ಹೌದು ಯಕ್ಷಗಾನ ಪಠ್ಯ ಪುಸ್ತಕ ರಚನೆಯ ಹಿಂದೆ ಕಳೆದ ಹತ್ತು ವರ್ಷಗಳಿಂದ ನಾನು ಮತ್ತು ನಿಜ ಕಾಳಜಿಯ ಒಂದಷ್ಟು ಸ್ನೇಹಿತರು ಅನುಭವಿಸಿದ ಸ್ಥಿತಿ ಇದು. ಅಂತೂ ಜೂನಿಯರ್ ಹಂತದ ಪಠ್ಯ ಪುಸ್ತಕ ಮುದ್ರಣಗೊಂಡು ಮಾರುಕಟ್ಟೆಯಲ್ಲಿ ಲಭ್ಯವಿದೆ. ಹಲವು ಎಡರು ತೊಡರು, ಏರುತಗ್ಗುಗಳನ್ನು ದಾಟಿ, ಪುಸ್ತಕ ಬೆಳಕು ಕಂಡಿದೆ. ಬೆಂಗಳೂರು, ಮೈಸೂರು ಹಾಗೂ ದೂರದ ಧಾರವಾಡ, ಗುಲ್ಬರ್ಗಾದಲ್ಲೂ ಪುಸ್ತಕ ದೊರಕುತ್ತದೆ. ಕರಾವಳಿಯಲ್ಲೂ ಸದ್ಯ ದೊರಕುವ ವ್ಯವಸ್ಥೆ ಆಗಲಿದೆ. ಸುಮಾರು 178 ಪುಟಗಳ ಈ ಪುಸ್ತಕದ ಮೂಲಕ ಆಸಕ್ತ ವಿದ್ಯಾರ್ಥಿಗಳು ಎರಡು ವರ್ಷ ಅಧ್ಯಯನ ಮಾಡಿ ಪರೀಕ್ಷೆಗೆ ಬರೆಯಬಹುದು. ಜೂನಿಯರ್‌ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು. ಎಸ್.ಎಸ್.ಎಲ್.ಸಿ. ಬೋರ್ಡ್ ಕೊಡ ಮಾಡುವ ಈ ಸರ್ಟಿಫಿಕೇಟ್ ಮುಂದೊಂದು ದಿನ ಭರತ ನಾಟ್ಯ, ಸಂಗೀತಕ್ಕೆ ನೀಡುವ ಸರ್ಟಿಫಿಕೇಟ್ ನಷ್ಟೇ ಪ್ರಾಮುಖ್ಯ ಪಡೆಯಲಿದೆ( ನನ್ನ ನಿರೀಕ್ಷೆ) ನಂತರ ಮುಂದಕ್ಕೆ ಸೀನಿಯರ್, ವಿದ್ವತ್ ಪೂರೈಸಲು ಇಲ್ಲಿ ಅವಕಾಶವಿದೆ(ಸೀನಿಯರ್ ಪಠ್ಯ ತಯಾರಾಗಿದೆ.ಪುಸ್ತಕ ಬರಲು ಬಾಕಿ ಇದೆ.) 
