ಯಕ್ಷಗಾನದ ಪ್ರಪ್ರಥಮ ಪಠ್ಯಪುಸ್ತಕ


                     ತೆಂಕು ಮತ್ತು ಬಡಗುತಿಟ್ಟು ಯಕ್ಷಗಾನದ ಪ್ರಪ್ರಥಮ ಪಠ್ಯಪುಸ್ತಕ ಮಾರುಕಟ್ಟೆಗೆ
           ತೆಂಕು ಮತ್ತು ಬಡಗುತಿಟ್ಟು ಯಕ್ಷಗಾನ ಕಲಿಕಾ ಪರಂಪರೆಯನ್ನು ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ ಬಂದಿದೆ. ಅನೇಕ ವರ್ಷಗಳ ಪರಿಶ್ರಮ ಮತ್ತು ನಿರೀಕ್ಷೆಯ ಗಳಿಗೆ ಇದೀಗ ಸಾಕಾರಗೊಂಡಿದೆ. ಯಕ್ಷಗಾನ ಅಭ್ಯಾಸಕ್ಕೆ ಲಿಖಿತರೂಪದ ಪಠ್ಯಪುಸ್ತಕವೊಂದು ಇತಿಹಾಸದಲ್ಲೇ ಮೊದಲ ಬಾರಿಗೆ ರಚನೆಗೊಳಿಸಲಾಗಿದೆ. ಕಳೆದ ಹತ್ತು ವರ್ಷಗಳ ಹಿಂದೆ ಆರಂಭಗೊಂಡಿದ್ದ ಪಠ್ಯಪುಸ್ತಕ ರಚನಾ ಕಾರ್ಯದ ಒಂದು ಹಂತ ಮುಕ್ತಾಯಗೊಂಡಿದೆ. ಇದೀಗ ಆಸಕ್ತರಿಗೆ ಬಹು ನಿರೀಕ್ಷೆಯ ಪಠ್ಯಪುಸ್ತಕ ಮಾರುಕಟ್ಟೆಯಲ್ಲಿ ಲಭ್ಯವಾಗಿದೆ.
         ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಪ್ರಥಮ ಅವಧಿಯ ಮಹತ್ವಾಕಾಂಕ್ಷೀಯಕ್ಷ ಶಿಕ್ಷಣ ಯೋಜನೆಯ ಸಾಕಾರ ರೂಪ ಇದಾಗಿರುತ್ತದೆ. ಮೂಲಕ 9 ವರ್ಷಗಳ ಸುದೀರ್ಘ ಪರಿಶ್ರಮಕ್ಕೆ ಫಲ ಸಿಕ್ಕಿದ್ದು, ತೆಂಕು ಮತ್ತು ಬಡಗಿನ ಯಕ್ಷಗಾನ ಕಲಿಕೆಗೆ ಹೊಸ ಆಯಾಮ ದೊರಕಿದಂತಾಗಿದೆ. ಕರ್ನಾಟಕ ಪಠ್ಯಪುಸ್ತಕ ಸಂಘ (ರಿ) ಇದರ ವತಿಯಿಂದ ತಯಾರಿಸಲಾದ ಪಠ್ಯಪುಸ್ತಕದ ಪ್ರಾಥಮಿಕ ವಿಭಾಗ ಮುದ್ರಣಗೊಂಡಿದ್ದು ಕಲಿಕಾರ್ಥಿಗಳಿಗೆ ಲಭ್ಯವಾಗಿದೆ. ಕರಾವಳಿ ಯಕ್ಷಗಾನ ಚರಿತ್ರೆಯ ಪ್ರಥಮ ಯಕ್ಷಗಾನ ಪಠ್ಯಪುಸ್ತಕ ಎನ್ನುವ ದಾಖಲೆಗೆ ಪಾತ್ರವಾಗಿದೆ.
         ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ 2009 ಪ್ರಥಮ ಅವಧಿಯಲ್ಲಿ, ಕರ್ನಾಟಕ ಪ್ರೌಢಶಾಲಾ ಪರೀಕ್ಷಾ ಮಂಡಳಿ ನಡೆಸುವ ಇತರ ಪರೀಕ್ಷೆಗಳಲ್ಲಿ ಯಕ್ಷಗಾನಕ್ಕೂ ಜೂನಿಯರ್, ಸೀನಿಯರ್, ವಿದ್ವತ್ ಪರೀಕ್ಷೆಗಳನ್ನು ನಡೆಸಬೇಕೆಂದು ರಾಜ್ಯ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಕಾರ್ಯಕ್ಕಾಗಿ ಅಕಾಡೆಮಿಯ ಅಂದಿನ ಸದಸ್ಯರಾಗಿದ್ದ ಡಾ.ಸುಂದರ ಕೇನಾಜೆಯವರನ್ನು ಸಂಚಾಲಕರಾಗಿ ಅಕಾಡೆಮಿ ನೇಮಕ ಮಾಡಿತ್ತು. ಸರಕಾರ, ಅಕಾಡೆಮಿ ಮತ್ತು ಪಠ್ಯಪುಸ್ತಕ ಸಂಘಗಳೊಂದಿಗಿನ ಸಮನ್ವಯದಿಂದ ಪಠ್ಯಪುಸ್ತಕ ರಚನಾಕಾರ್ಯದ ಸುಧೀರ್ಘ ಕೆಲಸವನ್ನು ಇವರು ನಿರ್ವಹಿಸಿದ್ದರು. ನೂತನ ಯಕ್ಷಗಾನ ಅಕಾಡೆಮಿಯ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಯಕ್ಷ ಶಿಕ್ಷಣ ಪಠ್ಯವಸ್ತುವಿನ ರಚನಾ ಕಾರ್ಯಾಗಾರ ಇವೆರಡು ಅಂದು ಸುಳ್ಯದಲ್ಲಿ ನಡೆಸಲಾಗಿತ್ತು. ಪ್ರಕಾರ ಪಠ್ಯ ತಯಾರಿಕೆಗಾಗಿ ಕರ್ನಾಟಕ ಪಠ್ಯಪುಸ್ತಕ ಸಂಘ (ರಿ) ಬೆಂಗಳೂರು ಇವರಿಗೂ ಸರಕಾರಿ ಹಂತದಿಂದ ಸೂಚನೆ ನೀಡಲಾಗಿತ್ತು. ಅದರಂತೆ ಕರ್ನಾಟಕ ಪಠ್ಯ ಪುಸ್ತಕ ಸಂಘ ಪಠ್ಯವಸ್ತು ಪರಿಸ್ಕರಣೆಯನ್ನು