ಎರಡು ನಾಟಕಗಳು

                                                            ಎರಡು ನಾಟಕಗಳು    
     ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವದ ಮೊದಲನೇ ದಿನ ನಾಟಕ ನೋಡಲು ಹೋಗಿದ್ದೆ. ನಾವು(ಮೈಸೂರಿನ ಸ್ನೇಹಿತರು) "ಗೊರವರ ಮೈಲಾರ" ಎಂದು ರಚಿಸಿದ ಸಾಕ್ಷ್ಯಚಿತ್ರವನ್ನು ಆಶಾ ಬೆಳ್ಳಾರೆಯವರು "ಗೊರವರು- ಒಂದು ಡಾಕ್ಯೂ ಡ್ರಾಮಾ" ಎಂದು ನಿರ್ದೇಶಿಸಿ ತೆಂಕಿಲ ವಿವೇಕಾನಂದ ಕನ್ನಡ ಶಾಲೆಯ ಮಕ್ಕಳ ಮೂಲಕ ರಂಗಕ್ಕೆ ತಂದಿದ್ದರು. ಸಾಕ್ಷ್ಯಚಿತ್ರದ ಪ್ರಸ್ತುತಿಗೂ ರಂಗಭೂಮಿಯ ಪ್ರಸ್ತುತಿಗೂ ಬಹಳಷ್ಟು ವ್ಯತ್ಯಾಸ ಇರುವ ಕಾರಣ ನಾಟಕ ಇನ್ನೂ ಗಟ್ಟಿಗೊಳ್ಳಬೇಕಾದ, ಮಕ್ಕಳ ಅಭಿವ್ಯಕ್ತಿಯಲ್ಲಿ ಮುಕ್ತತೆ ಬರಬೇಕಾದ ಅಗತ್ಯವಿದೆ ಎಂದೆನಿಸಿತು. ಆದರೆ ಗೊರವ ಹಾಗೂ ಮೈಲಾರ ಪರಂಪರೆಯನ್ನು ರಂಗದ ಮೂಲಕ ಪರಿಚಯಿಸಬೇಕೆನ್ನುವ ಆಶಾ ಬೆಳ್ಳಾರೆಯವರ ತುಡಿತ ಶ್ಲಾಘನೀಯ. 
       ಕರಾವಳಿ ಕರ್ನಾಟಕದಲ್ಲಿ ಮೈಲಾರ, ಮಂಟೇಸ್ವಾಮಿ, ಮದೇಶ್ವರರನ್ನು ಪರಿಚಯಿಸಬೇಕಾದರೆ ಒಂದಷ್ಟು ಸವಾಲುಗಳಿವೆ ಮತ್ತು ಅದರದೇ ಆದ ತಯಾರಿಯ ಅವಶ್ಯಕತೆಗಳೂ ಇವೆ. ಅದಕ್ಕೆ ಇಲ್ಲಿನ (ತುಳುನಾಡಿನ) ಜನಪದ ವೀರರಿಗಿಂತ ದಕ್ಷಿಣ ಮತ್ತು ಮಧ್ಯ ಕರ್ನಾಟಕದ ಜನಪದ ನಾಯಕರ ಒಂದಷ್ಟು ಭಿನ್ನತೆ, ಮತ್ತು ವೈವಿಧ್ಯತೆಯೇ ಕಾರಣ. ಅಂದರೆ ತುಳುನಾಡಿನ ಜನಪದ ನಾಯಕರು ಒಂದು ಸೀಮಿತ ವಲಯದ ಮತ್ತು ಅಷ್ಟೇ ಸೀಮಿತ ಸಂಸ್ಕೃತಿಯ ಜನಸಮುದಾಯವನ್ನು ಪ್ರತಿನಿಧಿಸಿ ಇಲ್ಲಿಗೆ ಮಾತ್ರವೋ ಎಂಬಂತೆ ಗುರುತಿಸಲ್ಪಟ್ಟವರು. ಆದರೆ ನೀವು ವೈಲಾರನ ಆಥವಾ ಮಂಟೇಸ್ವಾಮಿ, ಮಾದೇಶ್ವರರ ವ್ಯಾಪ್ತಿಯನ್ನು ಗಮನಿಸಿದರೆ ಅದು ಅತ್ಯಂತ ಹಿರಿದಾದುದು. ಕರ್ನಾಟಕವನ್ನೂ ಮೀರಿ ನಿಂತಿರುವ ವ್ಯಾಪ್ತಿಯದ್ದು. ಇಲ್ಲಿ ಸಾಂಸ್ಕೃತಿಕ ವೈವಿದ್ಯತೆ ಇದೆ, ಭಾಷಿಕ ಗಡಿಗಳಿವೆ ಮತ್ತು ಆಚರಣಾತ್ಮಕ ಭಿನ್ನತೆಗಳಿವೆ. ಇಷ್ಟೊಂದು ವ್ಯಾಪ್ತಿಯ ವ್ಯಕ್ತಿತ್ವವನ್ನು ದೃಶ್ಯ ಮಾಧ್ಯಮಕ್ಕೆ ಅಥವಾ ರಂಗಭೂಮಿಗೆ ಪರಿಚಯಿಸುವಾಗ ಅದರ ಬಗೆಗಿನ ಅಧ್ಯಯನವೂ ವಿಸ್ತಾರಗೊಂಡಿರಬೇಕು. ಅಂದರೆ ಒಂದು ಸಾಕ್ಷ್ಯಚಿತ್ರದ ತಯಾರಿಯೇ ಬಹಳ ಸೀಮಿತವಾಗಿತ್ತು ಎನ್ನುವ ಅನುಭವದ ಜೊತೆಗೆ ಆ ಸಾಕ್ಷ್ಯಚಿತ್ರದಿಂದ ತಯಾರಿಸಿದ ನಾಟಕದ ಎಲ್ಲವೂ ಇನ್ನೂ ಸೀಮಿತಗೊಂಡಿರುತ್ತದೆ ಎನ್ನುವ ಅನಿಸಿಕೆ ನನ್ನದು. ಆದ್ದರಿಂದ ನಾಟಕವನ್ನೂ ಇನ್ನೂ ಬಲಿಷ್ಠವಾಗಿಸುವ ರಕ್ತ ಮಾಂಸವನ್ನು ತುಂಬಿಸುವ ಅಗತ್ಯವಿದೆ. ಅದು ಆಶಾ ಬೆಳ್ಳಾರೆಯವರಂತಹಾ ಉತ್ಸಾಹಿ ನಿರ್ದೇಶನದರಿಂದ ನಡೆಯಲಿ, ಎಂದು ಬಯಸುತ್ತೇನೆ.

