ಮಾನ್ಯ ಸಂಪಾದಕರಿಗೆ,
ತೆಂಕು
ಯಕ್ಷಗಾನ ಕ್ಷೇತ್ರಕ್ಕೆ ಪ್ರಬುದ್ಧ ಪತ್ರಿಕೆಯೊಂದರ ಅಗತ್ಯವನ್ನು ‘ಕಣಿಪುರ’
ಬಹುಪಾಲು ಪೂರೈಸುತ್ತಿದೆ ಎಂದರೆ ತಪ್ಪಲ್ಲ. ನಿಮ್ಮ
ಇಚ್ಚಾಶಕ್ತಿ ಪತ್ರಿಕೆಯ ಮೂಲಕ ವ್ಯಕ್ತವಾಗುತ್ತಿರುವುದು ಮತ್ತು ಪತ್ರಿಕೆ
ನಡೆಸುವ ತಂತ್ರ ನಿಮಗೆ ಕರಗತವಾಗಿರುವುದು
ಪತ್ರಿಕೆ ಕೈ ಸೇರಿದ ತಕ್ಷಣ
ಓದಿ ಮುಗಿಸಲೇಬೇಕಾದ ಅನಿವಾರ್ಯತೆಗೆ ಕಾರಣವಾಗುತ್ತಿದೆ. ಕಳೆದ ಸಂಚಿಕೆಗೂ ಹಿಂದೆ
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯಲ್ಲಿ
ತೆಂಕಿಗೆ ಪ್ರಾಧಾನ್ಯವಿಲ್ಲದೇ ಇದ್ದ ಬಗ್ಗೆ ಕಳವಳ
ಮತ್ತು ಎಚ್ಚರದ ಬರಹವನ್ನು ಪ್ರಕಟಿಸಿದ್ದೀರಿ.
ನಾನು ಮೂರು ವರ್ಷಗಳ ಕಾಲ
ಅಕಾಡೆಮಿಯಲ್ಲಿ ನನ್ನದೇ ಮಿತಿಯಲ್ಲಿ ಕೆಲಸ
ಮಾಡಿದ ಕಾರಣ ನಿಮ್ಮ ಬರಹಕ್ಕೆ
ಪೂರಕವಾಗಿ ಈ ಪ್ರತಿಕ್ರಿಯೆ ನೀಡಲು
ಬಯಸುತ್ತೇನೆ.
ಅಷ್ಟಕ್ಕೂ
ಅಕಾಡೆಮಿಯ ಪ್ರಾತಿನಿಧ್ಯ ಯಾಕೆ ಎಂದು ಪ್ರಶ್ನಿಸುವ
ಒಂದಷ್ಟು ಜನರನ್ನೂ ಕಂಡಿದ್ದೇನೆ. ನನ್ನ
ಅನುಭವದ ಪ್ರಕಾರ, ಅಕಾಡೆಮಿಕ್ ಆದ
ಚಿಂತನೆ ಮತ್ತು ಪ್ರಯೋಜನಗಳ ಬಗೆಗಿನ
ಉದಾಸೀನ,ಉಡಾಫೆಗಳನ್ನು ವ್ಯಕ್ತಪಡಿಸುವುರಲ್ಲಿ ತೆಂಕುತಿಟ್ಟಿನಷ್ಟು ಮೊದಲ ಸ್ಥಾನದಲ್ಲಿ ಇನ್ನೊಂದು
ಇರಲಾರದು. (ಆ ಮಟ್ಟಿಗೆ ಬಡಗು
ಪರವಾಗಿಲ್ಲ) ಆದರೆ ಅಕಾಡೆಮಿಯ ವಾಸ್ತವ
ಸ್ಥಿತಿ ಏನೆಂದರೆ, ಅಲ್ಲಿ ಯಕ್ಷಗಾನವೆಂದು ಕರೆಯಲ್ಪಡುವ
ಏಳೆಂಟು ಕಲಾ ಪ್ರಕಾರಗಳಿಗೂ (ಸಣ್ಣಾಟ,
ದೊಡ್ಡಾಟ, ರಾಧಾನಾಟ, ಗೊಂಬೆಯಾಟ, ಕೃಷ್ಣಪಾರಿಜಾತ, ಘಟ್ಟದಕೋರೆ
ಇತ್ಯಾದಿ) ಸಮಾನ ಮಾನ್ಯತೆ ನೀಡಲಾಗಿದೆ.