ತಜ್ಞ ಸಮಿತಿಯಿಂದ ಮಾಡಿಸಿ, ಅದಕ್ಕೆ ಮತ್ತೆ ಸರಕಾರಿ ಹಂತದಿಂದ ಒಪ್ಪಿಗೆ ಪಡೆದುಕೊಂಡಿತು. ನಂತರ ಪ್ರಾಥಮಿಕ ಮತ್ತು ಮಾಧ್ಯಮಿಕ ಎನ್ನುವ ಎರಡು ಪ್ರತ್ಯೇಕ ಪಠ್ಯಪುಸ್ತಕ ರಚನಾ ಸಮಿತಿಯನ್ನು ರಚಿಸಿತು. ನಂತರ ಎರಡೂ ಸಮಿತಿಗಳು ಜೊತೆಯಾಗಿ ಮತ್ತು ಪ್ರತ್ಯೇಕವಾಗಿ ಹಲವು ಸಭೆಗಳನ್ನು ನಡೆಸಿ ಪಠ್ಯಪುಸ್ತಕದ ಕರಡು ತಯಾರಿತು. ಕರಡಿಗೆ ಸರಕಾರದ ಹಂತದಿಂದ ಮತ್ತೆ ಒಪ್ಪಿಗೆ ಪಡೆದು ಇದೀಗ ಅದು ಪಠ್ಯಪುಸ್ತಕವಾಗಿ ಮುದ್ರಣಗೊಂಡಿದೆ. ಪಠ್ಯ ತಯಾರಿಯಲ್ಲಿ ಪ್ರಕಾಶ್ ಮೂಡಿತ್ತಾಯ ಮತ್ತು ಕರಡು ಪರಿಶೀಲನೆಯಲ್ಲಿ ಪ್ರೊ.ಎಂ.ಎಲ್ ಸಾಮಗ ಹೆಚ್ಚು ಮುತುವರ್ಜಿ ವಹಿಸಿದರು. ಇತರ ಸದಸ್ಯರು ಸಕಾಲದಲ್ಲಿ ಪಠ್ಯ ರಚನಾ ಕಾರ್ಯದಲ್ಲಿ ತೊಡಗಿಕೊಂಡರು. ಕಳೆದ 10ವರ್ಷಗಳ ನಿರಂತರ ಪರಿಶ್ರಮದ ಫಲವಾಗಿ ಇದೀಗ ಪ್ರಾಥಮಿಕ ಹಂತದ ಪುಸ್ತಕ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಾಗಿರುತ್ತದೆ. ಮುಂದೆ ಇದರ ಮುಂದುವರಿದ ಭಾಗವಾದ ಮಾಧ್ಯಮಿಕ ಹಂತ ಮತ್ತು ವಿದ್ವತ್ ಹಂತ ರಚನೆಯಾಗಲಿದೆ. ಇದರಲ್ಲಿ ಮಾಧ್ಯಮಿಕ ಹಂತದ ಎಲ್ಲಾ ಕೆಲಸ ಕಾರ್ಯಗಳು ಪೂರ್ಣಗೊಂಡಿದ್ದು ಅದು ಸದ್ಯದಲ್ಲೇ ಮುದ್ರಣಗೊಳ್ಳುವ ನಿರೀಕ್ಷೆ ಇದೆ.
         ಪ್ರಸ್ತುತ ಪಠ್ಯಪುಸ್ತಕದ ಬೆಲೆ ಕೇವಲ 99 ರೂಪಾಯಿ ಆಗಿರುತ್ತದೆ. ಸದ್ಯ ಇದು ಬೆಂಗಳೂರು, ಮೈಸೂರು, ಧಾರವಾಡ ಹಾಗೂ ಕಲಬುರುಗಿಯ ಸರಕಾರಿ ಮುದ್ರಣಾಲಯಗಳಲ್ಲಿ ಮಾರಟಕ್ಕೆ ಲಭ್ಯವಿದೆ. ಸ್ಥಳಿಯ ಪುಸ್ತಕ ಮಳಿಗೆಯವರು ಇದನ್ನು ಮುದ್ರಣಾಲಯಗಳಿಂದ ಪಡೆದು ಭಾಗದಲ್ಲಿ ಯಕ್ಷಗಾನ ಕಲಿಕಾರ್ಥಿಗಳಿಗೆ ಮಾರಾಟ ಮಾಡಿದರೆ ಅನುಕೂಲವಾಗುತ್ತದೆ.. ಪಠ್ಯಪುಸ್ತಕದ ಆಧಾರದಲ್ಲಿ ಕಲಿಕಾರ್ಥಿಗಳು ಖಾಸಗಿಯಾಗಿ ಗುರುಮುಖೇನ ಕಲಿಕೆ ನಡೆಸಬಹುದು. ನಂತರ ಕರ್ನಾಟಕÀ ಪ್ರೌಢಶಾಲಾ ಪರೀಕ್ಷಾ ಮಂಡಳಿ ನಡೆಸುವ ಇತರ ಪರೀಕ್ಷೆಗಳಲ್ಲಿ ಯಕ್ಷಗಾನ ಜೂನಿಯರ್ ಪರೀಕ್ಷೆಗೆ ಬರೆದು ಸರ್ಟಿಫಿಕೇಟ್ ಪಡೆದುಕೊಳ್ಳಬಹುದು. ಜೂನಿಯರ್ ಪರೀಕ್ಷೆ ಬರೆಯಲು ಕನಿಷ್ಠ ಎರಡು ವರ್ಷಗಳ ಕಲಿಕೆಯನ್ನು ನಿಗದಿಪಡಿಸಲಾಗಿದೆ. ಈಗಾಗಲೇ ಸಿಧ್ಧಗೊಂಡಿರುವ ಸೀನಿಯರ್ ಪಠ್ಯ ಹೊತ್ತಿಗಾಗಲೇ ಮುದ್ರಣಗೊಳ್ಳುವ ಸಾಧ್ಯತೆ ಇದೆ. ಇದಕ್ಕೂ ಕೂಡ ಎರಡು ವರ್ಷಗಳ ಕಲಿಕೆಯನ್ನು ನಿಗದಿಪಡಿಸಲಾಗಿದೆ. ನಂತರ ವಿದ್ವತ್ ಎರಡು ಹಂತದಲ್ಲಿ ನಡೆಯಲಿದೆ. ಇದಕ್ಕೆ ಪಠ್ಯವಸ್ತುವಿನಿಂದ ಹಿಡಿದು ಪುಸ್ತಕ ರಚನೆ ಹಾಗೂ ಇತರ ಕಾರ್ಯಗಳು ನಡೆಯಬೇಕಾಗಿದೆ. ಪ್ರಾಥಮಿಕ ಪಠ್ಯಪುಸ್ತಕದ ಖಾಸಗೀ ಬಿಡುಗಡೆ ಕಾರ್ಯಕ್ರಮ ಹಾಗೂ ಇದರ ಮೊದಲ ಅನುಷ್ಠಾನ ಕಾರ್ಯದ ಆರಂಭ ಸುಳ್ಯದ ಶಿಕ್ಷಕರ ಯಕ್ಷಗಾನ ಒಕ್ಕೂಟ ಹಾಗೂ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ಮೂಲಕ ಇದೇ ಒಕ್ಟೋಬರ್ 12ರಂದು ನಡೆಯಲಿದೆ.
