ಗಾಂಧೀ ನಡಿಗೆ
ಸುಳ್ಯದ ಗಾಂಧೀ ಚಿಂತನ ವೇದಿಕೆಯ ವತಿಯಿಂದ ಅಕ್ಟೋಬರ್ 2ರಂದು ಗಾಂಧೀ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕನಿಷ್ಠ ನೂರೈವತ್ತು ಜನ ಭಾಗವಹಿಸುವ ಈ ನಡಿಗೆ, ಬೆಳ್ಳಾರೆಯಿಂದ ಆರಂಭಗೊಂಡು ಸಂಜೆ ಸುಳ್ಯದಲ್ಲಿ ಸಮಾಪನಗೊಳ್ಳಲಿದೆ. ಬೆಳ್ಳಾರೆಯಲ್ಲಿ ಎಂಬತ್ತು ವರ್ಷ ಪೂರೈಸಿದ ಒಂದಷ್ಟು ಹಿರಿಯರು ನಡಿಗೆಗೆ ಚಾಲನೆ ನೀಡುತ್ತಾರೆ. ನಂತರ ದರ್ಖಾಸ್ತ್ ನಲ್ಲಿ, ಐವರ್ನಾಡಿನಲ್ಲಿ, ಸೋಣಂಗೇರಿಯಲ್ಲಿ, ಪೈಚಾರು ಹಳೆಗೇಟಿನಲ್ಲಿ ಸ್ವಾಗತ ನೀಡುವ ಸಾರ್ವಜನಿಕ ಸಮಿತಿಗಳು ಈಗಾಗಲೇ ಸಿದ್ದಗೊಂಡಿವೆ. ಗಾಂಧೀಗೆ ಪ್ರಿಯವಾದ ಮೀರಾ ಭಜನ್, (ಕೆ.ಪಿ.ಎಸ್ ಬೆಳ್ಳಾರೆ ವಿದ್ಯಾರ್ಥಿಗಳು) ಗಾಂಧೀ ಕುರಿತ ನಾಟಕ(ಲೋಕೇಶ್ ಊರುಬೈಲು ನಿರ್ದೇಶನ) ಮತ್ತು ಅಲ್ಲಲ್ಲಿ ಉಪನ್ಯಾಸ ನಡೆಯಲಿದೆ. ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ಸಾವಿರಾರು ಜನ ಸೇರಿದ ಸಮಾರೋಪ ಸಮಾರಂಭವನ್ನು ಸಂಘಟಿಸಲಾಗಿದೆ. ಚಾಮರಾಜನಗರದ ಹಿರಿಯ ಗಾಂಧೀ ಚಿಂತಕ ವೆಂಕಟರಾಜುರವರು ಗಾಂಧೀ ಕುರಿತು ಉಪನ್ಯಾಸ ನೀಡಲಿದ್ದಾರೆ. ಹಲವು ಹಿರಿಯರು,ಗಣ್ಯರು, ಗಾಂಧೀ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಭಾಗವಹಿಸುವ ನೂರೈವತ್ತು ಸದಸ್ಯರಿಗೆ ಒಂದು ದಿನದ ಗಾಂಧೀ ವಿಚಾರ ವಿನಿಮಯ ಕಾರ್ಯಗಾರವನ್ನು ಸೆಪ್ಟೆಂಬರ್29ರಂದು ಸುಳ್ಯದ ಧ.ಗ್ರಾ.ಆ.ಯೋ.ಇದರ ಸಮುದಾಯ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಮೈಸೂರಿನ ಡಾ.ಚಲಪತಿ ಆರ್, ಡಾ.ಮನೋಹರ ಎಂ.ಸಿ, ಡಾ.ನರೇಂದ್ರ ರೈ ದೇರ್ಲ, ಡಾ.ಚಂದ್ರಶೇಖರ ದಾಮ್ಲೆ ಮತ್ತು ನಾನು- ಗಾಂಧೀ ಸರಳತೆ, ಸತ್ಯಾಗ್ರಹ, ಸಹಕಾರ, ಅಧ್ಯಾತ್ಮ, ವಿಕೇಂದ್ರೀಕರಣ, ಧರ್ಮದರ್ಶಿತ್ವ, ಈ ವಿಷಯಗಳ ಬಗ್ಗೆ ಅನುಭವ ಹಾಗೂ ಅಧ್ಯಯನದ ಹಿನ್ನಲೆಯ ಮಾತು ಚರ್ಚೆಗಳನ್ನು ನಡೆಸಲಿದ್ದೇವೆ. ಗಾಂಧೀ ಕುರಿತ ಸಾಕ್ಷ್ಯಚಿತ್ರ, ಚಿಂತನ ಮತ್ತು ಅಭಿಪ್ರಾಯ ಹಂಚಿಕೆ ನಡೆಯಲಿದೆ, ಡಾ.ಕೆ.ವಿ.ಚಿದಾನಂದ, ಡಾ.ಯು.ಪಿ.ಶಿವಾನಂದ, ಡಾ.ಹರಪ್ರಸಾದ್ ತುದಿಯಡ್ಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾರೆ. ಧ.ಗ್ರಾ.ಯೋಜನೆ, ಯುವಜನ ಸಂಯುಕ್ತ ಮಂಡಳಿ ಹಾಗೂ ಇನ್ನಿತರ ಹಲವು ಸಂಘ ಸಂಸ್ಥೆಗಳು ಕಾರ್ಯಕ್ರಮಕ್ಕೆ ಕೈಜೋಡಿಸಿವೆ. ಸಂಘಟನೆಯ ಸಂಚಾಲಕತ್ವದಲ್ಲಿ ಹರೀಶ್ ಬಂಟ್ವಾಳ್ ಹಲವು ದಿನಗಳಿಂದ ಪೂರ್ಣ ಜವಾಬ್ಧಾರಿ ವಹಿಸಿ ಓಡಾಡುತ್ತಿದ್ದಾರೆ. ಅವರೊಂದಿಗೆ ದಿನೇಶ್ ಮಡಪ್ಪಾಡಿ, ಶಂಕರ್ ಪೆರಾಜೆ, ಧ.ಗ್ರಾ ಯೋಜನೆಯ ಪದಾಧಿಕಾರಿಗಳೂ ಇದ್ದಾರೆ. ನೀವು ಕಾರ್ಯಕ್ರಮದಲ್ಲಿ ನಮ್ಮೊಂದಿಗಿರಿ.. ಈ ಜಗತ್ತಿಗೆ ದಂತಕತೆಯಾಗಿ ನಿಜ ಬದುಕು ಬದುಕಿದ ಗಾಂಧೀ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ. ಮುಂದಿನ ತಲೆಮಾರಿಗೂ ಒಂದಷ್ಟು ತಿಳಿಸೋಣ.
01.10.2019 ಡಾ.ಸುಂದರ ಕೇನಾಜೆ.
Comments
Post a Comment