ಆದರೆ ನಿಜವಾಗಿ ತೆಂಕು-ಬಡಗಿನ
ಒಟ್ಟು ಕಲಾವಿದರ ಸಂಖ್ಯೆಯಷ್ಟು ಪ್ರೇಕ್ಷಕರ
ಸಂಖ್ಯೆ ಈ ಕಲೆಗಳಿಗಿಲ್ಲ, ಆದರೆ
ಈ ಸತ್ಯ ನಮ್ಮ
ಆಡಳಿತ ವ್ಯವಸ್ಥೆಗೆ ಇನ್ನೂ ಖಚಿತವಾಗಿ ಗೊತ್ತಿಲ್ಲ.
ಒಂದು ವೇಳೆ ಗೊತ್ತಿದ್ದರೂ ಅದನ್ನು
ಒಪ್ಪಿಕೊಳ್ಳುವ ಮನಸ್ಥಿತಿಯಲ್ಲೂ ಇಲ್ಲ. ಒಂದು ಕಲಾ
ಪ್ರಕಾರಕ್ಕಂತೂ ಇಡೀ ಕರ್ನಾಟಕದಲ್ಲಿ ಹದಿನೈದಕ್ಕಿಂತ
ಹೆಚ್ಚು ಕಲಾವಿದರೂ ಇಲ್ಲ. ಆದರೆ ಅಕಾಡೆಮಿ
ಮಟ್ಟದಲ್ಲಿ ಇದಕ್ಕೆಲ್ಲಾ ಸಮಾನ ಅವಕಾಶ, ಅನುದಾನ
ನೀಡಬೇಕಾಗುತ್ತದೆ. ನೀಡದೇ ಇದ್ದಲ್ಲಿ ಅದನ್ನು ಪಡೆದುಕೊಳ್ಳುವ ಸಾಮಥ್ರ್ಯವೂ
ಅವರಲ್ಲಿದೆ. ಇದು ಹೇಗಿದೆ ಎಂದರೆ ಪಾಲು
ಕೇಳಲು ಬರುವ ದಾಯಾದಿಗಳ ಹಾಗೆ.
ಎಲ್ಲೋ ಇದ್ದವರು ಪಾಲಿನ ಹಂತದಲ್ಲಿ
ಒಂದಷ್ಟು ಹೆಚ್ಚಿಗೇ ಬೇಡಿಕೆ ಇಡುವುದಿದೆ. ಹಾಗೆ
ಅಕಾಡೆಮಿ ಮಟ್ಟದಲ್ಲಿ ಇಂದು ತೆಂಕಿಗೆ ಆಗುತ್ತಿರುವುದೂ
ಇದೆ. ಇನ್ನು ಕೆಲವು ಬಾರಿ
ನನಗೆ ಸಿಗದಿದ್ದರೂ ತೊಂದರೆ ಇಲ್ಲ, ಅವನಿಗೆ
ಸಿಗಬಾರದು ಎಂಬ ಪ್ರವೃತ್ತಿಯಿಂದಲೂ ತೆಂಕಿಗೆ
ಹಿನ್ನಡೆಯಾಗುತ್ತಿದೆ.