ಎರಡನೇ ನಾಟಕ, ಐ.ಕೆ ಬೊಳುವಾರು ನಿರ್ದೇಶನದ "ಗ್ರಹಣ- ಕಂಕಣ" 
              "ಗ್ರಹಣ- ಕಂಕಣ" ಹಾರಾಡಿ ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡಿತು. ಎರಡು ಕಾರಣಗಳಿಗಾಗಿ ಈ ನಾಟಕವನ್ನು ಇಷ್ಟಪಟ್ಟೆ. ಒಂದು ನಾಟಕದ ವಸ್ತು, ಹೇಳಲೇಬೇಕಾದ ವಿಜ್ಞಾನ ಮತ್ತು ಅಂಧಾಡಳಿತದ ತಾಕಲಾಟ ಇಲ್ಲಿ ಉತ್ಪ್ರೇಕ್ಷೆಯಲ್ಲದ ವಾಸ್ತವದಂತೆ ಕಂಡಿತು. ಇನ್ನು ಆ ವಸ್ತುವನ್ನು ಅಭಿವ್ಯಕ್ತಿಸಿದ ವಿದ್ಯಾರ್ಥಿಗಳ ನಟನಾ ಕೌಶಲ, ಸಂಭಾಷಣೆಗಳ ಹಿಡಿತ ಇದು ಒಟ್ಟು ನಾಟಕವನ್ನು ಮೆಚ್ಚುವಂತೆ ಮಾಡಿತು. ಐ.ಕೆ ಮತ್ತು ಆ ಶಾಲಾ ಶಿಕ್ಷಕರ ಪ್ರತಿಭೆ ಮಕ್ಕಳ ಮೂಲಕವೂ ಇಲ್ಲಿ ಸಾಬೀತಾಗಿದೆ ಎನ್ನಬಹುದು.   ಈ ನಾಟಕ ಒಂದಷ್ಟು ಪ್ರದರ್ಶನಗೊಳ್ಳುತ್ತಿದ್ದರೆ ಮತ್ತು ಒಂದಷ್ಟು ಜನ ನೋಡುತ್ತಿದ್ದರೆ ತುಂಬಾ ಅನುಕೂಲವಿತ್ತು ಎನ್ನುವ ಅನಿಸಿಕೆ ನನ್ನದು. ಮಕ್ಕಳ ನಾಟಕೋತ್ಸವದ ಸಂಘಟಕರನ್ನು ಅಭಿನಂದಿಸುತ್ತೇನೆ

     28.11.2019                                                                                          ಡಾ.ಸುಂದರ ಕೇನಾಜೆ

Comments