         ಯಕ್ಷಗಾನವನ್ನು ಮುಂದಿನ ತಲೆಮಾರಿಗೆ ಅಧಿಕೃತವಾಗಿ ವರ್ಗಾಯಿಸುವ ನೆಲೆಯಲ್ಲಿ ಪಠ್ಯ ಪುಸ್ತಕದ ರಚನೆ ಹಾಗೂ ಅದರ ಕಲಿಕೆ ಮಹತ್ವಪೂರ್ಣವಾದುದು. ಅನೇಕ ಅಡೆತಡೆ ಹಾಗೂ ಏಳಿಬೀಳುಗಳ ಮಧ್ಯೆ ಇದೀಗ ಚಾರಿತ್ರಿಕ ಪಠ್ಯಪುಸ್ತಕ ಹೊರಬಂದಿದೆ. ಇದರಲ್ಲೂ ಕೆಲವೊಂದು ಲೋಪಗಳಿರುವ ಸಾಧ್ಯತೆ ಇದೆ. ಸಾರ್ವಜನಿಕ ಚರ್ಚೆಯ ನಂತರ ಲೋಪಗಳನ್ನು ಸರಿಪಡಿಸಿ ಮರುಮುದ್ರಣ ಕಾಣುವ ಸಾಧ್ಯತೆಯೂ ಇದೆ. ಇದನ್ನು ಪ್ರಥಮವಾಗಿ ಕಾರ್ಯಗತಗೊಳಿಸುವ ಸಂದರ್ಭದಲ್ಲಿ ಕಲಿಸುವ ಗುರುಗಳಿಗೆ ವಿಶೇಷ ತರಬೇತಿ ನೀಡುವ ಅಗತ್ಯವೂ ಇದೆ. ಇದನ್ನು ಅಕಾಡೆಮಿಗಳು, ಸಂಘಸಂಸ್ಥೆಗಳು ಶೀಘ್ರದಲ್ಲೇ ನಡೆಸಿದರೆ ಉತ್ತಮ. ಪಠ್ಯಪುಸ್ತಕ ಹೊರಬರಲು ಕಾರಣರಾದ ಸಮಸ್ತರಿಗೂ ಇದರ ಸಮಿತಿಯ ಎಲ್ಲರ ವತಿಯಿಂದ ಹಾಗೂ ಯಕ್ಷ ಶಿಕ್ಷಣ ಸಂಚಾಲಕನ ವೈಯಕ್ತಿಕ ನೆಲೆಯಿಂದ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಗುರುಗಳು, ಕಲಿಕಾರ್ಥಿಗಳು ಪಠ್ಯಪುಸ್ತಕದ ಆಧಾರದಲ್ಲಿ ಯಕ್ಷಗಾನ ಕಲೆಯನ್ನು ಔಪಚಾರಿಕವಾಗಿ ಕಲಿಯುವ, ಕಲಿಸುವ ಕಾರ್ಯ ನಡೆಯಲಿ, ಮೂಲಕ ಸರಕಾರಿ ಮಟ್ಟದ ಸರ್ಟಿಫಿಕೇಟ್ ಕೋರ್ಸ್ ಸದುಪಯೋಗವಾಗಲಿ ಎಂದು ಆಶಿಸುತ್ತೇವೆ.
ಪಠ್ಯದ ಒಳಗೆ
        ಈಗ ಮಾರುಕಟ್ಟೆಗೆ ಬಂದಿರುವ ಪ್ರಾಥಮಿಕ ವಿಭಾಗದ ಪಠ್ಯಪುಸ್ತಕದಲ್ಲಿ ತೆಂಕು ಮತ್ತು ಬಡಗುತಿಟ್ಟು ಯಕ್ಷಗಾನದ ಕಲಿಕಾ ವಿಷಯಗಳನ್ನು ಒಳಗೊಂಡಿದೆ. ಒಟ್ಟು ನಾಲ್ಕು ಪ್ರಮುಖ ಅಧ್ಯಾಯಗಳಲ್ಲಿ ಮತ್ತೆ ಘಟಕಗಳನ್ನು ವಿಭಾಗಿಸಿ ಮಕ್ಕಳ ಕಲಿಕೆಗೆ ಪೂರಕವಾಗುವಂತೆ ರೂಪಿಸಲಾಗಿದೆ. ತೆಂಕು ಮತ್ತು ಬಡಗಿನ ಸಮಾನ ಅಂಶಗಳನ್ನು ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಪ್ರತ್ಯೇಕ ಘಟಕಗಳಲ್ಲಿ ವಿವರಣೆ ನೀಡಲಾಗಿದೆ. ಅಧ್ಯಾಯ ಒಂದರಲ್ಲಿ ಯಕ್ಷಗಾನದ ಸ್ವರೂಪಕ್ಕೆ ಸಂಬಂಧಿಸಿದಂತೆ ಯಕ್ಷಗಾನದ ಪರಿಚಯ, ಅದರ ಅಂಗಗಳು ಮತ್ತು ಇತಿಹಾಸವನ್ನು ವಿವರಿಸಲಾಗಿದೆ. ಅಧ್ಯಾಯ ಎರಡರಲ್ಲಿ ಯಕ್ಷಗಾನದ ರಂಗಸ್ಥಳ ಹಾಗೂ ವೇಷಭೂಷಣಗಳ ಬಗ್ಗೆ ತಿಳಿಸುತ್ತಾ ಚೌಕಿ ಮತ್ತು ರಂಗಸ್ಥಳ, ಬಣ್ಣಗಾರಿಕೆ, ವೇಷಭೂಷಣಗಳ ಬಗ್ಗೆ ತಿಳಿಸಲಾಗಿದೆ.