      ಈ ಪಠ್ಯ ಪುಸ್ತಕ ತಯಾರಿಯ ಹಿಂದೆ ಕರ್ನಾಟಕ ಸರಕಾರ, ಶಿಕ್ಷಣ ಇಲಾಖೆ, ಪಠ್ಯಪುಸ್ತಕ ಸಂಘ, ಕುಂಬ್ಳೆ ಮತ್ತು ಸಾಮಗ ಅವಧಿಯ ಯಕ್ಷಗಾನ ಅಕಾಡಮಿ, ಹಾಗೂ ಎಸ್.ಎಸ್.ಎಲ್. ಸಿ ಬೋರ್ಡ್ ಇವುಗಳ ಕೊಡುಗೆ ಇದೆ. ಇಷ್ಟು ದೀರ್ಘಕಾಲ ಹಿಡಿದುದಕ್ಕೂ ಒಂದಷ್ಟು ನ್ಯೂನತೆಗಳು ಇವೆ. ಅಕಾಡಮಿ ವಿಭಾಗದಿಂದ ನಾನು ಸದಸ್ಯ ಸಂಚಾಲಕನಾಗಿ ಅವಧಿ ಮುಗಿಸಿ ಮತ್ತೆ ಏಳು ವರ್ಷ ಮುಂದುವರಿದು ಶ್ರಮಿಸಿದ್ದೇನೆ. ಜೊತೆಗೆ ಪ್ರಕಾಶ್ ಮೂಡಿತ್ತಾಯ ಮತ್ತು ಪ್ರೊ.ಎಂ.ಎಲ್. ಸಾಮಗರ ಇಚ್ಛಾಶಕ್ತಿಯನ್ನೂ ನೆಪಿಸುತ್ತೇನೆ. ಕುಂಬ್ಳೆ, ಹೊಸ್ತೋಟ ಇವರ ಅಧ್ಯಕ್ಷತೆ, ಹಾಗೂ ಎರಡೂ ಸಮಿತಿಯ ಸದಸ್ಯರು ಯಕ್ಷಗುರುಗಳಾದ ಗೋವಿಂದ ಭಟ್, ಕರ್ಗಲ್ಲು, ಐತಾಳ್,ವರ್ಕಾಡಿ, ಡಾ. ಕಮಲಾಕ್ಷ, ಜಿ.ಎಸ್ ಭಟ್, ರಾಧಾಕೃಷ್ಣ ಕಲ್ಚಾರ್, ಗಣರಾಜ್ ಕುಂಬ್ಳೆ, ಸುಜಯಿಂದ್ರ ಹಂದೆ, ಚಿತ್ರ ಬರೆದು ದಿನೇಶ್ ಕುಕ್ಕುಜಡ್ಕ, ಚಿತ್ರ ಕ್ಲಿಕ್ಕಿಸಿದ ಜೀವನ್ ರಾಂ ಸುಳ್ಯ ಹಿರಿಯ ಕಿರಿಯ ಅಧಿಕಾರಿಗಳು ಅದರಲ್ಲೂ ಮೈಸೂರಿನ ಡಿ.ಡಿ.ಪಿ.ಐ ಡಾ.ಪಾಂಡುರಂಗ, ಹೆಚ್.ಎನ್ ಗೋಪಾಲಕೃಷ್ಣ, ಜಿ.ಎಸ್.ನಾಗೇಶ್, ಚಂದ್ರಶೇಖರ ಬಾಬು, ಉನ್ನತ ಜನಪ್ರತಿನಿದಿಗಳನ್ನು, ಗೆಳೆಯ ಸುರೇಶ್ ಕಣೆಮರಡ್ಕ, ತಾಲೂಕು, ಜಿಲ್ಲೆ ರಾಜ್ಯದ ಮಾಧ್ಯಮ ಮಿತ್ರರನ್ನು ಯಕ್ಷಶಿಕ್ಷಣದ ಅಕಾಡೆಮಿ ಸಂಚಾಲಕನ ನೆಲೆಯಲ್ಲಿ ನೆನಪಿಸುತ್ತೇನೆ.
       ನಮ್ಮ ಮಕ್ಕಳು, ಗುರುಗಳು ಈ ಪಠ್ಯ ಪುಸ್ತಕವನ್ನು ಹೆಚ್ಚು ಬಳಸಿಕೊಳ್ಳಲಿ, ಲೋಪಗಳಿದ್ದಲ್ಲಿ ಗದ್ದಲವಿಲ್ಲದೇ ಸರಿಪಡಿಸೋಣ, ಒಳ್ಳೆಯದಿದ್ದಲಿ ಸುದ್ದಿ ಮಾಡಿ ಬಳಸಿಕೊಳ್ಳೊಣ. ಸೀನಿಯರ್ ಪಠ್ಯ ಬಹುಬೇಗ ಹೊರಬರಲಿ, ವಿದ್ವತ್‌ ಪಠ್ಯ ಶೀಘ್ರ ತಯಾರಾಗಲಿ. ಈ ಪಠ್ಯ ಒಬ್ಬ ವ್ಯಕ್ತಿ, ಸಂಸ್ಥೆಯದ್ದೆಂದು ಭಾವಿಸದೇ ಸಮಸ್ತ ಯಕ್ಷಗಾನ ಕಲೆಯದೆಂದು ಸ್ವೀಕರಿಸೋಣ. ಆ ಮೂಲಕ ಯಕ್ಷಗಾನ ಗೆಲ್ಲಲಿ.
28-09-2019                                                                                                      ಡಾ.ಸುಂದರ ಕೇನಾಜೆ

Comments