ಆದ್ದರಿಂದ
ಈಗ ನಮ್ಮ ಮುಂದಿರುವ ಪ್ರಧಾನ
ಬೇಡಿಕೆ ತೆಂಕು ಮತ್ತು ಬಡಗನ್ನು
ಒಟ್ಟು ಸೇರಿಸಿ ಒಂದು ಪ್ರತ್ಯೇಕ
ಅಕಾಡೆಮಿಯೊಂದನ್ನು ಸ್ಥಾಪಿಸಬೇಕು ಎನ್ನುವುದೇ ಆಗಿದೆ.(ಇದು ಮತ್ತೆ
ತೆಂಕು-ಬಡಗು ಎಂಬ ಪ್ರತ್ಯೇಕತೆಗೆ
ಅವಕಾಶ ನೀಡದಂತೆ ಎಚ್ಚರ ವಹಿಸಬೇಕು)
ತೆಂಕು ಮತ್ತು ಬಡಗು ಹಾಗೂ
ಮೂಡಲಪಾಯದ ಉಳಿದ ಕಲಾಪ್ರಕಾರಗಳನ್ನು ಒಂದೇ
ತಕ್ಕಡಿಯಲ್ಲಿ ತೂಗುತ್ತಿರುವಷ್ಟು ಕಾಲ ನಾವು ಹೆಚ್ಚುವರಿ
ಬಿಟ್ಟು ಹಕ್ಕಿನದ್ದು ಪಡೆದುಕೊಳ್ಳುವುದೂ ಕಷ್ಟ. ಅದಕ್ಕಾಗಿ ಕರಾವಳಿಯಲ್ಲಿ
ಯಕ್ಷಗಾನವನ್ನು ಅಕಾಡೆಮಿಕ್ ಆಗಿ ನೋಡುವ ಎಲ್ಲ
ಅಧ್ಯಯನ ಕೇಂದ್ರಗಳು, ಕಲಿಕಾ ಕೇಂದ್ರಗಳು, ಇಂತಹಾ
ಪ್ರಬುದ್ಧ ಪತ್ರಿಕೆಗಳು, ಯಕ್ಷಗಾನದ ಪ್ರಮುಖ ಕಲಾವಿದರು, ಸಂಘಟಕರು
ಸರಕಾರದ ಮುಂದೆ ಒತ್ತಡ ತರಬೇಕು.
ಅಕಾಡೆಮಿ ಇದ್ದರೆಷ್ಟು ಹೋದರೆಷ್ಟು ಎಂದು ಮಾತನಾಡುವ ಬದಲು
ಒಂದು ಕಲೆಗೆ ರಾಜಾಶ್ರಯ(ಸರಕಾರ)
ಎಷ್ಟು ಮುಖ್ಯ ಎನ್ನುವ ಸತ್ಯವನ್ನು
ಇನ್ನಾದರೂ ಕಂಡುಕೊಳ್ಳಬೇಕು. ಕುಂಬ್ಳೆ ಸುಂದರರಾಯರ ಅಕಾಡೆಮಿ
ಅಧ್ಯಕ್ಷತೆಯ ಅವಧಿಯಲ್ಲಿ ಮೂರು ಬಾರಿ ಮುಖ್ಯಮಂತ್ರಿಗಳೊಂದಿಗೆ
ಮತ್ತು ಸಂಬಂಧಿಸಿದ ಸಚಿವರೊಂದಿಗೆ ಸಭೆ ನಡೆಸಿ ಹಕ್ಕೊತ್ತಾಯವನ್ನು
ಮಂಡಿಸಲಾಗಿತ್ತು. ಆ ಕಾರಣದಿಂದಲೇ ತೆಂಕು-ಬಡಗಿಗೆ ಒಂದಷ್ಟು ಅನುಕೂಲತೆಗಳನ್ನೂ
ಪಡೆದುಕೊಳ್ಳಲು ಸಾಧ್ಯವಾಗಿತ್ತು. ಆ ಅನುಕೂಲತೆಗಳಿಗೂ ಇಂದು
ತುಕ್ಕು ಹಿಡಿಯುವಂತೆ ಕಾಣುತ್ತಿದೆ. ಆದ್ದರಿಂದ ನಮ್ಮನ್ನು ಆಳುವ ವರ್ಗಕ್ಕೆ ಮನದಟ್ಟು
ಮಾಡುವ ಕೆಲಸ ಅತೀ ಜರೂರಾಗಿ
ಮಾಡಬೇಕಾಗಿದೆ. ಆ ಕೆಲಸವನ್ನು ನಾವೆಲ್ಲ
ಒಂದಾಗಿ ಮಾಡಬೇಕು. ಪತ್ರಿಕೆ ಇಂತಹಾ ಕಾರ್ಯಕ್ಕೊಂದು
ವೇದಿಕೆಯಾದರೆ ಉತ್ತಮ ಎನ್ನುವುದೇ ನನ್ನ
ಆಶಯ.
ವಂದನೆಗಳು
(ಕಣಿಪುರ ಯಕ್ಷಗಾನ ಪತ್ರಿಕೆ
ಪ್ರಕಟಿತ ಜೂನ್ 2014)
ಡಾ.ಸುಂದರ ಕೇನಾಜೆ
a
Comments
Post a Comment