     ಅಧ್ಯಾಯ ಮೂರರಲ್ಲಿ ಯಕ್ಷಗಾನ ಪ್ರಸಂಗಗಳು ಮತ್ತು ಅರ್ಥಗಾರಿಕೆಯ ಬಗ್ಗೆ ವಿವರಿಸಲಾಗಿದೆ. ಇಲ್ಲಿ ಮತ್ತೆ ಮೂರು ಘಟಕಗಳನ್ನು ಮಾಡಲಾಗಿದ್ದು ಯಕ್ಷಗಾನ ಪ್ರಸಂಗಗಳು, ಅರ್ಥಗಾರಿಕೆ ಮತ್ತು ಸಂಭಾಷಣೆ, ಅಭ್ಯಾಸಕ್ಕಾಗಿ ಕೆಲವು ಪ್ರಸಂಗಗಳನ್ನು ನೀಡಲಾಗಿದೆ. ಕೊನೆಯ ಹಾಗೂ ಹೆಚ್ಚು ಪ್ರಾಯೋಗಿಕ ಅಧ್ಯಾಯ ಯಕ್ಷಗಾನ ಶಿಕ್ಷಣ. ಇಲ್ಲಿ ಆರು ಘಟಕಗಳನ್ನು ರಚಿಸಲಾಗಿದೆ. ಅದರಲ್ಲಿ ಲಯ, ಕಾಲ, ತಾಳಗಳ ಪರಿಕಲ್ಪನೆ, ತೆಂಕುತಿಟ್ಟು ತಾಳಗಳು ಮತ್ತು ಹೆಜ್ಜೆಗಾರಿಕೆ, ತೆಂಕುತಿಟ್ಟಿನ ರಂಗಕ್ರಮಗಳು, ಬಡಗುತಿಟ್ಟಿನ ತಾಳಗಳು ಮತ್ತು ಹೆಜ್ಜೆಗಾರಿಕೆ, ಬಡಗುತಿಟ್ಟಿನ ರಂಗಕ್ರಮಗಳು, ಅಭಿನಯ ಮತ್ತು ರಂಗಗತಂತ್ರಗಳು ಇವುಗಳನ್ನು ಅಳವಡಿಸಿಕೊಳ್ಳಲಾಗಿದೆ.
       ಎಲ್ಲಾ ಘಟಕಗಳ ಕೊನೆಯಲ್ಲಿ ಮೌಲ್ಯಮಾಪನಕ್ಕಾಗಿ ಅಭ್ಯಾಸ ಪ್ರಶ್ನೆಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಕಲಿಕೆ ಸುಲಭವಾಗಲು ಹಲವು ಸಂಕೇತಗಳನ್ನು ನೀಡಲಾಗಿದೆ. ಸಂಕೇತಗಳ ಮೂಲಕ ಯಕ್ಷಗಾನವನ್ನು ಅಭ್ಯಾಸ ಮಾಡುವುದು ಇದೇ ಮೊದಲ ಪ್ರಯೋಗವಾಗಿದೆ. ಪ್ರಯೋಗಕ್ಕೆ ಹೆಚ್ಚಿನ ಕಾಲಾವಕಾಶ ಹಾಗೂ ಪರಿಶ್ರಮ ಹಾಕಲಾಗಿದೆ. ಇದನ್ನು ಪಠ್ಯಪುಸ್ತಕ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ ತಜ್ಞರು ರೂಪಿಸಿರುತ್ತಾರೆ. ಅಲ್ಲದೇ ಇನ್ನು ಪ್ರ್ರಾಯೋಗಿಕವಾಗಿ ಈಗಾಗಲೇ ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟ್ಟು ಪಠ್ಯಕ್ಕೆ ಇಲ್ಲಿ ಅಳವಡಿಸಲಾಗಿದೆ. ಇಲ್ಲಿ ಅನೇಕ ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ. ಎಲ್ಲಾ ಸಂದರ್ಭದಲ್ಲಿ ಪ್ರಾಥಮಿಕ ವಿದ್ಯಾರ್ಥಿಗಳ ಸಾಮಥ್ರ್ಯವನ್ನು ಪರಿಗಣಿಸಿ ವಿಷಯದ ವಿವರಣೆ ನೀಡಲಾಗಿದೆ. ಕಠಿಣತೆಯ ಮಟ್ಟವನ್ನು ಎಲ್ಲಾ ವಿಭಾಗದಲ್ಲೂ ಸಮಾನವಾಗಿ ಹಂಚಲಾಗಿದೆ.
      ರಾಷ್ಟ್ರೀಯ ಪಠ್ಯಕ್ರಮ 2005 ಸೂತ್ರದಂತೆ ಪಠ್ಯಪುಸ್ತಕದ ರಚನೆ ನಡೆದಿರುತ್ತದೆ. ಒಟ್ಟು 178 ಪುಟಗಳ ಪ್ರಾಥಮಿಕ ವಿಭಾಗದ ಪಠ್ಯಪುಸ್ತಕವು ಬಹುವರ್ಣಗಳಿಂದ ಕೂಡಿದೆ. ಇದು ಸರಕಾರಿ ಮುದ್ರಣಾಲಯ ವಿಭಾಗ ಬೆಂಗಳೂರು 080- 22213474, ಮೈಸೂರು 0821-2540684, ಧಾರವಾಡ 0836-2748145, ಕಲಬುರುಗಿ 0847-2220299 ಇಲ್ಲಿ ಲಭ್ಯವಿದೆ. ಆಸಕ್ತರು ಸಂಪರ್ಕಿಸಬಹುದು. ಯಕ್ಷಗಾನದ ಚರಿತ್ರೆಯಲ್ಲಿ ಪ್ರಥಮವಾಗಿ ಪಠ್ಯವೊಂದನ್ನು ತಯಾರಿಸುವಾಗ ಉಂಟಾಗುವ ಸವಾಲು, ಸಮಯವಕಾಶ ಹಾಗೂ ಸಣ್ಣಪಟ್ಟ ಲೋಪಗಳು ಇಲ್ಲಿಯೂ ಆಗಿರುವ ಸಾಧ್ಯತೆ ಇದೆ. ಆದರೆ ಬಹುತೇಕ ತಪ್ಪುಗಳನ್ನು ಸರಿಪಡಿಸಲಾಗಿದೆ. ಇನ್ನು ಇದ್ದಲ್ಲಿ ಅದನ್ನು ಮುಂದಿನ ಹಂತದ ಪಠ್ಯಪುಸ್ತಕದ ಪರಿಸ್ಕರಣೆಯಲ್ಲಿ ಸರಿಪಡಿಸುವ ಸಾಧ್ಯತೆ ಇದೆ. ಇನ್ನು ಉಳಿದಿರುವ ಇರುವ ಎರಡು ಪಠ್ಯಪುಸ್ತಕ ಅತಿ ಶೀಘ್ರ ಹೊರಬರಲೆಂದು ಆಶಿಸುತ್ತೇವೆ.

