ವಿವೇಕ್ ಶಾನಭಾಗರ ಘಾಚರ್ ಘೋಚರ್

                                                   
ವಿವೇಕ್ ಶಾನಭಾಗರ ಘಾಚರ್ ಘೋಚರ್
             
ಹೆಗ್ಗೋಡಿನಿಂದ ತಂದ ಪುಸ್ತಕಗಳಲ್ಲಿ ಮುಖ್ಯವಾದ ಎರಡು ಪುಸ್ತಕಗಳು ಓದಲು ಬಾಕಿಯಾಗಿದ್ದವು. ಸಾಮಾನ್ಯವಾಗಿ ಅದು ಹಾಗೇ, "ಒಳ್ಳೆಯದನ್ನು ಕೊನೆಗೆ ತಿನ್ನುವ" ಎಂದು ತಟ್ಟೆಯ ಕೊನೆಯಲ್ಲಿಟ್ಟ ಹಾಗೇ. ವಿವೇಕ್ ಶಾನಭಾಗರ, ಹುಲಿ ಸವಾರಿ ಮತ್ತು ಅಂಕುರವನ್ನು ಬಹಳ ಹಿಂದೆ ಓದಿದ್ದೆ. (ಈಗ ಮರೆತೂ ಹೋಗಿದೆ)ಘಾಚರ್ ಘೋಚರ್ ಓದಲೇಬೇಕೆಂಬ ತುಡಿತ ಹಲವು ವರ್ಷಗಳಿಂದಿದ್ದರೂ ಓದಿರಲಿಲ್ಲ. ಲಂಗರು ಕೂಡ ಹಾಗೇ. ಘಾಚರ್ ಘೋಚರ್ ಶತಮಾನದ ಬಹಳ ಮಹತ್ವದ ಕತೆ ಎಂದು ಕೇಳಿದ್ದೆ, ಆದರೆ ನನಗೂ ಅನಿಸಿದ್ದು ಓದಿದ ನಂತರ, ಓದಲು ತಡವಾದದ್ದಕ್ಕೆ ಬೇಸರವಾಯಿತು.
       ಒಂದು ಅವಿಭಕ್ತ ಕುಟುಂಬದ ವ್ಯಕ್ತಿಗಳ ಆಲೋಚನಾ ಕ್ರಮವನ್ನು ಸ್ವಂತ ಅನುಭವಿಸಿದಂತೆ ಓದಿಸುವುದು ಈ ಕಥೆಯ ವಿಶೇಷತೆ. ಕಥೆಯ ವಸ್ತು ಮತ್ತು ಅದರ ನಿರೂಪಣಾ ತಂತ್ರ ಓದುಗನನ್ನು ಚಕಿತಗೊಳಿಸದೇ ಇರಲಾರದು. ಇಲ್ಲಿರುವ ಎಲ್ಲಾ ಕಥೆಗಳು ಟಿ.ಎ ಸೈಕಾಲಜಿ ಕಲಿತ ಓರ್ವ ಸೈಕಾಲಜಿಸ್ಟ್ ಹೇಳುತ್ತಾನೋ ಎನ್ನುವ ಧಾಟಿಯಲ್ಲಿದೆ. (ಈ ಕಾರಣಕ್ಕೇ ಶಾನಭಾಗರ ಕಥೆಗಳು ಇಷ್ಟವಾಗುವುದು) ಅತ್ಯಂತ ಸೂಕ್ಷ್ಮ ಸಂದರ್ಭಗಳನ್ನು ಕಣ್ಣಿಗೆ ಕಟ್ಟಿಂದಂತೆ ಓದಿಸುವ ಗುಣ ಈ ಕೃತಿಯದ್ದು, (ಹುಲಿ ಸವಾರಿ ಇದೇ ಅನುಭವವನ್ನು ನೀಡುತ್ತದೆ) ಮನುಷ್ಯನ ಒಳಗಿನ ಕೆಲವು ಸುಪ್ತ ಯೋಚನೆಗಳು ಹೇಗೆ ವರ್ತನೆಯಲ್ಲಿ ವ್ಯಕ್ತವಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಈ ವರ್ತನೆಗಳು ಹೇಗೆ ನಿರ್ಭಾವುಕವಾಗಿರುತ್ತವೆ ಎನ್ನುವುದನ್ನು ಈ ಕಥೆಯಿಂದ ತಿಳಿಯಲು ಸಾಧ್ಯವಿದೆ. ಈ ಕಥೆ ಹೊರಬಂದು ವರ್ಷಗಳೇ ಸಂದರೂ ಕಾಲದ ದೃಷ್ಟಿ ಇಲ್ಲಿ ನಗಣ್ಯವಾಗಿರುತ್ತದೆ ಎನ್ನುವುದು ಸತ್ಯ. ಹಲವು ವರ್ಷಗಳಿಂದ ಓದದೇ ಇದ್ದುದೂ ಕಳಕೊಂಡ ಅನುಭವವನ್ನು ನೀಡಿದ್ದಂತೂ ಹೌದು. ಆದ್ದರಿಂದ ಈ ಕಥೆ ಓದದವರು ಒಮ್ಮೆ ಓದಿದರೆ ಕಥಾ ಜಗತ್ತಿನ ಇನ್ನೊಂದಷ್ಟು ಹೊಸತನವನ್ನು ಕಾಣಲು ಸಾಧ್ಯ ಎಂದು ನನಗನಿಸಿತು. ಲಂಗರು ಸಂಕಲನದ ಬಿಡಿ ಕಥೆಗಳನ್ನು ಹಿಂದೆ ಓದಿದ ನೆನಪು.
         ಈ ನಾಲ್ಕು ಸಂಕಲನಗಳನ್ನಿರಿಸಿ ಕಥೆಗಾರ ವಿವೇಕ್ ಶಾನಭಾಗರನ್ನು ನೋಡಿದಾಗ ಕಾಲದ ನೆಲೆಯಲ್ಲಿನ ಪಕ್ವತೆ ಮತ್ತು ಸಾಧ್ಯತೆಯ ವಿಸ್ತರಣೆ ಅರಿವಾಗುತ್ತದೆ. ಒಬ್ಬ ಲೇಖಕ ಹೇಗೆ ತನ್ನ ನಿರಂತರತೆಯಿಂದ ಮಾಗುತ್ತಾನೆ ಎನ್ನುವ ಅರಿವಾಗುತ್ತದೆ. ಸಾಹಿತ್ಯದ ಮೂಲಕ ಸಮಾಜವನ್ನು ತೋರಿಸುವ ಕಾರ್ಯವನ್ನು ಹೇಗೆ ಸಮರ್ಥವಾಗಿ ನಿಭಾಯಿಸುತ್ತಾನೆ ಎನ್ನುವುದು ತಿಳಿಯುತ್ತದೆ. ಹಲವು ಕಾರ್ಯಕ್ರಮಗಳಲ್ಲಿನ ಭಾಗವಹಿಸುವಿಕೆಯ ಮಧ್ಯದಲ್ಲೂ ಕಳೆದ ವಾರ ಎರಡು ಕಥಾ ಸಂಕಲನ‌ ಓದಿದ ಸಂತೃಪ್ತಿ ನನ್ನದು. ಪತ್ರಿಕೆಯಲ್ಲಿ ಬರುವ ಬಿಡಿ ಕಥೆಗಳ ಹೊರತು ಸಂಕಲನ ರೂಪದ ಸಹಸ್ರಾರು ಕಥೆಗಳು ಇನ್ನೂ ಓದಲು ಬಾಕಿ ಇದೆ ಎನ್ನುವುದೂ ಸತ್ಯ.

          12.11.2019                                                                                                 ಡಾ.ಸುಂದರ ಕೇನಾಜೆ

Comments