ಭಾವುಕ ಕ್ಷಣ


                                                                           ಭಾವುಕ ಕ್ಷಣ
         ಒಂದು ಭಾವನಾತ್ಮಕ ಸಂದರ್ಭ, ಹಾಗೆಂದು ಅವರ ಪ್ರತಿಭೆಯ ಮುಂದೆ ನಾನು ಮಿಂಚುಹುಳು ಮಿನುಗುವ ಕೆಲಸ ಮಾತ್ರ ಮಾಡಿದ್ದೆ. ಆದರೆ ಅದಕ್ಕೊಂದು ಹೃದಯಸ್ಪರ್ಶಿ ಕೃತಜ್ಞತೆಯನ್ನು ಡಾ.ಪ್ರಭಾಕರ ಜೋಶಿ ದಂಪತಿಯವರು ಸಲ್ಲಿಸಿದರು. ಅವರ ಬಗ್ಗೆ ಪುಟ್ಟ ಕೃತಿ ಬರೆದ ನನ್ನನ್ನು, ಅದನ್ನು ಮಾಸ ಪತ್ರಿಕೆಯಲ್ಲಿ ಪ್ರಕಟಿಸಿದ ಎಂ.ನಾ.ಚಂಬಲ್ತಿಮಾರ್ ರವರನ್ನು, ಕೃತಿ ರೂಪ ಕೊಟ್ಟ ಕಲ್ಲೂರು ನಾಗೇಶ್ ರವರನ್ನು ಮಂಗಳೂರಿಗೆ ಕರೆದಿದ್ದರು. ಅಲ್ಲಿ ತುಳು-ಕನ್ನಡದ ಹಿರಿಯ ವಿದ್ವಾಂಸ ಡಾ.ಬಿ.ಎ.ವಿವೇಕ ರೈ, ಕರಾವಳಿಯ ಹಿರಿಯ ಸಂಘಟಕ ಜನಾರ್ದನ ಹಂದೆಯವರ ಸಮ್ಮುಖದಲ್ಲಿ ಭರ್ಜರಿ ಊಟದೊಂದಿಗೆ ವಿದ್ವತ್ಪೂರ್ಣ ಮಾತಿಗೆ ವೇದಿಕೆ ನಿರ್ಮಿಸಿದ್ದರು.
      ಪ್ರೊ. ರೈಯವರು 'ರೈ' ಪದದ ನಿಷ್ಪತ್ತಿ, ಕರಾವಳಿ ಭಾಗದ ಬಲ್ಲಾಳ ಮನೆತನ, ಅದರ ಅಧ್ಯಯನ, ಇನ್ನೂ ನಡೆಯಬೇಕಾದ ಕೆಲಸಗಳ ಬಗ್ಗೆ ಅಂತರಾಷ್ಟ್ರೀಯ ಮಟ್ಟದ ವಿಚಾರ ಗೋಷ್ಠಿಯೋ ಎಂಬಂತೆ ಈ ಆರೇ ಜನರ ಮುಂದೆಯೂ ವಿವರಿಸಿದರು. ಜೊತೆಗೆ ಜೋಶಿಯವರು ತಮ್ಮ ಆತ್ಮಕಥೆಯನ್ನು ಬರೆಯಲೇಬೇಕಾದ ಅನಿವಾರ್ಯ ಬರೆಯದಿದ್ದರೆ ಯಕ್ಷ ಪರಂಪರೆಗಾಗುವ ನಷ್ಟವನ್ನೂ ಒತ್ತಿ ಹೇಳಿದರು. ಜೋಶಿಯವರು ಸಿಹಿಯೊಳಗೆ ಔಷಧೀಯನ್ನಿರಿಸುವ ಅದೇ ಧಾಟಿಯ ಮಾತುಗಳನ್ನು ಊಟದಷ್ಟೇ ಭರ್ಜರಿಯಾಗಿ ಬಡಿಸಿದರು. ಊಟ ಮುಗಿಸಿ ಇನ್ನೇನೋ ಹೊರಡಬೇಕೆನ್ನುವ ಹೊತ್ತಿಗೆ ಜೋಶಿಯವರ ಪತ್ನಿ ಒಂದು ಶಾಲನ್ನು ತೆಗೆದು ನನ್ನ ಕುತ್ತಿಗೆಗೆ ಹಾಕಿ ಒಂದು ಪೊಟ್ಟಣವನ್ನೂ ಕೊಟ್ಟರು(ಫೋಟೊಕ್ಕಾಗಿ ಜೋಶಿಯವರು ಕೊಟ್ಟಂತೆ ಪುನರಭಿನಯ ಮಾಡಲಾಗಿದೆ). ಆ ಅಮ್ಮನ ಪ್ರೀತಿ ನನ್ನನ್ನು ಒಂದು ಕ್ಷಣ ಭಾವುಕನನ್ನಾಗಿಸಿತು. (ಹಾಗೆ ನೋಡಿದರೆ, ಆ ಅಮ್ಮನ ಬಗ್ಗೆ ನಾನು ಪುಸ್ತಕದಲ್ಲಿ ಎಲ್ಲೋ ಒಂದೆರಡು ವಾಕ್ಯ ಮಾತ್ರ ದಾಖಲಿಸಿದ್ದೇನಷ್ಟೇ.) 
      ಜೋಶಿಯಂತಹಾ ವಿದ್ವಾಂಸ ನಮ್ಮ ಸಣ್ಣ ಕೆಲಸಕ್ಕೂ ಕೃತಜ್ಞತೆ ಸಲ್ಲಿಸುವ ಪರಿ, ವಿವೇಕ ರೈಯವರಂತಹಾ ಶ್ರೇಷ್ಠ ವ್ಯಕ್ತಿತ್ವ ನಮ್ಮಂತಹಾ ಕಿರಿಯವರ ಜೊತೆ ಬೆರೆತ ರೀತಿ- ನಮಗೇ ದಾರಿ ತೋರಿಸುವಂತಿತ್ತು. ( ಈ ಆತ್ಮೀಯತೆಯನ್ನು ನಾನು ಪಾಲ್ತಾಡಿ, ಬಿಳಿಮಲೆ, ಹನೂರು, ಅಮೃತರು, ಹಿ.ಶಿಯಂತವರಲ್ಲೂ ಅನುಭವಿಸಿದ್ದೇನೆ.)ಅವರಿಗೆ, ಶ್ರೀಮತಿ ಜೋಶಿಯವರಿಗೆ ಪ್ರೀತಿಯ ಕೃತಜ್ಞತೆ ಸಲ್ಲಿಸುತ್ತಾ, ನಲವತ್ತೈದರ ಕೆಳಗಿದ್ದ ನಮ್ಮನ್ನು ನಾಚಿಸುವಂತೆ ಎಪ್ಪತ್ತರ ರೈಯವರು ಮತ್ತೂ ದಾಟಿದ ಜೋಶಿಯವರು ನೂರ್ಕಾಲ ಸ್ಪರ್ಧೆಯೋ ಎಂಬಂತೆ ಐಸ್ ಕ್ರೀಂ ತಿನ್ನುತ್ತಾ ಹೀಗೆ ತಮ್ಮ ಮನದಾಳವನ್ನು ಬಿಚ್ಚಿಡುತ್ತಾ ನಮಗೆಲ್ಲಾ ಪ್ರೇರಣೆ ನೀಡುತ್ತಿರಲಿ ಎಂದು ಆಶಿಸುತ್ತೇನೆ.
03.04.2019

Comments

  1. ಸಾಧಕ ಕಿರಿಯರಿಗೆ ಹಿರಿಯರ ಪ್ರೋತ್ಸಾಹ ಆಶೀರ್ವಾದ ಇದ್ದರೆ ಅದೇ ದೊಡ್ಡ ಸಮ್ಮಾನ
    ಲೇಖನ ಚೆನ್ನಾಗಿದೆ.. ತಮ್ಮ ಬರವಣಿಗೆಯ ಯಾತ್ರೆ ಶುಭಕರವಾಗಿರಲಿ....

    ReplyDelete

Post a Comment