ಯಕ್ಷಗಾನ ಪಠ್ಯ ತಯಾರಿ ಪ್ರಕ್ರಿಯೆ 2009-2019
ಯಕ್ಷ ಶಿಕ್ಷಣ ಅಂದರೆ
       ಕರ್ನಾಟಕ ಪೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರತಿ ವರ್ಷಇತರ ಪರೀಕ್ಷೆಗಳು ಎಂದು ಕಲೆಗಳಿಗೆ ಸಂಬಂಧಿಸಿ ಪರೀಕ್ಷೆ ನಡೆಸಿ ಸರ್ಟಿಫಿಕೇಟ್ಗಳನ್ನು ನೀಡುತ್ತದೆ. ಪರೀಕ್ಷೆಗಳಲ್ಲಿ ಮುಖ್ಯವಾಗಿ ಸಂಗೀತ, ಭರತನಾಟ್ಯ, ಚಿತ್ರಕಲೆ ಇತ್ಯಾದಿಗಳು ಸೇರಿಕೊಂಡಿವೆ. ಪ್ರಕಾರಗಳಿಗೆ ಸಾಮಾನ್ಯವಾಗಿ ಮೂರು ಹಂತಗಳಲ್ಲಿ ಅಂದರೆ ಜೂನಿಯರ್, ಸೀನಿಯರ್, ವಿದ್ವತ್ ಹೆಸರಿನಿಂದ ಪರೀಕ್ಷೆಗಳು ನಡೆಯುತ್ತದೆ. ವಿಭಾಗದಲ್ಲಿ ತೇರ್ಗಡೆಯಾದವರೇ ಇಂದು ಶಾಸ್ತ್ರೀಯ ವಿಭಾಗದ ಕಲಾವಿದರಾಗಿ, ಗುರುಗಳಾಗಿ ಬೆಳೆದು ನಿಂತಿರುವವರು. ರೀತಿ ಪರೀಕ್ಷೆ ನಡೆಸುವುದಕ್ಕಾಗಿ ಕಲೆಗಳಿಗೆ ಬಹಳ ವರ್ಷಗಳ ಹಿಂದೆಯೇ ತಜ್ಞರ ಮೂಲಕ ಪಠ್ಯರಚನೆ ಮಾಡಲಾಗಿದೆ. ಕರ್ನಾಟಕ ಪಠ್ಯ ಪುಸ್ತಕ ಸಂಘ ಪಠ್ಯಪುಸ್ತಕ ರಚಿಸುತ್ತದೆ. ಪರೀಕ್ಷಾ ಮಂಡಳಿ ಖಾಸಗಿ ಸಂಸ್ಥೆಗಳ ಕಲಿಕಾರ್ಥಿಗಳಿಗೆ ಪರೀಕ್ಷೆ ನಡೆಸುತ್ತದೆ. ಇದರಿಂದ ಇಂತಹಾ ಕಲೆಗಳಿಗೆ ಸರಕಾರದಿಂದ ಒಂದು ಅಧಿಕೃತ ಮಾನ್ಯತೆ ದೊರಕಿದಂತಾಗಿದೆ ಮತ್ತು ಇವುಗಳ ಬೆಳವಣಿಗೆಗೆ ಅನುಕೂಲವೂ ಆಗಿದೆ. ಆದರೆ ಯಕ್ಷಗಾನದಂತಂತಹಾ ಉನ್ನತ ವ್ಯಾಪ್ತಿ ಮತ್ತು ಬಹುಶ್ರುತಕಲೆಯ ಕಲಿಕೆಗೆ ಸರಕಾರಿ ಅಧಿಕೃತ ಸಂಸ್ಥೆಯಿಂದ ಕೆಲಸ ನಡೆದದ್ದು ಕಡಿಮೆ. ಯಕ್ಷಗಾನಕ್ಕೆ ಶಾಸ್ತ್ರೀಯ ಹಿನ್ನಲೆ ಇದ್ದರೂ ಅದು ಜನಪದ ಮಾದರಿಯ ಕಲಿಕೆಯನ್ನೇ ರೂಢಿಸಿಕೊಂಡು ಬಂದಿದೆ. ಹಿನ್ನಲೆಯಲ್ಲಿ ಯಕ್ಷಗಾನಕ್ಕೂ ಅಧಿಕೃತ ಸಂಸ್ಥೆಯ ಮೂಲಕ ಔಪಚಾರಿಕ ಕಲಿಕೆ ನಡೆಯಬೇಕೆಂಬ ಆಶಯವೇ ಯಕ್ಷ ಶಿಕ್ಷಣ.ಇದು ಹತ್ತು ವರ್ಷಗಳ ಹಿಂದೆ ಸುಳ್ಯದ ಶಿಕ್ಷಕರ ಯಕ್ಷಗಾನ ಒಕ್ಕೂಟದಲ್ಲಿ ಚರ್ಚೆಯಾಗಿ ಒಂದಷ್ಟು ಮಕ್ಕಳಿಗೆ ಪ್ರಾಯೋಗಿಕವಾಗಿಯೂ ಮಾಡಿ ನೋಡಿದ ಸಂಗತಿ ವಿಸ್ತøತರೂಪ.
ಪಠ್ಯಕ್ರಮದ ತಯಾರಿ
        ನಂತರ ಯಕ್ಷಗಾನ ಅಕಾಡೆಮಿಗೆ ಸದಸ್ಯನಾಗಿ ನೇಮಕವಾದ ನಾನು ಒಕ್ಕೂಟದ ಆಶಯವನ್ನು ಸರಕಾರಿ ಮಟ್ಟದಲ್ಲಿ ಜಾರಿಗೆ ತರುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದೆ. ‘ಯಕ್ಷ ಶಿಕ್ಷಣ ಎನ್ನುವ ಹೆಸರಿನ ಪ್ರಸ್ತಾವನೆಗೆ ಅಕಾಡೆಮಿ ತನ್ನ ಮೊದಲ ಸಭೆಯಲ್ಲಿ ಒಪ್ಪಿಗೆ ಕೊಟ್ಟಿತು. ಅದರ ಸಂಚಾಲಕನಾಗಿ ನನ್ನನ್ನು ನೇಮಕ ಮಾಡಿತು. (ನಾನಾಗ ಕೆಲವು ತರಗತಿಗಳ ಪಠ್ಯಪುಸ್ತಕ ಸಮಿತಿಯ ಸದಸ್ಯನೂ ಆಗಿದ್ದೆ)ಯಕ್ಷಗಾನ ಅಕಾಡೆಮಿಯ ಮೊದಲ ಕಾರ್ಯಕ್ರಮದ ಉದ್ಘಾಟನೆ ಹಾಗೂ ಯಕ್ಷ ಶಿಕ್ಷಣ ಕಾರ್ಯಗಾರ ಇವೆರಡನ್ನೂ ಸುಳ್ಯದಲ್ಲಿ 2009 ಜನವರಿಯಲ್ಲಿ ನಡೆಸಲಾಯಿತು. ಎರಡು ದಿನ ನಡೆದ ಕಾರ್ಯಾಗಾರದಲ್ಲಿ ತೆಂಕು ಮತ್ತು ಬಡಗಿನ ಸುಮಾರು 60ಕ್ಕೂ ಹೆಚ್ಚು ಹಿರಿಯ ಕಿರಿಯ ಕಲಾವಿದರು, ವಿದ್ವಾಂಸರು, ವಿಮರ್ಶಕರು, ಗುರುಗಳು ಸೇರಿದ್ದರು. ವಿಭಾಗವಾರು ಚರ್ಚೆ, ಸಂವಾದ ಮತ್ತು ಅಭಿಪ್ರಾಯ ಹಂಚಿಕೆಯ ಮೂಲಕ ಯಕ್ಷಗಾನದ ಜೂನಿಯರ್ ಮತ್ತು ಸೀನಿಯರ್ ವಿಭಾಗಕ್ಕೆ ಪಠ್ಯಕ್ರಮವನ್ನು ರಚಿಸಲಾಯಿತು. ಈಗಾಗಲೇ ಹಲವು ಪಠ್ಯಪುಸ್ತಕ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ್ದ ಸುಳ್ಯದ ಪ್ರಕಾಶ್ ಮೂಡಿತ್ತಾಯರು ಹಂತದಲ್ಲಿ ಪಠ್ಯಪುಸ್ತಕ ಸಂಘದ ನಿಯಮಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಿದರು. ನಂತರ ಇದರ ಪರಿಸ್ಕರಣೆಯನ್ನು ಪಠ್ಯಪುಸ್ತಕ ಸಂಘ ವಿವಿಧ ಹಂತದಲ್ಲಿ ತಜ್ಞರಿಂದ ನಡೆಸಿತು.
       ಹೀಗೆ ರಚನೆಯಾದ ಪಠ್ಯಕ್ರಮದ ಅನುಮೋದನೆಯನ್ನು ಡಿ.ಎಸ್..ಆರ್.ಟಿ ಬೆಂಗಳೂರು ಇಲ್ಲಿಂದ ಪಡೆಯಬೇಕಾಗಿತ್ತು. ನಂತರ ಅಲ್ಲಿಂದ ಅದನ್ನು ಸರಕಾರದ ಒಪ್ಪಿಗೆಗಾಗಿ ಕಳುಹಿಸಬೇಕಾಗಿತ್ತು. ಸರಕಾರದ ಪ್ರಧಾನ ಕಾರ್ಯದರ್ಶಿ ಹಂತದಿಂದ ಶಿಕ್ಷಣ ಸಚಿವರ ವರೆಗೂ ಕಡತ ಹೋಗಬೇಕಾಗಿತ್ತು. ಹೀಗೆ ಹೋಗಬೇಕಾದ ಕಡತ ಆಗಾಗ ಅಜ್ಞಾತವಾಸ ಅನುಭವಿಸುತ್ತಲೂ ಇತ್ತು. ಸಂದರ್ಭದಲ್ಲೆಲ್ಲಾ ಒಬ್ಬೊಬ್ಬ ಅಧಿಕಾರಿಗಳು ಸಹಕರಿಸುತ್ತಾ ಬಂದಿದ್ದರು. ಡಿ.ಎಸ್..ಆರ್.ಟಿಯಲ್ಲಿ ಆಗ ಹಿರಿಯ ಸಹಾಯಕ ನಿರ್ದೇಶಕರು, ಆತ್ಮೀಯರೂ ಆದ ಗಂಗಮಾರೇ ಗೌಡರು ಕಡತವನ್ನು ಮುಂದಕ್ಕೆ ಕಳುಹಿಸಲು ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ಹಂತದಲ್ಲಿ ಉತ್ತರಕನ್ನಡದ ಯಕ್ಷಗಾನ ಪ್ರೇಮಿ ಪಟಗಾರ್ ಅಧೀನ ಕಾರ್ಯದರ್ಶಿಯಾಗಿದ್ದರು. ಅವರು ಕಡತವನ್ನು ಮುಂದಕ್ಕೆ ಕಳುಹಿಸಿದರು. ಶಿಕ್ಷಣ ಸಚಿವರ ಹಂತದಲ್ಲಿ ಅಕಾಡೆಮಿಯ ಅಧ್ಯಕ್ಷರು ಹಾಗೂ ಇತರ ಕೆಲವು ಸದಸ್ಯರೊಂದಿಗೆ ಭೇಟಿ ಮಾಡಿ ಒಪ್ಪಿಗೆ ಪಡೆದುಕೊಳ್ಳಲಾಯಿತು.
ಪಠ್ಯಪುಸ್ತಕದ ಕೆಲಸ
    ಪಠ್ಯಕ್ರಮಕ್ಕೆ ಒಪ್ಪಿಗೆ ದೊರಕಿದ ನಂತರ ಪಠ್ಯಪುಸ್ತಕ ರಚನೆಗೆಕರ್ನಾಟಕ ಪಠ್ಯಪುಸ್ತಕ ಸಂಘ ಮುಂದಾಗಬೇಕು. ಹಿನ್ನಲೆಯಲ್ಲಿ  ಪಠ್ಯಪುಸ್ತಕ ರಚನೆಗಾಗಿ ಅಕಾಡೆಮಿಯೊಂದಿಗೆ ಅಭಿಪ್ರಾಯ ಪಡೆದುಕೊಂಡಿತು. ಪಠ್ಯಪುಸ್ತಕ ಸಂಘದ ನಿಯಮದ ಪ್ರಕಾರ, ಜೂನಿಯರ್, ಮತ್ತು ಸೀನಿಯರ್ ವಿಭಾಗದ ಪಠ್ಯಪುಸ್ತಕ ರಚನೆಗೆ ಒಬ್ಬೊಬ್ಬ ಅಧ್ಯಕ್ಷ, ಪರಿಶೀಲಕ ಹಾಗೂ ಐವರು ಸದಸ್ಯರ ರಚನಾ ಸಮಿತಿ ಬೇಕಿತ್ತು. ಜೂನಿಯರ್ ವಿಭಾಗದ ಅಧ್ಯಕ್ಷರಾಗಿ ಹೊಸ್ತೋಟ ಮಂಜುನಾಥ ಭಾಗವತರು, ಪರಿಶೀಲಕರಾಗಿ ಪ್ರೊ.ಎಂಎಲ್.ಸಾಮಗ, ಸದಸ್ಯರಾಗಿ ಕೆ.ಗೋವಿಂದ ಭಟ್, ತಾರಾನಾಥ ವರ್ಕಾಡಿ, ಸುಜಯೀಂದ್ರ ಹಂದೆ, ಗಣರಾಜ ಕುಂಬ್ಳೆ ಮತ್ತು ಪ್ರಕಾಶ್ ಮೂಡಿತ್ತಾಯ, ಸೀನಿಯರ್ ವಿಭಾಗದ ಅಧ್ಯಕರಾಗಿ ಕುಂಬ್ಳೆ ಸುಂದರರಾವ್, ಪರಿಶೀಲಕರಾಗಿ ಡಾ.ಜಿ.ಎಸ್.ಭಟ್ ಸಾಗರ, ಸದಸ್ಯರಾಗಿ ಕರ್ಗಲ್ಲು ವಿಶ್ವೇಶ್ವರ ಭಟ್, ಸದಾನಂದ ಐತಾಳ್, ಡಾ.ಕೆ.ಕಮಲಾಕ್ಷ, ರಾಧಾಕೃಷ್ಣ ಕಲ್ಚಾರ್, ಮತ್ತು ನಾನು. ಎರಡೂ ಸಮಿತಿಯ ಕಲಾವಿದರಾಗಿ ದಿನೇಶ್ಕುಕ್ಕುಜಡ್ಕ ಮತ್ತು ಫೋಟೋ ದಾಖಲೆಗೆ ಜೀವನ್ರಾಂ ಸುಳ್ಯ ಇವರು ಆಯ್ಕೆಗೊಂಡರು. ತೆಂಕು-ಬಡಗು ಕುಣಿತ ವಿಭಾಗದ ನುರಿತ ಕಲಾವಿದರು, ಅಕಾಡೆಮಿಕ್ ಜ್ಞಾನ ಇರುವವರು ಮತ್ತು ಪಠ್ಯಕ್ಕೆ ಬೇಕಾದ ಮೌಲ್ಯಮಾಪನ ಮತ್ತು ವಿನ್ಯಾಸದ ತಿಳುವಳಿಕೆ ಇರುವವರು ಎನ್ನುವ ಹಿನ್ನಲೆಯಲ್ಲಿ ಪಟ್ಟಿಯನ್ನು ರಚಿಸಲಾಗಿತ್ತು.
         ಪಟ್ಟಿಯೂ ಇಲಾಖೆ ಮತ್ತು ಸರಕಾರದಿಂದ ಹಿಂದಿನಂತೆ ಹಂತಹಂತವಾಗಿ ಒಪ್ಪಿಗೆ ಪಡೆಯಬೇಕಾಗಿತ್ತು. ಮತ್ತೆ ಅದರ ಹಿಂದೆ ಹೋಗಿ ಒಪ್ಪಿಗೆ ಪಡೆಯಲಾಯಿತು. ಹೀಗೆ ಒಪ್ಪಿಗೆ ಪಡೆದ ಎರಡೂ ಸಮಿತಿ ಜೊತೆಯಾಗಿ ಮೂರು ದಿನಗಳಂತೆ ಒಟ್ಟು ಎಂಟು ಬಾರಿ ಅಧಿಕೃತವಾಗಿ ಹಾಗೂ ಐದಾರು ವರ್ಷ ಅದೆಷ್ಟೋ ಬಾರಿ ಸ್ವ-ಆಸಕ್ತಿಯಿಂದ (ಯಾವ ಸಂಭಾವನೆಯೂಇಲ್ಲದೆ) ಕೆಲಸ ಮಾಡಿದೆ. ಪ್ರಕಾಶ ಮೂಡಿತ್ತಾಯರ ಮನೆಯಲ್ಲಿ ಅವರದೇ ಸಂಘಟನೆಯಲ್ಲಿ ಹಲವು ಬಾರಿ ಅನೌಪಚಾರಿಕ ಕಾರ್ಯಾಗಾರಗಳೂ ನಡೆದಿವೆ. ದೂರದ ಸಾಗರ, ಉತ್ತರಕನ್ನಡ, ಉಡುಪಿ, ಕಾಸರಗೋಡು ಕಡೆಯಿಂದ ಬೆಂಗಳೂರು, ಮಂಗಳೂರು, ಸುಳ್ಯಕ್ಕೆ ಯಾವ ಫಲಾಪೇಕ್ಷೆಯೂ ಇಲ್ಲದೇ ಸಮಿತಿಯ ಸದಸ್ಯರು ದಿನಗಟ್ಟಲೆ ಬಂದು ಕೆಲಸ ಮಾಡಿ ಹೋಗಿದ್ದಾರೆ. ಕೊನೆಗೂ ತಯಾರಾದ(ತೆಂಕು ಮತ್ತು ಬಡಗು ಪ್ರತ್ಯೇಕ) ಪಠ್ಯಪುಸ್ತಕದ ಕರಡನ್ನು ಹಿಂದಿನ ಹಂತಗಳಲ್ಲಿ ಪಡೆದ ಒಪ್ಪಿಗೆಯಂತೆ ಮತ್ತೆ ಪಡೆದುಕೊಳ್ಳಬೇಕಿತ್ತು. ಹಂತಗಳಲ್ಲಿ ಇಲಾಖಾ ಪ್ರತಿನಿಧಿಯಾಗಿ ಅತ್ಯಂತ ಉತ್ಸುಹಕರಾಗಿ ಕೆಲಸ ನಿರ್ವಹಿಸಿದವರು ಕರ್ನಾಟಕ ಪಠ್ಯ ಪುಸ್ತಕ ಸಂಘದ ಹಿರಿಯ ಸಹಾಯಕ ನಿರ್ದೇಶಕರಾಗಿದ್ದ (ಇದೀಗ  ಮೈಸೂರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು) ಡಾ.ಪಾಂಡುರಂಗರವರು. ಯಕ್ಷಗಾನದ ನಾಡಿನಲ್ಲಿ ಹುಟ್ಟಿ ಬೆಳೆಯದಿದ್ದರೂ ಅಧಿಕಾರಿಯ ಆಸಕ್ತಿ ಅನುಕರಣೀಯ. ಸಂಯೋಜಕರಾಗಿದ್ದ ಪಿ.ಎಸ್. ಮುಡಂಬಡಿತ್ತಾಯ(ಈಗ ದಿವಂಗತರು) ಬೇಗನೆ ಪಠ್ಯ ಪ್ರಕಟವಾಗಬೇಕೆನ್ನುವ ಹಿತಾಸಕ್ತಿಯನ್ನು ಹೊಂದಿದ್ದರು. ಆದರೆ ಮುಡಂಬಡಿತ್ತಾಯರಿಗೆ ಇದನ್ನು ಕಾಣಲು ಸಾಧ್ಯವಾಗಲಿಲ್ಲ. ನಂತರ ಬಂದರಾಜ್ಯ ಪಠ್ಯಪುಸ್ತಕ ಪರಿಸ್ಕರಣಾ ಸಮಿತಿಯ ಡಾ.ಬರಗೂರು ರಾಮಚಂದ್ರಪ್ಪ, ವ್ಯವಸ್ಥಾಪಕ ನಿರ್ದೇಶಕರಾದ ಹೆಚ್.ಎನ್. ಗೋಪಾಲಕೃಷ್ಣ, ಉಪನಿರ್ದೇಶಕರಾದ ನಾಗೇಶ್ಜಿ.ಎಸ್, ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀನಿವಾಸ್ ಆರ್, ಚಂದ್ರಶೇಖರ ಬಾಬು ಮುಂತಾದವರು ಪಠ್ಯಪುಸ್ತಕ ಮುದ್ರಣಕ್ಕಾಗಿ ಸಹಕರಿಸಿದರು.
ಪರಿಪೂರ್ಣ ಕಾರ್ಯ
        ಪಠ್ಯಪುಸ್ತಕದ ಕೆಲಸಕ್ಕೆ ಹೆಚ್ಚು ಕಡಿಮೆ ಹತ್ತು ವರ್ಷಗಳಾಗುತ್ತಾ ಬಂತು. ಕೆಲವು ಬಾರಿ ಗಂಭೀರ ಕಾರಣಗಳು, ಹಲವು ಬಾರಿ ಕ್ಷುಲ್ಲಕ ಕಾರಣಗಳಿಂದಾಗಿ ಸ್ಥಗಿತಗೊಂಡಿತು. ಅಕಾಡೆಮಿಯಲ್ಲಿ ನಮ್ಮ ಮೊದಲ ಅವಧಿ ಮುಗಿದ ನಂತರ ಪ್ರೊ. ಎಂ.ಎಲ್. ಸಾಮಗರ ಅಧ್ಯಕ್ಷತೆಯಲ್ಲಿಯೂ ಉತ್ತಮ ಪ್ರಯತ್ನಗಳು ನಡೆದವು.
ಜೂನಿಯರ್, ಮತ್ತು ಸೀನಿಯರ್ ಪಠ್ಯ ಪೂರ್ಣಗೊಂಡಿದ್ದು ಹಲವು ಪ್ರಯತ್ನದ ಫಲವಾಗಿ ಇದೀಗ ಜೂನಿಯರ್ ವಿಭಾಗ ಮುದ್ರಣಗೊಂಡಿದೆ. ಸೀನಿಯರ್ ವಿಭಾಗ ಆರಂಭಗೊಳಿಸಲು ಇನ್ನೂ ಎರಡು ವರ್ಷಗಳ ಕಾಲಾವಕಾಶವಿದ್ದರೂ ಇದನ್ನೂ ಸದ್ಯದಲ್ಲೇ ಮುದ್ರಿಸಬಹುದಾಗಿದೆ. ಇದಲ್ಲದೇ ಇದರ ಪರೀಕ್ಷೆ ನಡೆಸಲು ಬೇಕಾಗುವ ಎಲ್ಲಾ ಪ್ರಕಿಯೆಗಳು ನಡೆಯಬೇಕು. ಅಲ್ಲದೇ ವಿದ್ವತ್ ವಿಭಾಗದ ಎರಡು ಪಠ್ಯಗಳು ಭವಿಶ್ಯಯದಲ್ಲಿ ಸಿದ್ಧಗೊಳ್ಳಬೇಕು
     ಆದ್ದರಿಂದ ವ್ಯವಸ್ಥೆಯಲ್ಲಿನ ನಿಯಮ ಹಾಗೂ ವಿಚಾರದಲ್ಲಿನ ಭಿನ್ನತೆಯನ್ನು ಸರಿದೂಗಿಸಿಕೊಂಡು ಕಲೆಗಾಗಿ ಜೊತೆಯಾಗಿ ಹೋಗಬೇಕಾದ ಅನಿವಾರ್ಯ ನಮ್ಮ ಮುಂದಿದೆ. ಪಠ್ಯದಲ್ಲಿ ಯಾವುದೇ ದೋಷವಿದ್ದರೆ ಅದನ್ನು ನಿಯಮಾನುಸಾರ ಬದಲಾಯಿಸಲು ಬಹಳಷ್ಟು ಅವಕಾಶವಿದೆ. ಈಗಾಗಲೇ ಪಠ್ಯಪುಸ್ತಕ ಸಂಘ ಹಾಗೂ ಒಂದಷ್ಟು ಆಸಕ್ತರು ಇದಕ್ಕಾಗಿ ಆರ್ಥಿಕ, ದೈಹಿಕ ಮತ್ತು ಮಾನಸಿಕ ಶ್ರಮವನ್ನು ಹಾಕಿದ್ದೇವೆ. ಅದರ ಫಲಶೃತಿಯಾಗಿ ಮೊದಲ ಭಾಗ ಬಿಡುಗಡೆಗೊಳ್ಳುತ್ತದೆ. ಉಳಿದ ಭಾಗಗಳೂ ಆದಷ್ಟು ಬೇಗ ಬೆಳಕು ಕಾಣಲಿ. ಇಷ್ಟು ದೊಡ್ಡ ವ್ಯಾಪ್ತಿಯುಳ್ಳ ಕಲೆಯೊಂದಕ್ಕೆ ಮೊದಲ ಬಾರಿಗೆ ತಕ್ಷಣ ಪಠ್ಯಪುಸ್ತಕ ರಚಿಸಿ ಬಿಡುತ್ತೇವೆ ಎನ್ನುವುದೂ ವಾಸ್ತವ ಸಂಗತಿಯಲ್ಲ. ಆದ್ದರಿಂದ ಯಕ್ಷಾಭಿಮಾನಿಗಳು ಈಗಾಗಲೇ ಮುದ್ರಣಗೊಂಡ ಪಠ್ಯಪುಸ್ತಕದ ಬಗ್ಗೆ ಗುಣಾತ್ಮಕ ಚರ್ಚೆಯನ್ನು ಹಾಗೂ ಮುದ್ರಣಗೊಳ್ಳಲು ಮತ್ತು ರಚನೆಗೊಳ್ಳಲು ಬಾಕಿ ಇರುವ ಪುಸ್ತಕದ ಬಗ್ಗೆ ರಚನಾತ್ಮಕವಾದ ನಿಲುವುಗಳನ್ನು ತಳೆಯಬೇಕಾಗಿದೆ ಎನ್ನುವ ಅಭಿಮತ ನಮ್ಮದು.
                                                                                                                                    ಡಾ.ಸುಂದರಕೇನಾಜೆ
                                                                               ಯಕ್ಷ ಶಿಕ್ಷಣ ಯೋಜನೆಯ ಅಕಾಡೆಮಿ ಸಂಚಾಲಕರು,
                                                        ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಮಾಜಿ ಸದಸ್ಯ ಹಾಗೂ ಸದಸ್ಯರು,
                                            ಯಕ್ಷಗಾನ ಶಿಕ್ಷಣ ಪಠ್ಯಪುಸ್ತಕ ರಚನಾ ಸಮಿತಿ (ಮಾಧ್ಯಮಿಕ ವಿಭಾಗ) 9448951859


Comments